ನೀಟ್ ಪರೀಕ್ಷೆಯಲ್ಲಿ ಕಡಿಮೆ ಅಂಕ: ನೊಂದ ಯುವಕನ ಆತ್ಮಹತ್ಯೆ

Update: 2023-06-17 18:41 GMT

ಕೋಟಾ,ಜೂ.17: ವೈದ್ಯಕೀಯ ಪದವಿ ಶಿಕ್ಷಣದ ಆಕಾಂಕ್ಷಿಯೊಬ್ಬರು ರಾಷ್ಟ್ರೀಯ ಅರ್ಹತಾ ಪ್ರವೇಶಾತಿ ಪರೀಕ್ಷೆ (ನೀಟ್)ಯಲ್ಲಿ ಸತತ ಎರಡು ಪ್ರಯತ್ನಗಳ ಬಳಿಕವೂ ಅಗತ್ಯವಿರುವಷ್ಟು ಅಂಕಗಳನ್ನು ಪಡೆಯಲು ಸಾಧ್ಯವಾಗದೆ ಇದ್ದುದಕ್ಕಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ವರದಿಯಾಗಿದೆ.

ಬಿಹಾರದ ಸಮಷ್ಟಿಪುರ ಜಿಲ್ಲೆಯ ನಿವಾಸಿ, 21 ವರ್ಷ ವಯಸ್ಸಿನ ರೋಹನ್ ಆತ್ಮಹತ್ಯೆ ಮಾಡಿಕೊಂಡವರು. ಅವರ ಮೃತದೇಹವನ್ನು ಸೋದರ ಸುಮನ್ ಕಂಡಿದ್ದರು. ರೋಶನ್ ಹಾಗೂ ಸುಮನ್ ಇಬ್ಬರೂ ರಾಜಸ್ಥಾನದ ಕೋಟಾದಲ್ಲಿ ನೆಲೆಸಿ,ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದರು. ಆದರೆ ಇವರಿಬ್ಬರೂ ಪ್ರತ್ಯೇಕವಾಗಿ ವಾಸವಾಗಿದ್ದರು.

ರೋಶನ್ ಅವರ ಕೊಠಡಿಯಿಂದ ಯಾವುದೇ ಡೆತ್ನೋಟ್ ದೊರೆತಿಲ್ಲವೆಂದು ಮಹಾವೀರನಗರ ಪ್ರದೇಶದ ಪೊಲೀಸರು ತಿಳಿಸಿದ್ದಾರೆ. ನೀಟ್-ಯುಜಿ ಪರೀಕ್ಷೆಯಲ್ಲಿ ಎರಡನೆ ಪ್ರಯತ್ನದಲ್ಲೂ ಅನುತ್ತೀರ್ಣನಾದುದರಿಂದ ನೊಂದು ಆತ ತನ್ನ ಕೊಠಡಿಯ ಸೀಲಿಂಗ್ ಗೆ ನೇಣುಹಾಕಿಕೊಂಡು ಸಾವಿಗೆ ಶರಣಾಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

ದಿಲ್ಲಿಯಲ್ಲಿರುವ ತನ್ನ ಚಿಕ್ಕಪ್ಪನ ಮನೆಗೆ ತೆರಳಿದ್ದ ರೋಶನ್ ಅವರು ಗುರುವಾರ ಬೆಳಗ್ಗೆ ಕೋಟಾಕ್ಕೆ ವಾಪಾಸಾಗಿದ್ದರು. ಆನಂತರ ಅವರು ತನ್ನ ತಾಯಿಯೊಂದಿಗೆ ಮಾತನಾಡಿದ್ದರು ಎಂದು ಡಿಎಸ್ ಹರ್ಷರಾಜ್‌ ಸಿಂಗ್‌ ತಿಳಿಸಿದ್ದಾರೆ.

ಬಳಿಕ ಹೆತ್ತವರು ಕರೆ ಮಾಡಿದಾಗ ಆತ ಉತ್ತರಿಸದೆ ಇದ್ದುದರಿಂದ ಆತನಿರುವ ವಸತಿಗೃಹಕ್ಕೆ ಹೋಗಿ ನೋಡುವಂತೆ ಕಿರಿಯ ಸೋದರ ಸುಮನ್ ತಿಳಿಸಿದರು.

ಸುಮನ್ ಅಲ್ಲಿಗೆ ತಲುಪಿದಾಗ, ಸೋದರನ ಮೃತದೇಹ ಸೀಲಿಂಗ್ ಫ್ಯಾನ್ ಗೆ ನೇತುಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆನಂತರ ಆಸ್ಪತ್ರೆಗೆ ಕೊಂಡೊಯ್ದಾಗ ಆತ ಆಗಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.

ರೋಶನ್ ಕಳೆದ ಎರಡು ವರ್ಷಗಳಿಂದ ಕೋಟಾದಲ್ಲಿ ನೆಲೆಸಿ ನೀಟ್-ಯುಜಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ. ಈ ಸಲದ ನೀಟ್ ಪರೀಕ್ಷೆಯಲ್ಲಿ ಆತ 720 ಅಂಕಗಳಲ್ಲಿ 400 ಅಂಕಗಳನ್ನು ಗಳಿಸಿದ್ದರೆೆಂದು ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News