ಭಾರತದ ವಿರುದ್ಧ ಧ್ವನಿ ಎತ್ತುವವರ ಜೀವ ತೆಗೆಯಲು ಹಿಂಜರಿಯಲ್ಲ ಎಂದ ಬಿಜೆಪಿ ಮುಖಂಡ
ಹೊಸದಿಲ್ಲಿ: ದೇಶದ ವಿರುದ್ಧ ಧ್ವನಿ ಎತ್ತುವ ವ್ಯಕ್ತಿಗಳ ಜೀವ ತೆಗೆಯುವ ತೆಗೆಯಲು ಹಿಂಜರಿಯುವ ಪ್ರಶ್ನೆಯೇ ಇಲ್ಲ" ಎಂದು ಹೇಳಿಕೆ ನೀಡುವ ಮೂಲಕ ಬಿಜೆಪಿ ಮುಖಂಡ ಕೈಲಾಶ್ ವಿಜಯವರ್ಗೀಯ ವಿವಾದ ಹುಟ್ಟುಹಾಕಿದ್ದಾರೆ.
"ನಾವು ಯಾರ ವಿರೋಧಿಗಳೂ ಅಲ್ಲ. ಭಾರತ್ ಮಾತಾ ಕಿ ಜೈ ಎನ್ನುವ ಎಲ್ಲರೂ ನಮ್ಮ ಸಹೋದರರು ಮತ್ತು ಅವರಿಗಾಗಿ ನಾವು ಪ್ರಾಣ ತ್ಯಾಗ ಮಾಡಲೂ ಸಿದ್ಧ. ಆದರೆ ಭಾರತಮಾತೆಯ ವಿರುದ್ಧ ಧ್ವನಿ ಎತ್ತುವವರ ಜೀವ ತೆಗೆಯಲೂ ನಾವು ಹಿಂದೇಟು ಹಾಕುವ ಪ್ರಶ್ನೆಯೇ ಇಲ್ಲ" ಎಂದು ಮಧ್ಯಪ್ರದೇಶದ ರತ್ಲಂನಲ್ಲಿ ನಡೆದ ಸಮಾರಂಭವೊಂದರಲ್ಲಿ ಅವರು ಹೇಳಿದ್ದಾರೆ.
ರಾಮಮಂದಿರ ವಿವಾದದ ಬಗ್ಗೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಅಯೋಧ್ಯೆಯಲ್ಲಿ ರಾಮಮಂದಿರ ತಲೆ ಎತ್ತುತ್ತಿರುವ ಬಗ್ಗೆ ಕಾಂಗ್ರೆಸ್ ಪ್ರಶ್ನೆಗಳನ್ನು ಎಸೆಯುತ್ತಲೇ ಇದೆ ಎಂದರು
. "ರಾಮ ಕಾಲ್ಪನಿಕ ವ್ಯಕ್ತಿ ಎಂಬ ಅಭಿಪ್ರಾಯ ಹೊಂದಿರುವವರು ದೇಗುಲ ತಲೆ ಎತ್ತುವ ಸಂದರ್ಭದಲ್ಲಿ ಅಂದರೆ ಜನವರಿಯಲ್ಲಿ ಅಯೋಧ್ಯೆಗೆ ತೆರಳಬೇಕು. ಈ ಮೂಲಕ ತಮ್ಮ ಪಾಪಗಳನ್ನು ತೊಳೆದುಕೊಳ್ಳಬೇಕು" ಎಂದು ಲೇವಡಿ ಮಾಡಿದರು.
ವಿಜಯವರ್ಗೀಯ ವಿವಾದ ಹುಟ್ಟುಹಾಕುತ್ತಿರುವುದು ಇದೇ ಮೊದಲಲ್ಲ. ಈ ವರ್ಷದ ಆರಂಭದಲ್ಲಿ ಹೆಣ್ಣುಮಕ್ಕಳ ದಿರಿಸಿನ ಬಗ್ಗೆ ಮಾತನಾಡಿದ್ದು ವಿವಾದಕ್ಕೆ ಕಾರಣವಾಗಿತ್ತು.
"ನಾವು ಮಹಿಳೆಯರು ಮತ್ತು ಹೆಣ್ಣುಮಕ್ಕಳನ್ನು ದೇವತೆಗಳು ಎಂದು ಕರೆಯುತ್ತೇವೆ. ಆದರೆ ಹೆಣ್ಣುಮಕ್ಕಳು ಎಷ್ಟು ಕೊಳಕು ಬಟ್ಟೆ ಧರಿಸುತ್ತಿದ್ದಾರೆ ಎಂದರೆ, ಅವರ ದೇವತೆಯ ಸ್ವರೂಪ ಕಾಣುವುದೇ ಇಲ್ಲ. ಅವರು ಶೂರ್ಪನಖಿಗಳಂತೆ ಕಾಣುತ್ತಾರೆ. ದೇವರು ಅವರಿಗೆ ಸುಂದರ ದೇಹ ನೀಡಿದ್ದಾನೆ. ಆದ್ದರಿಂದ ಅವರು ಒಳ್ಳೆಯ ಬಟ್ಟೆ ಧರಿಸಬೇಕು. ಮಕ್ಕಳಲ್ಲಿ ನೀವು ಸಂಸ್ಕಾರ ಬೆಳೆಸಬೇಕು. ಈ ಬಗ್ಗೆ ನನಗೆ ಆತಂಕ ಇದೆ" ಎಂದು ಅವರು ಹೇಳಿಕೆ ನೀಡಿದ್ದರು.