ಟೊಮೆಟೊ ಬೆಲೆ ಗಗನಕ್ಕೆ: ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ 100 ರೂ.
ಹೊಸದಿಲ್ಲಿ: ದೇಶಾದ್ಯಂತ ಕಳೆದ ಕೆಲವು ದಿನಗಳಿಂದ ಹಲವಾರು ರಾಜ್ಯಗಳಲ್ಲಿ ಟೊಮೆಟೊ ಬೆಲೆ ಗಗನಕ್ಕೇರಿದ್ದು, ಚಿಲ್ಲರೆ ಮಾರುಕಟ್ಟೆಗಳಲ್ಲಿ 100 ರೂ. ಗಡಿಯನ್ನು ದಾಟಿದೆ. ಈಗಾಗಲೇ ದಿನಬಳಕೆಯ ವಸ್ತುಗಳ ಬೆಲೆಯೇರಿಕೆಯ ಬಿಸಿಯಿಂದ ತತ್ತರಿಸುತ್ತಿರುವ ಜನಸಾಮಾನ್ಯರಿಗೆ ಇದೀಗ ಟೊಮೆಟೊ ದರ ಏರಿಕೆಯು ಗಾಯದ ಮೇಲೆ ಬರೆ ಎಳೆದಂತಿದೆ.
ಕಿಲೋಗ್ರಾಂಗೆ 20ರಿಂದ 30 ರೂ. ಧಾರಣೆಯಿದ್ದ ಟೊಮೆಟೊ ದರವು ಈಗ 80-120 ರೂ.ಗೆ ಜಿಗಿದಿದೆ. ಮಾರುಕಟ್ಟೆಗೆ ಟೊಮೆಟೊ ಪೂರೈಕೆಯಲ್ಲಿ ಗಣನೀಯ ಇಳಿಮುಖವಾಗಿರುವುದೇ ಬೆಲೆ ಏರಿಕೆಗೆ ಕಾರಣವೆಂದು ಮೂಲಗಳು ತಿಳಿಸಿವೆ.
ಟೊಮೆಟೊ ಅಧಿಕವಾಗಿ ಬೆಳೆಯುವ ರಾಜ್ಯಗಳಲ್ಲಿ ಭಾರೀ ಮಳೆ ಹಾಗೂ ಪ್ರವಾಹದ ಕಾರಣದಿಂದಾಗಿ ಅದರ ಪೂರೈಕೆ ಬಾಧಿತವಾಗಿದೆ ಎಂದು ಮಾರುಕಟ್ಟೆ ತಜ್ಞರೊಬ್ಬರು ಹೇಳುತ್ತಾರೆ.
ಕಳೆದ ಕೆಲವು ದಿನಗಳಿಂದ ದಕ್ಷಿಣದ ರಾಜ್ಯಗಳಾದ ಕರ್ನಾಟಕ, ತೆಲಂಗಾಣ ಹಾಗೂ ಕೆಲವು ಪರ್ವತ ರಾಜ್ಯಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಇದರಿಂದಾಗಿ ಟೊಮೆಟೊ ಬೆಳೆಗೆ ಹಾನಿಯಾಗಿದೆ ಮತ್ತು ಮಾರುಕಟ್ಟೆಗೆ ಅವುಗಳ ಪೂರೈಕೆಯಲ್ಲಿ ಕೊರತೆಯುಂಟಾಗಿದೆ ಎಂದು ಅವರು ಹೇಳಿದ್ದಾರೆ.
ಮುಂದಿನ ಒಂದೆರಡು ದಿನಗಳಲ್ಲಿ ಟೊಮೆಟೊ ಬೆಲೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂದು ಮಾರುಕಟ್ಟೆ ಪರಿಣಿತರು ಹೇಳಿದ್ದಾರೆ.
ಕೆಲವು ರಾಜ್ಯಗಳಲ್ಲಿ ತೀವ್ರವಾದ ಬಿಸಿಗಾಳಿಯಿಂದಾಗಿ ಟೊಮೆಟೊ ಉತ್ಪಾದನೆ ಕುಂಠಿತಗೊಂಡಿರುವುದು ಕೂಡಾ ಬೆಲೆಏರಿಕೆ ಇನ್ನೊಂದು ಕಾರಣವೆಂದು ತಜ್ಞರು ಅಂದಾಜಿಸಿದ್ದಾರೆ.
ವಿವಿಧ ಕಾರಣಗಳಿಂದಾಗಿ ಈ ವರ್ಷ ರೈತರು ಟೊಮೆಟೊ ಕೃಷಿಯನ್ನು ಕಡಿಮೆ ಪ್ರಮಾಣದಲ್ಲಿ ಬೆಳೆದಿದ್ದಾರೆಂದು ಅವಶ್ಯಕ ವಸ್ತುಗಳ ತಜ್ಞ ಅಜಯ್ ಕೆಡಿಯಾ ತಿಳಿಸಿದ್ದಾರೆ. ಬೀನ್ಸ್ ಬೆಲೆಯಲ್ಲಿ ತೀವ್ರ ಏರಿಕೆಯುಂಟಾದ ಹಿನ್ನೆಲೆನಲ್ಲಿ ಅನೇಕ ರೈತರು ಟೊಮೆಟೊ ಬದಲಿಗೆ ಬೀನ್ಸ್ ಬೆಳೆದಿದ್ದರು ಎಂದು ಅವರು ಹೇಳಿದ್ದಾರೆ.
ಈ ವರ್ಷದ ಆರಂಭದಲ್ಲಿ ಟೊಮೆಟೊ ದರದಲ್ಲಿ ತೀವ್ರ ಕುಸಿತ ಉಂಟಾಗಿದ್ದರಿಂದ ರೈತರು ಬೀನ್ಸ್ ಕೃಷಿಯತ್ತ ಹೊರಳಿದ್ದರೆಂದು ಕೆಡಿಯಾ ಹೇಳಿದ್ದಾರೆ. ಉತ್ತರಪ್ರದೇಶದಲ್ಲಿ ಸ್ಥಳೀಯ ಮಾರುಕಟ್ಟೆಯಲ್ಲಿ ಒಂದು ವಾರದ ಹಿಂದೆ ಕೆ.ಜಿ.ಗೆ 40ರಿಂದ 50 ರೂ. ಇದ್ದ ಟೊಮೆಟೊ, ಈಗ ಕೆ.ಜಿ.ಗೆ 100 ರೂ.ಗೆ ಮಾರಾಟವಾಗುತ್ತಿದೆ. ಬೆಂಗಳೂರು, ಹೈದರಾಬಾದ್ ನಗರಗಳಲ್ಲಿಯೂ ಟೊಮೆಟೊ ಬೆಲೆಗೆ 100 ರೂ.ಗೆ ಜಿಗಿದಿದೆ.