ಅಪರಾಧ ಕಾನೂನುಗಳ ಬದಲಾವಣೆಯೆಂಬ ಅಸಂಗತ ಪ್ರಕ್ರಿಯೆ

ಹೊಸ ಕಾಯ್ದೆ ಬದಲು ತಿದ್ದುಪಡಿ ಮೂಲಕ ಅಗತ್ಯ ಬದಲಾವಣೆ ಮಾಡಬಹುದಿತ್ತು. ಇದರಿಂದ ಸಂಸತ್ತು-ಶಾಸನಸಭೆಯಲ್ಲಿ ಅನಗತ್ಯ ಖರ್ಚು ಮತ್ತು ಸಮಯ ಉಳಿತಾಯ ಆಗುತ್ತಿತ್ತು; ರಾಜ್ಯ ಸರಕಾರಗಳು ಮಾಡಬೇಕಾದ ತಿದ್ದುಪಡಿಗಳನ್ನು ತಪ್ಪಿಸಬಹುದಿತ್ತು. ಸಂವಿಧಾನದ ೭ನೇ ಪರಿಚ್ಛೇದ ೩ನೇ ಪಟ್ಟಿಯಲ್ಲಿ ಐಪಿಸಿ/ಸಿಆರ್‌ಪಿಸಿ ಇದ್ದು, ಹೊಸ ಕಾಯ್ದೆಗಳನ್ನು ಅನ್ವಯಿಸಲು ಸಂವಿಧಾನಕ್ಕೆ ಇನ್ನೊಂದು ತಿದ್ದುಪಡಿ ತರಬೇಕಾಗುತ್ತದೆ. ಇದಕ್ಕೆ ಅರ್ಧದಷ್ಟು ರಾಜ್ಯಗಳ ಸಮ್ಮತಿ ಅಗತ್ಯವಿದೆ. ಇದು ಸುಲಭದ ಕೆಲಸವಲ್ಲ; ವಿಶೇಷವಾಗಿ ದಕ್ಷಿಣದ ರಾಜ್ಯಗಳ ಪ್ರತಿರೋಧ ಎದುರಾಗುತ್ತದೆ.

Update: 2023-08-25 05:07 GMT

ಇಂಡಿಯನ್ ದಂಡ ಸಂಹಿತೆ(ಐಪಿಸಿ)ಗೆ ‘ಭಾರತೀಯ ನ್ಯಾಯ ಸಂಹಿತಾ’, ಅಪರಾಧ ದಂಡ ಸಂಹಿತೆ(ಸಿಆರ್‌ಪಿಸಿ)ಗೆ ‘ನಾಗರಿಕ ಸುರಕ್ಷಾ ಸಂಹಿತೆ’ ಮತ್ತು ಇಂಡಿಯನ್ ಸಾಕ್ಷ್ಯ ಕಾಯ್ದೆ(ಐಇಎ)ಯನ್ನು ‘ಭಾರತೀಯ ಸಾಕ್ಷ್ಯ ಮಸೂದೆ’ ಎಂದು ಬದಲಿಸಿ, ಮೂರು ಮಸೂದೆಗಳು ಮಂಡನೆಯಾಗಿವೆ. ಮಸೂದೆಗಳನ್ನು ರಾಜ್ಯಸಭೆ ಸಭಾಧ್ಯಕ್ಷ ಜಗದೀಪ್ ಧನ್ಕರ್ ಗೃಹ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿಗೆ ಕಳಿಸಿದ್ದಾರೆ. ಈ ಸಮಿತಿಯ ಅಧ್ಯಕ್ಷ ಮಾಜಿ ಡಿಜಿಪಿ ಮತ್ತು ಸಂಸದ ಬ್ರಿಜ್‌ಲಾಲ್. ವರದಿ ನೀಡಲು ಮೂರು ತಿಂಗಳು ಕಾಲಾವಕಾಶ ನೀಡಲಾಗಿದೆ. ಪ್ರಾಯಶಃ ಚಳಿಗಾಲದ ಅಧಿವೇಶನದಲ್ಲಿ ಚರ್ಚೆಯ ಸಾಧ್ಯತೆ ಇದೆ.

ತಂತ್ರಜ್ಞಾನದ ಬೆಳವಣಿಗೆ ಹಾಗೂ ಸಾಮಾಜಿಕ ಬದಲಾವಣೆಗಳಿಗೆ ಅನುಗುಣವಾಗಿ ಕಾನೂನುಗಳ ಪುನರ್ವಿಮರ್ಶೆ ಆಗಬೇಕು ಎನ್ನುವುದಕ್ಕೆ ಪ್ರತಿಮಾತು ಇರಲಾರದು. ಆದರೆ, ನೋಟು ರದ್ದು, ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ವಿಧಿ ೩೭೦ನ್ನು ವಾಪಸ್ ಪಡೆಯುವ ದಿಢೀರ್ ತೀರ್ಮಾನದಂತೆ ಈ ಮಸೂದೆಗಳನ್ನು ಹಠಾತ್ತನೆ ಮಂಡಿಸಲಾಗಿದೆ. ಸಮಿತಿ ಕರಡು ಸಿದ್ಧಗೊಳಿಸಲು ಎರಡು ವರ್ಷ ತೆಗೆದುಕೊಂಡಿತು ಮತ್ತು ಸಮಿತಿಯಲ್ಲಿ ಪ್ರಾತಿನಿಧ್ಯ ಅಸಮರ್ಪಕವಾಗಿತ್ತು; ಕಾರ್ಯನಿರ್ವಹಣೆ ಪಾರದರ್ಶಕವಾಗಿರಲಿಲ್ಲ ಎಂದು ದೂರು ಇತ್ತು.

ಥಾಮಸ್ ಬ್ಯಾಬಿಂಗ್ಟನ್ ಮೆಕಾಲೆ ೧೮೩೫ರಲ್ಲಿ ಈಸ್ಟ್ ಇಂಡಿಯಾ ಕಂಪೆನಿಗೆ ಸಲ್ಲಿಸಿದ್ದ ಕರಡು, ೧೮೫೫ರಲ್ಲಿ ಇಂಡಿಯಾ ಪೀನಲ್ ಕೋಡ್ ಆಯಿತು. ಇದಕ್ಕೆ ಶಾಸನಸಭೆಯ ಅನುಮತಿ ಸಿಗಲಿಲ್ಲ. ೧೮೫೭ರಲ್ಲಿ ಸ್ವಾತಂತ್ರ್ಯ ಸಂಗ್ರಾಮ ಆರಂಭಗೊಂಡ ಬಳಿಕ ಬ್ರಿಟಿಷ್ ಸರಕಾರ ಆಡಳಿತವನ್ನು ತನ್ನ ಕೈಗೆ ತೆಗೆದುಕೊಂಡಿತು. ೧೮೬೧ರಲ್ಲಿ ಐಪಿಸಿ ಮತ್ತು ೧೮೮೨ರಲ್ಲಿ ಸಿಆರ್‌ಪಿಸಿ ಜಾರಿಗೊಂಡಿತು. ಸ್ವಾತಂತ್ರ್ಯ ಸಂಗ್ರಾಮವನ್ನು ಹತ್ತಿಕ್ಕಲು ಈ ಕಾಯ್ದೆಗಳನ್ನು ಎಗ್ಗಿಲ್ಲದೆ ಬಳಸಲಾಯಿತು. ೧೯೭೩ರಲ್ಲಿ ೪೧ನೇ ನ್ಯಾಯಾಂಗ ಆಯೋಗದ ಶಿಫಾರಸಿನನ್ವಯ ತಿದ್ದುಪಡಿ ತರಲಾಯಿತು.

‘ಅಪರಾಧ ನ್ಯಾಯ ವ್ಯವಸ್ಥೆಯನ್ನು ವಸಾಹತುಶಾಹಿಯಿಂದ ಮುಕ್ತಗೊಳಿಸುವ ಪ್ರಯತ್ನ’ ಎಂದು ನೂತನ ಮಸೂದೆಗಳನ್ನು ಸಮರ್ಥಿಸಿಕೊಳ್ಳಲಾಗುತ್ತಿದೆ. ದಂಡ ಸಂಹಿತೆಯ ಹಲವು ಕಲಂಗಳು ‘ವಿಕ್ಟೋರಿಯನ್ ನೈತಿಕತೆಯನ್ನು ಆಧರಿಸಿವೆ’ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ನ್ಯಾಯಾಲಯದ ತೀರ್ಪುಗಳು ಹಾಗೂ ಶಾಸಕಾಂಗ ತಂದ ತಿದ್ದುಪಡಿಗಳಿಂದಾಗಿ, ಐಪಿಸಿ/ಸಿಆರ್‌ಪಿಸಿ ಸಾಕಷ್ಟು ಬದಲಾಗಿವೆ. ಹೊಸ ಕಾಯ್ದೆಯಲ್ಲಿ ಐಪಿಸಿಯ ೧೭೫ ವಿಧಿಗಳಿಗೆ ತಿದ್ದುಪಡಿ, ೮ ಹೊಸ ವಿಧಿಗಳ ಸೇರ್ಪಡೆ ಮತ್ತು ೨೨ ವಿಧಿಗಳನ್ನು ವಜಾಗೊಳಿಸಲಾಗಿದೆ. ಮೂರು ಮಸೂದೆಗಳಿಗೆ ಮುನ್ನೂರಕ್ಕೂ ಅಧಿಕ ಬದಲಾವಣೆ ತರುವ ಉದ್ದೇಶವಿದೆ.

ಗೊಂದಲಮಯ, ಅಸ್ಪಷ್ಟ

ನೂತನ ಕಾಯ್ದೆಗಳಲ್ಲಿ ಹಲವು ಸಕಾರಾತ್ಮಕ ಅಂಶಗಳಿವೆ. ಅದರೊಟ್ಟಿಗೆ ಹಲವು ನಕಾರಾತ್ಮಕ, ಗೊಂದಲಕರ ಹಾಗೂ ಅಸ್ಪಷ್ಟ ಅಂಶಗಳು ಇವೆ.

* ‘ದೇಶದ್ರೋಹ’ವನ್ನು ತೆಗೆದುಹಾಕಲಾಗಿದೆ. ಆದರೆ, ಹೊಸದಾಗಿ ಪರಿಚಯಿಸಿರುವ ಖಂಡ ೧೫೦ ಇನ್ನಷ್ಟು ಕಠೋರ ಶಿಕ್ಷೆ ಹಾಗೂ ಗೊಂದಲಮಯವಾಗಿರುವ ‘ವಿದ್ರೋಹ ಚಟುವಟಿಕೆ’ಯನ್ನು ಪರಿಚಯಿಸಿದೆ. ‘ಬುಡಮೇಲು ಕೃತ್ಯ ಮತ್ತು ಶಸ್ತ್ರಸಜ್ಜಿತ ದಂಗೆ ಚಟುವಟಿಕೆಗಳು’ ಮತ್ತು ದೇಶದ ‘ಸಾರ್ವಭೌಮತ್ವ, ಏಕತೆ ಮತ್ತು ಸಮಗ್ರತೆಗೆ ಧಕ್ಕೆ’ ಪದಗಳಿವೆ. ವಿಭಾಗ ೧೯೫(ಐಪಿಸಿಯ ವಿಭಾಗ ೧೫೩ಬಿಗೆ ಸಮವಾದದ್ದು) ‘ದೇಶದ ಸಾರ್ವಭೌಮತ್ವ, ಏಕತೆ ಮತ್ತು ಸಮಗ್ರತೆಯನ್ನು ವಿಪತ್ತಿಗೆ ಸಿಲುಕಿಸುವ ಸುಳ್ಳು ಅಥವಾ ತಪ್ಪು ದಾರಿಗೆಳೆಸುವ ಮಾಹಿತಿಯ ಸೃಷ್ಟಿ ಮತ್ತು ಪ್ರಕಟನೆ’ಯನ್ನು ಶಿಕ್ಷಾರ್ಹಗೊಳಿಸುತ್ತದೆ. ಈ ಪದಗಳನ್ನು ಹಲವು ರೀತಿ ವ್ಯಾಖ್ಯಾನಿಸಬಹುದು.

* ವಿವಾಹದೊಳಗೆ ಅತ್ಯಾಚಾರದ ಉಲ್ಲೇಖವಿಲ್ಲ.

* ಮರಣದಂಡನೆಯನ್ನು ವಿಧಿಸುವ ಮುನ್ನ ಇನ್ನಷ್ಟು ವಿಚಾರಣೆಯ ವಿವೇಚನಾಧಿಕಾರವನ್ನು ಹೈಕೋರ್ಟ್‌ಗಳಿಗೆ ನೀಡಲಾಗಿದೆ. ‘ಅಪರೂಪದಲ್ಲಿ ಅಪರೂಪ’ ಪ್ರಕರಣಗಳಲ್ಲಿ ಮಾತ್ರ ಮರಣದಂಡನೆ ವಿಧಿಸಬಹುದು ಎಂದು ಸುಪ್ರೀಂಕೋರ್ಟ್ ಹೇಳಿದೆ. ೧೯೭೬ರ ನಂತರ ೮೫ಕ್ಕೂ ಅಧಿಕ ದೇಶಗಳು ಗಲ್ಲುಶಿಕ್ಷೆಯನ್ನು ರದ್ದುಗೊಳಿಸಿವೆ.

* ವಿಚಾರಣೆ ಮುಗಿದ ೩೦ ದಿನದೊಳಗೆ ತೀರ್ಪು ಪ್ರಕಟವಾಗಬೇಕೆಂಬ ನಿಯಮದಿಂದ ನ್ಯಾಯಾಲಯಗಳ ಮೇಲೆ ಒತ್ತಡ ಹೆಚ್ಚಬಹುದು. ಅಸಮರ್ಪಕ ತೀರ್ಪಿನ ಸಾಧ್ಯತೆಯೂ ಇದೆ.

* ಸ್ಕಾಟ್ಲೆಂಡ್‌ನಲ್ಲಿ ಆರೋಪ ಹೊರಿಸದೆ ಬಂಧನದಲ್ಲಿ ಇರಿಸಿಕೊಳ್ಳಬಹುದಾದ ಸಮಯ ಆರು ಗಂಟೆ ಮಾತ್ರ. ನಮ್ಮಲ್ಲಿ ೬೦ ದಿನ. ಅದನ್ನು ಮಸೂದೆ ೯೦ ದಿನಕ್ಕೆ ಹೆಚ್ಚಿಸಲು ಮುಂದಾಗಿದೆ.

* ಪೊಲೀಸರಿಗೆ ‘ವಿವೇಚನಾಧಿಕಾರ’ ನೀಡುತ್ತದೆ. ಕೈಕೋಳ ತೊಡಿಸುವುದು, ವಿಶೇಷ ಪ್ರಕರಣಗಳಲ್ಲಿ ಸೂರ್ಯ ಮುಳುಗಿದ ಬಳಿಕ ಮಹಿಳೆಯರ ಬಂಧನ ಮತ್ತು ವ್ಯಕ್ತಿಯನ್ನು ಬಂಧಿಸುವಾಗ ಬಲಪ್ರಯೋಗ/ಅಗತ್ಯ ಮಾರ್ಗ ಬಳಸಲು ವಿಶೇಷಾಧಿಕಾರ ಸಿಗಲಿದೆ. ಇದು ಎನ್‌ಕೌಂಟರ್ ಮತ್ತು ಹಿಂಸೆಗೆ ದಾರಿ ಮಾಡಿಕೊಡಲಿದೆ. ಡಿ.ಕೆ.ಬಸು ವಿ/ಎಸ್ ಪಶ್ಚಿಮ ಬಂಗಾಳ ಸರಕಾರ(೧೯೯೬) ಪ್ರಕರಣದಲ್ಲಿ ‘ಕೋಳ ತೊಡಿಸಬಾರದು’ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಪೊಲೀಸ್ ಕಸ್ಟಡಿಯಲ್ಲಿ ೧೫ಕ್ಕೂ ಹೆಚ್ಚು ದಿನ ಇರಿಸಿಕೊಳ್ಳಲು ಅವಕಾಶ ಕೊಟ್ಟಿರುವುದು ದುರ್ಬಳಕೆಯಾಗುವ ಸಾಧ್ಯತೆಯಿದೆ.

* ‘ಗುಂಪು ಹತ್ಯೆ’ ಮತ್ತು ‘ಸಂಘಟಿತ ಅಪರಾಧ’ಗಳಿಗೆ ಹೊಸ ವಿಭಾಗ ರಚಿಸಲಾಗಿದೆ; ಆದರೆ, ‘ದ್ವೇಷ ಭಾಷಣ’ವನ್ನು ಹೊರಗಿಡಲಾಗಿದೆ.

* ಉದ್ದೇಶಿತ ಮಸೂದೆಯಲ್ಲಿ ಪ್ರಮುಖ ವಿಭಾಗಗಳನ್ನು ಬದಲಿಸಿರುವುದು ಗಂಭೀರ ಸಮಸ್ಯೆ ಆಗಲಿದೆ. ಐಪಿಸಿಯ ವಿಭಾಗ ೩೦೨ನ್ನು ೧೦೧ ಎಂದು ಹಾಗೂ ವಿಭಾಗ ೪೨೦ನ್ನು ೩೧೬ ಎಂದು ಬದಲಿಸಲಾಗಿದೆ. ಕಳೆದ ೧೫೦ ವರ್ಷಗಳಿಂದ ಜನರ ಮನಸ್ಸಿನಲ್ಲಿ ಅಚ್ಚೊತ್ತಿದ ವಿಭಾಗಗಳಿವು; ೩೦೨ ಅಂದರೆ ಹತ್ಯೆ, ೪೨೦ ಅಂದರೆ ವಂಚನೆ, ೩೭೯ ಕಳವು, ೩೯೭ ಡಕಾಯಿತಿಗೆ ಶಿಕ್ಷೆ. ವಿಭಾಗಗಳ ಸಂಖ್ಯೆಯನ್ನು ಬದಲಿಸುವುದರಿಂದ, ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ(ಎನ್‌ಸಿಆರ್‌ಬಿ) ಹಾಗೂ ಅಪರಾಧ ಮತ್ತು ಅಪರಾಧಿಗಳ ಜಾಡು ಕಾರ್ಯಜಾಲ ಮತ್ತು ವ್ಯವಸ್ಥೆ(ಸಿಸಿಟಿಎನ್‌ಎಸ್)ಯಲ್ಲಿ ದಾಖಲೀಕರಣ ದೊಡ್ಡ ಸಮಸ್ಯೆಯಾಗಲಿದೆ.

* ಹೊಸ ಮಸೂದೆಯಲ್ಲಿ ವಿಭಾಗ ೩೭೭ ಇಲ್ಲ. ವಯಸ್ಕ ಪುರುಷರ ಸಮ್ಮತ ಲೈಂಗಿಕ ಕ್ರಿಯೆಯನ್ನು ನ್ಯಾಯಾಲಯ ಸಿಂಧುಗೊಳಿಸಿದೆ. ಆದರೆ, ವಿಭಾಗ ೩೭೭ನ್ನು ತೆಗೆದುಹಾಕಿರುವುದರಿಂದ, ಪುರುಷರು ಇಲ್ಲವೇ ಲೈಂಗಿಕ ಅಲ್ಪಸಂಖ್ಯಾತರು ಅತ್ಯಾಚಾರಕ್ಕೊಳಗಾದರೆ, ಶಿಕ್ಷೆಗೆ ಅವಕಾಶ ಇರುವುದಿಲ್ಲ. ಲೈಂಗಿಕ ಅಪರಾಧಗಳನ್ನು ಪ್ರತ್ಯೇಕಿಸಿದ್ದು, ಮಹಿಳೆ ಮೇಲೆ ಮಹಿಳೆ ಮತ್ತು ಪುರುಷರ ಮೇಲೆ ಪುರುಷರು ನಡೆಸುವ ಲೈಂಗಿಕ ಅಪರಾಧಗಳನ್ನು ಪರಿಗಣಿಸಿಲ್ಲ.

* ಗುಂಪು ಹತ್ಯೆಗೆ ೭ ವರ್ಷದಿಂದ ಜೀವಾವಧಿ ಮತ್ತು ಮರಣದಂಡನೆ ಶಿಕ್ಷೆ ವಿಧಿಸಬಹುದು. ಇದನ್ನು ವಿವೇಚನಾಧಿಕಾರಕ್ಕೆ ಬಿಡಲಾಗಿದೆ. ಆದರೆ, ದೇಶದಲ್ಲಿ ನಡೆಯುತ್ತಿರುವುದು ಧರ್ಮ-ಸಮುದಾಯ ಆಧರಿತ ಗುಂಪು ಹತ್ಯೆ.

* ಭಾರತೀಯ ನ್ಯಾಯ ಸಂಹಿತೆಯು ಲವ್ ಜಿಹಾದ್‌ನ್ನು ‘ಮದುವೆಗೆ ಮುನ್ನ ಅಸ್ಮಿತೆಯನ್ನು ಮುಚ್ಚಿಡುವುದು’ ಎಂದು ವಿವರಿಸುತ್ತದೆ. ಇದನ್ನು ಪ್ರತ್ಯೇಕ ಅಪರಾಧ ಎಂದು ಪರಿಗಣಿಸಿ, ೧೦ ವರ್ಷ ಶಿಕ್ಷೆಯನ್ನು ಪ್ರಸ್ತಾಪಿಸಲಾಗಿದೆ.

* ವ್ಯಕ್ತಿಯೊಬ್ಬ ಕೃತ್ಯವನ್ನು ಎಸಗಿದ ಸಮಯದಲ್ಲಿ ಅದು ಅಪರಾಧ ಎಂದು ಪರಿಗಣಿಸದೆ ಇದ್ದ ಪಕ್ಷದಲ್ಲಿ ಆತನಿಗೆ ಶಿಕ್ಷೆ ಕೂಡದು ಎಂದು ವಿಭಾಗ ೨೦ ಹೇಳುತ್ತದೆ. ಹಳೆಯ ಪ್ರಕರಣಗಳಿಗೆ ಪ್ರಸ್ತಾವಿತ ಕಾಯ್ದೆ ಅನ್ವಯಿಸುವುದಿಲ್ಲ ಎಂದು ಹೇಳಿದ್ದರೂ, ಮರು ಅರ್ಜಿಗಳು ಸಲ್ಲಿಕೆ ಆಗುವ ಸಾಧ್ಯತೆಯಿದ್ದು ನ್ಯಾಯಾಲಯಗಳ ಮೇಲೆ ಒತ್ತಡ ಹೆಚ್ಚುತ್ತದೆ. ವಿಚಾರಣೆ ತಡವಾಗಿ, ವಾದಿ-ಪ್ರತಿವಾದಿ ಇಬ್ಬರೂ ಹೈರಾಣಾಗುತ್ತಾರೆ.

* ಮಸೂದೆಯನ್ನು ಪ್ರಶ್ನಿಸಿ ಮತ್ತು ಅವು ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತವೆ ಎಂದು ವಿಭಾಗ ೨೨೬ ಮತ್ತು ೩೨ರಡಿ ಅರ್ಜಿ ಸಲ್ಲಿಕೆಯಾಗಬಹುದು. ಶಾಸಕಾಂಗ ಮತ್ತು ಜನರ ಹಕ್ಕುಗಳ ನಡುವೆ ಸಮತೋಲವನ್ನು ಕಾಯ್ದುಕೊಳ್ಳುವ ಜವಾಬ್ದಾರಿ ನ್ಯಾಯಾಂಗದ ಮೇಲೆ ಬೀಳಲಿದೆ.

* ಐಪಿಸಿ, ಸಿಆರ್‌ಪಿಸಿ ಮತ್ತು ಐಇಎಗೆ ರಾಜ್ಯ ಸರಕಾರಗಳು ಹಲವು ತಿದ್ದುಪಡಿಗಳನ್ನು ತಂದಿವೆ. ಹೊಸ ಕಾಯ್ದೆ ಜಾರಿಗೊಂಡಲ್ಲಿ, ಮತ್ತೊಮ್ಮೆ ತಿದ್ದುಪಡಿ ತರಬೇಕಾಗುತ್ತದೆ. ಕಾನೂನು-ಸುವ್ಯವಸ್ಥೆ ರಾಜ್ಯಗಳಿಗೆ ಸಂಬಂಧಿಸಿದ ವಿಷಯ. ರಾಜ್ಯಗಳ ಜೊತೆಗೆ ಸಮಾಲೋಚನೆ ನಡೆಸದೆ/ಸಮ್ಮತಿಯಿಲ್ಲದೆ ಮಸೂದೆ ಅಂಗೀಕಾರಗೊಂಡಲ್ಲಿ ಸ್ವೀಕಾರಾರ್ಹತೆ ಕ್ಷೀಣಿಸುತ್ತದೆ.

* ಕಾನೂನು ಸುವ್ಯವಸ್ಥೆ ಜವಾಬ್ದಾರಿ ರಾಜ್ಯಗಳ ಮೇಲಿದ್ದು, ಕಾನೂನು ರೂಪಿಸುವಲ್ಲಿ ಅವುಗಳನ್ನು ಒಳಗೊಂಡಿಲ್ಲ.

ಹಿಂದಿ ಹೇರಿಕೆ ಪ್ರಯತ್ನ

ಸಂವಿಧಾನದ ವಿಭಾಗ ೩೪೮ರ ಪ್ರಕಾರ ಸಂಸತ್ತು/ವಿಧಾನಸಭೆಗಳ ಎಲ್ಲ ಕಾಯ್ದೆಗಳು, ರಾಷ್ಟ್ರಪತಿ/ರಾಜ್ಯಪಾಲರ ಸುಗ್ರೀವಾಜ್ಞೆಗಳು ಇಂಗ್ಲಿಷ್‌ನಲ್ಲಿರಬೇಕು. ಸುಪ್ರೀಂ ಕೋರ್ಟ್‌ನ ಭಾಷೆ ಕೂಡ ಇಂಗ್ಲಿಷ್. ನ್ಯಾಯಾಲಯಗಳಲ್ಲಿ ಕಲಾಪ ಇಂಗ್ಲಿಷ್/ರಾಜ್ಯದ ಭಾಷೆಗಳಲ್ಲಿ ನಡೆಯುತ್ತದೆ. ಕಾನೂನಿನ ಹೆಸರು ಹಿಂದಿಯಲ್ಲಿದ್ದ ತಕ್ಷಣ ನ್ಯಾಯಾಲಯದ ಭಾಷೆ ಹಿಂದಿ ಆಗುವುದಿಲ್ಲ. ಸಂವಿಧಾನ ರಚನಾ ಸಭೆಯಲ್ಲಿ ಭಾಷೆಗೆ ಸಂಬಂಧಿಸಿದಂತೆ ಗಂಭೀರ-ಸುದೀರ್ಘ ಚರ್ಚೆ ನಡೆದಿದ್ದು, ವಿವಿಧ ಶರತ್ತುಗಳನ್ನು ಅಳವಡಿಸಿಕೊಳ್ಳಲಾಯಿತು ಮತ್ತು ಅಧಿಕೃತ ಭಾಷೆ ಕಾಯ್ದೆ ಜಾರಿಗೊಂಡಿತು. ಸಂಸತ್ತು/ರಾಜ್ಯ ಸರಕಾರಗಳು ಇಂಗ್ಲಿಷನ್ನು ಅಧಿಕೃತ ಭಾಷೆಯಾಗಿ ಮುಂದುವರಿಸುವುದಿಲ್ಲ ಎಂದು ಅಧಿಸೂಚನೆ ಹೊರಡಿಸುವವರೆಗೆ, ಇಂಗ್ಲಿಷ್ ಮುಂದುವರಿಯುತ್ತದೆ. ಅಸಂಖ್ಯ ಭಾಷೆಗಳಿರುವ ನಮ್ಮ ದೇಶದಲ್ಲಿ ಭಾಷೆ ಹಲವು ಆಂದೋಲನ-ಪ್ರತಿಭಟನೆಗಳಿಗೆ ಕಾರಣವಾಗಿದೆ. ಭಾಷಿಕರಿಗೆ ಪ್ರತ್ಯೇಕ ರಾಜ್ಯ ಸಿಗಬೇಕೆಂದು ಭಾಷಾವಾರು ಪ್ರಾಂತಗಳನ್ನು ರಚಿಸಲಾಗಿದೆ. ೧೯೬೦ರಲ್ಲಿ ಹಿಂದಿಯನ್ನು ಅಧಿಕೃತ ಭಾಷೆಯಾಗಿ ಮಾಡಲು ಮುಂದಾದಾಗ, ತಮಿಳುನಾಡು, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಪಂಜಾಬ್ ಮತ್ತು ಕರ್ನಾಟಕದಲ್ಲಿ ಉಗ್ರ ಪ್ರತಿಭಟನೆ ನಡೆದಿತ್ತು. ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ರ ಮೂಲ ಕರಡು ಹಿಂದಿ ಹೇರಿಕೆಯ ಪ್ರಯತ್ನ ಎಂದು ಪ್ರತಿಭಟನೆಗೆ ಒಳಗಾಗಿತ್ತು. ಭಾರತೀಯ ರೈಲ್ವೆ ಮತ್ತು ಸಾರ್ವಜನಿಕ ಬ್ಯಾಂಕ್‌ಗಳಲ್ಲಿರುವ ಹಿಂದಿ ಅರ್ಜಿಗಳು ಹಾಗೂ ಹಿಂದಿ ದಿವಸದ ಆಚರಣೆ ಹೇರಿಕೆಯಷ್ಟೇ. ಹಿಂದಿ ರಾಷ್ಟ್ರ ಭಾಷೆಯಲ್ಲ ಮತ್ತು ದೇಶವನ್ನು ಒಗ್ಗೂಡಿಸುವ ಏಕೈಕ ಭಾಷೆ ಕೂಡ ಅಲ್ಲ. ಪ್ರಸ್ತಾವಿಕ ಕಾಯ್ದೆಗಳ ಹೆಸರೇ ಅಸಾಂವಿಧಾನಿಕ.

ಪ್ರಶ್ನಿಸಲು ಅಡ್ಡಿ: ಸಂಸತ್ತಿನಲ್ಲಿ ಚರ್ಚೆ ನಡೆಸದೆ ಇಲ್ಲವೇ ಪ್ರಕ್ರಿಯೆಗಳನ್ನು ಅನುಸರಿಸದೆ ಕಾನೂನುಗಳನ್ನು ರೂಪಿಸಲಾಗುತ್ತಿದೆ ಎಂದು ನ್ಯಾಯಾಲಯದಲ್ಲಿ ಪ್ರಶ್ನಿಸಲು ಅಡ್ಡಿಯಾಗಿರುವುದು ಸಂವಿಧಾನದ ವಿಧಿ ೨೧೨. ಸಂವಿಧಾನದ ೪೨ನೇ ತಿದ್ದುಪಡಿ ಕಾಯ್ದೆ ೧೯೭೬ರಡಿ ಅಳವಡಿಸಿದ್ದು, ಇಂದಿರಾಗಾಂಧಿ ಪ್ರತಿಪಕ್ಷಗಳ ವಿರೋಧವನ್ನು ತಪ್ಪಿಸಿಕೊಳ್ಳಲು ಬಳಸಿದ ಮಾರ್ಗವಿದು. ತುರ್ತು ಪರಿಸ್ಥಿತಿ ಬಳಿಕ ಅಧಿಕಾರಕ್ಕೆ ಬಂದ ಮೊರಾರ್ಜಿ ದೇಸಾಯಿ ಸರಕಾರ ಇದನ್ನು ಉಳಿಯಗೊಟ್ಟಿತು. ಈ ವಿಧಿಯು ಸಂವಿಧಾನದ ತತ್ವಗಳು ಹಾಗೂ ಕಾನೂನಿನ ಆಡಳಿತಕ್ಕೆ ಧಕ್ಕೆ ತರುತ್ತದೆ ಎಂದು ತಜ್ಞರಿಂದ ಟೀಕೆಗೊಳಗಾಗಿದೆ. ರಾಷ್ಟ್ರೀಯ ಸುರಕ್ಷಾ ಕಾಯ್ದೆ(ಎನ್‌ಎಸ್‌ಎ), ಅಕ್ರಮ ಚಟುವಟಿಕೆ(ತಡೆ) ಕಾಯ್ದೆ(ಯುಎಪಿಎ)ಯಂಥ ವಿವಾದಾತ್ಮಕ ಕಾನೂನುಗಳನ್ನು ರೂಪಿಸಲು ಸರಕಾರಕ್ಕೆ ಈ ವಿಧಿ ಅವಕಾಶ ನೀಡಿದೆ. ವಿಧಿ ೨೧೨ನ್ನು ಪ್ರಶ್ನಿಸುವ ಹಲವು ಪ್ರಯತ್ನಗಳು ನಡೆದಿದ್ದರೂ, ‘ಸಂಸತ್ತಿನ ಕಾನೂನು ರೂಪಿಸುವ ಅಧಿಕಾರವನ್ನು ರಕ್ಷಿಸಲು ಈ ಕಾಯ್ದೆ ಅವಶ್ಯ’ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಈ ವಿಧಿಯನ್ನು ವಜಾ ಮಾಡುವ ಇಲ್ಲವೇ ಹಿಂಪಡೆಯುವ ಸಾಧ್ಯತೆ ಕಡಿಮೆ. ಈ ವಿಧಿಗೆ ಕಾಂಗ್ರೆಸ್ ಮೂಲವಾಗಿರುವುದರಿಂದ, ಅದು ಧ್ವನಿ ಎತ್ತುತ್ತಿಲ್ಲ.

ತಿದ್ದುಪಡಿಯೇ ಸೂಕ್ತ ಮಾರ್ಗ

ಐಪಿಸಿಗೆ ೭೮ ಬಾರಿ, ಸಿಆರ್‌ಪಿಸಿಗೆ ೧೯ ಹಾಗೂ ಸಾಕ್ಷ್ಯ ಕಾಯ್ದೆಗೆ ೩೦ ಬಾರಿ ತಿದ್ದುಪಡಿ ತರಲಾಗಿದೆ(೨೦೧೮ರಲ್ಲಿದ್ದಂತೆ). ದಿವಾಳಿ ಮತ್ತು ಸುಸ್ತಿ ಸಂಹಿತೆ ೨೦೧೬ಕ್ಕೆ ಆರು ಬಾರಿ ತಿದ್ದುಪಡಿ ಮಾಡಲಾಗಿದೆ. ನ್ಯಾ. ವಿ.ಎಸ್. ಮಳೀಮಠ್ ಸಮಿತಿ ಐಪಿಸಿ/ಸಿಆರ್‌ಪಿಸಿಗಳ ಪರಿಷ್ಕರಣೆಗೆ ಶಿಫಾರಸು ಮಾಡಿತ್ತು. ೨೦೦೭ರಲ್ಲಿ ನ್ಯಾ. ಎನ್.ಆರ್. ಮಾಧವ ಮೆನನ್ ಆಯೋಗ ಕೂಡ ಸಿಆರ್‌ಪಿಸಿಗೆ ಬದಲಾವಣೆಗಳನ್ನು ಸೂಚಿಸಿತ್ತು. ೨೦೧೭ರಲ್ಲಿ ಜೋಸೆಫ್ ಶೈನ್ ಪ್ರಕರಣದಲ್ಲಿ ಕಲಂ ೪೯೭ ಹಾಗೂ ೨೦೧೮ರಲ್ಲಿ ನವತೇಜ್ ಜೋಹಾರ್ ಪ್ರಕರಣದಲ್ಲಿ ೩೭೭ನೇ ಕಲಂನ್ನು ತೆಗದುಹಾಕಲಾಯಿತು. ದೇಶದ್ರೋಹ ಕಾನೂನಿನ ಊರ್ಜಿತತೆಯನ್ನು ಎತ್ತಿ ಹಿಡಿದ ಕೇದಾರ್ ನಾಥ್ ಸಿಂಗ್ ವಿ/ಎಸ್ ಬಿಹಾರ ಸರಕಾರ ಪ್ರಕರಣದ ತೀರ್ಪು ಹಲವು ಕಾನೂನುಗಳಿಗೆ ಕಾರಣವಾಗಿದೆ.

ಕ್ರಿಮಿನಲ್ ಕಾಯ್ದೆಗಳೆಂದರೆ ಈ ಮೂರು ಮಾತ್ರವಲ್ಲ. ‘ವಿಶೇಷ ಕಾನೂನು’ಗಳಾದ ಅಕ್ರಮ ಚಟುವಟಿಕೆ(ತಡೆ) ಕಾಯ್ದೆ ೧೯೬೭, ಮತ್ತಕಾರಕಗಳು ಮತ್ತು ಮನೋವಿಕಾರ ವಸ್ತುಗಳ ಬಳಕೆ ಕಾಯ್ದೆ ೧೯೮೫, ಹಣ ವರ್ಗಾವಣೆ ತಡೆ ಕಾಯ್ದೆ ೨೦೦೨, ಲೈಂಗಿಕ ದುರ್ಬಳಕೆಯಿಂದ ಮಕ್ಕಳ ರಕ್ಷಣೆ ೨೦೧೨...... ಮತ್ತಿತರ ಕಾಯ್ದೆಗಳೂ ಇದ್ದು, ಇವು ಹಾಗೆಯೇ ಉಳಿದುಕೊಳ್ಳಲಿವೆ. ಹೊಸ ಕಾಯ್ದೆ ಬದಲು ತಿದ್ದುಪಡಿ ಮೂಲಕ ಅಗತ್ಯ ಬದಲಾವಣೆ ಮಾಡಬಹುದಿತ್ತು. ಇದರಿಂದ ಸಂಸತ್ತು-ಶಾಸನಸಭೆಯಲ್ಲಿ ಅನಗತ್ಯ ಖರ್ಚು ಮತ್ತು ಸಮಯ ಉಳಿತಾಯ ಆಗುತ್ತಿತ್ತು; ರಾಜ್ಯ ಸರಕಾರಗಳು ಮಾಡಬೇಕಾದ ತಿದ್ದುಪಡಿಗಳನ್ನು ತಪ್ಪಿಸಬಹುದಿತ್ತು. ಸಂವಿಧಾನದ ೭ನೇ ಪರಿಚ್ಛೇದ ೩ನೇ ಪಟ್ಟಿಯಲ್ಲಿ ಐಪಿಸಿ/ಸಿಆರ್‌ಪಿಸಿ ಇದ್ದು, ಹೊಸ ಕಾಯ್ದೆಗಳನ್ನು ಅನ್ವಯಿಸಲು ಸಂವಿಧಾನಕ್ಕೆ ಇನ್ನೊಂದು ತಿದ್ದುಪಡಿ ತರಬೇಕಾಗುತ್ತದೆ. ಇದಕ್ಕೆ ಅರ್ಧದಷ್ಟು ರಾಜ್ಯಗಳ ಸಮ್ಮತಿ ಅಗತ್ಯವಿದೆ. ಇದು ಸುಲಭದ ಕೆಲಸವಲ್ಲ; ವಿಶೇಷವಾಗಿ ದಕ್ಷಿಣದ ರಾಜ್ಯಗಳ ಪ್ರತಿರೋಧ ಎದುರಾಗುತ್ತದೆ.

ಮಸೂದೆಗಳನ್ನು ಕಾನೂನು ಮತ್ತು ನ್ಯಾಯ ಸ್ಥಾಯಿ ಸಮಿತಿಗೆ ಕಳಿಸುವ ಬದಲು ಗೃಹ ವ್ಯವಹಾರಗಳ ಸಮಿತಿಗೆ ಕಳಿಸಿರುವುದು ಸಂದೇಹಕ್ಕೆ ಕಾರಣವಾಗಿದೆ. ಪ್ರಜಾತಾಂತ್ರಿಕ ನೀತಿಗಳ ಬಗ್ಗೆ ಒಕ್ಕೂಟ ಸರಕಾರದ ನಿರ್ಲಕ್ಷ್ಯ ಮನೋಭಾವ ನೋಡಿದರೆ, ಸಾರ್ವಜನಿಕರ ಪ್ರತಿಕ್ರಿಯೆಗಳಿಗೆ ಸ್ಪಂದನೆ ಸಿಗಲಿದೆ ಮತ್ತು ಸ್ಥಾಯಿ ಸಮಿತಿಯು ಲೋಪದೋಷಗಳನ್ನು ಸರಿಪಡಿಸಬಹುದು ಎಂದು ಆಶಿಸಬಹುದಷ್ಟೆ. ನಮ್ಮದು ‘ಕಾನ್‌ಸ್ಟಿಟ್ಯೂಷನ್ ಆಫ್ ಇಂಡಿಯಾ’- ಇಂಡಿಯಾದ ಸಂವಿಧಾನ. ಸಂವಿಧಾನದ ಪ್ರಸ್ತಾವನೆ ‘ಇಂಡಿಯಾ, ದಟ್ ಈಸ್ ಭಾರತ್’ ಎಂದು ಆರಂಭವಾಗುತ್ತದೆ. ಹಿಂದಿ ಹೆಸರು ಇರಿಸಿದ ತಕ್ಷಣ ಕಾನೂನಿನ ಭಾರತೀಕರಣ ಆಗುವುದಿಲ್ಲ. ಹಿಂದಿ-ಹಿಂದು-ಹಿಂದುಸ್ತಾನ ಎಂಬ ಏಕ ಶಿಲ್ಪದ ಮುಂದೊತ್ತುವಿಕೆಯ ಇನ್ನೊಂದು ಪ್ರಯತ್ನವಿದು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Contributor - ಮಾಧವ ಐತಾಳ್

contributor

Similar News