ಕೋಟಾ ಎಂಬ ಕೋಚಿಂಗ್ ಕೇಂದ್ರಗಳ ಕುಲುಮೆ

ಕೋಟಾದಲ್ಲಿ ನಡೆಯುತ್ತಿರುವುದು ಶಿಕ್ಷಣದ ಮಾರಾಟ; ಅದರಲ್ಲಿ ನೈತಿಕತೆಯನ್ನು ನಿರೀಕ್ಷಿಸಬಾರದು. ಆದರೆ, ಕಮರುತ್ತಿರುವ ಜೀವಗಳಿಗೆ ಬೆಲೆ ಇಲ್ಲವೇ? ಕೋಟಾಕ್ಕೆ ತರಬೇತಿ ಪಡೆಯಲು ಹೋಗುವವರಿಗೆ ಇದೆಲ್ಲ ಗೊತ್ತಿಲ್ಲವೆಂದಲ್ಲ; ಮಾಯಾಜಿಂಕೆಯ ಹಿಂದಿನ ಓಟದಲ್ಲಿ ಜೀವಗಳು ಬಲಿ ಆಗುತ್ತಿವೆ. ಯಾವುದೇ ತರಬೇತಿ-ಶಿಕ್ಷಣದ ಕೇಂದ್ರಬಿಂದು ವಿದ್ಯಾರ್ಥಿಗಳ ಸುರಕ್ಷತೆ, ಮಾನಸಿಕ-ದೈಹಿಕ ಆರೋಗ್ಯ ರಕ್ಷಣೆ ಆಗಿರಬೇಕು. ಇದು ಬರೀ ಹೇಳಿಕೆಯಾಗಿರುವುದು ದುರಂತ.

Update: 2024-02-09 06:41 GMT
Editor : jafar sadik | Byline : ಋತ

Photo: freepik

ಪಶ್ಚಿಮ ಬಂಗಾಳದ ನೂರ್‌ಮುಹಮ್ಮದ್ ರೂಪದಲ್ಲಿ ಕೋಟಾ ಕೋಚಿಂಗ್ ಕಾರ್ಖಾನೆ ಇನ್ನೊಂದು ಬಲಿ ಪಡೆದುಕೊಂಡಿದೆ(ಜನವರಿ 31). ಕಳೆದ ವಾರವಷ್ಟೇ ನಿಹಾರಿಕಾ ಸಿಂಗ್ ಕೊರಳೊಡ್ಡಿದ್ದರು. ಆಕೆಗೆ 16 ವರ್ಷವಷ್ಟೇ. ಇದು ಎರಡು ವಾರದಲ್ಲಿ 3ನೇ ಪ್ರಕರಣ. 2023ರಲ್ಲಿ 26 ಮಂದಿ ಬಲಿಯಾಗಿದ್ದಾರೆ. ಈ ಸಾವುಗಳಿಗೆ ಯಾರು ಕಾರಣ ಎನ್ನುವ ಪ್ರಶ್ನೆಗೆ ಉತ್ತರ ಸುಲಭವಲ್ಲ; ಇಲಿ ಓಟದಲ್ಲಿ ಮಕ್ಕಳನ್ನು ತೊಡಗಿಸುವ ಪೋಷಕರು ಅಥವಾ ಸಮಾಜ? ದುರಾಸೆ ಅಥವಾ ಪ್ರತಿಷ್ಠೆ? ಜೊತೆಯವರನ್ನು ಹಿಂದಿಕ್ಕಬೇಕೆಂಬ ಹಠ? ಅಥವಾ, ಕೋಚಿಂಗ್ ಕೇಂದ್ರಗಳೆಂಬ ಬೃಹತ್ ಉದ್ಯಮ?

ತೀವ್ರ ಪೈಪೋಟಿ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಲೇಬೇಕೆಂಬ ಪೋಷಕರ-ಸಮಾಜದ ಒತ್ತಡ ವಿದ್ಯಾರ್ಥಿಗಳ ಆತ್ಮಹತ್ಯೆಗೆ ಪ್ರಮುಖ ಕಾರಣ ಎಂದು ಸುಪ್ರೀಂಕೋರ್ಟ್ ಇತ್ತೀಚೆಗೆ ಹೇಳಿದೆ. ಕೋಚಿಂಗ್ ಕೇಂದ್ರಗಳ ಮೇಲೆ ಸಂಬಂಧಪಟ್ಟವರು ನಿಯಂತ್ರಣ ಹೇರಬೇಕೆಂದು ಮುಂಬೈ ಮೂಲದ ಡಾ. ಅನಿರುದ್ಧ ನಾರಾಯಣ ಮಲ್ಪಾನಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್, ಕೋಚಿಂಗ್ ಕೇಂದ್ರಗಳು ಇರಲೇಬಾರದು ಎನ್ನುವುದು ಬಹುತೇಕರ ಅಭಿಪ್ರಾಯ. ಎನ್‌ಸಿಆರ್‌ಬಿ 2021ರ ಮಾಹಿತಿ ಪ್ರಕಾರ, ದೇಶದಲ್ಲಿ ಸಂಭವಿಸಿದ ಆತ್ಮಹತ್ಯೆ ಪ್ರಕರಣಗಳಲ್ಲಿ ವಿದ್ಯಾರ್ಥಿಗಳ ಪಾಲು ಶೇ.8.2. ಜೆಇಇ-ಐಐಟಿ, ನೀಟ್ ಪರೀಕ್ಷೆಗೆ ತರಬೇತಿ ನೀಡುವ ಕೋಚಿಂಗ್ ಕೇಂದ್ರಗಳು ಹಣ ಸುಲಿಗೆ ಮಾಡುತ್ತಿವೆ. ಇಂಥ ಮಕ್ಕಳು ತೀವ್ರ ಸ್ಪರ್ಧೆಗೆ ಒಡ್ಡಿಕೊಳ್ಳುತ್ತಾರೆ. ಮಕ್ಕಳ ಸುರಕ್ಷತೆಗೆ ಈ ಕೇಂದ್ರಗಳು ಗಮನ ನೀಡುವುದಿಲ್ಲ. ಒತ್ತಡ ಆತ್ಮಹತ್ಯೆಯಲ್ಲಿ ಅಂತ್ಯಗೊಳ್ಳುತ್ತದೆ. ಸರಕಾರ ಇದನ್ನು ತಡೆಯಲು ಮುಂದಾಗಬೇಕು ಎಂದು ನ್ಯಾಯಾಲಯ ಹೇಳಿತು. 2014-23ರ ಅವಧಿಯಲ್ಲಿ 118 ಮಂದಿ ಆತ್ಮಹತ್ಯೆ; 2022ರಲ್ಲಿ 15, 2023ರಲ್ಲಿ ಅತಿ ಹೆಚ್ಚು 26 ವಿದ್ಯಾರ್ಥಿಗಳು ಜೀವ ಕಳೆದುಕೊಂಡಿದ್ದರು.

ಕೋಟಾದಲ್ಲಿ ಇಂಜಿನಿಯರಿಂಗ್, ಮೆಡಿಕಲ್ ಹಾಗೂ ಇನ್ನಿತರ ಕೋರ್ಸ್‌ಗಳಿಗೆ ತರಬೇತಿ ನೀಡುವ ಅಸಂಖ್ಯಾತ ಕೇಂದ್ರಗಳಿವೆ. ಖಿನ್ನತೆ, ಒತ್ತಡ ಹಾಗೂ ಇನ್ನಿತರ ಮಾನಸಿಕ ಸಮಸ್ಯೆಗಳಿಂದ ಬಳಲುತ್ತಾರೆ. ಸೆಪ್ಟಂಬರ್ 2022ರಲ್ಲಿ 16 ಹಾಗೂ 2023ರಲ್ಲಿ 26 ಮಂದಿ ಆತ್ಮಹತ್ಯೆ ಮಾಡಿಕೊಂಡರು. ಅಂದಾಜಿನ ಪ್ರಕಾರ, ಕೋಟಾದಲ್ಲಿ 2.25 ಲಕ್ಷ ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆಗಳಿಗೆ ತರಬೇತಿ ಪಡೆಯುತ್ತಾರೆ. ಸಣ್ಣ ವಯಸ್ಸಿನ, ಬದುಕಿನ ಆರಂಭಿಕ ಘಟ್ಟದಲ್ಲಿರುವ ಈ ಮಕ್ಕಳು ತಮ್ಮದೇ ಆಶಯ, ಪೋಷಕರ ಒತ್ತಡ, ಸಹಪಾಠಿಗಳ ಸ್ಪರ್ಧೆ ಹಾಗೂ ಕಠಿಣ ತರಬೇತಿಯಿಂದ ಹೈರಾಣಾಗುತ್ತಾರೆ. ಇವರಲ್ಲಿ ಹೆಚ್ಚಿನವರು ಸಣ್ಣ-ಮಧ್ಯಮ ಗಾತ್ರದ ಪಟ್ಟಣಗಳ ಸಾಮಾನ್ಯ ಆರ್ಥಿಕ ಹಿನ್ನೆಲೆಯವರು ಮತ್ತು ಅವರ ಪೋಷಕರು ಸಾಲ-ಸೋಲ ಮಾಡಿರುತ್ತಾರೆ. ಮಕ್ಕಳು ಪೋಷಕರಿಂದ ತತ್ತರಿಸಲ್ಪಟ್ಟಿರುತ್ತಾರೆ; ಪರಸ್ಪರ ಸ್ಪರ್ಧೆ ಇರುವುದರಿಂದ, ಸಹಪಾಠಿಗಳೊಟ್ಟಿಗೆ ಸ್ನೇಹ ಕೂಡ ಕಷ್ಟಕರ. ಹೀಗಾಗಿ, ಯಾವುದೇ ಭಾವನಾತ್ಮಕ ಆಸರೆ ಸಿಗುವುದಿಲ್ಲ. ದಿನಕ್ಕೆ 14-15 ಗಂಟೆ ಅಧ್ಯಯನ ನಡೆಸಬೇಕಾಗುವುದರಿಂದ, ಬಿಡುವು ಇರುವುದಿಲ್ಲ. ವೈಫಲ್ಯ ಮತ್ತು ಕಳಪೆ ಸಾಧನೆಯ ಭೀತಿ ನಿರಂತರವಾಗಿರುತ್ತದೆ.

2022ರಲ್ಲಿ ದೇಶದ 23 ಐಐಟಿಗಳಿಗೆ ಆಯ್ಕೆಯಾದ 13,801 ಮಂದಿಯಲ್ಲಿ ಕೋಟಾ ಪಾಲು 2,184. ರಾಷ್ಟ್ರ ಮಟ್ಟದ ಮೊದಲ 100 ಮಂದಿಯಲ್ಲಿ 40 ಮಂದಿ ಕೋಟಾದಲ್ಲಿ ತರಬೇತಿ ಪಡೆದವರು ಇದ್ದರು. ಉತ್ತರಪ್ರದೇಶ, ಬಿಹಾರ, ಮಧ್ಯಪ್ರದೇಶ, ರಾಜಸ್ಥಾನ, ಹರ್ಯಾಣ, ಪಂಜಾಬ್, ಮಹಾರಾಷ್ಟ್ರ, ಗುಜರಾತ್ ಮತ್ತು ಪಶ್ಚಿಮ ಬಂಗಾಳದಿಂದ ಅಂದಾಜು 2 ಲಕ್ಷ ವಿದ್ಯಾರ್ಥಿಗಳು ದಾಖಲಾಗುತ್ತಾರೆ. ತಮ್ಮ ಊರಿನಲ್ಲಿ ಸಲೀಸಾಗಿ ಶೇ.90 ಅಂಕವನ್ನು ತೆಗೆಯುತ್ತಿದ್ದವರು, ಕಡಿಮೆ ಅಂಕ ಬಂದಾಗ ಕುಗ್ಗುತ್ತಾರೆ. ವಾರದ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಗಳಿಸಿದವರನ್ನು ಪ್ರತ್ಯೇಕಗೊಳಿಸಲಾಗುತ್ತದೆ. ಪ್ರತೀ ವಿದ್ಯಾರ್ಥಿಗೆ ಗುರುತು, ಹಾಜರಿ ಕಾರ್ಡ್ ಹಾಗೂ ಸ್ಟಾರ್ ವಿದ್ಯಾರ್ಥಿಗಳಿಗೆ 3 ನೇ ಕಾರ್ಡ್ ನೀಡಲಾಗುತ್ತದೆ. ಇವರಿಗೆ ವಿಶೇಷ ತರಬೇತಿ, ಪ್ರೋತ್ಸಾಹಧನ ನೀಡಲಾಗುತ್ತದೆ. ಇಂಥವರು ಕೋಚಿಂಗ್ ಕೇಂದ್ರಗಳ ಬಂಡವಾಳ; ಇವರಿಂದಾಗಿ ಅಖಿಲ ಭಾರತ ಆಯ್ಕೆ ಪಟ್ಟಿಯಲ್ಲಿ ಕೋ ಚಿಂಗ್ ಕೇಂದ್ರಗಳ ಹೆಸರು ಕಾಣಿಸಿಕೊಳ್ಳುವುದರಿಂದ, ಇಂಥ ವಿದ್ಯಾರ್ಥಿಗಳಿಗೆ ಹೆಚ್ಚು ಆದ್ಯತೆ. ನಿರ್ದಿಷ್ಟ ಕೋಚಿಂಗ್ ಕೇಂದ್ರದಿಂದ ಪಾಸಾಗುವವರು ಹೆಚ್ಚಿದಂತೆ ದಾಖಲು ಕೂಡ ಹೆಚ್ಚುತ್ತದೆ; ಹಣ ಹರಿಯುತ್ತದೆ. ಕಡಿಮೆ ಸಾಧನೆ ಮಾಡಿದವರ ಮೇಲೆ ಜೊತೆಗಾರರು, ಸಾಲಗಾರ ಪೋಷಕರ ಒತ್ತಡವಿರುವುದರಿಂದ, ವಿಪರಿಣಾಮ ಉಂಟಾಗುತ್ತದೆ. ಅಲೆನ್ ಕೆರಿಯರ್ ಇನ್‌ಸ್ಟಿಟ್ಯೂಟ್‌ನ 23 ಕೇಂದ್ರಗಳಲ್ಲಿ 1.25 ಲಕ್ಷ ವಿದ್ಯಾರ್ಥಿಗಳು ತರಬೇತಿ ಪಡೆಯುತ್ತಿದ್ದಾರೆ.

ಕೋಟಾದಲ್ಲಿ ನೋಂದಣಿಯಾದ 150 ತರಬೇತಿ ಕೇಂದ್ರಗಳು, 2,500 ಹಾಸ್ಟೆಲ್, ಪಿಜಿ ಕೇಂದ್ರ, ವಸತಿ ಗೃಹಗಳು ಮತ್ತು ಮಕ್ಕಳೊಟ್ಟಿಗೆ ಪೋಷಕರು ನೆಲೆಸುವುದು ಹೆಚ್ಚಿರುವುದರಿಂದ ಒಂದು ಕೊಠಡಿ ಫ್ಲ್ಯಾಟ್‌ಗಳು ಇವೆ. ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವುದರಿಂದ, ಹೊಸ ಕಟ್ಟಡಗಳು ನಿರ್ಮಾಣಗೊಳ್ಳುತ್ತಿರುತ್ತವೆ. ಅಂದಾಜು 50 ಲಕ್ಷ ಪುಸ್ತಕಗಳ ಮಾರಾಟದಿಂದ 40-50 ಕೋಟಿ ರೂ., 6 ಲಕ್ಷ ಸಮವಸ್ತ್ರಕ್ಕೆ ತಗಲುವ ಮೊತ್ತವೂ ಸೇರಿ ವಾರ್ಷಿಕ 5,000 ಕೋಟಿ ರೂ. ವಹಿವಾಟು ನಡೆಯುತ್ತದೆ. 2 ಲಕ್ಷ ಪ್ರತ್ಯಕ್ಷ ಹಾಗೂ 1.5 ಲಕ್ಷ ಮಂದಿಗೆ ಪರೋಕ್ಷವಾಗಿ ಉದ್ಯೋಗ ಲಭ್ಯವಾಗಿದೆ.

ಒತ್ತಡಮಯ ಬದುಕು:

ಶೇ.85ರಷ್ಟು ವಿದ್ಯಾರ್ಥಿಗಳು ಪ್ರತಿದಿನ ಕೋಚಿಂಗ್ ಕೇಂದ್ರಗಳಲ್ಲಿ ಕನಿಷ್ಠ 6-7 ಗಂಟೆ ಕಾಲ ಇರುತ್ತಾರೆ. ಅವರ ಪ್ರಗತಿ ಪರಿಶೀಲನೆಗೆ ವಾರಕ್ಕೊಂದು ಪರೀಕ್ಷೆ ನಡೆಯುತ್ತದೆ. ಇದು ಒತ್ತಡ ಹೆಚ್ಚಳಕ್ಕೆ ಕಾರಣವಾಗುತ್ತದೆ. ಆದರೆ, ಶೇ.54ರಷ್ಟು ವಿದ್ಯಾರ್ಥಿಗಳು ಇಂಥ ಪರೀಕ್ಷೆಗಳು ನೆರವಾಗುತ್ತವೆ ಎನ್ನುತ್ತಾರೆ. 10 ರಲ್ಲಿ 8 ಮಂದಿ ವಾರದಲ್ಲಿ ಒಂದು ದಿನ ವಿರಾಮ ಕೊಡಬೇಕು ಎಂದರೆ, ಶೇ.19ರಷ್ಟು ಮಂದಿ ತಮಗೆ ಸ್ನೇಹಿತರೇ ಇಲ್ಲ ಎಂದಿದ್ದಾರೆ. 10 ರಲ್ಲಿ ಇಬ್ಬರು ಮಾತ್ರ ಇನ್ನೊಬ್ಬರೊಂದಿಗೆ ಕೊಠಡಿ ಹಂಚಿಕೊಂಡಿರುತ್ತಾರೆ. ಓದಿಗೆ ಯಾವುದೇ ಅಡೆತಡೆ ಆಗಬಾರದು ಎಂದು 2/3 ರಷ್ಟು ಮಂದಿ ಏಕಾಂಗಿಯಾಗಿರುತ್ತಾರೆ.

ಲೋಕನೀತಿ-ಸಿಎಸ್‌ಡಿಎಸ್ ಸಮೀಕ್ಷೆ ಪ್ರಕಾರ, ಕೋಟಾದಲ್ಲಿ 10ರಲ್ಲಿ ನಾಲ್ವರು ಖಿನ್ನತೆ, 8 ಮಂದಿ ಆತಂಕ ಇಲ್ಲವೇ ಒತ್ತಡದ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಇಲ್ಲಿ ತರಬೇತಿ ಪಡೆದು ಪ್ರತಿಷ್ಠಿತ ಕಾಲೇಜುಗಳಿಂದ ಹೊರಬರುವವರಲ್ಲಿ ಸೃಜನಶೀಲತೆಯ ಕೊರತೆ ಇರುತ್ತದೆ ಹಾಗೂ ಸಮೃದ್ಧ ಸಾಮಾಜಿಕ ಜೀವನವನ್ನು ಹೊಂದಲು ಕಷ್ಟಪಡುತ್ತಾರೆ. 2015ರಿಂದ ಆಗಸ್ಟ್ 2023 ರವರೆಗೆ 123 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದಾಖಲಾಗುವವರಲ್ಲಿ ಶೇ.7ರಷ್ಟು ವಿದ್ಯಾರ್ಥಿಗಳು ಒಮ್ಮೆಯಾದರೂ ಆತ್ಮಹತ್ಯೆಯ ಆಲೋಚನೆ ಮಾಡಿರುತ್ತಾರೆ. ಪೋಷಕರ ಒತ್ತಡ, ಶೈಕ್ಷಣಿಕ ವೈಫಲ್ಯದ ಆತಂಕ ಮತ್ತು ಹಣಕಾಸು ಸಮಸ್ಯೆ ವಿದ್ಯಾರ್ಥಿಗಳ ಮೇಲೆ ಅಧಿಕ ಪರಿಣಾಮ ಬೀರುತ್ತವೆ. ನೀಟ್ ಇಲ್ಲವೇ ಜೆಇಇಯಲ್ಲಿ ತೇರ್ಗಡೆ ಉತ್ತಮ ಜೀವನ ಕಟ್ಟಿಕೊಳ್ಳಲು ನೆರವಾಗುತ್ತದೆ ಎಂದು ಪೋಷಕರು-ವಿದ್ಯಾರ್ಥಿಗಳು ಭಾವಿಸುತ್ತಾರೆ. ಇದಕ್ಕಾಗಿ ಪಡುವ ಕಠಿಣ ಶ್ರಮ ಅವರ ಮಾನಸಿಕ ಆರೋಗ್ಯದ ಮೇಲೆ ವಿಪರಿಣಾಮ ಬೀರುತ್ತದೆ. ಪ್ರತೀ 10ರಲ್ಲಿ ಇಬ್ಬರು ಕಳಪೆ ಸಾಧನೆಯ ಸಾಧ್ಯತೆಯ ಆಲೋಚನೆಯಿಂದ, 1/3 ರಷ್ಟು ಮಂದಿ ಕೆಲವೊಮ್ಮೆ ಹಾಗೂ 10ರಲ್ಲಿ ಇಬ್ಬರು ಅಪರೂಪಕ್ಕೆ ಇಂಥ ಭಾವನೆಯಿಂದ ಬಳಲುತ್ತಾರೆ. ಗಂಡು ಮಕ್ಕಳಿಗೆ ಹೋಲಿಸಿದರೆ, ಹೆಣ್ಣು ಮಕ್ಕಳ ಮೇಲೆ ಹೆಚ್ಚು ಒತ್ತಡ ಇರುತ್ತದೆ. ಶೇ.6ರಷ್ಟು ಮಂದಿಯ ಮೇಲೆ ಆರ್ಥಿಕ ಒತ್ತಡ ಇರುತ್ತದೆ. ಶೇ.53ರಷ್ಟು ಮಂದಿಗೆ ಆಗಾಗ ಒಂಟಿತನದ ಭಾವನೆ ಬರುತ್ತದೆ.

ತರಬೇತಿಗೆ ಸೇರಿದ ಬಳಿಕ ತಮ್ಮ ಮಾನಸಿಕ ಆರೋಗ್ಯ ಕೆಟ್ಟಿತು ಎಂದು 10ರಲ್ಲಿ 3 ಹಾಗೂ ಕೋಟಾಕ್ಕೆ ಬಂದ ಬಳಿಕ ದೈಹಿಕ ಬಳಲಿಕೆ ಹೆಚ್ಚಿತು ಎಂದು 10ರಲ್ಲಿ 4 ಮಂದಿ ಹೇಳಿದ್ದಾರೆ. ಇವರಲ್ಲಿ ಶೇ.45ರಷ್ಟು ಹೆಣ್ಣುಮಕ್ಕಳು. 10ರಲ್ಲಿ 3 ಮಂದಿಯಲ್ಲಿ ಏಕಾಂಗಿತನ, ಅಷ್ಟೇ ಸಂಖ್ಯೆಯವರಲ್ಲಿ ಕೋಪ ಹೆಚ್ಚಳ ಹಾಗೂ ಶೇ.26ರಷ್ಟು ಮಂದಿಯಲ್ಲಿ ವಿವಿಧ ನೋವು ಕಾಣಿಸಿಕೊಂಡಿದೆ. ಹೀಗಿದ್ದರೂ, ಮಾನಸಿಕ ತಜ್ಞರನ್ನು ಭೇಟಿ ಮಾಡಿದವರ ಪ್ರಮಾಣ ಶೇ.3 ಮಾತ್ರ. 1/2 ದಷ್ಟು ಮಂದಿಗೆ ಅಂಥ ಭೇಟಿಯ ಅಗತ್ಯ ಕಂಡುಬರಲಿಲ್ಲ.

ಇದಲ್ಲದೆ, ಜಾತಿ ತಾರತಮ್ಯ(ಶೇ.21), ಆರ್ಥಿಕ ಪರಿಸ್ಥಿತಿಯಿಂದ ಕೀಳಾಗಿ ಕಾಣುವುದು(ಶೇ.26), ಧಾರ್ಮಿಕ ಅಸ್ಮಿತೆ(ಶೇ.17)ಯಿಂದ ವಿದ್ಯಾರ್ಥಿಗಳು ಅಸಮರ್ಪಕ ವರ್ತನೆಗೆ ಈಡಾಗುತ್ತಾರೆ. ತಮ್ಮ ಶೈಕ್ಷಣಿಕ ಸಾಧನೆಯಿಂದ ತಾರತಮ್ಯ ಅನುಭವಿಸುವವರು ಶೇ.47 ಮಂದಿ. ಒತ್ತಡದಿಂದ ಪಾರಾಗಲು ವಿದ್ಯಾರ್ಥಿಗಳು ವಿವಿಧ ದಾರಿ ಕಂಡುಕೊಂಡಿದ್ದಾರೆ; ಶೇ.49ರಷ್ಟು ಮಂದಿ ತೀವ್ರ ಒತ್ತಡದಲ್ಲಿದ್ದಾಗ ಕುಟುಂಬ/ಸ್ನೇಹಿತರೊಟ್ಟಿಗೆ ಮಾತನ್ನಾಡುತ್ತಾರೆ. 10ರಲ್ಲಿ ನಾಲ್ವರು ವೀಡಿಯೊ/ಟೆಲಿವಿಷನ್ ವೀಕ್ಷಣೆ, ಸಂಗೀತ ಕೇಳುತ್ತಾರೆ. ಶೇ.46ರಷ್ಟು ಮಂದಿ ನಿದ್ರೆ ಮಾಡುತ್ತಾರೆ. ಶೇ.16ರಷ್ಟು ಮಂದಿ ನಿದ್ರೆ ಮಾತ್ರೆ ಬಳಸುತ್ತಾರೆ. ಶೇ.5ರಷ್ಟು ಮಂದಿ ಧೂಮಪಾನ ಮತ್ತು ಶೇ.2ರಷ್ಟು ಮಂದಿ ಮದ್ಯಪಾನ ಮಾಡುತ್ತಾರೆ.

ಆಕಾಂಕ್ಷೆ ಮತ್ತು ಅವಕಾಶಗಳ ನಡುವೆ ಭಾರೀ ಕಂದರ ಇರುವುದು ಸಮಸ್ಯೆ ಗಂಭೀರಗೊಳ್ಳಲು ಕಾರಣ. ಲೋಕನೀತಿ-ಸಿಎಸ್‌ಡಿಎಸ್ 1,000 ವಿದ್ಯಾರ್ಥಿಗಳ ಸಮೀಕ್ಷೆ ನಡೆಸಿತು. ವಿದ್ಯಾರ್ಥಿಗಳಲ್ಲಿ ಬಿಹಾರ ಶೇ.32, ಉತ್ತರ ಪ್ರದೇಶ ಶೇ.23, ರಾಜಸ್ಥಾನ ಶೇ.18, ಮಧ್ಯಪ್ರದೇಶ ಶೇ.11 ಮಂದಿ ಇದ್ದರು. ಅರ್ಧಕ್ಕಿಂತ ಹೆಚ್ಚಿನವರು ನಗರ-ಸಣ್ಣ ಪಟ್ಟಣಗಳಿಂದ ಹಾಗೂ ಶೇ.14ರಷ್ಟು ಮಂದಿ ಗ್ರಾಮಗಳಿಂದ ಬಂದವರು. ಹೆಚ್ಚಿನವರು ಮಧ್ಯಮ ವರ್ಗಕ್ಕೆ ಸೇರಿದವರು. ಬಾಲಕಿಯರ ಪ್ರಮಾಣ ಶೇ.37. ಸರಾಸರಿ ವಯಸ್ಸು 15-19 ವರ್ಷ. ವೈದ್ಯಕೀಯ ಪ್ರವೇಶ ಪರೀಕ್ಷೆಗೆ ಶೇ.59(ಇವರಲ್ಲಿ ಶೇ.76 ಬಾಲಕಿಯರು) ಹಾಗೂ ಜೆಇಇ ತರಬೇತಿಗೆ ಶೇ.35(ಶೇ.46 ಬಾಲಕರು,ಶೇ.16 ಬಾಲಕಿಯರು) ಮಂದಿ ದಾಖಲಾಗಿದ್ದರು. ಹಾಸ್ಟೆಲ್‌ಗಳಲ್ಲಿ ಶೇ. 49, ಪಿಜಿಗಳಲ್ಲಿ ಶೇ.30 ಹಾಗೂ ಬಾಡಿಗೆ ಅಪಾರ್ಟ್‌ಮೆಂಟ್‌ಗಳಲ್ಲಿ ಶೇ.17 ಮಂದಿ ನೆಲೆಸಿದ್ದರು.

ಅರೆ ಕಾಸು ಮಜ್ಜಿಗೆ:

ರಾಜಸ್ಥಾನ ಸರಕಾರ 2020ರ ಕೋವಿಡ್ ಸಂದರ್ಭದಲ್ಲಿ ಸಮಸ್ಯೆಯ ಅಧ್ಯಯನಕ್ಕೆ ಪರಿಣತ ಸಮಿತಿಯೊಂದನ್ನು ನೇಮಿಸಿತ್ತು. ಸಮಿತಿಯ ಶಿಫಾರಸುಗಳನ್ನು ಒಳಗೊಂಡ ಮಸೂದೆ 2022ರಲ್ಲೇ ಸಿದ್ಧಗೊಂಡಿದ್ದರೂ, ಈವರೆಗೆ ಬೆಳಕು ಕಂಡಿಲ್ಲ. ತರಬೇತಿ ಕೇಂದ್ರಗಳ ಒತ್ತಡ ಇದಕ್ಕೆ ಕಾರಣ ಎನ್ನಲಾಗಿದೆ. ಸರಕಾರ ಆಗಸ್ಟ್ 2023ರಲ್ಲಿ ಸಾರ್ವಜನಿಕರಿಂದ ಸಲಹೆಗಳನ್ನು ಆಹ್ವಾನಿಸಿತು. 2 ತಿಂಗಳು ಸಾಪ್ತಾಹಿಕ ಪರೀಕ್ಷೆ ನಡೆಸಬಾರದು ಮತ್ತು ಬುಧವಾರ ಅರ್ಧ ದಿನ ರಜೆ ನೀಡಬೇಕು ಎಂದು ಸೂಚಿಸಿತು.

ಆಯ್ಕೆಗೆ ಮುನ್ನ ಪೂರ್ವಭಾವಿ ಪರೀಕ್ಷೆ ನಡೆಸಿದಲ್ಲಿ, ಯಾರು ಸಮರ್ಥರೋ ಅವರು ಮಾತ್ರ ದಾಖಲಾಗುತ್ತಾರೆ ಮತ್ತು ಶಿಕ್ಷಣದ ಗುಣಮಟ್ಟ ಸುಧಾರಿಸುತ್ತದೆ. ಕೋಚಿಂಗ್ ಕೇಂದ್ರಗಳು 16 ವರ್ಷಕ್ಕಿಂತ ಕಡಿಮೆ ವಯಸ್ಸಿನವರನ್ನು ದಾಖಲಿಸಿಕೊಳ್ಳಬಾರದು; ಪದವೀಧರರಲ್ಲದ ಶಿಕ್ಷಕರನ್ನು ನೇಮಿಸಿಕೊಳ್ಳಬಾರದು ಮತ್ತು ಹೆಚ್ಚು ಅಂಕ-ರ್ಯಾಂಕ್ ಆಶ್ವಾಸನೆ ನೀಡಬಾರದು. ತರಬೇತಿಗೆ ಹಾಜರಾಗುವವರ ವಿವರಗಳನ್ನು ಪ್ರಕಟಿಸಬೇಕು. ವಿದ್ಯಾರ್ಥಿಗಳು-ಶಿಕ್ಷಕರಿಗೆ ವಾರದ ರಜೆ ಕೊಡಬೇಕು. ರಜೆಯ ಮಾರನೇ ದಿನ ಪರೀಕ್ಷೆ ಕೊಡಬಾರದು; ದಿನಕ್ಕೆ 5 ಗಂಟೆಗಿಂತ ಹೆಚ್ಚು ಕಾಲ ತರಗತಿ ನಡೆಸಬಾರದು ಎಂದು ಶಿಕ್ಷಣ ಮಂತ್ರಾಲಯ ಜನವರಿ 18, 2024ರಂದು ಮಾರ್ಗಸೂಚಿಯನ್ನು ಪ್ರಕಟಿಸಿದೆ. ದಾರಿ ತಪ್ಪಿಸುವ ಆಶ್ವಾಸನೆಗಳನ್ನು ಕೊಡಬಾರದು; ಅಪರಾಧ ಪ್ರಕರಣಗಳಲ್ಲಿ ಶಿಕ್ಷೆಯಾದವರಿಗೆ ಕೆಲಸ ಕೊಡಬಾರದು ಮತ್ತು ಮಾನಸಿಕ ಸಲಹಾ ವ್ಯವಸ್ಥೆ ಇಲ್ಲದ ಕೇಂದ್ರಗಳು ವಿದ್ಯಾರ್ಥಿಗಳನ್ನು ನೋಂದಣಿ ಮಾಡಿಕೊಳ್ಳಬಾರದು. ಸೆಕೆಂಡರಿ ಶಾಲೆ ಪರೀಕ್ಷೆ ಆದ ಬಳಿಕವಷ್ಟೇ ದಾಖಲು ಮಾಡಿಕೊಳ್ಳಬೇಕು. ಜಾಲತಾಣ ಹೊಂದಿದ್ದು, ಶಿಕ್ಷಕರ ಶೈಕ್ಷಣಿಕ ಅರ್ಹತೆ, ಕೋರ್ಸ್ ಲಭ್ಯತೆ/ಪಠ್ಯಕ್ರಮ, ಅವಧಿ, ಹಾಸ್ಟೆಲ್ ವ್ಯವಸ್ಥೆ, ವಿಧಿಸುವ ಶುಲ್ಕ ಇತ್ಯಾದಿ ನಮೂದಿಸಬೇಕು ಎಂಬ ಶರತ್ತು ವಿಧಿಸಿದೆ. ವಿದ್ಯಾರ್ಥಿ ಸಲಹೆಗಾರ/ಮಾನಸಿಕ ತಜ್ಞರ ಹೆಸರು ಮತ್ತು ಅವರ ಸೇವೆ ಯಾವಾಗ ಲಭ್ಯವಿರುತ್ತದೆ ಎಂಬ ಮಾಹಿತಿ ಎಲ್ಲ ವಿದ್ಯಾರ್ಥಿಗಳು-ಪೋಷಕರಿಗೆ ನೀಡಬೇಕು. ತರಬೇತಿ ಪಡೆದ ಸಲಹೆಗಾರರನ್ನು ನೇಮಿಸಿಕೊಳ್ಳಬೇಕು ಎಂದು ಹೇಳಿದೆ.

ವಿನೋದ್ ಕುಮಾರ್ ಬನ್ಸಲ್ ಆರಂಭಿಸಿದ ಕೋಚಿಂಗ್ ಉದ್ಯಮ ಬೃಹತ್ತಾಗಿ ಬೆಳೆದಿದೆ. ಇದರಿಂದಾಗಿ ಅಪಾರ ಪ್ರಭಾವವನ್ನು ಗಳಿಸಿಕೊಂಡಿದೆ. ಸಮಸ್ಯೆಗಳ ನಿವಾರಣೆಗೆ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಲಾಗಿದೆ. ಪೋಷಕರಿಗೆ ಅರಿವು ಮೂಡಿಸುವ ಮತ್ತು ವಿದ್ಯಾರ್ಥಿಗಳಿಗೆ ಸಲಹೆ ಪ್ರಯತ್ನ ನಡೆದಿದೆ. ರಾಜಸ್ಥಾನ ಸರಕಾರ ನೇಮಿಸಿದ ಸಮಿತಿ ಆಗಸ್ಟ್ 2023ರಲ್ಲಿ ನೀಡಿದ ವರದಿಯ ಶಿಫಾರಸುಗಳನ್ನು ಆಧರಿಸಿದ ಹೊಸ ಕಾನೂನು ಪ್ರಸ್ತಾಪ ನನೆಗುದಿಗೆ ಬಿದ್ದಿದೆ. ಇದಕ್ಕೆ ಕಾರಣವೇನು ಎನ್ನುವುದು ಸ್ಪಷ್ಟ. ಕೋಟಾದಲ್ಲಿ ನಡೆಯುತ್ತಿರುವುದು ಶಿಕ್ಷಣದ ಮಾರಾಟ; ಅದರಲ್ಲಿ ನೈತಿಕತೆಯನ್ನು ನಿರೀಕ್ಷಿಸಬಾರದು. ಆದರೆ, ಕಮರುತ್ತಿರುವ ಜೀವಗಳಿಗೆ ಬೆಲೆ ಇಲ್ಲವೇ? ಕೋಟಾಕ್ಕೆ ತರಬೇತಿ ಪಡೆಯಲು ಹೋಗುವವರಿಗೆ ಇದೆಲ್ಲ ಗೊತ್ತಿಲ್ಲವೆಂದಲ್ಲ; ಮಾಯಾಜಿಂಕೆಯ ಹಿಂದಿನ ಓಟದಲ್ಲಿ ಜೀವಗಳು ಬಲಿಯಾಗುತ್ತಿವೆ. ಯಾವುದೇ ತರಬೇತಿ-ಶಿಕ್ಷಣದ ಕೇಂದ್ರಬಿಂದು ವಿದ್ಯಾರ್ಥಿಗಳ ಸುರಕ್ಷತೆ, ಮಾನಸಿಕ-ದೈಹಿಕ ಆರೋಗ್ಯ ರಕ್ಷಣೆ ಆಗಿರಬೇಕು. ಇದು ಬರೀ ಹೇಳಿಕೆಯಾಗಿರುವುದು ದುರಂತ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಋತ

contributor

Similar News