ಹವಾಮಾನ ಬದಲಾವಣೆ ಎಂಬ ಕಾರ್ಮುಗಿಲು

Update: 2023-12-22 04:45 GMT
Editor : jafar sadik | Byline : ಋತ

Photo: twitter.com/COP28_UAE

ಯುನೈಟೆಡ್ ಅರಬ್ ಎಮಿರೇಟ್ಸ್‌ನ ಭಾಗವಾದ ದುಬೈ, ಮರುಭೂಮಿಯಲ್ಲಿ ಮನುಷ್ಯ ಸೃಷ್ಟಿಸಿದ ಅದ್ಭುತ. ಇತ್ತೀಚೆಗೆ ದುಬೈನಲ್ಲಿ ಎಮಿರೇಟ್ಸ್‌ನ ಅತಿ ದೊಡ್ಡ ತೈಲ ಕಂಪೆನಿಯ ಮುಖ್ಯಸ್ಥ ಡಾ.ಸುಲ್ತಾನ್ ಅಹ್ಮದ್ ಅಲ್ ಜಾಬಿರ್ ನೇತೃತ್ವದಲ್ಲಿ ಜಾಗತಿಕ ಹವಾಮಾನ ಶೃಂಗಸಭೆ(ಸಿಒಪಿ-28) ನಡೆಯಿತು. 200 ದೇಶಗಳ 84,000 ಪ್ರತಿನಿಧಿಗಳು ಪಾಲ್ಗೊಂಡಿದ್ದರು. ವಾತಾವರಣ ಬಿಸಿಯೇರಲು ಪಳೆಯುಳಿಕೆ ಇಂಧನಗಳೇ ಕಾರಣ ಎಂದು ದೇಶಗಳು ಒಪ್ಪಿಕೊಂಡಿದ್ದು, 198 ದೇಶಗಳು ಒಪ್ಪಂದಕ್ಕೆ ಸಹಿ ಹಾಕಿವೆ. ನಿವ್ವಳ ಶೂನ್ಯ ಇಂಗಾಲ(ನೆಟ್ ಜೀರೋ ಕಾರ್ಬನ್) ಸ್ಥಿತ್ಯಂತರಗೊಳಿಸುವಿಕೆಯನ್ನು ‘ನ್ಯಾಯಯುತ, ಸುವ್ಯವಸ್ಥಿತ ಹಾಗೂ ಸಮಾನವಾಗಿ’ ಸಾಧಿಸಬೇಕೆಂದು ಒಪ್ಪಿಕೊಳ್ಳಲಾಗಿದೆ. ಆದರೆ, ಪಳೆಯುಳಿಕೆ ಇಂಧನಗಳ ಬಳಕೆ ನಿಲುಗಡೆಗೆ ಯಾವುದೇ ಗಡುವು ವಿಧಿಸಿಲ್ಲ. ತೈಲ ಪ್ರಮುಖ ಆದಾಯ ಮೂಲವಾಗಿರುವ ದೇಶ(ಒಪೆಕ್)ಗಳು ತೈಲದ ಬಳಕೆಯನ್ನು ಕಡಿತಗೊಳಿಸಲು ಸಿದ್ಧವಿಲ್ಲ. ಹೀಗಾಗಿ, ತೈಲ ದೊರೆಗಳ ಆಡಳಿತ ಇನ್ನಷ್ಟು ಕಾಲ ಮುಂದುವರಿಯಲಿದೆ.

2021ರ ಗ್ಲಾಸ್ಗೋ ಶೃಂಗಸಭೆಯಲ್ಲಿ ಹೆಚ್ಚು ಕೊಳೆಗಾಳಿ ತುಂಬುವ ಕಲ್ಲಿದ್ದಲಿನ ಬಳಕೆಯನ್ನು ಹಂತಹಂತವಾಗಿ ಕಡಿತಗೊಳಿಸಲು ದೇಶಗಳು ಸಮ್ಮತಿಸಿದ್ದವು. ಆದರೆ, ಗಡುವನ್ನು ನಿಗದಿಗೊಳಿಸಿರಲಿಲ್ಲ. ಕೊಳೆ ಇಂಗಾಲ ವನ್ನು ನೆಲದೊಳಗೆ ತುಂಬುವ ತಂತ್ರಜ್ಞಾನ ಇನ್ನೂ ಬಾಲ್ಯಾವಸ್ಥೆಯಲ್ಲಿದೆ; ಜೊತೆಗೆ, ಅಪಾರ ಪ್ರಮಾಣದ ಇಂಗಾಲವನ್ನು ನೆಲದೊಳಗೆ ಸೇರಿಸುವುದರಿಂದ ಆಗಬಹುದಾದ ವಿಪರಿಣಾಮಗಳ ಬಗ್ಗೆ ಇನ್ನಷ್ಟೇ ಗೊತ್ತಾಗಬೇಕಿದೆ. ಈ ದುಬಾರಿ ತಂತ್ರಜ್ಞಾನದ ಹೊರೆ ಗ್ರಾಹಕರ ಮೇಲೆ ಬೀಳುತ್ತದೆ.

ಇಂಧನಗಳ ಆಯ್ಕೆ ಗೋಜಲು

ಪಳೆಯುಳಿಕೆ ಇಂಧನಗಳ ಗುಂಪಿನಲ್ಲಿ ಕಲ್ಲಿದ್ದಲು-ಲಿಗ್ನೈಟ್, ತೈಲ(ಪೆಟ್ರೋಲ್, ಡೀಸೆಲ್) ಮತ್ತು ಸ್ವಾಭಾವಿಕ ಅನಿಲಗಳು ಇವೆ. ಇದರಲ್ಲಿ ತೈಲವನ್ನು ವಿದ್ಯುತ್-ಶಾಖ ಉತ್ಪಾದನೆ ಹಾಗೂ ವಾಹನಗಳಲ್ಲಿ ಮತ್ತು ಕಲ್ಲಿದ್ದಲು-ಲಿಗ್ನೈಟ್ ಮತ್ತು ಸ್ವಾಭಾವಿಕ ಅನಿಲಗಳನ್ನು ವಿದ್ಯುತ್ ಉತ್ಪಾದನೆಯಲ್ಲಿ ಬಳಸಲಾಗುತ್ತಿದೆ. ಇವುಗಳ ದಹನದಿಂದ ಇಂಗಾಲದ ಡೈಆಕ್ಸೈಡ್ ಹಾಗೂ ಹಸಿರುಮನೆ ಅನಿಲಗಳು ಬಿಡುಗಡೆಯಾಗುತ್ತವೆ. ಪಳೆಯುಳಿಕೆ ಇಂಧನಗಳ ಬಳಕೆ-ನಿಷೇಧಕ್ಕೆ ಸಂಬಂಧಿಸಿದಂತೆ ವಿವಿಧ ದೇಶಗಳ ನಿಲುವು ಬೇರೆಬೇರೆ ರೀತಿ ಇದೆ. ಕಲ್ಲಿದ್ದಲು ಬಳಕೆ ನಿಷೇಧವನ್ನು ಭಾರತ ಮತ್ತು ಚೀನಾ ವಿರೋಧಿಸುತ್ತಿವೆ. ಏಕೆಂದರೆ, ಕಲ್ಲಿದ್ದಲು ಕಡಿಮೆ ವೆಚ್ಚದ ಇಂಧನ ಮೂಲ. ಭಾರತದಲ್ಲಿ ಅಪಾರ ಕಲ್ಲಿದ್ದಲು ನಿಕ್ಷೇಪವಿದ್ದರೂ, ಗುಣಮಟ್ಟ ಕಡಿಮೆಯಿರುವುದರಿಂದ ಆಮದು ಮಾಡಿಕೊಳ್ಳಲಾಗುತ್ತಿದೆ; ಜೊತೆಗೆ, ತೈಲ-ಅನಿಲ ನಿಕ್ಷೇಪ ಕಡಿಮೆಯಿದೆ. ಚೀನಾ ಕಲ್ಲಿದ್ದಲು ಮತ್ತು ಅನಿಲ ಎರಡೂ ಸಮೃದ್ಧವಾಗಿರುವ ದೇಶ. ಕಲ್ಲಿದ್ದಲಿನಿಂದ ಒಟ್ಟು ಅಗತ್ಯದಲ್ಲಿ ಶೇ.20ರಷ್ಟು ವಿದ್ಯುತ್ ಉತ್ಪಾದಿಸುವ ಅಮೆರಿಕ, ಕಲ್ಲಿದ್ದಲು ನಿಷೇಧವನ್ನು ಬೆಂಬಲಿಸುತ್ತಿದೆ. ಆದರೆ, ಅದರ ಆರ್ಥಿಕತೆ ತೈಲ ಮತ್ತು ಅನಿಲವನ್ನು ಆಧರಿಸಿರುವುದರಿಂದ, ಅವುಗಳ ಬಳಕೆಗೆ ನಿರ್ಬಂಧವನ್ನು ವಿರೋಧಿಸುತ್ತಿದೆ. ಅಮೆರಿಕದಲ್ಲಿ ತೈಲದ ಉತ್ಪಾದನೆ ದಾಖಲೆ ಮಟ್ಟ ಮುಟ್ಟಿದ್ದು, ಬ್ಯಾರಲ್‌ಗಳ ಉತ್ಪಾದನೆ ದಿನವೊಂದಕ್ಕೆ ಮೂರು ಪಟ್ಟು ಹಾಗೂ ಅನಿಲದ ಉತ್ಪಾದನೆ ಎರಡೂವರೆ ಪಟ್ಟು ಹೆಚ್ಚಿದೆ.

ಕೈಗಾರಿಕೀಕರಣ ಆರಂಭಗೊಂಡು 200 ವರ್ಷ ಆಗಿದೆ; ಅದರೊಟ್ಟಿಗೆ ಪಳೆಯುಳಿಕೆ ಇಂಧನಗಳ ಬಳಕೆ ಆರಂಭವಾಯಿತು. ಹೀಗಾಗಿ, ಕಲ್ಲಿದ್ದಲು, ತೈಲ ಮತ್ತು ಅನಿಲಗಳ ಸಂಗ್ರಹ, ಪರಿಷ್ಕರಣೆ ಹಾಗೂ ವಿತರಣೆಗೆ ಸನ್ನದ್ಧ ಗೊಂಡ ಮೂಲ ಸೌಕರ್ಯವಿದೆ. ಇವುಗಳ ದಹನದಿಂದ ಉತ್ಪಾದನೆಯಾಗುವ ವಿದ್ಯುತ್ತಿನ ಹಂಚಿಕೆಗೆ ಸಂವಹನ ಗ್ರಿಡ್‌ಗಳು ಮತ್ತು ಕೊಳವೆಗಳ ಜಾಲವನ್ನು ನಿರ್ಮಿಸಲಾಗಿದೆ. ಸೌರ ಮತ್ತು ಪವನ ವಿದ್ಯುತ್‌ನಂಥ ಪುನರ್ಬಳಕೆ ಶಕ್ತಿ ಮೂಲಗಳು ಬೇಡಿಕೆ ಇದ್ದಾಗ ಲಭ್ಯವಾಗಲು ಮತ್ತು ಶೇಖರಣೆ-ಹಂಚಿಕೆ ವ್ಯವಸ್ಥೆ ಸಮರ್ಪಕವಾಗಲು ಇನ್ನಷ್ಟು ಸಮಯ ಬೇಕಾಗುತ್ತದೆ.

ದುಬೈ ಒಪ್ಪಂದವು ಪಳೆಯುಳಿಕೆ ಇಂಧನಗಳ ಬಳಕೆಯನ್ನು ಸ್ಥಗಿತಗೊಳಿಸುವ ಮುನ್ನ ಇಂಧನ ಸುರಕ್ಷತೆಯನ್ನು ಕಾಯ್ದುಕೊಳ್ಳಲು ‘ಸ್ಥಿತ್ಯಂತರ ಇಂಧನ’ಗಳ ಬಳಕೆ ಕುರಿತು ಉಲ್ಲೇಖಿಸಿದೆ. ಇಂಥ ‘ಸ್ಥಿತ್ಯಂತರ ಇಂಧನ’ ಯಾವುದು ಎನ್ನುವುದು ಸ್ಪಷ್ಟವಾಗದಿದ್ದರೂ, ಸ್ವಾಭಾವಿಕ ಅನಿಲ ಒಂದು ಪರ್ಯಾಯ ಆಗಬಹುದು; ಇದರ ಉತ್ಪಾದನೆಯಿಂದ ಮಿಥೇನ್ ಹೊರಸೂಸುತ್ತದೆ. ಆದರೆ, ಅಂತರ್‌ರಾಷ್ಟ್ರೀಯ ಇಂಧನ ಏಜೆನ್ಸಿಯ ಅಂದಾಜಿನ ಪ್ರಕಾರ, ಕಲ್ಲಿದ್ದಲಿನ ಬದಲು ಅನಿಲದಿಂದ ವಿದ್ಯುತ್ ಉತ್ಪಾದಿಸಿದರೆ ಶೇ.50 ಮತ್ತು ಶಾಖವನ್ನು ಉತ್ಪಾದಿಸಿದರೆ, ಶೇ.33ರಷ್ಟು ಕೊಳೆಗಾಳಿ ಕಡಿಮೆಯಾಗುತ್ತದೆ. ಇಂಗಾಲದ ಡೈಆಕ್ಸೈಡಿಗೆ ಹೋಲಿಸಿದರೆ ಮಿಥೇನ್ ಹೆಚ್ಚು ಮಲಿನಕರ. 2030ರೊಳಗೆ ಮಿಥೇನ್ ಪ್ರಮಾಣವನ್ನು ಶೇ.30ರಷ್ಟು ಕಡಿತಗೊಳಿಸುವುದಾಗಿ 150 ದೇಶಗಳು ಈಜಿಪ್ಟಿನಲ್ಲಿ ನಡೆದ ಸಿಒಪಿ-27ರಲ್ಲಿ ಹೇಳಿದ್ದವು. ಚೀನಾ-ಅಮೆರಿಕ ಕೂಡ ಸ್ವಾಭಾವಿಕ ಅನಿಲದ ಉತ್ಪಾದನೆ ವೇಳೆ ಹೊಮ್ಮುವ ಮಿಥೇನ್ ಬಗ್ಗೆ ಕ್ರಮ ತೆಗೆದುಕೊಳ್ಳುವುದಾಗಿ ಒಪ್ಪಿಕೊಂಡಿವೆ.

ಇಂಧನ ಮಿಶ್ರಣದ ಆಯ್ಕೆ ಸಮಸ್ಯಾತ್ಮಕ

ದೇಶವೊಂದು ಜೈವಿಕ ಸಂಪನ್ಮೂಲದ ಲಭ್ಯತೆಗೆ ಅನುಗುಣವಾಗಿ ಇಂಧನ ಮಿಶ್ರಣವನ್ನು ಆಯ್ಕೆ ಮಾಡಿಕೊಳ್ಳುತ್ತದೆ; ಆರ್ಥಿಕ ಸಾಧ್ಯತೆಗಳನ್ನೂ ನೋಡಬೇಕಾಗುತ್ತದೆ. ಚೀನಾ, ಭಾರತ ಮತ್ತು ಇಂಡೋನೇಶ್ಯ ಜಗತ್ತಿನ ಅತ್ಯಂತ ದೊಡ್ಡ ಕಲ್ಲಿದ್ದಲು ಉತ್ಪಾದಕ ರಾಷ್ಟ್ರಗಳು. ಭಾರತ ತೈಲ ಹಾಗೂ ಕಲ್ಲಿದ್ದಲು-ಎರಡಕ್ಕೂ ಹೊರದೇಶಗಳನ್ನು ಆಧರಿಸಿದೆ. ಹೀಗಾಗಿ, ನಮಗೆ ಹೆಚ್ಚು ಆಯ್ಕೆಗಳಿಲ್ಲ. 2070ರೊಳಗೆ ನಿವ್ವಳ ಶೂನ್ಯ ಇಂಗಾಲ ವಿಸರ್ಜನೆ ಗುರಿ(ನೆಟ್ ಜೀರೋ) ಮುಟ್ಟುವುದಾಗಿ ದೇಶ ಹೇಳಿಕೊಂಡಿದೆ; ಕಲ್ಲಿದ್ದಲು ಗಣಿಗಾರಿಕೆ ಹಾಗೂ ಉಷ್ಣ ವಿದ್ಯುತ್ ಸ್ಥಾವರಗಳ ಮೇಲೆ ಹೂಡಿಕೆ ಮಾಡುತ್ತಿದೆ. ಕಲ್ಲಿದ್ದಲು ಮಂತ್ರಾಲಯದ ಪ್ರಕಾರ, ಸೆಪ್ಟಂಬರ್ 2023ರಲ್ಲಿ ಕಲ್ಲಿದ್ದಲು ಉತ್ಪಾದನೆ 67.2 ದಶಲಕ್ಷ ಟನ್ ಇತ್ತು(ಕಳೆದ ವರ್ಷಕ್ಕಿಂತ ಶೇ.15 ಹೆಚ್ಚಳ). ಕೋಲ್ ಇಂಡಿಯಾ ಮತ್ತು ಎನ್‌ಸಿಎಲ್ ಇಂಡಿಯಾ ಲಿ. ಹಲವು ಉಷ್ಣ ವಿದ್ಯುತ್ ಸ್ಥಾವರಗಳನ್ನು ನಿರ್ಮಿಸುತ್ತಿದ್ದು, 2028ರೊಳಗೆ ಪೂರ್ಣಗೊಳಿಸುವ ಗುರಿ ಹೊಂದಿವೆ. ರಾಷ್ಟ್ರೀಯ ವಿದ್ಯುತ್ ಯೋಜನೆ 2022-27, ನಿರ್ಮಾಣ ಹಂತದಲ್ಲಿರುವ ವಿದ್ಯುತ್ ಸ್ಥಾವರಗಳಿಂದ 27,000 ಮೆಗಾವ್ಯಾಟ್ ಮತ್ತು ಹೊಸ ಸ್ಥಾವರಗಳಿಂದ 60,000 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಿದೆ. ದೇಶದಲ್ಲಿರುವ ಕಲ್ಲಿದ್ದಲು ನಿಕ್ಷೇಪ ಇನ್ನೂ 100 ವರ್ಷ ಬರಲಿದೆ. ಆದರೆ, ಗುಣಮಟ್ಟ ಕಡಿಮೆ ಇರುವುದು ಸಮಸ್ಯೆ. ಕಲ್ಲಿದ್ದಲು ವಿದ್ಯುತ್ ಉತ್ಪಾದನೆಯ ಮುಖ್ಯ ಮೂಲವಾಗಿದ್ದು, ಅತಿ ಹೆಚ್ಚು ಇಂಗಾಲವನ್ನು ವಿಸರ್ಜಿಸುತ್ತದೆ.

ದೇಶದ ಕಲ್ಲಿದ್ದಲು ಸ್ಥಾವರಗಳ ಅಂದಾಜು ಜೀವಿತಾವಧಿ 13 ವರ್ಷ. ಪರಿಸರ ಕಾನೂನು ಬಿಗಿಯಾದಂತೆ ಮತ್ತು ಅಂತರ್‌ರಾಷ್ಟ್ರೀಯ ಒತ್ತಡ ಹೆಚ್ಚಿದಂತೆ, ಕಲ್ಲಿದ್ದಲು ಬಳಕೆ ಸಮರ್ಥನೀಯ ಆಗುವುದಿಲ್ಲ. ಮಾರುಕಟ್ಟೆ ಪರಿಸ್ಥಿತಿಯಲ್ಲಿ ಅನಿರೀಕ್ಷಿತ ಸ್ಥಿತ್ಯಂತರ, ನಿಯಂತ್ರಣಗಳಲ್ಲಿ ಬದಲಾವಣೆ, ಗ್ರಾಹಕರ ಆಯ್ಕೆಗಳ ಬದಲಾಗುವಿಕೆ ಮತ್ತು ತಾಂತ್ರಿಕ ಮುನ್ನಡೆ ಇದಕ್ಕೆ ಕಾರಣ. ಇದರಿಂದ ಕಲ್ಲಿದ್ದಲು ಸ್ಥಾವರಗಳ ಮೇಲಿನ ಹೂಡಿಕೆ ಮೌಲ್ಯ ಕಳೆದುಕೊಂಡು, ಸ್ಥಾವರಗಳು ಅನುತ್ಪಾದಕ ಆಸ್ತಿಯಾಗುತ್ತವೆ. ಸ್ಥಾವರಗಳ ನಿರ್ಮಾಣಕ್ಕೆ ಸಾರ್ವಜನಿಕ ಕ್ಷೇತ್ರದ ಬ್ಯಾಂಕ್‌ಗಳು ಶೇ.31 ಮತ್ತು ಬ್ಯಾಂಕೇತರ ವಿತ್ತ ಸಂಸ್ಥೆ(ಎನ್‌ಬಿಎಫ್‌ಸಿ)ಗಳಾದ ಪವರ್ ಫೈನಾನ್ಸ್ ಕಾರ್ಪೊರೇಷನ್, ಗ್ರಾಮೀಣ ವಿದ್ಯುದೀಕರಣ ಕಾರ್ಪೊರೇಶನ್ ಶೇ.65ರಷ್ಟು ಸಾಲ ನೀಡಿವೆ. ಖಾಸಗಿ ಬ್ಯಾಂಕ್‌ಗಳ ಪಾಲು ಶೇ.4 ಮಾತ್ರ. ಡಿಸೆಂಬರ್ 2022ರವರೆಗೆ 140 ಉಷ್ಣ ವಿದ್ಯುತ್ ಸ್ಥಾವರಗಳಿಗೆ 7.12 ಲಕ್ಷ ಕೋಟಿ ರೂ. ಸಾಲ ನೀಡಲಾಗಿದೆ. ಸ್ಥಾವರಗಳು ಮೌಲ್ಯ ಕಳೆದು ಕೊಂಡರೆ, ಬ್ಯಾಂಕ್/ಹಣಕಾಸು ಸಂಸ್ಥೆಗಳ ಮೇಲೆ ವಿಪರಿಣಾಮ ಉಂಟಾಗುತ್ತದೆ. ಬ್ಯಾಂಕ್‌ಗಳನ್ನು ಉಳಿಸಲು/ವಿಪರಿಣಾಮ ಕಡಿಮೆ ಮಾಡಲು, ಸೂತ್ರವೊಂದನ್ನು ಕಂಡುಕೊಳ್ಳಬೇಕು ಎಂದು ಆರ್‌ಬಿಐ ಬುಲೆಟಿನ್‌ನ ಲೇಖನ ಹೇಳುತ್ತದೆ(ನವೆಂಬರ್ 2023). ಈ ಮೊದಲು ಕಲ್ಲಿದ್ದಲು ಸ್ಥಾವರಗಳಿಗೆ ಉದಾರವಾಗಿ ಸಾಲ ನೀಡಲಾಗುತ್ತಿತ್ತು. ಕ್ರಮೇಣ ಪರಿಸ್ಥಿತಿ ಬದಲಾಗುತ್ತಿದೆ. 2012ರಲ್ಲಿ ಒಂದೇ ಒಂದು ಹೊಸ ಸ್ಥಾವರಕ್ಕೂ ಸಾಲ ನೀಡಿಲ್ಲ(ಬಿಹಾರದ 1.32 ಗಿಗಾ ವ್ಯಾಟ್ ಉಷ್ಣ ವಿದ್ಯುತ್ ಸ್ಥಾವರಕ್ಕೆ ಎಸ್‌ಬಿಐ ಮತ್ತು ಕೆನರಾ ಬ್ಯಾಂಕ್ ಸಾಲ ನೀಡಿರುವುದು ಹೊರತುಪಡಿಸಿದರೆ). ಬದಲಾಗಿ ಪುನರ್ಬಳಕೆ ಇಂಧನ ಸ್ಥಾವರಗಳಿಗೆ ಸಾಲ ನೀಡಿಕೆ ಹೆಚ್ಚುತ್ತಿದೆ.

ಪುನರ್ಬಳಕೆ ವಿದ್ಯುತ್ ಹೆಚ್ಚಳ

ದೇಶದ ಇಂಧನ ಮಿಶ್ರಣದಲ್ಲಿ ಕಲ್ಲಿದ್ದಲು ಮೇಲುಗೈ ಪಡೆದಿದ್ದರೂ, 2022-23ರಲ್ಲಿ ಪುನರ್ಬಳಕೆ ವಿದ್ಯುತ್ ಪಾಲು ಒಟ್ಟು ಸಾಮರ್ಥ್ಯದ ಶೇ.41 ಇತ್ತು(2011-12ರಲ್ಲಿ ಶೇ.32). 2017ರ ಬಳಿಕ ಪುನರ್ಬಳಕೆ ವಿದ್ಯುತ್ ಸಾಮರ್ಥ್ಯದ ವಾರ್ಷಿಕ ಹೆಚ್ಚಳವು ಕಲ್ಲಿದ್ದಲು ವಿದ್ಯುತ್ ಸಾಮರ್ಥ್ಯವನ್ನು ಮೀರಿದೆ. ಕಲ್ಲಿದ್ದಲು ಸ್ಥಾವರಗಳ ನಿರ್ಮಾಣಕ್ಕೆ ಸಾಲ ಅಲಭ್ಯವಾಗುತ್ತಿದೆ ಮತ್ತು ಸ್ಥಾವರಗಳ ಸಾಮರ್ಥ್ಯ ಹೆಚ್ಚುತ್ತಿಲ್ಲ. ಅಂತರ್‌ರಾಷ್ಟ್ರೀಯ ಸುಸ್ಥಿರ ಅಭಿವೃದ್ಧಿ ಸಂಸ್ಥೆ ಪ್ರಕಾರ, ಜಾರ್ಖಂಡ್, ಒಡಿಶಾ ಮತ್ತು ಛತ್ತೀಸ್‌ಗಡದ ಕಲ್ಲಿದ್ದಲು ಸ್ಥಾವರಗಳ ಮೇಲಿನ ಹೂಡಿಕೆ ಅನುತ್ಪಾದಕವಾಗುತ್ತಿದೆ.

ಅಂತರ್‌ರಾಷ್ಟ್ರೀಯ ಮಟ್ಟದಲ್ಲಿಯೂ ಪರಿಸ್ಥಿತಿ ಬದಲಾಗುತ್ತಿದೆ. ಚೀನಾದಲ್ಲಿ 2000-2022ರ ಅವಧಿಯಲ್ಲಿ ಪಳೆಯುಳಿಕೆ ಇಂಧನದಿಂದ ವಿದ್ಯುತ್ ಉತ್ಪಾದನೆ ಶೇ.82ರಿಂದ ಶೇ.65ಕ್ಕೆ ಕುಸಿದಿದೆ; ಪರ್ಯಾಯ ಮೂಲಗಳಿಂದ ಉತ್ಪಾದನೆ ಶೇ.20ರಿಂದ 35ಕ್ಕೆ ಹೆಚ್ಚಿದೆ. ಆದರೆ, ಚೀನಾ ಜಾಗತಿಕವಾಗಿ ಅತಿ ಹೆಚ್ಚು ಕಲ್ಲಿದ್ದಲು ಬಳಸುತ್ತಿದ್ದು, ವಾತಾವರಣಕ್ಕೆ ಶೇ.30ರಷ್ಟು ಮಲಿನ ಗಾಳಿ ತುಂಬುತ್ತಿದೆ; ಜಗತ್ತಿನ ಅತಿ ದೊಡ್ಡ ಹಸಿರುಮನೆ ಅನಿಲ ಹೊರಸೂಸುವ ರಾಷ್ಟ್ರವಾಗಿದೆ. ಇದೇ ಅವಧಿಯಲ್ಲಿ ಭಾರತದಲ್ಲಿ ಶುದ್ಧ ವಿದ್ಯುತ್ ಉತ್ಪಾದನೆ ಶೇ.17ರಿಂದ ಶೇ.23ಕ್ಕೆ ಹೆಚ್ಚಿದೆ. ಸೌದಿ ಅರೇಬಿಯದ ಶೇ.99 ಹಾಗೂ ದಕ್ಷಿಣ ಆಫ್ರಿಕಾದ ಶೇ.86ರಷ್ಟು ವಿದ್ಯುತ್ ಪಳೆಯುಳಿಕೆ ಇಂಧನದಿಂದ ಬರುತ್ತದೆ. ಪ್ರತಿಯಾಗಿ, ಬ್ರೆಝಿಲ್ ಮತ್ತು ಇಥಿಯೋಪಿಯಾದಲ್ಲಿ ಶುದ್ಧ ವಿದ್ಯುತ್ ಉತ್ಪಾದನೆ ಪ್ರಮಾಣ ಶೇ.90ಕ್ಕಿಂತ ಹೆಚ್ಚು ಇದೆ.

2019-22ರ ಅವಧಿಯಲ್ಲಿ ದೇಶದ 15 ಪ್ರಮುಖ ರಾಜ್ಯಗಳಲ್ಲಿ ನಡೆದ ಅವಲೋಕನದ ಪ್ರಕಾರ, ಗುಜರಾತಿನಲ್ಲಿ ವಿದ್ಯುತ್ ಉತ್ಪಾದನೆಗೆ ಪಳೆಯುಳಿಕೆ ಇಂಧನದ ಬಳಕೆ ಶೇ.80ರಿಂದ ಶೇ.60ಕ್ಕೆ ಇಳಿದಿದೆ. ರಾಜಸ್ಥಾನ ದಲ್ಲಿಯೂ ಇಳಿಕೆ ಕಂಡುಬಂದಿದೆ. ಕರ್ನಾಟಕ-ಹಿಮಾಚಲ ಪ್ರದೇಶದಲ್ಲಿ ಶುದ್ಧ ವಿದ್ಯುತ್ ಪ್ರಮಾಣ ಹೆಚ್ಚು ಇದೆ. ತಮಿಳುನಾಡು ಶೇ.50ರಷ್ಟು ಶುದ್ಧ ವಿದ್ಯುತ್ ಉತ್ಪಾದಿಸುತ್ತಿದ್ದು, ಇತ್ತೀಚೆಗೆ ಪ್ರಗತಿ ಸ್ಥಗಿತವಾಗಿದೆ. ತದ್ವಿರುದ್ಧವಾಗಿ, ಉತ್ತರಪ್ರದೇಶ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ಛತ್ತೀಸ್‌ಗಡ ಮತ್ತು ಬಿಹಾರದಲ್ಲಿ ಶೇ.90ಕ್ಕಿಂತ ಅಧಿಕ ವಿದ್ಯುತ್ ಪಳೆಯುಳಿಕೆ ಇಂಧನಗಳಿಂದ ಬರುತ್ತಿದೆ. ಒಡಿಶಾ ಮತ್ತು ಪಂಜಾಬಿನಲ್ಲಿ ಪರ್ಯಾಯ ಮೂಲಗಳಿಂದ ವಿದ್ಯುತ್ ಉತ್ಪಾದನೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿದೆ.

ಆದರೆ, ಕಲ್ಲಿದ್ದಲು ದಾಖಲೆ ಪ್ರಮಾಣದಲ್ಲಿ ಉತ್ಪಾದನೆಯಾಗಿದೆ. ಡಿಸೆಂಬರ್ 15, 2023ರಲ್ಲಿ ಬಿಡುಗಡೆಯಾದ ಅಂತರ್‌ರಾಷ್ಟ್ರೀಯ ಇಂಧನ ಏಜೆನ್ಸಿ(ಐಇಎ) ವರದಿ ಪ್ರಕಾರ, ಕಲ್ಲಿದ್ದಲಿನ ಜಾಗತಿಕ ಬೇಡಿಕೆ 2026ರಲ್ಲಷ್ಟೇ ಕಡಿಮೆಯಾಗಲಿದೆ. 2023ರಲ್ಲಿ ಕಲ್ಲಿದ್ದಲು ಬೇಡಿಕೆ ಶೇ.1.4ರಷ್ಟು ಹೆಚ್ಚಿದ್ದು, ಉತ್ಪಾದನೆ 8.5 ಶತಕೋಟಿ ಟನ್ ದಾಟಿದೆ. ಕಲ್ಲಿದ್ದಲು ಬೇಡಿಕೆ ಅಮೆರಿಕ/ಯುರೋಪಿಯನ್ ಯೂನಿಯನ್‌ನಲ್ಲಿ ತಲಾ ಶೇ.20ರಷ್ಟು ಕುಸಿತ, ಭಾರತ ಶೇ.8 ಹಾಗೂ ಚೀನಾದಲ್ಲಿ ಶೇ.5ರಷ್ಟು ಬೇಡಿಕೆ ಹೆಚ್ಚಳ ನಿರೀಕ್ಷಿಸಲಾಗಿದೆ. ವಿದ್ಯುತ್ ಉತ್ಪಾದನೆಗೆ ಕಲ್ಲಿದ್ದಲು ಬಳಕೆ 2024ರ ನಂತರ ಕಡಿಮೆಯಾಗಲಿದೆ. ಪ್ರಸಕ್ತ ಅರ್ಧಕ್ಕಿಂತ ಹೆಚ್ಚು ಕಲ್ಲಿದ್ದಲು ಬೇಡಿಕೆ ಚೀನಾದಿಂದ ಬರುತ್ತಿದೆ. 2024ರಲ್ಲಿ ಅಲ್ಲಿ ಕೂಡ ಪರ್ಯಾಯ ವಿದ್ಯುತ್ ಮೂಲಗಳಿಂದಾಗಿ ಕಲ್ಲಿದ್ದಲಿಗೆ ಬೇಡಿಕೆ ಕುಸಿಯಲಿದೆ ಎಂದು ಐಇಎ ಹೇಳಿದೆ.

ರಾಷ್ಟ್ರೀಯ ಹೂಡಿಕೆ ಉತ್ತೇಜನ ಮತ್ತು ಸೌಲಭ್ಯ ನೆರವು ಏಜೆನ್ಸಿ, ಇನ್ವೆಸ್ಟ್ ಇಂಡಿಯಾ ಪ್ರಕಾರ, ಪಳೆಯುಳಿಕೇತರ ವಿದ್ಯುತ್ ಪ್ರಮಾಣ 180 ಗಿಗಾವ್ಯಾಟ್ ಇದ್ದು, ಇದು ಒಟ್ಟು ವಿದ್ಯುತ್ತಿನ ಶೇ.43.7 ಮತ್ತು ಪಳೆಯುಳಿಕೆ ಇಂಧನದಿಂದ ಶೇ.56.3 (ಕಲ್ಲಿದ್ದಲು ಶೇ.48.7, ಲಿಗ್ನೈಟ್ ಶೇ.1.6, ಅನಿಲ ಶೇ.5.9, ಡೀಸೆಲ್ ಶೇ.0.1) ವಿದ್ಯುತ್ ಉತ್ಪಾದನೆ ಆಗಿದೆ(ಮೂಲ: ಕೇಂದ್ರೀಯ ವಿದ್ಯುತ್ ಪ್ರಾಧಿಕಾರ, ಸಿಇಎ. ಸೆಪ್ಟಂಬರ್ 2013ರ ಮಾಹಿತಿ). ಸೌರ ಫಲಕಗಳ ಬೆಲೆ ಕಡಿಮೆಯಾಗುತ್ತಿದ್ದು, ಕ್ಷಮತೆ ಹೆಚ್ಚಳದಿಂದ ಸೌರ ವಿದ್ಯುತ್ ಉತ್ಪಾದನೆ ಹೆಚ್ಚಲಿದೆ.

ಕಲ್ಲಿದ್ದಲು ದಹನದಿಂದ ಸೃಷ್ಟಿಯಾಗುವ ಇಂಗಾಲವನ್ನು ಹಿಡಿದಿಡುವ ತಂತ್ರಜ್ಞಾನ ಶೈಶವಾವಸ್ಥೆಯಲ್ಲಿದೆ. ಶತಮಾನದ ಅಂತ್ಯದಲ್ಲಿ ಉಷ್ಣಾಂಶ 1.5 ಡಿಗ್ರಿ ಸೆಂ.ಗಿಂತ ಹೆಚ್ಚದಂತೆ ನೋಡಿಕೊಳ್ಳಬೇಕೆಂದಿದ್ದರೆ, ಕಲ್ಲಿದ್ದಲಿಂದ ಬರುವ ಮಾಲಿನ್ಯ 2020-2050ರ ಅವಧಿಯಲ್ಲಿ ಶೇ.95ರಷ್ಟು ಕಡಿಮೆಯಾಗಬೇಕಿದೆ. ಇದು ಸಾಧ್ಯವೇ? ಶುದ್ಧ ಇಂಧನದ ಉತ್ಪಾದನೆ ಹೆಚ್ಚುತ್ತಿದ್ದರೂ, ಬೇಡಿಕೆ ಪೂರೈಸುವಷ್ಟಿಲ್ಲ. ಈ ಕ್ಷೇತ್ರಕ್ಕೆ ಇನ್ನಷ್ಟು ಪ್ರೋತ್ಸಾಹ-ಬೆಂಬಲ ಬೇಕಿದೆ. ಆಗಷ್ಟೇ ಸ್ಥಿತ್ಯಂತರ ಸಮಸ್ಯೆಯನ್ನು ನಿರ್ವಹಿಸಬಹುದು. ಪಳೆಯುಳಿಕೆ ಇಂಧನಗಳ ಬಳಕೆಯನ್ನು ತಕ್ಷಣ ನಿಲ್ಲಿಸಬೇಕಿದೆ. ನಿಲ್ಲಿಸಿ ಎಂದು ಆಗ್ರಹಿಸುತ್ತಿರುವ ವಿಜ್ಞಾನಿಗಳ ಬಂಡಾಯದಲ್ಲಿ ಪಾಲ್ಗೊಳ್ಳಬೇಕಿದೆ. ದೇಶಾದ್ಯಂತ ಮಾಲಿನ್ಯದಿಂದ ತಲಾ ಉತ್ಪಾದಕತೆ ಕುಸಿಯುತ್ತಿದೆ. ರೈತರು ಹವಾಮಾನ ಬದಲಾವಣೆಗೆ ಸಿಲುಕಿದ್ದಾರೆ. ಕಾಲಮಾನಗಳ ನಡುವಿನ ರೇಖೆ ಅಳಿಸಿಹೋಗಿದೆ. 12 ವರ್ಷದ ಬಾಲಕಿ ಮಣಿಪುರದ ಲಿಸಿಪ್ರಿಯಾ ಕಂಗುಜಮ್‌ಳ ‘ಪಳೆಯುಳಿಕೆ ಇಂಧನಗಳನ್ನು ತಕ್ಷಣ ಬಹಿಷ್ಕರಿಸಿ’ ಎಂಬ ಕೂಗಿಗೆ ಎಲ್ಲರೂ ದನಿಗೂಡಿಸಬೇಕಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಋತ

contributor

Similar News