ಜ.13-19: ದಿಲ್ಲಿಯಲ್ಲಿ ಚೊಚ್ಚಲ ಖೋ-ಖೋ ವಿಶ್ವಕಪ್
ಮಡಿಕೇರಿ, ಜ.11: ಭಾರತದ ಅಪ್ಪಟ ದೇಶೀಯ ಕ್ರೀಡೆಯಾದ ಖೋ-ಖೋ ಪ್ರಾಚೀನ ಕಾಲದಿಂದಲೂ ಜನಪ್ರಿಯತೆ ಪಡೆದಿದೆ. ಪ್ರಾಥಮಿಕ ಶಾಲೆಯಿಂದ, ವಿಶ್ವವಿದ್ಯಾನಿಲಯದ ಮಟ್ಟದಲ್ಲಿ ಭಾರತದಲ್ಲಿ ಖೋ-ಖೋ ಪಂದ್ಯಾಕೂಟಗಳು ನಡೆಯುತ್ತಲೇ ಇದೆ.
1936ರ ಬರ್ಲಿನ್ ಒಲಿಂಪಿಕ್ಸ್‌ನಲ್ಲಿ ಖೋ-ಖೋ ಕ್ರೀಡೆಯನ್ನು ಪ್ರದರ್ಶನ ಪಂದ್ಯವಾಗಿ ಸೇರ್ಪಡೆಗೊಳಿಸಲಾಗಿತ್ತು. 1987ರಲ್ಲಿ ಕೋಲ್ಕತ್ತಾದಲ್ಲಿ ನಡೆದ ಸೌತ್ ಏಶ್ಯನ್ ಫೆಡರೇಶನ್ (SAF) ಪಂದ್ಯಾಕೂಟದಲ್ಲಿಯೂ ಖೋ-ಖೋ ಆಟವನ್ನು ಪ್ರದರ್ಶನ ಆಟವಾಗಿ ಸೇರಿಸಲಾಯಿತು. ಬಳಿಕ ಖೋ-ಖೋ ಆಟಕ್ಕೆ ಮತ್ತಷ್ಟು ಜನಪ್ರಿಯಗೊಳಿಸಲು SAF ಗೇಮ್ಸ್ ಸಂದರ್ಭದಲ್ಲಿ ಏಶ್ಯನ್ ಖೋ-ಖೋ ಫೆಡರೇಶನ್ ರಚಿಸಲಾಯಿತು. ನಂತರದ ವರ್ಷಗಳಲ್ಲಿ ಭಾರತದ ನೆರೆ ರಾಷ್ಟ್ರಗಳಾದ ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ ಮತ್ತು ಶ್ರೀಲಂಕಾದ ಖೋ-ಖೋ ಕ್ರೀಡೆಯು ಜನಪ್ರಿಯಗೊಂಡಿತ್ತು.
ಇದೀಗ ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಭಾರತದ ಅಪ್ಪಟ ದೇಶಿ ಕ್ರೀಡೆ ಖೋ-ಖೋ ಆಟವು ಜನಪ್ರಿಯತೆ ಪಡೆಯುತ್ತಿದ್ದು, ಅಂತರ್‌ರಾಷ್ಟ್ರೀಯ ಮಟ್ಟದಲ್ಲಿಯೂ ಈ ಆಟವನ್ನು ಮತ್ತಷ್ಟು ಜನಪ್ರಿಯಗೊಳಿಸಲು ಜನವರಿ 13 ರಿಂದ 19ರವರೆಗೆ ದಿಲ್ಲಿಯ ಇಂದಿರಾಗಾಂಧಿ ಮೈದಾನದಲ್ಲಿ ‘ಖೋ-ಖೋ ವಿಶ್ವಕಪ್’ ನಡೆಯಲಿದೆ. ಪಂದ್ಯಾಕೂಟದ ನೇರ ಪ್ರಸಾರವು ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಪ್ರಸಾರವಾಗಲಿದೆ. ಇದರೊಂದಿಗೆ ಭಾರತವು ಕ್ರೀಡಾ ಕ್ಷೇತ್ರದಲ್ಲಿ ಹೊಸ ಮೈಲುಗಲ್ಲು ದಾಟಿದೆ. ವಿಶೇಷವೆಂದರೆ ಒಂದೇ ವೇದಿಕೆಯಲ್ಲಿ ಪುರುಷ ಮತ್ತು ಮಹಿಳಾ ವಿಶ್ವಕಪ್ ನಡೆಯುತ್ತಿರುವುದರಿಂದ ಖೋ-ಖೋ ಚೊಚ್ಚಲ ವಿಶ್ವಕಪ್‌ಗೆ ಮತ್ತಷ್ಟು ಮೆರುಗು ನೀಡಿದೆ.
ಪುರುಷರ 20 ಮತ್ತು ಮಹಿಳಾ 19 ತಂಡಗಳು ಭಾಗಿ: ಭಾರತದಲ್ಲಿ ನಡೆಯಲಿರುವ ಚೊಚ್ಚಲ ಖೋ-ಖೋ ಪುರುಷರ ಮತ್ತು ಮಹಿಳಾ ವರ್ಲ್ಡ್ ಕಪ್‌ನಲ್ಲಿ ಪುರುಷರ 20 ಮತ್ತು ಮಹಿಳೆಯರ 19 ತಂಡಗಳು ಭಾಗವಹಿಸುತ್ತಿದೆ. ಇದರಲ್ಲಿ ವೀಸಾ ಸಮಸ್ಯೆಯಿಂದ ಪಾಕಿಸ್ತಾನ ತಂಡವು ಚೊಚ್ಚಲ ಖೋ-ಖೋ ವಿಶ್ವಕಪ್‌ನಿಂದ ಅವಕಾಶ ವಂಚಿತವಾಗಿದೆ.
ಲೀಗ್ ಮಾದರಿಯಲ್ಲಿ ನಡೆಯಲಿರುವ ಪಂದ್ಯಾವಳಿಯಲ್ಲಿ ಪ್ರತೀ ತಂಡವು ಲೀಗ್ ಹಂತದಲ್ಲಿ 4 ಪಂದ್ಯಗಳನ್ನು ಆಡಬೇಕಿದೆ. ನಾಲ್ಕು ಗುಂಪುಗಳಾಗಿ ತಂಡಗಳನ್ನು ವಿಂಗಡಿಸಿದ್ದು, ಪ್ರತೀ ಗುಂಪಿನಲ್ಲಿ ಐದು ತಂಡಗಳಿಗೆ ಅವಕಾಶ ನೀಡಲಾಗಿದೆ. ಪಾಕಿಸ್ತಾನವು ಅಂತಿಮ ಕ್ಷಣದಲ್ಲಿ ವೀಸಾ ಸಮಸ್ಯೆಯಿಂದ ವಿಶ್ವಕಪ್‌ನಿಂದ ಹೊರಗುಳಿದಿರುವ ಕಾರಣದಿಂದ ಮಹಿಳೆಯ ಒಂದು ಗುಂಪಿನಲ್ಲಿ ನಾಲ್ಕು ತಂಡಗಳಿಗೆ ಅವಕಾಶ ನೀಡಲಾಗಿದೆ.
ಜನವರಿ 13ರಿಂದ ಆರಂಭಗೊಳ್ಳಲಿರುವ ಪಂದ್ಯಾವಳಿಯ ಲೀಗ್ ಮಾದರಿಯ ಪಂದ್ಯಗಳು ಜನವರಿ 16ರಂದು ಮುಕ್ತಾಯಗೊಳ್ಳಲಿದ್ದು, ಜನವರಿ 17ರಿಂದ ಪ್ಲೇ ಆಫ್ ಪಂದ್ಯಗಳು ಆರಂಭಗೊಳ್ಳಲಿದೆ. ಮಹಿಳೆಯರ ಪಂದ್ಯವು ಜನವರಿ 14ರಂದು ಆರಂಭಗೊಳ್ಳಲಿದೆ.
ಭಾರತದ ಪುರುಷರ ತಂಡವು ಜನವರಿ 13ರಂದು ನೇಪಾಳ ವಿರುದ್ಧ ಪ್ರಥಮ ಪಂದ್ಯ ಆಡಲಿದೆ. ಹಾಗೂ ಮಹಿಳೆಯರ ತಂಡವು ದಕ್ಷಿಣ ಕೊರಿಯಾ ತಂಡದ ವಿರುದ್ಧ ಪ್ರಥಮ ಪಂದ್ಯವನ್ನು ಎದುರಿಸಲಿದೆ.
ಭಾರತ ಪುರುಷರ ತಂಡದಲ್ಲಿ ಕರ್ನಾಟಕದ ಬೆಂಗಳೂರಿನ ಗೌತಮ್ ಹಾಗೂ ಮಹಿಳೆಯರ ತಂಡದಲ್ಲಿ ಮೈಸೂರಿನ ತಿ.ನರಸೀಪುರದ ಚೈತ್ರಾ ಸ್ಥಾನ ಪಡೆದಿದ್ದಾರೆ.
ಪ್ರತೀ ಗುಂಪಿನಿಂದ ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳು ಪಡೆದ ತಂಡಗಳು ಕ್ವಾರ್ಟರ್ ಫೈನಲ್‌ಗೆ ಅರ್ಹತೆ ಪಡೆಯಲಿದೆ. ನಂತರ ಸೆಮಿಫೈನಲ್ ಮತ್ತು ಫೈನಲ್ ಪಂದ್ಯ ನಡೆಯಲಿದೆ. ಚೊಚ್ಚಲ ಖೋ-ಖೋ ವರ್ಲ್ಡ್ ಕಪ್ ಫೈನಲ್ ಪಂದ್ಯವು ಜನವರಿ 19ರಂದು ನಡೆಯಲಿದೆ.
ಕ್ರಿಕೆಟ್‌ನಂತೆ ದೇಶೀ ಕ್ರೀಡೆಗೂ ಇರಲಿ ಬೆಂಬಲ: ಭಾರತ ದೇಶದಲ್ಲಿ ಕ್ರಿಕೆಟ್ ಆಟಕ್ಕಿರುವ ಬೆಂಬಲ, ಅಭಿಮಾನಿಗಳು ಮತ್ತೊಂದು ಕ್ರೀಡೆಗಿಲ್ಲ ಎಂದರೆ ಅಕ್ಷರಶಃ ಸತ್ಯ. ಭಾರತದಲ್ಲಿ ಕ್ರಿಕೆಟ್ ಆಟವು ಇದೀಗ ಸಂಪೂರ್ಣ ವಾಣಿಜ್ಯೀಕರಣವಾಗಿದೆ ಎಂದು ತಪ್ಪಾಗಲಾರದು. ದೇಶದಲ್ಲಿ ಐಪಿಎಲ್ ಬಂದರೇ ಸಾಕು ಎಲ್ಲರಿಗೂ ಎಲ್ಲಿಲ್ಲದ ಅಭಿಮಾನ ಹುಟ್ಟುತ್ತದೆ. ಆದರೆ, ಭಾರತ ದೇಶವೇ ಪರಿಚಯಿಸಿರುವ ಕ್ರೀಡೆಗಳು ಇಂದಿಗೂ ಬರೀ ಶಾಲಾ-ಕಾಲೇಜುಗಳಿಗೆ ಸೀಮಿತವಾಗಿದೆ.
ಭಾರತದ ದೇಶೀಯ ಕ್ರೀಡೆಗಳಿಗೆ ಹೊರ ದೇಶದಲ್ಲಿ ವಿಶೇಷ ಮನ್ನಣೆ ಮತ್ತು ಪ್ರೋತ್ಸಾಹ ಸಿಗುತ್ತಿದೆ. ಆದರೂ ಭಾರತದಲ್ಲಿ ಕ್ರಿಕೆಟ್ ಆಟವೇ ಎಲ್ಲವೂ ಆಗಿಬಿಟ್ಟಿದೆ. ಇದೀಗ ಮೊಟ್ಟ ಮೊದಲ ಬಾರಿಗೆ ನಡೆಯುತ್ತಿರುವ ಪುರುಷ ಮತ್ತು ಮಹಿಳಾ ಖೋ-ಖೋ ವರ್ಲ್ಡ್ ಕಪ್ ಪಂದ್ಯಾವಳಿಗೆ ಭಾರತವು ಸಾಕ್ಷಿಯಾಗುತ್ತಿದೆ. ದೇಶೀಯ ಕ್ರೀಡೆ ಇದೀಗ ವಿಶ್ವದಾದ್ಯಂತ ಮನ್ನಣೆಗಳಸಲು ಖೋ-ಖೋ ವಿಶ್ವಕಪ್ ವೇದಿಕೆಯಾಗುತ್ತಿದೆ.
ಖೋ-ಖೋ ಮತ್ತಷ್ಟು ಪ್ರಚಾರ ಪಡಿಸಿದ ಯುಕೆಕೆಎಲ್: ಭಾರತ ದೇಶದ ಅಪ್ಪಟ ಸ್ವೇದೇಶಿ ಕ್ರೀಡೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ 2022ರಿಂದ ಆರು ಫ್ರಾಂಚೈಸಿ ಮುಖಾಂತರ ಖೋ-ಖೋ ಲೀಗ್ ಕೂಡ ಭಾರತದಲ್ಲಿ ಅದ್ದೂರಿಯಾಗಿ ನಡೆಯುತ್ತಿದೆ.
ಅಲ್ಟಿಮೇಟ್ ಖೋ ಖೋ ( ಯುಕೆಕೆ ಅಥವಾ ಯುಕೆಕೆಎಲ್ ) ಭಾರತೀಯ ಫ್ರಾಂಚೈಸ್ ಆಧಾರಿತ ಖೋ-ಖೋ ಲೀಗ್ ಆಗಿದ್ದು, ಖೋ ಖೋ ಫೆಡರೇಶನ್ ಆಫ್ ಇಂಡಿಯಾದಿಂದ ಆಯೋಜಿಸಲಾಗುತ್ತಿದೆ.ವರ್ಷದಿಂದ ವರ್ಷಕ್ಕೆ ಖೋ-ಖೋ ಲೀಗ್ ಕೂಡ ದೇಶದಲ್ಲಿ ಜನಪ್ರಿಯತೆ ಪಡೆಯುತ್ತಿದೆ. ಖೋ-ಖೋ ಲೀಗ್‌ನಿಂದ ಭಾರತದ ಗ್ರಾಮೀಣ ಭಾಗದ ಖೋ-ಖೋ ಪ್ರತಿಭೆಗಳಿಗೆ ಅವಕಾಶ ದೊರೆತಿದೆ.
ಖೋ-ಖೋ ಪುರುಷರ ವಿಶ್ವಕಪ್ ತಂಡಗಳು
ಎ ಗುಂಪು : ಭಾರತ, ನೇಪಾಳ, ಪೆರು, ಬ್ರೆಝಿಲ್, ಭೂತಾನ್
ಬಿ ಗುಂಪು : ದಕ್ಷಿಣ ಆಫ್ರಿಕಾ, ಘಾನಾ, ಅರ್ಜೆಂಟೀನಾ, ನೆದರ್ಲ್ಯಾಂಡ್ಸ್, ಇರಾನ್
ಸಿ ಗುಂಪು : ಬಾಂಗ್ಲಾದೇಶ, ಶ್ರೀಲಂಕಾ, ದ.ಕೊರಿಯಾ, ಅಮೆರಿಕಾ, ಪೋಲ್ಯಾಂಡ್
ಡಿ ಗುಂಪು : ಇಂಗ್ಲೆಂಡ್, ಜರ್ಮನಿ, ಮಲೇಷ್ಯಾ, ಆಸ್ಟ್ರೇಲಿಯಾ, ಕೀನ್ಯಾ
ಮಹಿಳೆಯರ ತಂಡಗಳು:
ಎ ಗುಂಪು : ಭಾರತ, ಇರಾನ್, ಮಲೇಶ್ಯ, ದಕ್ಷಿಣ ಕೊರಿಯಾ
ಬಿ ಗುಂಪು : ಇಂಗ್ಲೆಂಡ್, ಆಸ್ಟ್ರೇಲಿಯಾ, ಕೀನ್ಯಾ, ಉಗಾಂಡ, ನೆದರ್ಲ್ಯಾಂಡ್ಸ್
ಸಿ ಗುಂಪು : ನೇಪಾಳ, ಭೂತಾನ್, ಶ್ರೀಲಂಕಾ, ಜರ್ಮನಿ, ಬಾಂಗ್ಲಾದೇಶ
ಡಿ ಗುಂಪು : ದಕ್ಷಿಣ ಆಫ್ರಿಕಾ, ನ್ಯೂಝಿಲ್ಯಾಂಡ್, ಪೋಲ್ಯಾಂಡ್, ಪೆರು, ಇಂಡೋನೇಶ್ಯ