ಬೆರಳೆಣಿಕೆಯವರ ಐಶ್ವರ್ಯ ಹೆಚ್ಚಳದಿಂದ ಅಸಮಾನತೆ ಅಧಿಕ

ಒಂದು ವೇಳೆ ಪಿತ್ರಾರ್ಜಿತ ಆಸ್ತಿ ತೆರಿಗೆ ಮತ್ತೆ ಜಾರಿಯಾದರೂ, ಅದು ಶೇ.1ರಷ್ಟು ಅತಿ ಶ್ರೀಮಂತರನ್ನು ಗುರಿಯಾಗಿಸಿಕೊಂಡಿರುತ್ತದೆ. ಇಂಡಿಯಾದ ಬೆಳವಣಿಗೆ ಕಥನವು ಉದ್ಯೋಗಗಳನ್ನು ಸೃಷ್ಟಿಸುತ್ತಿಲ್ಲ ಮತ್ತು ಒಂಟಿಕಾಲಿನ ನಡೆಯಾಗಿದ್ದು, ಇದನ್ನು ಸರಿಪಡಿಸಲು ಇಂತಹ ತೆರಿಗೆ ಅಗತ್ಯವಿದೆ. ಆದಾಯ ಹೆಚ್ಚಳ ಮತ್ತು ಐಶ್ವರ್ಯ ಅಸಮಾನತೆಗಳು ಸಾಮಾಜಿಕ- ಆರ್ಥಿಕ ಅಸ್ತವ್ಯಸ್ತತೆಗೆ ಕಾರಣವಾಗುವುದರಿಂದ, ಅಂಬಾನಿ-ಅದಾನಿ ತೆರಿಗೆ ಸಾಮಾಜಿಕವಾಗಿ ಸೂಕ್ತವಾಗಿರಲಿದೆ. ಇಂತಹ ತೆರಿಗೆ ದೇಶದ 200-500 ಕುಟುಂಬಗಳನ್ನು ಗುರಿಯಾಗಿರಿಸಿಕೊಳ್ಳಲಿದೆ ಎಂದಾದಲ್ಲಿ ಸ್ವಾಗತಾರ್ಹ.

Update: 2024-05-10 05:40 GMT
Editor : Thouheed | Byline : ಋತ

ಕಾಂಗ್ರೆಸ್ ಸಾಗರೋತ್ತರ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ರಾಜೀನಾಮೆ ನೀಡಿದ್ದಾರೆ. ಆದರೆ, ಅವರ ಮಾತುಗಳು ಬಿಜೆಪಿ ಕೃಪೆಯಿಂದ ಅನುರಣನಗೊಳ್ಳುತ್ತಿವೆ. ಈ ಮೊದಲು ‘ಪಿತ್ರಾರ್ಜಿತ ತೆರಿಗೆ’ ಕುರಿತು ಆಡಿದ ಮಾತು ಲೋಕಸಭೆ ಚುನಾವಣೆಯ ಮೂರನೇ ಹಂತದ ಬಳಿಕವೂ ಪ್ರಧಾನಿಯವರ ಬಾಯಿಯಿಂದ ಮತ್ತೆ ಮತ್ತೆ ಹೊರಬರುತ್ತಿದೆ. ‘‘ಅಮೆರಿಕದಲ್ಲಿ ವ್ಯಕ್ತಿಯೊಬ್ಬ ಮರಣದ ನಂತರ ಮಕ್ಕಳಿಗೆ ಬಿಟ್ಟುಹೋಗುವ ಆಸ್ತಿಯ ಮೊತ್ತದ ಶೇ.55ನ್ನು ತೆರಿಗೆಯಾಗಿ ನೀಡಬೇಕು’’ ಎಂಬ ಅವರ ಮಾತನ್ನು ತಿರುಚಿದ ಬಿಜೆಪಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪಿತ್ರಾರ್ಜಿತ ತೆರಿಗೆ ಜಾರಿ ಗೊಳಿಸಲಿದೆ ಎಂದು ಆರಂಭಿಸಿತು. ಇದು ಇಷ್ಟಕ್ಕೆ ನಿಲ್ಲಲಿಲ್ಲ.

ಏನಿದು ಪಿತ್ರಾರ್ಜಿತ ಆಸ್ತಿ ತೆರಿಗೆ? ಪಿತ್ರಾರ್ಜಿತ ಆಸ್ತಿ ತೆರಿಗೆ, ಎಸ್ಟೇಟ್ ತೆರಿಗೆ, ಐಶ್ವರ್ಯ ತೆರಿಗೆ ಇವೆಲ್ಲವೂ ಒಂದು ಜಮಾನದಲ್ಲಿ ಇದ್ದ ತೆರಿಗೆಗಳು. ಎಸ್ಟೇಟ್ ತೆರಿಗೆಯನ್ನು ನಮ್ಮ ದೇಶದಲ್ಲಿ 1953ರಲ್ಲಿ ಪರಿಚಯಿಸಲಾಯಿತು. ಕೃಷಿ ಭೂಮಿ ಸೇರಿದಂತೆ ಚರ ಮತ್ತು ಸ್ಥಿರ ಆಸ್ತಿಯ ಅಸಲು ಮೊತ್ತಕ್ಕೆ ವಿಧಿಸುತ್ತಿದ್ದ ತೆರಿಗೆ ಇದು. ಆಸ್ತಿಯ ಮಾಲಕನ ಸಾವಿನ ಬಳಿಕ ಯಾರಿಗೆ ಆಸ್ತಿ ವರ್ಗಾವಣೆಯಾಗುತ್ತದೋ, ಅವರು ತೆರಿಗೆ ಪಾವತಿಸಬೇಕಿತ್ತು. ಇದೊಂದು ಪ್ರಗತಿಪರ ತೆರಿಗೆ ವ್ಯವಸ್ಥೆಯಾಗಿದ್ದು, ನಿಗದಿತ ಮೌಲ್ಯದ ಆಸ್ತಿಗೆ ತೆರಿಗೆ ವಿನಾಯಿತಿ ಇತ್ತು ಮತ್ತು ಆಸ್ತಿ ಮೌಲ್ಯ ಹೆಚ್ಚು ಇದ್ದಾಗ, ಅಧಿಕ ತೆರಿಗೆ ವಿಧಿಸಲಾಗುತ್ತಿತ್ತು. ತೆರಿಗೆ ದರ ಶೇ.85ರವರೆಗೆ ಇರುತ್ತಿತ್ತು. ಆದಾಯ ಕಡಿಮೆ ಬರುತ್ತಿತ್ತು ಮತ್ತು ಬೇನಾಮಿ ಆಸ್ತಿಗಳನ್ನು ಹೊಂದುವುದು ಹೆಚ್ಚಳಗೊಂಡಿದ್ದರಿಂದ, 1985ರಲ್ಲಿ ರಾಜೀವ್ ಗಾಂಧಿ ಸರಕಾರ ಈ ತೆರಿಗೆಯನ್ನು ತೆಗೆದುಹಾಕಿತು.

ಈ ಗುಂಪಿನ ಇನ್ನೊಂದು ತೆರಿಗೆ- ಐಶ್ವರ್ಯ ತೆರಿಗೆ: 1957ರಿಂದ ಜಾರಿಯಲ್ಲಿತ್ತು. ವಾರ್ಷಿಕ 30 ಲಕ್ಷ ರೂ.ಗಿಂತ ಅಧಿಕ ಆದಾಯ ಇರುವವರಿಗೆ ಶೇ.1ರಷ್ಟು ತೆರಿಗೆ ವಿಧಿಸಲಾಗುತ್ತಿತ್ತು. ದೇಶಿ ನಾಗರಿಕರ ಎಲ್ಲ ಆಸ್ತಿ ಮತ್ತು ಅನಿವಾಸಿಗಳ ಭಾರತೀಯ ಆಸ್ತಿ ಮೇಲೆ ತೆರಿಗೆ. ಚಿನ್ನ, ಬೆಳ್ಳಿ, ಪ್ಲಾಟಿನಂ, ಖಾಸಗಿ ವಿಮಾನ-ಹಡಗು/ಕಾರು(ಮನೆ ಹೊರತು ಪಡಿಸಿ), 50,000 ರೂ.ಗಿಂತ ಅಧಿಕ ನಗದು ತೆರಿಗೆಗೆ ಅರ್ಹವಾಗುತ್ತಿತ್ತು. ನಿರ್ವಹಣೆ/ಸಂಗ್ರಹದಲ್ಲಿನ ದುಬಾರಿ ವೆಚ್ಚದಿಂದಾಗಿ, 2015ರಲ್ಲಿ ವಜಾ ಆಯಿತು. ಇನ್ನೊಂದು ತೆರಿಗೆಯಾದ ಉಡುಗೊರೆ ತೆರಿಗೆಯು 1958ರಿಂದ ಚಾಲ್ತಿಯಲ್ಲಿತ್ತು. ಚರ/ಸ್ಥಿರ ಆಸ್ತಿ ಎರಡಕ್ಕೂ ಶೇ.30ರಷ್ಟು ತೆರಿಗೆ ಹಾಕಲಾಗುತ್ತಿತ್ತು. 1998ರಲ್ಲಿ ಈ ತೆರಿಗೆಯನ್ನು ತೆಗೆದುಹಾಕಲಾಯಿತು. 2004ರಲ್ಲಿ ಮತ್ತೆ ಪರಿಚಯಿಸಿ, 50,000 ರೂ.(ನಗದು ಇಲ್ಲವೇ ಉಡುಗೊರೆ) ಮೊತ್ತದ ಉಡುಗೊರೆಗೆ ತೆರಿಗೆ ವಿಧಿಸಲಾರಂಭಿಸಲಾಯಿತು.

ಕಳೆದ ದಶಕದಲ್ಲಿ ವಾರ್ಷಿಕ ಆಯವ್ಯಯ ಮಂಡನೆ ಆದಾಗಲೆಲ್ಲ ಪಿತ್ರಾರ್ಜಿತ ಆಸ್ತಿ ಮೇಲೆ ತೆರಿಗೆ ಮರುಪರಿಚಯಿ ಸಲಾಗುತ್ತದೆ ಎಂಬ ವರದಿ ಹರಡುತ್ತಿತ್ತು. 2018ರಲ್ಲಿ ವಿತ್ತ ಸಚಿವರು ‘‘ಪಾಶ್ಚಿಮಾತ್ಯ ದೇಶಗಳಲ್ಲಿ ವಿಶ್ವವಿದ್ಯಾನಿಲಯ ಮತ್ತು ಇತರ ಸಂಸ್ಥೆಗಳಿಗೆ ಭಾರೀ ಅನುದಾನ ಸಿಗಲು ಪಿತ್ರಾರ್ಜಿತ ಆಸ್ತಿ ಮೇಲಿನ ತೆರಿಗೆ ಕಾರಣ. ಆದರೆ, ಭಾರತದಲ್ಲಿ ಹಾಗೆ ಆಗುವುದಿಲ್ಲ’’ ಎಂದಿದ್ದರು. ಈ ತೆರಿಗೆಯಿಂದ ಸರಕಾರಕ್ಕೆ ಅತಿ ಕಡಿಮೆ ಆದಾಯ ಸಂಗ್ರಹ ಆಗುತ್ತದೆ ಎಂದು ಇತಿಹಾಸ ಹೇಳುತ್ತದೆ.

ಪ್ರಜಾಸತ್ತಾತ್ಮಕ ಬಂಡವಾಳಶಾಹಿ ರಾಜಕೀಯ ವ್ಯವಸ್ಥೆ ಇರುವ ಮತ್ತು ವೈಯಕ್ತಿಕತೆ/ಐಶ್ವರ್ಯ ಸೃಷ್ಟಿಯನ್ನು ಪ್ರೋತ್ಸಾಹಿಸುವ ಅಮೆರಿಕದಲ್ಲಿ ಶೇ.18-40 ಎಸ್ಟೇಟ್ ತೆರಿಗೆ ವಿಧಿಸುತ್ತಾರೆ. ತೆರಿಗೆ ದರ ಮತ್ತು ವಿಧಿಸಿದ ಮಿತಿ ಹೆಚ್ಚು ಕಡಿಮೆ ಆಗಬಹುದು. 1935ರಲ್ಲಿ ಅತಿ ಹೆಚ್ಚು ಎಂದರೆ, ಶೇ.70ರಷ್ಟು ತೆರಿಗೆ ಇದ್ದಿತ್ತು. ಹಾಲಿ ಸಂಹಿತೆ ಪ್ರಕಾರ, ಮಿತಿ 13.6 ದಶಲಕ್ಷ ಡಾಲರ್. ಇದಕ್ಕಿಂತ ಹೆಚ್ಚಿನ ಮೊತ್ತಕ್ಕೆ ತೆರಿಗೆ ವಿಧಿಸಲಾಗುತ್ತದೆ. 10 ವರ್ಷಗಳ ಹಿಂದೆ ಮಿತಿ 5.34 ದಶಲಕ್ಷ ಡಾಲರ್ ಇತ್ತು. ಆದರೆ, ಫೆಡರಲ್ ಸರಕಾರ ಪಿತ್ರಾರ್ಜಿತ ಆಸ್ತಿ ತೆರಿಗೆ ವಿಧಿಸುವುದಿಲ್ಲ. ಕೆಲವು ರಾಜ್ಯಗಳು ವಿಧಿಸುತ್ತವೆ. ಈ ತೆರಿಗೆಯಲ್ಲಿ ಏಕರೂಪತೆ ಇಲ್ಲ. ಪಿತ್ರಾರ್ಜಿತ ಆಸ್ತಿ ತೆರಿಗೆ ದರ ಜಪಾನಿನಲ್ಲಿ ಅತಿ ಹೆಚ್ಚು ಶೇ.55 ಇದೆ. ದಕ್ಷಿಣ ಕೊರಿಯಾ (ಶೇ.50), ಫ್ರಾನ್ಸ್ ಶೇ. 45 ಮತ್ತು ಇಂಗ್ಲೆಂಡ್ ಶೇ. 40 ತೆರಿಗೆ ವಿಧಿಸುತ್ತವೆ.

ಅಸಲು ಸಂಗತಿ ಇದು:

ಏಕೆ ಇಂತಹ ಅನುಪಯುಕ್ತ ಸಂಗತಿಗಳನ್ನು ಬಿಜೆಪಿ ಎತ್ತಿ ಆಡುತ್ತದೆ? ಚುನಾವಣೆ ಆರಂಭದಲ್ಲಿ ಅದರ ಘೋಷಣೆಯಾದ ‘‘ಚಾರ್ ಸೌ ಪಾರ್’’ (400+ಸ್ಥಾನ), ಇಂತಹ ಬಹುಮತದಿಂದ ಪಕ್ಷ ಸಂವಿಧಾನವನ್ನು ಬದಲಿಸಲಿದೆ ಎಂಬ ಆತಂಕ ಸೃಷ್ಟಿಸಿತು. 2ನೆಯದಾಗಿ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಈಗ ಚುನಾವಣೆ ವಿಷಯ ವಾಗಿ ಉಳಿದಿಲ್ಲ. ಮೂರನೆಯದಾಗಿ, ನಿರುದ್ಯೋಗ, ಬೆಲೆ ಹೆಚ್ಚಳ, ಹಣದುಬ್ಬರ, ಅಭ್ಯರ್ಥಿಗಳ ಸಾಧನೆ ಮತ್ತು ಅಸಮಾನತೆ ಹೆಚ್ಚಳದಂತಹ ವಿಷಯ ಚುನಾವಣೆಯಲ್ಲಿ ಮುನ್ನೆಲೆಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ರಾಜಸ್ಥಾನದಲ್ಲಿ ಪಿತ್ರಾರ್ಜಿತ ತೆರಿಗೆ ಕುರಿತು ಮಾತನಾಡಿದರು. ಜೊತೆಗೆ, ಆಸ್ತಿಯನ್ನು ಕಿತ್ತುಕೊಂಡು ಅಲ್ಪಸಂಖ್ಯಾತರಿಗೆ ನೀಡಲಾಗುತ್ತದೆ ಎಂದು ಹೇಳಿದರು. ಇದೊಂದು ಅತ್ಯಂತ ದೊಡ್ಡ ಸುಳ್ಳು ಮತ್ತು ತೀವ್ರ ವಿಭೇದಕ ಪ್ರವೃತ್ತಿಯ ಅಸಂಬದ್ಧ ಹೇಳಿಕೆ. ಸಾರ್ವಜನಿಕ ಸಂವಾದವನ್ನು ಅತ್ಯಂತ ಕೆಳ ಹಂತಕ್ಕೆ ಕೊಂಡೊಯ್ಯಿತು.

ಪಿತ್ರಾರ್ಜಿತ ಆಸ್ತಿ ವಿಷಯದಲ್ಲಿ ವಿವಾದ ಏನಿದೆ? ಕಾಂಗ್ರೆಸ್ ತಾನು ಅಂತಹ ತೆರಿಗೆಯನ್ನು ಜಾರಿಗೊಳಿಸುತ್ತೇನೆ ಎಂದು ಹೇಳಿಯೇ ಇಲ್ಲ. ಮಾರ್ಚ್ 1985ರಲ್ಲಿ ಪ್ರಧಾನಿ ರಾಜೀವ್‌ಗಾಂಧಿ ಈ ತೆರಿಗೆ ತೆಗೆದು ಹಾಕಿದರು. ವಿತ್ತ ಸಚಿವ ವಿ.ಪಿ. ಸಿಂಗ್ ಸಂಸತ್ತಿನಲ್ಲಿ ಹೇಳಿದರು-‘‘ಎಸ್ಟೇಟ್ ತೆರಿಗೆಯಿಂದ ಬರುತ್ತಿರುವ ಆದಾಯ ಕೇವಲ 20 ಕೋಟಿ ರೂ. ಆದರೆ, ಆಡಳಿತಾತ್ಮಕ ವೆಚ್ಚ ಅಧಿಕ. ಈ ಹಿನ್ನೆಲೆಯಲ್ಲಿ ತೆರಿಗೆ ರದ್ದುಗೊಳಿಸಲಾಗುತ್ತಿದೆ’’

ಸರಿ. ಪ್ರಸಕ್ತಕ್ಕೆ ಬರೋಣ. ಕಾಂಗ್ರೆಸ್‌ನ 48 ಪುಟಗಳ ಪ್ರಣಾಳಿಕೆ ‘ನ್ಯಾಯಪತ್ರ’ದಲ್ಲಿ ‘ಅಸಮಾನತೆ’ ಎಂಬ ಪದ 8 ಬಾರಿ ಬಂದಿದೆ. ಅದನ್ನು ಕಡಿಮೆ ಮಾಡುವ ಬಗ್ಗೆ ಉಲ್ಲೇಖಗಳಿವೆ. ಆದರೆ, 76 ಪುಟಗಳ ಬಿಜೆಪಿ ಪ್ರಣಾಳಿಕೆಯಲ್ಲಿ ಆ ಪದವೇ ಇಲ್ಲ. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಮಣಿಪುರ 2, ಉದ್ಯೋಗ 36, ಮೀಸಲು 6, ಹಣದುಬ್ಬರ 3, ಸಮಾನತೆ 3, ಮುಸ್ಲಿಮ್ 0, ಸಾಮಾಜಿಕ ನ್ಯಾಯ 4, ಎಲ್‌ಜಿಬಿಟಿಕ್ಯು 3, ಜಿಎಸ್‌ಟಿ 14 ಬಾರಿ ಉಲ್ಲೇಖಗೊಂಡಿದ್ದರೆ, ಬಿಜೆಪಿ ಪ್ರಣಾಳಿಕೆಯಲ್ಲಿ ಮಣಿಪುರ/ ಸಾಮಾಜಿಕ ನ್ಯಾಯ/ಎಲ್‌ಜಿಬಿಟಿಕ್ಯು ಉಲ್ಲೇಖವೇ ಇಲ್ಲ. ಉದ್ಯೋಗ 2, ಮೀಸಲು 2, ಹಣದುಬ್ಬರ/ಸಮಾನತೆ /ಮುಸ್ಲಿಮ್ ಒಮ್ಮೆ, ಜಿಎಸ್‌ಟಿ 3 ಮತ್ತು......... ಮೋದಿ 67! ಬಾರಿ ಉಲ್ಲೇಖಗೊಂಡಿದೆ.

ವಾಸ್ತವವೆಂದರೆ, ಅಸಮಾನತೆಯೊಂದಿಗೆ ಕೆಲವೇ ಕೆಲವರ ಶ್ರೀಮಂತಿಕೆ ಹೆಚ್ಚಳಗೊಂಡಿದೆ ಹಾಗೂ ಜನಸಾಮಾನ್ಯರ ಮೇಲೆ ಜಿಎಸ್‌ಟಿ ಮೂಲಕ ತೆರಿಗೆ ಹೊರೆ ಅಧಿಕವಾಗಿದೆ. ಇದನ್ನೇ ಕಾಂಗ್ರೆಸ್ ಪ್ರಣಾಳಿಕೆ ಹೇಳುತ್ತದೆ, ‘ಜನಸಾಮಾನ್ಯರು ಮತ್ತು ಬಡವರ ಮೇಲೆ ಅಪರೋಕ್ಷ ತೆರಿಗೆ ಗಮನಾರ್ಹವಾಗಿ ಹೆಚ್ಚಿದೆ ಮತ್ತು ಕಾರ್ಪೊರೇಟ್‌ಗಳ ತೆರಿಗೆ ಪಾಲು ಕಡಿಮೆ ಯಾಗಿದೆ’. ಇದು ಜನಸ್ನೇಹಿ ಮತ್ತು ಪ್ರಗತಿಪರ ತೆರಿಗೆ ನೀತಿಯ ತದ್ವಿರುದ್ಧ ನಡೆ.

ಮಾರ್ಚ್ 2024ರ ವಿಶ್ವ ಅಸಮಾನತೆ ದತ್ತಾಂಶ ವರದಿ ‘ಎಕನಾಮಿಕ್‌ಇನ್‌ಈಕ್ವಾಲಿಟಿ ಇನ್ ಇಂಡಿಯಾ: ದ ಬಿಲಿಯನೇರ್ ರಾಜ್’ ಪ್ರಕಾರ, ಈಗ ವಸಾಹತುಶಾಹಿ ಬ್ರಿಟಿಷ್ ರಾಜ್‌ಗಿಂತ ಹೆಚ್ಚು ಅಸಮಾನತೆ ಇದೆ. ಫ್ರೆಂಚ್ ಅರ್ಥಶಾಸ್ತ್ರಜ್ಞ ಥಾಮಸ್‌ಪಿಕೆಟ್ಟಿ ಮತ್ತಿತರರ ಅಧ್ಯಯನದ ಫಲವಾದ ಈ ವರದಿ ಪ್ರಕಾರ, 167 ಅತಿ ಹೆಚ್ಚು ಶ್ರೀಮಂತ ಕುಟುಂಬಗಳ ಮೇಲೆ ಶೇ.2ರಷ್ಟು ತೆರಿಗೆ ವಿಧಿಸಿದರೆ, ಶೇ.0.5ರಷ್ಟು ರಾಷ್ಟ್ರೀಯ ಆದಾಯ ಹೆಚ್ಚಲಿದೆ ಮತ್ತು ಇದನ್ನು ಹೂಡಿಕೆ(ಆರೋಗ್ಯ, ಶಿಕ್ಷಣ , ಪೋಷಕಾಂಶ ಇತ್ಯಾದಿ) ಮಾಡಬಹುದು. ಒಂದು ವೇಳೆ ಪಿತ್ರಾರ್ಜಿತ ಆಸ್ತಿ ತೆರಿಗೆ ಮತ್ತೆ ಜಾರಿಯಾದರೂ, ಅದು ಶೇ.1ರಷ್ಟು ಅತಿ ಶ್ರೀಮಂತರನ್ನು ಗುರಿಯಾಗಿಸಿಕೊಂಡಿರುತ್ತದೆ. ಇಂಡಿಯಾದ ಬೆಳವಣಿಗೆ ಕಥನವು ಉದ್ಯೋಗಗಳನ್ನು ಸೃಷ್ಟಿಸುತ್ತಿಲ್ಲ ಮತ್ತು ಒಂಟಿಕಾಲಿನ ನಡೆಯಾಗಿದ್ದು, ಇದನ್ನು ಸರಿಪಡಿಸಲು ಇಂತಹ ತೆರಿಗೆ ಅಗತ್ಯವಿದೆ. ಆದಾಯ ಹೆಚ್ಚಳ ಮತ್ತು ಐಶ್ವರ್ಯ ಅಸಮಾನತೆಗಳು ಸಾಮಾಜಿಕ- ಆರ್ಥಿಕ ಅಸ್ತವ್ಯಸ್ತತೆಗೆ ಕಾರಣವಾಗುವುದರಿಂದ, ಅಂಬಾನಿ-ಅದಾನಿ ತೆರಿಗೆ ಸಾಮಾಜಿಕವಾಗಿ ಸೂಕ್ತವಾಗಿರಲಿದೆ. ಇಂತಹ ತೆರಿಗೆ ದೇಶದ 200-500 ಕುಟುಂಬಗಳನ್ನು ಗುರಿಯಾಗಿರಿಸಿಕೊಳ್ಳಲಿದೆ ಎಂದಾದಲ್ಲಿ ಸ್ವಾಗತಾರ್ಹ.

ಭಾರತ ಜಗತ್ತಿನ ಅತ್ಯಂತ ಅಸಮಾನ ದೇಶಗಳಲ್ಲಿ ಒಂದು(194ರಲ್ಲಿ 149ನೇ ಸ್ಥಾನ). ವರ್ಲ್ಡ್ ಇನ್‌ಈಕ್ವಾಲಿಟಿ ಲ್ಯಾಬ್ (ಡಬ್ಲ್ಯುಐಎಲ್) ಪ್ರಕಾರ, ರಾಷ್ಟ್ರೀಯ ಆದಾಯದಲ್ಲಿ ಶೇ.10ರಷ್ಟು ಮಂದಿಯ ಪಾಲು ಶೇ.60 ಇದೆ. ಕೆಳಹಂತದ ಶೇ. 50 ಮಂದಿ ಶೇ.15ರಷ್ಟು ಆದಾಯ ಹಂಚಿಕೊಂಡಿದ್ದಾರೆ(2022-23). ಇವರ ಮಾಸಿಕ ಆದಾಯ 5,930 ರೂ. ಇದ್ದರೆ, ಮೇಲಿನ ಸ್ತರದ ಶೇ.10 ಮಂದಿಯ ಆದಾಯ 23 ಪಟ್ಟು ಅಂದರೆ, 1,12,748 ರೂ. ಇದೆ. ಪೋರ್ಬ್ಸ್ ಪ್ರಕಾರ, ದೇಶದಲ್ಲಿ 200 ಬಿಲಿಯನೇರ್‌ಗಳು ಇದ್ದಾರೆ. ಇವರ ಒಟ್ಟು ಐಶ್ವರ್ಯ ಜಿಡಿಪಿಯ 1/5 ರಿಂದ 1/4ರಷ್ಟು ಇದೆ.

ಬಿಜೆಪಿ ಸರಕಾರದ ಅವಧಿಯಲ್ಲಿ ‘ವಾಸ್ತವ ವೇತನ ಸ್ಥಗಿತತೆ, ಸಾಮಾಜಿಕ ಭದ್ರತಾ ವ್ಯವಸ್ಥೆಯ ಕುಸಿತ ಮತ್ತು ಅನೌಪಚಾರಿಕ ನೌಕರರ ಬಗ್ಗೆ ನಿಷ್ಕಾಳಜಿ ಹೆಚ್ಚಳಗೊಂಡಿದೆ’ ಎಂದು ಅರ್ಥಶಾಸ್ತ್ರಜ್ಞರಾದ ಜೀನ್ ಡ್ರೀಜ್ ಮತ್ತು ರೀತಿಕಾ ಖೇರಾ ಹೇಳುತ್ತಾರೆ. 2014-24ರ ಅವಧಿಯಲ್ಲಿ ರೈತರ ಆದಾಯ ದುಪ್ಪಟ್ಟು ಆಗುವ ಬದಲು ಕೃಷಿ ಕಾರ್ಮಿಕರ ವೇತನ ಪ್ರತೀ ವರ್ಷ ಶೇ. 1.4ರಷ್ಟು ಕಡಿಮೆಯಾಗಿದೆ ಎಂದು ಕೃಷಿ ಮಂತ್ರಾಲಯದ ಅಂಕಿಅಂಶಗಳು ಹೇಳುತ್ತವೆ. ದೇಶ ಜಗತ್ತಿನ ಸೂಪರ್‌ಪವರ್ ಆಗಲಿದೆ ಎಂದು ಘೋಷಿಸಿಕೊಳ್ಳುತ್ತಿರುವಾಗಲೇ, ರಾಚನಿಕ ಹಿಂಸೆಯಿಂದ ಅವಕಾಶಗಳನ್ನು, ಅಭಿವೃದ್ಧಿಯನ್ನು ಹಾಗೂ ಆತ್ಮತೃಪ್ತಿಯನ್ನು ನಿರಾಕರಿಸಲಾಗುತ್ತಿದೆ.

ಕಳೆದ 5 ವರ್ಷಗಳಲ್ಲಿ ಬ್ಯಾಂಕುಗಳು 10.6 ಲಕ್ಷ ಕೋಟಿ ರೂ. ಹಾಗೂ 10 ವರ್ಷದಲ್ಲಿ 13 ಲಕ್ಷ ಕೋಟಿ ರೂ.ಸಾಲ ರೈಟ್‌ಆಫ್ ಮಾಡಿವೆ. ಆರ್‌ಟಿಐ ಅರ್ಜಿಗೆ ಆರ್‌ಬಿಐ ನೀಡಿದ ಉತ್ತರದ ಪ್ರಕಾರ, 2014ರ ಬಳಿಕ ರೈಟ್‌ಆಫ್ ಆದ ಬ್ಯಾಂಕ್ ಸಾಲ 25 ಲಕ್ಷ ಕೋಟಿ ರೂ. ಇದರಲ್ಲಿ ಶೇ.50ರಷ್ಟು ಕಾರ್ಪೊರೇಟ್ ಸಂಸ್ಥೆಗಳು ಮಾಡಿದ ಸಾಲ. ಈ ಮೊತ್ತ ಕೇಂದ್ರ ಆಯವ್ಯಯದಲ್ಲಿ ಶಿಕ್ಷಣ, ಆರೋಗ್ಯ, ಪೋಷಕಾಂಶ ಮತ್ತು ನರೇಗಾಕ್ಕೆ ನೀಡಿದ ಅನುದಾನಕ್ಕಿಂತ ಅಧಿಕ.

ಶ್ರೀಮಂತರಿಗೆ ಆಸ್ತಿ ತೆರಿಗೆ ಹೊಸದೇನಲ್ಲ. ಪಿತ್ರಾರ್ಜಿತ ಅಥವಾ ಎಸ್ಟೇಟ್, ಐಶ್ವರ್ಯ ತೆರಿಗೆ ವಜಾಗೊಳಿಸಿರುವುದರಿಂದ, ಶ್ರೀಮಂತರ ಐಶ್ವರ್ಯ ಹೆಚ್ಚಳಗೊಂಡಿದೆ. ಚಿನ್ನ/ಮಂಗಳಸೂತ್ರ ಕಸಿದು, ಅಲ್ಪಸಂಖ್ಯಾತರಿಗೆ ನೀಡುತ್ತಾರೆ ಎನ್ನುವುದು ಪ್ರಶ್ನೆಯಲ್ಲ. ದೇಶದಲ್ಲಿ ನಿರುದ್ಯೋಗ ಪ್ರಮಾಣ ಏಕೆ ಇಷ್ಟು ಹೆಚ್ಚು ಇದೆ? ಜಾಗತಿಕ ಸೂಚ್ಯಂಕಗಳಲ್ಲಿ ಅಧಮ ಸ್ಥಿತಿ ತಲುಪಲು ಕಾರಣಗಳೇನು? 2013-23ರ ಅವಧಿಯಲ್ಲಿ ಜಾಗತಿಕ ಹಸಿವು ಸೂಚ್ಯಂಕ(55ರಿಂದ 111), ಜಾಗತಿಕ ಮಾನವ ಸಂಪನ್ಮೂಲ ಸೂಚ್ಯಂಕ (78ರಿಂದ 116), ಲಿಂಗ ಸಮಾನತೆ ಸೂಚ್ಯಂಕ(101ರಿಂದ 127), ಜಾಗತಿಕ ಪ್ರಜಾಪ್ರಭುತ್ವ ಸೂಚ್ಯಂಕ(27ರಿಂದ 55), ಚುನಾವಣಾ ಪ್ರಜಾಪ್ರಭುತ್ವ ಸೂಚ್ಯಂಕ(55ರಿಂದ 108), ಮಾನವ ಸ್ವಾತಂತ್ರ್ಯ ಸೂಚ್ಯಂಕ (90ರಿಂದ 112), ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕ(140ರಿಂದ 161) ಮತ್ತು ಪರಿಸರ ಸಂರಕ್ಷಣೆ ಸೂಚ್ಯಂಕ(155ರಿಂದ 180) ಪಾತಾಳ ತಲುಪಿವೆ. ಇಂತಹ ಹೀನಾಯ ಸ್ಥಿತಿ ಏಕೆ ಬಂತು ಎನ್ನುವುದು ಪ್ರಶ್ನೆ. ಈ ವೈಫಲ್ಯಗಳನ್ನೆಲ್ಲ ನೆಹರೂ, ಕಾಂಗ್ರೆಸ್ ಇಲ್ಲವೇ ಅಲ್ಪಸಂಖ್ಯಾತರ ತಲೆಗೆ ಕಟ್ಟಲು ಸಾಧ್ಯವಿಲ್ಲ ಎನ್ನುವುದು ವಾಸ್ತವ.

1996ರ ತನ್ನ ಆದೇಶದಲ್ಲಿ ಸುಪ್ರೀಂ ಕೋರ್ಟ್, ಮತದಾರರ ಮೇಲೆ ಪ್ರಭಾವ ಬೀರುವ ಧಾರ್ಮಿಕ ಸ್ವಭಾವದ ಭಾಷಣಗಳನ್ನು ಭ್ರಷ್ಟ ಆಚರಣೆಗಳು ಎಂದಿತ್ತು. 2017ರ ತಮ್ಮ ಆದೇಶದಲ್ಲಿ ನ್ಯಾಯಮೂರ್ತಿ ಠಾಕೂರ್ ಅವರು ಜನಪ್ರತಿನಿಧಿ ಕಾಯ್ದೆಯ ವಿಭಾಗ 123ರ ಪ್ರಕಾರ ‘‘ಧರ್ಮ, ಜನಾಂಗ, ಕುಲ, ಸಮುದಾಯ ಅಥವಾ ಭಾಷೆಯ ಹೆಸರಿನಲ್ಲಿ ಮತ ಕೇಳುವುದು ಭ್ರಷ್ಟ ಆಚರಣೆ ಆಗಲಿದೆ’’ ಎಂದು ಹೇಳಿದ್ದರು. ದ್ವೇಷ ಭಾಷಣ ಕುರಿತು ಕ್ರಮ ಕೈಗೊಳ್ಳಬೇಕಿದ್ದ ಚುನಾವಣಾ ಆಯೋಗ ಅತ್ಯಂತ ನಿಶ್ಶಕ್ತವಾಗಿದೆ.

2024ರ ಭಾರತ ನಾಚಿಕೆ, ಹೇಸಿಗೆ ಎಲ್ಲವನ್ನೂ ಬಿಟ್ಟು ಆಗಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಋತ

contributor

Similar News