ಸಿಎಂ ಜೊತೆ ಕುಳಿತು ಚರ್ಚಿಸಿ: ತಮಿಳುನಾಡು ರಾಜ್ಯಪಾಲರಿಗೆ ಸುಪ್ರೀಂ ಕೋರ್ಟ್‌ ಸೂಚನೆ

Update: 2023-12-01 11:59 GMT

ಆರ್‌ ಎನ್‌ ರವಿ  / ಎಂ.ಕೆ. ಸ್ಟಾಲಿನ್‌ (Photo: ANI)

ಹೊಸದಿಲ್ಲಿ: ತಮಿಳುನಾಡು ವಿಧಾನಸಭೆ ಅನುಮೋದಿಸಿದ ಮಸೂದೆಗಳಿಗೆ ಅಂಕಿತ ನೀಡುವಲ್ಲಿ ಉಂಟಾಗಿರುವ ವಿಳಂಬದಿಂದ ಉದ್ಭವಿಸಿರುವ ಸಮಸ್ಯೆಯನ್ನು ಪರಿಹರಿಸಲು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಜೊತೆ ಸಭೆ ನಡೆಸುವಂತೆ ತಮಿಳುನಾಡು ರಾಜ್ಯಪಾಲ ಆರ್‌ ಎನ್‌ ರವಿ ಅವರಿಗೆ ಸುಪ್ರೀಂ ಕೋರ್ಟ್‌ ಇಂದು ಸೂಚನೆ ನೀಡಿದೆ.

“ರಾಜ್ಯಪಾಲರು ಈ ಸಮಸ್ಯೆ ಪರಿಹರಿಸಬೇಕೆಂದು ನಾವು ಬಯಸುತ್ತೇವೆ. ರಾಜ್ಯಪಾಲರು ಮುಖ್ಯಮಂತ್ರಿಯನ್ನು ಆಹ್ವಾನಿಸಲಿ, ನಂತರ ಅವರು ಕುಳಿತು ಚರ್ಚಿಸಲಿ,” ಎಂದು ನ್ಯಾಯಾಲಯ ಹೇಳಿದೆ.

ರಾಜ್ಯ ವಿಧಾನಸಭೆ ಮರುಅಂಗೀಕರಿಸಿರುವ 10 ಮಸೂದೆಗಳನ್ನು ರಾಜ್ಯಪಾಲರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಕಳಿಸಿದ್ದಾರೆ ಎಂದು ತಮಿಳುನಾಡು ಸರ್ಕಾರದ ವಕೀಲ ಅಭಿಷೇಕ್‌ ಮನು ಸಿಂಘ್ವಿ ಹೇಳಿದಾಗ ಸುಪ್ರೀಂ ಕೋರ್ಟ್‌ ಮೇಲಿನಂತೆ ಹೇಳಿತು.

ವಿಧಾನಸಭೆ ಮರು ಅಂಗೀಕರಿಸಿದ ಮಸೂದೆಗಳನ್ನು ರಾಷ್ಟ್ರಪತಿಗಳಿಗೆ ಕಳುಹಿಸಲಾಗದು ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ಅವರ ನೇತೃತ್ವದ ಪೀಠ ಹೇಳಿದೆ.

ಪ್ರಕರಣದ ಮುಂದಿನ ವಿಚಾರಣೆ ಡಿಸೆಂಬರ್‌ 11ರಂದು ನಡೆಯಲಿದೆ.

ರಾಜ್ಯಪಾಲ ರವಿ ಈ ತಿಂಗಳು, ಹಿಂದಿನ ಎಐಎಡಿಎಂಕೆ ಸರ್ಕಾರ ಅಂಗೀಕರಿಸಿದ ಎರಡು ಮಸೂದೆಗಳ ಸಹಿತ 10 ಮಸೂದೆಗಳನ್ನು ವಾಪಸ್‌ ಕಳಿಸಿದ್ದರು. ಈ ಬೆಳವಣಿಗೆ ನಂತರ ವಿಧಾನಸಭೆ ಈ ಮಸೂದೆಗಳನ್ನು ಮರುಅಂಗೀಕರಿಸಿ ರಾಜ್ಯಪಾಲರಿಗೆ ಕಳಿಸಿತ್ತು.

ರಾಜ್ಯಪಾಲರು ಉದ್ದೇಶಪೂರ್ವಕವಾಗಿ ಮಸೂದೆಗಳನ್ನು ತಡೆಹಿಡಿಯುತ್ತಿದ್ದಾರೆ ಎಂದು ತಮಿಳುನಾಡು ಸರ್ಕಾರ ಆರೋಪಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News