ಲೈಂಗಿಕ ಕಿರುಕುಳ ಪ್ರಕರಣ | ಉದ್ಯಮಿ ಬಾಬಿ ಚೆಮ್ಮನೂರ್ ನ್ಯಾಯಾಂಗ ವಶಕ್ಕೆ
ಕೊಚ್ಚಿ: ಮಲೆಯಾಳಂ ನಟಿ ಹನಿ ರೋಸ್ ಸಲ್ಲಿಸಿದ್ದ ಲೈಂಗಿಕ ಕಿರುಕುಳ ದೂರನ್ನು ಆಧರಿಸಿ ವಿಶೇಷ ತನಿಖಾ ತಂಡದಿಂದ ಬಂಧನಕ್ಕೊಳಗಾಗಿದ್ದ ಖ್ಯಾತ ಉದ್ಯಮಿ ಬಾಬಿ ಚೆಮ್ಮನೂರ್ ಅವರನ್ನು ಗುರುವಾರ ನ್ಯಾಯಾಲಯವೊಂದು ನ್ಯಾಯಾಂಗ ವಶಕ್ಕೆ ಒಪ್ಪಿಸಿತು.
ಬುಧವಾರ ಸಂಜೆ ಬಂಧನಕ್ಕೊಳಗಾಗಿದ್ದ ಬಾಬಿ ಚೆಮ್ಮನೂರ್ ಅವರನ್ನು ಇಂದು ಮಧ್ಯಾಹ್ನ ಎರ್ನಾಕುಲಂನ ಪ್ರಥಮ ದರ್ಜೆ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದೆದುರು ಹಾಜರುಪಡಿಸಲಾಯಿತು.
ಬಾಬಿ ಚೆಮ್ಮನೂರ್ ಜಾಮೀನು ಮಂಜೂರಾತಿಗಾಗಿ ಮನವಿ ಮಾಡಿದ ಅವರ ವಕೀಲರು, ನನ್ನ ಕಕ್ಷಿದಾರರು ಯಾವುದೇ ತಪ್ಪೆಸಗಿಲ್ಲ ಎಂದು ನ್ಯಾಯಾಲಯದೆದುರು ವಾದ ಮಂಡಿಸಿದರು. ಆದರೆ, ಈ ಮನವಿಗೆ ಪ್ರಾಸಿಕ್ಯೂಷನ್ ಪರ ವಕೀಲರು ಬಲವಾದ ವಿರೋಧ ವ್ಯಕ್ತಪಡಿಸಿದರು. ಅವರು ಅಪರಾಧ ಕೃತ್ಯವೆಸಗಿರುವುದಕ್ಕೆ ಬಲವಾದ ಸಾಕ್ಷ್ಯಾಧಾರಗಳಿವೆ ಎಂದು ವಾದಿಸಿದರು.
ವಾದ-ಪ್ರತಿವಾದಗಳನ್ನು ಆಲಿಸಿದ ನಂತರ, ನ್ಯಾಯಾಲಯವು ಬಾಬಿ ಚೆಮ್ಮನೂರ್ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ವಶಕ್ಕೆ ಒಪ್ಪಿಸಿತು. ಬಾಬಿ ಚೆಮ್ಮನೂರ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 75(4) ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 67ರ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಬಾಬಿ ಚೆಮ್ಮನೂರ್ ತಮ್ಮ ಬಗ್ಗೆ ಪದೇ ಪದೇ ಕೀಳುಮಟ್ಟದ ಹೇಳಿಕೆಗಳನ್ನು ನೀಡುತ್ತಿದ್ದರು ಎಂದು ಹನಿ ರೋಸ್ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.