ಬಿಜೆಪಿ ಜೊತೆ ಸಖ್ಯಕ್ಕೆ ಶರದ್ ಪವಾರ್ ಒಪ್ಪಿಗೆ ?

Update: 2023-07-25 06:31 GMT

Photo- PTI

ಮುಂಬೈ : ಮೂಲ ಎನ್‌ಸಿಪಿಯಿಂದ ಸಿಡಿದೆದ್ದು ಅಜಿತ್‌ ಪವಾರ್‌ ಅವರು ಬಿಜೆಪಿ ಜೊತೆ ಸೇರಿ ಮಹಾರಾಷ್ಟ್ರ ಉಪಮುಖ್ಯಮಂತ್ರಿಯಾಗಿದ್ದೇ ಅಲ್ಲದೆ ಎನ್‌ಸಿಪಿಯ ಹೆಚ್ಚಿನ ಶಾಸಕರ ಬೆಂಬಲ ತಮಗಿದೆ ಎಂಬುದನ್ನೂ ಸಾಬೀತುಪಡಿಸಿರುವುದರಿಂದ, ಇದೀಗ ಇಬ್ಭಾಗವಾದಂತಾಗಿರುವ ಎನ್‌ಸಿಪಿಯನ್ನು ಒಗ್ಗೂಡಿಸಲು ಒಂದು ಹೊಸ ಸೂತ್ರ ಸಿದ್ಧವಾಗುತ್ತಿದೆ ಎಂದು newindianexpress.com  ವರದಿ ಮಾಡಿದೆ.

ಈ ಸೂತ್ರದ ಪ್ರಕಾರ ಶರದ್‌ ಪವಾರ್‌ ನೇತೃತ್ವದ ಮೂಲ ಎನ್‌ಸಿಪಿಗೂ ಸರಕಾರದಲ್ಲಿ ಸ್ಥಾನ ಕಲ್ಪಿಸಲು ಅಜಿತ್‌ ಪವಾರ್‌ ಪ್ರಯತ್ನಿಸುತ್ತಿದ್ದಾರೆಂಬ ಮಾಹಿತಿ ಇದೆ ಎಂದು ವರದಿ ತಿಳಿಸಿದೆ.

ಅಜಿತ್‌ ಪವಾರ್‌ ಅವರಿಗೆ ಹೆಚ್ಚಿನ ಶಾಸಕರ ಬಲ ಇರುವುದರಿಂದ ಹಾಗೂ ಶರದ್‌ ಪವಾರ್‌ ಅವರಿಗೆ ಈಗಾಗಲೇ ವಯಸ್ಸಾಗಿರುವುದರಿಂದ ಅವರು ತಮ್ಮ ಮಹತ್ವಾಕಾಂಕ್ಷಿ ಸೋದರಳಿಯನ ಎದುರಿನ ಈ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಸಾಧ್ಯವಾಗದೇ ಇರಬಹುದು ಎಂಬುದು ಹೆಚ್ಚಿನ ಎನ್‌ಸಿಪಿ ಮುಖಂಡರ ಅಭಿಮತವಾಗಿದೆ ಎಂದೂ ವರದಿ ಹೇಳಿದೆ.

ಶರದ್‌ ಪವಾರ್‌ ಅವರ ಪುತ್ರಿ ಸುಪ್ರಿಯಾ ಸುಳೆ ಅವರಿಗೆ ಕೇಂದ್ರದಲ್ಲಿ ಸ್ಥಾನ ಕಲ್ಪಿಸುವುದರ ಜೊತೆಗೆ ಮೂಲ ಎನ್‌ಸಿಪಿಯ ರಾಜ್ಯ ಅಧ್ಯಕ್ಷ ಜಯಮತ್‌ ಪಾಟೀಲ್‌ ಅವರಿಗೆ ಮಹಾರಾಷ್ಟ್ರ ಸಂಪುಟದಲ್ಲಿ ಸ್ಥಾನ ಕಲ್ಪಿಸಬೇಕೆಂಬುದು ಹೊಸ ಸೂತ್ರವಾಗಿದೆ.

ಪಾಟೀಲ್‌ ಸಚಿವರಾದರೆ ರಾಜ್ಯ ಎನ್‌ಸಿಪಿ ಅಧ್ಯಕ್ಷರಾಗಿಯೂ ಮುಂದುವರಿಯಲಿದ್ದಾರೆ ಹಾಗೂ ಪ್ರಸ್ತುತ ಅಜಿತ್‌ ಪವಾರ್‌ ಬಣದ ರಾಜ್ಯ ಅಧ್ಯಕ್ಷ ಸುನಿಲ್‌ ತತ್ಕರೆ ಅವರಿಗೆ ರಾಜೀನಾಮೆ ನೀಡುವಂತೆ ಹೇಳಲಾಗುವುದು ಎಂದು ಹೇಳಲಾಗಿದೆ.

ಅಜಿತ್‌ ಪವಾರ್‌ ಅವರನ್ನು ತಕ್ಷಣ ಮಹಾರಾಷ್ಟ್ರ ಸಿಎಂ ಆಗಿಸಿ, ಪಾಟೀಲ್‌ ಅವರನ್ನು ಸಚಿವರನ್ನಾಗಿಸಿ ಹಾಗೂ ಕೇಂದ್ರದಲ್ಲಿ ಎರಡು ಸಚಿವ ಸಂಪುಟ ಹುದ್ದೆಗಳನ್ನು ತಮ್ಮ ಪಕ್ಷಕ್ಕೆ ನೀಡಿದಲ್ಲಿ ಶರದ್‌ ಪವಾರ್‌ ಈ ಸೂತ್ರಕ್ಕೆ ಒಪ್ಪಬಹುದು ಎಂದು ಎನ್‌ಸಿಪಿ ಮೂಲಗಳು ತಿಳಿಸಿವೆ ಎಂದು newindianexpress.com ವರದಿ ಮಾಡಿದೆ.

ಅಜಿತ್‌ ಪವಾರ್‌, ಪ್ರಫುಲ್‌ ಪಟೇಲ್‌, ಸುಪ್ರಿಯಾ ಸುಳೆ ಮತ್ತು ಜಯಂತ್‌ ಪಾಟೀಲ್‌ ಅವರ ಸಮಿತಿಯನ್ನು ಶರದ್‌ ಪವಾರ್‌ ಈ ಹಿಂದೆ ರಚಿಸಿ ಬಿಜೆಪಿ ಜೊತೆ ಅಧಿಕಾರ ಹಂಚಿಕೆ ಸೂತ್ರ ತಯಾರಿಯ ಹೊಣೆ ವಹಿಸಿದ್ದರು. ಆ ಸಮಿತಿ ಈ ಸೂತ್ರವನ್ನು ಮುಂದಿಟ್ಟಿದೆ ಎನ್ನಲಾಗಿದೆ.

ಜುಲೈ 17 ಮತ್ತು 18ರಂದು ಬೆಂಗಳೂರಿನಲ್ಲಿ ನಡೆದ ವಿಪಕ್ಷಗಳ ಸಭೆಗೆ ಹಾಜರಾಗದಂತೆ ಶರದ್‌ ಪವಾರ್‌ ಅವರಿಗೆ ಸೂಚಿಸಲಾಗಿತ್ತೆನ್ನಲಾಗಿದೆ. ಮೊದಲ ದಿನ ಅವರು ಹಾಜರಾಗದೇ ಇದ್ದರೂ ಎರಡನೇ ದಿನ ಸಭೆಯಲ್ಲಿ ಭಾಗವಹಿಸಿದ್ದರು. ಸುಪ್ರಿಯಾ ಸುಳೆ ಕೂಡ ಭಾವಹಿಸಬೇಕಿದ್ದರೂ ಕೊನೇ ಕ್ಷಣದಲ್ಲಿ ಅವರು ಹಿಂದೆ ಸರಿದಿದ್ದರು. ‌

ಸುಪ್ರಿಯಾ ಅವರು ಲೋಕಸಭೆಯಲ್ಲಿ ಬಾರಾಮತಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಅಜಿತ್‌ ಪವಾರ್‌ ಪ್ರಭಾವ ಬಹಳಷ್ಟಿದ್ದು ಅವರ ಬೆಂಬಲವಿಲ್ಲದೆ ಇಲ್ಲಿ ಮತ್ತೆ ಗೆದ್ದು ಬರುವುದು ಅವರಿಗೆ ಕಷ್ಟ ಎಂದು ಹೇಳಲಾಗಿದೆ.

ಆದರೆ ಶರದ್‌ ಪವಾರ್‌ ಅವರ ಮರಿ ಸೋದರಳಿಯ ರೋಹಿತ್‌ ಪವಾರ್‌ ಮಾತ್ರ ಬಿಜೆಪಿ ಜೊತೆ ತಮ್ಮ ಪಕ್ಷ ಮೈತ್ರಿ ಸಾಧಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಅವರು ಕರ್ಜಟ್‌ ಜಮಖೇಡ್‌ ಕ್ಷೇತ್ರದಿಂದ ಆಯ್ಕೆಯಾದ ಶಾಸಕರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News