ಉತ್ತರ ಪ್ರದೇಶ | ಜಮೀನು ವ್ಯಾಜ್ಯ : ಅಪ್ರಾಪ್ತ ಬಾಲಕನ ಶಿರಚ್ಛೇದ!
ಗೌರಾಬಾದ್ ಶಹಾಪುರ್: ನಾಲ್ಕು ದಶಕಗಳ ಭೂ ವ್ಯಾಜ್ಯವೊಂದು 17 ವರ್ಷದ ಅಪ್ರಾಪ್ತ ಬಾಲಕನ ಶಿರಶ್ಛೇದಲ್ಲಿ ಅಂತ್ಯಗೊಂಡಿರುವ ಭೀಕರ ಘಟನೆ ಉತ್ತರ ಪ್ರದೇಶದ ಜೌನ್ ಪುರ್ ಜಿಲ್ಲೆಯ ಗೌರಾಬಾದ್ ಶಹಾಪುರ್ ಪೊಲೀಸ್ ಠಾಣೆ ವ್ಯಾಪ್ತಿಯ ಕಬೀರುದ್ದೀನ್ ಗ್ರಾಮದಲ್ಲಿ ಬುಧವಾರ ನಡೆದಿದೆ.
ಗೌರಾಬಾದ್ ಶಹಾಪುರ್ ಪೊಲೀಸ್ ಠಾಣೆ ವ್ಯಾಪ್ತಿಯ ಕಬೀರುದ್ದೀನ್ ಗ್ರಾಮದಲ್ಲಿ ಎರಡು ಕುಟುಂಬಗಳ ನಡುವೆ ದಶಕಗಳ ಕಾಲದಿಂದ ಭೂ ವ್ಯಾಜ್ಯವೊಂದು ನಡೆಯುತ್ತಿತ್ತು. ಬುಧವಾರ ಈ ಸಂಬಂಧ ನಡೆದ ಘರ್ಷಣೆಯಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು, ಅನುರಾಗ್ ಎಂಬ 17 ವರ್ಷದ ಬಾಲಕನನ್ನು ಅಟ್ಟಾಡಿಸಿರುವ ದುಷ್ಕರ್ಮಿಗಳು, ಆತನ ರುಂಡವನ್ನು ಖಡ್ಗದಿಂದ ತುಂಡರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದು, ಬಾಲಕನನ್ನು ಖಡ್ಗದಿಂದ ತುಂಡರಿಸಿದ ಮತ್ತೊಬ್ಬ ಆರೋಪಿ ಇನ್ನೂ ತಲೆ ಮರೆಸಿಕೊಂಡಿದ್ದಾನೆ ಎಂದು ಹೇಳಲಾಗಿದೆ.
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಕಾನೂನು ಸುವ್ಯವಸ್ಥೆ ಹದಗೆಡದಂತೆ ಪರಿಸ್ಥಿತಿಯನ್ನು ಹತೋಟಿಗೆ ತೆಗೆದುಕೊಂಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ವರದಿಯಾಗಿದೆ. ಬಾಲಕನ ತಾಯಿ ತುಂಡರಿಸಿದ ತಲೆಯನ್ನು ಮಡಿಲಲ್ಲಿಟ್ಟು ಹಲವು ಗಂಟೆಗಳ ಕಾಲ ರೋಧಿಸುತ್ತಿದ್ದ ದೃಶ್ಯ ಮನಕಲಕುವಂತಿತ್ತು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಪೊಲೀಸ್ ವರಿಷ್ಠಾಧಿಕಾರಿ ಅಜಯ್ ಪಾಲ್ ಶರ್ಮ, “40-45 ವರ್ಷಗಳಿಂದ ಭೂವ್ಯಾಜ್ಯ ನಡೆಯುತ್ತಿತ್ತು. ಒಂದು ಕುಟುಂಬಕ್ಕೆ ಸೇರಿದ ರಮೇಶ್ ಹಾಗೂ ಲಾಲ್ತಾ ಎಂಬುವವರು ಮತ್ತೊಂದು ಕುಟುಂಬದ ಸದಸ್ಯರ ಮೇಲೆ ದಾಳಿ ನಡೆಸಿದ್ದು, ಈ ದಾಳಿಯಲ್ಲಿ ಓರ್ವ ಮೃತಪಟ್ಟಿದ್ದಾನೆ. ಮತ್ತೆ ಕೆಲವು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದ್ದು, ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ” ಎಂದು ತಿಳಿಸಿದ್ದಾರೆ.