ಹರ್ಯಾಣದ ಎಲ್ಲಾ 10 ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧೆ; ಅಮಿತ್‌ ಶಾ ಹೇಳಿಕೆಗೆ ಮಿತ್ರ ಪಕ್ಷ JJP ತಿರುಗೇಟು

Update: 2023-06-22 13:15 GMT

ಹೊಸದಿಲ್ಲಿ: ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಹರ್ಯಾಣದ ಎಲ್ಲಾ 10 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಜಯ ಗಳಿಸುವ ಸಾಮರ್ಥ್ಯದ ಬಗ್ಗೆ ಈ ವಾರ ರಾಜ್ಯದ ಸಿರ್ಸಾದಲ್ಲಿ ನಡೆದ ರ್ಯಾಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದರೆ, ರಾಜ್ಯದಲ್ಲಿ ಬಿಜೆಪಿ ಮಿತ್ರ ಪಕ್ಷ ಜನನಾಯಕ್‌ ಜನತಾ ಪಾರ್ಟಿ (ಜೆಜೆಪಿ) ನಾಯಕ ಹಾಗೂ ಉಪಮುಖ್ಯಮಂತ್ರಿ ದುಷ್ಯಂತ್‌ ಚೌಟಾಲ ಅದಕ್ಕೆ ತಿರುಗೇಟು ನೀಡಿ ಎರಡೂ ಪಕ್ಷಗಳ ನಡುವೆ ಎಲ್ಲವೂ ಸರಿಯಾಗಿಲ್ಲ ಎಂಬುದರ ಸುಳಿವು ನೀಡಿದ್ದಾರೆ.

“ನಮಗೆ ಬಿಜೆಪಿಯನ್ನು ನಿಲ್ಲಿಸಲು ಸಾಧ್ಯವಿಲ್ಲ, ಬಿಜೆಪಿಗೂ ನಮ್ಮನ್ನು ನಿಲ್ಲಿಸಲು ಸಾಧ್ಯವಿಲ್ಲ,” ಎಂದು ಭಿವಾನಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡುವ ವೇಳೆ ಚೌಟಾಲ ಹೇಳಿದರಲ್ಲದೆ ತಮ್ಮ ಪಕ್ಷವೂ ರಾಜ್ಯದ ಎಲ್ಲಾ 10 ಕ್ಷೇತ್ರಗಳಲ್ಲಿ ಜಯ ಸಾಧಿಸಲು ಸಜ್ಜಾಗುತ್ತಿದೆ ಎಂದರು.

“ನಾವು ಕೂಡ 10ರಲ್ಲಿ 10 ಸೀಟುಗಳಿಗಾಗಿ ಸಿದ್ಧತೆ ಮಾಡುತ್ತಿದ್ದೇವೆ,” ಎಂದು ಹೇಳಿದ ದುಷ್ಯಂತ್‌, ತಮ್ಮ ತಂದೆ ಡಾ ಅಜಯ್‌ ಚೌತಾಲ ಅವರು ಭಿವಾನಿಯಿಂದ ಸ್ಪರ್ಧಿಸುವ ಸಾಧ್ಯತೆಯೂ ಇದೆ ಎಂದರು.

ಆದರೆ ಈ ಮಾತಿನ ಸಮರದ ಹೊರತಾಗಿಯೂ ರಾಜ್ಯದಲ್ಲಿ ಮೈತ್ರಿ ಸರಕಾರ ಸದೃಢವಾಗಿದೆ ಹಾಗೂ ಹಾಗೆಯೇ ಮುಂದುವರಿಯಲಿದೆ ಎಂದು ಅವರು ಹೇಳಿದರು.

“ಜೆಜೆಪಿ ಸ್ಥಾಪನೆಯಾದಂದಿನಿಂದ ನಮ್ಮ ಮತ ಬ್ಯಾಂಕ್‌ ಹೆಚ್ಚಾಗುತ್ತಲೇ ಇದೆ. ಮುಂದಿನ ಒಂದು ವರ್ಷದಲ್ಲಿ ಶೇ40 ಮತಗಳನ್ನು ಪಡೆಯುವುದು ನಮ್ಮ ಉದ್ದೇಶ,” ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News