ತನ್ನ ವಿರುದ್ಧ ಕ್ರಮ ತೆಗೆದುಕೊಳ್ಳದಂತೆ ಬ್ರಿಟನ್‌ನಿಂದ ಭರವಸೆ ಕೋರಿದ ಶೇಖ್ ಹಸೀನಾ?
ಹೊಸದಿಲ್ಲಿ : ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಕ್ ಹಸೀನಾ ಬ್ರಿಟನ್ಗೆ ತೆರಳುವ ಮುನ್ನ ಅಲ್ಲಿನ ಸರಕಾರದಿಂದ ಕೆಲವೊಂದು ಭರವಸೆಗಳನ್ನು ಕೋರಿದ್ದಾರೆ ಎನ್ನಲಾಗಿದೆ. ಆ ವಿಷಯ ಇತ್ಯರ್ಥವಾಗದೆ ಇರುವುದರಿಂದ ಅವರ ಬ್ರಿಟನ್ ಪ್ರಯಾಣ ವಿಳಂಬವಾಗಿದೆ ಎಂದು ಮೂಲಗಳು ತಿಳಿಸಿವೆ.
ಮುಖ್ಯವಾಗಿ, ಕಳೆದ ತಿಂಗಳಿನಿಂದ ಬಾಂಗ್ಲಾದೇಶದಲ್ಲಿ ನಡೆದಿರುವ ಹಿಂಸಾಚಾರಕ್ಕೆ ಸಂಬಂಧಿಸಿ ತನ್ನ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಬಾರದು ಎಂಬ ಬೇಡಿಕೆಯನ್ನು ಅವರು ಬ್ರಿಟನ್ ಸರಕಾರದ ಮುಂದಿಟ್ಟಿದ್ದಾರೆ ಎನ್ನಲಾಗಿದೆ. ಆ ಹಿಂಸಾಚಾರದಲ್ಲಿ 400ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಬಾಂಗ್ಲಾದೇಶದ ಮಾಧ್ಯಮಗಳು ವರದಿ ಮಾಡಿವೆ.
ಆದರೆ, ಬಾಂಗ್ಲಾದೇಶದಲ್ಲಿ ನಡೆದಿರುವ ‘‘ಹಿಂದೆಂದೂ ಕಾಣದ ಹಿಂಸಾಚಾರ ಮತ್ತು ಪ್ರಾಣ ಹಾನಿಗಳ’’ ಬಗ್ಗೆ ವಿಶ್ವಸಂಸ್ಥೆ ನೇತೃತ್ವದಲ್ಲಿ ತನಿಖೆ ನಡೆಯಬೇಕೆಂದು ಬ್ರಿಟನ್ ವಿದೇಶ ಸಚಿವ ಡೇವಿಡ್ ಲ್ಯಾಮಿ ಸೋಮವಾರ ಕರೆ ನೀಡಿದ್ದಾರೆ. ‘‘ಕಳೆದ ಎರಡು ವಾರಗಳಲ್ಲಿ ಬಾಂಗ್ಲಾದೇಶದಲ್ಲಿ ನಡೆದಿರುವ ಘಟನಾವಳಿಗಳ ಬಗ್ಗೆ ವಿಶ್ವಸಂಸ್ಥೆ ನೇತೃತ್ವದಲ್ಲಿ ಸ್ವತಂತ್ರ ತನಿಖೆ ನಡೆಯಬೇಕು’’ ಎಂದು ಅವರು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ, ಬ್ರಿಟನ್ಗೆ ತೆರಳುವ ಹಸೀನಾರ ಯೋಜನೆಯಲ್ಲಿ ಅನಿಶ್ಚಿತತೆ ತಲೆದೋರಿದೆ ಎಂದು ಮೂಲಗಳು ತಿಳಿಸಿವೆ. ಇತರ ದೇಶಗಳಲ್ಲಿ ಆಶ್ರಯ ಕೋರುವ ಸಾಧ್ಯತೆಗಳನ್ನೂ ಹಸೀನಾರ ತಂಡ ಪರಿಶೀಲಿಸುತ್ತಿದೆ ಎನ್ನಲಾಗಿದೆ. ಇಂಥ ದೇಶಗಳ ಪಟ್ಟಿಯಲ್ಲಿ ಫಿನ್ಲ್ಯಾಂಡ್ ಸೇರಿದೆ. ಅಲ್ಲಿ ಹಸೀನಾರ ಸಂಬಂಧಿಕರೂ ಇದ್ದಾರೆ ಎನ್ನಲಾಗಿದೆ