ರಾಜ್ಯಗಳಿಗೆ ಆದಾಯದ ವರ್ಗಾವಣೆಯಲ್ಲಿ ಅಸಮಾನತೆ

ಕೇಂದ್ರ ಎನ್ನುವುದು ಒಂದು ಪರಿಕಲ್ಪನೆ ಮತ್ತು ಸಂವಿಧಾನಾತ್ಮಕವಾಗಿ ಸೃಷ್ಟಿಯಾಗಿರುವಂಥದ್ದು: ಆದರೆ, ರಾಜ್ಯ ಮತ್ತು ಸ್ಥಳೀಯ ಸಂಸ್ಥೆಗಳು ನಿಜವಾದ ಘಟಕಗಳು; ಇಲ್ಲಿ ಆರ್ಥಿಕ ಚಟುವಟಿಕೆ ನಡೆಯುತ್ತದೆ ಮತ್ತು ಸಂಪನ್ಮೂಲ ಸೃಷ್ಟಿಯಾಗುತ್ತದೆ. ರಾಜ್ಯಗಳು ಕೇಂದ್ರದ ಸಂವಿಧಾನಾತ್ಮಕ ಸ್ಥಾನವನ್ನು ಪರಿಗಣಿಸಿವೆ ಎಂದ ಮಾತ್ರಕ್ಕೆ ಅವು ತಮ್ಮದೇ ಹಣ ಪಡೆದುಕೊಳ್ಳಲು ಯಾಚಿಸಬೇಕೆಂದಿಲ್ಲ. ಅದು ಅವುಗಳ ಹಕ್ಕು. ದೇಶದ ಸಂಪನ್ಮೂಲದ ಬಳಕೆಯನ್ನು ಕೇಂದ್ರ-ರಾಜ್ಯಗಳು ಸಮಾನರಂತೆ ಜಂಟಿಯಾಗಿ ನಿರ್ಧರಿಸಬೇಕು. ಇದನ್ನು ಆಗುಮಾಡಲು ಹಣಕಾಸು ಆಯೋಗಕ್ಕೆ ಶಾಸನಾತ್ಮಕ ಅಧಿಕಾರ ನೀಡಬೇಕು: ಅದರ ಶಿಫಾರಸುಗಳ ಜಾರಿಯನ್ನು ಕಡ್ಡಾಯಗೊಳಿಸಬೇಕು. ಅಷ್ಟೇ ಮುಖ್ಯವಾಗಿ, ಆಯೋಗಕ್ಕೆ ನಿಷ್ಪಕ್ಷಪಾತ ಅಧ್ಯಕ್ಷರು-ಸದಸ್ಯರನ್ನು ನೇಮಿಸಬೇಕು. ಇದು ಎನ್‌ಡಿಎ-3.0 ದಲ್ಲಿ ಆಗುವುದೇ?

Update: 2024-06-14 04:33 GMT
Editor : Thouheed | Byline : ಋತ

ಮತ್ತೊಮ್ಮೆ ಸಮ್ಮಿಶ್ರ ಸರಕಾರದ ಯುಗ ಆರಂಭವಾಗಿದೆ. ಚುನಾವಣೆಯ ಫಲಿತಾಂಶ ಬಿಜೆಪಿ ನಿರೀಕ್ಷಿಸಿದ್ದಂತೆ ಇರಲಿಲ್ಲ. ಪ್ರಾದೇಶಿಕ ಪಕ್ಷಗಳು ಉತ್ತಮ ಸಾಧನೆ ಮಾಡಿದ್ದು, ಪ್ರತಿ ಪಕ್ಷ ಮತ್ತು ಆಡಳಿತ ಪಕ್ಷ ಎರಡೂ ಕಡೆ ಹಿಡಿತ ಸಾಧಿಸಿವೆ. ಚುನಾವಣೆ ವೇಳೆ ಕೇಂದ್ರ-ರಾಜ್ಯಗಳ ನಡುವಿನ ಸಂಬಂಧ ಚರ್ಚೆಗೆ ಬಂದಿತ್ತು. ‘400ಕ್ಕೂ ಅಧಿಕ’, ‘ಒಂದು ದೇಶ, ಒಂದು ಚುನಾವಣೆ,’ ‘ಭ್ರಷ್ಟಾಚಾರಿಗಳನ್ನು ಜೈಲಿಗೆ ಕಳಿಸಲಾಗುವುದು’ ಎಂಬ ಪ್ರಧಾನಿಯವರ ಬೆದರಿಕೆಗಳು ಪ್ರತಿಪಕ್ಷದ ಆಡಳಿತವನ್ನು ಗುರಿಯಾಗಿಸಿಕೊಂಡಿದ್ದವು. ಪ್ರತಿಪಕ್ಷಗಳ ಆಡಳಿತವಿರುವ ರಾಜ್ಯ ಸರಕಾರಗಳು ಕೇಂದ್ರ ತಮ್ಮ ಬಗ್ಗೆ ತಾರತಮ್ಯ ಧೋರಣೆ ಅನುಸರಿಸುತ್ತಿವೆ ಎಂದು ದೂರಿದ್ದವು. ದಿಲ್ಲಿ ಹಾಗೂ ರಾಜ್ಯಗಳ ರಾಜಧಾನಿಯಲ್ಲಿ ಈ ಸಂಬಂಧ ಪ್ರತಿಭಟನೆಗಳು ನಡೆದಿದ್ದವು. ಸುಪ್ರೀಂ ಕೋರ್ಟ್, ‘ನ್ಯಾಯಾಲಯಗಳ ಕದ ತಟ್ಟುತ್ತಿರುವ ರಾಜ್ಯಗಳ ಸಂಖ್ಯೆ ಹೆಚ್ಚುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿತ್ತು. ಕೇರಳ ಅನುದಾನ ವರ್ಗಾವಣೆ ಬಗ್ಗೆ, ಕರ್ನಾಟಕ ಬರ ಪರಿಹಾರ ಕುರಿತು ಹಾಗೂ ಪಶ್ಚಿಮ ಬಂಗಾಳ ನರೇಗಾ ಅನುದಾನ ಬಿಡುಗಡೆ ಮಾಡದೆ ಇರುವ ಬಗ್ಗೆ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದವು. ಅಸಹಾಯಕತೆಯನ್ನು ತೋಡಿಕೊಂಡಿದ್ದ ಸುಪ್ರೀಂ ಕೋರ್ಟ್, ರಾಜ್ಯ-ಕೇಂದ್ರ ಇಂತಹ ಸಂಗತಿಗಳನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಬೇಕು ಎಂದು ಹೇಳಿತ್ತು.

2014ರಲ್ಲಿ ಅಧಿಕಾರಕ್ಕೆ ಬಂದಾಗ ಬಿಜೆಪಿ, ಸಹಕಾರ ಒಕ್ಕೂಟ ತತ್ವದ ಬಗ್ಗೆ ಮಾತನ್ನಾಡಿತ್ತು. ಜಿಎಸ್‌ಟಿಯನ್ನು ಆರಂಭದಲ್ಲಿ ಹಲವು ರಾಜ್ಯಗಳು ವಿರೋಧಿಸಿದರೂ, ಕೊನೆಗೆ ಒಪ್ಪಿಕೊಂಡವು. ತನಗಿದ್ದ ಒರಟು ಬಹುಮತದಿಂದಾಗಿ, ಬಿಜೆಪಿ ಆನಂತರ ಒಕ್ಕೂಟ ತತ್ವವನ್ನು ಹಿಂದೆ ಸರಿಸಿತು. ಇದರಿಂದ ಕೇಂದ್ರ- ಪ್ರತಿಪಕ್ಷದ ಸರಕಾರಗಳಿದ್ದ ರಾಜ್ಯಗಳ ನಡುವೆ ಸಂಬಂಧ ವಿಷಮಿಸಿತು. ‘ಭಾರತ’ ಅಪಾರ ವೈಶಿಷ್ಟ್ಯಗಳಿರುವ ಹಲವು ರಾಜ್ಯಗಳ ಒಕ್ಕೂಟ. ಆದರೆ, ಹಲವು ಕಾರಣಗಳಿಂದ ಕೇಂದ್ರ ಸರಕಾರವು ಮೇಲುಗೈ ಹೊಂದಿದ್ದು, ರಾಜ್ಯಗಳ ಮೇಲೆ ಅಧಿಕಾರ ಚಲಾಯಿಸುತ್ತಿದೆ. ಇದರಿಂದ, ರಾಜ್ಯ-ಕೇಂದ್ರದ ಸಂಬಂಧ ಕೆಟ್ಟಿದೆ.

ರಾಜ್ಯಗಳ ಸಮಸ್ಯೆ ಬಹು ಆಯಾಮದ್ದು. ಕೆಲವನ್ನು ರಾಜ್ಯಗಳು ಬೇರೆ ರಾಜ್ಯಗಳ ಮೇಲೆ ವಿಪರಿಣಾಮ ಆಗದಂತೆ, ಪರಿಹರಿಸಿಕೊಳ್ಳಬಹುದು (ಉದಾಹರಣೆಗೆ, ಶಿಕ್ಷಣ, ಆರೋಗ್ಯ, ಸಮಾಜಕಲ್ಯಾಣ ಇತ್ಯಾದಿ). ಆದರೆ, ಮೂಲಸೌಲಭ್ಯ ಮತ್ತು ನೀರಿನ ಹಂಚಿಕೆಯಂಥ ವಿಷಯ ಕುರಿತು ರಾಜ್ಯಗಳು ಪರಸ್ಪರ ಒಪ್ಪಂದ ಮಾಡಿಕೊಳ್ಳಬೇಕಾಗುತ್ತದೆ. ಕರೆನ್ಸಿ ಮತ್ತು ರಕ್ಷಣೆಯ ಹೊಣೆ ಕೇಂದ್ರ ಸರಕಾರದ್ದು. ರಾಜ್ಯಗಳು ಅಭಿವೃದ್ಧಿ ಸಾಧಿಸಲು ಕಾರ್ಯಕ್ರಮಗಳು-ಯೋಜನೆಗಳ ವೆಚ್ಚವನ್ನು ಕೇಂದ್ರ ಭರಿಸಬೇಕಾಗುತ್ತದೆ. ಕೇಂದ್ರವು ತೆರಿಗೆ, ತೆರಿಗೆಯಲ್ಲದ ಮೂಲಗಳು ಹಾಗೂ ಸಾಲದ ಮೂಲಕ ಸಂಪನ್ಮೂಲವನ್ನು ಸೃಷ್ಟಿಸುತ್ತದೆ. ಬಹುತೇಕ ಎಲ್ಲ ತೆರಿಗೆಗಳು ಕೇಂದ್ರದ ಬೊಕ್ಕಸ ಸೇರುವುದರಿಂದ, ಸಂಪನ್ಮೂಲ ಸಂಗ್ರಹದಲ್ಲಿ ಕೇಂದ್ರಕ್ಕೆ ಪ್ರಮುಖ ಪಾತ್ರವಿದೆ. ವೈಯಕ್ತಿಕ ಆದಾಯ ತೆರಿಗೆ(ಪಿಐಟಿ), ಕಾರ್ಪೊರೇಟ್ ತೆರಿಗೆ ಮತ್ತು ಸೀಮಾ ಸುಂಕ-ಅಬಕಾರಿ ಸುಂಕವನ್ನು ಕೇಂದ್ರ ಸಂಗ್ರಹಿಸುತ್ತದೆ. ಜಿಎಸ್‌ಟಿಯನ್ನು ಸಂಗ್ರಹಿಸಿ, ರಾಜ್ಯಗಳಿಗೆ ಪಾಲು ನೀಡುತ್ತದೆ. ಹೀಗಾಗಿ, ಸಂಪನ್ಮೂಲದ ಅಧಿಕ ಪಾಲನ್ನು ಕೇಂದ್ರ ನಿಯಂತ್ರಿಸುತ್ತದೆ ಮತ್ತು ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸಲು ರಾಜ್ಯಗಳಿಗೆ ಆದಾಯ ಹಂಚಿಕೆ ಮಾಡಬೇಕಾಗುತ್ತದೆ.

ಹಣಕಾಸು ಆಯೋಗದ ಪ್ರಾಮುಖ್ಯತೆ: ಕೇಂದ್ರವು ಯಾವ ರಾಜ್ಯಕ್ಕೆ ಎಷ್ಟು ಅನುದಾನ ನೀಡಬೇಕು ಎನ್ನುವುದನ್ನು ಹಣಕಾಸು ಆಯೋಗ ನಿರ್ಧರಿಸುತ್ತದೆ. ಆದರೆ, ಆಯೋಗದ ಶರತ್ತು(ಟರ್ಮ್ಸ್ ಆಫ್ ರೆಫರೆನ್ಸ್)ಗಳನ್ನು ಕೇಂದ್ರ ರೂಪಿಸುವುದರಿಂದ ತಾರತಮ್ಯಕ್ಕೆ ಕಾರಣವಾಗುತ್ತದೆ. ಇದಲ್ಲದೆ, ಆಯೋಗದ ಅಧ್ಯಕ್ಷರು- ಸದಸ್ಯರ ವೈಯಕ್ತಿಕ ನಿಲುವು, ರಾಜಕೀಯ- ಸಾಮಾಜಿಕ-ಆರ್ಥಿಕ ಹಿನ್ನೆಲೆ, ವಿದ್ಯಾರ್ಹತೆ ಇತ್ಯಾದಿಗಳಿಂದಾಗಿ ಆಯೋಗಗಳಲ್ಲಿ ಅಂತರ್ಗತ ತಾರತಮ್ಯ ಇರುತ್ತದೆ. ಆಯೋಗವು ರಾಜ್ಯಗಳು ವಿತ್ತೀಯ ಕ್ಷಮತೆ ಹೊಂದಿರಬೇಕು ಎಂದು ಅಪೇಕ್ಷಿಸುತ್ತದೆ; ರಾಜ್ಯಗಳು ತಮ್ಮ ಜವಾಬ್ದಾರಿ ನಿರ್ವಹಿಸುತ್ತಿಲ್ಲ ಮತ್ತು ಕೇಂದ್ರದಿಂದ ಅನಗತ್ಯ ನೆರವು ಕೋರುತ್ತಿವೆ ಎಂಬ ಭಾವನೆ ಸಹಜ. ಆದರೆ, ಕ್ಷಮತೆಯನ್ನು ಅಳೆಯುವ ಮಾನದಂಡಗಳು ಎಷ್ಟು ನ್ಯಾಯಸಮ್ಮತ-ತಾರತಮ್ಯರಹಿತವಾಗಿರುತ್ತವೆ ಎಂಬುದು ಮುಖ್ಯವಾಗುತ್ತದೆ. ರಾಜ್ಯಗಳು ಕೇಂದ್ರದಿಂದ ಹೆಚ್ಚು ನೆರವು ಪಡೆಯಲು ಪ್ರಯತ್ನಿಸುತ್ತವೆ. ಒಂದುವೇಳೆ ಬಯಸಿದಷ್ಟು ಅನುದಾನ ಲಭ್ಯವಾದಲ್ಲಿ, ಸ್ವಯಂ ಆದಾಯ ಕ್ರೋಡೀಕರಣದಲ್ಲಿ ಹಿಂದೆ ಬೀಳಬಹುದು ಮತ್ತು ಕೇಂದ್ರ ಹೇಗಿದ್ದರೂ ಅನುದಾನ ನೀಡುತ್ತದೆ ಎಂದು ಅನಗತ್ಯ ವೆಚ್ಚ ಮಾಡುವ ಸಾಧ್ಯತೆಗಳು ಇರುತ್ತವೆ.

ರಾಜ್ಯಗಳಿಗೆ ಆದಾಯದಲ್ಲಿ ಪಾಲು ನೀಡುವಿಕೆ ಪ್ರಕ್ರಿಯೆಯಲ್ಲಿ ತಾರತಮ್ಯ ಇರಬಾರದು ಎಂಬ ನಿರೀಕ್ಷೆ ನ್ಯಾಯಸಮ್ಮತ. ಎಲ್ಲ ರಾಜ್ಯಗಳು ಒಂದೇ ರೀತಿ ಇರುವುದಿಲ್ಲ; ಅಭಿವೃದ್ಧಿಯ ಬೇರೆ ಬೇರೆ ಘಟ್ಟಗಳಲ್ಲಿ ಇರುತ್ತವೆ ಮತ್ತು ಅವುಗಳ ಸಂಪನ್ಮೂಲ ಕ್ರೋಡೀಕರಣ ಪ್ರಮಾಣ ಹೆಚ್ಚು-ಕಡಿಮೆ ಇರುತ್ತದೆ. ಸಮಾನತೆಯನ್ನು ಸಾಧಿಸಲು ಶ್ರೀಮಂತ ರಾಜ್ಯಗಳಿಗೆ ಕಡಿಮೆ ಅನುದಾನ ಮತ್ತು ಬಡ ರಾಜ್ಯಗಳಿಗೆ ಅಧಿಕ ನೆರವು ನೀಡಬೇಕಾಗುತ್ತದೆ. ಇದರಿಂದ ತಮಗೆ ನ್ಯಾಯಸಮ್ಮತ ಪಾಲು ಸಿಗುತ್ತಿಲ್ಲ ಎಂದು ಶ್ರೀಮಂತ ರಾಜ್ಯಗಳು ಅಸಮಾಧಾನಗೊಳ್ಳುತ್ತವೆ. ಆದರೆ, 15 ಹಣಕಾಸು ಆಯೋಗಗಳ ಬಳಿಕವೂ ಶ್ರೀಮಂತ-ಬಡ ರಾಜ್ಯಗಳ ನಡುವಿನ ಕಂದರ ಕಡಿಮೆ ಆಗಿಲ್ಲ. ಗಮನಿಸಬೇಕಾದ ಅಂಶವೆಂದರೆ, ಬಡ ರಾಜ್ಯಗಳು ಶ್ರೀಮಂತ ರಾಜ್ಯಗಳಿಗೆ ಮಾರುಕಟ್ಟೆಗಳಾಗಿರುತ್ತವೆ. ಮುಂಬೈ-ಬೆಂಗಳೂರು ನಗರಗಳು ಹೆಚ್ಚು ಕಾರ್ಪೊರೇಟ್/ಆದಾಯ ತೆರಿಗೆ ಸಂಗ್ರಹಿಸುತ್ತವೆ. ಏಕೆಂದರೆ, ಮುಂಬೈ ಆರ್ಥಿಕ ರಾಜಧಾನಿ ಹಾಗೂ ಬೆಂಗಳೂರು ಐಟಿ ರಾಜಧಾನಿ. ಇದರಿಂದ ಈ ನಗರಗಳಲ್ಲಿ ದೊಡ್ಡ ಕಂಪೆನಿಗಳು ನೆಲೆಸಿವೆ ಮತ್ತು ಸ್ಥಳೀಯ ಸರಕಾರಕ್ಕೆ ತೆರಿಗೆ ಪಾವತಿಸುತ್ತವೆ. ಆದರೆ, ಮುಂಬೈ-ಬೆಂಗಳೂರಿಗೆ ಮಾನವ ಸಂಪನ್ಮೂಲ ಮತ್ತು ಉತ್ಪಾದಕ ಸಂಪನ್ಮೂಲ ಎಲ್ಲೆಡೆಯಿಂದ ಬರುತ್ತದೆ.

ಕೇಂದ್ರ ರಾಜ್ಯಗಳಿಗೆ ವಿತ್ತ ಆಯೋಗದ ಶಿಫಾರಸುಗಳ ಅನ್ವಯ ಹಾಗೂ ರಾಜ್ಯಗಳಲ್ಲಿ ಯೋಜನೆ-ಕಾರ್ಯಕ್ರಮಗಳಲ್ಲಿ ಹೂಡಿಕೆ ಮಾಡುವ ಮೂಲಕ ಸಂಪನ್ಮೂಲ ವಿತರಣೆ ಮಾಡುತ್ತದೆ. ಕೇಂದ್ರವು ರಾಜ್ಯಗಳಲ್ಲಿ ರೂಪಿಸುವ ಯೋಜನೆ-ಕಾರ್ಯಕ್ರಮಗಳಿಗೆ ಮಾಡುವ ಹೂಡಿಕೆಯಿಂದ ಉದ್ಯೋಗ ಸೃಷ್ಟಿಯಾಗುತ್ತದೆ ಮತ್ತು ರಾಜ್ಯ ಅಭಿವೃದ್ಧಿಯಾಗುತ್ತದೆ. ಇದರಿಂದಾಗಿ, ತನ್ನ ಎಲ್ಲೆಯೊಳಗೆ ಹೆಚ್ಚು ಯೋಜನೆ-ಕಾರ್ಯಕ್ರಮಗಳು ನಡೆಯಬೇಕೆಂದು ರಾಜ್ಯಗಳು ಪೈಪೋಟಿ ನಡೆಸುತ್ತವೆ. ಪಕ್ಷ ರಾಜಕೀಯದಿಂದಾಗಿ ಕೇಂದ್ರವು ರಾಜ್ಯಗಳಿಗೆ ಕಾರ್ಯಕ್ರಮ/ಯೋಜನೆಗಳ ಹಂಚಿಕೆಯಲ್ಲಿ ತಾರತಮ್ಯ ಮಾಡುತ್ತದೆ. ಉದಾಹರಣೆಗೆ, ಗುಜರಾತ್, ಉತ್ತರಪ್ರದೇಶ, ಬಿಹಾರಕ್ಕೆ ಹೆಚ್ಚು ಅನುದಾನ ನೀಡಲಾಗುತ್ತಿದೆ ಎಂದು ದಕ್ಷಿಣದ ರಾಜ್ಯಗಳು ದೂರುತ್ತವೆ. ಇದು ವಾಸ್ತವ ಕೂಡ. ಪ್ರತಿಪಕ್ಷದ ಸರಕಾರವಿರುವ ರಾಜ್ಯಗಳು ತಾರತಮ್ಯಕ್ಕೆ ಸಿಲುಕುತ್ತವೆ. ಹೆಚ್ಚು ಅನುದಾನ ಬೇಕೆಂದರೆ ರಾಜ್ಯಗಳು ಕೇಂದ್ರದ ಆಣತಿ ಪಾಲಿಸಬೇಕಾಗುತ್ತದೆ.

ಇದು ‘ಡಬಲ್ ಇಂಜಿನ್ ಸರಕಾರ’ ಎಂದರೆ, ಕೇಂದ್ರ ಹಾಗೂ ರಾಜ್ಯ ಎರಡರಲ್ಲೂ ಒಂದೇ ಪಕ್ಷದ ಸರಕಾರ ಇರಬೇಕು ಎಂಬ ಪರಿಕಲ್ಪನೆಗೆ ದಾರಿ ಮಾಡಿಕೊಟ್ಟಿದೆ. ಅಂದರೆ, ಪ್ರತಿಪಕ್ಷ ಗಳ ಆಡಳಿತವಿರುವ ರಾಜ್ಯಗಳ ಬಗ್ಗೆ ತಾರತಮ್ಯ ಮಾಡಲಾಗುತ್ತದೆ ಎಂಬ ಸ್ಪಷ್ಟ ಸಂದೇಶ ಇದಾಗಿದೆ. ಈ ಪರಿಕಲ್ಪನೆಯು ರಾಜ್ಯಗಳ ಸ್ವಾಯತ್ತೆಗೆ ಧಕ್ಕೆ ತರುತ್ತದೆ ಹಾಗೂ ಒಕ್ಕೂಟ ತತ್ವವನ್ನು ದುರ್ಬಲಗೊಳಿಸುತ್ತದೆ. ಸ್ವಾಯತ್ತೆ ಎಂದರೆ ಸ್ವೇಚ್ಛಾ ವರ್ತನೆಯಲ್ಲ. ಬದಲಿಗೆ, ಎಲ್ಲರ ಒಳಿತಿಗಾಗಿ, ರಾಷ್ಟ್ರೀಯ ಚೌಕಟ್ಟಿನಲ್ಲಿ ಕಾರ್ಯ ನಿರ್ವಹಿಸುವುದು ಎಂದು.

ಹಣಕಾಸು ಆಯೋಗ ಮತ್ತು ಅನುದಾನ ಹಂಚಿಕೆ:

16ನೇ ವಿತ್ತ ಆಯೋಗ ಕೆಲಸ ಆರಂಭಿಸಿದೆ. ಒಕ್ಕೂಟ ತತ್ವವನ್ನು ದುರ್ಬಲಗೊಳಿಸುವ ಪ್ರವೃತ್ತಿಯನ್ನು ನಿಲ್ಲಿಸಬೇಕು ಮತ್ತು ನಮ್ಮ ದೇಶ ರಾಜ್ಯಗಳ ಒಕ್ಕೂಟ ಎಂಬ ನಂಬಿಕೆಯನ್ನು ಬಲಗೊಳಿಸಬೇಕು: ಕೇಂದ್ರ ಎಲ್ಲ ರಾಜ್ಯಗಳನ್ನು ಸಮಾನವಾಗಿ ನೋಡಿಕೊಳ್ಳಬೇಕು ಮತ್ತು ಅಸಮಾನತೆಯ ಹೆಚ್ಚಳವನ್ನು ತಡೆಯಲು ಬಡ ರಾಜ್ಯಗಳಿಗೆ ಹೆಚ್ಚು ಸಂಪನ್ಮೂಲ ನೀಡಿದಾಗ, ಬಡ ರಾಜ್ಯಗಳು ಮತ್ತು ಶ್ರೀಮಂತ ರಾಜ್ಯಗಳ ನಡುವೆ ಘರ್ಷಣೆ ನಡೆಯದಂತೆ ನೋಡಿಕೊಳ್ಳಬೇಕು ಎಂಬ ಸಂದೇಶವನ್ನು ಕೇಂದ್ರಕ್ಕೆ ರವಾನಿಸಬೇಕಿದೆ. ಜತೆಗೆ, ರಾಜ್ಯಗಳು ಮತ್ತು ಕೇಂದ್ರದ ಆಡಳಿತ ನಿರ್ವಹಣೆ ಸುಧಾರಿಸಬೇಕಿದೆ. ಇದರಿಂದ ಹೂಡಿಕೆಯ ಉತ್ಪಾದಕತೆ ಹೆಚ್ಚಿ, ಅಭಿವೃದ್ಧಿಯ ವೇಗ ತೀವ್ರಗೊಳ್ಳುತ್ತದೆ. ಭ್ರಷ್ಟಾಚಾರ ಮತ್ತು ಕ್ರೋನಿ ಬಂಡವಾಳಶಾಹಿಯಿಂದ ಸಂಪನ್ಮೂಲ ವ್ಯರ್ಥವಾಗುತ್ತದೆ ಮತ್ತು ಸಾಮಾಜಿಕ ಕ್ಷೇಮಕ್ಕೆ ಧಕ್ಕೆಯುಂಟಾಗುತ್ತದೆ. ಸಾರ್ವಜನಿಕ ಪಡಿತರ ವ್ಯವಸ್ಥೆ(ಪಿಡಿಎಸ್)ಅಥವಾ ಉದ್ಯೋಗ ಖಾತ್ರಿ ಕಾರ್ಯಕ್ರಮ(ಎಂನರೇಗಾ) ಕೇಂದ್ರ-ರಾಜ್ಯದ ಜಂಟಿ ಯೋಜನೆಗಳು. ಆದರೆ, ಈ ಕಾರ್ಯಕ್ರಮದ ಶ್ರೇಯಸ್ಸು ತನಗೆ ಸಿಗಬೇಕು ಎಂದು ಕೇಂದ್ರ ಹೇಳುತ್ತದೆ. ಇದನ್ನು ಅನುಸರಿಸದ ರಾಜ್ಯಗಳಿಗೆ ಅನುದಾನ ಬಾಕಿ ಉಳಿಸಿಕೊಂಡು, ಶಿಕ್ಷಿಸಿದೆ.

ಕೇಂದ್ರದಿಂದ ರಾಜ್ಯಗಳಿಗೆ ಪಾಲು ನೀಡುವಿಕೆ ಅತ್ಯಂತ ವಿವಾದಾಸ್ಪದ ಅಂಶವಾಗಿದೆ. 12ರಿಂದ 15ನೇ ಹಣಕಾಸು ಆಯೋಗದ ಅವಧಿಯಲ್ಲಿ ದಕ್ಷಿಣದ ರಾಜ್ಯಗಳ ಪಾಲು ಶೇ.19.78ರಿಂದ ಶೇ.15.8ಕ್ಕೆ ಕುಸಿದಿದೆ. ಇದರಿಂದ ಲಾಭ ಆಗಿರುವುದು ಪರ್ವತ ಪ್ರದೇಶಗಳು, ಕೇಂದ್ರ ಭಾರತ ಹಾಗೂ ಪಶ್ಚಿಮದ ರಾಜ್ಯಗಳಿಗೆ. ಹಣಕಾಸು ನೆರವು ನೀಡಲು ಬಳಸುವ ಮಾನದಂಡಗಳೆಂದರೆ, ಜನಸಂಖ್ಯೆ, ಜನಸಂಖ್ಯೆಯಲ್ಲಿ ಬದಲಾವಣೆ(ಹೆಚ್ಚಳ ಅಥವಾ ಕುಸಿತ), ಆದಾಯ/ಹಣಕಾಸು ಸಾಮರ್ಥ್ಯ ಅಂತರ, ರಾಜ್ಯದ ವಿಸ್ತೀರ್ಣ, ರಾಜ್ಯದಲ್ಲಿರುವ ಅರಣ್ಯದ ವಿಸ್ತೀರ್ಣ, ತೆರಿಗೆ ಸಂಗ್ರಹಕ್ಕೆ ನಡೆಸಿದ ಪ್ರಯತ್ನ ಮತ್ತು ಆರ್ಥಿಕ ಶಿಸ್ತು. 12ರಿಂದ 15ನೇ ಆಯೋಗದವರೆಗೆ ಈ ಅಂಶಗಳಲ್ಲಿ ಆದ್ಯತೆ ಸಿಕ್ಕಿರುವುದು ‘ಅಂತರ’ ಮಾನದಂಡಕ್ಕೆ(ಅತಿ ಹೆಚ್ಚು ಆದಾಯವಿರುವ ರಾಜ್ಯದಿಂದ ನಿರ್ದಿಷ್ಟ ರಾಜ್ಯದ ಅಂತರ). 11ನೇ ಆಯೋಗದ ಅವಧಿಯಲ್ಲಿ ಶೇ.62.5 ಇದ್ದ ಅಂಕವನ್ನು 13ನೇ ಆಯೋಗ ಶೇ.47.5 ಹಾಗೂ 15ನೇ ಆಯೋಗ ಶೇ.42ಕ್ಕೆ ಇಳಿಸಿತು. ಇದರಿಂದ ದಕ್ಷಿಣದ ರಾಜ್ಯಗಳಿಗೆ ನಷ್ಟವುಂಟಾಗಿದೆ. ಪರ್ವತ ಪ್ರದೇಶಗಳಿರುವ ರಾಜ್ಯಗಳಿಗೆ ಹೆಚ್ಚು ಅನುದಾನ ಸಿಗಲು ವಿಸ್ತೀರ್ಣ ಮತ್ತು ಅರಣ್ಯ ಕಾರಣ. ‘ಅಂತರ’ ಮಾನದಂಡದಿಂದ ಬಿಹಾರ, ಉತ್ತರಪ್ರದೇಶಗಳಿಗೆ ಹೆಚ್ಚು ಲಾಭವಾಗಿದೆ. 14ನೇ ಆಯೋಗದ ವರದಿಗೆ 1971ರ ಜನಗಣತಿಯನ್ನು ಆಧಾರವಾಗಿ ಬಳಸಲಾಗಿತ್ತು; 15ನೇ ಆಯೋಗವು 2011ರ ಜನಗಣತಿಯನ್ನು ಬಳಸಿಕೊಂಡಿತು. ಜನರ ಫಲವತ್ತತೆ ಪ್ರಮಾಣವನ್ನು ಕಡಿತಗೊಳಿಸಿದ ರಾಜ್ಯಗಳಿಗೆ ಉತ್ತೇಜನ ನೀಡಲು, ‘ಜನಸಂಖ್ಯೆಯಲ್ಲಿ ಬದಲಾವಣೆ’ ಮಾನದಂಡವನ್ನು ಸೇರಿಸಿತು. 16ನೇ ಆಯೋಗವು ಆದಾಯ-ಅಂತರ ಮಾನದಂಡಕ್ಕೆ ನೀಡುವ ಅಂಕಗಳನ್ನು ಕಡಿತಗೊಳಿಸಬೇಕಿದೆ. ಜೊತೆಗೆ, ಉಳಿದ ಮಾನದಂಡಗಳ ಅಂಕವನ್ನು ಹೆಚ್ಚಿಸಬೇಕಿದೆ.

ಜಿಎಸ್‌ಟಿ ಜಾರಿ ಬಳಿಕ ರಾಜ್ಯಗಳ ಆದಾಯ ಮೂಲ ಬತ್ತಿಹೋಗಿದೆ. ಅವು ಯಾವುದೇ ಹೆಚ್ಚುವರಿ ತೆರಿಗೆ ವಿಧಿಸಲು ಸಾಧ್ಯವಿಲ್ಲವಾಗಿದೆ. ಆದರೆ, ರಾಜ್ಯಗಳಿಗೆ ಪಾಲು ನೀಡುವುದನ್ನು ತಪ್ಪಿಸಿಕೊಳ್ಳಲು ಕೇಂದ್ರವು ಸೆಸ್ ಮತ್ತು ಸರ್ಚಾರ್ಜ್ ಸಂಗ್ರಹದ ಅಡ್ಡ ದಾರಿ ಹಿಡಿದಿದೆ. ಇದರಿಂದ ರಾಜ್ಯಗಳಿಗೆ ಹಂಚಬೇಕಿರುವ ಒಟ್ಟು ಮೊತ್ತ ಕಡಿಮೆಯಾಗಿದೆ. ಆದ್ದರಿಂದ, ಕೇಂದ್ರದ ಒಟ್ಟು ತೆರಿಗೆ ಆದಾಯದಲ್ಲಿ ಸೆಸ್-ಸರ್ಚಾರ್ಜ್ ಶೇ.10 ಮೀರದಂತೆ ನೋಡಿಕೊಳ್ಳಬೇಕಿದೆ. ಕೇಂದ್ರದ ಬಳಿ ಇರುವ ಹಣಕಾಸು, ರಾಜ್ಯಗಳಿಂದ ಸಂಗ್ರಹಿಸಿದ್ದು ಮತ್ತು ಅದನ್ನು ರಾಜ್ಯಗಳಲ್ಲೇ ವೆಚ್ಚ ಮಾಡಬೇಕು. ಕೇಂದ್ರ ಎನ್ನುವುದು ಒಂದು ಪರಿಕಲ್ಪನೆ ಮತ್ತು ಸಂವಿಧಾನಾತ್ಮಕವಾಗಿ ಸೃಷ್ಟಿಯಾಗಿರುವಂಥದ್ದು: ಆದರೆ, ರಾಜ್ಯ ಮತ್ತು ಸ್ಥಳೀಯ ಸಂಸ್ಥೆಗಳು ನಿಜವಾದ ಘಟಕಗಳು; ಇಲ್ಲಿ ಆರ್ಥಿಕ ಚಟುವಟಿಕೆ ನಡೆಯುತ್ತದೆ ಮತ್ತು ಸಂಪನ್ಮೂಲ ಸೃಷ್ಟಿಯಾಗುತ್ತದೆ. ರಾಜ್ಯಗಳು ಕೇಂದ್ರದ ಸಂವಿಧಾನಾತ್ಮಕ ಸ್ಥಾನವನ್ನು ಪರಿಗಣಿಸಿವೆ ಎಂದ ಮಾತ್ರಕ್ಕೆ ಅವು ತಮ್ಮದೇ ಹಣ ಪಡೆದುಕೊಳ್ಳಲು ಯಾಚಿಸಬೇಕೆಂದಿಲ್ಲ. ಅದು ಅವುಗಳ ಹಕ್ಕು. ದೇಶದ ಸಂಪನ್ಮೂಲದ ಬಳಕೆಯನ್ನು ಕೇಂದ್ರ-ರಾಜ್ಯಗಳು ಸಮಾನರಂತೆ ಜಂಟಿಯಾಗಿ ನಿರ್ಧರಿಸಬೇಕು. ಇದನ್ನು ಆಗುಮಾಡಲು ಹಣಕಾಸು ಆಯೋಗಕ್ಕೆ ಶಾಸನಾತ್ಮಕ ಅಧಿಕಾರ ನೀಡಬೇಕು: ಅದರ ಶಿಫಾರಸುಗಳ ಜಾರಿಯನ್ನು ಕಡ್ಡಾಯಗೊಳಿಸಬೇಕು. ಅಷ್ಟೇ ಮುಖ್ಯವಾಗಿ, ಆಯೋಗಕ್ಕೆ ನಿಷ್ಪಕ್ಷಪಾತ ಅಧ್ಯಕ್ಷರು-ಸದಸ್ಯರನ್ನು ನೇಮಿಸಬೇಕು. ಇದು ಎನ್‌ಡಿಎ-3.0 ದಲ್ಲಿ ಆಗುವುದೇ? ಪ್ರಾಯಶಃ ಇಲ್ಲ. ಒಕ್ಕೂಟ ವ್ಯವಸ್ಥೆ, ರಾಜ್ಯಗಳ ಸ್ವಾಯತ್ತೆ ಬಗ್ಗೆ ನಿಸ್ಸೀಮ ನಿರ್ಲಕ್ಷ್ಯ ಇರುವ ನಿರ್ಮಲಾ ಸೀತಾರಾಮನ್ ಅವರು ಹಣಕಾಸು ಸಚಿವೆಯಾಗಿರುವುದು ಇದಕ್ಕೆ ಒಂದು ಕಾರಣ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಋತ

contributor

Similar News