ಉತ್ತರಾಖಂಡ: ಹುಲಿ ದಾಳಿಗೆ ಮಹಿಳೆ ಬಲಿ; ವನ್ಯಪ್ರಾಣಿಗಳ ದಾಳಿಯಿಂದ ಮೃತಪಟ್ಟವರ ಸಂಖ್ಯೆ ಐದಕ್ಕೇರಿಕೆ

Update: 2024-01-29 04:35 GMT

Photo: PTI

ಡೆಹ್ರಾಡೂನ್: ಕೋರ್ಬೆಟ್ ಹುಲಿ ರಕ್ಷಿತಾರಣ್ಯದ ಧೇಲಾ ವಲಯದಲ್ಲಿ ಹುಲಿಯೊಂದು ರವಿವಾರ ಸಂಜೆ ಮಹಿಳೆಯೊಬ್ಬರನ್ನು ಕೊಂದು ಹಾಕಿದೆ. ಇದು ಕಳೆದ ಎರಡು ದಿನಗಳಲ್ಲಿ ಹುಲಿ ದಾಳಿಯಿಂದ ಸಾವು ಸಂಭವಿಸಿದ ಎರಡನೇ ಘಟನೆಯಾಗಿದ್ದು, ಉತ್ತರಾಖಂಡ ರಾಜ್ಯದಲ್ಲಿ ಕಳೆದ ಒಂದು ತಿಂಗಳಲ್ಲಿ ವನ್ಯಪ್ರಾಣಿಗಳ ದಾಳಿಯಿಂದ ಮೃತಪಟ್ಟವರ ಸಂಖ್ಯೆ ಐದಕ್ಕೇರಿದೆ.

ದುರ್ಗಾದೇವಿ (45) ಎಂಬ ಮಹಿಳೆ ಸಂಜೆ ನಾಲ್ಕು ಗಂಟೆಯ ಸುಮಾರಿಗೆ ಕಟ್ಟಿಗೆ ಸಂಗ್ರಹಿಸಲು ರಕ್ಷಿತಾರಣ್ಯಕ್ಕೆ ತೆರಳಿದ ವೇಳೆ ಹುಲಿ ದಾಳಿ ಮಾಡಿ ಆಕೆಯನ್ನು ಅರಣ್ಯದ ಒಳಕ್ಕೆ ಎಳೆದುಕೊಂಡು ಹೋಯಿತು.

ವಿಷಯ ತಿಳಿದ ಅರಣ್ಯ ಸಿಬ್ಬಂದಿ ಸುಮಾರು 20-25 ಸುತ್ತು ಗಾಳಿಯಲ್ಲಿ ಗುಂಡು ಹೊಡೆದು ಹುಲಿಯನ್ನು ಬೆದರಿಸಿದರು. ಆ ಬಳಿಕ ರಕ್ಷಿತಾರಣ್ಯದ ನಾಲ್ಕು ಕಿಲೋಮೀಟರ್ ಒಳಗೆ ಮಹಿಳೆಯ ಶವವನ್ನು ಪತ್ತೆ ಮಾಡಲು ಸಾಧ್ಯವಾಯಿತು. ಪತಿಯ ನಿಧನದ ಬಳಿಕ ಒಬ್ಬಂಟಿಯಾಗಿ ವಾಸವಿದ್ದ ದುರ್ಗಾದೇವಿಯವರಿಗೆ ಒಬ್ಬಾಕೆ ಪುತ್ರಿ ಇದ್ದಾರೆ.

"ಅರಣ್ಯ ಇಲಾಖೆಯು ಇದೀಗ ಇಂತಹ ವನ್ಯಮೃಗ ದಾಳಿ ತಡೆಯಲು ಕ್ರಮ ಕೈಗೊಳ್ಳುತ್ತಿದೆ. ಈ ಪ್ರದೇಶದಲ್ಲಿ ಕ್ಯಾಮೆರಾಗಳನ್ನು ಅಳವಡಿಸುವ ಜತೆಗೆ ಬೋನು ಇಡಲಾಗುತ್ತದೆ. ಹುಲಿಗಳು ಪತ್ತೆಯಾದಲ್ಲಿ ಮಂಪರು ಬರಿಸುವ ಚುಚ್ಚುಮದ್ದು ನೀಡಲು ನಿಗಾ ತಂಡಗಳು ಸನ್ನದ್ಧವಾಗಿವೆ ಎಂದು ಕೊರ್ಬೆಟ್ ಹುಲಿ ರಕ್ಷಿತಾರಣ್ಯದ ನಿರ್ದೇಶಕ ಧೀರಜ್ ಪಾಂಡೆ ಹೇಳಿದ್ದಾರೆ.

ಅರಣ್ಯ ಇಲಾಖೆಗೆ ದುರ್ಗಾದೇವಿಯವರ ಸಾವು ದೊಡ್ಡ ಸವಾಲಾಗಿ ಪರಿಣಮಿಸಿದೆ. ಹೆಚ್ಚುವರಿ ಸಿಬ್ಬಂದಿಯನ್ನು ಈ ಭಾಗಕ್ಕೆ ನಿಯೋಜಿಸಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News