ಮಹಿಳಾ ಪ್ರಾತಿನಿಧ್ಯದಲ್ಲಿ ಸಮಾನತೆ ಎನ್ನುವುದು ಮರೀಚಿಕೆ

1996ರಲ್ಲಿ ಮಹಿಳಾ ಮೀಸಲು ಸಂಸತ್ತಿನಲ್ಲಿ ಮಂಡನೆ ಆಯಿತು. ಆನಂತರ ಶೈತ್ಯಾಗಾರ ಸೇರಿತು. 2023ರಲ್ಲಿ ನೂತನ ಸಂಸತ್‌ಭವನದಲ್ಲಿ ಹೊಸ ಹೆಸರಿನಲ್ಲಿ ‘ನಾರಿಶಕ್ತಿ ವಂದನ್ ಅಧಿನಿಯಮ್’ ಅಂಗೀಕಾರಗೊಂಡಿತು. 90ರ ದಶಕದಲ್ಲಿ ಪಂಚಾಯತ್ ಹಾಗೂ ನಗರಪಾಲಿಕೆಗಳಿಗೆ ಶೇ.33 ಮೀಸಲು ಅನುಷ್ಠಾನಗೊಂಡಿತು. ಆದರೆ, ವಿಧಾನಸಭೆ ಮತ್ತು ಸಂಸತ್ತಿನಲ್ಲಿ ಮಹಿಳಾ ಮೀಸಲಿಗೆ ಪ್ರತಿರೋಧ ವ್ಯಕ್ತವಾಗುತ್ತಿದೆ. ರಾಜಕೀಯದಲ್ಲಿ ಪ್ರಾಬಲ್ಯ ಸಾಧಿಸಿರುವ ಪುರುಷರು ತಮ್ಮ ಹಿಡಿತ ಸಡಿಲಿಸಲು ಒಪ್ಪುತ್ತಿಲ್ಲ. ‘ನಾರಿ ಶಕ್ತಿ’ ಎಂಬ ಬಾಯಿ ಮಾತಿನ ನಡುವೆಯೂ ಮಹಿಳೆಯರು ಸಂವಿಧಾನ ನೀಡಿದ ಹಕ್ಕುಗಳಿಗಾಗಿ ಹೋರಾಡಲೇಬೇಕಾದ ಅನಿವಾರ್ಯ ಇದೆ. ಯಾವ ಪಕ್ಷವೂ ಶೇ.33ರಷ್ಟು ಮಹಿಳೆಯರನ್ನು ಕಣಕ್ಕೆ ಇಳಿಸಲು ಉತ್ಸುಕವಾಗಿಲ್ಲ.

Update: 2024-05-17 05:14 GMT
Editor : Thouheed | Byline : ಋತ

ಪ್ರಧಾನಿ 2021ರ ಚುನಾವಣೆಯಲ್ಲಿ ‘ದೀದಿ ಓ ದೀದಿ’ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಚುನಾವಣೆ ಪ್ರಚಾರದಲ್ಲಿ ಅಣಕವಾಡಿದ್ದರು. ಒಂದೆಡೆ ನಾವು ಮಹಿಳಾ ಪೈಲಟ್/ವಿಜ್ಞಾನಿ/ಕ್ರೀಡಾಪಟುಗಳನ್ನು ಶ್ಲಾಘಿಸುತ್ತೇವೆ. ಮತ್ತೊಂದೆಡೆ, ಅವರನ್ನು ಮಹಿಳೆಯರು ಎಂಬ ಒಂದೇ ಕಾರಣಕ್ಕೆ ಹೀಗಳೆಯುತ್ತೇವೆ. ಮಹಿಳೆಯರ ಮತಗಳು ಎಲ್ಲರಿಗೂ ಬೇಕಿದ್ದರೂ, ಅಧಿಕಾರವನ್ನು ಹಂಚಿಕೊಳ್ಳಲು ಸಿದ್ಧವಿಲ್ಲ. ಬಿಜೆಪಿ ‘ನಾರಿಶಕ್ತಿ’ ತನ್ನ ಮುಖ್ಯ ಉಪಕ್ರಮ ಎಂದು ಹೇಳಿ ಕೊಂಡರೂ, ತನ್ನದೇ ಸಂಸದ ಬ್ರಿಜ್ ಭೂಷಣ್‌ಶರಣ್ ಸಿಂಗ್ ಮೇಲೆ ಮಹಿಳಾ ಒಲಿಂಪಿಕ್ ಪದಕ ವಿಜೇತರು ಮಾಡಿದ ಲೈಂಗಿಕ ಕಿರುಕುಳ ದೂರನ್ನು ನಿರ್ಲಕ್ಷಿಸಿತು. ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣ ಇದರ ಮುಂದುವರಿದ ಭಾಗ. ಸ್ಥಳೀಯ ಸಂಸ್ಥೆಗಳಲ್ಲಿ ಶೇ.33ರಷ್ಟು ಮೀಸಲು ಜಾರಿಗೊಂಡಿದೆ. ಆದರೆ, ವಿಧಾನಸಭೆ/ಸಂಸತ್ತಿನಲ್ಲಿ ಮೀಸಲು ಕಾಯ್ದೆ ಅಂಗೀಕಾರಗೊಳ್ಳಲು 2024 ಬರಬೇಕಾಯಿತು. ರಾಜಕೀಯ ಕ್ಷೇತ್ರ ಪುರುಷ ಪರ ಮತ್ತು ಮಹಿಳೆಯರ ವಿರುದ್ಧ ಇದೆ.

ಪ್ರಧಾನಿ ಜವಾಹರಲಾಲ್ ನೆಹರೂ ಅವರ ಮಗಳು ಇಂದಿರಾ ಗಾಂಧಿ ಅವರನ್ನು ಕೂಡ ‘ಗೂಂಗಿ ಗುಡಿಯಾ’ ಎಂದು ಹೀಗಳೆಯಲಾಗಿತ್ತು. ಮುಖ್ಯಮಂತ್ರಿಗಳಲ್ಲಿ ಮಮತಾ ಬ್ಯಾನರ್ಜಿ ಮಾತ್ರ ಪುರುಷರ ಬೆಂಬಲವಿಲ್ಲದೆ ಆ ಹಂತ ತಲುಪಿದವರು. ಮಾಯಾವತಿ ಅವರಿಗೆ ಕಾನ್ಶಿರಾಂ ಮತ್ತು ಜಯಲಲಿತಾ ಅವರಿಗೆ ಎಂ.ಜಿ. ರಾಮಚಂದ್ರನ್ ಅವರ ಬೆಂಬಲವಿತ್ತು. ಮೆಹಬೂಬ ಮುಫ್ತಿ ಮತ್ತು ವಸುಂಧರಾ ರಾಜೇ ಅವರಿಗೆ ಪೋಷಕರು-ಪ್ರಬಲ ಕುಟುಂಬಗಳ ಬೆಂಬಲ ಇದ್ದಿತ್ತು. ಮಾಧ್ಯಮಗಳು ಮಾಯಾವತಿ ಅವರ ಗುಲಾಬಿ ಬಣ್ಣದ ಪೋಷಾಕು ಮತ್ತು ಹುಟ್ಟಿದ ಹಬ್ಬದ ದಿನದ ಕೇಕ್‌ಗಳು, ಜಯಲಲಿತಾ ಅವರ ದರ್ಪದ ನಡೆಯನ್ನು ಅಣಕವಾಡಿದ್ದವು: ಸ್ಮತಿ ಇರಾನಿ ಅವರನ್ನು ತುಳಸಿ(ಅವರ ಟಿವಿ ಶೋ ಪಾತ್ರವೊಂದರ ಹೆಸರು) ಎಂದು ಕರೆಯುತ್ತಿದ್ದವು. ಕಾಂಗ್ರೆಸ್‌ಮುಖಂಡ ಸಂಜಯ್ ನಿರುಪಮ್ ಅವರು ಸ್ಮತಿ ಇರಾನಿ ಅವರನ್ನು ‘ಟಮ್ಕಾ ಲಗಾನೆವಾಲೆ’ ಎಂದು ಕರೆದಿದ್ದರು. ಕಾಂಗ್ರೆಸ್ ನಾಯಕಿ ರೇಣುಕಾ ಚೌಧರಿ ಅವರ ನಗು ‘ರಾಕ್ಷಸರ ನಗು’ವಿನಂತೆ ಇರುತ್ತದೆ ಎಂದು ಹೇಳಿದ್ದು ಸ್ವತಃ ಪ್ರಧಾನಿ. ಅವರ ಪಕ್ಷದವರು ಚಪ್ಪಾಳೆ ಹೊಡೆದು ಸಂಭ್ರಮಿಸಿದ್ದರು!

ಮಹಿಳಾ ನಾಯಕಿಯರು ತಮ್ಮದೇ ಅಸ್ಮಿತೆ ಗಳಿಸಿಕೊಳ್ಳಲು ಪ್ರಯತ್ನಿಸಿದರೆ ಇಲ್ಲವೇ ಉನ್ನತ ಅಧಿಕಾರಕ್ಕೆ ಪ್ರಯತ್ನಿಸಿದರೆ, ಅವರನ್ನು ‘ಬಂಡಾಯಗಾರರು’ ಎಂದು ಹಣೆ ಪಟ್ಟಿ ಕಟ್ಟಲಾಗುತ್ತದೆ. 2 ಬಾರಿ ರಾಜಸ್ಥಾನದ ಮುಖ್ಯಮಂತ್ರಿಯಾಗಿದ್ದ ವಸುಂಧರಾ ರಾಜೇ ಪ್ರಬಲ ನಾಯಕಿಯಾಗಿ ಬೆಳೆಯುತ್ತಿರುವಾಗಲೇ, 2023ರ ರಾಜಸ್ಥಾನ ವಿಧಾನಸಭೆ ಚುನಾವಣೆ ಬಳಿಕ ಅವರಿಗೆ ಸಿಎಂ ಗಾದಿ ನಿರಾಕರಿಸಲಾಯಿತು. ಅಷ್ಟು ಮಾತ್ರವಲ್ಲದೆ, ಬಿಜೆಪಿಯ ನಿರ್ಧಾರ ತೆಗೆದುಕೊಳ್ಳುವ ಮಂಡಳಿಯಿಂದಲೂ ಹೊರಹಾಕಲಾಯಿತು. ಮಧ್ಯಪ್ರದೇಶದಲ್ಲಿ 2003ರಲ್ಲಿ ಉಮಾಭಾರತಿ ಬಿಜೆಪಿಗೆ ಭಾರೀ ವಿಜಯ ಗಳಿಸಿಕೊಟ್ಟರು. 2004ರ ಲೋಕಸಭೆ ಚುನಾವಣೆ ಬಳಿಕ ಪ್ರಧಾನಿ ಸ್ಥಾನದ ಆಕಾಂಕ್ಷೆ ವ್ಯಕ್ತಪಡಿಸಿದರು. ಆನಂತರ ಅವರನ್ನು ಬದಿಗೊತ್ತಲಾಯಿತು. ಸುಷ್ಮಾ ಸ್ವರಾಜ್ ಅಪಾರ ಸಾಮರ್ಥ್ಯ ಹೊಂದಿದ್ದರೂ, ಅವರಿಗೆ ಸಂಪುಟದ ಪುರುಷ ಸಹೋದ್ಯೋಗಿಗಳಿಗೆ ಸಿಕ್ಕ ಪ್ರಾಮುಖ್ಯತೆ ಸಿಗಲಿಲ್ಲ. ನಿರ್ಮಲಾ ಸೀತಾರಾಮನ್ ಮೊದಲ ಮಹಿಳಾ ವಿತ್ತ ಸಚಿವೆ. ಆದರೆ, ಅವರು ರಾಜ್ಯಸಭೆ ಸದಸ್ಯೆ. ತಮ್ಮದೇ ಜನಬೆಂಬಲ ಪಡೆದ ಸಂಸದೆಯಲ್ಲ.

2024ರಲ್ಲಿ ಮಹಿಳಾ ಸದಸ್ಯತ್ವದ ಕತೆ

ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಕಣದಲ್ಲಿರುವ ಮಹಿಳಾ ಅಭ್ಯರ್ಥಿಗಳ ಸಂಖ್ಯೆಯಲ್ಲಿ ಹೆಚ್ಚೇನೂ ಸುಧಾರಣೆಯಾಗಿಲ್ಲ.

ಮೊದಲ ಹಂತದಲ್ಲಿ 35(ಶೇ.8), 2ನೇ ಹಂತದಲ್ಲಿ 100(ಶೇ.8), ಮೂರನೇ ಹಂತದಲ್ಲಿ 123(ಶೇ.9), 4ನೇ ಹಂತದಲ್ಲಿ 170(ಶೇ.10) ಹಾಗೂ 5ನೇ ಹಂತದಲ್ಲಿ 82(ಶೇ.12) ಮಹಿಳೆಯರು ಕಣದಲ್ಲಿದ್ದರು. ಮೊದಲ 2 ಹಂತದಲ್ಲಿ 2,823(1,625+1,198) ಅಭ್ಯರ್ಥಿಗಳು ಇದ್ದರು. 1ನೇ ಹಂತದಲ್ಲಿ ತಮಿಳುನಾಡಿನ ಎಲ್ಲ ಕ್ಷೇತ್ರಗಳಿಗೆ ಮತದಾನ ನಡೆದಿದ್ದು, 76 ಮಹಿಳೆಯರು(ಅತ್ಯಂತ ಹೆಚ್ಚು) ಸ್ಪರ್ಧಿಸಿದ್ದರು. ಎರಡನೇ ಹಂತದಲ್ಲಿ ಕೇರಳದಲ್ಲಿ ಎಲ್ಲ 20 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, 24 ಮಹಿಳೆಯರು ಸ್ಪರ್ಧಿಸಿದ್ದರು. ಎಐಎಡಿಎಂಕೆಯ 21 ಅಭ್ಯರ್ಥಿ ಗಳಲ್ಲಿ ಒಬ್ಬರು ಮಾತ್ರ ಮಹಿಳೆ. 21 ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ ಡಿಎಂಕೆ, ಮೂವರು ಮಹಿಳೆಯರಿಗೆ ಟಿಕೆಟ್ ನೀಡಿದೆ. ಕೇರಳದಲ್ಲಿ ಸಿಪಿಐ(ಎಂ)ನ 15 ಅಭ್ಯರ್ಥಿಗಳಲ್ಲಿ ಇಬ್ಬರು ಮಹಿಳೆಯರಿದ್ದಾರೆ. ಯುಡಿಎಫ್/ಎಲ್‌ಡಿಎಫ್‌ಗೆ ಮಹಿಳೆಯರ ಸಾಮರ್ಥ್ಯದ ಮೇಲೆ ನಂಬಿಕೆ ಇಲ್ಲ ಎಂದು ಹೀಗಳೆದಿದ್ದ ಬಿಜೆಪಿ, ಕೇವಲ 4 ಮಹಿಳೆಯರನ್ನು ಮಾತ್ರ ಕಣಕ್ಕಿಳಿಸಿದೆ. ಪಶ್ಚಿಮ ಬಂಗಾಳದಲ್ಲಿ ಟಿಎಂಸಿ 42 ಕ್ಷೇತ್ರಗಳಲ್ಲಿ 12ನ್ನು (ಶೇ.30)ಮಹಿಳೆಯರಿಗೆ ಬಿಟ್ಟುಕೊಟ್ಟಿದೆ. ಮಹಿಳೆಯರನ್ನು ಹೆಚ್ಚು ಸಂಖ್ಯೆಯಲ್ಲಿ ಕಣಕ್ಕೆ ಇಳಿಸುತ್ತಿರುವ ಇನ್ನೊಂದು ಪಕ್ಷವೆಂದರೆ ಒಡಿಶಾದ ಬಿಜು ಜನತಾ ದಳ.

1957-89ರ ಅವಧಿಯಲ್ಲಿ ಮಹಿಳಾ ಅಭ್ಯರ್ಥಿಗಳ ಪ್ರಮಾಣ ಶೇ.3, 1991-2009ರ ಅವಧಿಯಲ್ಲಿ ಶೇ.4-7, 2014ರಲ್ಲಿ ಶೇ.9 ಹಾಗೂ 2019ರಲ್ಲಿ ಶೇ.10 ಇದ್ದಿತ್ತು. ಅಂಕಿಅಂಶಗಳ ಪ್ರಕಾರ, ಚುನಾವಣೆಗಳು ಆರಂಭಗೊಂಡ ಬಳಿಕ ಈವರೆಗೆ ಮಹಿಳಾ ಅಭ್ಯರ್ಥಿಗಳ ಸಂಖ್ಯೆ 1,000 ದಾಟಿಲ್ಲ. 1957ರಲ್ಲಿ 45 ಮಹಿಳೆಯರು ಸ್ಪರ್ಧಿಸಿದ್ದರು(ಒಟ್ಟು ಸ್ಪರ್ಧಿಗಳಲ್ಲಿ ಶೇ.4.5). ಇವರಲ್ಲಿ 22 ಮಂದಿ ಗೆದ್ದರು. 2019ರಲ್ಲಿ ಮಹಿಳಾ ಸ್ಪರ್ಧಿಗಳ ಸಂಖ್ಯೆ 726ಕ್ಕೆ(ಶೇ.9) ಹಾಗೂ ಪುರುಷ ಅಭ್ಯರ್ಥಿಗಳ ಸಂಖ್ಯೆ 1,474ರಿಂದ 7,322ಕ್ಕೆ ಹೆಚ್ಚಿತು. ಅಂದರೆ, ಪುರುಷ ಅಭ್ಯರ್ಥಿಗಳ ಸಂಖ್ಯೆ 5 ಪಟ್ಟು ಹಾಗೂ ಮಹಿಳಾ ಅಭ್ಯರ್ಥಿಗಳ ಸಂಖ್ಯೆ 16 ಪಟ್ಟು ಹೆಚ್ಚಳಗೊಂಡಿದೆ. ಚುನಾವಣೆ ಆಯೋಗದ ಮಾಹಿತಿ ಪ್ರಕಾರ, 1957ರಲ್ಲಿ ಮಹಿಳೆಯರ ಗೆಲುವಿನ ಪ್ರಮಾಣ ಶೇ.48.88. 2019ರಲ್ಲಿ ಸ್ಪರ್ಧಿಸಿದ್ದ 726 ಮಹಿಳೆಯರಲ್ಲಿ 78 ಮಂದಿ(ಶೇ.10.74) ಗೆಲುವು ಸಾಧಿಸಿದರು. ಪುರುಷರ ಗೆಲುವಿನ ಪ್ರಮಾಣ ಶೇ.31.7ರಿಂದ ಶೇ.6.4ಕ್ಕೆ ಕಡಿಮೆಯಾಗಿದೆ. ಇದರರ್ಥ ಏನೆಂದರೆ, ಸ್ಪರ್ಧಿಗಳ ಸಂಖ್ಯೆ ಹೆಚ್ಚಿದೆ; ಕ್ಷೇತ್ರಗಳ ಸಂಖ್ಯೆ ಅಂತೆಯೇ ಇದೆ. ಗೆಲುವಿನ ಪ್ರಮಾಣ ಕಡಿಮೆಯಾಗಿದೆ. ಮಹಿಳೆಯರ ಗೆಲುವಿನ ಸಾಧ್ಯತೆ ಹೆಚ್ಚು ಇದ್ದರೂ, ರಾಜಕೀಯ ಪಕ್ಷಗಳು ಅವರಿಗೆ ಅವಕಾಶ ನೀಡುತ್ತಿಲ್ಲ.

2019ರ ಚುನಾವಣೆಯಲ್ಲಿ 78 ಮಹಿಳೆಯರು (ಶೇ.14) ಗೆಲುವು ಸಾಧಿಸಿದ್ದರು. ಆ ವರ್ಷ ಮತ ಚಲಾಯಿಸಿದ ಮಹಿಳೆಯರ ಸಂಖ್ಯೆ ಶೇ. 67.18 ಮತ್ತು ಪುರುಷರ ಮತ ಚಲಾವಣೆ ಪ್ರಮಾಣ ಶೇ.67.01. ಇದೊಂದು ಅಭೂತಪೂರ್ವ ದಾಖಲೆ. ಆದರೆ, 2024ರಲ್ಲಿ ಹಲವು ರಾಜ್ಯಗಳಲ್ಲಿ ಮಹಿಳಾ ಅಭ್ಯರ್ಥಿಗಳೇ ಇಲ್ಲ. ಜಮ್ಮು-ಕಾಶ್ಮೀರ-ಲಡಾಖ್‌ನ ಆರು ಕ್ಷೇತ್ರಗಳಲ್ಲಿ ಮಾಜಿ ಸಿಎಂ ಮೆಹಬೂಬ ಮುಫ್ತಿ ಒಬ್ಬರೇ ಮಹಿಳಾ ಅಭ್ಯರ್ಥಿ. ಉತ್ತರಾಖಂಡದ ಐವರು ಅಭ್ಯರ್ಥಿಗಳಲ್ಲಿ ಒಬ್ಬರು ಮಾತ್ರ ಮಹಿಳೆ. ಬಿಜೆಪಿಯಿಂದ ಸ್ಪರ್ಧಿಸಿದ್ದಾರೆ. ಪಂಜಾಬಿನಲ್ಲಿ ಈವರೆಗೆ ಆಯ್ಕೆಯಾದ ಮಹಿಳೆಯರು ಇಬ್ಬರು ಮಾತ್ರ. ಪಂಜಾಬಿನ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಪತ್ನಿ ಪ್ರಣೀತ್ ಕೌರ್ ಪಟಿಯಾಲದಿಂದ ನಾಲ್ಕು ಬಾರಿ ಆಯ್ಕೆಯಾಗಿದ್ದಾರೆ. ಈಗ ಕಾಂಗ್ರೆಸ್‌ನಿಂದ ಬಿಜೆಪಿಗೆ ವಲಸೆ ಬಂದಿದ್ದಾರೆ. 2022ರಲ್ಲಿ ಅಮರಿಂದರ್ ಸಿಂಗ್ ಕಾಂಗ್ರೆಸ್‌ತೊರೆದು, ಬಿಜೆಪಿಗೆ ಸೇರ್ಪಡೆಗೊಂಡರು. ಇನ್ನೊಬ್ಬರು ಶಿರೋಮಣಿ ಅಕಾಲಿ ದಳದ ಹರ್ಸಿಮ್ರತ್ ಕೌರ್ ಬಾದಲ್ (ಭಟಿಂಡಾ).

ದೊಡ್ಡ ರಾಜ್ಯಗಳಲ್ಲಿ ಮಹಿಳೆಯರು ಹೆಚ್ಚು ಸಂಖ್ಯೆಯಲ್ಲಿ ಸ್ಪರ್ಧಿಸುತ್ತಿದ್ದರೂ, ಅನುಪಾತ ಜನಸಂಖ್ಯೆಗೆ ಅನುಗುಣವಾಗಿಲ್ಲ. ತಮಿಳುನಾಡಿನ 39 ಕ್ಷೇತ್ರಗಳಲ್ಲಿ 950 ಪುರುಷರು ಹಾಗೂ 76 ಮಹಿಳೆಯರು ಸ್ಪರ್ಧಿಸಿದ್ದಾರೆ. 2019ಕ್ಕೆ ಹೋಲಿಸಿದರೆ(67) ಇದು ಹೆಚ್ಚು. ಆದರೆ, ಶೇ.8 ಮೀರುವುದಿಲ್ಲ. 2019ರಲ್ಲಿ ಮೂವರು ಮಹಿಳೆಯರು ಜಯ ಗಳಿಸಿದ್ದರು.

ಕರ್ನಾಟಕದ ಪರಿಸ್ಥಿತಿ

ರಾಜ್ಯದ 28 ಸಂಸದೀಯ ಕ್ಷೇತ್ರಗಳಲ್ಲಿ 17ರಲ್ಲಿ ಮಹಿಳೆ ಯರು ಬಹುಸಂಖ್ಯಾತರು (ಅಂದಾಜು 2.7 ಕೋಟಿ). ಆದರೆ, ಅವರ ರಾಜಕೀಯ ಪ್ರಾತಿನಿಧ್ಯ ಕಡಿಮೆ ಇದೆ. 2019ರಲ್ಲಿ ಬಿಜೆಪಿ, ಕಾಂಗ್ರೆಸ್ ಮತ್ತು ಜಾತ್ಯತೀತ ದಳ 4 ಮಹಿಳೆಯರಿಗೆ ಟಿಕೆಟ್ ನೀಡಿದ್ದವು. ಈ ಬಾರಿ 8 ಮಂದಿ ಸ್ಪರ್ಧಿಸಿದ್ದಾರೆ. ಕಾಂಗ್ರೆಸ್ ಆರು (ಸೌಮ್ಯಾ ರೆಡ್ಡಿ, ಅಂಜಲಿ ನಿಂಬಾಳ್ಕರ್, ಸಂಯುಕ್ತಾ ಎಸ್. ಪಾಟೀಲ್, ಪ್ರಿಯಾಂಕಾ ಜಾರಕಿಹೊಳಿ, ಪ್ರಭಾ ಮಲ್ಲಿಕಾರ್ಜುನ್ ಮತ್ತು ಗೀತಾ ಶಿವರಾಜ್ ಕುಮಾರ್)ಹಾಗೂ ಬಿಜೆಪಿ ಶೋಭಾ ಕರಂದ್ಲಾಜೆ(ಬೆಂಗಳೂರು ಉತ್ತರ) ಹಾಗೂ ಗಾಯತ್ರಿ ಸಿದ್ದೇಶ್ವರ (ದಾವಣಗೆರೆ) ಅವರಿಗೆ ಟಿಕೆಟ್ ನೀಡಿದೆ.

ಸಂಸತ್ತಿಗೆ ರಾಜ್ಯದಿಂದ ಆಯ್ಕೆಯಾದ ಮೊದಲ ಮಹಿಳೆ ಸರೋಜಿನಿ ಮಹಿಷಿ. 1962ರಲ್ಲಿ ಧಾರವಾಡ ಉತ್ತರ ಕ್ಷೇತ್ರದಿಂದ ಆಯ್ಕೆಯಾದರು. ಆನಂತರ 1967, 1971 ಮತ್ತು 1977ರಲ್ಲಿಯೂ ಜಯ ಗಳಿಸಿದರು. 1977ರಲ್ಲಿ ಇಂದಿರಾ ಗಾಂಧಿ ಅವರು ಚಿಕ್ಕಮಗಳೂರಿನಿಂದ ಆಯ್ಕೆಯಾಗಿದ್ದರು. 1990 ಮತ್ತು 1998ರಲ್ಲಿ ಶೂನ್ಯ ಸಾಧನೆ. 1991ರಲ್ಲಿ ಮೂವರು, ಬಸವರಾಜೇಶ್ವರಿ, ಡಿ.ಕೆ. ತಾರಾದೇವಿ ಮತ್ತು ಚಂದ್ರಪ್ರಭಾ ಅರಸ್ ಆಯ್ಕೆಯಾಗಿದ್ದರು. 2004ರಲ್ಲಿ ತೇಜಸ್ವಿನಿ ಗೌಡ(ಕನಕಪುರ; ಎಚ್.ಡಿ. ದೇವೇಗೌಡರ ವಿರುದ್ಧ ಗೆಲುವು) ಮತ್ತು ಮನೋರಮಾ ಮಧ್ವರಾಜ್(ಉಡುಪಿ, ಬಿಜೆಪಿ) ಜಯಶಾಲಿಯಾಗಿದ್ದರು. 2009ರಲ್ಲಿ ಜೆ. ಶಾಂತಾ(ಬಿಜೆಪಿ), 2014ರಲ್ಲಿ ಶೋಭಾ ಕರಂದ್ಲಾಜೆ, 2019ರ ಚುನಾವಣೆಯಲ್ಲಿ ಶೋಭಾ ಕರಂದ್ಲಾಜೆ(ಉಡುಪಿ-ಚಿಕ್ಕಮಗಳೂರು)ಮತ್ತು ಸುಮಲತಾ ಅಂಬರೀಷ್(ಮಂಡ್ಯ) ಗೆದ್ದರೆ, ವೀಣಾ ಕಾಶಪ್ಪನವರ್(ಬಾಗಲಕೋಟೆ,ಕಾಂಗ್ರೆಸ್) ಮತ್ತು ಸುನೀತಾ ದೇವಾನಂದ ಚವಾಣ್(ವಿಜಯಪುರ, ಜೆಡಿಎಸ್) ಅಪಜಯ ಅನುಭವಿಸಿದರು.

ಸ್ಥಳೀಯ ನಾಯಕರು ಮಹಿಳಾ ಅಭ್ಯರ್ಥಿಗಳನ್ನು ಶಿಫಾರಸು ಮಾಡುವುದಿಲ್ಲ; ಒಬ್ಬ ಪುರುಷನಿಗೆ ಅವಕಾಶ ತಪ್ಪಿಹೋಗುತ್ತದೆ ಎನ್ನುವುದು ಮುಖ್ಯ ಕಾರಣ. ಪಕ್ಷದ ಬೆಂಬಲ ಸಿಕ್ಕಿದರೆ, ಮಹಿಳಾ ಅಭ್ಯರ್ಥಿಗಳು ಗೆಲ್ಲುವ ಸಾಧ್ಯತೆಯಿದೆ. ಆದರೆ, ಪಕ್ಷದ ಬೆಂಬಲ ಗಳಿಸುವುದು ದೊಡ್ಡ ಸವಾಲು. ಆದರೆ, 1957ರ ಬಳಿಕ ಪುರುಷರಿಗೆ ಹೋಲಿಸಿದರೆ ಮಹಿಳಾ ಅಭ್ಯರ್ಥಿಗಳು ಹೆಚ್ಚು ಮತ ಗಳಿಸಿದ್ದಾರೆ.

ಮಹಿಳಾ ಮೀಸಲಿನಿಂದ ಪ್ರಯೋಜನ ಆಗಲಿದೆಯೇ?

1996ರಲ್ಲಿ ಮಹಿಳಾ ಮೀಸಲು ಸಂಸತ್ತಿನಲ್ಲಿ ಮಂಡನೆ ಆಯಿತು. ಆನಂತರ ಶೈತ್ಯಾಗಾರ ಸೇರಿತು. 2023ರಲ್ಲಿ ನೂತನ ಸಂಸತ್‌ಭವನದಲ್ಲಿ ಹೊಸ ಹೆಸರಿನಲ್ಲಿ ‘ನಾರಿಶಕ್ತಿ ವಂದನ್ ಅಧಿನಿಯಮ್’ ಅಂಗೀಕಾರಗೊಂಡಿತು. 90ರ ದಶಕದಲ್ಲಿ ಪಂಚಾಯತ್ ಹಾಗೂ ನಗರಪಾಲಿಕೆಗಳಿಗೆ ಶೇ.33 ಮೀಸಲು ಅನುಷ್ಠಾನಗೊಂಡಿತು. ಆದರೆ, ವಿಧಾನಸಭೆ ಮತ್ತು ಸಂಸತ್ತಿನಲ್ಲಿ ಮಹಿಳಾ ಮೀಸಲಿಗೆ ಪ್ರತಿರೋಧ ವ್ಯಕ್ತವಾಗುತ್ತಿದೆ. ರಾಜಕೀಯದಲ್ಲಿ ಪ್ರಾಬಲ್ಯ ಸಾಧಿಸಿರುವ ಪುರುಷರು ತಮ್ಮ ಹಿಡಿತ ಸಡಿಲಿಸಲು ಒಪ್ಪುತ್ತಿಲ್ಲ. ‘ನಾರಿ ಶಕ್ತಿ’ ಎಂಬ ಬಾಯಿ ಮಾತಿನ ನಡುವೆಯೂ ಮಹಿಳೆಯರು ಸಂವಿಧಾನ ನೀಡಿದ ಹಕ್ಕುಗಳಿಗಾಗಿ ಹೋರಾಡಲೇಬೇಕಾದ ಅನಿವಾರ್ಯ ಇದೆ. ಯಾವ ಪಕ್ಷವೂ ಶೇ.33ರಷ್ಟು ಮಹಿಳೆಯರನ್ನು ಕಣಕ್ಕೆ ಇಳಿಸಲು ಉತ್ಸುಕವಾಗಿಲ್ಲ.

ಶಾಸನಸಭೆಗೆ ಆಯ್ಕೆಯಾಗುವ ಮಹಿಳೆಯರಲ್ಲಿ ಹೆಚ್ಚಿನವರು ರಾಜಕೀಯ ಕುಟುಂಬಗಳಿಗೆ ಸೇರಿದವರು ಇಲ್ಲವೇ ಸಾರ್ವಜನಿಕ ಕ್ಷೇತ್ರದಲ್ಲಿ ಹೆಸರು ಮಾಡಿದವರು. ನಟಿಯರು ಇಲ್ಲವೇ ಕುಟುಂಬದ ಪುರುಷನೊಬ್ಬನ ಮರಣದಿಂದ ಅಥವಾ ವಂಶಪಾರಂಪರ್ಯವಾಗಿ ಟಿಕೆಟ್‌ಗಿಟ್ಟಿಸಿದವರೇ ಹೆಚ್ಚು. ಭಾರತದಲ್ಲಿ ಚುನಾವಣೆ ಒಂದು ದುಬಾರಿ ಪ್ರಕ್ರಿಯೆ. ಅಭ್ಯರ್ಥಿ ಆರ್ಥಿಕ ಸಂಪನ್ಮೂಲ ಹೊಂದಿರಬೇಕು ಇಲ್ಲವೇ ಸಂಪನ್ಮೂಲ ಕ್ರೋಡೀಕರಿಸುವ ಸಾಮರ್ಥ್ಯ ಹೊಂದಿರಬೇಕು. ಇದು ರಾಜಕೀಯ ಕುಟುಂಬದ ಹಿನ್ನೆಲೆ ಇರುವವರಿಗೆ ಮಾತ್ರ ಸಾಧ್ಯ. ಇದರಿಂದ ಮಹಿಳೆಯರು ಹಾಗೂ ಕ್ರಿಯಾಶೀಲ ಪುರುಷರಿಗೆ ಚುನಾವಣೆ ಕನಸಾಗಿದೆ.

ಸುಪ್ರಿಯಾ ಸುಳೆ, ಜಯಲಲಿತಾ(6 ಬಾರಿ ಮುಖ್ಯಮಂತ್ರಿಯಾಗಿದ್ದರು), ಕಠಿಣ ಪ್ರಶ್ನೆಗಳ ಮೂಲಕ ಆಡಳಿತ ಪಕ್ಷಕ್ಕೆ ತಲೆನೋವಾಗಿದ್ದ ಟಿಎಂಸಿಯ ಮಹುವಾ ಮೊಯಿತ್ರ ಇವರೆಲ್ಲರೂ ತಮ್ಮದೇ ಛಾಪು ಮೂಡಿಸಿದ್ದಾರೆ. ಮಮತಾ ಬ್ಯಾನರ್ಜಿ ದೇಶದ ಏಕೈಕ ಮಹಿಳಾ ಮುಖ್ಯಮಂತ್ರಿ. ಅವರಿಗೆ ಯಾವುದೇ ಗಾಡ್ ಫಾದರ್ ಇಲ್ಲ. ಮಾಯಾವತಿ ಈಗ ನೇಪಥ್ಯಕ್ಕೆ ಸರಿದಿರಬಹುದು. ಆದರೆ, ಜಾತಿ ಮತ್ತು ಸೆಕ್ಸಿಸಂ ವಿರುದ್ಧ ಗೆದ್ದು ಉತ್ತರಪ್ರದೇಶದ ರಾಜಕೀಯದಲ್ಲಿ ತನ್ನ ಛಾಪು ಮೂಡಿಸಿದರು. 1977ರಲ್ಲಿ ತುರ್ತು ಪರಿಸ್ಥಿತಿ ಬಳಿಕ ನಡೆದ ಚುನಾವಣೆಯಲ್ಲಿ ಇಂದಿರಾ ಗಾಂಧಿ ಹಾಗೂ ಕಾಂಗ್ರೆಸ್ ಅಪಜಯದ ಬಳಿಕ ಹಲವು ಮಹಿಳೆಯರು ಆಯ್ಕೆಯಾದರು. ಪ್ರಮೀಳಾ ದಂಡವತೆ, ಮೃಣಾಲ್ ಗೋರೆ ಮತ್ತು ಅಹಿಲ್ಯಾ ರಂಗ್ಣೇಕರ್ ಅವರಂಥ ಹಿರಿಯರೊಟ್ಟಿಗೆ ಕೈಜೋಡಿಸಿ ವರದಕ್ಷಿಣೆ ನಿಷೇಧ(ತಿದ್ದುಪಡಿ) ಕಾಯ್ದೆ 1986 ಅಲ್ಲದೆ ಅತ್ಯಾಚಾರ ಕಾಯ್ದೆಗೆ ಮುಖ್ಯ ಬದಲಾವಣೆಗಳನ್ನು ತಂದರು.

ಮೀಸಲು ಇಲ್ಲದೆ ಶೇ.33 ಪ್ರಾತಿನಿಧ್ಯ ಸಿಗಲು ಸಾಧ್ಯವಿಲ್ಲ. ಶಾಸನಸಭೆ ಜನರನ್ನು ಪ್ರತಿನಿಧಿಸಬೇಕು. ಆದರೆ, ಅರ್ಧದಷ್ಟು ಜನಸಂಖ್ಯೆಯನ್ನು ಒಳಗೊಳ್ಳದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಆರೋಗ್ಯಕರ ಎನ್ನಲು ಆಗುವುದಿಲ್ಲ. ದೇಶದ ಮತದಾರರಲ್ಲಿ ಅರ್ಧದಷ್ಟು ಇರುವ ಮಹಿಳೆಯರ ಪ್ರಾತಿನಿಧ್ಯದ ಕೊರತೆಯು ಉತ್ತಮ ಸಮಾಜದ ನಿರ್ಮಾಣಕ್ಕೆ ದಾರಿ ಮಾಡಿಕೊಡುವುದಿಲ್ಲ. ರಾಜಕೀಯ ಕ್ಷೇತ್ರ ಸಮಾಜಕ್ಕೆ ಹಿಡಿದ ಕನ್ನಡಿ.

ದೇಶದ ಹಲವು ಕ್ಷೇತ್ರಗಳಲ್ಲಿ ಸ್ತ್ರೀ ದ್ವೇಷ ತೀವ್ರವಾಗಿದೆ. ಮಹಿಳೆಯರು ಕಾರ್ಮಿಕ ಕ್ಷೇತ್ರದಿಂದ ಗಾಬರಿ ಹುಟ್ಟಿಸುವ ವೇಗದಲ್ಲಿ ಕಣ್ಮರೆಯಾಗುತ್ತಿದ್ದಾರೆ. ಸಿಎಂಐಇ ವರದಿ ಪ್ರಕಾರ, 2005ರಲ್ಲಿ ಇದ್ದ ಅವರ ಪಾಲುಗಾರಿಕೆ ಶೇ.35ರಿಂದ 2022ಕ್ಕೆ ಶೇ.22ಕ್ಕೆ ಕುಸಿದಿದೆ. 2022ರಲ್ಲಿ ಶೇ.10ರಷ್ಟು ಮಹಿಳೆಯರು ಮಾತ್ರ ಉದ್ಯೋಗಿಗಳಾಗಿದ್ದರು ಇಲ್ಲವೇ ಕೆಲಸ ಹುಡುಕುತ್ತಿದ್ದರು.

ವ್ಯಂಗ್ಯವೆಂದರೆ, ‘ಬೇಟಿ ಬಚಾವೋ, ಬೇಟಿ ಪಡಾವೋ’ ಕಾರ್ಯ ಕ್ರಮದ ಶೇ.78ರಷ್ಟು ಅನುದಾನ ಜಾಹೀರಾತುಗಳಿಗೆ ಖರ್ಚಾಗಿದೆ. 2026ರ ಜನಗಣತಿ ಬಳಿಕ ಕ್ಷೇತ್ರಗಳ ಪುನರ್‌ವಿಂಗಡಣೆ ನಡೆಯಲಿದ್ದು, ಮಹಿಳೆಯರಿಗೆ ಮೀಸಲು ಸ್ಥಾನ ಹೆಚ್ಚುವ ನಿರೀಕ್ಷೆಯಿದೆ. ಮಹಿಳಾ ಮೀಸಲು ಕೂಡ ಶ್ರೀಮಂತರ ಪಾಲಾಗುವ ಸಾಧ್ಯತೆ ದಟ್ಟವಾಗಿದ್ದರೂ, ಕೆಲವರಾದರೂ ಯೋಗ್ಯರಿಗೆ ಅವಕಾಶ ಸಿಗಬಹುದೆಂಬ ಆಶಾವಾದ ಮೂಡಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಋತ

contributor

Similar News