ರಾಜ್ಯಸಭೆಯಿಂದ ತೃಣಮೂಲ ಸಂಸದ ಡೆರೆಕ್‌ ಓಬ್ರಿಯಾನ್ ಅಮಾನತು

Update: 2023-12-14 07:29 GMT

ಡೆರೆಕ್‌ ಓಬ್ರಿಯಾನ್ (PTI)

ಹೊಸದಿಲ್ಲಿ: ಬುಧವಾರ ಲೋಕಸಭೆಯಲ್ಲಿ ನಡೆದ ಭಾರೀ ಭದ್ರತಾ ವೈಫಲ್ಯ ಘಟನೆಯ ನಂತರ ಇಂದು ಕಲಾಪ ಆರಂಭಗೊಳ್ಳುತ್ತಿದ್ದಂತೆಯೇ ನಿನ್ನೆಯ ಘಟನೆಗೆ ಸಂಬಂಧಿಸಿದಂತೆ ಚರ್ಚೆ ನಡೆಯಬೇಕೆಂದು ಆಗ್ರಹಿಸಿದ ತೃಣಮೂಲ ಕಾಂಗ್ರೆಸ್‌ ಸಂಸದ ಡೆರೆಕ್‌ ಓಬ್ರಿಯಾನ್ ಅವರನ್ನು “ಅಶಿಸ್ತಿನ ನಡವಳಿಕೆಯ” ಕಾರಣ ನೀಡಿ ಅಧಿವೇಶನದ ಉಳಿದ ಭಾಗಕ್ಕೆ ರಾಜ್ಯಸಭೆಯಿಂದ ಸಭಾಪತಿ ಜಗದೀಪ್‌ ಧನ್ಕರ್‌ ಅಮಾನತುಗೊಳಿಸಿದ್ದಾರೆ.‌

ಡೆರೆಕ್‌ ಅವರ ಬೇಡಿಕೆಯನ್ನು ಮನ್ನಿಸದ ಸಭಾಪತಿ ಧನ್ಕರ್‌ ಅವರಿಗೆ ತಕ್ಷಣ ಸದನದಿಂದ ಹೊರನಡೆಯುವಂತೆ ಸೂಚಿಸಿದ್ದಾರೆ.

“ಡೆರೆಕ್‌ ಓಬ್ರಿಯಾನ್ ಅವರನ್ನು ತಕ್ಷಣ ಸದನದಿಂದ ಹೊರನಡೆಯಲು ಸೂಚಿಸಲಾಗಿದೆ. ಅವರು ಸಭಾಪತಿಯ ಆದೇಶ ಧಿಕ್ಕರಿಸುವುದಾಗಿ ಹೇಳುತ್ತಾರೆ, ಅವರು ನಿಯಮಗಳನ್ನು ಗೌರವಿಸುವುದಿಲ್ಲ ಎಂದು ಹೇಳುತ್ತಾರೆ. ಇದು ಗಂಭೀರ ಅಶಿಸ್ತಿನ ನಡವಳಿಕೆ. ಇದು ನಾಚಿಕೆಗೇಡು ಘಟನೆ,” ಎಂದು ಸಭಾಪತಿ ಹೇಳಿದರು.

ಈ ಎಚ್ಚರಿಕೆಯ ಹೊರತಾಗಿಯೂ ಡೆರೆಕ್‌ ಹಾಗೂ ಇತರ ವಿಪಕ್ಷ ಸಂಸದರು ಪ್ರತಿಭಟನೆ ಮುಂದುವರಿಸಿದರು ಹಾಗೂ ನಿನ್ನೆಯ ಘಟನೆ ಬಗ್ಗೆ ವಿವರಣೆ ನೀಡುವಂತೆ ಗೃಹ ಸಚಿವ ಅಮಿತ್ ಶಾ ಸದನಕ್ಕೆ ಆಗಮಿಸಬೇಕೆಂದು ಆಗ್ರಹಿಸಿದರು.

ಭದ್ರತಾ ವೈಫಲ್ಯ ಕುರಿತು ಉನ್ನತ ಮಟ್ಟದ ತನಿಖೆ ನಡೆಯಲಿದೆ, ಪೊಲೀಸ್‌ ಕೇಸ್‌ ಈಗಾಗಲೇ ದಾಖಲಿಸಲಾಗಿದೆ ಎಂದು ಧನ್ಕರ್‌ ಹೇಳಿದರು ಹಾಗೂ ನಂತರ ಸಭೆಯನ್ನು ಮುಂದೂಡಿದರು.

ನಿನ್ನೆಯ ಘಟನೆ ಬಗ್ಗೆ ಸಮಾಲೋಚಿಸಲು ಪ್ರಧಾನಿ ನರೇಂದ್ರ ಮೋದಿ ಇಂದು ತಮ್ಮ ಹಿರಿಯ ಸಚಿವರನ್ನು ಭೇಟಿಯಾಗಿದ್ದಾರೆ ನಿನ್ನೆಯ ಘಟನೆ ವೇಳೆ ಪ್ರಧಾನಿ ಅವರು ಮಧ್ಯ ಪ್ರದೇಶ ಮತ್ತು ಛತ್ತೀಸಗಢ ಸಿಎಂಗಳ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ತೆರಳಿದ್ದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News