ಉತ್ತರಾಖಂಡ: ಮುಸ್ಲಿಂ ವ್ಯಾಪಾರಿಗಳ ತೆರವಿಗೆ ಯತ್ನ, ಹಲ್ಲೆ; ಬಲಪಂಥೀಯ ಸಂಘಟನೆ ಕಾರ್ಯಕರ್ತರ ವಿರುದ್ಧ ಪ್ರಕರಣ

ಸಾಂದರ್ಭಿಕ ಚಿತ್ರ | PC : PTI
ಡೆಹ್ರಾಡೂನ್(ಉತ್ತರಾಖಂಡ): ಮುಸ್ಲಿಂ ಬಾಡಿಗೆದಾರರನ್ನು ಹೊರಹಾಕುವಂತೆ ಸ್ಥಳೀಯರನ್ನು ಆಗ್ರಹಿಸಿ ಪ್ರಚೋದನಾಕಾರಿ ಭಾಷಣ ಮಾಡಿದ ಮತ್ತು ವ್ಯಾಪಾರಿಗಳ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಬಲಪಂಥೀಯ ಸಂಘಟನೆಯೊಂದರ ಕನಿಷ್ಠ ಐವರು ಕಾರ್ಯಕರ್ತರ ವಿರುದ್ಧ ಸ್ಥಳೀಯ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು indianexpress.com ವರದಿ ಮಾಡಿದೆ.
ಕಾಳಿ ಸೇನಾ ಕಾರ್ಯಕರ್ತರ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಪ್ರಕಾರ, ಫೆ.4ರಂದು ಸುಮಾರು 50-60 ಜನರ ಗುಂಪು ಮುನ್ನಾ ದಿನ ಅಪ್ರಾಪ್ತ ವಯಸ್ಕ ಬಾಲಕಿಯ ಮೇಲೆ ನಡೆದಿದ್ದ ಲೈಂಗಿಕ ದೌರ್ಜನ್ಯದ ವಿರುದ್ಧ ಪ್ರತಿಭಟಿಸಲು ನಾಥುವಾಲಾ ಪ್ರದೇಶದಲ್ಲಿ ಸಭೆಯೊಂದನ್ನು ನಡೆಸಿತ್ತು. ಸಭೆಯಲ್ಲಿ ಮಾತನಾಡಿದವರು ಘಟನೆಗೆ ಕೋಮುಬಣ್ಣ ನೀಡಿ ಜನರನ್ನು ಪ್ರಚೋದಿಸಿದ್ದರು ಮತ್ತು ಪ್ರದೇಶದಲ್ಲಿ ವಾಸವಾಗಿರುವ ಅಥವಾ ವ್ಯವಹಾರಗಳನ್ನು ನಡೆಸುತ್ತಿರುವ ಇತರ ಸಮುದಾಯಗಳ ಬಾಡಿಗೆದಾರರ ಮೇಲೆ ಹಲ್ಲೆ ನಡೆಸುವಂತೆ ಮತ್ತು ಅವರನ್ನು ಹೊರಹಾಕುವಂತೆ ಸ್ಥಳೀಯರನ್ನು ಆಗ್ರಹಿಸಿದ್ದರು. ನಂತರ ಡೋನಾಲಿಗೆ ಜಾಥಾ ನಡೆಸಿದ್ದ ಪ್ರತಿಭಟನಾಕಾರರು ಮಾರ್ಗದುದ್ದಕ್ಕೂ ಇತರ ಸಮುದಾಯಗಳ ಜನರಿಗೆ ಸೇರಿದ ಅಂಗಡಿಗಳ ನಾಮಫಲಕಗಳು ಮತ್ತು ಬ್ಯಾನರ್‌ಗಳನ್ನು ಧ್ವಂಸಗೊಳಿಸಿದ್ದರು.
ಫೆ.5ರಂದು ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಂಡು ಡೋನಾಲಿ ಜಂಕ್ಷನ್‌ನಲ್ಲಿ ಇನ್ನೊಂದು ಬಹಿರಂಗ ಸಭೆ ನಡೆಸಿದ್ದ ಕಾಳಿ ಸೇನಾ ಕಾರ್ಯಕರ್ತರು ಜನರನ್ನು ಪ್ರಚೋದಿಸಿದ್ದರು. ಇತರ ಸಮುದಾಯಗಳಿಗೆ ಸೇರಿದ ಬಾಡಿಗೆದಾರರನ್ನು ಏಳು ದಿನಗಳಲ್ಲಿ ಹೊರಹಾಕುವಂತೆ ಮನೆಗಳು ಮತ್ತು ಅಂಗಡಿಗಳ ಮಾಲಿಕರಿಗೆ ಬೆದರಿಕೆಯೊಡ್ಡಿದ್ದ ಅವರು,ಇಲ್ಲದಿದ್ದರೆ ತಾವೇ ಅವರನ್ನು ಬಲವಂತದಿಂದ ಹೊರದಬ್ಬುವುದಾಗಿ ಎಚ್ಚರಿಕೆ ನೀಡಿದ್ದರು ಎಂದು ಬಲ್ವಾಲಾ ಔಟ್‌ಪೋಸ್ಟ್‌ನ ಎಸ್‌ಐ ಸಂಜಯ ರಾವತ್ ದೂರಿನ ಮೇರೆಗೆ ದಾಖಲಾಗಿರುವ ಎಫ್‌ಐಆರ್‌ನಲ್ಲಿ ಹೇಳಲಾಗಿದೆ.
ಅದೇ ದಿನ ಕಾಳಿ ಸೇನಾ ಕಾರ್ಯಕರ್ತರು ಲೋವರ್ ಟುನ್ವಾಲಾದಲ್ಲಿ ನಡೆಯುತ್ತಿದ್ದ ವಾರದ ಸಂತೆಯಿಂದ ಮುಸ್ಲಿಮ್ ವ್ಯಾಪಾರಿಗಳನ್ನು ಬಲವಂತದಿಂದ ತೆರವುಗೊಳಿಸಿದ್ದರು ಮತ್ತು ಮಾರುಕಟ್ಟೆಯನ್ನು ‘ಸನಾತನಿ’ ಎಂದು ಘೋಷಿಸಿದ್ದರು.
ಇತರ ಸಮುದಾಯಗಳ ವ್ಯಾಪಾರಿಗಳನ್ನೂ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದ ಕಾಳಿ ಸೇನಾ ಕಾರ್ಯಕರ್ತರು,ಇನ್ನು ಮುಂದೆ ಇಲ್ಲಿ ಅಂಗಡಿಗಳನ್ನು ಹಾಕಿದರೆ ಕೊಲ್ಲವುದಾಗಿ ಬೆದರಿಕೆಯೊಡ್ಡಿದ್ದರು.
ಪ್ರಚೋದನಾಕಾರಿ ಭಾಷಣಗಳಿಂದಾಗಿ ಪ್ರದೇಶದಲ್ಲಿ ಉದ್ವಿಗ್ನತೆಯನ್ನು ಸೃಷ್ಟಿಯಾಗಿತ್ತು ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದ್ದು,ಭೂಪೇಶ ಜೋಶಿ,ವೈಭವ ಪನ್ವಾರ್,ಅಜಯ ಕ್ಯಾಪ್ಟನ್,ಆಚಾರ್ಯ ವಿಪುಲ ಬಂಗ್ವಾಲ್,ನಿವೃತ್ತ ಯೋಧ ರಾಜೇಂದ್ರ ಸಿಂಗ್ ನೇಗಿ ಮತ್ತು ಇತರರನ್ನು ಆರೋಪಿಗಳೆಂದು ಹೆಸರಿಸಲಾಗಿದೆ.