ಕೆಲಸ ಮಾಡದಿದ್ದರೆ ವೇತನ ಇಲ್ಲ; ಒಂದು ಲಕ್ಷ ಉದ್ಯೋಗಿಗಳಿಗೆ ಮಣಿಪುರ ಸರ್ಕಾರ ಎಚ್ಚರಿಕೆ

Update: 2023-06-27 02:10 GMT

Photo: PTI 

ಗುವಾಹತಿ: ಒಂದೂವರೆ ತಿಂಗಳಿಂದ ಭೀಕರ ಹಿಂಸಾಚಾರದಿಂದಾಗಿ ಕಂಗೆಟ್ಟಿರುವ ಮಣಿಪುರದಲ್ಲಿ ರಾಜ್ಯ ಸರ್ಕಾರಿ ಉದ್ಯೋಗಿಗಳು ಕರ್ತವ್ಯಕ್ಕೆ ಮರಳುವಂತೆ ಮಾಡುವ ಪ್ರಯತ್ನವಾಗಿ ಆಡಳಿತಾರೂಢ ಬಿಜೆಪಿ ಸರ್ಕಾರ, "ಕೆಲಸ ಮಾಡದಿದ್ದರೆ ವೆತನ ಇಲ್ಲ" ಎಂಬ ಕಟ್ಟುನಿಟ್ಟಿನ ಸಂದೇಶ ರವಾನಿಸಿದೆ.

ಕಣಿವೆ ಪ್ರದೇಶಗಳಲ್ಲಿ ನಿಯೋಜನೆಗೊಂಡಿರುವ ಬೆಟ್ಟಪ್ರದೇಶದ ಜಿಲ್ಲೆಗಳ ಹಾಗೂ ಬೆಟ್ಟಪ್ರದೇಶದಲ್ಲಿ ನಿಯೋಜನೆಗೊಂಡಿರುವ ಕಣಿವೆ ಪ್ರದೇಶದ ಸರ್ಕಾರಿ ನೌಕರರು ಸೇರಿದಂತೆ ಒಂದು ಲಕ್ಷಕ್ಕೂ ಅಧಿಕ ಮಂದಿ ವಿವಿಧ ಶ್ರೇಣಿಯ ಸಿಬ್ಬಂದಿ ಮೇ 3 ರಿಂದ ಕರ್ತವ್ಯದಿಂದ ದೂರ ಉಳಿದಿದ್ದಾರೆ.

ಬೆರಳೆಣಿಕೆಯ ಸಿಬ್ಬಂದಿಯೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ವಿವಿಧ ಕಚೇರಿಗಳನ್ನು ಸಹಜ ಸ್ಥಿತಿಗೆ ತರುವುದೂ ಸೇರಿದಂತೆ ರಾಜ್ಯದಲ್ಲಿ ಸಹಜ ಸ್ಥಿತಿ ಮರಳುವಂತೆ ಮಾಡುವ ಪ್ರಯತ್ನವಾಗಿ ಸರ್ಕಾರ ಕೈಗೊಂಡಿರುವ ಪ್ರಯತ್ನಗಳ ಅಂಗವಾಗಿ ಸಾಮಾನ್ಯ ಆಡಳಿತ ಇಲಾಖೆ ಈ ನೋಟಿಸ್ ನೀಡಿದೆ.

ರಾಜ್ಯದಲ್ಲಿ ಪ್ರಸ್ತುತ ಇರುವ ಬಿಗುವಿನ ಸ್ಥಿತಿಯ ಹಿನ್ನೆಲೆಯಲ್ಲಿ ಯಾವ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಲು ಸಾಧ್ಯವಿಲ್ಲ ಎಂಬ ಬಗ್ಗೆ ವಿವರವನ್ನು ಜೂನ್ 28ರ ಒಳಗಾಗಿ ನೀಡವಂತೆ ಆಡಳಿತಾತ್ಮಕ ಕಾರ್ಯದರ್ಶಿಗಳಿಗೆ ಸೂಚನೆ ನೀಡಲಾಗಿದೆ. ಇವರ ಹುದ್ದೆ, ಹೆಸರು, ಇಐಎನ್ ಹಾಗೂ ವಿಳಾಸ ಒದಗಿಸುವಂತೆ ಆದೇಶಿಸಲಾಗಿದೆ.

ದೆಹಲಿಗೆ ಭಾನುವಾರ ಭೇಟಿ ನೀಡಿದ್ದ ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ಅವರು, ಪರಿಸ್ಥಿತಿಯನ್ನು ಬಹುತೇಕ ನಿಯಂತ್ರಣಕ್ಕೆ ತರಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಯಶಸ್ವಿಯಾಗಿದ್ದು, ಜೂನ್ 13ರ ಬಳಿಕ ಯಾವುದೇ ಸಾವುನೋವು ಸಂಭವಿಸಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News