NCERT ಪಠ್ಯಕ್ರಮ ಅಭಿವೃದ್ಧಿಗಾಗಿ ರಚಿಸಿರುವ ಸಮಿತಿಯಲ್ಲಿ ಸುಧಾಮೂರ್ತಿ, ಆರೆಸ್ಸೆಸ್ ಚಿಂತಕ ಚಾಮು ಕೃಷ್ಣ ಶಾಸ್ತ್ರಿಗೆ ಸ್ಥಾನ

Sudhamurthy, RSS thinker Chamu Krishna Shastri named in NCERT syllabus development committee

Update: 2023-08-12 14:40 GMT

ಹೊಸದಿಲ್ಲಿ: ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಶನಲ್ ರಿಸರ್ಚ್ ಆಯಂಡ್ ಟ್ರೈನಿಂಗ್ (NCERT) ಮಂಡಳಿಯು ನೂತನ ಪಠ್ಯ ಕ್ರಮ ಅಭಿವೃದ್ಧಿಗಾಗಿ ಸಮಿತಿಯೊಂದನ್ನು ರಚಿಸಿದ್ದು, ಈ ಸಮಿತಿಗೆ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ, ಸಂಗೀತಗಾರ ಶಂಕರ್ ಮಹಾದೇವನ್ ಹಾಗೂ ಪ್ರಧಾನಿ ಮಂತ್ರಿಗಳ ಆರ್ಥಿಕ ಸಲಹಾ ಮಂಡಳಿಯ ಅಧ್ಯಕ್ಷ ಸಂಜೀವ್ ಸನ್ಯಾಲ್ ಅವರನ್ನು ನೇಮಿಸಿದೆ. ಇದರೊಂದಿಗೆ ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಮಂಡಳಿಯ ಸದಸ್ಯರಾದ ಚಾಮು ಕೃಷ್ಣ ಶಾಸ್ತ್ರಿ ಅವರನ್ನೂ ಸೇರ್ಪಡೆ ಮಾಡಲಾಗಿದ್ದು, ಚಾಮು ಕೃಷ್ಣ ಶಾಸ್ತ್ರಿ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದೊಂದಿಗೆ ಗುರುತಿಸಿಕೊಂಡಿರುವ ಸಂಸ್ಕೃತ ಭಾರತಿ ಸಂಸ್ಥೆಯ ಸಂಸ್ಥಾಪಕ ಸದಸ್ಯರಾಗಿದ್ದಾರೆ. ಅವರು ಭಾರತೀಯ ಭಾಷೆಗಳನ್ನು ಪ್ರಚಾರ ಮಾಡುವ ಗುರಿ ಹೊಂದಿರುವ ಸಮಿತಿಯ ಮುಖ್ಯಸ್ಥರೂ ಆಗಿದ್ದಾರೆ ಎಂದು thenewsminute.com ವರದಿ ಮಾಡಿದೆ. 

ರಾಷ್ಟ್ರೀಯ ಶೈಕ್ಷಣಿಕ ಯೋಜನೆ ಮತ್ತು ಆಡಳಿತ ಸಂಸ್ಥೆಯ ಕುಲಪತಿಯಾದ ಮಹೇಶ್ ಚಂದ್ರ ಪಂತ್ ಅವರನ್ನು 19 ಮಂದಿ ಸದಸ್ಯರ ರಾಷ್ಟ್ರೀಯ ಪಠ್ಯಕ್ರಮ ಮತ್ತು ಬೋಧನಾ ಕಲಿಕಾ ಸಾಮಗ್ರಿ ಸಮಿತಿಯ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ.ಈ ಸಮಿತಿಯ ಅಧಿಸೂಚನೆಯನ್ನು ಸರ್ಕಾರದ ಸ್ವಾಯತ್ತ ಸಂಸ್ಥೆಯಾದ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯು ಜುಲೈ 21ರಂದು ಪ್ರಕಟಿಸಿದೆ.

ಸದ್ಯ ಬಳಕೆಯಲ್ಲಿರುವ ಎನ್ಸಿಇಆರ್ಟಿ ಪಠ್ಯಪುಸ್ತಕಗಳು 2005ರ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟನ್ನು ಆಧರಿಸಿವೆ. ರಾಷ್ಟ್ರೀಯ ಶಿಕ್ಷಣ ನೀತಿ 2020 ಅನ್ನು ಅನುಷ್ಠಾನಗೊಳಿಸುವ ಭಾಗವಾಗಿ ಕೆ. ಕಸ್ತೂರಿ ರಂಗನ್ ನೇತೃತ್ವದ ಉನ್ನತ ಸಮಿತಿಯ ಮಾರ್ಗದರ್ಶನದಡಿ ಅಭಿವೃದ್ಧಿಪಡಿಸಲಾಗಿದ್ದ ಶಾಲಾ ಶಿಕ್ಷಣಕ್ಕಾಗಿ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನೊಂದಿಗೆ ಎನ್ಸಿಇಆರ್ಟಿ ಪಠ್ಯಕ್ರಮವನ್ನು ಸಮನ್ವಯಗೊಳಿಸುವುದು ರಾಷ್ಟ್ರೀಯ ಪಠ್ಯಕ್ರಮ ಮತ್ತು ಬೋಧನಾ ಕಲಿಕಾ ಸಾಮಗ್ರಿ ಸಮಿತಿಯ ಪ್ರಾಥಮಿಕ ಗುರಿಯಾಗಿದೆ. ಈಗಾಗಲೇ ಶಾಲಾ ಶಿಕ್ಷಣಕ್ಕಾಗಿನ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನ ಅಂತಿಮ ಆವೃತ್ತಿಯನ್ನು ಕೇಂದ್ರ ಶಿಕ್ಷಣ ಸಚಿವಾಲಯಕ್ಕೆ ಸಲ್ಲಿಸಲಾಗಿದ್ದರೂ, ಇದರ ಸಾರ್ವಜನಿಕ ಬಿಡುಗಡೆ ಇನ್ನೂ ಬಾಕಿ ಇದೆ. ಇದರ ಕರಡು ಆವೃತ್ತಿಯನ್ನು ಎಪ್ರಿಲ್ ತಿಂಗಳಿನಲ್ಲಿ ಬಿಡುಗಡೆ ಮಾಡಲಾಗಿತ್ತು. 

ರಾಷ್ಟ್ರೀಯ ಪಠ್ಯಕ್ರಮ ಮತ್ತು ಬೋಧನಾ ಕಲಿಕಾ ಸಾಮಗ್ರಿ ಸಮಿತಿಯ ಹೊಣೆಗಾರಿಕೆಯಲ್ಲಿ ಶಾಲಾ ಪಠ್ಯಕ್ರಮ, ಪಠ್ಯಪುಸ್ತಕಗಳು ಹಾಗೂ ಮೂರನೆ ತರಗತಿಯಿಂದ ಹನ್ನೆರಡನೆ ತರಗತಿಯವರೆಗೆ ಕಲಿಕಾ ಸಾಮಗ್ರಿಗಳನ್ನು ರೂಪಿಸುವುದು ಸೇರಿದೆ. ಇದರೊಂದಿಗೆ, ಎರಡನೆ ತರಗತಿಯಿಂದ ಮೂರನೆಯ ತರಗತಿಗೆ ಸುಗಮವಾಗಿ ಪರಿವರ್ತನೆಯಾಗಲು ಒಂದನೆ ಮತ್ತು ಎರಡನೆ ತರಗತಿಯ ಹಾಲಿ ಪಠ್ಯಪುಸ್ತಕಗಳನ್ನು ಪರಿಷ್ಕರಿಸಲಿದೆ. ರಾಷ್ಟ್ರೀಯ ಪಠ್ಯಕ್ರಮ ಮತ್ತು ಬೋಧನಾ ಕಲಿಕಾ ಸಾಮಗ್ರಿ ಸಮಿತಿಗೆ ಒದಗಿಸಲಾಗಿರುವ ಉಲ್ಲೇಖದ ನಿಯಮಗಳ ಪ್ರಕಾರ, ಈ ಸಮಿತಿಯು ಪಠ್ಯಪುಸ್ತಕಗಳು ಸೇರಿದಂತೆ ಅಭಿವೃದ್ಧಿಪಡಿಸಲಿರುವ ಕಲಿಕಾ ಸಾಮಗ್ರಿಗಳನ್ನು ಎನ್ಸಿಇಆರ್ಟಿ ಪ್ರಕಟಿಸಿ, ವಿತರಣೆ ಮಾಡಲಿದೆ. ರಾಷ್ಟ್ರೀಯ ಪಠ್ಯಕ್ರಮ ಮತ್ತು ಬೋಧನಾ ಕಲಿಕಾ ಸಾಮಗ್ರಿ ಸಮಿತಿ ಕೂಡಾ ಶಾಲಾ ಪಠ್ಯಕ್ರಮದಲ್ಲಿ ಪ್ರತಿ ವಿಷಯದ ಕುರಿತು ಪಠ್ಯಪುಸ್ತಕಗಳನ್ನು ಅಭಿವೃದ್ಧಿಪಡಿಸಲು ಪಠ್ಯಕ್ರಮ ಪ್ರದೇಶ ಗುಂಪುಗಳು ಎಂದು ಕರೆಯಲಾಗುವ ಉಪ ಗುಂಪುಗಳನ್ನು ರಚಿಸುವ ಅಧಿಕಾರ ಹೊಂದಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News