ಮಹಿಳಾ ಮೀಸಲಾತಿ ಮಸೂದೆ ನಮ್ಮದು: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ
Update: 2023-09-19 06:24 GMT
ಹೊಸದಿಲ್ಲಿ: ಸಂಸತ್ ಅಧಿವೇಶನದಲ್ಲಿ ‘ಮಹಿಳಾ ಮೀಸಲಾತಿ ಮಸೂದೆ’ ಮಂಡನೆಯಾಗಬಹುದು ಎಂಬ ಸುದ್ದಿಗಳ ನಡುವೆಯೇ ‘ಈ ಮಸೂದೆ ನಮ್ಮದು’ ಎಂದು ಕಾಂಗ್ರೆಸ್ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ಹೇಳಿದ್ದಾರೆ.
ಇಂದಿನಿಂದ ಹೊಸ ಸಂಸತ್ ನಲ್ಲಿ ನಡೆಯುವ ಅಧಿವೇಶನಕ್ಕೆ ತೆರಳುತ್ತಿದ್ದ ವೇಳೆ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ಹಿರಿಯ ಮುಖಂಡ ಪಿ.ಚಿದಂಬರಂ ಅವರು, ‘ಕಲಾಪದಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಸರ್ಕಾರ ಮಂಡಿಸಿದರೆ, ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳ ಹೋರಾಟಕ್ಕೆ ಜಯ ಸಿಕ್ಕಂತಾಗುತ್ತದೆ. ನೆನಪಿಡಿ, ಯುಪಿಎ ಸರ್ಕಾರದ ಅವಧಿಯಲ್ಲಿ 9-3-2010 ರಂದು ರಾಜ್ಯಸಭೆಯಲ್ಲಿ ಮಸೂದೆಯನ್ನು ಅಂಗೀಕರಿಸಲಾಗಿತ್ತು. ತನ್ನ 10 ನೇ ವರ್ಷದಲ್ಲಿ, ಮಸೂದೆಯ ಕೂಗು ಕೊನೆಗೊಳ್ಳುತ್ತದೆ ಎಂಬ ಭರವಸೆಯಲ್ಲಿ ತಾನು ಹೂತುಹಾಕಿದ್ದ ಮಸೂದೆಯನ್ನು ಬಿಜೆಪಿ ಪುನರುಜ್ಜೀವನಗೊಳಿಸುತ್ತಿದೆ’ ಎಂದು ಹೇಳಿದ್ದಾರೆ.