ಇಸ್ಲಾಮಾಬಾದ್ ವಿಮಾನನಿಲ್ದಾಣ ಹೊರಗುತ್ತಿಗೆ ನೀಡಲು ಪಾಕಿಸ್ತಾನ ಸರಕಾರ ನಿರ್ಧಾರ
ಇಸ್ಲಮಾಬಾದ್: ವಿದೇಶಿ ವಿನಿಮಯ ಮೀಸಲು ನಿಧಿ ನಿರಂತರವಾಗಿ ಕುಗ್ಗುತ್ತಿರುವ ಹಿನ್ನೆಲೆಯಲ್ಲಿ ಪ್ರಮುಖ ವಿಮಾನನಿಲ್ದಾಣಗಳ ನಿರ್ವಹಣೆಯನ್ನು ಹೊರಗುತ್ತಿಗೆಗೆ ನೀಡಲು ಪಾಕಿಸ್ತಾನ ಸರಕಾರ ನಿರ್ಧರಿಸಿರುವುದಾಗಿ `ಡಾನ್' ವರದಿ ಮಾಡಿದೆ.
ವಿಮಾನ ನಿಲ್ದಾಣ ಹೊರಗುತ್ತಿಗೆಗೆ ನೀಡುವುದಕ್ಕೆ ಸಂಬಂಧಿಸಿ ರಚಿಸಲಾಗಿರುವ ನಿರ್ವಹಣಾ ಸಮಿತಿಯು ವಿತ್ತ ಸಚಿವ ಇಷಾಕ್ ದಾರ್ ಅಧ್ಯಕ್ಷತೆಯಲ್ಲಿ ಈಗಾಗಲೇ ಹಲವು ಸಭೆ ನಡೆಸಿದೆ. ಇಸ್ಲಮಾಬಾದ್ ವಿಮಾನನಿಲ್ದಾಣದ ಕಾರ್ಯಾಚರಣೆಯನ್ನು ಹೊರಗುತ್ತಿಗೆಗೆ ನೀಡುವುದಕ್ಕೆ ಸಂಬಂಧಿಸಿದ ಎಲ್ಲಾ ಔಪಚಾರಿಕತೆಯನ್ನು ಆಗಸ್ಟ್ 12ರೊಳಗೆ (ಹಾಲಿ ಸರಕಾರದ ಅವಧಿಯ ಅಂತಿಮ ದಿನ) ಪೂರ್ಣಗೊಳಿಸುವಂತೆ ಶನಿವಾರ ನಡೆದ ಸಭೆಯಲ್ಲಿ ವಿತ್ತ ಸಚಿವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ.
ಇಸ್ಲಮಾಬಾದ್ ವಿಮಾನನಿಲ್ದಾಣಕ್ಕೆ ಮೊದಲ ಆದ್ಯತೆ ನೀಡಲು ನಿರ್ವಹಣಾ ಸಮಿತಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ. ಈ ಪ್ರಕ್ರಿಯೆಯ ಪ್ರಗತಿಯ ಬಗ್ಗೆ ವಿಶ್ವಬ್ಯಾಂಕ್‍ನ ಅಂತರಾಷ್ಟ್ರೀಯ ವಿತ್ತನಿಗಮ(ಐಎಫ್‍ಸಿ)ಕ್ಕೆ ಮಾಹಿತಿ ನೀಡಲಾಗಿದೆ. ವಿಮಾನ ನಿಲ್ದಾಣ ಹೊರಗುತ್ತಿಗೆ ನೀಡಬೇಕಿದ್ದರೆ ವಿಮಾನಯಾನ ನಿಯಮಕ್ಕೆ ತಿದ್ದುಪಡಿಯ ಅಗತ್ಯವಿದ್ದು ಅದಕ್ಕೆ ಈ ತಿಂಗಳಾಂತ್ಯದೊಳಗೆ ಅನುಮೋದನೆ ಪಡೆಯುವ ವಿಶ್ವಾಸವಿದೆ ಎಂದು ದಾರ್ ಹೇಳಿದ್ದಾರೆ. ಶನಿವಾರ ನಡೆದ ಸಭೆಯಲ್ಲಿ ನಾಗರಿಕ ವಿಮಾನಯಾನ ಕಾನೂನಿಗೆ ತಿದ್ದುಪಡಿಗಳನ್ನು ಮತ್ತು ಪಾಕಿಸ್ತಾನ್ ಇಂಟರ್‍ನ್ಯಾಷನಲ್ ಏರ್‍ಲೈನ್ಸ್(ಪಿಐಎ)ನ ಪುನರ್ರಚನೆಯ ಯೋಜನೆಯನ್ನು ಅಂತಿಮಗೊಳಿಸಲು ಸಂಬಂಧಿತ ಇಲಾಖೆಗಳಿಗೆ ಸಚಿವ ದಾರ್ ಗಡುವನ್ನು ನೀಡಿದ್ದಾರೆ. ವಿಮಾನಯಾನ ಮತ್ತು ರೈಲ್ವೇ ಸಚಿವ ಸಾದ್ ರಫೀಕ್, ಹಣಕಾಸಿಗೆ ಸಂಬಂಧಿಸಿ ಪ್ರಧಾನಿಯವರ ವಿಶೇಷ ಸಹಾಯಕ ತಾರಿಕ್ ಬಾಜ್ವಾ, ವಿಮಾನಯಾನ ವಿಭಾಗದ ಕಾರ್ಯದರ್ಶಿ ಮತ್ತಿತರರು ಪಾಲ್ಗೊಂಡಿದ್ದರು.
ಮಾರ್ಚ್ 31ರಂದು ಆರ್ಥಿಕ ಸಮನ್ವಯ ಸಮಿತಿಯು ಇಸ್ಲಮಾಬಾದ್, ಕರಾಚಿ ಮತ್ತು ಲಾಹೋರ್ ವಿಮಾನನಿಲ್ದಾಣಗಳ ನಿರ್ವಹಣೆಯನ್ನು ಮತ್ತು ಭೂಮಿಯನ್ನು 25 ವರ್ಷಗಳಾವಧಿಗೆ ಹೊರಗುತ್ತಿಗೆಗೆ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಲು ನಿರ್ಧರಿಸಿತ್ತು. ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಈ ವಿಮಾನನಿಲ್ದಾಣಗಳ ಕಾರ್ಯನಿರ್ವಹಣೆಗೆ ನಿರ್ಧರಿಸಲಾಗಿದೆ. ಜುಲೈ ಅಂತ್ಯದೊಳಗೆ ತಿದ್ದುಪಡಿಗೆ ಸಂಸತ್‍ನ ಅನುಮೋದನೆ ಪಡೆಯುವುದು ಸರಕಾರದ ಯೋಜನೆಯಾಗಿದೆ.
ಪೈಲಟ್‍ಗಳ ವೃತ್ತಿಪರ ಪದವಿ ಮತ್ತು ಇತರ ವಿಮಾನಯಾನ ಸುರಕ್ಷಾ ಮಾನದಂಡಗಳಿಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ 2020ರಿಂದ ಅಮೆರಿಕ, ಬ್ರಿಟನ್ ಮತ್ತು ಯುರೋಪ್‍ಗೆ ಪಾಕಿಸ್ತಾನ ಏರ್‍ಲೈನ್ಸ್‍ನ ವಿಮಾನಗಳ ಪ್ರಯಾಣವನ್ನು ಅಮಾನತುಗೊಳಿಸಲಾಗಿದೆ. ಇದನ್ನು ಮರುಸ್ಥಾಪಿಸಬೇಕಿದ್ದರೆ ಕಾರ್ಯಾಚರಣೆಯ ವ್ಯವಸ್ಥೆ ಹಾಗೂ ಮಾನದಂಡಗಳ ಮೌಲ್ಯಮಾಪನಕ್ಕಾಗಿ ಆಗಸ್ಟ್‍ನಲ್ಲಿ ಜಾಗತಿಕ ವಿಮಾನಯಾನ ನಿಯಂತ್ರಕರನ್ನು ಕಳುಹಿಸಲು ಜುಲೈ ಗಡುವು ನಿರ್ಣಾಯಕವಾಗಿದೆ.