ಒಂದು ಹಿಡಿ ಕುಲಾಂತರಿಯಲ್ಲದ ಸಾಸಿವೆ ತಾ...

ಕುಲಾಂತರಿ ಸಾಸಿವೆಯ ಹಣೆಬರಹವನ್ನು ನ್ಯಾಯಾಲಯ ಮತ್ತು ಕ್ಷೇತ್ರ ಪರೀಕ್ಷೆ ನಿರ್ಧರಿಸಲಿದೆ. ಆದರೆ, ಅದಕ್ಕೆ ಮುನ್ನವೇ ಪೈಪೋಟಿಯಲ್ಲಿ ಕುಲಾಂತರಿ ಸಂಶೋಧನೆಗೆ ಅನುಮತಿ ನೀಡಲಾಗುತ್ತಿದೆ. 2020ರಲ್ಲಿ ಜಿಇಎಸಿ ಮತ್ತು ಪರಿಸರ ಮಂತ್ರಾಲಯ ಎಂಟು ರಾಜ್ಯಗಳಲ್ಲಿ ಸ್ವದೇಶಿ ಬಿಟಿ ಬದನೆಯ ಕ್ಷೇತ್ರ ಪ್ರಯೋಗಕ್ಕೆ ಅನುಮತಿ ನೀಡಿವೆ. ಕರ್ನಾಟಕ ಸರಕಾರ ಸೆಪ್ಟಂಬರ್ 2022ರಲ್ಲಿ ಕಳೆನಾಶಕ ಸಹಿಷ್ಣು ಹತ್ತಿ ಹಾಗೂ ಜೋಳದ ಕ್ಷೇತ್ರ ಪ್ರಯೋಗಕ್ಕೆ ಎರಡು ಕೃಷಿ ವಿಶ್ವವಿದ್ಯಾನಿಲಯಗಳಿಗೆ ಸಮ್ಮತಿ ನೀಡಿದೆ. ಆದರೆ, ಬಿಟಿ ಬೆಳೆಗಳ ದೀರ್ಘಕಾಲೀನ ಸುರಕ್ಷೆ ಮತ್ತು ಲಾಭದಾಯಕತೆಯನ್ನು ಸಾಬೀತುಪಡಿಸುವ ಯಾವುದೇ ಸಂಶೋಧನೆ-ಅಧ್ಯಯನ ನಡೆಯುತ್ತಿಲ್ಲ.

Update: 2023-08-04 17:06 GMT

ಜೈವಿಕ ಇಂಜಿನಿಯರಿಂಗ್ ಮೌಲ್ಯನಿರ್ಣಯ ಸಮಿತಿ(ಜಿಇಎಸಿ) ಅಕ್ಟೋಬರ್ 18, 2022ರಂದು ಕುಲಾಂತರಿ, ಕಳೆನಾಶಕ ಸಹಿಷ್ಣು ಸಾಸಿವೆ ತಳಿ, ಡಿಎಂಎಚ್ 11ಕ್ಕೆ ಅನುಮತಿ ನೀಡಿತು. ಅಲ್ಲಿಗೆ 2002ರಲ್ಲಿ ಆರಂಭಗೊಂಡ ಕುಲಾಂತರಿ ಸಾಸಿವೆಯ ಪ್ರಯಾಣ ಒಂದು ಹಂತ ತಲುಪಿತು. ಆದರೆ, ಕುಲಾಂತರಿಗಳು ರೈತರಿಗೆ ಲಾಭದಾಯಕವೇ, ಜನ-ಜಾನುವಾರು-ಪರಿಸರಕ್ಕೆ ಸುರಕ್ಷಿತವೇ ಮತ್ತು ಅಗತ್ಯವೇ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಸುಪ್ರೀಂಕೋರ್ಟ್ ನಲ್ಲಿ ಈ ಕುರಿತು ಸಲ್ಲಿಕೆಯಾದ ಅರ್ಜಿಗಳು ಇತ್ಯರ್ಥಗೊಂಡಿಲ್ಲ.

ಕುಲಾಂತರಿಗಳ ಅಭಿವೃದ್ಧಿ ಹೆಚ್ಚು ವೆಚ್ಚ, ಸಮಯ ಹಾಗೂ ಮಾನವ ಸಂಪನ್ಮೂಲ ಅಗತ್ಯವಿರುವ ವಿಸ್ತೃತ ಪ್ರಕ್ರಿಯೆ. ಈ ತಂತ್ರಜ್ಞಾನ ವಿಜ್ಞಾನ ಮತ್ತು ಸಂಭವನೀಯತೆ ಎರಡನ್ನೂ ಒಳಗೊಂಡಿದ್ದು, ಫಲಿತಾಂಶವನ್ನು ನಿಷ್ಕೃಷ್ಟವಾಗಿ ಹೇಳಲು ಸಾಧ್ಯವಿಲ್ಲ. ಕೃಷಿ ವಿಶ್ವವಿದ್ಯಾನಿಲಯಗಳು ಅಥವಾ ಭಾರತೀಯ ಕೃಷಿ ಸಂಶೋಧನಾ ಮಂಡಳಿ(ಐಸಿಎಆರ್)ಯ ತಾಕುಗಳಲ್ಲಿ ಈ ತಳಿಗಳು ವಿವಿಧ ಪರಿಶೀಲನೆಗೆ ಒಳಗಾಗುತ್ತವೆ. ಸುತ್ತಲಿನ ಬೆಳೆಗಳಿಗೆ ಹಾನಿಯುಂಟು ಮಾಡುವುದಿಲ್ಲ ಮತ್ತು ಸಾಂಪ್ರದಾಯಿಕ ತಳಿಗಳಿಗಿಂತ ಉತ್ತಮ(ಹೆಚ್ಚು ಇಳುವರಿ, ಬರ ತಡೆದುಕೊಳ್ಳುವ ಸಾಮರ್ಥ್ಯ, ಕೀಟಗಳಿಗೆ ಪ್ರತಿರೋಧ ಇತ್ಯಾದಿ) ಎಂದು ಸಾಬೀತಾದಲ್ಲಿ ಮತ್ತು ಹಲವು ಋತುಗಳಲ್ಲಿ ಹಾಗೂ ವಿವಿಧ ಭೌಗೋಳಿಕ ಸನ್ನಿವೇಶಗಳಲ್ಲಿ ಅವುಗಳನ್ನು ಪರಿಶೀಲಿಸಿ, ಆನಂತರ ವಾಣಿಜ್ಯಿಕ ಕೃಷಿಗೆ ಅನುಮತಿ ನೀಡಲಾಗುತ್ತದೆ. ಆದರೆ, ತಂತ್ರಜ್ಞಾನದಲ್ಲಿರುವ ಅನಿಶ್ಚಿತತೆ ಮತ್ತು ಉದ್ಯಮ/ವಿಜ್ಞಾನಿಗಳು/ಸರಕಾರದ ಲಾಭಬಡುಕತನದಿಂದ ಈ ಕ್ಷೇತ್ರ ಗೊಂದಲಗಳ ಗೂಡಾಗಿದೆ. ಅತ್ತಿಂದಿತ್ತ ಉರುಳಿದ ಸಾಸಿವೆ:

ಕುಲಾಂತರಿ ಅಥವಾ ಜೈವಿಕವಾಗಿ ಮಾರ್ಪಡಿಸಿದ(ಜಿಎಂ) ಬೆಳೆಗಳು ರೈತರು, ಕೃಷಿ ಸಂಶೋಧನೆ ಸಂಸ್ಥೆಗಳು/ಕಂಪೆನಿಗಳು ಅಭಿವೃದ್ಧಿಪಡಿಸಿದ ಸಾಂಪ್ರದಾಯಿಕ ತಳಿಗಳು ಹಾಗೂ ಹೈಬ್ರಿಡ್ಗಳಿಗಿಂತ ಭಿನ್ನ. ಜೈವಿಕ ತಂತ್ರಜ್ಞರು ಸಸ್ಯದ ವಂಶವಾಹಿಯ ಒಂದು ಸ್ಥಳದಲ್ಲಿ ಆಯ್ದ ಬೇರೊಂದು ವಂಶವಾಹಿಯನ್ನು ಅಳವಡಿಸುತ್ತಾರೆ.

ಕುಲಾಂತರಿ ಸಾಸಿವೆಯ ಕತೆ ಆರಂಭವಾಗಿದ್ದು 2002ರಲ್ಲಿ. ದಿಲ್ಲಿ ವಿಶ್ವವಿದ್ಯಾನಿಲಯದ ದೀಪಕ್ ಪೆಂಟಾಲ್ ನೇತೃತ್ವದ ತಂಡ ಕುಲಾಂತರಿ ಸಾಸಿವೆಯನ್ನು ಅಭಿವೃದ್ಧಿಪಡಿಸಿತು. ಪೆಂಟಾಲ್ ಸೆಪ್ಟಂಬರ್ 2015ರಲ್ಲಿ ಸಾಸಿವೆಗೆ ಜಿಇಎಸಿಯಿಂದ ಅನುಮತಿ ಕೇಳಿದರು. ಒಂದು ವರ್ಷದ ಬಳಿಕ ಸೆಪ್ಟಂಬರ್ 2016ರಲ್ಲಿ ‘ಮನುಷ್ಯರು, ಪ್ರಾಣಿಗಳು ಹಾಗೂ ಪರಿಸರಕ್ಕೆ ಕ್ಷೇಮಕರ’ ಎಂದು ಜಿಇಎಸಿ ಅನುಮತಿ ನೀಡಿತು. ಆದರೆ, ಸುಪ್ರೀಂ ಕೋರ್ಟ್ ಅಕ್ಟೋಬರ್ 2016ರಲ್ಲಿ ಅನುಮತಿಗೆ ತಡೆ ನೀಡಿತು. ಸುಮ್ಮನಿರದ ಜಿಇಎಸಿ, ಮೇ 2017ರಲ್ಲಿ ಮತ್ತೊಮ್ಮೆ ಅಂಗೀಕಾರ ನೀಡಿ, ಅರ್ಜಿಯನ್ನು ಪರಿಸರ ಮಂತ್ರಾಲಯಕ್ಕೆ ವರ್ಗಾಯಿಸಿತು. ಪರಿಸರ ಕಾರ್ಯಕರ್ತರು ಜುಲೈ 2017ರಲ್ಲಿ ಸುಪ್ರೀಂ ಕೋರ್ಟ್ ಮೊರೆಹೋದರು. ಸರಕಾರ ಕುಲಾಂತರಿಗೆ ಅನುಮತಿ ನೀಡಿದಲ್ಲಿ ತಾನು ಅರ್ಜಿಯ ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ನ್ಯಾಯಾಲಯ ಹೇಳಿತು. ಅಂತಿಮ ನಿರ್ಧಾರಕ್ಕೆ ಮುನ್ನ ಎಲ್ಲ ಭಾಗಿದಾರರ ಅಹವಾಲುಗಳನ್ನು ಪರಿಶೀಲಿಸುವುದಾಗಿ ಸರಕಾರ ನ್ಯಾಯಾಲಯಕ್ಕೆ ತಿಳಿಸಿತು. ಆನಂತರ, ಸರಕಾರ ಸೆಪ್ಟಂಬರ್ 2017ರಲ್ಲಿ ಅರ್ಜಿಯನ್ನು ಜಿಇಎಸಿಗೆ ಮರುಪರಿಶೀಲನೆಗೆ ರವಾನಿಸಿತು. ಅರ್ಜಿದಾರರು ಕ್ಷೇತ್ರ ಪ್ರಯೋಗ ಕೈಗೊಂಡು ವರದಿ ಸಲ್ಲಿಸಬೇಕೆಂದು ಜಿಇಎಸಿ ಮಾರ್ಚ್ 2018ರಲ್ಲಿ ಆದೇಶಿಸಿತು. ಆದರೆ, ಪ್ರಯೋಗದ ವೇಳೆ ಅನುಮತಿ ಪಡೆಯದ ಕೀಟನಾಶಕ/ಕಳೆನಾಶಕಗಳನ್ನು ಬಳಸಿರುವುದಕ್ಕೆ ಜಿಇಎಸಿಯ ಅವಲೋಕನ ಸಮಿತಿಯ ಇಬ್ಬರು ಸದಸ್ಯರು ಆಕ್ಷೇಪಿಸಿದ್ದರಿಂದ, ಅಧ್ಯಯನಗಳನ್ನು ಜುಲೈ 2018ರಲ್ಲಿ ಸ್ಥಗಿತಗೊಳಿಸಲಾಯಿತು. ಆದರೆ, ಪೆಂಟಾಲ್ ಸುಮ್ಮನಿರಲಿಲ್ಲ. ಜಾಗತಿಕ ಅಧ್ಯಯನಗಳನ್ನು ಉಲ್ಲೇಖಿಸಿ, ‘ಕುಲಾಂತರಿ ಸಾಸಿವೆ ಜೇನುಗಳಿಗೆ ಅಪಾಯಕರವಲ್ಲ. ಆದ್ದರಿಂದ ಹೆಚ್ಚುವರಿ ಅಧ್ಯಯನದ ಅಗತ್ಯವಿಲ್ಲ’ ಎಂದು ಜಿಇಎಸಿಗೆ ಆಗಸ್ಟ್ 2022ರಲ್ಲಿ ಪತ್ರ ಬರೆದರು. ಇದಕ್ಕೆಂದೇ ಕಾಯುತ್ತಿದ್ದ ಜಿಇಎಸಿ ಅಕ್ಟೋಬರ್ 25, 2022ರಲ್ಲಿ ಕುಲಾಂತರಿ, ಕಳೆನಾಶಕ ಸಹಿಷ್ಣು ತಳಿ, ಧಾರಾ ಮಸ್ಟರ್ಡ್ ಹೈಬ್ರಿಡ್(ಡಿಎಂಎಚ್-11)ಗೆ ಅನುಮತಿ ನೀಡಿತು. ನವೆಂಬರ್ನಲ್ಲಿ ಪರಿಸರ ಕಾರ್ಯಕರ್ತರು ನ್ಯಾಯಾಲಯದ ಕದ ತಟ್ಟಿದರು.

ಸಾಸಿವೆ ಸ್ವಯಂ ಪರಾಗಸ್ಪರ್ಶಗೊಳ್ಳುವ ಸಸ್ಯ. ಒಂದೇ ಗಿಡದಲ್ಲಿ ಪುರುಷ ಮತ್ತು ಸ್ತ್ರೀ ಅಂಗಗಳು ಇರುತ್ತವೆ. ಇದರಿಂದಾಗಿ ಅಡ್ಡ ಕಸಿ ಕಷ್ಟ; ಹೆಚ್ಚು ಕಾಲ ತೆಗೆದುಕೊಳ್ಳುತ್ತದೆ. ಆದರೆ, ವಂಶವಾಹಿ ಮಾರ್ಪಡಿಸುವಿಕೆ ಮೂಲಕ ನಿರ್ದಿಷ್ಟ ಗುಣಗಳಿರುವ ತಳಿಯನ್ನು ಸೃಷ್ಟಿಸಬಹುದು. ಪೆಂಟಾಲ್ ತಂಡ ಹೆಚ್ಚು ಇಳುವರಿ ನೀಡುವ ದೇಶಿ ತಳಿ ವರುಣಾದ ಬಾರ್ನೆಸ್ ವಂಶವಾಹಿ ಹಾಗೂ ವಿದೇಶಿ ತಳಿ ಅರ್ಲಿ ಹೀರಾ-2ರ ಬಾರ್ ಸ್ಟಾರ್ ವಂಶವಾಹಿಯನ್ನು ಬ್ಯಾಸಿಲ್ಲಸ್ ಅಮೈಲೋಲಿಕ್ವಿಫೇಸಿಯನ್ಸ್ ಮಣ್ಣಿನ ಬ್ಯಾಕ್ಟೀರಿಯಾದ ಡಿಎನ್ಎಯಲ್ಲಿ ಸೇರ್ಪಡೆಗೊಳಿಸಿದೆ. ಇದರೊಟ್ಟಿಗೆ, ಕಳೆನಾಶಕ ಗ್ಲುಫೋಸಿನೇಟ್ ಅಮೋನಿಯಂಗೆ ಪ್ರತಿರೋಧ ಶಕ್ತಿ ಹೊಂದಿರುವ ಬಾರ್ ವಂಶವಾಹಿ(ಸ್ಟ್ರೆಪ್ಟೋಮೈಸಿಸ್ ಹೈಗ್ರೋಸ್ಕೋಪಿಯನ್ಸ್ ಬ್ಯಾಕ್ಟೀರಿಯಾದಿಂದ ಪಡೆದದ್ದು) ಕೂಡ ಜೋಡಣೆಯಾಗಿದೆ. ವಿದೇಶಿ ವಂಶವಾಹಿಯ ಸೇರ್ಪಡೆ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.

ಸಂಸದೀಯ ಸ್ಥಾಯಿ ಸಮಿತಿಗಳ ಪರಿಶೀಲನೆ:

ಈವರೆಗೆ ಸಂಸತ್ತಿನ ಎರಡು ಸ್ಥಾಯಿ ಸಮಿತಿಗಳು ಕುಲಾಂತರಿ ಬೆಳೆಗಳನ್ನು ಪರಿಶೀಲಿಸಿವೆ- 2012ರಲ್ಲಿ ಮನಮೋಹನ್ ಸಿಂಗ್ ಅವರ ಆಡಳಿತಾವಧಿಯಲ್ಲಿ ಕೃಷಿ ಸ್ಥಾಯಿ ಸಮಿತಿ(2012) ಹಾಗೂ 2017ರಲ್ಲಿ ವಿಜ್ಞಾನ-ತಂತ್ರಜ್ಞಾನ, ಪರಿಸರ ಮತ್ತು ಅರಣ್ಯ ಸ್ಥಾಯಿ ಸಮಿತಿ. ಈ ಸಮಿತಿಗಳು ‘ಜೈವಿಕ ಇಂಜಿನಿಯರಿಂಗ್ ನಿಯಂತ್ರಣ ವ್ಯವಸ್ಥೆಯಲ್ಲಿನ ದೌರ್ಬಲ್ಯಗಳು ಮತ್ತು ಕುಲಾಂತರಿ ಆಹಾರದ ಬಿಡುಗಡೆಗೆ ಮುನ್ನ ಅತ್ಯಂತ ಎಚ್ಚರ ವಹಿಸಬೇಕು’ ಎಂದು ಹೇಳಿದ್ದವು. ಕುಲಾಂತರಿ ಸಾಸಿವೆಗೆ ಸಂಬಂಧಿಸಿದಂತೆ ಜೈವಿಕ ಸುರಕ್ಷೆ, ಪರಿಸರ ಸುರಕ್ಷತೆ ಮತ್ತು ಸಾಮಾಜಿಕೋಆರ್ಥಿಕ ಪರಿಣಾಮಗಳ ಬಗ್ಗೆ ವಿಸ್ತೃತ, ಸ್ವತಂತ್ರ ಹಾಗೂ ಪಾರದರ್ಶಕ ಮೌಲ್ಯಮಾಪನಕ್ಕೆ ದೀರ್ಘಕಾಲೀನ ಅಧ್ಯಯನ ನಡೆಯಬೇಕೆಂದು ವಿಜ್ಞಾನ-ತಂತ್ರಜ್ಞಾನ, ಪರಿಸರ ಮತ್ತು ಅರಣ್ಯ ಸ್ಥಾಯಿ ಸಮಿತಿ ಹೇಳಿತ್ತು.

ಸ್ವಯಂಸೇವಾ ಸಂಸ್ಥೆ ಜೀನ್ ಕ್ಯಾಂಪೇನ್ ಮತ್ತು ಪರಿಸರ ಕಾರ್ಯಕರ್ತೆ ಅರುಣಾ ರಾಡ್ರಿಗಸ್ ಸಲ್ಲಿಸಿದ ಪ್ರತ್ಯೇಕ ಅರ್ಜಿಗಳ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ತಾಂತ್ರಿಕ ಪರಿಣತರ ಸಮಿತಿ(ಟಿಇಸಿ)ಯನ್ನು ನೇಮಿಸಿತು. ಈ ಸಮಿತಿಯ ಆರರಲ್ಲಿ ಐವರು ಸದಸ್ಯರು ಕುಲಾಂತರಿ ಬೆಳೆಗಳ ಸುರಕ್ಷತೆಯ ಮೌಲ್ಯಮಾಪನದಲ್ಲಿನ ಗಂಭೀರ ದೋಷಗಳನ್ನು ಎತ್ತಿ ತೋರಿಸಿದ್ದರು. ದೇಶಕ್ಕೆ ಕಳೆನಾಶಕ ಸಹಿಷ್ಣು ಬೆಳೆಗಳು ‘ಸಂಪೂರ್ಣವಾಗಿ ಸೂಕ್ತವಲ್ಲ’ ಮತ್ತು ಅವು ಪರಿಸರ, ಗ್ರಾಮೀಣ ಜೀವನಾಧಾರ ಮತ್ತು ಸುಸ್ಥಿರ ಕೃಷಿಗೆ ಗಂಭೀರ ಹಾನಿಯುಂಟು ಮಾಡುತ್ತವೆ ಎಂದು ಸಮಿತಿ ಹೇಳಿತ್ತು.

ನವೆಂಬರ್ 2009ರಲ್ಲಿ ಸ್ಟ್ರಿಂಗರ್ ಓಪನ್ ಚಾಯ್ಸಿ ಜರ್ನಲ್ನಲ್ಲಿ ಪ್ರಕಟಗೊಂಡ ನಾಲ್ವರು ಜರ್ಮನ್ ವಿಜ್ಞಾನಿಗಳ ಲೇಖನ ‘ಬಿಟಿ ಬದನೆಯಲ್ಲಿರುವ ಪ್ರೊಟೀನ್ ಎಲ್ಲ ಜೀವಿಗಳಿಗೂ ಹಾನಿಕರ’ ಎಂದಿದೆ. ಎಲ್ಸೆಲ್ವಿಯರ್ 2011ರಲ್ಲಿ ಪ್ರಕಟಿಸಿದ ಕೆನಡಾದ ಶೆರ್ಬ್ರೂಕ್ ವಿಶ್ವವಿದ್ಯಾನಿಲಯದ ಸಂಶೋಧನಾ ಅಧ್ಯಯನ ‘ಭ್ರೂಣದ ಸುತ್ತ ಇದ್ದ ರಕ್ತದಲ್ಲಿ ಬಿಟಿ ವಿಷ ಪತ್ತೆಯಾಗಿತ್ತು’ ಎಂದಿದೆ. ನಾಗಪುರದ ಕೇಂದ್ರೀಯ ಹತ್ತಿ ಸಂಶೋಧನಾ ಸಂಸ್ಥೆ(ಸಿಐಸಿಆರ್)ಯ ನಿರ್ದೇಶಕ ಕೇಶವ್ ಕ್ರಾಂತಿ ಸಂಸ್ಥೆಯ ಜಾಲತಾಣದಲ್ಲಿ ಡಿಸೆಂಬರ್ 2016ರಂದು ಪ್ರಕಟಿಸಿದ ಲೇಖನದಲ್ಲಿ ‘2008ರ ಬಳಿಕ ಬಿಟಿ ಹತ್ತಿ ಇಳುವರಿ ಹೆಕ್ಟೇರ್ಗೆ 500 ಕೆಜಿಗೆ ಸ್ಥಗಿತಗೊಂಡಿದೆ. ಬೋಲ್ಗಾರ್ಡ್ 2 ಕೀಟ ಕಾಣಿಸಿಕೊಂಡಿದೆ’ ಎಂದಿದ್ದರು. ಖಾದ್ಯ ತೈಲ ಕೊರತೆ ನೆಪ:

ಕುಲಾಂತರಿ ಸಾಸಿವೆಯನ್ನು ಖಾದ್ಯ ತೈಲ ಕೊರತೆ ನೆಪದಲ್ಲಿ ಮುಂದೊತ್ತಲಾಗುತ್ತಿದೆ. ಡಿಎಂಎಚ್-11 ತಳಿ ಹೆಕ್ಟೇರ್ಗೆ 3-3.5 ಟನ್ ಇಳುವರಿ ನೀಡುತ್ತದೆ ಮತ್ತು ಬಿಳಿ ತುಕ್ಕು ರೋಗಕ್ಕೆ ಪ್ರತಿರೋಧ ಹೊಂದಿದೆ ಎಂದು ಐಸಿಎಆರ್ ವಿಜ್ಞಾನಿಗಳು ಹೇಳುತ್ತಾರೆ.

ದೇಶದಲ್ಲಿ ಖಾದ್ಯ ತೈಲದ ತೀವ್ರ ಕೊರತೆಯಿದೆ. 2021ರಲ್ಲಿ 13.35 ದಶಲಕ್ಷ ಟನ್ ಖಾದ್ಯತೈಲವನ್ನು ಆಮದು ಮಾಡಿಕೊಂಡಿದ್ದು, ಇದಕ್ಕಾಗಿ 1.17 ಲಕ್ಷ ಕೋಟಿ ರೂ. ವಿನಿಯೋಗಿಸಲಾಗಿದೆ ಎಂದು ಸರಕಾರ ಹೇಳುತ್ತದೆ. ದೇಶಿ ಖಾದ್ಯ ತೈಲ ಬಳಕೆಯಲ್ಲಿ ಸಾಸಿವೆ ಪಾಲು ಶೇ.40, ಸೋಯಾ ಅವರೆ ಶೇ.18 ಮತ್ತು ಕಡಲೆಕಾಯಿ ಎಣ್ಣೆ ಶೇ.15. ಸಾಸಿವೆಯನ್ನು 80 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದ್ದು, ಇಳುವರಿ ಹೆಕ್ಟೇರ್ಗೆ ಅಂದಾಜು 1ರಿಂದ 1.3 ಟನ್ ಇದೆ. ‘ಕುಲಾಂತರಿ ಸಾಸಿವೆ ವರುಣಾಕ್ಕಿಂತ ಶೇ.28ರಷ್ಟು ಹೆಚ್ಚು ಇಳುವರಿ ನೀಡುತ್ತದೆ’ ಎಂದು ಐಸಿಎಆರ್ ಹೇಳುತ್ತದೆ. ಇದನ್ನು ಅಲ್ಲಗಳೆಯುವ ಕೃಷಿ-ಆಹಾರ ಕಾರ್ಯನೀತಿ ವಿಶ್ಲೇಷಕ ದೇವಿಂದರ್ ಶರ್ಮ, ‘‘ದೇಶದಲ್ಲಿ ಹೆಕ್ಟೇರ್ಗೆ 3.2 ಟನ್ ಇಳುವರಿ ನೀಡಬಲ್ಲ ಕುಲಾಂತರಿಯಲ್ಲದ ತಳಿಗಳಿವೆ. ಸಾಂದ್ರ ಕೃಷಿ ವಿಧಾನ ಬಳಸಿದಲ್ಲಿ 4.2 ಟನ್ ಇಳುವರಿ ಪಡೆಯ ಬಹುದು’’ ಎನ್ನುತ್ತಾರೆ. ಬೆಳೆಗಳ ಇಳುವರಿ ಅನುವಂಶೀಯ ಸಂಯೋಜನೆ(ಜೀನೋಟೈಪ್), ಪರಿಸರ ಮತ್ತು ನಿರ್ವಹಣೆಯನ್ನು ಆಧರಿಸಿರುತ್ತದೆ. ಇದರಲ್ಲಿ ಪರಿಸರ-ನಿರ್ವಹಣೆಯ ಪಾಲು ಶೇ.80.

ಕಳೆದ 40 ವರ್ಷದಲ್ಲಿ ಸಾಂಪ್ರದಾಯಿಕ ಸಾಸಿವೆ ತಳಿಗಳ ಇಳುವರಿ ಹೆಕ್ಟೇರ್ಗೆ 478 ಕೆಜಿಯಿಂದ 2 ಟನ್ಗೆ ಹೆಚ್ಚಳಗೊಂಡಿದೆ ಎನ್ನುತ್ತಾರೆ ಆರ್ಎಂಆರ್ಸಿ ಮಾಜಿ ನಿರ್ದೇಶಕ ಧೀರಜ್ ಸಿಂಗ್. 1980ರಲ್ಲಿ ದೇಶದಲ್ಲಿ ಎಣ್ಣೆ ಬೀಜಗಳ ತಂತ್ರಜ್ಞಾನ ಮಿಷನ್ ಆರಂಭಿಸಿದ ಬಳಿಕ ದೇಶಿ ಉತ್ಪಾದನೆ 11 ದಶಲಕ್ಷ ಟನ್ನಿಂದ 1990ರಲ್ಲಿ 22 ದಶಲಕ್ಷ ಟನ್ಗೆ ಹೆಚ್ಚಳಗೊಂಡಿತು. ಈ ‘ಹಳದಿ ಕ್ರಾಂತಿ’ಗೆ ಕುಲಾಂತರಿಗಳು ಕಾರಣವಲ್ಲ. ನೀತಿ ಆಯೋಗದ ಅಂಕಿಅಂಶಗಳ ಪ್ರಕಾರ, 2014-15 ರಿಂದ 2019-2020ರ ಅವಧಿಯಲ್ಲಿ ಸಾಸಿವೆ ಎಣ್ಣೆ ಉತ್ಪಾದನೆ 6.28 ದಶಲಕ್ಷ ಟನ್ನಿಂದ 9.12 ದಶಲಕ್ಷ ಟನ್ಗೆ ಹೆಚ್ಚಳಗೊಂಡಿದೆ. ಸುಂಕ ಕಡಿತದಿಂದ ಆಮದು ತೈಲ ಸೋವಿಯಾಗಿ, ಆಮದು ಹೆಚ್ಚಿತು. ಖಾದ್ಯತೈಲ ಬೀಜಗಳ ಕೃಷಿ ಪ್ರಾಮುಖ್ಯತೆ ಕಳೆದುಕೊಂಡು, ಆಮದಿನ ಆಧರಿಸುವಿಕೆ ಅಧಿಕಗೊಂಡಿತು.

ಅಪಾಯಕರ ಪ್ರವೃತ್ತಿ:

ಸರಕಾರ-ಉದ್ಯಮಗಳ ಕಾಲಾಳುಗಳಾಗಿರುವ ವಿಜ್ಞಾನಿಗಳ ಹಣದಾಸೆ ಗೊಂದಲಕ್ಕೆ ಕಾರಣವಾಗಿದೆ. ಜಿಇಎಸಿ ನೇಮಿಸಿದ ಜೈವಿಕ ತಂತ್ರಜ್ಞಾನ ಇಲಾಖೆ(ಡಿಬಿಟಿ)ಯ ಹಿರಿಯ ವಿಜ್ಞಾನಿ ಸಂಜಯ್ ಕುಮಾರ್ ಮಿಶ್ರಾ ನೇತೃತ್ವದ 9 ಸದಸ್ಯರ ಸಮಿತಿ, ‘ಅರ್ಜಿದಾರರು ಐಸಿಎಆರ್ ನೇತೃತ್ವದಲ್ಲಿ ಜೇನು ನೊಣ ಮತ್ತಿತರ ಪರಾಗಸ್ಪರ್ಶ ಜೀವಿಗಳ ಮೇಲಿನ ಪರಿಣಾಮ ಕುರಿತು ಎರಡು ವರ್ಷದೊಳಗೆ ಅಧ್ಯಯನ ನಡೆಸಿ ವರದಿ ಸಲ್ಲಿ ಸಬೇಕು’ ಎಂದಿದೆ. ಇದರರ್ಥ-ಅಧ್ಯಯನಕ್ಕೆ ಮುನ್ನವೇ ಅನುಮತಿ ನೀಡಲಾಗಿದೆ ಮತ್ತು ಅಧ್ಯಯನಕ್ಕೆ ಎರಡು ವರ್ಷ ಕಾಲಾವಕಾಶ ನೀಡಲಾಗಿದೆ. ‘ಪೆಂಟಾಲ್ ತಂಡ ಜಿಇಎಸಿ ವಿಧಿಸಿದ ಪರೀಕ್ಷೆಗಳನ್ನು ನಡೆಸಲು ನಿರಾಕರಿಸಿದೆ ಮತ್ತು ಜಿಇಎಸಿ ತನ್ನದೇ ಶಿಫಾರಸುಗಳನ್ನು ವಾಪಸ್ ತೆಗೆದುಕೊಂಡಿದೆ’ ಎಂದು ಕುಲಾಂತರಿ ಮುಕ್ತ ಭಾರತ ಒಕ್ಕೂಟವು ಪರಿಸರ ಸಚಿವ ಭೂಪೇಂದರ್ ಯಾದವ್ ಅವರಿಗೆ ಬರೆದ ಪತ್ರದಲ್ಲಿ ಆರೋಪಿಸಿತು. ಎಂದಿನಂತೆ, ಸಚಿವರು ಪತ್ರಕ್ಕೆ ಪ್ರತಿಕ್ರಿಯಿಸಲಿಲ್ಲ. ಇಷ್ಟಲ್ಲದೆ, ಉತ್ಪನ್ನಗಳ ಮೌಲ್ಯಮಾಪನ ಮಾಡುವ ಸಮಿತಿಯಲ್ಲಿ ಉತ್ಪಾದಕರೇ ಇರುವುದು ಸರ್ವೇಸಾಮಾನ್ಯವಾಗಿಬಿಟ್ಟಿದೆ. ಕುಲಾಂತರಿ ಸಾಸಿವೆ ಅಭಿವೃದ್ಧಿಗೆ ಹೂಡಿಕೆ ಮಾಡಿರುವ ಜೈವಿಕ ತಂತ್ರಜ್ಞಾನ ಇಲಾಖೆಯ ವಿಜ್ಞಾನಿ ಸಂಜಯ್ ಕುಮಾರ್ ಮಿಶ್ರಾ, ಇಲಾಖೆ ನೇಮಿಸಿದ ಸಮಿತಿಯ ಅಧ್ಯಕ್ಷರಾಗಿದ್ದರು. ಕುಲಾಂತರಿ ಸಾಸಿವೆಯ ಪ್ರವರ್ತಕ ಸಂಸ್ಥೆಯಾದ ರಾಷ್ಟ್ರೀಯ ಕೃಷಿ ವಿಜ್ಞಾನಗಳ ಅಕಾಡಮಿ ಅಧ್ಯಕ್ಷ (ಎನ್ಎಎಸ್ಎಸ್) ಕೆ.ಸಿ.ಬನ್ಸಲ್, ಜಿಇಎಸಿಯ ಸಭೆಗಳಲ್ಲಿ ಪಾಲ್ಗೊಂಡಿದ್ದರು. ಇಂಥ ಪ್ರವೃತ್ತಿಗೆ ಪೂರಕವಾಗಿ ವರ್ತಿಸುವ ಸರಕಾರ, ‘ಕುಲಾಂತರಿ ಸಾಸಿವೆಯನ್ನು ಇಳುವರಿ ಹೆಚ್ಚಳದ ಉದ್ದೇಶದಿಂದ ಸೃಷ್ಟಿಸಿರುವುದರಿಂದ, ಅದನ್ನು ಕಳೆನಾಶಕ ಸಹಿಷ್ಣು(ಎಚ್ಟಿ) ಎಂದು ಪರಿಗಣಿಸಲೇಬಾರದು’ ಎಂದು ಇತ್ತೀಚೆಗೆ ಸುಪ್ರೀಂಕೋರ್ಟಿನಲ್ಲಿ ವಾದಿಸಿತ್ತು! ಜಿಇಎಸಿ ಹಲವು ಬಾರಿ ಆದೇಶಿಸಿದರೂ, ಪೆಂಟಾಲ್ ತಂಡ ಜೇನು ಸೇರಿದಂತೆ ಪರಾಗಸ್ಪರ್ಶ ಮಾಡುವ ಕೀಟಗಳ ಬಗ್ಗೆ ಅಧ್ಯಯನವನ್ನೇ ನಡೆಸಲಿಲ್ಲ.

ಕುಲಾಂತರಿ ಬೆಳೆಗಳು ಸುರಕ್ಷಿತವೇ, ಲಾಭದಾಯಕವೇ ಮತ್ತು ಅಗತ್ಯವೇ ಎಂಬ ಕುರಿತು 2 ದಶಕದಿಂದ ಸಾಕಷ್ಟು ಚರ್ಚೆ ನಡೆದಿದೆ. ಬಿಟಿ ಹತ್ತಿಯ ಅನುಭವದಿಂದ ಹೇಳುವುದಾದರೆ, ರೈತರಿಗೆ ಬಿಟಿ ತಳಿಗಳಿಂದ ಉತ್ಪಾದಕರು ಘೋಷಿಸಿದಷ್ಟು ಲಾಭವಾಗಿಲ್ಲ. ಆದರೆ, ಕೃಷಿ ದುಬಾರಿಯಾಗಿದೆ; ಪ್ರತಿಯಾಗಿ, ಬೀಜೋತ್ಪಾದಕ ಕಂಪೆನಿಗಳು ಲಾಭ ಮಾಡಿಕೊಂಡಿವೆ. ಹೀಗಿದ್ದರೂ, ಸರಕಾರ ಕುಲಾಂತರಿ ಸಾಸಿವೆಯನ್ನು ಮುಂದೊತ್ತುತ್ತಿದೆ. ಸಾಸಿವೆಯ ಜೈವಿಕ ಸುರಕ್ಷತೆಗೆ ಸಂಬಂಧಿಸಿದ ದಾಖಲೆಗಳನ್ನು ಸಾರ್ವಜನಿಕಗೊಳಿಸಿಲ್ಲ; ಹೈಬ್ರಿಡ್ ಸಾಸಿವೆ ತಳಿಗಳು ಕುಲಾಂತರಿಗಿಂತ ಹೆಚ್ಚು ಇಳುವರಿ ನೀಡುತ್ತವೆ ಎಂಬ ಕೃಷಿ ವಿಜ್ಞಾನಿಗಳ ಹೇಳಿಕೆಗೂ ಪ್ರತಿಕ್ರಿಯಿಸುತ್ತಿಲ್ಲ. ವಿಜ್ಞಾನಾಧರಿತ ಕಾಳಜಿಗಳು ಮತ್ತು ಜನರ ಪ್ರತಿರೋಧಕ್ಕೆ ಬೆಲೆ ಕೊಡುತ್ತಿಲ್ಲ. ಸಾರ್ವಜನಿಕ ಆರೋಗ್ಯ, ಪರಿಸರ ಸಂರಕ್ಷಣೆ ಮತ್ತು ಕೃಷಿಕರ ಜೀವನಾಧಾರಕ್ಕೆ ಸಂಬಂಧಿಸಿದ ವಿಷಯದಲ್ಲಿ ವಾಸ್ತವ ಹಾಗೂ ತಾರ್ಕಿಕತೆಗೆ ತಿಲಾಂಜಲಿ ನೀಡುತ್ತಿದೆ.

ವಾಣಿಜ್ಯ ಕೃಷಿ ನಡೆಯುತ್ತಿರುವ ಏಕೈಕ ಬೆಳೆ ಹತ್ತಿ. ಒಂದುವೇಳೆ ಸುಪ್ರೀಂ ಕೋರ್ಟ್ ಕುಲಾಂತರಿ ಸಾಸಿವೆಗೆ ಅನುಮತಿ ನೀಡಿದಲ್ಲಿ, ಸೀಸೆಯಲ್ಲಿರುವ ಪಿಶಾಚಿಗಳು ಹೊರಬರಲಿವೆ. ಪ್ರಯೋಗಾರ್ಥ ಪರೀಕ್ಷೆಯ ವಿವಿಧ ಹಂತಗಳಲ್ಲಿರುವ ಭತ್ತ, ಜೋಳ, ಬದನೆ, ಟೊಮೆಟೊ, ಜೋಳ, ಕಡಲೆ ಮತ್ತಿತರ ಆಹಾರ ಬೆಳೆಗಳು ಮುನ್ನೆಲೆಗೆ ಬರುತ್ತವೆ. ಜಿಇಎಸಿ 2010ರಲ್ಲಿ ಕುಲಾಂತರಿ ಬದನೆಗೆ ಅನುಮತಿ ನೀಡಿತ್ತಾದರೂ, ಯುಪಿಎ ಸರಕಾರ ಅನಿರ್ದಿಷ್ಟ ಕಾಲ ನಿರ್ಬಂಧ ವಿಧಿಸಿತು. ಸುಪ್ರೀಂ ಕೋರ್ಟಿನ ತಾಂತ್ರಿಕ ಪರಿಣತರ ಸಮಿತಿ ಕಳೆನಾಶಕ ಸಹಿಷ್ಣು ಕುಲಾಂತರಿ ಬೆಳೆಗಳನ್ನು ನಿಷೇಧಿಸಬೇಕೆಂದು ಶಿಫಾರಸು ಮಾಡಿ, ಬಿಟಿ ಬದನೆಯನ್ನು ನಿಷೇಧಿಸಿತು. ಕೆಲ ವರ್ಷಗಳ ಬಳಿಕ ಕೀಟಗಳು/ಉಪದ್ರವಕಾರಿಗಳು ಕುಲಾಂತರಿ ಬೆಳೆಗೆ ಪ್ರತಿರೋಧಶಕ್ತಿ ಬೆಳೆಸಿಕೊಳ್ಳುತ್ತವೆ. ಆಗ ಹೊಸ ಬೀಜಗಳ ಸೃಷ್ಟಿ ಅನಿವಾರ್ಯವಾಗುತ್ತದೆ. ಜೇನುಗಳು ಕುಲಾಂತರಿ ಸಾಸಿವೆಯ ವಂಶವಾಹಿಗಳನ್ನು ಪರಾಗಸ್ಪರ್ಶದ ಮೂಲಕ ಇನ್ನಿತರ ಸಸ್ಯಗಳಿಗೆ ವರ್ಗಾಯಿಸುವ ಸಾಧ್ಯತೆಯಿದೆ. ಒಂದು ವೇಳೆ ಅಡ್ಡ ಪರಾಗಸ್ಪರ್ಶದ ವೇಳೆ ಪುರುಷ ಬರಡು ಪರಾಗಗಳು ಸ್ಥಳಾಂತರಗೊಂಡರೆ, ಜೈವಿಕ ವೈವಿಧ್ಯಕ್ಕೆ ಧಕ್ಕೆಯಲ್ಲದೆ, ಅನಗತ್ಯ-ಆಕ್ರಮಣಕಾರಿ ಕಳೆಗಳು ಹೆಚ್ಚುತ್ತವೆ. ಬಾರ್ಸ್ಟಾರ್ ಮತ್ತು ಬಾರ್ನೆಸ್ ವಂಶವಾಹಿಗಳು ಮನುಷ್ಯರು-ಪ್ರಾಣಿಗಳ ಚಯಾಪಚಯ ಕ್ರಿಯೆಗಳ ಮೇಲೆ ದೀರ್ಘ ಕಾಲದಲ್ಲಿ ಯಾವ ಪರಿಣಾಮ ಉಂಟುಮಾಡುತ್ತವೆ ಎಂಬ ಅಧ್ಯಯನವೇ ನಡೆದಿಲ್ಲ.

ಕುಲಾಂತರಿ ಸಾಸಿವೆಯ ಹಣೆಬರಹವನ್ನು ನ್ಯಾಯಾಲಯ ಮತ್ತು ಕ್ಷೇತ್ರ ಪರೀಕ್ಷೆ ನಿರ್ಧರಿಸಲಿದೆ. ಆದರೆ, ಅದಕ್ಕೆ ಮುನ್ನವೇ ಪೈಪೋಟಿಯಲ್ಲಿ ಕುಲಾಂತರಿ ಸಂಶೋಧನೆಗೆ ಅನುಮತಿ ನೀಡಲಾಗುತ್ತಿದೆ. 2020ರಲ್ಲಿ ಜಿಇಎಸಿ ಮತ್ತು ಪರಿಸರ ಮಂತ್ರಾಲಯ ಎಂಟು ರಾಜ್ಯಗಳಲ್ಲಿ ಸ್ವದೇಶಿ ಬಿಟಿ ಬದನೆಯ ಕ್ಷೇತ್ರ ಪ್ರಯೋಗಕ್ಕೆ ಅನುಮತಿ ನೀಡಿವೆ. ಕರ್ನಾಟಕ ಸರಕಾರ ಸೆಪ್ಟಂಬರ್ 2022ರಲ್ಲಿ ಕಳೆನಾಶಕ ಸಹಿಷ್ಣು ಹತ್ತಿ ಹಾಗೂ ಜೋಳದ ಕ್ಷೇತ್ರ ಪ್ರಯೋಗಕ್ಕೆ ಎರಡು ಕೃಷಿ ವಿಶ್ವವಿದ್ಯಾನಿಲಯಗಳಿಗೆ ಸಮ್ಮತಿ ನೀಡಿದೆ. ಆದರೆ, ಬಿಟಿ ಬೆಳೆಗಳ ದೀರ್ಘಕಾಲೀನ ಸುರಕ್ಷೆ ಮತ್ತು ಲಾಭದಾಯಕತೆಯನ್ನು ಸಾಬೀತುಪಡಿಸುವ ಯಾವುದೇ ಸಂಶೋಧನೆ-ಅಧ್ಯಯನ ನಡೆಯುತ್ತಿಲ್ಲ. ಬಿಟಿ ಹತ್ತಿಯ ಉದಾಹರಣೆಯನ್ನು ತೆಗೆದುಕೊಂಡರೆ, ಅದರಿಂದ ಸ್ವದೇಶಿ ತಳಿಗಳು ಕಣ್ಮರೆಯಾದವು. ಬೀಜೋತ್ಪಾದಕ ಮಾನ್ಸ್ಯಾಂಟೋದಂಥ ಕಂಪೆನಿಯ ಖಜಾನೆ ತುಂಬಿತು. ಈಗ ಜಿಎಂ ಆಹಾರ, ರೈತರು ಮತ್ತು ಗ್ರಾಹಕರ ಮಧ್ಯೆ ಇರುವ ಏಕೈಕ ತಡೆಗೋಡೆ ನ್ಯಾಯಾಲಯದಲ್ಲಿನ ಅರ್ಜಿ ಮಾತ್ರ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Contributor - ಮಾಧವ ಐತಾಳ್

contributor

Similar News