ಅನಂತ್ ಅಂಬಾನಿಯ ವಿವಾಹ ಸಂಭ್ರಮಕ್ಕಾಗಿ ಜಾಮ್ನಗರ್‌ವಿಮಾನನಿಲ್ದಾಣಕ್ಕೆ ಅಂತರರಾಷ್ಟ್ರೀಯ ಸ್ಥಾನಮಾನ ನೀಡಿದ್ದು ಏಕೆ?: ಕಾಂಗ್ರೆಸ್ ಪ್ರಶ್ನೆ

Update: 2024-03-02 16:50 GMT

ಜಾಮನಗರ ವಿಮಾನ ನಿಲ್ದಾಣ

ಹೊಸದಿಲ್ಲಿ: ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚಂಟ್ ಅವರ ವಿವಾಹಪೂರ್ವ ಸಂಭ್ರಮಾಚರಣೆಯ ನಡುವೆ ಗುಜರಾತಿನ ಜಾಮನಗರ ವಿಮಾನ ನಿಲ್ದಾಣಕ್ಕೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸ್ಥಾನಮಾನವನ್ನು ನೀಡಿರುವುದನ್ನು ಪ್ರಶ್ನಿಸಿರುವ ಕಾಂಗ್ರೆಸ್ ವಕ್ತಾರೆ ಡಾ.ಶಮಾ ಮುಹಮ್ಮದ್ ಅವರು, ತಾರತಮ್ಯವನ್ನು ಆರೋಪಿಸಿದ್ದಾರೆ.

‘ಜಾಮನಗರ ವಿಮಾನ ನಿಲ್ದಾಣವು ಭಾರತೀಯ ವಾಯುಪಡೆಯ ಅಧೀನದಲ್ಲಿದೆ. ಆದರೆ ಅನಂತ್ ಅಂಬಾನಿಯವರ ವಿವಾಹಪೂರ್ವ ಸಂಭ್ರಮಕ್ಕಾಗಿ ಅದು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸ್ಥಾನಮಾನವನ್ನು ಪಡೆಯುತ್ತದೆ. ಇದಕ್ಕಾಗಿ ಮೂರು ಕೇಂದ್ರ ಸಚಿವಾಲಯಗಳನ್ನು ನಿಯೋಜಿಸಲಾಗಿದೆ. ವಿಮಾನ ನಿಲ್ದಾಣದ ಪ್ರಯಾಣಿಕರ ಕಟ್ಟಡವನ್ನು ವಿಸ್ತರಿಸಲಾಗಿದೆ ಮತ್ತು ಶೌಚಾಲಯಗಳನ್ನು ನವೀಕರಿಸಲಾಗಿದೆ. 2018ರಲ್ಲಿಯೇ ಆರಂಭಗೊಂಡ ಕಣ್ಣೂರು ವಿಮಾನ ನಿಲ್ದಾಣವಿನ್ನೂ ಅಂತರರಾಷ್ಟ್ರೀಯ ವಿಮಾನಯಾನಗಳಿಗೆ ತೆರೆದುಕೊಂಡಿಲ್ಲ. ಇದು ತಾರತಮ್ಯವಲ್ಲವೇ ? ಎಂದು ಶಮಾ ಎಕ್ಸ್ ಪೋಸ್ಟ್ ನಲ್ಲಿ ಪ್ರಶ್ನಿಸಿದ್ದಾರೆ.

‘ಪ್ರಧಾನಿ ನರೇಂದ್ರ ಮೋದಿಯವರು ತನ್ನ ಶ್ರೀಮಂತ ಕೈಗಾರಿಕೋದ್ಯಮಿ ಸ್ನೇಹಿತರಿಗೆ ನೆರವಾಗುವ ವಿಷಯದಲ್ಲಿ ಏನು ಬೇಕಾದರೂ ಮಾಡಲು ಸಿದ್ಧರಿದ್ದಾರೆ. ಬಿಲಿಯಾಧೀಶ ಮುಕೇಶ್ ಅಂಬಾನಿಯವರ ಪುತ್ರನ ವಿವಾಹಕ್ಕಾಗಿ ಅವರು ಜಾಮನಗರ ವಿಮಾನ ನಿಲ್ದಾಣವನ್ನು 10 ದಿನಗಳ ಮಟ್ಟಿಗೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವೆಂದು ಘೋಷಿಸಿದ್ದಾರೆ. ಕೇವಲ,ವಿವಾಹಕ್ಕೆ ಆಗಮಿಸುವ ಅತಿಥಿಗಳಿಗೆ ಹೆಚ್ಚಿನ ಅನುಕೂಲ ಒದಗಿಸಲು ತೆರಿಗೆದಾರರ ಹಣದಲ್ಲಿ ಪ್ರಯಾಣಿಕರ ಟರ್ಮಿನಲ್ ನ ಗಾತ್ರವನ್ನು ದ್ವಿಗುಣಗೊಳಿಸಲು ಅವರು ಆದೇಶಿಸಿದ್ದಾರೆ.

ಜಾಮನಗರ ವಿಮಾನ ನಿಲ್ದಾಣವು ಪಾಕಿಸ್ತಾನ ಗಡಿಗೆ ಸಮೀಪದಲ್ಲಿದೆ ಮತ್ತು ರಕ್ಷಣೆಗೆ ಸಂಬಂಧಿಸಿದಂತೆ ಸೂಕ್ಷ್ಮವಾಗಿದೆ. ಆದರೆ ಮದುವೆಗೆ ಬರುವ ಅತಿಥಿಗಳ ಖಾಸಗಿ ಜೆಟ್ಗಳಿಗೆ ಭಾರತೀಯ ವಾಯುಪಡೆಯ ತಾಂತ್ರಿಕ ಪ್ರದೇಶ ವನ್ನೂ ಬಳಸಿಕೊಳ್ಳಲು ಅವಕಾಶ ನೀಡಲಾಗಿದೆ ’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಪೋಸ್ಟ್ ಮಾಡಿದ್ದಾರೆ.

ವರದಿಗಳ ಪ್ರಕಾರ ಭಾರತೀಯ ವಾಯುಪಡೆಯು ಜಾಮನಗರ ವಿಮಾನ ನಿಲ್ದಾಣಕ್ಕೆ ಫೆ.25ರಿಂದ ಮಾ.1ರವರೆಗೆ ಅಂತರಾಷ್ಟ್ರೀಯ ಸ್ಥಾನಮಾನವನ್ನು ನೀಡಿದೆ. ದೇಶವಿದೇಶಗಳ ಗಣ್ಯಾತಿಗಣ್ಯರು ಜಾಮನಗರದಲ್ಲಿ ಮೂರು ದಿನಗಳ ಸಂಭ್ರಮಾಚರಣೆಯಲ್ಲಿ ಭಾಗಿಯಾಗುತ್ತಿರುವ ನಡುವೆಯೇ ಈ ಬೆಳವಣಿಗೆ ನಡೆದಿದೆ. ಮಾ.1ರಿಂದ ಸೆಲೆಬ್ರಿಟಿಗಳು ಜಾಮನಗರಕ್ಕೆ ಆಗಮಿಸುತ್ತಿದ್ದಾರೆ.

ಖ್ಯಾತ ಗಾಯಕಿ ರಿಹಾನ್ನಾ, ಸ್ವೀಡನ್ನ ಮಾಜಿ ಪ್ರಧಾನಿ ಕಾರ್ಲ್ ಬಿಲ್ಟ್, ಕೆನಡಾದ ಮಾಜಿ ಪ್ರಧಾನಿ ಸ್ಟೀಫನ್ ಹಾರ್ಪರ್,ಬೊಲಿವಿಯಾದ ಮಾಜಿ ಅಧ್ಯಕ್ಷ ಜಾರ್ಜ್ ಕಿರೋಗಾ, ಆಸ್ಟ್ರೇಲಿಯಾದ ಮಾಜಿ ಪ್ರಧಾನಿ ಕೆವಿನ್ ರುಡ್ ಮತ್ತು ವಿಶ್ವ ಆರ್ಥಿಕ ವೇದಿಕೆಯ ಅಧ್ಯಕ್ಷ ಕ್ಲಾವ್ಸ್ ಶ್ವಾಬ್ ಮತ್ತಿತರರು ಆಹ್ವಾನಿತರ ಪಟ್ಟಿಯಲ್ಲಿದ್ದಾರೆ. ಅನೇಕ ಅತಿಥಿಗಳು ಚಾರ್ಟರ್ಡ್ ವಿಮಾನಗಳ ಮೂಲಕ ಆಗಮಿಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News