ಉಕ್ರೇನ್ ಧಾನ್ಯ ಒಪ್ಪಂದ ಸ್ಥಗಿತದಿಂದ ಜಾಗತಿಕ ಹಣದುಬ್ಬರ ಹೆಚ್ಚಳದ ಅಪಾಯ: ಐಎಂಎಫ್ ಎಚ್ಚರಿಕೆ

Update: 2023-07-20 15:34 GMT

Photo: PTI

ವಾಷಿಂಗ್ಟನ್: ಕಪ್ಪು ಸಮುದ್ರದ ಮೂಲಕ ಉಕ್ರೇನ್‍ನ ಆಹಾರ ಧಾನ್ಯಗಳ ರಫ್ತಿಗೆ ಅವಕಾಶ ನೀಡುವ ಒಪ್ಪಂದದಿಂದ ರಶ್ಯ ಹಿಂದೆ ಸರಿದಿರುವುದರಿಂದ ಜಾಗತಿಕ ಆಹಾರ ಅಭದ್ರತೆ ಹಾಗೂ ಅಧಿಕ ಹಣದುಬ್ಬರದ ಅಪಾಯ ಎದುರಾಗಿದೆ ಎಂದು ಅಂತರಾಷ್ಟ್ರೀಯ ಹಣಕಾಸು ಸಂಸ್ಥೆ(ಐಎಂಎಫ್) ಎಚ್ಚರಿಸಿದೆ.

ಉಪಕ್ರಮದ ಸ್ಥಗಿತವು ಉಕ್ರೇನ್‍ನಿಂದ ಆಹಾರ ಧಾನ್ಯಗಳ ಆಮದನ್ನು ಅವಲಂಬಿಸಿರುವ ದೇಶಗಳು, ವಿಶೇಷವಾಗಿ ಉತ್ತರ ಆಫ್ರಿಕಾ, ಮಧ್ಯಪ್ರಾಚ್ಯ ಮತ್ತು ದಕ್ಷಿಣ ಏಶ್ಯಾಗಳಿಗೆ ಆಹಾರ ಧಾನ್ಯಗಳ ಪೂರೈಕೆಯ ಮೇಲೆ ಪರಿಣಾಮ ಬೀರಲಿದೆ. ಇದು ಆಹಾರ ಭದ್ರತೆಯ ದೃಷ್ಟಿಕೋನವನ್ನು ಹದಗೆಡಿಸುತ್ತದೆ ಮತ್ತು ಜಾಗತಿಕ ಆಹಾರ ಹಣದುಬ್ಬರ ಹೆಚ್ಚುವ (ವಿಶೇಷವಾಗಿ ಕಡಿಮೆ ಆದಾಯದ ದೇಶಗಳಲ್ಲಿ) ಅಪಾಯವನ್ನು ತಂದೊಡ್ಡಲಿದೆ ಎಂದು ಐಎಂಎಫ್ ಹೇಳಿದೆ.

ಉಕ್ರೇನ್ ವಲಯದಲ್ಲಿನ ಬೆಳವಣಿಗೆ ಹಾಗೂ ಅದರಿಂದ ಜಾಗತಿಕ ಆಹಾರ ಭದ್ರತೆಯ ಮೇಲೆ ಆಗುತ್ತಿರುವ ಪರಿಣಾಮವನ್ನು ಎಚ್ಚರಿಕೆಯಿಂದ ಗಮನಿಸಲಾಗುತ್ತಿದೆ ಎಂದು ಐಎಂಎಫ್ ವಕ್ತಾರರು ಹೇಳಿದ್ದಾರೆ.

ಕಪ್ಪು ಸಮುದ್ರ ಒಪ್ಪಂದವು ಉಕ್ರೇನ್‍ನಿಂದ ಪ್ರಪಂಚದ ಇತರ ಭಾಗಗಳಿಗೆ ಆಹಾರ ಧಾನ್ಯ ಮತ್ತು ರಸಗೊಬ್ಬರಗಳನ್ನು ರಫ್ತುಗಳನ್ನು ಸುಗಮಗೊಳಿಸುವಲ್ಲಿ ಪ್ರಮುಖವಾಗಿದೆ. ಈ ಒಪ್ಪಂದವು ಕಪ್ಪು ಸಮುದ್ರದ ಮೂಲಕ ಸುಮಾರು 33 ಮೆಟ್ರಿಕ್ ಟನ್‍ಗಳಷ್ಟು ಆಹಾರ ಧಾನ್ಯಗಳನ್ನು ರಫ್ತು ಮಾಡಲು ಉಕ್ರೇನ್‍ಗೆ ಅವಕಾಶ ಕಲ್ಪಿಸಿದೆ ಮತ್ತು ಜಾಗತಿಕ ಆಹಾರ ಭದ್ರತೆಯಲ್ಲಿ ಪ್ರಮುಖ ಅಂಶವಾಗಿ ಪರಿಣಮಿಸಿದೆ ಎಂದು ಐಎಂಎಫ್ ಹೇಳಿದೆ. ಈ ಮಧ್ಯೆ, ಉಕ್ರೇನ್ ಧಾನ್ಯಗಳ ಆಮದಿನ ಮೇಲಿನ ನಿಷೇಧವನ್ನು ಯುರೋಪಿಯನ್ ಯೂನಿಯನ್ ಕನಿಷ್ಟ ಈ ವರ್ಷಾಂತ್ಯದವರೆಗೆ ವಿಸ್ತರಿಸಬೇಕು ಎಂದು ಐದು ಮಧ್ಯ ಯುರೋಪಿಯನ್ ದೇಶಗಳು ಆಗ್ರಹಿಸಿವೆ. ಈ ಆಗ್ರಹಕ್ಕೆ ಒಪ್ಪದಿದ್ದರೆ ತನ್ನ ಗಡಿಯನ್ನು ಮುಚ್ಚುವುದಾಗಿ ಪೋಲ್ಯಾಂಡ್ ಬೆದರಿಕೆ ಒಡ್ಡಿದೆ. ಬಲ್ಗೇರಿಯಾ, ಹಂಗರಿ, ಪೋಲ್ಯಾಂಡ್, ರೊಮಾನಿಯಾ ಮತ್ತು ಸ್ಲೊವಾಕಿಯಾ ದೇಶಗಳು ಉಕ್ರೇನ್‍ನ ಗೋಧಿ, ಜೋಳ, ಸಾಸಿವೆ, ಸನ್‍ಫ್ಲವರ್ ಬೀಜಗಳ ದೇಶೀಯ ಮಾರಾಟವನ್ನು ನಿಷೇಧಿಸಲು ಮತ್ತು ಅವನ್ನು ಬೇರೆಡೆಗೆ ರಫ್ತು ಮಾಡಲು ಮೇ ತಿಂಗಳಿನಲ್ಲಿ ಯುರೋಪಿಯನ್ ಯೂನಿಯನ್ ಅವಕಾಶ ನೀಡಿದೆ. ಇದೀಗ ಈ ನಿಷೇಧವನ್ನು ಸೆಪ್ಟಂಬರ್ 15ರವರೆಗೆ ವಿಸ್ತರಿಸುವುದಾಗಿ ಯುರೋಪಿಯನ್ ಯೂನಿಯನ್ ಹೇಳಿಕೆ ನೀಡಿದೆ.

ಕಡಿಮೆ ದರವಿರುವ ಉಕ್ರೇನ್‍ನ ಆಹಾರ ಧಾನ್ಯಗಳನ್ನು ಆಮದು ಮಾಡಿಕೊಂಡರೆ ತಾವು ಬೆಳೆಸಿದ ಆಹಾರ ಧಾನ್ಯಗಳನ್ನೂ ಕಡಿಮೆ ಬೆಲೆಗೆ ಮಾರಾಟ ಮಾಡುವ ಸ್ಥಿತಿ ಬರುವುದರಿಂದ ಉಕ್ರೇನ್‍ನ ಆಹಾರಧಾನ್ಯ ಆಮದಿಗೆ ನಿಷೇಧ ವಿಧಿಸುವಂತೆ ಪೋಲ್ಯಾಂಡ್‍ನ ರೈತರು ತೀವ್ರ ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಯುರೋಪಿಯನ್ ಯೂನಿಯನ್ ಈ ನಿರ್ಧಾರಕ್ಕೆ ಬಂದಿದೆ.

2022ರ ಫೆಬ್ರವರಿಯಲ್ಲಿ ಉಕ್ರೇನ್ ಮೇಲೆ ರಶ್ಯದ ದಾಳಿ ಆರಂಭವಾದಂದಿನಿಂದ ಹದಗೆಟ್ಟಿರುವ ಜಾಗತಿಕ ಆಹಾರ ವ್ಯವಸ್ಥೆಯನ್ನು ಸರಿಪಡಿಸಲು ಕಳೆದ ವರ್ಷದ ಜುಲೈಯಲ್ಲಿ ವಿಶ್ವಸಂಸ್ಥೆ ಮತ್ತು ಟರ್ಕಿ ಮಧ್ಯಸ್ಥಿಕೆಯಲ್ಲಿ ಆಹಾರ ಧಾನ್ಯ ಒಪ್ಪಂದ ಏರ್ಪಟ್ಟಿದೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News