ANI ಮೀಡಿಯಾದಿಂದ ತೆರಿಗೆ ವಂಚನೆ ಆರೋಪ: ಮಾಹಿತಿದಾರನಿಗೆ ಪುರಸ್ಕಾರ ಮೊತ್ತದ ಪರಿಶೀಲನೆಗೆ ಕೇಂದ್ರಕ್ಕೆ ಸುಪ್ರೀಂ ನಿರ್ದೇಶನ

Update: 2023-07-30 12:18 GMT

ಹೊಸದಿಲ್ಲಿ: ಸುದ್ದಿಸಂಸ್ಥೆ ANI ಮೀಡಿಯಾ ಪ್ರೈ.ಲಿ.ನಿಂದ ತೆರಿಗೆ ವಂಚನೆಯ ಕುರಿತು ಮಾಹಿತಿಯನ್ನು ನೀಡಿದ್ದ ವ್ಯಕ್ತಿಗೆ ಘೋಷಿಸಲಾಗಿರುವ ಬಹುಮಾನ ಮೊತ್ತವನ್ನು ಪುನರ್ಪರಿಶೀಲಿಸುವಂತೆ ಸರ್ವೋಚ್ಚ ನ್ಯಾಯಾಲಯವು ವಿತ್ತ ಸಚಿವಾಲಯವು ‘ಮಾಹಿತಿದಾರರಿಗೆ ಬಹುಮಾನ ’ನೀತಿಯಡಿ ರಚಿಸಲಾಗಿರುವ ಬಹುಮಾನ ಸಮಿತಿಗೆ ಇತ್ತೀಚಿಗೆ ನಿರ್ದೇಶನ ನೀಡಿದೆ.

ಮೇಲ್ಮನವಿದಾರರು ಏಶ್ಯನ್ ನ್ಯೂಸ್ ಇಂಟರ್ನ್ಯಾಷನಲ್ (ಎಎನ್ಐ) ಮೀಡಿಯಾ ಪ್ರೈ.ಲಿ.2.59 ಕೋಟಿ ರೂ.ಗಳ ಸೇವಾ ತೆರಿಗೆಯನ್ನು ವಂಚಿಸಿರುವ ಬಗ್ಗೆ ಮಾಹಿತಿಯನ್ನು ಒದಗಿಸಿದ್ದರು. ಮಾಹಿತಿದಾರರಿಗೆ ಬಹುಮಾನ ನೀತಿಯ ನಿಬಂಧನೆ 4.1ರ ಆಧಾರದಲ್ಲಿ ತಾನು 51.80 ಲಕ್ಷ ರೂ.ಗಳ ಬಹುಮಾನಕ್ಕೆ ಅರ್ಹನಾಗಿದ್ದೇನೆ ಎಂದು ಮೇಲ್ಮನವಿದಾರರು ಪ್ರತಿಪಾದಿಸಿದ್ದರು. ಬಹುಮಾನ ಸಮಿತಿಯು ಅಂತಿಮವಾಗಿ ಮೇಲ್ಮನವಿದಾರರಿಗೆ 5.50 ಲಕ್ಷ ರೂ.ಗಳ ಬಹುಮಾನವನ್ನು ಮಂಜೂರು ಮಾಡಿತ್ತು.

ಇದನ್ನು ಪ್ರಶ್ನಿಸಿ ಮೇಲ್ಮನವಿದಾರರು 2015ರಲ್ಲಿ ಬಾಂಬೆ ಉಚ್ಚ ನ್ಯಾಯಾಲಯದಲ್ಲಿ ಸಂವಿಧಾನದ ವಿಧಿ 226ರಡಿ ಅರ್ಜಿಯನ್ನು ಸಲ್ಲಿಸಿದ್ದರು.

ಬಹುಮಾನ ನೀತಿಯ ನಿಬಂಧನೆ 4.1ರಡಿ ವಂಚಿಸಲಾದ ತೆರಿಗೆ ಮತ್ತು ದಂಡದ ಹಣ ಸೇರಿ ಒಟ್ಟು ಮೊತ್ತದ ಶೇ.20ರವರೆಗೆ ಮಾಹಿತಿದಾರರಿಗೆ ಬಹುಮಾನವಾಗಿ ನೀಡಬಹುದಾಗಿದೆ ಮತ್ತು ನೀತಿಯಂತೆ ಮೂವರು ಸದಸ್ಯರನ್ನೊಳಗೊಂಡ ಸಮಿತಿಯ ಬಹುಮಾನಕ್ಕೆ ಸಂಬಂಧಿಸಿದಂತೆ ನಿರ್ಧಾರವನ್ನು ತೆಗೆದುಕೊಳ್ಳುವ ಅಧಿಕಾರವನ್ನು ಹೊಂದಿದೆ.

ಅರ್ಜಿಯು ವಾಸ್ತವದ ವಿವಾದಿತ ಪ್ರಶ್ನೆಗಳನ್ನು ಒಳಗೊಂಡಿದೆ ಎಂದು ಎತ್ತಿ ಹಿಡಿದಿದ್ದ ಬಾಂಬೆ ಉಚ್ಚ ನ್ಯಾಯಾಲಯವು ಸಿವಿಲ್ ಮೊಕದ್ದಮೆಯನ್ನು ದಾಖಲಿಸುವಂತೆ ಮೇಲ್ಮನವಿದಾರರಿಗೆ ಸಲಹೆ ನೀಡಿತ್ತು. ಉಚ್ಚ ನ್ಯಾಯಾಲಯದ ನಿರ್ಧಾರವನ್ನು ಪ್ರಶ್ನಿಸಿ ಮೇಲ್ಮನವಿದಾರರು ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿದ್ದರು.

ಸರ್ವೋಚ್ಚ ನ್ಯಾಯಾಲಯ ಹೇಳಿದ್ದೇನು?

ಬಹುಮಾನವನ್ನು ಮಂಜೂರು ಮಾಡುವಾಗ ಬಹುಮಾನ ಸಮಿತಿಯು ತನ್ನ ವಿವೇಚನೆಯನ್ನು ಅನ್ವಯಿಸಿರಲಿಲ್ಲ ಎಂದು ಹೇಳಿರುವ ಸರ್ವೋಚ್ಚ ನ್ಯಾಯಾಲಯವು,ನಿರ್ಧಾರವನ್ನು ತೆಗೆದುಕೊಳ್ಳುವ ಪ್ರಾಧಿಕಾರವು ನಿರ್ದಿಷ್ಟ ತೀರ್ಮಾನವನ್ನು ತೆಗೆದುಕೊಂಡಿದ್ದಕ್ಕೆ ಸಕಾರಣಗಳನ್ನು ಒದಗಿಸುವುದು ಅತ್ಯಗತ್ಯವಾಗಿದೆ ಎಂದು ಒತ್ತಿ ಹೇಳಿದೆ.

ಎಳ್ಳಷ್ಟೂ ವಿವೇಚನೆಯನ್ನು ಅನ್ವಯಿಸಲಾಗಿರಲಿಲ್ಲ ಎನ್ನುವುದನ್ನು ಸಮಿತಿಯ ಸಭೆಯ ನಡಾವಳಿಗಳು ತೋರಿಸಿವೆ ಎಂದು ಅದು ಅಭಿಪ್ರಾಯಿಸಿದೆ.

ಮೇಲ್ಮನವಿಯನ್ನು ಭಾಗಶಃ ಅನುಮತಿಸಿರುವ ಸರ್ವೋಚ್ಚ ನ್ಯಾಯಾಲಯವು ಪ್ರಕರಣವನ್ನು ಪುನರ್ಪರಿಶೀಲಿಸುವಂತೆ ಮತ್ತು ಮೇಲ್ಮನವಿದಾರರಿಗೆ ಹೆಚ್ಚಿನ ಬಹುಮಾನದ ಮೊತ್ತವನ್ನು ನೀಡಬೇಕಾಗುತ್ತದೆಯೇ ಎನ್ನುವುದನ್ನು ನಿರ್ಧರಿಸುವಂತೆ ಸಮಿತಿಗೆ ನಿರ್ದೇಶಿಸಿದೆ.

ಆರು ತಿಂಗಳಲ್ಲಿ ತೀರ್ಮಾನವನ್ನು ತೆಗೆದುಕೊಳ್ಳುವಂತೆ ಸಮಿತಿಗೆ ನಿರ್ದೇಶಿಸಿರುವ ಸರ್ವೋಚ್ಚ ನ್ಯಾಯಾಲಯವು,ನೀತಿಯ ನಿಬಂಧನೆಗಳ ಆಧಾರದಲ್ಲಿ ಈಗಾಗಲೇ ನೀಡಲಾಗಿರುವ ಬಹುಮಾನಕ್ಕಿಂತ ಹೆಚ್ಚಿನ ಮೊತ್ತಕ್ಕೆ ಮೇಲ್ಮನವಿದಾರರು ಅರ್ಹರಾಗಿದ್ದಾರೆಯೇ ಎನ್ನುವುದನ್ನು ಸಮಿತಿಯು ಪರಿಶೀಲಿಸಲೇಬೇಕು ಎಂದು ತಾಕೀತು ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News