ಎಲ್ಲೆ ಗುರುತಿಸುವಿಕೆಯಿಂದ ದಕ್ಷಿಣದ ರಾಜ್ಯಗಳಿಗೆ ಕಂಟಕ

ಒಂದು ವೇಳೆ ಸಂಸದರ ಸ್ಥಾನ 753ಕ್ಕೆ ಹೆಚ್ಚಳಗೊಂಡರೆ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಮತ್ತು ಕೇರಳದ ಸಂಸದರ ಸಂಖ್ಯೆ ಶೇ.6, ಕರ್ನಾಟಕದ ಸಂಸದರ ಸಂಖ್ಯೆ ಶೇ.11ರಷ್ಟು ಹೆಚ್ಚುತ್ತದೆ; ಉತ್ತರಪ್ರದೇಶ, ಬಿಹಾರ, ಮಧ್ಯಪ್ರದೇಶ, ರಾಜಸ್ಥಾನದ ಸಂಸದರ ಸಂಖ್ಯೆ ಶೇ.63ರಷ್ಟು ಹೆಚ್ಚಲಿದೆ. ಸೀಮಾ ನಿರ್ಧಾರ ದಕ್ಷಿಣದ ರಾಜ್ಯಗಳಿಗೆ ಕಂಟಕವಾಗಿ ಪರಿಣಮಿಸಲಿದೆ. ಜನಸಂಖ್ಯೆಯನ್ನು ಕಡಿಮೆಗೊಳಿಸಿದ ರಾಜ್ಯಗಳಿಗೆ ಶಿಕ್ಷೆ ವಿಧಿಸಿದಂತೆ ಆಗಲಿದೆ. ಸಂಸದರ ಸಂಖ್ಯೆ ಹೆಚ್ಚಳವನ್ನು ನಿರ್ಧರಿಸಲು ಜನಸಂಖ್ಯೆಯೊಂದೇ ಆಧಾರವಾಗಬಾರದು. ಭೌಗೋಳಿಕ ನಿರ್ಣಾಯಕತೆ, ಆರ್ಥಿಕ ಉತ್ಪಾದಕತೆ, ಭಾಷಾ ಚರಿತ್ರೆ ಮತ್ತು ನ್ಯಾಯಬದ್ಧತೆ ಅಳತೆಗೋಲಾಗಬೇಕು.

Update: 2023-12-01 07:39 GMT
Editor : jafar sadik | Byline : ಋತ

ಕೆಲವು ತಿಂಗಳುಗಳ ಹಿಂದೆ ತಮಿಳುನಾಡು ವಿತ್ತ ಸಚಿವ ತಂಗಂ ತೆನ್ನರಸು ‘‘ಅನುದಾನ ನೀಡಿಕೆಯಲ್ಲಿ ಕೇಂದ್ರ ಸರಕಾರ ತಾರತಮ್ಯ ಮಾಡುತ್ತಿದೆ’’ ಎಂದು ದೂರಿದ್ದರು. ಸಂಸದ ಶಶಿ ತರೂರ್ ಮಾಧ್ಯಮ ಶೃಂಗವೊಂದರಲ್ಲಿ ‘‘ಎಲ್ಲೆ ಗುರುತಿಸುವಿಕೆ(ಡಿಲಿಮಿಟೇಷನ್) ತಡೆ ತೆರವುಗೊಳಿಸಿದ ಬಳಿಕ ದಕ್ಷಿಣ ರಾಜ್ಯಗಳ ರಾಜಕೀಯ ಪ್ರಾತಿನಿಧ್ಯದ ಹಕ್ಕಿಗೆ ಅಪಾಯವಿದೆ’’ ಎಂದು ಹೇಳಿದ್ದರು. ರಾಜ್ಯಗಳಿಗೆ ಎಷ್ಟು ಪಾಲು ನೀಡಬೇಕು ಮತ್ತು ಯಾವ ರಾಜ್ಯಕ್ಕೆ ಎಷ್ಟು ಅನುದಾನ ನೀಡಬೇಕು ಎಂಬುದನ್ನು ವಿತ್ತ ಆಯೋಗ ನಿರ್ಧರಿಸುತ್ತದೆ. ಇದನ್ನು ನಿರ್ಧರಿಸಲು ಬಳಸುವ ಮಾನದಂಡಗಳು ದಕ್ಷಿಣದ ರಾಜ್ಯಗಳ ವಿರುದ್ಧ ಇದೆ. ಅಂತರ್‌ರಾಜ್ಯ ಹಂಚಿಕೆ ಆಧರಿಸಿರುವ ಅಂಶಗಳೆಂದರೆ, ಒಟ್ಟು ಜನಸಂಖ್ಯೆಯಲ್ಲಿ ರಾಜ್ಯದ ಪಾಲು ಹಾಗೂ ಆದಾಯ ಅಂತರ; ಅಂದರೆ, ರಾಜ್ಯದ ತಲಾದಾಯವು ರಾಷ್ಟ್ರೀಯ ತಲಾದಾಯಕ್ಕಿಂತ ಎಷ್ಟು ಹೆಚ್ಚು ಅಥವಾ ಕಡಿಮೆ ಇದೆ. ಈ ಎರಡರಲ್ಲೂ ದಕ್ಷಿಣದ ರಾಜ್ಯಗಳು ಕಳೆದುಕೊಳ್ಳುವುದು ಹೆಚ್ಚು. ಉದಾಹರಣೆಗೆ, ಕೇರಳ 10ನೇ ಹಣಕಾಸು ಆಯೋಗದಿಂದ ಪಡೆದ ಅನುದಾನ ಶೇ.3.8. ಈಗ ಅದು ಶೇ.1.9 ಇದೆ. ಈ ಕುಸಿತ ಕಾಲಕ್ರಮೇಣ ಹೆಚ್ಚಲಿದೆ.

ಒಕ್ಕೂಟ ವ್ಯವಸ್ಥೆಯಲ್ಲಿ ಅಂತರ್‌ರಾಜ್ಯ ಅನುದಾನ ನೀಡಿಕೆ ಸಮವಾಗಿರಬೇಕು. ಶ್ರೀಮಂತ ರಾಜ್ಯಗಳು ಹಿಂದುಳಿದ ರಾಜ್ಯಗಳಿಗೆ ನೆರವಾಗಬೇಕು ಎನ್ನುವುದು ನ್ಯಾಯಸಮ್ಮತ; ಏಕೆಂದರೆ, ದೇಶದ ಪ್ರತಿಯೊಬ್ಬ ನಾಗರಿಕನಿಗೂ ಕನಿಷ್ಠ ಸಮಾನ ಸೇವೆಗಳು ಲಭ್ಯವಾಗಬೇಕು. ಆದರೆ, ಪುನರ್‌ಹಂಚಿಕೆಗಳು ಮಿತಿಯೊಳಗೆ ಇರಬೇಕು. ಈವರೆಗಿನ ಅನುಭವದ ಪ್ರಕಾರ, ಹಿಂದುಳಿದ ರಾಜ್ಯಗಳಿಗೆ ಹೆಚ್ಚು ಸಂಪನ್ಮೂಲ ಹಂಚಿಕೆಯಿಂದ ಆರ್ಥಿಕ ಇಲ್ಲವೇ ಸಾಮಾಜಿಕವಾಗಿ ಹೆಚ್ಚೇನೂ ಪ್ರಯೋಜನವಾಗಿಲ್ಲ. ನಾವು ಒಕ್ಕೂಟ ವ್ಯವಸ್ಥೆಯಲ್ಲಿ ಇರುವುದರಿಂದ, ಸ್ವಲ್ಪ ಮಟ್ಟಿನ ಆರ್ಥಿಕ ಹೊರೆಯನ್ನು ಹೊರಬೇಕು ಎನ್ನುವುದನ್ನು ಒಪ್ಪಿಕೊಳ್ಳಬಹುದು. ಆದರೆ, ರಾಜ್ಯಗಳ ಯಾವ ವಿಷಯದಲ್ಲಿ ಮಧ್ಯಪ್ರವೇಶ ಅಗತ್ಯವಿದೆ ಎಂಬುದನ್ನು ಕೇಂದ್ರ ಗುರುತಿಸಬೇಕು; ಒಕ್ಕೂಟ ಸರಕಾರ ಛಿದ್ರೀಕರಣಕ್ಕೆ ದಾರಿ ಮಾಡಿಕೊಡುವ ಸಮತೋಲವಿಲ್ಲದ ಮತ್ತು ಹಾನಿಕರ ಮಾರ್ಗವನ್ನು ಹಿಡಿಯಬಾರದು.

16ನೇ ಆಯೋಗದ ವಿಚಾರಣೆ ನಿಬಂಧನೆ(ಟರ್ಮ್ ಆಫ್ ರೆಫರೆನ್ಸ್)ಗಳು ಇನ್ನೂ ಪ್ರಕಟವಾಗಬೇಕಿದೆ. ರಾಜ್ಯಗಳಿಗೆ ನೀಡಬೇಕಾದ ಪಾಲನ್ನು ನಿರ್ಧರಿಸಲು ಜನಸಂಖ್ಯೆಗೆ ನೀಡುವ ಅಂಕಗಳು 14ನೇ ಆಯೋಗದಲ್ಲಿದ್ದ ಶೇ.27.5ರಿಂದ 15ನೇ ಹಣಕಾಸು ಆಯೋಗದಲ್ಲಿ ಶೇ.15ಕ್ಕೆ ಕುಸಿದಿದೆ. ಜನಸಂಖ್ಯೆಯನ್ನು ಕಡಿಮೆಗೊಳಿಸಿರುವ ರಾಜ್ಯಗಳನ್ನು 15ನೇ ಆಯೋಗ ಪುರಸ್ಕರಿಸಿದೆ. ಜನಸಂಖ್ಯೆ ಬೆಳವಣಿಗೆ ಹಾಗೂ ಆರ್ಥಿಕ ಪ್ರಗತಿ ನಡುವೆ ಸಂಬಂಧವಿದೆ. ಇದರಿಂದ, ಕೇರಳ, ತಮಿಳುನಾಡು, ಕರ್ನಾಟಕಕ್ಕೆ ನೀಡುವ ಪಾಲು ಗಣನೀಯವಾಗಿ ಕಡಿಮೆಯಾಗಿದೆ. ದಕ್ಷಿಣದ ಸಾಧನೆ ಉತ್ತಮವಾಗಿರುವುದರಿಂದ, ಅನುದಾನ ಕಡಿತ ಭವಿಷ್ಯದಲ್ಲೂ ಮುಂದುವರಿಯಲಿದೆ. ಕೇರಳ ಕೇಂದ್ರಕ್ಕೆ ಸಲ್ಲಿಸುವ ಪ್ರತೀ 1ರೂ.ಗೆ 35 ಪೈಸೆ ಬರುತ್ತಿದೆ ಎಂದು ರಾಜ್ಯದ ವಿತ್ತ ಸಚಿವರು ಇತ್ತೀಚೆಗೆ ಹೇಳಿದ್ದರು. ಆದರೆ, ಉತ್ತರ ಪ್ರದೇಶಕ್ಕೆ 1.60 ರೂ. ವಾಪಸಾಗುತ್ತಿದೆ.

ಬಡ ರಾಜ್ಯಗಳ ಜನಸಂಖ್ಯೆ ಹೆಚ್ಚು ಇದ್ದು, ಜನಸಂಖ್ಯೆಯನ್ನು ನಿಯಂತ್ರಿಸಿರುವ ರಾಜ್ಯಗಳಿಗೆ ನಷ್ಟವಾಗುತ್ತಿದೆ. ಇದು ಎಲ್ಲೆ ಗುರುತಿಸುವಿಕೆಯೊಂದಿಗೆ ತಳಕು ಹಾಕಿಕೊಂಡಿದೆ. ಒಕ್ಕೂಟದೊಳಗೆ ರಾಜಕೀಯ ಅಧಿಕಾರ ಹಂಚಿಕೆಯಲ್ಲಿ ಸಮತೋಲನ ಕೂಡ ಬದಲಾಗುತ್ತಿದೆ. 1991ರ ಬಳಿಕ ರಾಜ್ಯಗಳ ನಡುವಿನ ಆದಾಯ ಕಂದರ ಹೆಚ್ಚಿದೆ. ಇದು ರಾಜ್ಯಗಳ ಅಭಿವೃದ್ಧಿ ಕಾರ್ಯನೀತಿ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತದೆ. ಕೋವಿಡ್-19 ಸಂಕಷ್ಟದ ಸಮಯದಲ್ಲಿ ರಾಜ್ಯಗಳು ತೆಗೆದುಕೊಳ್ಳಬಹುದಾದ ಸಾಲದ ಮಿತಿಯನ್ನು ಕೇಂದ್ರ ಸರಕಾರ ಹೆಚ್ಚಿಸಿತು. ಹಣಕಾಸು ಜವಾಬ್ದಾರಿ ಮತ್ತು ಆಯವ್ಯಯ ನಿರ್ವಹಣೆ ಕಾಯ್ದೆ(ಎಫ್‌ಆರ್‌ಬಿಎಂಎ) ಇದ್ದರೂ, ರಾಜ್ಯಗಳು ಕಂದಾಯ ವೆಚ್ಚದಲ್ಲಿದ್ದ ಹಣವನ್ನು ಖರ್ಚು ಮಾಡಲು ಸಿದ್ಧವಿರಲಿಲ್ಲ. ಕೋವಿಡ್‌ಗೆ ಮುನ್ನ ಇದ್ದ 1.5 ಲಕ್ಷ ಕೋಟಿ ರೂ. ರಾಜ್ಯಗಳ ಬಳಿ ಹಾಗೆಯೇ ಉಳಿದುಕೊಂಡಿತ್ತು. ಇದರಿಂದ ಆಸ್ಪತ್ರೆ/ಶಾಲೆಗಳನ್ನು ನಿರ್ಮಿಸಲು ಹಿಂಜರಿಯಲಾಯಿತು.

ಸಂವಿಧಾನದ 81ನೇ ವಿಧಿ ಪ್ರಕಾರ, ಪ್ರತಿಯೊಂದು ರಾಜ್ಯವೂ ಜನಸಂಖ್ಯೆಗೆ ಅನುಗುಣವಾಗಿ ಸ್ಥಾನಗಳನ್ನು ಮತ್ತು ಮತಕ್ಷೇತ್ರಗಳು ಸಮಾನ ಜನಸಂಖ್ಯೆ ಹೊಂದಿರಬೇಕು. ಹಳೆಯ ಜನಗಣತಿಯನ್ನು ಬಳಸಿಕೊಂಡು, ಸಂಸತ್ತಿನಲ್ಲಿ ಸದಸ್ಯರ ಸಂಖ್ಯೆಯನ್ನು ನಿರ್ಧರಿಸಲಾಗುತ್ತಿದೆ. ಎಲ್ಲೆ ಗುರುತಿಸುವಿಕೆ ತಡೆಯನ್ನು ತೆಗೆದರೆ, ಉತ್ತರಪ್ರದೇಶದ ಸಂಸತ್ ಸ್ಥಾನಗಳ ಸಂಖ್ಯೆ 143ಕ್ಕೆ ಹೆಚ್ಚಲಿದೆ ಮತ್ತು ಕೇರಳದಲ್ಲಿ ಮೊದಲಿನಷ್ಟೇ ಇರಲಿದೆ(20 ಸಂಸದ ಸ್ಥಾನ). ದಕ್ಷಿಣದ ರಾಜ್ಯಗಳು ಜನಸಂಖ್ಯೆಯನ್ನು ಕಡಿಮೆಗೊಳಿಸಿಕೊಂಡಿರುವುದರಿಂದ, ಸಂಸದರ ಸಂಖ್ಯೆ ಕಡಿಮೆಯಾಗಲಿದೆ. 2011ರಲ್ಲಿನ ಜನಸಂಖ್ಯೆಯ ಬೆಳವಣಿಗೆ ದರವನ್ನು ಪರಿಗಣಿಸಿದರೆ, ಉತ್ತರ ಭಾರತದ ರಾಜ್ಯಗಳಿಗೆ ಹೆಚ್ಚು ಸಂಸದ ಸ್ಥಾನಗಳು ಲಭ್ಯವಾಗಲಿವೆ. ಇದರಿಂದ ಹಿಂದಿ ಭಾಷಿಕರ ಹಿಡಿತ ಇನ್ನಷ್ಟು ಹೆಚ್ಚುತ್ತದೆ. ಎಲ್ಲೆ ಗುರುತಿಸುವಿಕೆ ದೇಶದ ರಾಜಕೀಯ-ಆರ್ಥಿಕ ಕೇಂದ್ರೀಕರಣದ ಮೇಲೆ ಹಾಗೂ ಉತ್ತರ-ದಕ್ಷಿಣ ಭಾರತದ ನಡುವಿನ ಹಣಕಾಸು ಹಂಚಿಕೆಗೆ ಸಂಬಂಧಿಸಿದಂತೆ ಗಮನಾರ್ಹ ಪರಿಣಾಮ ಬೀರಲಿದೆ. ರಾಜಕೀಯ ಪಂಡಿತರ ಪ್ರಕಾರ, ‘ತಪ್ಪು ಹಿಸ್ಸೆ’(ಮಾಲ್ ಅಪೋರ್ಷನ್‌ಮೆಂಟ್) ಅಂದರೆ, ಸಂಸತ್ತಿನಲ್ಲಿ ಕೆಲವು ರಾಜ್ಯಗಳಿಗೆ ಆದ್ಯತೆ ನೀಡುವ ಶಾಸಕಾಂಗ ವ್ಯವಸ್ಥೆ ಆತಂಕಕಾರಿ. ಉದಾಹರಣೆಗೆ, ಅಮೆರಿಕದಲ್ಲಿ 50 ರಾಜ್ಯಗಳಿಂದ ತಲಾ ಇಬ್ಬರು ಸೆನೆಟರ್‌ಗಳು ಇರುತ್ತಾರೆ. ಆದರೆ, 1/5ರಷ್ಟು ಜನಸಂಖ್ಯೆಯಿರುವ 25 ಅತಿ ಸಣ್ಣ ರಾಜ್ಯಗಳು ಯಾವುದೇ ಕಾನೂನು ಅಂಗೀಕಾರವಾಗದಂತೆ ತಡೆಯಬಲ್ಲವು. 2022ರವರೆಗೆ ಡೆಮಾಕ್ರಟಿಕ್ ಮತ್ತು ರಿಪಬ್ಲಿಕನ್ ಪಕ್ಷದ ಸಮಾನ ಸಂಖ್ಯೆಯ ಸೆನೆಟರ್‌ಗಳಿದ್ದರು. ಆದರೆ, ಡೆಮಾಕ್ರಟ್ ಸದಸ್ಯರು ದೇಶದ ಜನಸಂಖ್ಯೆಯಲ್ಲಿ ಶೇ.56.5ರಷ್ಟು (ರಿಪಬ್ಲಿಕನ್ ಪಕ್ಷಕ್ಕಿಂತ ಶೇ.13 ಅಧಿಕ) ಮಂದಿಯನ್ನು ಪ್ರತಿನಿಧಿಸುತ್ತಿದ್ದರು. ಜಪಾನ್ ಮತ್ತು ಅಮೆರಿಕದಲ್ಲಿ ನಡೆದ ಸಂಶೋಧನೆ ಪ್ರಕಾರ ತಲಾ ಹೆಚ್ಚು ಸಂಸದರಿದ್ದರೆ, ಹೆಚ್ಚು ಅನುದಾನ ಲಭ್ಯವಾಗುತ್ತದೆ. ಆಡಳಿತ ಸಂಯೋಜನೆ ಯಾರು ಇರಬಹುದು ಮತ್ತು ಇದು ರಾಜ್ಯಗಳಿಗೆ ಕೇಂದ್ರ ಕೊಡಮಾಡುವ ಅನುದಾನದ ಮೇಲೆ ಹೇಗೆ ಪರಿಣಾಮ ಬೀರಲಿದೆ? ಅಮೆರಿಕದಲ್ಲಿ ಎರಡು ಪಕ್ಷಗಳು ಸ್ಪರ್ಧಿಸುತ್ತವೆ. ಆದರೆ, ಇಂಡಿಯಾ ಸಾಂಸ್ಕೃತಿಕ-ಸಾಮಾಜಿಕ ಮತ್ತು ಭಾಷಾ ವೈವಿಧ್ಯ ಇರುವ ದೇಶ. ಉತ್ತರ ಭಾರತದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಎದುರಾಳಿಗಳಾಗಿದ್ದರೆ, ದಕ್ಷಿಣ ಭಾರತದಲ್ಲಿ ಪರಿಸ್ಥಿತಿ ಭಿನ್ನವಾಗಿದೆ. ಸೀಮಾನಿರ್ಣಯ ನಾಗರಿಕರನ್ನು ಸಬಲಗೊಳಿಸುವ ಸರಳ ಪ್ರಕ್ರಿಯೆಯಲ್ಲ; ಬದಲಾಗಿ, ಕೆಲವು ರಾಜಕೀಯ ಪಕ್ಷಗಳಿಗೆ ಬಲ ತುಂಬುವ ಪ್ರಕ್ರಿಯೆ. ಸರಕಾರದ ಇತ್ತೀಚಿನ ಹೇಳಿಕೆಗಳ ಪ್ರಕಾರ, ಸಂಸದ ಸ್ಥಾನಗಳ ಸಂಖ್ಯೆ 753ಕ್ಕೆ ಹೆಚ್ಚಳಗೊಳ್ಳಲಿದೆ. ತಮಿಳುನಾಡು, ಆಂಧ್ರ-ತೆಲಂಗಾಣ ಮತ್ತು ಕೇರಳದ ಸಂಸದರ ಸಂಖ್ಯೆ 101ರಿಂದ 107(ಶೇ.6 ಹೆಚ್ಚಳ), ಕರ್ನಾಟಕ ಸೇರಿದಂತೆ ದಕ್ಷಿಣ ರಾಜ್ಯಗಳ ಸಂಸದ ಸ್ಥಾನ 129ರಿಂದ 143(ಶೇ.11 ಅಧಿಕ)ಕ್ಕೆ ಹೆಚ್ಚಲಿದೆ. 2019ರ ಚುನಾವಣೆಯಲ್ಲಿ 101 ಸ್ಥಾನಗಳಲ್ಲಿ ಬಿಜೆಪಿ 5ರಲ್ಲಿ ಮಾತ್ರ ಗೆಲುವು ಸಾಧಿಸಿತ್ತು. ಪ್ರತಿಯಾಗಿ ಉತ್ತರಪ್ರದೇಶ, ಬಿಹಾರ, ಮಧ್ಯಪ್ರದೇಶ, ರಾಜಸ್ಥಾನದಲ್ಲಿ ಸಂಸದ ಸ್ಥಾನಗಳ ಸಂಖ್ಯೆ 174ರಿಂದ 284ಕ್ಕೆ ಹೆಚ್ಚಲಿದೆ(ಶೇ.63 ಹೆಚ್ಚಳ). ಈ ರಾಜ್ಯಗಳಲ್ಲಿ ಎನ್‌ಡಿಎ 156 ಸ್ಥಾನಗಳಲ್ಲಿ ಗೆದ್ದಿತ್ತು(ಶೇ.90ರಷ್ಟು ಸಾಧನೆ). ಸೀಮಾ ನಿರ್ಣಯದ ಬಳಿಕ ಇದೇ ಸಾಧನೆ ಮುಂದುವರಿದಲ್ಲಿ ಈ ರಾಜ್ಯಗಳಿಂದ 255 ಸ್ಥಾನಗಳಲ್ಲಿ ಗೆಲ್ಲಬಹುದು. ಇದು ಬಹುಮತವಾದ 377ಕ್ಕೆ ಹತ್ತಿರದ ಸಂಖ್ಯೆ.

ಸಂಸತ್ತಿನಲ್ಲಿ ಪ್ರಾತಿನಿಧ್ಯದ ಅನುಪಾತವನ್ನು ಬದಲಿಸುವ ಅಗತ್ಯವಿಲ್ಲ. ಇದು ದಕ್ಷಿಣದ ರಾಜ್ಯಗಳ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಿದೆ. ರಾಜ್ಯಸಭೆಗೆ ಕೂಡ ಕಡಿಮೆ ಜನಸಂಖ್ಯೆಯ ರಾಜ್ಯಗಳಿಗೆ ಹೆಚ್ಚು ಸದಸ್ಯರನ್ನು ಕೊಡಬೇಕಿದೆ. 1971ರ ಜನಸಂಖ್ಯೆಯನ್ನೇ ಆಧಾರವಾಗಿ ಬಳಸಿಕೊಳ್ಳಬೇಕು. ಇದು ಇನ್ನೆರಡು ದಶಕ ಮುಂದುವರಿದರೂ, ಪ್ರಳಯವೇನೂ ಸಂಭವಿಸುವುದಿಲ್ಲ. ಜನಸಂಖ್ಯೆಗೆ ಅನುಗುಣವಾಗಿ ರಾಜ್ಯಸಭೆಯ ಸದಸ್ಯತ್ವವನ್ನು ನಿರ್ಧರಿಸಬಾರದು. ರಾಜ್ಯಸಭೆಯ ಸ್ಥಾನಗಳನ್ನು ಸದ್ಯಕ್ಕೆ ತಡೆಹಿಡಿಯಬೇಕು. ರಾಜ್ಯಸಭೆಯ ಸ್ಥಾನಗಳಿಗೆ ಸಂಬಂಧಿಸಿದಂತೆ ಸಂವಿಧಾನದಲ್ಲಿ ಯಾವುದೇ ಉಲ್ಲೇಖವಿಲ್ಲ. ಲೋಕಸಭೆಯಲ್ಲಿ ಸೀಮಾ ನಿರ್ಧಾರಕ್ಕೆ ಅನುಗುಣವಾಗಿ ರಾಜ್ಯಸಭೆಯ ಸ್ಥಾನಗಳ ಮರುಹಂಚಿಕೆ ಮಾಡಬೇಕೆಂದಿಲ್ಲ. ಉದ್ದೇಶಿತ ಸೀಮಾನಿರ್ಧಾರದ ಬಳಿಕವೂ ಹೆಚ್ಚು ಮತ್ತು ಕಡಿಮೆ ಜನಸಂಖ್ಯೆಯ ರಾಜ್ಯಗಳು ಇರುವುದನ್ನು ತಪ್ಪಿಸಲಾಗದು. ಎಲ್ಲ ವರ್ಗದವರಿಗೆ ಪ್ರಾತಿನಿಧ್ಯ ಸಿಕ್ಕಿದೆಯೇ ಎನ್ನುವುದು ಮುಖ್ಯವಾಗುತ್ತದೆ. ನಮ್ಮ ಉದ್ದೇಶ ಉತ್ತಮ ಆರ್ಥಿಕತೆ, ರಾಜನೀತಿ ಮತ್ತು ಸಮಾಜದ ನಿರ್ಮಾಣ. ಈ ದಿಕ್ಕಿನಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸು ತ್ತಿರುವ ರಾಜ್ಯಗಳಿಗೆ ಶಿಕ್ಷೆ ನೀಡುವುದು ಉತ್ತಮ ರಾಜನೀತಿ ಆಗುವುದಿಲ್ಲ.

ಮುಂದಿನ ಜನಗಣತಿಯನ್ನು ಆಧರಿಸಿ ಲೋಕಸಭೆಯ ಸ್ಥಾನಗಳನ್ನು ಹೆಚ್ಚಿಸುವ ಕುರಿತು ಚರ್ಚೆ ನಡೆಯುತ್ತಿದೆ.

2014ರ ಬಳಿಕ ರಾಷ್ಟ್ರೀಯ-ಆರ್ಥಿಕ ಕೇಂದ್ರೀಕರಣ ತುರಿಯಾವಸ್ಥೆ ಮುಟ್ಟಿದೆ. ಬಿಜೆಪಿ ಡಬಲ್ ಇಂಜಿನ್ ಸರಕಾರ ಎಂದು ಆಮಿಷ ಒಡ್ಡುತ್ತ ನಡೆದಿದೆ. ದಕ್ಷಿಣ ರಾಜ್ಯಗಳದ್ದು ಕೆಲವು ಸ್ಥಾನ ಕಳೆದುಕೊಳ್ಳುವ ಆತಂಕ ಮಾತ್ರವಲ್ಲ; ಹಿಂದಿ ಭಾಷಿಕರಲ್ಲದವರಿಗೆ ಪ್ರಧಾನಿ ಸ್ಥಾನ ಮರೀಚಿಕೆಯಾಗಲಿದೆ. ಸೀಮಾ ನಿರ್ಣಯದಿಂದ ಹೆಚ್ಚು ಲಾಭ ಆಗುವುದು ಉತ್ತರಪ್ರದೇಶಕ್ಕೆ; ಅದರ ಸಂಖ್ಯಾಬಲ 80ರಿಂದ 109ಕ್ಕೆ ಹೆಚ್ಚಲಿದೆ. ಉತ್ತರ ಭಾರತದಲ್ಲಿ ಬಿಜೆಪಿ ಪ್ರಾಬಲ್ಯ ಗಳಿಸಿದೆ; ಒಂದು ವೇಳೆ ದಕ್ಷಿಣದ ರಾಜ್ಯಗಳು ಬಿಜೆಪಿಯೊಟ್ಟಿಗೆ ಜೋಡಿ ಮಾಡಿಕೊಂಡರೂ, ಅವುಗಳ ಚೌಕಾಸಿ ಸಾಮರ್ಥ್ಯ ಕುಸಿಯುತ್ತದೆ. ಜೆಡಿಎಸ್ ಭವಿಷ್ಯ ಸಂಕಷ್ಕಕ್ಕೆ ಸಿಲುಕಲಿದೆ. ಸೀಮಾ ನಿರ್ಣಯ ಪ್ರಕ್ರಿಯೆಯನ್ನು ನಿಲ್ಲಿಸಲು ಸಾಧ್ಯವಿಲ್ಲ. ಅದರ ನಕಾರಾತ್ಮಕ ಪರಿಣಾಮಗಳನ್ನು ಕಡಿಮೆ ಮಾಡಲು ಪ್ರಯತ್ನಿಸಬೇಕಿದೆ. ಕಳೆದ ಎರಡು ಲೋಕಸಭೆ ಚುನಾವಣೆಗಳಲ್ಲಿ ಬಿಜೆಪಿ ಭಾರೀ ಗೆಲುವು ಸಾಧಿಸಿದೆ. ಫರ್ಸ್ಟ್ ಪಾಸ್ಟ್ ದ ಪೋಸ್ಟ್ ವ್ಯವಸ್ಥೆಯಿಂದಾಗಿ ಮತ ಗಳಿಕೆ ಮತ್ತು ಸ್ಥಾನ ಗಳಿಕೆ ನಡುವೆ ಹೊಂದಾಣಿಕೆ ಇರುವುದಿಲ್ಲ. ಬಿಜೆಪಿ 2014ರಲ್ಲಿ ಶೇ.31ರಷ್ಟು ಮತಗಳಿಂದ 282 ಸ್ಥಾನ ಗಳಿಸಿತ್ತು. 2019ರಲ್ಲಿ ಶೇ.37 ಮತಗಳಿಕೆಯಿಂದ 303 ಸ್ಥಾನ ಗಿಟ್ಟಿಸಿತು. ದಾಮಾಷಾ ಪ್ರಾತಿನಿಧಿತ್ವ ವ್ಯವಸ್ಥೆ ಇದ್ದಿದ್ದರೆ, ಸ್ಥಾನ ಗಳಿಕೆ ಪ್ರಮಾಣ ಹೊಂದಾಣಿಕೆ ಆಗುತ್ತಿತ್ತು. ಚುನಾವಣೆ ವ್ಯವಸ್ಥೆಯನ್ನು ಬದಲಿಸಲು ಸಾಧ್ಯವಿಲ್ಲ. ವಿವೇಚನಾ ವೆಚ್ಚ ಮತ್ತು ಹಣಕಾಸು ವರ್ಗಾವಣೆಗಳು ಒಕ್ಕೂಟ ತತ್ವಕ್ಕೆ ಅನುಗುಣವಾಗಿರಬೇಕು. ರಾಜ್ಯಸಭೆ ಸದಸ್ಯರನ್ನು ಜನ ಆಯ್ಕೆ ಮಾಡುವುದಿಲ್ಲ ಮತ್ತು ಅವರ ಸಂಖ್ಯೆ ಜನಸಂಖ್ಯೆಗೆ ಅನುಗುಣವಾಗಿರುತ್ತದೆ. ಅವರು ಅದೇ ರಾಜ್ಯದ ನಿವಾಸಿಗಳಾಗಿರಬೇಕು ಎಂಬ ಶರತ್ತು ಕೂಡ ಇಲ್ಲ.

ಭಾರತದಲ್ಲಿ ಸಂಸದನೊಬ್ಬ ಅಂದಾಜು 25 ಲಕ್ಷ ನಾಗರಿಕರನ್ನು ಪ್ರತಿನಿಧಿಸುತ್ತಾನೆ. ಅಮೆರಿಕದಲ್ಲಿ ಇದು 7 ಲಕ್ಷ, ಪಾಕಿಸ್ತಾನ 6 ಲಕ್ಷ ಹಾಗೂ ಬಾಂಗ್ಲಾದಲ್ಲಿ 5 ಲಕ್ಷ ಇದೆ. ದೇಶದಲ್ಲಿ 4,126 ಶಾಸಕರು, 543 ಸಂಸದರು ಮತ್ತು 245 ರಾಜ್ಯಸಭೆ ಸದಸ್ಯರಿದ್ದಾರೆ. 1,000ಕ್ಕೂ ಅಧಿಕ ಮುನ್ಸಿಪಲ್ ಕೌನ್ಸಿಲ್, ಕಾರ್ಪೊರೇಷನ್‌ಗಳಿದ್ದು, ಇವುಗಳಲ್ಲಿ 50ರಿಂದ 100 ವಾರ್ಡ್ ಗಳು, ಅಂದಾಜು 2,38,000 ಪಂಚಾಯತ್‌ಗಳು(ಒಂದು ಪಂಚಾಯತ್‌ನಲ್ಲಿ 5ರಿಂದ 30 ಸದಸ್ಯರು) ಇದ್ದಾರೆ.

ನಮ್ಮ ರಾಜಕೀಯ ವ್ಯವಸ್ಥೆ ಕೆಲವು ರಾಜ್ಯಗಳ ಪರವಾಗಿದೆ. ಆದರೆ, ಅಮೆರಿಕದಲ್ಲಿ ಪ್ರತಿಯೊಂದು ರಾಜ್ಯಕ್ಕೆ ಇಬ್ಬರು ಸೆನೆಟರ್‌ಗಳು ಇರುತ್ತಾರೆ. ಎರಡು ಪಕ್ಷಗಳ ರಾಜಕೀಯ ವ್ಯವಸ್ಥೆಯಲ್ಲಿ ಇದು ಸುಲಭ. ಆದರೆ, ಭಾರತದಂಥ ಬೇರೆ ಬೇರೆ ರಾಜ್ಯಗಳಲ್ಲಿ ವಿವಿಧ ಪಕ್ಷಗಳು ಪ್ರಬಲವಾಗಿರುವ ವ್ಯವಸ್ಥೆಯಲ್ಲಿ ಸೂಕ್ತವಲ್ಲದ ಪ್ರಾತಿನಿಧ್ಯದಿಂದ ಆಯ್ದ ಪಕ್ಷಗಳನ್ನು ಬಲಗೊಳಿಸಿದಂತೆ ಆಗಲಿದೆ. ದಕ್ಷಿಣ ಮತ್ತು ಈಶಾನ್ಯ ರಾಜ್ಯಗಳಲ್ಲಿ ಬೇರೆಯದೇ ರಾಜಕೀಯ ಸಂಸ್ಕೃತಿಯಿರುವುದರಿಂದ, ಎಚ್ಚರಿಕೆಯಿಂದ ಹೆಜ್ಜೆ ಇರಿಸಬೇಕಾಗುತ್ತದೆ.

ಅನುಪಾತವನ್ನು ಮರುಸ್ಥಾಪಿಸಲು ಸೀಮಾನಿರ್ಣಯ ಒಂದು ಮಾರ್ಗ. ಅದನ್ನು ಈ ಹಿಂದೆ ಬಳಸಿಕೊಳ್ಳಲಾಗಿದೆ. ಆಯೋಗವನ್ನು ಈ ಹಿಂದೆ 4 ಬಾರಿ ಸ್ವಾಯತ್ತ ಸಂಸ್ಥೆಯಾಗಿ ರಚಿಸಲಾಗಿದೆ. 1976ರಲ್ಲಿ ತುರ್ತು ಪರಿಸ್ಥಿತಿ ವೇಳೆಯಲ್ಲಿ ಸಂಸದರ ಸಂಖ್ಯೆಯನ್ನು ತಡೆಹಿಡಿಯಲಾಯಿತು. 2001ರಲ್ಲಿ ಸೀಮಾ ನಿರ್ಧಾರವನ್ನು ಮುಂದೆ ಹಾಕಲಾಯಿತು. ಕುಟುಂಬ ಯೋಜನೆ ಕಾರ್ಯಕ್ರಮದಿಂದಾಗಿ ಜನಸಂಖ್ಯೆಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದ ರಾಜ್ಯಗಳನ್ನು ಪುರಸ್ಕರಿಸುವುದು ಉದ್ದೇಶ. ಫೆಬ್ರವರಿ 2002ರಲ್ಲಿ ಸಂವಿಧಾನದ 82ನೇ ತಿದ್ದುಪಡಿ ಕಾಯ್ದೆಯನ್ನು ಪರಿಚಯಿಸಲಾಯಿತು. ಅದು 2026ರವರೆಗೆ ಸಂಸದರ ಸಂಖ್ಯೆಯನ್ನು ತಡೆ ಹಿಡಿಯಿತು. 2021ರ ಜನಗಣತಿ ನಡೆದಿಲ್ಲ(2024ರಲ್ಲಿ ಜನಗಣತಿ ನಡೆದರೆ, ವಿವರಗಳು 2026ರಲ್ಲಿ ಲಭ್ಯವಾಗಲಿವೆ). ಅದಕ್ಕಿಂತ ಮೊದಲು ಸೀಮಾ ನಿರ್ಧಾರ ಮಾಡಬಹುದು. ಆದರೆ, ಸೀಮಾ ನಿರ್ಧಾರದ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. 1971ರಿಂದ 2011ರ ಅವಧಿಯಲ್ಲಿ ರಾಜಸ್ಥಾನದ ಜನಸಂಖ್ಯೆ 25 ದಶಲ್ಷಕದಿಂದ 68 ದಶಲಕ್ಷಕ್ಕೆ ಹಾಗೂ ಕೇರಳದ ಜನಸಂಖ್ಯೆ 21 ದಶಲ್ಷಕದಿಂದ 33 ದಶಲಕ್ಷಕ್ಕೆ ಹೆಚ್ಚಳಗೊಂಡಿದೆ. ಅದೇ ರೀತಿ 2019ರಲ್ಲಿ ಉತ್ತರಪ್ರದೇಶದ ಪ್ರತಿಯೊಬ್ಬ ಸಂಸದ 30 ಲಕ್ಷ ನಾಗರಿಕರನ್ನು ಪ್ರತಿನಿಧಿಸಿದರೆ, ಲಕ್ಷದ್ವೀಪದ ಸಂಸದ 55,000 ಜನರನ್ನು ಪ್ರತಿನಿಧಿಸಿದ್ದ. ಒಂದು ವೇಳೆ ಸಂಸದರ ಸ್ಥಾನ 753ಕ್ಕೆ ಹೆಚ್ಚಳಗೊಂಡರೆ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಮತ್ತು ಕೇರಳದ ಸಂಸದರ ಸಂಖ್ಯೆ ಶೇ.6, ಕರ್ನಾಟಕದ ಸಂಸದರ ಸಂಖ್ಯೆ ಶೇ.11ರಷ್ಟು ಹೆಚ್ಚುತ್ತದೆ; ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶ, ರಾಜಸ್ಥಾನದ ಸಂಸದರ ಸಂಖ್ಯೆ ಶೇ.63ರಷ್ಟು ಹೆಚ್ಚಲಿದೆ. ಸೀಮಾ ನಿರ್ಧಾರ ದಕ್ಷಿಣದ ರಾಜ್ಯಗಳಿಗೆ ಕಂಟಕವಾಗಿ ಪರಿಣಮಿಸಲಿದೆ. ಜನಸಂಖ್ಯೆಯನ್ನು ಕಡಿಮೆಗೊಳಿಸಿದ ರಾಜ್ಯಗಳಿಗೆ ಶಿಕ್ಷೆ ವಿಧಿಸಿದಂತೆ ಆಗಲಿದೆ. ಸಂಸದರ ಸಂಖ್ಯೆ ಹೆಚ್ಚಳವನ್ನು ನಿರ್ಧರಿಸಲು ಜನಸಂಖ್ಯೆಯೊಂದೇ ಆಧಾರವಾಗಬಾರದು. ಭೌಗೋಳಿಕ ನಿರ್ಣಾಯಕತೆ, ಆರ್ಥಿಕ ಉತ್ಪಾದಕತೆ, ಭಾಷಾ ಚರಿತ್ರೆ ಮತ್ತು ನ್ಯಾಯಬದ್ಧತೆ ಅಳತೆಗೋಲಾಗಬೇಕು. ಉದಾಹರಣೆಗೆ, ಬಿಹಾರ ಹೆಚ್ಚು ಜನಸಂಖ್ಯೆ ಹೊಂದಿದ್ದರೂ, ಸಿಕ್ಕಿಂನ ಧ್ವನಿ ಸಂಸತ್ತಿನಲ್ಲಿ ಕೇಳಿಸಬೇಕು. ಸೀಮಾ ನಿರ್ಣಯದ ಬಳಿಕ ಹಣಕಾಸು ಹಂಚಿಕೆ ಬಗ್ಗೆ ಮರುಚಿಂತನೆ ನಡೆಯಬೇಕು.

ಚುನಾವಣೆ ವ್ಯವಸ್ಥೆಯಲ್ಲಿ ಸುಧಾರಣೆ ಆಗಿ, ಒಕ್ಕೂಟ ತತ್ವವನ್ನು ಉತ್ತೇಜಿಸಬೇಕು. ರಾಜ್ಯಗಳ ಅಭಿಪ್ರಾಯಕ್ಕೆ ವೇದಿಕೆ ಹಾಗೂ ಅವಕಾಶ ಸಿಗಬೇಕು. ರಾಜ್ಯಸಭೆಯಲ್ಲಿ ದೊಡ್ಡ/ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಅಧಿಕ ಸ್ಥಾನ ನೀಡಲಾಗಿದೆ. ಪ್ರತಿಯೊಂದು ರಾಜ್ಯವೂ ಸಮ ಸಂಖ್ಯೆಯ ಸದಸ್ಯರನ್ನು ಕಳಿಸಲು ಅನುವಾಗುವಂತೆ ಸಂವಿಧಾನಕ್ಕೆ ತಿದ್ದುಪಡಿ ತರಬೇಕು. ರಾಜ್ಯಸಭೆಗೂ ನೇರ ಚುನಾವಣೆ ನಡೆಯಬೇಕು. ಆ ರಾಜ್ಯದ ನಿವಾಸಿಗೆ ಮಾತ್ರ ಪ್ರತಿನಿಧಿಸುವ ಅವಕಾಶ ನೀಡಬೇಕು. ವಿಧಾನಸಭೆ ಚುನಾವಣೆಗೂ ದಾಮಾಷಾ ಪ್ರಾತಿನಿಧ್ಯವನ್ನು ಪರಿಗಣಿಸಬಹುದು. ಆಸ್ಟ್ರೇಲಿಯದಲ್ಲಿ ಕೆಳಮನೆ ಚುನಾವಣೆಯಲ್ಲಿ ಪರ್ಯಾಯ ಆಯ್ಕೆ ಮತಪತ್ರದಲ್ಲಿ ಅಭ್ಯರ್ಥಿಗಳಿಗೆ ರ್ಯಾಂಕ್ ನೀಡುತ್ತಾರೆ. ಒಂದುವೇಳೆ ಅಭ್ಯರ್ಥಿ ಮೊದಲ ಸುತ್ತಿನಲ್ಲಿ ಬಹುಮತ ಪಡೆಯದಿದ್ದರೆ, ಅತಿ ದುರ್ಬಲ ಅಭ್ಯರ್ಥಿಯನ್ನು ಪಟ್ಟಿಯಿಂದ ತೆಗೆದುಹಾಕಿ, ಆತ ಪಡೆದ ಮತವನ್ನು ಹೆಚ್ಚು ಮತ ಪಡೆದ ಅಭ್ಯರ್ಥಿಗೆ ನೀಡಲಾಗುತ್ತದೆ. ಅಭ್ಯರ್ಥಿಯೊಬ್ಬನಿಗೆ ಸ್ಪಷ್ಟ ಬಹುಮತ ಸಿಗುವವರೆಗೆ ಇದು ಮುಂದುವರಿಯುತ್ತದೆ. ಫ್ರಾನ್ಸ್‌ನಲ್ಲಿ ರಾಷ್ಟ್ರೀಯ ಅಸೆಂಬ್ಲಿ ಚುನಾವಣೆಯಲ್ಲಿ ಜೋಡಿ ಮತಪತ್ರ ವ್ಯವಸ್ಥೆಯನ್ನು ಬಳಸಲಾಗುತ್ತದೆ. ಮೊದಲ ಸುತ್ತಿನಲ್ಲಿ ಯಾರೂ ಗೆಲುವು ಸಾಧಿಸದೆ ಇದ್ದಲ್ಲಿ, ಒಟ್ಟು ಮತದಲ್ಲಿ 1/8 ಭಾಗಕ್ಕಿಂತ ಹೆಚ್ಚು ಮತ ಪಡೆದವರು ಮಾತ್ರ ಎರಡನೇ ಸುತ್ತಿನಲ್ಲಿ ಉಳಿದುಕೊಳ್ಳುತ್ತಾರೆ. ಇಂಡಿಯಾದ ಫರ್ಸ್ಟ್ ಪಾಸ್ಟ್ ದ ಪೋಸ್ಟ್ ವ್ಯವಸ್ಥೆ ಶೀಘ್ರ ಫಲಿತಾಂಶ ನೀಡಬಹುದು. ಆದರೆ, ಹೆಚ್ಚು ಜನರನ್ನು ಪ್ರತಿನಿಧಿಸದವರು ಆಯ್ಕೆಯಾಗುವ ಸಾಧ್ಯತೆ ಇರುತ್ತದೆ.

ಹೆಚ್ಚು ರಾಜ್ಯಗಳ ಅಗತ್ಯವಿದೆ. ಅಮೆರಿಕದಲ್ಲಿ ಹೆಚ್ಚು ಜನರಿರುವ ರಾಜ್ಯ ಕ್ಯಾಲಿಫೋರ್ನಿಯಾದ ಜನಸಂಖ್ಯೆ 39 ದಶಲಕ್ಷ. ಇತರ ರಾಜ್ಯಗಳ ಸರಾಸರಿ ಜನಸಂಖ್ಯೆ 5ರಿಂದ 6 ಲಕ್ಷ. ಇಂಡಿಯಾದ 22 ರಾಜ್ಯ/ಕೇಂದ್ರಾಡಳಿತ ಪ್ರದೇಶಗಳು ಅದಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿವೆ. 1953ರಲ್ಲಿ ರಾಜ್ಯಗಳ ಪುನರ್‌ಸಂಘಟನೆ ಆಯೋಗವು 4 ಭಾಷಾ ರಾಜ್ಯಗಳು ಮತ್ತು 6 ಕೇಂದ್ರಾಡಳಿತ ಪ್ರದೇಶಗಳನ್ನು ಸೃಷ್ಟಿಸಿತು. ಅತಿ ದೊಡ್ಡ ರಾಜ್ಯವಾದ ಉತ್ತರ ಪ್ರದೇಶವನ್ನು ಆಳುವುದು ಕಷ್ಟ. ಸಣ್ಣ ಗಾತ್ರದ ರಾಜ್ಯಗಳಿದ್ದರೆ, ಉತ್ತರದ ಅತಿ ದೊಡ್ಡ ರಾಜ್ಯಗಳು ರಾಜಕೀಯದಲ್ಲಿ ಮೇಲುಗೈ ಸಾಧಿಸುವುದು ತಪ್ಪುತ್ತದೆ. ಮುಂದಿನ ಚುನಾವಣೆ ನಂತರ ನೂತನ ರಾಜ್ಯ ಪುನರ್‌ಸಂಘಟನಾ ಆಯೋಗವನ್ನು ರಚಿಸಿ, ಉದ್ದೇಶಿತ ನೂತನ ರಾಜ್ಯಗಳ ಸಾಮಾಜಿಕ-ಆರ್ಥಿಕ ಮತ್ತು ಆಡಳಿತಾತ್ಮಕ ಸಾಧ್ಯತೆಗಳನ್ನು ಪರಿಶೀಲಿಸಬೇಕು. ಉದಾಹರಣೆಗೆ, ಬುಂದೇಲ್ಖಂಡ, ಗೂರ್ಖಾಲ್ಯಾಂಡ್, ಜಮ್ಮು, ಸೌರಾಷ್ಟ್ರ, ವಿದರ್ಭ ಇತ್ಯಾದಿ. ನಮ್ಮಲ್ಲಿ ಸಾಕಷ್ಟು ಭಾಷಾ ರಾಜ್ಯಗಳಿವೆ; ಆಡಳಿತಾತ್ಮಕ ಕ್ಷಮತೆ ಮತ್ತು ಪ್ರಜಾಸತ್ತಾತ್ಮಕ ಉತ್ತರದಾಯಿತ್ವವನ್ನು ಹೆಚ್ಚಿಸಲು ರಾಜ್ಯಗಳನ್ನು ವಿಭಾಗಿಸಬೇಕು/ಮರುರೂಪಗೊಳಿಸಬೇಕು.

ದೇಶದಲ್ಲಿ 8,000ಕ್ಕೂ ಅಧಿಕ ನಗರ ವಸತಿ ಪ್ರದೇಶಗಳಿವೆ. ಆದರೆ, ಮೇಯರ್‌ಗಳ ಸಂಖ್ಯೆ ಹಲವು ನೂರು ಮಾತ್ರ. ಪ್ರತಿಯೊಂದು ನಗರದ ಮೇಯರ್‌ಗಳನ್ನು ನೇರ ಚುನಾವಣೆ ಮೂಲಕ ಆಯ್ಕೆ ಮಾಡಬೇಕು. ಅವರಿಗೆ ಸಂವಿಧಾನದ 74ನೇ ತಿದ್ದುಪಡಿ ಕಾಯ್ದೆ ನೀಡಿದ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ನೀಡಬೇಕು. ಸ್ಥಳೀಯ ಪ್ರಜಾಸತ್ತಾತ್ಮಕ ಪ್ರಾತಿನಿಧ್ಯವನ್ನು ವರ್ಧಿಸುವುದರಿಂದ, ಪ್ರಜಾಪ್ರಭುತ್ವ ಬಲಗೊಳ್ಳುತ್ತದೆ. ದಕ್ಷಿಣ ಹಾಗೂ ಈಶಾನ್ಯ ರಾಜ್ಯಗಳ ಆತಂಕ ನಿವಾರಣೆ ಆಗುತ್ತದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಋತ

contributor

Similar News