ʼವಕ್ಫ್ ವಿಚಾರದಲ್ಲಿ ಮುಸ್ಲಿಮರ ಪರ ನಿಲ್ಲಬೇಕುʼ: ವಿಪಕ್ಷದ ಕ್ರೈಸ್ತ ಸಮುದಾಯದ ಸಂಸದರ ಆಗ್ರಹ
ಹೊಸದಿಲ್ಲಿ : ವಿವಾದಾತ್ಮಕ ವಕ್ಫ್ ಮಸೂದೆ ವಿಚಾರದಲ್ಲಿ ಕ್ರೈಸ್ತರು ಮುಸ್ಲಿಮರ ಪರವಾಗಿ ನಿಲ್ಲಬೇಕು. ಏಕೆಂದರೆ ಇದು ಸಂವಿಧಾನದಲ್ಲಿ ಪ್ರತಿಪಾದಿಸಲ್ಪಟ್ಟಿರುವ ಅಲ್ಪಸಂಖ್ಯಾತರ ಹಕ್ಕುಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಕ್ರೈಸ್ತ ಸಮುದಾಯಕ್ಕೆ ಸೇರಿದ ವಿಪಕ್ಷದ ಸಂಸದರು ಕ್ಯಾಥೋಲಿಕ್ ಬಿಷಪ್ಸ್ ಕಾನ್ಫರೆನ್ಸ್ ಆಫ್ ಇಂಡಿಯಾ(ಸಿಬಿಸಿಐ) ಸಭೆಯಲ್ಲಿ ಒತ್ತಾಯಿಸಿದ್ದಾರೆ.
ಕ್ಯಾಥೋಲಿಕ್ ಬಿಷಪ್ಸ್ ಕಾನ್ಫರೆನ್ಸ್ ಆಫ್ ಇಂಡಿಯಾ(ಸಿಬಿಸಿಐ) ಡಿಸೆಂಬರ್ 3ರಂದು ಕ್ರೈಸ್ತ ಸಮುದಾಯಕ್ಕೆ ಸೇರಿದ ಜನಪ್ರತಿನಿಧಿಗಳ(ಶಾಸಕರು, ಸಂಸದರ) ಸಭೆಯನ್ನು ಆಯೋಜಿಸಿತ್ತು. ದಶಕಗಳ ನಂತರ ಕ್ಯಾಥೋಲಿಕ್ ಬಿಷಪ್ಸ್ ಕಾನ್ಫರೆನ್ಸ್ ಆಫ್ ಇಂಡಿಯಾದ ಸಭೆಯು ನಡೆದಿದೆ. ಸಿಬಿಸಿಐ ಅಧ್ಯಕ್ಷ ಆರ್ಚ್ ಬಿಷಪ್ ಆಂಡ್ರ್ಯೂಸ್ ಥಜತ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ 20 ಸಂಸದರು ಭಾಗವಹಿಸಿದ್ದರು. ಕೇಂದ್ರ ಸಚಿವ ಜಾರ್ಜ್ ಕುರಿಯನ್ ಕೂಡ ಸಭೆಯಲ್ಲಿ ಭಾಗವಹಿಸಿದ್ದರು. ಆದರೆ ಅವರು ವಕ್ಫ್ ಮಸೂದೆ ಮತ್ತು ಇತರ ವಿಷಯಗಳ ಬಗ್ಗೆ ಚರ್ಚೆ ವೇಳೆ ಉಪಸ್ಥಿತರಿರಲಿಲ್ಲ.
ಸಭೆಯಲ್ಲಿ ತೃಣಮೂಲ ಕಾಂಗ್ರೆಸ್ ನ ರಾಜ್ಯಸಭಾ ನಾಯಕ ಡೆರೆಕ್ ಓ’ಬ್ರಿಯಾನ್, ಸಿಪಿಐ(ಎಂ)ನ ಜಾನ್ ಬ್ರಿಟಾಸ್, ಕಾಂಗ್ರೆಸ್ ನ ಬೆನ್ನಿ ಬೆಹನನ್, ಆಂಟೋ ಆಂಟೋನಿ, ಎಬಿ ಈಡನ್, ಡೀನ್ ಕುರಿಯಾಕೋಸ್, ಜೋಸ್ ಕೆ ಮಣಿ, ಫ್ರಾನ್ಸಿಸ್ ಜಾರ್ಜ್ ಸೇರಿದಂತೆ ಇತರರು ಭಾಗವಹಿಸಿದ್ದರು.
ಸಭೆಯಲ್ಲಿ ವಕ್ಫ್(ತಿದ್ದುಪಡಿ) ಮಸೂದೆಯ ವಿರುದ್ಧ ವಿರೋಧ ಪಕ್ಷದ ಸಂಸದರು ಧ್ವನಿ ಎತ್ತಿದ್ದು, ಈ ಬೆಳವಣಿಗೆ ಕ್ಯಾಥೋಲಿಕ್ ಚರ್ಚ್ ಸೇರಿದಂತೆ ಅಲ್ಪಸಂಖ್ಯಾತರ ಮೇಲೆ ಭವಿಷ್ಯದಲ್ಲಿ ದೂರಗಾಮಿ ಪರಿಣಾಮ ಬೀರಲಿದೆ. ಆದ್ದರಿಂದ ಯಾವುದೇ ಮುಸ್ಲಿಂ ವಿರೋಧಿ ನಿಲುವನ್ನು ಬೆಂಬಲಿಸುವುದಿಲ್ಲ ಎಂದು ಕ್ರೈಸ್ತ ಸಮುದಾಯ ಖಚಿತಪಡಿಸಿಕೊಳ್ಳಬೇಕು ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.
ಕ್ರೈಸ್ತ ಸಮುದಾಯ ಮತ್ತು ಅವರ ಹಕ್ಕುಗಳನ್ನು ರಕ್ಷಿಸುವಲ್ಲಿ ಕ್ರೈಸ್ತ ಸಂಸದರ ಪಾತ್ರ, ಅಲ್ಪಸಂಖ್ಯಾತರ ವಿರುದ್ಧ ಹೆಚ್ಚುತ್ತಿರುವ ದಾಳಿ, ಬೆದರಿಕೆಗಳು, ಕ್ರೈಸ್ತ ಸಂಸ್ಥೆಗಳನ್ನು ಗುರಿಯಾಗಿಸಲು ಎಫ್ ಸಿ ಆರ್ ಎ ದುರ್ಬಳಕೆ ಬಗ್ಗೆ ಚರ್ಚಿಸಲು ಕ್ಯಾಥೋಲಿಕ್ ಬಿಷಪ್ಸ್ ಕಾನ್ಫರೆನ್ಸ್ ಆಫ್ ಇಂಡಿಯಾ ಸಭೆಯನ್ನು ಕರೆಯಲಾಗಿತ್ತು.