14 ಭಾರತೀಯ ಮೀನುಗಾರರನ್ನು ಬಂಧಿಸಿದ ಶ್ರೀಲಂಕಾ ನೌಕಾಪಡೆ

Photo : PTI
ಕೊಲೊಂಬೊ: ಶುಕ್ರವಾರ ಶ್ರೀಲಂಕಾ ನೌಕಾಪಡೆ 14 ಭಾರತೀಯ ಮೀನುಗಾರರನ್ನು ಬಂಧಿಸಿದ್ದು, ತಮ್ಮ ಪ್ರಾಂತ್ಯದ ಸಮುದ್ರ ವ್ಯಾಪ್ತಿಯನ್ನು ಪ್ರವೇಶಿಸಿದ ಆರೋಪದ ಮೇಲೆ ಮೀನುಗಾರಿಕೆ ದೋಣಿಯೊಂದನ್ನೂ ವಶಪಡಿಸಿಕೊಂಡಿದೆ.
ಗುರುವಾರ ರಾತ್ರಿ ದಕ್ಷಿಣ ಮನ್ನಾರ್ ಸುತ್ತಮುತ್ತ ವಿಶೇಷ ಕಾರ್ಯಾಚರಣೆ ನಡೆಸಿದ ಶ್ರೀಲಂಕಾ ನೌಕಾಪಡೆ, ಭಾರತೀಯ ಮೀನುಗಾರರನ್ನು ಬಂಧಿಸಿದೆ.
ವಶಪಡಿಸಿಕೊಳ್ಳಲಾಗಿರುವ ದೋಣಿ ಹಾಗೂ ಭಾರತೀಯ ಮೀನುಗಾರರನ್ನು ಮನ್ನಾರ್ ನ ತಲ್ಪಡು ಪಿಯರ್ ಗೆ ಕರೆ ತರಲಾಗಿದ್ದು, ಮುಂದಿನ ಕಾನೂನು ಪ್ರಕ್ರಿಯೆಗಾಗಿ ಅವರನ್ನು ಮನ್ನಾರ್ ನ ಮೀನುಗಾರಿಕೆ ನಿರೀಕ್ಷಕರ ವಶಕ್ಕೆ ಒಪ್ಪಿಸಲಾಗುವುದು ಎಂದು ಶ್ರೀಲಂಕಾ ನೌಕಾಪಡೆ ಪ್ರಕಟಣೆಯಲ್ಲಿ ತಿಳಿಸಿದೆ.
ವಿದೇಶಿ ದೋಣಿಗಳು ಶ್ರೀಲಂಕಾದ ಸಮುದ್ರ ವ್ಯಾಪ್ತಿಯನ್ನು ಪ್ರವೇಶಿಸುವುದರಿಂದ ಸ್ಥಳೀಯ ಮೀನುಗಾರರ ಮೇಲೆ ಆಗಲಿರುವ ದುಷ್ಪರಿಣಾಮವನ್ನು ಪರಿಗಣಿಸಿ ಅಕ್ರಮ ಮೀನುಗಾರಿಕೆಯನ್ನು ಮಟ್ಟ ಹಾಕಲು ಶ್ರೀಲಂಕಾ ನೌಕಾಪಡೆ ನಿಯಮಿತವಾಗಿ ಗಸ್ತು ಹಾಗೂ ಕಾರ್ಯಾಚರಣೆಗಳನ್ನು ನಡೆಸುತ್ತಿದೆ ಎಂದೂ ಪ್ರಕಟಣೆಯಲ್ಲಿ ಹೇಳಲಾಗಿದೆ.
ಶ್ರೀಲಂಕಾದ ಸಮುದ್ರ ವ್ಯಾಪ್ತಿಯನ್ನು ಪ್ರವೇಶಿಸಿದ ಆರೋಪದ ಮೇಲೆ ಫೆಬ್ರವರಿ 23ರಂದು 32 ಭಾರತೀಯ ಮೀನುಗಾರರನ್ನು ಬಂಧಿಸಿದ್ದ ಶ್ರೀಲಂಕಾ ಪ್ರಾಧಿಕಾರಗಳು, ಅವರಿಂದ ಐದು ಮೀನುಗಾರಿಕೆ ದೋಣಿಗಳನ್ನು ವಶಪಡಿಸಿಕೊಂಡಿದ್ದವು. ಅಲ್ಲದೆ, ಶ್ರೀ ಲಂಕಾದ ಸಮುದ್ರರ ವ್ಯಾಪ್ತಿಯನ್ನು ಪ್ರವೇಶಿಸಿದ ಆರೋಪದ ಮೇಲೆ ಈ ವರ್ಷದಲ್ಲಿ ಇಲ್ಲಿಯವರೆಗೆ 140ಕ್ಕೂ ಹೆಚ್ಚು ಭಾರತೀಯ ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಬಂಧಿಸಿದೆ.
2024ರಲ್ಲಿ 550ಕ್ಕೂ ಹೆಚ್ಚು ಭಾರತೀಯ ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಬಂಧಿಸಿತ್ತು.
ಭಾರತ ಮತ್ತು ಶ್ರೀಲಂಕಾ ನಡುವೆ ಮೀನುಗಾರರ ವಿಷಯವು ವಿವಾದಾತ್ಮಕವಾಗಿಯೇ ಮುಂದುವರಿದಿದ್ದು, ಹಲವು ಘಟನೆಗಳಲ್ಲಿ ಶ್ರೀಲಂಕಾ ಸಮುದ್ರ ವ್ಯಾಪ್ತಿಯನ್ನು ಅಕ್ರಮವಾಗಿ ಪ್ರವೇಶಿಸಿದ ಆರೋಪದಲ್ಲಿ ಪಾಲ್ಕ್ ಜಲಸಂಧಿಯಲ್ಲಿ ಭಾರತೀಯ ಮೀನುಗಾರರ ಮೇಲೆ ಗುಂಡಿನ ದಾಳಿಯನ್ನೂ ನಡೆಸಿದ್ದ ಶ್ರೀಲಂಕಾ ನೌಕಾಪಡೆಯು, ಅವರಿಂದ ದೋಣಿಗಳನ್ನೂ ವಶಪಡಿಸಿಕೊಂಡಿತ್ತು.