ಅಸಮಾನ ಭಾರತದಲ್ಲಿ ಆದಾಯದ ಕಂದರ

ಬಡವರು ಯಾರು ಮತ್ತು ಬಡತನವನ್ನು ಅಳೆಯುವ ಮಾನದಂಡ ಯಾವುದು? ನೀತಿ ಆಯೋಗದ ಪ್ರಕಾರ, ದೇಶದಲ್ಲಿರುವುದು ಶೇ.5ರಷ್ಟು ಬಡವರು ಮಾತ್ರ. ಸರಿ. ಆದರೆ, ಸರಕಾರ ಕಳೆದ 4 ವರ್ಷಗಳಿಂದ ದೇಶದ 2/3ರಷ್ಟು ಜನರಿಗೆ ಪಡಿತರ ನೀಡುತ್ತಿರುವುದೇಕೆ? ಮತ್ತು ಉಚಿತ ಪಡಿತರ ನೀಡುವಿಕೆಯನ್ನು 2029ರವರೆಗೆ ಮುಂದುವರಿಸುತ್ತಿರುವುದು ಏಕೆ?

Update: 2024-04-12 05:43 GMT
Editor : Thouheed | Byline : ಋತ

ಬಡತನ ಮತ್ತು ಅಸಮಾನತೆ ಪರಸ್ಪರ ತಳಕು ಹಾಕಿಕೊಂಡಿರುತ್ತವೆ. ಜಾಗತಿಕ ಸಂಶೋಧನಾ ಕೇಂದ್ರ ‘ದ ವರ್ಲ್ಡ್ ಇನ್‌ಈಕ್ವಾಲಿಟಿ ಲ್ಯಾಬ್(ಡಬ್ಲ್ಯುಐಎಲ್)’ ಇತ್ತೀಚೆಗೆ ಪ್ರಕಟಿಸಿದ ಅಧ್ಯಯನ ‘ಇನ್‌ಕಂ ಆ್ಯಂಡ್ ವೆಲ್ತ್ ಇನ್‌ಈಕ್ವಾಲಿಟಿ ಇನ್ ಇಂಡಿಯಾ, 1922-2023: ದ ರೈಸ್ ಆಫ್ ಬಿಲಿಯನರ್ಸ್ ರಾಜ್’ ಪ್ರಕಾರ, 2022-23ರಲ್ಲಿ ಒಟ್ಟು ರಾಷ್ಟ್ರೀಯ ಆದಾಯದ ಶೇ. 22ರಷ್ಟು ಶೇ.1ರಷ್ಟು ಜನರ ಬಳಿ ಇದ್ದಿತ್ತು. ಇದು ಕಳೆದ 100 ವರ್ಷದಲ್ಲಿ ಅತಿ ಹೆಚ್ಚು. ಐಶ್ವರ್ಯದ ಅಸಮಾನತೆ ತೀವ್ರವಾಗಿದ್ದು, ಶೇ.1ರಷ್ಟು ಜನರ ಬಳಿ ಶೇ.40.1ರಷ್ಟು ಸಂಪತ್ತು ಸೇರಿಕೊಂಡಿದೆ. 1961ರಲ್ಲಿ ಏಣಿಯ ಮೇಲಿನ ಹಂತದಲ್ಲಿರುವ ಶೇ.10ರಷ್ಟು ಮಂದಿ ಬಳಿ ಇದ್ದ ಐಶ್ವರ್ಯ ಶೇ.45ರಿಂದ ಶೇ.65ಕ್ಕೆ ಹೆಚ್ಚಿತು. ಪ್ರತಿಯಾಗಿ, ಏಣಿಯ ಕೆಳಗಿನ ಶೇ.50 ಮತ್ತು ಮಧ್ಯದ ಶೇ.40 ಮಂದಿಯ ಐಶ್ವರ್ಯ ಕುಸಿಯಿತು. ಅಂದರೆ, ಶ್ರೀಮಂತರು ಇನ್ನಷ್ಟು ಶ್ರೀಮಂತರಾದರು ಹಾಗೂ ಬಡವರು ಇನ್ನಷ್ಟು ಬಡವರಾದರು.

ದೇಶದಲ್ಲಿ ಬ್ರೆಝಿಲ್ ಇಲ್ಲವೇ ದಕ್ಷಿಣ ಆಫ್ರಿಕಾದಲ್ಲಿರುವಷ್ಟು ತೀವ್ರ ಅಸಮಾನತೆ ಇಲ್ಲದೆ ಇರಬಹುದು. ಆದರೆ, 1961-2023ರ ಅವಧಿಯಲ್ಲಿ ಆದಾಯದ ಕೇಂದ್ರೀಕರಣ ಮೂರು ಪಟ್ಟು ಹೆಚ್ಚಿದೆ ಮತ್ತು ಆದಾಯದ ಅಸಮಾನತೆ ದಕ್ಷಿಣ ಆಫ್ರಿಕಾ, ಬ್ರೆಝಿಲ್ ಮತ್ತು ಅಮೆರಿಕಕ್ಕಿಂತ ಹೆಚ್ಚು ಇದೆ. ಕಾಲಕ್ರಮೇಣ ಇದು ಇನ್ನಷ್ಟು ಹೆಚ್ಚುತ್ತದೆ. ಅಧ್ಯಯನದ ಪ್ರಕಾರ, 2014-15ರಿಂದ 2022-23ರ ಅವಧಿಯಲ್ಲಿ ಮೇಲಿನ ಹಂತದಲ್ಲಿ ಐಶ್ವರ್ಯದ ಕೇಂದ್ರೀಕರಣ ಹೆಚ್ಚಿತು. ಇದರಿಂದಾಗಿ ದೇಶದಲ್ಲಿ ಬ್ರಿಟಿಷರ ಆಡಳಿತದಲ್ಲಿ ಇದ್ದುದಕ್ಕಿಂತ ಹೆಚ್ಚು ಅಸಮಾನತೆ ಇದೆ. ಇದು ಅರ್ಥಶಾಸ್ತ್ರಜ್ಞರಲ್ಲಿ ಕಳವಳಕ್ಕೆ ಕಾರಣವಾಗಿದೆ. ಇತ್ತೀಚಿನ ಐಎಂಎಫ್(ಅಂತರ್‌ರಾಷ್ಟ್ರೀಯ ವಿತ್ತ ನಿಧಿ) ಅಧ್ಯಯನದ ಪ್ರಕಾರ, ಆದಾಯ ಅಸಮಾನತೆಯು ಅಭಿವೃದ್ಧಿ ಮತ್ತು ಸುಸ್ಥಿರತೆ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಆದಾಯದಲ್ಲಿ ಶ್ರೀಮಂತರ ಪಾಲು ಮತ್ತು ಸುಸ್ಥಿರತೆ ನಡುವೆ ವಿಲೋಮ ಅನುಪಾತ ಇರುತ್ತದೆ. ಏಣಿಯ ಮೇಲಿನ ಹಂತದ ಶೇ.20 ಮಂದಿಯ ಪಾಲು ಶೇ.1ರಷ್ಟು ಹೆಚ್ಚಿದರೆ, ನಂತರದ 5 ವರ್ಷಗಳಲ್ಲಿ ಜಿಡಿಪಿ ಬೆಳವಣಿಗೆ ಶೇ.0.8ರಷ್ಟು ಕಡಿಮೆಯಾಗುತ್ತದೆ. ಅಂದರೆ, ಅರ್ಥಶಾಸ್ತ್ರಜ್ಞರು ಹೇಳುವಂತೆ, ‘ಅಭಿವೃದ್ಧಿಯ ಲಾಭ ತೊಟ್ಟಿಕ್ಕುವುದಿಲ್ಲ’. ಬಡತನವನ್ನು ಕಡಿಮೆ ಮಾಡುವ ಏಕೈಕ ಮಾರ್ಗ ಅಭಿವೃದ್ಧಿ. ಹೀಗಾಗಿ, ಅಸಮಾನತೆ ಹೆಚ್ಚಿದಷ್ಟೂ ಬಡತನ ನಿವಾರಣೆ ಮೇಲೆ ಅಭಿವೃದ್ಧಿಯ ಪರಿಣಾಮ ಕಡಿಮೆಯಾಗುತ್ತ ಹೋಗುತ್ತದೆ. ಎರಡನೆಯದಾಗಿ, ಅತಿ ಶ್ರೀಮಂತರು ಅಧಿಕಾರದ ಗದ್ದುಗೆ ಪಕ್ಕದಲ್ಲಿ ಇರುವುದರಿಂದ, ರಾಜಕೀಯ-ಆರ್ಥಿಕ ನಿರ್ಧಾರಗಳ ಮೇಲೆ ಪ್ರಭಾವ ಬೀರುತ್ತಾರೆ. ಸುಪ್ರೀಂ ಕೋರ್ಟ್‌ನಿಂದ ಅಸಾಂವಿಧಾನಿಕ ಎನ್ನಿಸಿಕೊಂಡು ವಜಾ ಆದ ಚುನಾವಣೆ ಬಾಂಡ್ ಹಗರಣದಿಂದ ಉದ್ಯಮಿ-ಗುತ್ತಿಗೆದಾರರು ರಾಜಕೀಯದವರಿಗೆ ಹಣ ನೀಡುವ ಮೂಲಕ ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳುತ್ತಾರೆ, ನಿರ್ಧಾರಗಳನ್ನು ಪ್ರಭಾವಿಸುತ್ತಾರೆ, ಪ್ರತಿಸ್ಪರ್ಧಿಗಳನ್ನು ನಿವಾರಿಸುತ್ತಾರೆ ಮತ್ತು ಅಭಿವೃದ್ಧಿ ಯೋಜನೆಗಳ ಸಾಮಾಜಿಕ-ಪರಿಸರ ವಿಪರಿಣಾಮಗಳನ್ನು ಚಾಪೆಯಡಿ ತಳ್ಳುವ ಮೂಲಕ ಜನಸಾಮಾನ್ಯರ ಹಕ್ಕುಗಳಿಗೆ ಧಕ್ಕೆ ತರುತ್ತಾರೆ ಎನ್ನುವುದು ಸ್ಪಷ್ಟವಾಗಿದೆ. ಮೂರನೆಯದಾಗಿ, ಅಸಮಾನತೆಯು ಹೂಡಿಕೆ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಆರ್ಥಿಕ ಬೆಳವಣಿಗೆ ಕುಂಠಿತಗೊಂಡು, ಆರ್ಥಿಕ-ರಾಜಕೀಯ ಅಸ್ಥಿರತೆಗೆ ಕಾರಣವಾಗುತ್ತದೆ. ನಾಲ್ಕನೆಯದಾಗಿ, ಉನ್ನತ ವರ್ಗದವರ ಪ್ರಾಬಲ್ಯ ಹೆಚ್ಚಳದಿಂದ, ಉತ್ಪಾದಕತೆ-ಬೆಳವಣಿಗೆಯನ್ನು ಪ್ರೋತ್ಸಾಹಿಸುವ ಮತ್ತು ಬಡವರಿಗೆ ಉಪಯುಕ್ತವಾದ ಸೇವೆ-ಉತ್ಪನ್ನಗಳ ಪೂರೈಕೆ ಕಡಿಮೆಯಾಗುತ್ತದೆ. ಕರ್ನಾಟಕದಲ್ಲಿ ‘ಭಾಗ್ಯ’ ಯೋಜನೆಗಳನ್ನು ಬಿಟ್ಟಿ ಎಂದು ಹೀಗಳೆಯುವವರು ಇದನ್ನು ಗಮನಿಸಬೇಕಿದೆ.

ಅಸಮಾನತೆಯ ನಿವಾರಣೆ:

ಅಸಮಾನತೆಯನ್ನು ತೊಡೆಯಲು ಮಾರ್ಗಗಳಿವೆ. ಆದರೆ, ಇದಕ್ಕೆ ಸಾಂಸ್ಥಿಕ, ರಾಚನಿಕ-ಆಡಳಿತಾತ್ಮಕ ಬದಲಾವಣೆ ಅಗತ್ಯವಿದೆ. ಮೊದಲಿಗೆ, ಕೃಷಿಯೇತರ ಉದ್ಯೋಗಗಳ ಸೃಷ್ಟಿ ಮತ್ತು ರಚನಾತ್ಮಕ ಬದಲಾವಣೆಗಳ ಮೂಲಕ ರಾಚನಿಕ ಸ್ಥಿತ್ಯಂತರಕ್ಕೆ ಕಾರಣವಾಗುವ ಬೆಳವಣಿಗೆ ಕಾರ್ಯತಂತ್ರಗಳನ್ನು ರೂಪುಗೊಳಿಸುವುದು. ಇವು ಬಡವರ ಆರ್ಥಿಕ ಬೆಳವಣಿಗೆಗೆ ಕಾರಣವಾಗಿ, ಅಸಮಾನತೆಯನ್ನು ಕಡಿಮೆ ಮಾಡುತ್ತವೆ. ಕೆಲಸ ಮಾಡುವ ವಯಸ್ಸಿನವರು ಹೆಚ್ಚು ಸಂಖ್ಯೆಯಲ್ಲಿರುವ ಸಹಾರಾ ಕೆಳಗಿನ ದೇಶಗಳು ಮತ್ತು ದಕ್ಷಿಣ ಏಶ್ಯದಲ್ಲಿ ಇದು ಪ್ರಯೋಜನಕಾರಿ. ಆದರೆ, ಇದು ಭಾರತದಲ್ಲಿ ನಡೆಯುತ್ತಿಲ್ಲ.

ಎರಡನೆಯದಾಗಿ, ಸಮಾನತೆಯನ್ನು ಉತ್ತೇಜಿಸುವ ಮೂಲಕ ರಾಚನಿಕ ಸ್ಥಿತ್ಯಂತರ. ಕೃಷಿಯಿಂದ ಹೊರಗೆ ಬರುವವರನ್ನು ಉದ್ಯಮ, ಸೇವೆ ಮತ್ತಿತರ ಕ್ಷೇತ್ರಗಳಲ್ಲಿ ತೊಡಗಿಸುವುದು ಹಾಗೂ ಸಾಮಾಜಿಕ ವಿಮೆ ಸೌಲಭ್ಯವಿರುವ ಔಪಚಾರಿಕ ಕಾರ್ಮಿಕರ ಹೆಚ್ಚಳ. ಜಗತ್ತಿನಲ್ಲಿ ಅಂದಾಜು 1.7 ಶತಕೋಟಿ ಬಡವರಿದ್ದು, ಇವರಲ್ಲಿ ಹೆಚ್ಚಿನವರು ಜೀವನೋಪಾಯಕ್ಕೆ ದೈಹಿಕ ಶ್ರಮವನ್ನು ಆಧರಿಸಿರುತ್ತಾರೆ. ಬಡತನ ನಿವಾರಣೆಯಲ್ಲಿ ಉದ್ಯೋಗದ ಪ್ರಾಮುಖ್ಯತೆಯನ್ನು ಇದು ಹೇಳುತ್ತದೆ. ಆದರೆ, ಉದ್ಯೋಗ ಎನ್ನುವುದು ನಿವೃತ್ತಿ ಬಳಿಕ ಪಿಂಚಣಿ, ಸಾವು/ಅಂಗವೈಕಲ್ಯ ವಿಮೆ, ಹೆರಿಗೆ ರಜೆ ಇತ್ಯಾದಿ ಸೌಲಭ್ಯಗಳನ್ನು ಒಳಗೊಂಡಿರಬೇಕು.

ಮೂರನೆಯದಾಗಿ, 1880ರ ಬಳಿಕ ಕೈಗಾರಿಕೀಕರಣಗೊಂಡ ದೇಶಗಳಲ್ಲಿ ಅಸಮಾನತೆ ಕಡಿಮೆಯಾಗಲು ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡಿರುವುದು-ಆದಾಯ, ಪಿತ್ರಾರ್ಜಿತ ಸಂಪತ್ತು ಮತ್ತು ಆಸ್ತಿ ಮೇಲೆ ವಿಧಿಸಿದ ತೆರಿಗೆ. ನಮ್ಮಲ್ಲಿ ತೆರಿಗೆ ನೀಡುತ್ತಿರುವವರ ಪ್ರಮಾಣ ಶೇ.8. ಇಲ್ಲಿ ಪಿತ್ರಾರ್ಜಿತ ಆಸ್ತಿ ಮೇಲೆ ತೆರಿಗೆ ವಿಧಿಸುವುದಿಲ್ಲ; ಐಶ್ವರ್ಯದ ಮೇಲೆ ತೆರಿಗೆಯನ್ನು ತೆಗೆದುಹಾಕಲಾಗಿದೆ.

ಪ್ರಗತಿಪರ ತೆರಿಗೆ ಅವಶ್ಯಕತೆ:

ದೇಶದಲ್ಲಿ ಆಸ್ತಿ ತೆರಿಗೆ(ಸ್ಥಳೀಯ ಆಡಳಿತಗಳು ಸಂಗ್ರಹ ಜವಾಬ್ದಾರಿ ಹೊಂದಿವೆ) ಸಂಗ್ರಹ ಅಸಮರ್ಪಕವಾಗಿದ್ದು, ಕನಿಷ್ಠ ಪ್ರಮಾಣದಲ್ಲಿ ತೆರಿಗೆ ಸಂಗ್ರಹ ಆಗುತ್ತಿವೆ. ಸಾರ್ವಜನಿಕ ಅರ್ಥಶಾಸ್ತ್ರ, ವಿಶೇಷವಾಗಿ, ವರಮಾನ ಮತ್ತು ಅಸಮಾನತೆ ಬಗ್ಗೆ ಸುದೀರ್ಘ ಕಾಲ ಅಧ್ಯಯನ ನಡೆಸಿರುವ ಫ್ರೆಂಚ್ ಅರ್ಥಶಾಸ್ತ್ರಜ್ಞ ಥಾಮಸ್ ಪಿಕೆಟ್ಟಿ ಪ್ರಕಾರ, 20ನೇ ಶತಮಾನದ ಆರಂಭದಲ್ಲಿ ಅಮೆರಿಕ, ಯುರೋಪಿಯನ್ ದೇಶಗಳು ಮತ್ತು ಜಪಾನ್ ಶ್ರೀಮಂತರ ಮೇಲೆ ಪ್ರಗತಿಪರ ತೆರಿಗೆ ಪದ್ಧತಿಯನ್ನು ಜಾರಿಗೊಳಿಸಿದವು. ಕಾರ್ಮಿಕ ಸಂಘಟನೆಗಳ ಬಲವರ್ಧನೆ ಹಾಗೂ ರಶ್ಯದಲ್ಲಿ ನಡೆದ ಬೋಲ್ಷೆವಿಕ್ ಕ್ರಾಂತಿಯು ಯುರೋಪ್, ಉತ್ತರ ಅಮೆರಿಕದ ಉನ್ನತ ವರ್ಗದವರ ಮೇಲೆ ಪರಿಣಾಮ ಬೀರಿತ್ತು. ಯುರೋಪಿನಲ್ಲಿ 1914-1980ರ ಅವಧಿಯಲ್ಲಿ 1,000 ಅತ್ಯಂತ ಶ್ರೀಮಂತರು ಹಾಗೂ ನಂತರದ 10 ಸಾವಿರ ಶ್ರೀಮಂತರಿಗೆ ವಿಧಿಸುತ್ತಿದ್ದ ತೆರಿಗೆ ಪ್ರಮಾಣ ಶೇ.60-70 ಇದ್ದಿತ್ತು. ಇದು ಸಾಧಾರಣ ದರಕ್ಕಿಂತ 3 ಪಟ್ಟು ಅಧಿಕ. ಭಾರತದಲ್ಲಿ ಇದು ವ್ಯತಿರಿಕ್ತ; ಬ್ಯಾಂಕ್‌ಗಳು 2022-23ರಲ್ಲಿ ರೈಟ್ ಆಫ್ ಮಾಡಿದ ಮೊತ್ತ 2.09 ಲಕ್ಷ ಕೋಟಿ ರೂ.! ಜೊತೆಗೆ, ಸಾಲಮನ್ನಾದಂಥ ವಿಕೃತಿಯಲ್ಲಿ ತೊಡಗಿಕೊಂಡಿದೆ. ಈ ಉದ್ಯಮಿಗಳ್ಯಾರೂ ಭಿಕಾರಿಗಳಲ್ಲ. ಸಾಲ ತೀರಿಸದೆ ದೇಶ ಬಿಟ್ಟವರಲ್ಲಿ ಹೆಚ್ಚಿನವರು ಖಾಸಗಿ ವಿಮಾನ, ಹಡಗುಗಳಲ್ಲಿ ವಾಯು-ಜಲವಿಹಾರ ಮಾಡುತ್ತ ಹಾಯಾಗಿದ್ದಾರೆ. ಅದೇ ಹೊತ್ತಿನಲ್ಲಿ, 2023ರಲ್ಲಿ ಮುಂಬೈ ಒಂದರಲ್ಲೇ ಬಿಲಿಯನೇರ್‌ಗಳ ಸಂಘಕ್ಕೆ 94 ಮಂದಿ ಸೇರ್ಪಡೆಯಾಗಿದ್ದಾರೆ. ಕೈಗಾರೀಕೃತ ದೇಶಗಳಲ್ಲಿ 1880-1980ರ ಅವಧಿಯಲ್ಲಿ ತಲಾದಾಯ ಹೆಚ್ಚಳದೊಂದಿಗೆ, ತೆರಿಗೆ-ಜಿಡಿಪಿ ಅನುಪಾತ ಹೆಚ್ಚಳಗೊಂಡಿತು. ಆದರೆ, 1991ರ ಬಳಿಕ ತಲಾದಾಯ ಹೆಚ್ಚಳದಿಂದ ಭಾರತೀಯರ ಖರೀದಿ ಸಾಮರ್ಥ್ಯ ಮೂರು ಪಟ್ಟು ಹೆಚ್ಚಿದರೂ, ತೆರಿಗೆ-ಜಿಡಿಪಿ ಅನುಪಾತ ಶೇ.17ನ್ನು ದಾಟಿಲ್ಲ. ಭಾರತದಲ್ಲಿ ಅತಿ ಶ್ರೀಮಂತರ ಸಂಪತ್ತಿನ ಮೇಲೆ ತೆರಿಗೆ ವಿಧಿಸಲೇಬೇಕಿದೆ.

4ನೆಯದಾಗಿ, ಶ್ರೀಮಂತ ದೇಶಗಳು ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ಸುರಕ್ಷೆಯಲ್ಲಿನ ಅಸಮಾನತೆಯನ್ನು ಕಡಿಮೆ ಮಾಡಲು ಸಾರ್ವಜನಿಕ ಹೂಡಿಕೆ ಮಾಡಿದವು. ಯುರೋಪಿನಲ್ಲಿ 1880-1980ರ ಅವಧಿಯಲ್ಲಿ ಸಾರ್ವಜನಿಕ ಕ್ಷೇತ್ರದಲ್ಲಿ ರಾಜ್ಯದ ಹೂಡಿಕೆ ಹೆಚ್ಚುತ್ತಲೇ ಹೋಯಿತು. ಅರ್ಥಶಾಸ್ತ್ರಜ್ಞ ಪೀಟರ್ ಲಿಂಬರ್ಟ್, ಕೈಗಾರಿಕೀಕೃತ ದೇಶಗಳಲ್ಲಿ ರಾಜ್ಯಗಳ ಅಭಿವೃದ್ಧಿಗೆ ಸಾಮಾಜಿಕ ವೆಚ್ಚ(ಉದಾ; ಆರೋಗ್ಯ, ಶಿಕ್ಷಣ, ಸಾಮಾಜಿಕ ವಿಮೆ ಮತ್ತು ಸಾಮಾಜಿಕ ನೆರವು) ಕಾರಣ ಎಂದು ಹೇಳುತ್ತಾರೆ. ಆದರೆ, ಭಾರತದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ವೆಚ್ಚ ಸ್ಥಗಿತಗೊಂಡಿದೆ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಹೂಡಿಕೆ ಕುಸಿಯುತ್ತಿದೆ. ಉಚಿತಗಳ ಮೂಲಕ ಕೊಡುವ ಖಾಸಗಿ ಸೇವೆಗಳು ಸಾರ್ವಜನಿಕ ಸೇವೆಗೆ ಸಮನಾಗುವುದಿಲ್ಲ.

ಹೆಚ್ಚಿನ ಅಭಿವೃದ್ಧಿಶೀಲ ದೇಶಗಳು ಅಸ್ಮಿತೆ(ಕುಲ, ಜಾತಿ, ಜನಾಂಗ ಮತ್ತು ಲಿಂಗ) ಆಧರಿತ ಅಸಮಾನತೆಯಿಂದ ಬಳಲುತ್ತಿವೆ. ಈ ಅಸಮಾನತೆ ನಿವಾರಿಸಲು ಶಿಕ್ಷಣ, ಸರಕಾರಿ ಉದ್ಯೋಗ ಮತ್ತು ಶಾಸನಸಭೆಯಲ್ಲಿ ಮೀಸಲು ನೀಡುವಿಕೆ ಉತ್ತಮ ಆರಂಭಿಕ ಬಿಂದು ಆಗಬಹುದು. ಆದರೆ, ಅವು ಪ್ರಾತಿನಿಧ್ಯದ ಸಮಸ್ಯೆಯನ್ನು ಬಗೆಹರಿಸುವುದಿಲ್ಲ. ಬಡಜನರ ಪ್ರಾತಿನಿಧ್ಯಕ್ಕೆ ಧಕ್ಕೆ ತಾರದೆ, ಅಸಮಾನತೆಯನ್ನು ನಿವಾರಿಸಬೇಕಿದೆ. ಇದರ ಮೊದಲ ಹೆಜ್ಜೆ-ಸಾಮಾಜಿಕ/ಆರ್ಥಿಕ ಮತ್ತು ಜಾತಿ ಗಣತಿಯ ದತ್ತಾಂಶವನ್ನು ಸಾರ್ವಜನಿಕಗೊಳಿಸುವುದು. ಕಾಂಗ್ರೆಸ್ ಇದನ್ನು ಮಾಡುವುದಾಗಿ ಆಶ್ವಾಸನೆ ನೀಡಿದೆ.

ನಿರುದ್ಯೋಗ ಸಮಸ್ಯೆ ನಿವಾರಣೆ ಹೇಗೆ?:

ಅಂದರೆ, ಉದ್ಯೋಗ ಸೃಷ್ಟಿ, ಸಾರ್ವಜನಿಕ ಕ್ಷೇತ್ರದಲ್ಲಿ ಹೂಡಿಕೆ, ಶ್ರೀಮಂತರ ಮೇಲೆ ಪ್ರಗತಿಪರ ತೆರಿಗೆಯಿಂದ ಅಸಮಾನತೆ ಕಡಿಮೆ ಮಾಡಬಹುದು. ಭಾರತದ ಸಮಸ್ಯೆ ಏನೆಂದರೆ, ನಿರುದ್ಯೋಗ. ಇತ್ತೀಚೆಗೆ ಬಿಡುಗಡೆಯಾದ ಅಂತರ್‌ರಾಷ್ಟ್ರೀಯ ಕಾರ್ಮಿಕ ಸಂಘಟನೆ(ಐಎಲ್‌ಒ)ಯ ಇಂಡಿಯಾ ಉದ್ಯೋಗ ವರದಿಯು ನಿರುದ್ಯೋಗ ಸಮಸ್ಯೆ ತೀವ್ರವಾಗಿದೆ ಎಂದು ಹೇಳಿದೆ. ವರದಿ ಪ್ರಕಾರ, ದೇಶದ ಶೇ.83ರಷ್ಟು ಯುವಜನರು ನಿರುದ್ಯೋಗಿಗಳಾಗಿದ್ದು, ಮಾಧ್ಯಮಿಕ ಶಿಕ್ಷಣ ಪೂರೈಸಿದ ನಿರುದ್ಯೋಗಿಗಳ ಪ್ರಮಾಣ 2000-2022ರ ಅವಧಿಯಲ್ಲಿ ಶೇ.35.2ರಿಂದ ಶೇ.65.7ಕ್ಕೆ ಹೆಚ್ಚಿದೆ; 2000-2018ರ ಅವಧಿಯಲ್ಲಿ ಕಾರ್ಮಿಕ ಬಲದ ಪಾಲ್ಗೊಳ್ಳುವಿಕೆ ದರ(ಎಲ್‌ಎಫ್‌ಪಿಆರ್), ಕಾರ್ಮಿಕರ ಜನಸಂಖ್ಯಾ ಅನುಪಾತ ಮತ್ತು ನಿರುದ್ಯೋಗ ದರ ಹದಗೆಟ್ಟಿದೆ. ದೇಶದಲ್ಲಿ ಪುರುಷರ ಎಲ್‌ಎಫ್‌ಪಿಆರ್ ಶೇ.77.2, ಮಹಿಳೆಯರ ಎಲ್‌ಎಫ್‌ಪಿಆರ್ ಶೇ.32.8 ಇದೆ(ಇಂಡೋನೇಶ್ಯ-ವಿಯಟ್ನಾಂನಂಥ ಹೊಮ್ಮುತ್ತಿರುವ ಆರ್ಥಿಕತೆಯಲ್ಲಿ ಶೇ.60ಕ್ಕಿಂತ ಸ್ವಲ್ಪ ಹೆಚ್ಚು). ದೇಶದ ಶೇ.90ರಷ್ಟು ಕೆಲಸಗಾರರು ಅನೌಪಚಾರಿಕ ಕೆಲಸಗಳಲ್ಲಿದ್ದಾರೆ.

ಉದ್ಯೋಗ, ಶಿಕ್ಷಣ ಇಲ್ಲವೇ ತರಬೇತಿ ಇಲ್ಲದ ಯುವಜನರ ಪಾಲು 2010-2019ರ ಅವಧಿಯಲ್ಲಿ ಶೇ.29.2 ಇತ್ತು. ಉದ್ಯಮಕ್ಕೆ ಕುಶಲ ನೌಕರರ ಕೊರತೆ ಇದೆ; ಹೀಗಾಗಿ, ಶಿಕ್ಷಿತ ಯುವಜನರ ನಿರುದ್ಯೋಗ ಒಂದು ಗೊಂದಲಮಯ ಸನ್ನಿವೇಶ. ಶಿಕ್ಷಣದಿಂದ ಉದ್ಯೋಗಕ್ಕೆ ಅಗತ್ಯವಾದ ತರಬೇತಿ ಸಿಗುತ್ತಿಲ್ಲ ಮತ್ತು ಸರಕಾರ ಘೋಷಿಸಿಕೊಳ್ಳುತ್ತಿರುವ ಟ್ರಿಲಿಯನ್ ಡಾಲರ್ ಆರ್ಥಿಕ ಬೆಳವಣಿಗೆಯು ಉದ್ಯೋಗಗಳನ್ನು ಸೃಷ್ಟಿಸುತ್ತಿಲ್ಲ. ಇದರರ್ಥ-ಐಶ್ವರ್ಯ ಕೇಂದ್ರೀಕರಣಗೊಳ್ಳುತ್ತಿದೆ. ಕೋವಿಡ್ ನಂತರ ಆರ್ಥಿಕ ಪರಿಸ್ಥಿತಿ ಸುಧಾರಿಸಿದ್ದರೂ, ಉದ್ಯೋಗ ಸೃಷ್ಟಿಯ ರೀತಿ ಬದಲಾಗಿದೆ. ಹೆಚ್ಚಿನವರು ಕೃಷಿಗೆ ಮರಳಿದ್ದಾರೆ. ಅದು ಲಾಭದಾಯಕ ವೃತ್ತಿಯಲ್ಲ. ಉಳಿದವರು, ಅದರಲ್ಲೂ ಮಹಿಳೆಯರು ಸ್ವ ಉದ್ಯೋಗದಲ್ಲಿ ತೊಡಗಿದ್ದು, ಹೆಚ್ಚಿನವರ ಆರ್ಥಿಕ ಸ್ಥಿತಿ ಸ್ಥಿರವಾಗಿಲ್ಲ. ಕೃಷಿಯೇತರ ಉದ್ಯೋಗ ಕುಸಿದಿದೆ. ಉನ್ನತ ಶಿಕ್ಷಣ ಪಡೆದವರು ಕಡಿಮೆ ವೇತನದ ನೌಕರಿಗಳಲ್ಲಿ ಸಿಲುಕಿಕೊಂಡಿರುವುದು ಒಂದು ಗಂಭೀರ ಸಮಸ್ಯೆಯಾಗಿದೆ.

ದೇಶದಲ್ಲಿ ಅತಿ ಹೆಚ್ಚು ಸಂಖ್ಯೆಯ ಯುವಜನರಿದ್ದು, ಆ ಬಗ್ಗೆ ಹೆಮ್ಮೆ ಪಡುತ್ತೇವೆ. ಆದರೆ, ಕಾಲಕ್ರಮೇಣ ಯುವಜನರ ಪಾಲು ಕಡಿಮೆಯಾಗಿ, ಡೆಮಾಗ್ರಫಿಕ್ ಡಿವಿಡೆಂಡ್ ಕೈತಪ್ಪಿ ಹೋಗುತ್ತದೆ. ನಿರುದ್ಯೋಗದಿಂದ ಉಂಟಾಗುವ ಕ್ಷೋಭೆಯು ಗಂಭೀರ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಸಮಸ್ಯೆಗೆ ಕಾರಣವಾಗಬಹುದು. ಅಧಿಕ ಜಿಡಿಪಿ ಬೆಳವಣಿಗೆ ಸಾಕಾಗುವುದಿಲ್ಲ. ಅಸಮಾನ ಬೆಳವಣಿಗೆ, ನಿರುದ್ಯೋಗ ಮತ್ತು ಹಣದುಬ್ಬರದಿಂದ ಅವಘಡ ಖಚಿತ. ಉದ್ಯೋಗವನ್ನು ಸೃಷ್ಟಿಸುವ ಬೆಳವಣಿಗೆ ಕಾರ್ಯನೀತಿ, ಅದನ್ನು ಬೆಂಬಲಿಸುವ ಶಿಕ್ಷಣ ವ್ಯವಸ್ಥೆ ಮತ್ತು ಸೌಹಾರ್ದಯುತ ಸಾಮಾಜಿಕ-ಆರ್ಥಿಕ ಕಾರ್ಯನೀತಿಯಿಂದ ಮಾತ್ರ ದೇಶ ಸಿಲುಕಿಕೊಂಡಿರುವ ಗೊಂದಲಮಯ ವಾತಾವರಣದಿಂದ ತಪ್ಪಿಸಿಕೊಳ್ಳ ಹುದು. ಆದರೆ, ಇದು ಅಂದುಕೊಂಡಷ್ಟು ಸುಲಭವಲ್ಲ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಋತ

contributor

Similar News