ತಿರುಪತಿ ಲಡ್ಡು ವಿವಾದ : ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳಲು ಚಾಲಕರನ್ನು ಡೈರಿಯ ನಿರ್ದೇಶಕರಾಗಿ ನೇಮಿಸಿದ್ದ ಪ್ರವರ್ತಕರು!

Update: 2025-02-12 10:52 IST
ತಿರುಪತಿ ಲಡ್ಡು ವಿವಾದ : ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳಲು ಚಾಲಕರನ್ನು ಡೈರಿಯ ನಿರ್ದೇಶಕರಾಗಿ ನೇಮಿಸಿದ್ದ ಪ್ರವರ್ತಕರು!

ಸಾಂದರ್ಭಿಕ ಚಿತ್ರ | PC : PTI 

  • whatsapp icon

ಹೈದರಾಬಾದ್ : ತಿರುಪತಿ ತಿರುಮಲ ದೇವಸ್ಥಾನಕ್ಕೆ ಪ್ರಸಾದದ ಲಡ್ಡು ತಯಾರಿಕೆಗೆ ಕಲಬೆರಕೆ ತುಪ್ಪ ಪೂರೈಸಿರುವ ಆರೋಪ ಎದುರಿಸುತ್ತಿರುವ ತಮಿಳುನಾಡಿನ ಎಆರ್ ಡೈರಿ ಪ್ರೈವೇಟ್ ಲಿಮಿಟೆಡ್ ಉತ್ತರಾಖಂಡ ಮೂಲದ ಡೈರಿಯಿಂದ ಹಸುವಿನ ತುಪ್ಪವನ್ನು ಖರೀದಿಸಿ ತಿರುಪತಿ ತಿರುಮಲ ದೇವಸ್ಥಾನಕ್ಕೆ ಪೂರೈಕೆ ಮಾಡಿದ್ದು, ಪ್ರತಿ ಕಿಲೋಗ್ರಾಂ ತುಪ್ಪಕ್ಕೆ 2.75 ರಿಂದ 3 ರೂ.ವರೆಗೆ ಕಮಿಷನ್ ಪಡೆಯುತ್ತಿತ್ತು ಎಂದು ಸಿಬಿಐ ವಿಶೇಷ ತನಿಖಾ ತಂಡದ ತನಿಖೆಯಲ್ಲಿ ಬಯಲಾಗಿದೆ.

ಇದಲ್ಲದೆ ತುಪ್ಪ ಕಲಬೆರಕೆಯ ಪ್ರಕರಣ ಬಯಲಾದ ಬಳಿಕ ಆತಂಕಗೊಂಡ ಉತ್ತರಾಖಂಡ ಮೂಲದ ಡೈರಿಯ ಪ್ರವರ್ತಕರು ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳಲು ತಮ್ಮ ವಾಹನಗಳ ಚಾಲಕರನ್ನು ಡೈರಿಯ ನಿರ್ದೇಶಕರನ್ನಾಗಿ ನೇಮಿಸಿಕೊಂಡಿದ್ದರು ಎನ್ನುವುದು ಎಸ್ಐಟಿಯು ತಿರುಪತಿ ನ್ಯಾಯಾಲಯಕ್ಕೆ ಸಲ್ಲಿಸಿರುವ ವರದಿಯಲ್ಲಿ ಉಲ್ಲೇಖಿಸಿದೆ.

ಮಹತ್ವದ ಬೆಳವಣಿಗೆಯೊಂದರಲ್ಲಿ ಕಳೆದ ರವಿವಾರ ತಿರುಪತಿ ತಿರುಮಲ ಲಡ್ಡು ಪ್ರಸಾದ ತಯಾರಿಸಲು ಬಳಸಿದ ಹಸುವಿನ ತುಪ್ಪದಲ್ಲಿ ಕಲಬೆರಕೆ ಮಾಡಿದ ಆರೋಪದ ಮೇಲೆ ಸಿಬಿಐ ವಿಶೇಷ ತನಿಖಾ ತಂಡ ದುಂಡಿಗಲ್ ನ ಎ.ಆರ್.ಡೈರಿಯ ವ್ಯವಸ್ಥಾಪಕ ನಿರ್ದೇಶಕ ಆರ್.ರಾಜಶೇಖರನ್, ಉತ್ತರಾಖಂಡ ಮೂಲದ ಭೋಲೆ ಬಾಬಾ ಡೈರಿಯ ವಿಪಿನ್ ಜೈನ್ ಹಾಗೂ ಪೊಮಿಲ್ ಜೈನ್, ನೆಲ್ಲೋರ್ ವೈಷ್ಣವಿ ಡೈರಿಯ ಅಪೂರ್ವ ಚೌಡ ಎಂಬ ನಾಲ್ವರು ಆರೋಪಿಗಳನ್ನು ಬಂಧಿಸಿದ್ದರು.

ತುಪ್ಪ ಕಲಬೆರಕೆ ವರದಿಗಳ ಬೆನ್ನಲ್ಲೇ ಕೇಂದ್ರ ಮತ್ತು ರಾಜ್ಯದ ಅಧಿಕಾರಿಗಳನ್ನು ಒಳಗೊಂಡ ಐವರು ಸದಸ್ಯರ ವಿಶೇಷ ತನಿಖಾ ತಂಡವನ್ನು (ಎಸ್ಐಟಿ) ಸುಪ್ರೀಂ ಕೋರ್ಟ್ ರಚಿಸಿತ್ತು. ವಿಶೇಷ ತನಿಖಾ ತಂಡದ ತನಿಖೆಯ ವೇಳೆ ತುಪ್ಪದ ಪೂರೈಕೆಯಲ್ಲಿ ಲೋಪವೆಸಗಿರುವುದು ಬಯಲಾಗಿದೆ. ತುಪ್ಪ ಪೂರೈಕೆಗೆ ವೈಷ್ಣವಿ ಡೈರಿಯ ಪ್ರತಿನಿಧಿಗಳು ಎಆರ್ ಡೈರಿ ಹೆಸರಿನಲ್ಲಿ ಟೆಂಡರ್ ಪಡೆದಿದ್ದಾರೆ. ವೈಷ್ಣವಿ ಡೈರಿಯು ಎಆರ್ ಡೈರಿ ಹೆಸರನ್ನು ಬಳಸಿಕೊಂಡು ಟೆಂಡರ್ ಪ್ರಕ್ರಿಯೆ ಪಡೆಯಲು ನಕಲಿ ದಾಖಲೆಗಳು ಮತ್ತು ಸೀಲುಗಳನ್ನು ತಯಾರಿಸಿದೆ ಎಂಬುವುದು ತನಿಖೆಯಲ್ಲಿ ಬಯಲಾಗಿದೆ.


Tags:    

Writer - ವಾರ್ತಾಭಾರತಿ

contributor

Editor - siddik

contributor

Byline - ವಾರ್ತಾಭಾರತಿ

contributor

Similar News