25 ವರ್ಷ ಹಿಂದೆ ಕಸದ ತೊಟ್ಟಿಗೆ ಎಸೆಯಲ್ಪಟ್ಟಿದ್ದ ಹೆಣ್ಣುಮಗು ಎಂಪಿಎಸ್ ಸಿ ಪಾಸ್!
ಅಮರಾವತಿ: ಮಹಾರಾಷ್ಟ್ರದ ಜಲಗಾಂವ್ ರೈಲು ನಿಲ್ದಾಣದ ಕಸದ ತೊಟ್ಟಿಯಲ್ಲಿ 25 ವರ್ಷ ಹಿಂದೆ ದೃಷ್ಟಿಮಾಂದ್ಯ ಹೆಣ್ಣುಮಗುವೊಂದು ಪತ್ತೆಯಾಗಿತ್ತು. ಈ ಮಗುವಿನ ಪೋಷಕರ ಪತ್ತೆ ಅಸಾಧ್ಯವಾದ ಹಿನ್ನೆಲೆಯಲ್ಲಿ ಈ ನವಜಾತ ಶಿಶುವನ್ನು ಜಲಗಾಂವ್ ರಿಮಾಂಡ್ ಹೋಮ್ ನಲ್ಲಿರಿಸಿದ ಬಳಿಕ ಉತ್ತಮ ಸೌಲಭ್ಯವಿರುವ ಪರಾಟವಾಡ ಕಿವುಡ ಮತ್ತು ಅಂಧಮಕ್ಕಳ ಪುನರ್ವಸತಿ ಕೇಂದ್ರಕ್ಕೆ ಸೇರಿಸಲಾಗಿತ್ತು.
ಮಗುವಿಗೆ ಮಾಲಾ ಪಾಪಲ್ಕರ್ ಎಂದು ನಾಮಕರಣ ಮಾಡಲಾಗಿತ್ತು. ಎರಡು ದಶಕಗಳ ಬಳಿಕ ಈ ಮಗು ಇದೀಗ ಮಹಾರಾಷ್ಟ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, ಮಹಾರಾಷ್ಟ್ರದ ಸಚಿವಾಲಯದಲ್ಲಿ ಕ್ಲರ್ಕ್ ಕಮ್ ಟೈಪಿಸ್ಟ್ ಹುದ್ದೆಗೆ ಆಯ್ಕೆಯಾಗಿದೆ.
ಮಾಲಾ ಅವರ ಮಾರ್ಗದರ್ಶಕಿ ಹಾಗೂ ಪದ್ಮಪ್ರಶಸ್ತಿ ಪುರಸ್ಕೃತ ಶಂಕರಬಾಬಾ ಪಾಪಲ್ಕರ್ (81) ತಮ್ಮ ಸರ್ನೇಮ್ ನೀಡಿದ್ದಲ್ಲದೇ, ಆಕೆಯ ಪ್ರತಿಭೆಯನ್ನು ಪೋಷಿಸಿದರು. ಬ್ರೈಲ್ ಶಾಲೆಗೆ ಕಳುಹಿಸಿ, ದೃಷ್ಟಿಮಾಂದ್ಯ ಮಗು ವಿಶೇಷ ಸಾಧನೆ ಮಾಡಲು ಪ್ರೇರಣೆ ನೀಡಿದರು. "ನನ್ನನ್ನು ರಕ್ಷಿಸಲು ದೇವರು ದೇವದೂತರನ್ನು ಕಳುಹಿಸಿದ್ದಾರೆ. ನಾನು ಇಂದು ಈ ಸ್ಥಿತಿಗೆ ತಲುಪಲು ನೆರವಾಗಿದ್ದಾರೆ. ಮುಂದೆ ಯುಪಿಎಸ್ಸಿ ಪರೀಕ್ಷೆ ಬರೆದು ಐಎಎಸ್ ಅಧಿಕಾರಿಯಾಗುವುದು ನನ್ನ ಬಯಕೆ" ಎಂದು ಮಾಲಾ ಕನಸು ತೆರೆದಿಟ್ಟರು.
ಅಂಧಮಕ್ಕಳ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು ಹೈಯರ್ ಸೆಕೆಂಡರಿ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದರು. ಅಮರಾವತಿ ವಿವಿಯಿಂದ 2018ರಲ್ಲಿ ಪದವಿ ಹಾಗೂ ಸರ್ಕಾರಿ ವಿದರ್ಭ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಅಂಡ್ ಹ್ಯುಮ್ಯಾನಿಟೀಸ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ಬ್ರೈಲ್ ಲಿಪಿಯಲ್ಲಿ ಪರೀಕ್ಷೆ ಬರೆಯಲು ಬೇರೆಯವರ ನೆರವು ಪಡೆಯುತ್ತಿದ್ದರು. ಬಳಿಕ ಪ್ರೊ.ಪ್ರಕಾಶ್ ಟೋಪ್ಲೆ ಪಾಟೀಲ್ ಆಕೆಯನ್ನು ಶಿಕ್ಷಣಕ್ಕಾಗಿ ದತ್ತು ಪಡೆದರು ಎಂದು ಶಂಕರಬಾಬಾ ಹೇಳಿದ್ದಾರೆ. 2022 ಮತ್ತು 2023ರಲ್ಲಿ ತಹಸೀಲ್ದಾರ್ ಪರೀಕ್ಷೆ ಬರೆದು ಮಾಲಾ ಉತ್ತೀರ್ಣರಾಗಿರಲಿಲ್ಲ. ಬಳಿಕ ಎಂಪಿಎಸ್ಸಿ ಕ್ಲರ್ಕ್ ಹುದ್ದೆ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಿದ್ದಾರೆ.