ಬರ, ಹಣದುಬ್ಬರದಿಂದ ರೈತರಿಗೆ ಬರೆ

ರೈತರು ಮಾರುಕಟ್ಟೆಗಳಿಂದ ಲಾಭ ಪಡೆದು ಕೊಳ್ಳುವಂತಾಗಲು ಮತ್ತು ಮಾರುಕಟ್ಟೆಯಲ್ಲಿ ಪಾಲ್ಗೊಳ್ಳಲು ಗಂಭೀರ ಪ್ರಯತ್ನದ ಅಗತ್ಯವಿದೆ. ಆದರೆ, ಸರಕಾರದ ಆಸಕ್ತಿ ಇರುವುದು ಮತ ಬ್ಯಾಂಕ್ ರಾಜಕೀಯಕ್ಕೆ ಸೂಕ್ತವಾದ ಜನಪ್ರಿಯ ಯೋಜನೆಗಳಲ್ಲಿ ಮಾತ್ರ; ದೀರ್ಘಕಾಲೀನ ಸುಸ್ಥಿರ ಯೋಜನೆಗಳು ಅದಕ್ಕೆ ಬೇಡ. ‘ಕೃಷಿ ಆದಾಯ ದುಪ್ಪಟ್ಟು’ ಎಂಬುದು ಬರಿದೇ ಘೋಷಣೆಯಷ್ಟೇ. ಟೊಮೆಟೊ ಕೆಜಿಗೆ ೫೦ ಪೈಸೆ ಆಗುವುದು ಮತ್ತು ರೈತರು ರಸ್ತೆಗೆ ಸುರಿದು ಪ್ರತಿಭಟಿಸುವುದು ಎರಡೂ ಮುಂದುವರಿಯುತ್ತವೆ.

Update: 2023-09-01 04:29 GMT

ಟೊಮೆಟೊ ಬೆಲೆ ಗಗನಕ್ಕೇರಿ ಮತ್ತೆ ಧರೆಗಿಳಿದ ಬಳಿಕ ಧಾನ್ಯಗಳು, ತೊಗರಿಬೇಳೆ ಮತ್ತು ಈರುಳ್ಳಿ ಬೆಲೆ ಏರುತ್ತಿದೆ. ಆಹಾರ ವಸ್ತುಗಳ ಬೆಲೆ ಹೆಚ್ಚಳದಿಂದ ಹಣದುಬ್ಬರ ಅಧಿಕಗೊಂಡಿದೆ. ಇನ್ನೊಂದೆಡೆ, ರಾಜ್ಯವನ್ನು ಮಳೆ ಕೊರತೆ ಕಾಡುತ್ತಿದ್ದು, ಬರದ ಆತಂಕದಲ್ಲಿದೆ. ಸರಕಾರದ ಗ್ರಾಹಕಸ್ನೇಹಿ ನೀತಿಯಿಂದ ರೈತರು ನಷ್ಟಕ್ಕೀಡಾಗುತ್ತಿದ್ದಾರೆ. ಕೃಷಿಗೆ ಸಂಬಂಧಿಸಿದಂತೆ ಸಕಾರಾತ್ಮಕ ಕಾರ್ಯನೀತಿ-ಕಾರ್ಯಕ್ರಮಗಳಿಲ್ಲದೆ ಕತ್ತಿಯಲಗಿನ ಮೇಲೆ ನಡಿಗೆ ಮುಂದುವರಿದಿದೆ.

ಕರ್ನಾಟಕ ರಾಜ್ಯ ಸ್ವಾಭಾವಿಕ ಅವಘಡಗಳ ಪರಾಮರ್ಶನ ಕೇಂದ್ರದ ಪ್ರಕಾರ, ಜೂನ್ 1 ಮತ್ತು ಆಗಸ್ಟ್ 19ರ ನಡುವಿನ ನೈಋತ್ಯ ಮಳೆ ಋತುವಿನಲ್ಲಿ ಶೇ.24ರಷ್ಟು ಮಳೆ ಕೊರತೆ ಆಗಿದೆ. 238 ತಾಲೂಕುಗಳಲ್ಲಿ 120ರಲ್ಲಿ ಬೆಳೆ ಸಮೀಕ್ಷೆ ನಡೆಸಲು ಸರಕಾರ ಮುಂದಾಗಿದೆ. ಒಕ್ಕೂಟ ಸರಕಾರದ ಮಾರ್ಗದರ್ಶಿ ಸೂತ್ರಗಳ ಪ್ರಕಾರ, ಬರಪೀಡಿತ ಎಂದು ಘೋಷಿಸಲು ಬೆಳೆ ಸಮೀಕ್ಷೆ ಕಡ್ಡಾಯ. ಪ್ರತೀ ತಾಲೂಕಿನ 10 ಗ್ರಾಮಗಳಲ್ಲಿ ಮತ್ತು ಪ್ರತೀ ಗ್ರಾಮದಲ್ಲಿ ಐದು ಬೆಳೆಗಳ ಸಮೀಕ್ಷೆ ನಡೆಸಬೇಕಾಗುತ್ತದೆ. ಮಳೆ ಕೊರತೆಯಿಂದ ಬಿತ್ತನೆ ಕ್ಷೇತ್ರ ಕೂಡ ಕುಸಿದಿದೆ. ಆಗಸ್ಟ್ 18ರವರೆಗೆ 82 ಲಕ್ಷ ಹೆಕ್ಟೇರ್‌ಗೆ ಬದಲು 64 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಆಗಿದೆ(ಕಳೆದ ವರ್ಷ 71.74 ಲಕ್ಷ ಹೆಕ್ಟೇರ್). ಮುಂಗಾರು ದುರ್ಬಲವಾಗಿರುವುದರಿಂದ, ಭೂಮಿಯಲ್ಲಿನ ತೇವಾಂಶ ಕಡಿಮೆಯಾಗಿದೆ. ಇದು ಹಿಂಗಾರಿನ ಪ್ರಮುಖ ಬೆಳೆಗಳಾದ ಗೋಧಿ, ಈರುಳ್ಳಿ ಮತ್ತು ಆಲೂಗಡ್ಡೆ ಬೆಳೆಗೆ ಹಾನಿಯುಂಟು ಮಾಡಲಿದೆ. ಹಿಂಗಾರು ಬೆಳೆಗಳಿಗೆ ನೀರಾವರಿ ಸೌಲಭ್ಯ ಮುಖ್ಯ. ಆದರೆ, ಕೇಂದ್ರ ಜಲ ಆಯೋಗದ ಪ್ರಕಾರ, 146 ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಕಡಿಮೆ ಇದೆ.

ಹಣದುಬ್ಬರದ ಬಿಸಿ

ಆಹಾರ ಪದಾರ್ಥಗಳ ಬೆಳೆ ಹೆಚ್ಚಳದಿಂದ ಜುಲೈನಲ್ಲಿ ಹಣದುಬ್ಬರ ಶೇ.7.44 ತಲುಪಿತು(15 ತಿಂಗಳಲ್ಲಿ ಅಧಿಕ). ಗ್ರಾಹಕ ಬೆಲೆ ಸೂಚ್ಯಂಕ(ಸಿಪಿಐ) ಶೇ.11.51ಕ್ಕೆ ಹೆಚ್ಚಳಗೊಂಡಿದ್ದು, ರಿಸರ್ವ್ ಬ್ಯಾಂಕ್ ನಿಗದಿಪಡಿಸಿದ ಮಿತಿ ಶೇ.6ನ್ನು ಮೀರಿದೆ. ಇದು ಅಕ್ಟೋಬರ್ 2020ರ ಬಳಿಕ ಅತ್ಯಂತ ಹೆಚ್ಚು ಎಂದು ರಾಷ್ಟ್ರೀಯ ಅಂಕಿಅಂಶ ಕಚೇರಿ(ಎನ್‌ಎಸ್‌ಒ) ಹೇಳಿದೆ. ಕೇಂದ್ರ ವಿತ್ತ ಇಲಾಖೆ ಪ್ರಕಾರ, ಹಣದುಬ್ಬರ ಹಲವು ತಿಂಗಳು ಮುಂದುವರಿಯಲಿದ್ದು, ಇದಕ್ಕೆ ಜಾಗತಿಕ/ದೇಶಿ ಪರಿಸ್ಥಿತಿ ಮತ್ತು ಅಸಮರ್ಪಕ ಮಳೆ ಕಾರಣ. ಗೋಧಿ ರಫ್ತಿಗೆ ಸಂಬಂಧಿಸಿದಂತೆ ಉಕ್ರೇನ್ ಮಾಡಿಕೊಂಡಿದ್ದ ಒಪ್ಪಂದವನ್ನು ರಶ್ಯ ರದ್ದುಗೊಳಿಸಿರುವುದು ಮತ್ತು ಗೋಧಿ ಬೆಳೆಯುವ ಪ್ರಮುಖ ರಾಷ್ಟ್ರಗಳಲ್ಲಿ ಒಣ ಹವೆಯಿಂದಾಗಿ, ಧಾನ್ಯಗಳ ಬೆಲೆ ಹೆಚ್ಚಳಗೊಂಡಿದೆ. ಅಸಮರ್ಪಕ ಮಳೆ ಹಾಗೂ ಬಿಳಿ ನೊಣ ರೋಗದಿಂದಾಗಿ ತರಕಾರಿಗಳ ಬೆಲೆ ಹೆಚ್ಚಳಗೊಂಡಿದೆ ಎಂದು ವಿತ್ತ ಇಲಾಖೆಯ ಮಾಸಿಕ ಆರ್ಥಿಕ ವರದಿ(ಎಂಇಆರ್) ಹೇಳುತ್ತದೆ. ಇದರಿಂದ ಹಣದುಬ್ಬರ ಹೆಚ್ಚಿದ್ದು, ಗ್ರಾಹಕರ ಜೇಬಿಗೆ ಕನ್ನ ಬಿದ್ದಿದೆ.

ಅಕ್ಕಿ ರಫ್ತು ಮೇಲೆ ನಿರ್ಬಂಧ

ಆಫ್ರಿಕಾ-ಏಶ್ಯದ ಹಲವು ದೇಶಗಳ ಬಡವರ ಆಹಾರ ಸುರಕ್ಷತೆಯನ್ನು ಕಾಪಾಡಿರುವುದು ಭಾರತ ಮತ್ತಿತರ ದೇಶಗಳಿಂದ ಬರುತ್ತಿರುವ ಅಕ್ಕಿ. ದಿನವೊಂದಕ್ಕೆ ಎರಡು ಡಾಲರ್‌ಗಿಂತ ಕಡಿಮೆ ಆದಾಯ ಇರುವ ನೈರೋಬಿಯ ಕಿಬೆರಾ ಕೊಳೆಗೇರಿಯ ನಿವಾಸಿಗಳು ಸೇರಿದಂತೆ ಲಕ್ಷಾಂತರ ಜನರ ಜೀವಗಳನ್ನು ಈ ಅಕ್ಕಿ ಉಳಿಸಿದೆ. ಆದರೆ, ಜಗತ್ತಿನ ಅತ್ಯಂತ ದೊಡ್ಡ ಅಕ್ಕಿ ರಫ್ತುದಾರ ದೇಶವಾದ ಭಾರತ ಕಳೆದ ಜುಲೈನಲ್ಲಿ ಬಾಸ್ಮತಿಯಲ್ಲದ ಅಕ್ಕಿ ಮತ್ತು ನುಚ್ಚಿನ ರಫ್ತು ಮೇಲೆ ನಿರ್ಬಂಧ ಹೇರಿತು. ಆನಂತರ ಅಕ್ಕಿ ಬೆಲೆ ಐದು ಪಟ್ಟು ಹೆಚ್ಚಿದೆ. ಜಾಗತಿಕವಾಗಿ 9.5 ದಶಲಕ್ಷ ಟನ್ ಅಕ್ಕಿ ಕೊರತೆ ಆಗಲಿದೆ ಎಂದು ಅಂದಾಜಿಸಲಾಗಿದೆ(ಜಾಗತಿಕ ರಫ್ತಿನ ಅಂದಾಜು 1/5 ಭಾಗ). ಎಲ್‌ನಿನೋದಿಂದ ಭತ್ತದ ಉತ್ಪಾದನೆ ಕಡಿಮೆಯಾಗಲಿದ್ದು, ಅಕ್ಕಿ ಬೆಲೆ ಹೆಚ್ಚುತ್ತಿದೆ. ಉದಾಹರಣೆಗೆ, ವಿಯಟ್ನಾಂನಲ್ಲಿ ಅಕ್ಕಿ ಬೆಲೆ ಕಳೆದ 15 ವರ್ಷದಲ್ಲಿ ಅತ್ಯಂತ ಹೆಚ್ಚು ಆಗಿದೆ. ಭಾರತ ಅಕ್ಕಿ ರಫ್ತಿಗೆ ನಿರ್ಬಂಧ ಹೇರುವ ಮುನ್ನವೇ ಕೊರತೆಯ ಭೀತಿಯಿಂದ ತರಾತುರಿಯಲ್ಲಿ ಅಕ್ಕಿ ಖರೀದಿ ಆರಂಭಗೊಂಡಿತ್ತು. ಒಂದುವೇಳೆ ಭಾರತದ ಉದಾಹರಣೆಯನ್ನು ಇನ್ನಿತರ ದೇಶಗಳು ಅನುಸರಿಸಿದರೆ, ಪರಿಸ್ಥಿತಿ ಚಿಂತಾಜನಕವಾಗುತ್ತದೆ. ಈಗಾಗಲೇ ಅರಬ್ ಎಮಿರೇಟ್ಸ್ ದೇಶಿ ಸಂಗ್ರಹವನ್ನು ಕಾಯ್ದುಕೊಳ್ಳಲು ಅಕ್ಕಿ ರಫ್ತು ನಿಲ್ಲಿಸಿದೆ. ಎಲ್‌ನಿನೋ ಸ್ವಾಭಾವಿಕವಾದ, ತಾತ್ಕಾಲಿಕವಾದ ಮತ್ತು ಪೆಸಿಫಿಕ್ ಸಾಗರದ ಯಾವುದೋ ಒಂದು ಭಾಗದಲ್ಲಿ ಸಂಭವಿಸುವ ಬಿಸಿಯೇರುವಿಕೆ ವಿದ್ಯಮಾನ. ಆದರೆ, ಅದು ಜಾಗತಿಕ ಹವಾಮಾನವನ್ನು ಬದಲಿಸುತ್ತದೆ; ಹವಾಮಾನ ಬದಲಾವಣೆಯಿಂದ ಎಲ್‌ನಿನೋ ಪರಿಣಾಮ ತೀವ್ರವಾಗುತ್ತದೆ. ಈ ಹವಾಮಾನ ವೈಪರೀತ್ಯವು ಭತ್ತ ಸೇರಿದಂತೆ ಆಹಾರ ಬೆಳೆಗಳಿಗೆ ಹಾನಿಯುಂಟು ಮಾಡುತ್ತದೆ.

ತೊಗರಿ ಬೇಳೆ ಬೆಲೆಯ ನಾಗಾಲೋಟ

ಧಾನ್ಯಗಳಿಗಿಂತ ದುಪ್ಪಟ್ಟು ಪ್ರೊಟೀನ್ ಅಂಶ ಇರುವ ಬೇಳೆಕಾಳುಗಳು ಅಡುಗೆಯ ಅವಿಭಾಜ್ಯ ಅಂಗ. ಕಲಬುರ್ಗಿ ತೊಗರಿಯ ಪ್ರಮುಖ ಉತ್ಪಾದಕ. ಇಲ್ಲಿನ ಮಣ್ಣಿನಲ್ಲಿರುವ ಕ್ಯಾಲ್ಸಿಯಂ ಬೇಳೆಗೆ ವಿಶಿಷ್ಟ ರುಚಿ ಕೊಡುವುದರಿಂದ, ಬೇಡಿಕೆ ಹೆಚ್ಚು. ‘ಭೀಮಾ ಪಲ್ಸ್’ ಹೆಸರಿನಲ್ಲಿ ಜಿಐ(ಭೌಗೋಳಿಕ ಲಕ್ಷಣ) ಚಿನ್ಹೆಯಡಿ ಮಾರಾಟ ಮಾಡಲು ಜಿಲ್ಲಾಧಿಕಾರ ಪ್ರಯತ್ನಿಸುತ್ತಿದೆ. ಕಳೆದ ವರ್ಷ ಸಂಭವಿಸಿದ ಪ್ರವಾಹ ಹಾಗೂ ಕಲಬುರ್ಗಿ, ಬೀದರ್, ಯಾದಗಿರಿ, ವಿಜಯಪುರ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಹರಡಿದ ಮುರುಟು ರೋಗದಿಂದ ಉತ್ಪಾದನೆ ಕುಸಿದಿದೆ. ಇದರಿಂದ, ಮಾರ್ಚ್ 2023ರಲ್ಲಿ ಕ್ವಿಂಟಾಲ್‌ಗೆ 8,000ರೂ. ಇದ್ದ ಬೇಳೆ ಬೆಲೆ ಆಗಸ್ಟ್‌ನಲ್ಲಿ 12,000 ರೂ.ಗೆ ಹೆಚ್ಚಳಗೊಂಡಿದೆ. ಮಹಾರಾಷ್ಟ್ರದಲ್ಲೂ ಬೆಳೆ ಹಾನಿಯಾಗಿದೆ. ಆಫ್ರಿಕಾದಿಂದ ಬರುತ್ತಿರುವ ಬೇಳೆಯಿಂದ ಬೇಡಿಕೆಯನ್ನು ಸರಿದೂಗಿಸಲಾಗುತ್ತಿದೆ. ಆದರೆ, ಈ ದೇಶಗಳು ರಫ್ತಿನ ಮೇಲೆ ನಿರ್ಬಂಧ ಹೇರಿರುವುದರಿಂದ, ಟನ್‌ಗೆ 350 ಡಾಲರ್ ಇದ್ದ ಬೆಲೆ 800-900 ಡಾಲರ್‌ಗೆ ಹೆಚ್ಚಳಗೊಂಡಿದೆ. ಕಲಬುರ್ಗಿ ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ಬೇಳೆ ಕಾಳುಗಳ ಬಿತ್ತನೆ ಪ್ರದೇಶ ಶೇ.10ರಷ್ಟು ಕಡಿಮೆಯಾಗಿದೆ. ಡಿಸೆಂಬರ್-ಜನವರಿಯಲ್ಲಿ ಹೊಸ ಬೆಳೆ ಕಟಾವಾದ ನಂತರವಷ್ಟೇ ಬೆಲೆ ಇಳಿಯಬಹುದು. ಆದರೆ, ಮಳೆ ಕೈಕೊಟ್ಟಲ್ಲಿ ಉತ್ಪಾದನೆ ಕುಸಿಯುವ ಸಾಧ್ಯತೆ ಇದೆ. ಬೇಳೆ ಬೆಲೆ ಈಗಾಗಲೇ 200 ರೂ. ದಾಟಿದೆ.

ಈರುಳ್ಳಿ ರೈತರ ಪ್ರತಿಭಟನೆ

ಟೊಮೆಟೊ ನಾಗಾಲೋಟ ಮುಗಿಯುವ ಮುನ್ನವೇ ಈರುಳ್ಳಿ ಬೆಲೆ ಏರಿಕೆ ಶುರುವಾಗಿದೆ. ಈರುಳ್ಳಿ ದೇಶಿ ಆಹಾರ ಸಂಸ್ಕೃತಿಯ ಪ್ರಮುಖ ಭಾಗವಾಗಿದ್ದು, ಸರಕಾರಗಳನ್ನು ಉರುಳಿಸಿದ ಖ್ಯಾತಿ ಹೊಂದಿದೆ. ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶ ಒಟ್ಟು ಉತ್ಪಾದನೆಯಲ್ಲಿ ಶೇ.60 ಪಾಲು ಹೊಂದಿವೆ. ರಾಜ್ಯದಲ್ಲಿ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ, ದಾವಣಗೆರೆ, ವಿಜಯಪುರ, ಗದಗ, ಹುಬ್ಬಳ್ಳಿ ಮತ್ತು ಬೆಳಗಾವಿ ಜಿಲ್ಲೆಯಲ್ಲಿ ಬೆಳೆಯಲಾಗುತ್ತದೆ. 2 ವರ್ಷದಿಂದ ಬೆಳೆ ಕುಸಿತದಿಂದ ಕಂಗೆಟ್ಟಿದ್ದ ಈರುಳ್ಳಿ ಬೆಳೆಗಾರರು ಲಾಭದ ನಿರೀಕ್ಷೆಯಲ್ಲಿದ್ದರು. ಬೆಲೆ ಏರುಗತಿಯಲ್ಲಿದ್ದರಿಂದ ಮಧ್ಯಪ್ರವೇಶಿಸಿದ ಸರಕಾರ, ಆಗಸ್ಟ್ 2ನೇ ವಾರ ರಫ್ತಿನ ಮೇಲೆ ಶೇ.40ರಷ್ಟು ಸುಂಕ ವಿಧಿಸಿತು(ಡಿಸೆಂಬರ್ 31ರವರೆಗೆ ಅನ್ವಯಿಸುವಂತೆ). ನಾಸಿಕ್ ಮತ್ತಿತರ ಕಡೆ ರೈತರು-ವ್ಯಾಪಾರಿಗಳು ಪ್ರತಿಭಟನೆ ನಡೆಸಿ, ಮಾರುಕಟ್ಟೆ ಬಂದ್ ಮಾಡಿದರು. ರೈತರ ಸಿಟ್ಟು ತಣಿಸಲು ಕ್ವಿಂಟಾಲ್ ಒಂದಕ್ಕೆ 2,410 ರೂ.ನಂತೆ ಖರೀದಿಸುವುದಾಗಿ ಸರಕಾರ ಹೇಳಿತು. ರಫ್ತು ಸುಂಕ ವಿಧಿಸಿದ ಹಿಂದಿನ ದಿನ ಈರುಳ್ಳಿ ಬೆಲೆ ಕ್ವಿಂಟಾಲಿಗೆ 2,600-3,500 ರೂ. ಇತ್ತು. 2 ದಿನದ ಬಳಿಕ 1,800-2,600 ರೂ.ಗೆ ಕುಸಿಯಿತು. ಸುಂಕ ವಿಧಿಸುವಿಕೆಯಿಂದ ದೇಶಿ ಮಾರುಕಟ್ಟೆಯಲ್ಲಿ ಪೂರೈಕೆ ಹೆಚ್ಚಳಗೊಂಡು, ಬೆಲೆ ನಿಯಂತ್ರಣಕ್ಕೆ ಬರಬಹುದು. ಆದರೆ, ತೆರಿಗೆ ರೂಪದಲ್ಲಿ ಹಣ ಸರಕಾರದ ಬೊಕ್ಕಸ ಸೇರುತ್ತದೆ. ರಫ್ತಿಗೆ ಅವಕಾಶ ಇದ್ದಲ್ಲಿ ರೈತರಿಗೆ ಹೆಚ್ಚು ಲಾಭದ ಸಾಧ್ಯತೆ ಇತ್ತು.

ರಾಷ್ಟ್ರೀಯ ಸಹಕಾರ ಗ್ರಾಹಕರ ಒಕ್ಕೂಟ(ಎನ್‌ಸಿಸಿಎಫ್) ಮತ್ತು ನಾಫೆಡ್(ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟ) ಮೂಲಕ ಮಾರ್ಚ್‌ನಿಂದ 3 ಲಕ್ಷ ಟನ್ ಈರುಳ್ಳಿ ಖರೀದಿಸಿರುವ ಕೇಂದ್ರ, ಮತ್ತೆ 2 ಲಕ್ಷ ಟನ್ ಈರುಳ್ಳಿ ಖರೀದಿಸಲು ನಿರ್ಧರಿಸಿದೆ. ಮಾರ್ಚ್-ಎಪ್ರಿಲ್‌ನಲ್ಲಿ ಕ್ವಿಂಟಾಲ್‌ಗೆ 500 ರೂ. ಇದ್ದ ಈರುಳ್ಳಿ ಬೆಲೆ ಈಗ 3,000 ರೂ. ದಾಟಿದೆ. ಇಷ್ಟರಲ್ಲೇ ರಾಜ್ಯದಲ್ಲಿ ಹೊಸ ಬೆಳೆ ಬರಬೇಕಿತ್ತು. ಜುಲೈನಲ್ಲಿ ಅಧಿಕ ಮಳೆ ಹಾಗೂ ಆಗಸ್ಟ್‌ನಲ್ಲಿ ಮಳೆ ಕೊರತೆಯಿಂದ ಈ ಋತುವಿನಲ್ಲಿ ಉತ್ಪಾದನೆ ಕುಸಿಯುವ ಸಾಧ್ಯತೆಯಿದೆ. ಮಳೆ ಕೊರತೆಯಿಂದ ಸುಗ್ಗಿ ಒಂದು ತಿಂಗಳು ಮುಂದೆ ಹೋಗಿದೆ. ಇದರಿಂದ ಮಹಾರಾಷ್ಟ್ರದ ಅಹ್ಮದ್‌ನಗರ ಹಾಗೂ ನಾಸಿಕ್‌ನ ಕಳೆದ ವರ್ಷದ ಈರುಳ್ಳಿಯನ್ನು ನೆಚ್ಚಿಕೊಳ್ಳಬೇಕಾಗಿ ಬಂದಿದೆ. ಈ ಈರುಳ್ಳಿ ಬಣ್ಣ ಕಳೆದುಕೊಂಡಿದ್ದು, ಕಪ್ಪು ಚುಕ್ಕೆಗಳಿವೆ. ಸೆಪ್ಟಂಬರ್‌ನಲ್ಲಿ ಮಳೆಯಾದರೆ, ಬೆಳೆ ಉಳಿಯುತ್ತದೆ. ದುರದೃಷ್ಟವಶಾತ್, ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಅಧಿಕ ಮಳೆಯಾದಲ್ಲಿ ಉತ್ಪಾದನೆ ಇನ್ನಷ್ಟು ಕಡಿಮೆಯಾಗಲಿದೆ. ಮುಂದಿನ ಎರಡು ತಿಂಗಳಲ್ಲಿ ಪೂರೈಕೆ ಸುಧಾರಿಸದೆ ಇದ್ದಲ್ಲಿ, ದರ ದುಪ್ಪಟ್ಟು ಆಗಲಿದೆ. ಬ್ಯಾಂಕ್ ಆಫ್ ಬರೋಡಾದ ವರದಿ ಪ್ರಕಾರ, ರಫ್ತಿನ ಮೇಲಿನ ನಿರ್ಬಂಧದಿಂದ ಬೆಲೆ ಇನ್ನಷ್ಟು ಹೆಚ್ಚುವ ಸಾಧ್ಯತೆಯಿದೆ. ರಫ್ತು ನಿಷೇಧ ಮತ್ತು ಅಧಿಕ ದರದಲ್ಲಿ ಖರೀದಿಯಂಥ ಕ್ರಿಯೆಗಳು ಮುಂದಿನ ವರ್ಷದ ಬಿತ್ತನೆ ಮೇಲೆ ಪರಿಣಾಮ ಬೀರಲಿವೆ.

ರೈತರಿಗೆ ಲಾಭ ಆಗಲು ಬಿಡಲ್ಲ

ನಗರ ಪ್ರದೇಶದ ಗ್ರಾಹಕರ ಪರ ನಿಲುವು ಹೊಂದಿರುವ ಸರಕಾರ, ಬೆಲೆ ನಿಯಂತ್ರಣ, ದಾಸ್ತಾನಿಗೆ ಮಿತಿ ಹೇರುವಿಕೆ ಹಾಗೂ ಬೇಕಾಬಿಟ್ಟಿ ಆಮದು-ರಫ್ತು ನಿರ್ಬಂಧದ ಮೂಲಕ ಅವರನ್ನು ತಣಿಸಲು ಪ್ರಯತ್ನಿಸುತ್ತದೆ. ಇದರಿಂದ ರೈತರಿಗೆ ನಷ್ಟವಾಗುತ್ತಿದೆ. ಈರುಳ್ಳಿ ರಫ್ತಿಗೆ ನಿರ್ಬಂಧ ಹೇರಿದ್ದರಿಂದ, ರೈತರು ಸರಕಾರ ನಿಗದಿಪಡಿಸಿದ ಬೆಲೆಗೆ ಉತ್ಪನ್ನವನ್ನು ಮಾರಬೇಕಾಗಿ ಬಂದಿತು. ನಿಗದಿಪಡಿಸುವ ದರ ಮಾರುಕಟ್ಟೆ ದರಕ್ಕಿಂತ ಕಡಿಮೆ ಇದ್ದು, ರೈತರಿಗೆ ನಷ್ಟವಾಗಲಿದೆ. ರೈತರ ತೀವ್ರ ಪ್ರತಿಭಟನೆಗೆ ಮಣಿದು ಹಿಂಪಡೆದ ಕೃಷಿ ಕಾಯ್ದೆಗಳಲ್ಲಿ ಬೆಲೆಗಳ ಅನಿಯಂತ್ರಣ, ದಾಸ್ತಾನಿಗೆ ಮಿತಿ ಹಾಗೂ ರಫ್ತು ಇಲ್ಲವೇ ಆಮದಿಗೆ ಬೇಕಾಬಿಟ್ಟಿ ನಿರ್ಬಂಧ ಹೇರುವಿಕೆಯನ್ನು ತೆಗೆದುಹಾಕಬೇಕೆಂದು ಹೇಳಲಾಗಿತ್ತು. ತದ್ವಿರುದ್ಧವಾಗಿ, ಜೂನ್‌ನಲ್ಲಿ ಬೇಳೆಕಾಳು-ಗೋಧಿಯ ದಾಸ್ತಾನಿಗೆ ಮಿತಿ ಮತ್ತು ಜುಲೈಯಲ್ಲಿ ಬಾಸ್ಮತಿಯಲ್ಲದ ಅಕ್ಕಿ-ನುಚ್ಚಿನ ರಫ್ತು ನಿರ್ಬಂಧವನ್ನು ಹೇರಲಾಯಿತು. ಇದರಿಂದ ಆಫ್ರಿಕಾ ಮತ್ತು ಏಶ್ಯದ ಹಲವು ದೇಶಗಳ ಕೋಟ್ಯಂತರ ಜನರ ಆಹಾರ ಸುರಕ್ಷತೆಗೆ ಧಕ್ಕೆಯುಂಟಾದರೂ, ಸರಕಾರ ತಲೆ ಕೆಡಿಸಿಕೊಳ್ಳಲಿಲ್ಲ. ಉತ್ಪಾದನೆಯಾಗುವ 5-6 ದಶಲಕ್ಷ ಟನ್ ನುಚ್ಚಿನಲ್ಲಿ 3 ದಶಲಕ್ಷ ಟನ್ ನುಚ್ಚು ಎಥೆನಾಲ್ ಉತ್ಪಾದನೆಗೆ ಹೋಗುತ್ತದೆ. ಅಕ್ಕಿ ಬೆಲೆ ಜಾಗತಿಕವಾಗಿ ಹೆಚ್ಚಿದ್ದು, ರಫ್ತಿಗೆ ಅವಕಾಶ ನೀಡಿದ್ದರೆ ರೈತರಿಗೆ ಲಾಭವಾಗುತ್ತಿತ್ತು. ಆದರೆ, ಸರಕಾರದ ಆದ್ಯತೆ ಬೇರೆಯೇ ಇದ್ದಿತ್ತು.

ನೇಪಾಳ ಮತ್ತು ಇನ್ನಿತರ ಕಡೆಯಿಂದ ಟೊಮೆಟೊ ಆಗಮಿಸಿದ ಬಳಿಕ ಮೂರಂಕಿ ತಲುಪಿದ್ದ ಬೆಲೆ ಎರಡಂಕಿ(ಅಂದಾಜು 30 ರೂ.)ಗೆ ಇಳಿದಿದೆ. ಬೆಲೆ ಹೆಚ್ಚಳದಿಂದ ಕೆಲವು ರೈತರು ಲಾಭ ಮಾಡಿಕೊಂಡಿದ್ದಾರೆ. ಆದರೆ, ಇದರಿಂದ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಟೊಮೆಟೊ ಬೆಳೆ ಪ್ರದೇಶ ಏಕಾಏಕಿ ಹೆಚ್ಚಿದೆ. ಮುಂದಿನ ಋತುವಿನಲ್ಲಿ ಬರುವ ಉತ್ಪನ್ನವನ್ನು ರೈತರು ಏನು ಮಾಡುತ್ತಾರೆ? ಶೀಘ್ರವಾಗಿ ನಶಿಸುವ ಮತ್ತು ಬೆಲೆ ಏರಿಳಿತಕ್ಕೆ ತುತ್ತಾಗುವ ತರಕಾರಿಗಳ ಪೂರೈಕೆ ಸರಪಳಿಯನ್ನು ಸುಸ್ಥಿರಗೊಳಿಸುವ, ಶೀತಲಗೃಹ ನಿರ್ಮಾಣ, ಪರ್ಯಾಯ ಉತ್ಪನ್ನಗಳ ತಯಾರಿಕೆ, ಮೌಲ್ಯವರ್ಧನೆಗೆ ಗಂಭೀರ ಪ್ರಯತ್ನಗಳೇಕೆ ನಡೆಯುತ್ತಿಲ್ಲ?

ಟೊಮೆಟೊ, ಈರುಳ್ಳಿ ಮತ್ತು ಅಕ್ಕಿಗೆ ಸಂಬಂಧಿಸಿದ ಕಾರ್ಯನೀತಿಗಳು ಕೃಷಿ ಕ್ಷೇತ್ರದ ಸುಧಾರಣೆ ಏಕೆ ಕಷ್ಟ ಎನ್ನುವುದನ್ನು ವಿವರಿಸುತ್ತವೆ. ಮೊದಲಿಗೆ, ಸರಕಾರ ನಗರ ಪ್ರದೇಶದ ಗ್ರಾಹಕರ ಆದ್ಯತೆಗಳಿಗೆ ಪ್ರಾಮುಖ್ಯತೆ ನೀಡುತ್ತದೆ. ಆಹಾರ ಪದಾರ್ಥಗಳ ಬೆಲೆ ನಿಯಂತ್ರಣಕ್ಕೆ ಅದು ಮುಂದಾಗುತ್ತದೆಯೇ ಹೊರತು ರೈತರಿಗೆ ಲಾಭ ಖಾತ್ರಿ ನೀಡುವುದು ಅದರ ಆದ್ಯತೆ ಆಗುವುದಿಲ್ಲ. ಎರಡನೆಯದಾಗಿ, ಬೆಲೆ ನಿಯಂತ್ರಣದಿಂದಾಗುವ ನಷ್ಟವನ್ನು ಸಬ್ಸಿಡಿ ನೀಡುವ ಮೂಲಕ ಸರಿದೂಗಿಸಲು ಪ್ರಯತ್ನಿಸುತ್ತದೆ. ಇದು ಬೊಕ್ಕಸಕ್ಕೆ ಹೊರೆಯಾಗುತ್ತದೆ; ಅಭಿವೃದ್ಧಿ ಕಾರ್ಯಗಳಿಗೆ ಹಣದ ಕೊರತೆಗೆ ಕಾರಣವಾಗುತ್ತದೆ. ಮೂರನೆಯದಾಗಿ, ಕೃಷಿ ಮಾರುಕಟ್ಟೆಯಲ್ಲಿ ರಾಜ್ಯದ ಹಸ್ತಕ್ಷೇಪವನ್ನು ತಡೆಯುವ ಕಾರ್ಯತಂತ್ರ/ಕಾರ್ಯನೀತಿಯನ್ನು ರೂಪಿಸುವಲ್ಲಿ ವ್ಯವಸ್ಥೆ ವಿಫಲವಾಗಿದೆ. ಇದರಿಂದ ಸರಕಾರಗಳು ಕೃಷಿ ಉತ್ಪನ್ನಗಳ ಬೆಲೆ ನಿಯಂತ್ರಣ, ದಾಸ್ತಾನಿಗೆ ಅಂಕುಶ, ಆಮದು-ರಫ್ತು ಮೇಲೆ ಬೇಕಾಬಿಟ್ಟಿ ನಿಷೇಧ ಹೇರುವಿಕೆಯನ್ನು ಮುಂದುವರಿಸಿವೆ. ಸ್ಪರ್ಧಾತ್ಮಕತೆಗೆ ವಿರುದ್ಧವಾದ ಏಕಸ್ವಾಮ್ಯವನ್ನು ಪ್ರಶ್ನಿಸುವವರು ಇಲ್ಲವಾಗಿದೆ. ಕೃಷಿ ರಾಜ್ಯಕ್ಕೆ ಸೇರಿದ ವಿಷಯವಾದರೂ, ಕೇಂದ್ರದಿಂದ ಮೂಗು ತೂರಿಸುವಿಕೆ ಮುಂದುವರಿದಿದೆ.

ರೈತರ ಮನವೊಲಿಕೆಗೆ ನೀಡುವ ಸಬ್ಸಿಡಿಗಳದ್ದು ಬೇರೆಯದೇ ಕಥೆ. ಪಂಜಾಬ್‌ನಲ್ಲಿ ಸಬ್ಸಿಡಿ ಗೊಬ್ಬರದ ಅತಿಬಳಕೆಯಿಂದ ಭೂಮಿ ಸತ್ವ ಕಳೆದುಕೊಂಡಿದೆ; ಕರ್ನಾಟಕದಲ್ಲಿ ಅತಿ ನೀರಾವರಿಯಿಂದ ಭೂಮಿ ಚೌಳು ಹಿಡಿದಿದೆ. ಸಬ್ಸಿಡಿ ಹಲವು ಶರತ್ತುಗಳೊಂದಿಗೆ ಬರುತ್ತದೆ. ಭೂರಹಿತರು ಮತ್ತು ಗೇಣಿದಾರರಿಗೆ ಸಬ್ಸಿಡಿ ಸೌಲಭ್ಯ ಸಿಗುವುದಿಲ್ಲ; ಈ ಜಾಲದಿಂದ ಬಿಡುಗಡೆ ಕಷ್ಟಕರ. ರೈತರು ಮಾರುಕಟ್ಟೆಗಳಿಂದ ಲಾಭ ಪಡೆದು ಕೊಳ್ಳುವಂತಾಗಲು ಮತ್ತು ಮಾರುಕಟ್ಟೆಯಲ್ಲಿ ಪಾಲ್ಗೊಳ್ಳಲು ಗಂಭೀರ ಪ್ರಯತ್ನದ ಅಗತ್ಯವಿದೆ. ಆದರೆ, ಸರಕಾರದ ಆಸಕ್ತಿ ಇರುವುದು ಮತ ಬ್ಯಾಂಕ್ ರಾಜಕೀಯಕ್ಕೆ ಸೂಕ್ತವಾದ ಜನಪ್ರಿಯ ಯೋಜನೆಗಳಲ್ಲಿ ಮಾತ್ರ; ದೀರ್ಘಕಾಲೀನ ಸುಸ್ಥಿರ ಯೋಜನೆಗಳು ಅದಕ್ಕೆ ಬೇಡ. ‘ಕೃಷಿ ಆದಾಯ ದುಪ್ಪಟ್ಟು’ ಎಂಬುದು ಬರಿದೇ ಘೋಷಣೆಯಷ್ಟೇ. ಟೊಮೆಟೊ ಕೆಜಿಗೆ 50 ಪೈಸೆ ಆಗುವುದು ಮತ್ತು ರೈತರು ರಸ್ತೆಗೆ ಸುರಿದು ಪ್ರತಿಭಟಿಸುವುದು ಎರಡೂ ಮುಂದುವರಿಯುತ್ತವೆ.

ರೈತರ ಮನವೊಲಿಕೆಗೆ ನೀಡುವ ಸಬ್ಸಿಡಿಗಳದ್ದು ಬೇರೆಯದೇ ಕಥೆ. ಪಂಜಾಬ್‌ನಲ್ಲಿ ಸಬ್ಸಿಡಿ ಗೊಬ್ಬರದ ಅತಿಬಳಕೆಯಿಂದ ಭೂಮಿ ಸತ್ವ ಕಳೆದುಕೊಂಡಿದೆ; ಕರ್ನಾಟಕದಲ್ಲಿ ಅತಿ ನೀರಾವರಿಯಿಂದ ಭೂಮಿ ಚೌಳು ಹಿಡಿದಿದೆ. ಸಬ್ಸಿಡಿ ಹಲವು ಶರತ್ತುಗಳೊಂದಿಗೆ ಬರುತ್ತದೆ. ಭೂರಹಿತರು ಮತ್ತು ಗೇಣಿದಾರರಿಗೆ ಸಬ್ಸಿಡಿ ಸೌಲಭ್ಯ ಸಿಗುವುದಿಲ್ಲ; ಈ ಜಾಲದಿಂದ ಬಿಡುಗಡೆ ಕಷ್ಟಕರ. ರೈತರು ಮಾರುಕಟ್ಟೆಗಳಿಂದ ಲಾಭ ಪಡೆದು ಕೊಳ್ಳುವಂತಾಗಲು ಮತ್ತು ಮಾರುಕಟ್ಟೆಯಲ್ಲಿ ಪಾಲ್ಗೊಳ್ಳಲು ಗಂಭೀರ ಪ್ರಯತ್ನದ ಅಗತ್ಯವಿದೆ. ಆದರೆ, ಸರಕಾರದ ಆಸಕ್ತಿ ಇರುವುದು ಮತ ಬ್ಯಾಂಕ್ ರಾಜಕೀಯಕ್ಕೆ ಸೂಕ್ತವಾದ ಜನಪ್ರಿಯ ಯೋಜನೆಗಳಲ್ಲಿ ಮಾತ್ರ; ದೀರ್ಘಕಾಲೀನ ಸುಸ್ಥಿರ ಯೋಜನೆಗಳು ಅದಕ್ಕೆ ಬೇಡ. ‘ಕೃಷಿ ಆದಾಯ ದುಪ್ಪಟ್ಟು’ ಎಂಬುದು ಬರಿದೇ ಘೋಷಣೆಯಷ್ಟೇ. ಟೊಮೆಟೊ ಕೆಜಿಗೆ 50 ಪೈಸೆ ಆಗುವುದು ಮತ್ತು ರೈತರು ರಸ್ತೆಗೆ ಸುರಿದು ಪ್ರತಿಭಟಿಸುವುದು ಎರಡೂ ಮುಂದುವರಿಯುತ್ತವೆ.

ನಾವು ಪರಸ್ಪರ ಜೋಡಣೆಗೊಂಡ, ಒಬ್ಬರನ್ನೊಬ್ಬರು ಅವಲಂಬಿಸಿದ ಜಗತ್ತಿನಲ್ಲಿ ಬದುಕುತ್ತಿದ್ದೇವೆ. ಸ್ಟಾಕ್ ವಿನಿಮಯ ಕೇಂದ್ರದ ಸಣ್ಣ ಕಂಪನವೊಂದು ಜಗತ್ತಿನೆಲ್ಲೆಡೆ ತಲ್ಲಣ ಸೃಷ್ಟಿಸುತ್ತದೆ. ಆಹಾರ ಉತ್ಪಾದನೆ-ಬೇಡಿಕೆ-ಪೂರೈಕೆ ವ್ಯವಸ್ಥೆ ಸಂಕೀರ್ಣವಾದದ್ದು ಮತ್ತು ಜಾಗತಿಕ ಆಯಾಮಗಳನ್ನು ಹೊಂದಿರುವಂಥದ್ದು; ಒಂದು ದೇಶದಲ್ಲಿ ಆಗುವ ಹೆಚ್ಚುವರಿ ಉತ್ಪಾದನೆ ಇನ್ನೊಂದು ದೇಶವನ್ನು ಬರಿದಾಗಿಸುತ್ತದೆ. ಹಣದುಬ್ಬರದಿಂದ ಗ್ರಾಹಕರು ನಲುಗುತ್ತಾರೆ, ನಿಜ. ಅದು ಸಮಸ್ಯೆಯ ಒಂದು ಮುಖ ಮಾತ್ರ. ‘ನಾನು ಈರುಳ್ಳಿ ತಿನ್ನುವುದಿಲ್ಲ’ ಎನ್ನುವ ವಿತ್ತ ಸಚಿವೆ ಅಥವಾ ‘ಪ್ರತಿಭಟಿಸುತ್ತಿರುವ ಕುಸ್ತಿ ಪಟುಗಳಿಗೆ ಅಂತರ್‌ರಾಷ್ಟ್ರೀಯ ಬೆಂಬಲವಿದೆ’ ಎನ್ನುವ ಕೃಷಿ-ರೈತರ ಕಲ್ಯಾಣ ಸಚಿವೆಯಿಂದ ಸುಸ್ಥಿರ ಕೃಷಿ ನೀತಿಯನ್ನು-ಅರ್ಥೈಸುವಿಕೆಯನ್ನು ನಿರೀಕ್ಷಿಸುವುದು ಮೂರ್ಖತನ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Contributor - ಮಾಧವ ಐತಾಳ್

contributor

Similar News