ಗುಂಡಿನ ದಾಳಿ ಪ್ರಕರಣ : ಸಲ್ಮಾನ್ ಖಾನ್ ನಿವಾಸಕ್ಕೆ ಸಿಎಂ ಏಕನಾಥ ಶಿಂದೆ ಭೇಟಿ

Update: 2024-04-16 17:15 GMT

ಏಕನಾಥ ಶಿಂದೆ , ಸಲ್ಮಾನ್ ಖಾನ್ | PC : X

ಮುಂಬೈ: ಗುಂಡಿನ ದಾಳಿ ಪ್ರಕರಣದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಏಕನಾಥ ಶಿಂದೆ ಅವರು ಮಂಗಳವಾರ ಬಾಂದ್ರಾದ ಗ್ಯಾಲಕ್ಸಿ ಅಪಾರ್ಟ್ಮೆಂಟ್ಸ್ ನಲ್ಲಿಯ ಬಾಲಿವುಡ್ ನಟ ಸಲ್ಮಾನ್ ಖಾನ್ ನಿವಾಸಕ್ಕೆ ಭೇಟಿ ನೀಡಿದರು. ಖಾನ್ ಮತ್ತು ಅವರ ತಂದೆ ಸಲೀಂ ಖಾನ್ ಜೊತೆ ಮಾತನಾಡಿದ ಅವರು ಕುಟುಂಬದ ಸುರಕ್ಷತೆಯ ಭರವಸೆಯನ್ನು ನೀಡಿದರು. ರವಿವಾರ ಬೆಳಗಿನ ಜಾವ ಐದು ಗಂಟೆಯ ಸುಮಾರಿಗೆ ಬೈಕಿನಲ್ಲಿ ಆಗಮಿಸಿದ್ದ ದುಷ್ಕರ್ಮಿಗಳಿಬ್ಬರು ಖಾನ್ ನಿವಾಸದ ಹೊರಗೆ ಗುಂಡುಗಳನ್ನು ಹಾರಿಸಿ ಪರಾರಿಯಾಗಿದ್ದರು.

ಖಾನ್ ಮತ್ತು ಅವರ ಕುಟುಂಬಕ್ಕೆ ಒದಗಿಸಿರುವ ಭದ್ರತೆಯನ್ನು ಸರಕಾರವು ಹೆಚ್ಚಿಸಲಿದೆ ಎಂದೂ ಶಿಂದೆ ತಿಳಿಸಿದರು. ಸಲ್ಮಾನ್‌ ಖಾನ್ ಸುರಕ್ಷತೆಯ ಬಗ್ಗೆ ಭರವಸೆ ನೀಡಿದ ಶಿಂದೆ,ತನ್ನ ಸರಕಾರವು ರಾಜ್ಯದಲ್ಲಿ ಯಾವುದೇ ಭೂಗತ ಗ್ಯಾಂಗ್ ಚಟುವಟಿಕೆಗಳನ್ನು ಸಹಿಸುವುದಿಲ್ಲ ಎಂದು ಹೇಳಿದರು.

ಇದಕ್ಕೂ ಮುನ್ನ ಖಾನ್ ನಿವಾಸದ ಹೊರಗೆ ಗುಂಡು ಹಾರಾಟ ನಡೆಸಿದ್ದ ವಿಕಿ ಗುಪ್ತಾ (24) ಮತ್ತು ಸಾಗರ ಪಾಲ್(21) ಅವರನ್ನು ಮುಂಬೈ ಪೋಲಿಸರು ಗುಜರಾತಿನ ಕಛ್ ಜಿಲ್ಲೆಯ ಗ್ರಾಮದಿಂದ ಬಂಧಿಸಿದ್ದಾರೆ.

ಆರೋಪಿಗಳು ಬಿಹಾರದ ಪಶ್ಚಿಮ ಚಂಪಾರಣ ಜಿಲ್ಲೆಯ ನಿವಾಸಿಗಳಾಗಿದ್ದು, ಅಪರಾಧವನ್ನು ಒಪ್ಪಿಕೊಂಡಿದ್ದಾರೆ. ಬಂಧನದಲ್ಲಿರುವ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯಿಯ ಗ್ಯಾಂಗ್ ಖಾನ್ ನಿವಾಸದ ಹೊರಗೆ ಗುಂಡು ಹಾರಿಸಲು ಗುಪ್ತಾ ಮತ್ತು ಪಾಲ್ ಅವರನ್ನು ನಿಯೋಜಿಸಿತ್ತು ಎನ್ನುವುದು ಪ್ರಾಥಮಿಕ ವಿಚಾರಣೆಯಿಂದ ಬೆಳಕಿಗೆ ಬಂದಿದೆ ಎಂದು ಮುಂಬೈ ಪೋಲಿಸರು ತಿಳಿಸಿದರು.

ಪ್ರಕರಣದ ತನಿಖೆಯನ್ನು ನಡೆಸುತ್ತಿರುವ ಕ್ರೈಂ ಬ್ರ್ಯಾಂಚ್ ಪೋಲಿಸರು, ಖಾನ್ ಹತ್ಯೆ ಪ್ರಯತ್ನದಲ್ಲಿ ಆರೋಪಿಗಳು ಅವರ ನಿವಾಸದ ಹೊರಗೆ ಗುಂಡುಗಳನ್ನು ಹಾರಿಸಿದ್ದರು ಎಂದು ಹೇಳಿದ್ದಾರೆ.

ಪಾಲ್ ಖಾನ್ ನಿವಾಸದತ್ತ ಗುಂಡು ಹಾರಿಸುತ್ತಿದ್ದಾಗ ಗುಪ್ತಾ ಮೊಬೈಲ್ ನಲ್ಲಿ ಗ್ಯಾಂಗ್ ಸದಸ್ಯರ ಸಂಪರ್ಕದಲ್ಲಿದ್ದ.

ಆರೋಪಿಗಳನ್ನು ಸ್ಥಳೀಯ ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗಿದ್ದು, ಎ.25ರವರೆಗೆ ಪೋಲಿಸ್ ಕಸ್ಟಡಿ ವಿಧಿಸಲಾಗಿದೆ. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News