ಹವಾಮಾನ ಬದಲಾವಣೆ ವಿರುದ್ಧ ರಕ್ಷಣೆಗೆ ಕಾನೂನಿಗೆ ಮುನ್ನುಡಿ

ನಮ್ಮದು ಕಡಿಮೆ-ಮಧ್ಯಮ ಆದಾಯದ, ಅಧಿಕ ಯುವಜನರು ಇರುವ ದೇಶ. ನ್ಯಾಯಾಲಯಗಳು ಮೂಲಭೂತ ಹಕ್ಕುಗಳ ರಕ್ಷಣೆಗೆ ನೀಡಿದ ಹಲವು ಆದೇಶಗಳಂತೆ ಹವಾಮಾನ ಹಕ್ಕುಗಳನ್ನು ಹಲವು ಸಕ್ರಿಯ ಕಾರ್ಯನೀತಿಗಳ ಮೂಲಕ ದಕ್ಕಿಸಿಕೊಳ್ಳಬಹುದು. ಹವಾಮಾನ ಕಾನೂನಿನ ಸಬಲಗೊಳಿಸುವ ಪಾತ್ರವು ಸರಕಾರವನ್ನೂ ಮೀರಿ, ಉದ್ಯಮ, ನಾಗರಿಕ ಸಮಾಜ ಮತ್ತು ಸಮುದಾಯಗಳಿಗೂ ವಿಸ್ತರಿಸಬೇಕಾಗುತ್ತದೆ. ಸುಪ್ರೀಂ ಕೋರ್ಟ್ ತೀರ್ಪನ್ನು ಮುಂದಕ್ಕೊಯ್ಯುವ ಮತ್ತು ಪೂರ್ತಿಗೊಳಿಸುವ, ಸಮಾಜದ ಎಲ್ಲ ಸಮುದಾಯಗಳನ್ನು ಒಳಗೊಳ್ಳುವ ಹಾಗೂ ಒಕ್ಕೂಟ ನೀತಿಯನ್ನು ಗೌರವಿಸುವ ಕಾನೂನಿನ ಅಗತ್ಯವಿದೆ.

Update: 2024-07-26 05:41 GMT
Editor : Thouheed | Byline : ಋತ

ಅಂಕೋಲಾ ಬಳಿ ಗುಡ್ಡ ಜರಿದು ನದಿಯಲ್ಲಿ ತೇಲಿಹೋದ ಮತ್ತು ಮಣ್ಣಿನಲ್ಲಿ ಮುಚ್ಚಿಹೋದ ೧೧ ಮಂದಿಗೆ ಕಣ್ಣೀರಾಗೋಣ. ೯೦ ಡಿಗ್ರಿ ಕೋನದಲ್ಲಿ ಗುಡ್ಡೆ ಕೆತ್ತಿ ರಸ್ತೆ ನಿರ್ಮಿಸಿದ ಗುತ್ತಿಗೆದಾರ-ಇಂಜಿನಿಯರ್‌ಗಳಿಗೆ ವಿಷಾದ ವ್ಯಕ್ತಪಡಿಸೋಣ. ಇಂಥ ಮಾನವ ಪ್ರೇರಿತ ಪರಿಸರ ದುರಂತಗಳ ನಡುವೆಯೇ ಹವಾಮಾನ ಬದಲಾವಣೆಯಿಂದ ಪಶ್ಚಿಮ ಘಟ್ಟಗಳು, ಹಿಮಾಲಯ, ವಿಂಧ್ಯ, ಅರಾವಳಿ ಮತ್ತಿತರ ಬೆಟ್ಟಸಾಲುಗಳ ಜೊತೆಗೆ ಮನುಷ್ಯರನ್ನೂ ಕಾಪಿಡಬಲ್ಲ ಸಣ್ಣದೊಂದು ಬೆಳಕಿನ ಕಿಂಡಿಯೊಂದು ಕಾಣಿಸಿಕೊಂಡಿದೆ.

೨೦೨೪-೨೫ರ ಬಜೆಟ್‌ಗೆ ಮುನ್ನ ಮಂಡನೆಯಾದ ಆರ್ಥಿಕ ಸಮೀಕ್ಷೆ ಕೂಡ ಹವಾಮಾನ ಬದಲಾವಣೆ ಮತ್ತು ಇಂಧನ ಸ್ಥಿತ್ಯಂತರದ ಸಮತೋಲನವನ್ನು ಕಾಯ್ದುಕೊಳ್ಳುವ ಅಗತ್ಯವನ್ನು ಹೇಳಿದೆ. ‘ದೇಶದ ತಲಾ ಇಂಗಾಲ ಸೂಸುವಿಕೆ ಪ್ರಮಾಣ ಜಾಗತಿಕ ಸರಾಸರಿಯ ೧/೩ರಷ್ಟು ಇದೆ. ೨೦೭೦ರ ಹೊತ್ತಿಗೆ ಇಂಗಾಲ ಹೊರಸೂಸುವಿಕೆ ಪ್ರಮಾಣವನ್ನು ಶೂನ್ಯಕ್ಕೆ ಇಳಿಸುವ ಗುರಿಯನ್ನು ದೇಶ ಹೊಂದಿದೆ. ಐರೋಪ್ಯ ಒಕ್ಕೂಟ ‘ಇಂಗಾಲ ತೆರಿಗೆ’ ವಿಧಿಸುತ್ತಿರುವುದು ಪ್ಯಾರಿಸ್ ಒಪ್ಪಂದದ ಉಲ್ಲಂಘನೆ. ಶ್ರೀಮಂತ ದೇಶಗಳು ಕಟ್ಟು ಜಾಣ್ಮೆ ಹಿಂದೆ ಬಿದ್ದಿರುವುದರಿಂದ ಇಂಧನ ಬೇಡಿಕೆ ತೀವ್ರವಾಗಿ ಹೆಚ್ಚಳಗೊಂಡಿದೆ. ಜಾಗತಿಕ ತಾಪಮಾನ ಹೆಚ್ಚಳ ೨ ಡಿಗ್ರಿ ಸೆಲ್ಷಿಯಸ್‌ಗಿಂತ ಕಡಿಮೆ ಇರಬೇಕು. ಜಿ೨೦ ದೇಶಗಳಲ್ಲಿ ಈ ಮಿತಿಯೊಳಗಿರುವ ಏಕೈಕ ದೇಶ ಭಾರತ. ದೇಶ ಪಳೆಯುಳಿಕೆ ಇಂಧನದಿಂದ ಶೇ.೪೫.೪ರಷ್ಟು ವಿದ್ಯುತ್ ಉತ್ಪಾದಿಸುತ್ತಿದ್ದು, ಉಳಿಕೆ ಪುನರ್ ಬಳಕೆ ಮೂಲಗಳಿಂದ ಬರುತ್ತಿದೆ. ಹವಾಮಾನ ಬದಲಾವಣೆ ತಡೆಗೆ ಚಾಲ್ತಿಯಲ್ಲಿರುವ ಕಾರ್ಯತಂತ್ರಗಳು ದೋಷಪೂರಿತವಾಗಿದ್ದು, ದೇಶ ಸುಸ್ಥಿರ ಪರಿಹಾರ ಕಂಡುಕೊಳ್ಳಬೇಕಿದೆ’ ಎಂದು ಸಮೀಕ್ಷೆ ಹೇಳಿದೆ. ಇದೆಲ್ಲಕ್ಕೂ ದಾರಿ ಮಾಡಿಕೊಡಬಲ್ಲ ದಿಕ್ಸೂಚಿ ಆದೇಶವೊಂದು ಸುಪ್ರೀಂ ಕೋರ್ಟಿನಿಂದ ಬಂದಿದೆ.

ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಅವರು ಜುಲೈ ೨ರಂದು ದಿಲ್ಲಿಯ ಕರ್ಕಡೋಮಾ, ಶಾಸ್ತ್ರಿ ಪಾರ್ಕ್ ಹಾಗೂ ರೋಹಿಣಿಯಲ್ಲಿ ನ್ಯಾಯಾಲಯ ಕಟ್ಟಡಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ, ‘‘ಹವಾಮಾನ ಬದಲಾವಣೆಯನ್ನು ನಿರಾಕರಿಸಲು ಸಾಧ್ಯವಿಲ್ಲ. ಇಂಗಾಲ ಹೊರಸೂಸುವಿಕೆಯ ಕಡಿತದ ಜೊತೆಗೆ ಪರಿಸರಸ್ನೇಹಿ ಜೀವನಶೈಲಿಯನ್ನು ಬೆಳೆಸಿಕೊಳ್ಳುವುದು ಮುಖ್ಯವಾಗಲಿದೆ’’ ಎಂದು ಹೇಳಿದರು.

‘‘೨೦೨೪ರಲ್ಲಿ ದಿಲ್ಲಿ ೨ ಉಷ್ಣ ಅಲೆಗಳನ್ನು ಒಳಗೊಂಡ ಅತ್ಯಂತ ಅಧಿಕ ತಾಪಮಾನವನ್ನು, ಆನಂತರ ಒಂದೇ ದಿನದಲ್ಲಿ ದಾಖಲೆ ಮುರಿದ ಮಳೆಯನ್ನು ದಾಖಲಿಸಿದೆ. ಈ ವಾಸ್ತವವನ್ನು ನಿರಾಕರಿಸುತ್ತ ಕೂರಲು ಸಾಧ್ಯವಿಲ್ಲ. ಈ ಕಟ್ಟಡಗಳು ಉಷ್ಣ ದ್ವೀಪ ಪರಿಣಾಮವನ್ನು ಸಹನೀಯಗೊಳಿಸುವ ಮತ್ತು ಪರಿಸರ ಕಾಲಚ್ಚನ್ನು ಕಡಿಮೆಗೊಳಿಸುವ ಕಡೆಗೆ ದೃಷ್ಟಿ ಇರಿಸಿವೆ’’ ಎಂದು ಅವರು ಹೇಳಿದರು.

ಹವಾಮಾನ ಹಕ್ಕಿನ ಉಲ್ಲೇಖ: ಸುಪ್ರೀಂ ಕೋರ್ಟ್ ಇತ್ತೀಚೆಗೆ ಎಂ.ಕೆ. ರಂಜಿತ್ ಸಿಂಗ್ ಮತ್ತಿತರರು v/s ಭಾರತ ಸರಕಾರ ಪ್ರಕರಣದಲ್ಲಿ ನೀಡಿದ ದೂರಗಾಮಿ ಆದೇಶವೊಂದರಲ್ಲಿ, ‘‘ಜನರು ಹವಾಮಾನ ಬದಲಾವಣೆಯ ವಿಪರಿಣಾಮದಿಂದ ಮುಕ್ತರಾಗುವ ಹಕ್ಕು ಹೊಂದಿದ್ದಾರೆ’’ ಎಂದು ಹೇಳಿದೆ. ನಿರ್ವಂಶದ ಭೀತಿ ಎದುರಿಸುತ್ತಿರುವ ಗ್ರೇಟ್ ಇಂಡಿಯನ್ ಬಸ್ಟರ್ಡ್ ಆವಾಸಸ್ಥಾನದ ಮೂಲಕ ವಿದ್ಯುತ್ ತಂತಿಗಳು ಹಾಯ್ದು ಹೋಗಬಹುದೇ ಎಂಬುದು ನ್ಯಾಯಾಲಯದ ಮುಂದಿನ ಪ್ರಶ್ನೆಯಾಗಿತ್ತು. ನ್ಯಾಯಾಲಯದ ಹಿಂದಿನ ಆಜ್ಞೆಯಿಂದ ದೇಶದ ಪುನರ್ ಬಳಕೆ ಇಂಧನ ಸಾಮರ್ಥ್ಯಕ್ಕೆ ಹಿನ್ನಡೆಯಾಗಿದೆ ಎಂದು ಸರಕಾರ ಅರ್ಜಿಯಲ್ಲಿ ದೂರಿತ್ತು. ಆದೇಶವನ್ನು ಬದಲಿಸಿದ ನ್ಯಾಯಾಲಯ, ಹವಾಮಾನ ಬದಲಾವಣೆಯನ್ನು ಪರಿಹರಿಸಲು ಪುನರ್ ಬಳಕೆ ಇಂಧನ ವಿತರಣೆ ಮೂಲಸೌಲಭ್ಯದ ವೇಗವರ್ಧನೆಗೆ ಆದ್ಯತೆ ನೀಡಬೇಕೆಂದು ಹೇಳಿತು. ಆದರೆ, ಆದೇಶದಲ್ಲಿದ್ದ ಮುಖ್ಯ ಅಂಶವೆಂದರೆ, ವಿಧಿ ೨೧ ನೀಡುವ ಬದುಕುವ ಹಕ್ಕು ಮತ್ತು ವಿಧಿ ೧೪ ನೀಡುವ ಸಮಾನತೆಯ ಹಕ್ಕು ಆಧರಿಸಿದ ‘ಹವಾಮಾನ ಹಕ್ಕು’ ಎಂಬ ಹೊಸ ಪದ.

ಗ್ರೇಟ್ ಇಂಡಿಯನ್ ಬಸ್ಟರ್ಡ್ ಪ್ರಕರಣದಲ್ಲಿ ನ್ಯಾಯಾಲಯವು ಹವಾಮಾನ ಬದಲಾವಣೆಯ ವಿಪರಿಣಾಮಗಳ ವಿರುದ್ಧ ಜನರ ಹಕ್ಕನ್ನು ಗುರುತಿಸಿದೆ. ಆದರೆ, ತೀರ್ಪನ್ನು ತಪ್ಪಾಗಿ ಗ್ರಹಿಸಲಾಗಿದ್ದು, ನ್ಯಾಯಾಲಯವು ಎಲ್ಲ ಪುನರ್ಬಳಕೆ ಇಂಧನ ಯೋಜನೆಗಳಿಗೆ ಅನುಮತಿ ನೀಡಿದೆ ಎಂದುಕೊಳ್ಳಲಾಗಿದೆ. ಆದರೆ, ‘‘ನ್ಯಾಯಾಲಯ ಬಸ್ಟರ್ಡ್‌ಗಳ ರಕ್ಷಣೆಗೆ ಬದ್ಧವಾಗಿದೆ ಮತ್ತು ಅವುಗಳ ರಕ್ಷಣೆಗೆ ಸಕ್ರಿಯ ಕ್ರಮಗಳನ್ನು ಕೈಗೊಳ್ಳಬೇಕು. ಭೂಮಿಯೊಳಗೆ ವಿದ್ಯುತ್ ತಂತಿ ಅಳವಡಿಕೆ ಸೂಕ್ತವಲ್ಲ’’ ಎಂದು ನ್ಯಾಯಾಲಯ ಹೇಳಿದೆ. ಭಾರತೀಯ ವನ್ಯಜೀವಿ ಸಂಸ್ಥೆ(ಡಬ್ಲ್ಯುಐಐ) ವರದಿ ಪ್ರಕಾರ, ಬಸ್ಟರ್ಡ್‌ಗಳಿಗೆ ೧೩,೬೬೩ ಚದರ ಕಿ.ಮೀ. ಆದ್ಯತೆಯ ಪ್ರದೇಶ. ಉಳಿದಿದ್ದು ‘ಅಂತಸ್ಥ ಪ್ರದೇಶ’, ‘ಹೆಚ್ಚುವರಿ ಮುಖ್ಯ ಪ್ರದೇಶ’. ಹಲವು ಅಂತರ್‌ರಾಷ್ಟ್ರೀಯ/ರಾಷ್ಟ್ರೀಯ ಒಪ್ಪಂದಗಳನ್ನು ಉಲ್ಲೇಖಿಸಿದ ನ್ಯಾಯಾಲಯ, ವಿಧಿ ೧೪ ಮತ್ತು ೨೧ ಕೊಡಮಾಡಿದ ಮೂಲಭೂತ ಹಕ್ಕುಗಳ ನಡುವಿನ ಪರಸ್ಪರತೆ, ವಿಶೇಷವಾಗಿ, ಅಭಿವೃದ್ಧಿಯ ಹಕ್ಕು ಹಾಗೂ ಶುದ್ಧ ಪರಿಸರದ ಹಕ್ಕು ಒಳಗೊಂಡಂತೆ ಮಾನವ ಹಕ್ಕುಗಳನ್ನು ವಿವರಿಸಿದೆ. ‘‘ಸುಸ್ಥಿರವಾದ ಮತ್ತು ಹವಾಮಾನ ಬದಲಾವಣೆಯ ವಿಪರಿಣಾಮಗಳಿಲ್ಲದ ಶುದ್ಧ ವಾತಾವರಣವಿಲ್ಲದಿದ್ದರೆ, ಬದುಕುವ ಹಕ್ಕನ್ನು ಸಂಪೂರ್ಣವಾಗಿ ಅನುಭವಿಸಲು ಆಗುವುದಿಲ್ಲ. ಹವಾಮಾನ ಬದಲಾವಣೆಗೆ ಹೊಂದಿಕೊಳ್ಳಲಾಗದ ಅಥವಾ ಅದರ ವಿಪರಿಣಾಮಗಳನ್ನು ನಿರ್ವಹಿಸಲಾಗದ ಸಮುದಾಯಗಳು ಬದುಕುವ ಹಕ್ಕನ್ನು ಕಳೆದುಕೊಳ್ಳುತ್ತವೆ. ವಿಧಿ ೧೪ರಡಿಯ ಸಮಾನತೆ ಮತ್ತು ವಿಧಿ ೨೧ರಡಿಯ ಬದುಕುವ ಹಕ್ಕುಗಳನ್ನು ರಾಷ್ಟ್ರೀಯ-ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕ್ರಿಯೆಗಳು/ಬದ್ಧತೆಗಳು ಮತ್ತು ವೈಜ್ಞಾನಿಕ ಸಹಮತದಡಿ ಗೌರವಿಸಬೇಕಾಗುತ್ತದೆ’’ ಎಂದು ನ್ಯಾಯಾಲಯ ಹೇಳಿತು.

ಈ ತೀರ್ಪು ಹಲವು ಪ್ರಶ್ನೆಗಳನ್ನು ಉಳಿಸಿದೆ. ಹವಾಮಾನ ಬದಲಾವಣೆಯನ್ನು ತಪ್ಪಿಸಲು ಭಾರೀ ಪ್ರಮಾಣದಲ್ಲಿ ಶುದ್ಧ ವಿದ್ಯುತ್ ಉತ್ಪಾದನೆ ಮಾತ್ರ ಮಾರ್ಗವೇ? ಹವಾಮಾನ ಅನುಸರಣೆ ಹಾಗೂ ಸ್ಥಳೀಯ ಪರಿಸರದ ಪುನಶ್ಚೇತನವನ್ನು ಕಡೆಗಣಿಸಿಲ್ಲವೇ? ಹವಾಮಾನ ಬದಲಾವಣೆಯ ಪ್ರತಿಕೂಲ ಪರಿಣಾಮಗಳಿಂದ ಈ ಹಕ್ಕು ಹೇಗೆ ರಕ್ಷಣೆ ನೀಡಲಿದೆ? ಕಾಣಿಸುವ ಒಂದು ಮಾರ್ಗವೆಂದರೆ, ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಎಲ್ಲ ಆದೇಶಗಳ ಕ್ರೋಡೀಕರಣ; ಎರಡನೆಯದು, ಈ ಹಕ್ಕಿನ ರಕ್ಷಣೆಗೆ ಹೊಸ ಶಾಸನವೊಂದರ ರಚನೆ.

ಸುಪ್ರೀಂ ಕೋರ್ಟ್ ಹೇಳಿದಂತೆ, ದೇಶದಲ್ಲಿ ಹವಾಮಾನ ಕಾಯ್ದೆ ಎಂಬುದು ಇಲ್ಲ. ಬೇರೆ ದೇಶಗಳ ಅನುಭವವನ್ನು ಆಧರಿಸಿ ಹೇಳುವುದಾದರೆ, ಇಂಥ ಕಾಯ್ದೆ ಹಲವು ರೀತಿಯಲ್ಲಿ ಉಪಯುಕ್ತವಾ ಗಲಿದೆ. ದೇಶದ ಎಲ್ಲ ರಾಜ್ಯ, ವಿಭಾಗ-ಪ್ರಾಂತಗಳನ್ನು ಒಳಗೊಳ್ಳಲಿದ್ದು, ಅಗತ್ಯ ಸಂಸ್ಥೆಗಳನ್ನು ಸೃಷ್ಟಿಸಿ, ಅವುಗಳಿಗೆ ಅಧಿಕಾರ ನೀಡುತ್ತದೆ; ಅಗತ್ಯ ರಚನಾತ್ಮಕ ಪ್ರಕ್ರಿಯೆಗಳನ್ನು ರೂಪಿಸುತ್ತದೆ ಹಾಗೂ ಹವಾಮಾನ ಬದಲಾವಣೆಗೆ ಪ್ರತಿಕ್ರಿಯೆಯನ್ನು ಉತ್ತೇಜಿಸುತ್ತದೆ.

ಹವಾಮಾನ ಕಾಯ್ದೆ ರಚನೆಗೆ ಭಾರತ ಬೇರೆ ದೇಶಗಳನ್ನು ಕುರುಡಾಗಿ ಅನುಸರಿಸಬಾರದು ಮತ್ತು ದೇಶ ನಿರ್ದಿಷ್ಟ ಕಾನೂನು ರೂಪಿಸಬೇಕಾಗುತ್ತದೆ. ಸಂಶಯವೇ ಇಲ್ಲದಂತೆ ದೇಶ ಕಡಿಮೆ ಇಂಗಾಲ ಬಳಕೆ ಯುಗಕ್ಕೆ ಸ್ಥಿತ್ಯಂತರಗೊಳ್ಳಬೇಕಿದೆ. ಆದರೆ, ಇದನ್ನು ಕಾಯ್ದೆಯಿಂದಷ್ಟೇ ಮಾಡಲಾಗುವುದಿಲ್ಲ. ಹವಾಮಾನ ಕಾಯ್ದೆಯು ಸ್ಥಳೀಯ ಸುಸ್ಥಿರ ನಗರಗಳು, ಕಟ್ಟಡಗಳು ಮತ್ತು ಸಾರಿಗೆ ಕಾರ್ಯಜಾಲವನ್ನು ಬೆಂಬಲಿಸುವ ನಿಯಂತ್ರಣ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸಬೇಕಾಗುತ್ತದೆ. ಸ್ಥಳೀಯ ಸನ್ನಿವೇಶಕ್ಕೆ ಸೂಕ್ತವಾದ ಕ್ರಿಯಾಯೋಜನೆಗಳನ್ನು, ಕೃಷಿ ಬೆಳೆಗಳ ಸ್ಥಿತ್ಯಂತರವನ್ನು ಒಳಗೊಂಡಿರಬೇಕು. ತೀವ್ರ ಹವಾಮಾನ ಘಟನೆಗಳಲ್ಲಿ ರಕ್ಷಣಾ ಕವಚದಂತೆ ಕಾರ್ಯನಿರ್ವಹಿಸುವ ಕಾಂಡ್ಲಾ ಕಾಡುಗಳಂಥ ಪ್ರಮುಖ ಪರಿಸರ ವ್ಯವಸ್ಥೆಯನ್ನು ಅದು ರಕ್ಷಿಸಬೇಕಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ, ಸಾಮಾಜಿಕ ನ್ಯಾಯದ ಪ್ರಶ್ನೆಯನ್ನು ಪರಿಗಣಿಸಬೇಕಾಗುತ್ತದೆ; ಒಳಗೊಳ್ಳಬೇಕಾಗುತ್ತದೆ.

ಭಾರತ ಎನ್ನುವುದು ಹಲವು ರಾಜ್ಯಗಳ ಒಕ್ಕೂಟ. ಹೀಗಾಗಿ, ಕಾಯ್ದೆಯು ಒಕ್ಕೂಟದೊಳಗೆ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುವಂತೆ ಇರಬೇಕು. ನಗರ ನಿರ್ಮಾಣ, ನೀರಾವರಿ, ಕೃಷಿ ಮತ್ತು ವಿದ್ಯುತ್ ಇವೆಲ್ಲವೂ ಅನುಷಂಗಿಕ ಪಟ್ಟಿಯಲ್ಲಿದ್ದು, ರಾಜ್ಯ-ಸ್ಥಳೀಯ ಆಡಳಿತದಡಿ ಬರುತ್ತವೆ. ಪ್ರಸಕ್ತ ಶಾಸನಾತ್ಮಕ ಚೌಕಟ್ಟಿನಲ್ಲಿ ಇದನ್ನೆಲ್ಲ ಒಳಗೊಳ್ಳುವ ಏಕೈಕ ಕಾನೂನು ರಚನೆ ಸಾಧ್ಯವೇ? ಹವಾಮಾನ ಬದಲಾವಣೆಗೆ ಸಮಾಜವನ್ನು ಸಿದ್ಧಗೊಳಿಸುವುದು ಹೇಗೆ ಮತ್ತು ಸಮುದಾಯ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಗ್ರಹಿಸಲು ಸಾಧ್ಯವಿಲ್ಲ. ಇಂಥ ಸನ್ನಿವೇಶದಲ್ಲಿ ಏನು ಮಾಡಬಾರದು ಮತ್ತು ಯಾವ ದಿಕ್ಕಿನಲ್ಲಿ ಹೋಗಬೇಕು? ಹಲವು ದೇಶಗಳ ಹವಾಮಾನ ಕಾಯ್ದೆಗಳು ಇಂಗ್ಲೆಂಡಿನ ಕಾಯ್ದೆಯನ್ನು ಅನುಸರಿಸಿದ್ದು, ಇಂಗಾಲ ಹೊರಸೂಸುವಿಕೆಯ ನಿಯಂತ್ರಣವನ್ನು ಕೇಂದ್ರೀಕರಿಸಿವೆ; ಪಂಚವಾರ್ಷಿಕ ರಾಷ್ಟ್ರೀಯ ಇಂಗಾಲ ಆಯವ್ಯಯವನ್ನು ರೂಪಿಸಿ, ಅದನ್ನು ತಲುಪಲು ಅಗತ್ಯವಾದ ಕಾರ್ಯಕ್ರಮವನ್ನು ರಚಿಸಲಾಗುತ್ತದೆ. ಈ ಕಾರ್ಯವಿಧಾನ ಭಾರತಕ್ಕೆ ಸೂಕ್ತವಲ್ಲ. ದೇಶ ಇನ್ನೂ ಅಭಿವೃದ್ಧಿ ಹೊಂದುತ್ತಿದೆಯಲ್ಲದೆ, ಹವಾಮಾನ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಕೂಡ ಹೆಚ್ಚು ಇದೆ. ಹೀಗಾಗಿ, ಇಂಗಾಲ ಕಡಿತಕ್ಕೆ ನೆರವಾಗುವ ಹಾಗೂ ವಾತಾವರಣವನ್ನು ಪುನಶ್ಚೇತನಗೊಳಿಸುತ್ತಲೇ ಅಭಿವೃದ್ಧಿಯನ್ನು ಆಗುಮಾಡಲು ನೆರವಾಗುವ ಕಾನೂನು ಬೇಕಿದೆ. ಇಂಗ್ಲೆಂಡ್‌ನಲ್ಲಿರುವ ನಿಯಂತ್ರಿಸುವ ಕಾಯ್ದೆ ಮತ್ತು ಕೆನ್ಯಾದಲ್ಲಿರುವ ಸಬಲಗೊಳಿಸುವ ಕಾಯ್ದೆ ನಡುವಿನ ಮಧ್ಯಮ ಮಾರ್ಗ ಅಗತ್ಯವಿದೆ. ನಿಯಂತ್ರಿಸುವ ಕಾಯ್ದೆಯು ಇಂಗಾಲ ಕಡಿತದ ಕಿರಿದಾದ ಗುರಿ ಹೊಂದಿರುತ್ತದೆ. ಆದರೆ, ಸಬಲಗೊಳಿಸುವ ಕಾಯ್ದೆಯು ನಗರ ನಿರ್ಮಾಣ, ಕೃಷಿ, ನೀರು, ಇಂಧನ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಅಭಿವೃದ್ಧಿಯನ್ನು ಉತ್ತೇಜಿಸುತ್ತಲೇ ದೇಶವನ್ನು ಕಡಿಮೆ ಇಂಗಾಲ ಅಭಿವೃದ್ಧಿ ಮತ್ತು ಹವಾಮಾನ ಪುನಶ್ಚೇತನದೆಡೆಗೆ ಮುನ್ನಡೆಸುತ್ತದೆ. ಇದು ಅಳವಡಿಕೆ ಮತ್ತು ಉಪಶಮನ ಎರಡನ್ನೂ ಒಳಗೊಂಡ ಮಾರ್ಗ. ಅಗತ್ಯ ಸಂಸ್ಥೆಗಳು, ಪ್ರಕ್ರಿಯೆಗಳು ಮತ್ತು ಮಾನದಂಡಗಳನ್ನು ರೂಪಿಸುವ ಮೂಲಕ ಹಲವು ಸಚಿವಾಲಯಗಳು ಮತ್ತು ಸಮಾಜದ ವಿವಿಧ ಸಮುದಾಯಗಳಲ್ಲಿ ಬದಲಾವಣೆಯನ್ನು ಹೇಗೆ ತರುವುದು ಎಂಬುದರ ನೀಲನಕ್ಷೆ ನೀಡುತ್ತದೆ. ಜ್ಞಾನದ ಹಂಚಿಕೆಯನ್ನು ಬೆಂಬಲಿಸುವ ಕಾರ್ಯವಿಧಾನಗಳು, ಪಾರದರ್ಶಕತೆಯನ್ನು ಖಾತ್ರಿಗೊಳಿಸುವುದು, ಸಾರ್ವಜನಿಕರು-ಪರಿಣತರ ಭಾಗವಹಿಸುವಿಕೆಗೆ ಅವಕಾಶ ಕಲ್ಪಿಸುತ್ತದೆ.

ಹಿಮಾಲಯ-ಪಶ್ಚಿಮ ಘಟ್ಟಗಳ ರಕ್ಷಣೆಗೆ ನೆರವಾಗುವುದೇ?

ಹಿಮಾಲಯ ದೇಶದ ಜಲ ಮೂಲ ಮತ್ತು ಅಮೂಲ್ಯ ಪರಿಸರ ವ್ಯವಸ್ಥೆಯ ಉತ್ಪನ್ನ-ಸೇವೆಗಳನ್ನು ನೀಡುತ್ತದೆ. ಹೀಗಿದ್ದರೂ, ಹಿಮಾಲಯದ ಅಭಿವೃದ್ಧಿ ಅಗತ್ಯಗಳೇನು ಹಾಗೂ ಯಾವ ಅಭಿವೃದ್ಧಿ ಮಾದರಿ ಸೂಕ್ತ ಎಂಬ ಕನಿಷ್ಠ ಜ್ಞಾನ ಇಲ್ಲ. ಈ ಪ್ರದೇಶದ ಆರ್ಥಿಕತೆ ಸ್ವಾಭಾವಿಕ ಸಂಪನ್ಮೂಲಗಳನ್ನು ಆಧರಿಸಿದೆ. ಅಭಿವೃದ್ಧಿಯ ಹೆಸರಿನಲ್ಲಿ ಸ್ವಾಭಾವಿಕ ಸಂಪನ್ಮೂಲಗಳನ್ನು ನಾಶಪಡಿಸುತ್ತಿರುವುದರಿಂದ, ಸ್ವಾಭಾವಿಕ ಅವಘಡಗಳು ಹೆಚ್ಚಿವೆಯಲ್ಲದೆ, ಜನಜೀವನ ದುರ್ಬರವಾಗುತ್ತಿದೆ. ಒಂದುವೇಳೆ ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಸುಸ್ಥಿರ ಅಭಿವೃದ್ಧಿ ನಮ್ಮ ಮೂಲಭೂತ ಹಕ್ಕು ಆಗಲಿದೆ. ಆದೇಶ ಸಾರ್ವಜನಿಕರು ಮತ್ತು ಪ್ರಕೃತಿಯ ಹಕ್ಕುಗಳನ್ನು ಎತ್ತಿಹಿಡಿಯುವುದರಿಂದ, ಪರಿಸರ v/s ಅಭಿವೃದ್ಧಿ ಸಂವಾದ ಯಾವ ದಿಕ್ಕಿನಲ್ಲಿ ಸಾಗಬೇಕು ಎಂದು ಮಾರ್ಗದರ್ಶನ ಮಾಡಲಿದೆ. ತೆಲಂಗಾಣ ರಾಜ್ಯ v/s ಮುಹಮ್ಮದ್ ಅಬ್ದುಲ್ ಕಾಸಿಂ ಪ್ರಕರಣದ ತೀರ್ಪಿನಲ್ಲಿ ನ್ಯಾಯಾಲಯವು, ‘‘ಪರಿಸರವನ್ನು ಪ್ರಕೃತಿ ಕೇಂದ್ರವಾಗುಳ್ಳ ದೃಷ್ಟಿಕೋನದಲ್ಲಿ ನೋಡುವುದು ಇಂದಿನ ಅಗತ್ಯ. ಮನುಷ್ಯ ತಿಳಿವಳಿಕೆಯುಳ್ಳ ಪ್ರಭೇದವಾಗಿದ್ದು, ಆತ ಭೂಮಿಯ ಟ್ರಸ್ಟಿಯಂತೆ ಕಾರ್ಯ ನಿರ್ವಹಿಸಬೇಕು ಎಂದು ನಿರೀಕ್ಷಿಸಲಾಗುತ್ತದೆ. ಮನುಷ್ಯರು ಭೂಮಿ ಮೇಲಿನ ನದಿಗಳು, ಕೊಳ್ಳಗಳು, ಸಮುದ್ರ, ಸರೋವರ, ಮರಗಳು, ಬೆಟ್ಟಗುಡ್ಡ, ಗಾಳಿ ಮತ್ತಿತರವುಗಳ ಹಕ್ಕುಗಳನ್ನು ಮನ್ನಿಸಿ, ಸುಸ್ಥಿರವಾಗಿ ಬದುಕಬೇಕಾದ ಸಮಯ ಬಂದಿದೆ. ಮನುಷ್ಯರು ಪರಿಸರದ ನಿಯಮಗಳ ಎಲ್ಲೆಕಟ್ಟಿನಲ್ಲಿ ಇರಬೇಕಾಗುತ್ತದೆ. ಈ ದೃಷ್ಟಿಯಲ್ಲಿ ನೋಡಿದರೆ, ಪ್ರಕೃತಿ ಎನ್ನುವುದು ಸಂರಕ್ಷಿಸಬೇಕಾದ ವಸ್ತುವಾಗುವುದಿಲ್ಲ. ಬದಲಾಗಿ, ತಮ್ಮದೇ ಹಕ್ಕು ಹೊಂದಿರುತ್ತವೆ. ಅಸ್ತಿತ್ವದ ಹಕ್ಕು, ಬದುಕುಳಿಯುವ ಹಕ್ಕು ಮತ್ತು ಚೈತನ್ಯಶೀಲ ಆವೃತ್ತಗಳ ಪುನಶ್ಚೇತನದ ಹಕ್ಕು ಹೊಂದಿರುತ್ತವೆ’’ ಎಂದಿದೆ. ಆದರೆ, ಹಿಮಾಲಯದಲ್ಲಿ ಚಾಲ್ತಿಯಲ್ಲಿರುವ ಅಭಿವೃದ್ಧಿ ಮಾದರಿಯು ಇದಕ್ಕೆ ತದ್ವಿರುದ್ಧವಾಗಿದೆ. ಹಿಮಾಲಯದ ನದಿ-ತೊರೆಗಳಲ್ಲಿ ಜಲವಿದ್ಯುತ್ ಯೋಜನೆಗಳ ಸುರಿಮಳೆ ಆಗುತ್ತಿದೆ. ರಸ್ತೆಗಳು ನಾಲ್ಕು ಪಥಗಳ ಹೆದ್ದಾರಿಯಾಗಿ ಬದಲಾಗುತ್ತಿವೆ. ಈ ರಸ್ತೆಗಳು ಮಳೆಗಾಲದಲ್ಲಿ ಕೊಚ್ಚಿ ಹೋಗುತ್ತವೆ ಎನ್ನುವುದು ಬೇರೆಯದೇ ಮಾತು.

೨೦೨೩ರ ರಾಷ್ಟ್ರೀಯ ಅವಘಡ ನಿರ್ವಹಣೆ ಪ್ರಾಧಿಕಾರದ ಮೌಲ್ಯಮಾಪನ ವರದಿ ಪ್ರಕಾರ, ಹಿಮಾಲಯದಲ್ಲಿ ನಿಯಮ ಗಳನ್ನು ಉಲ್ಲಂಘಿಸಿ ಎಲ್ಲೆಂದರಲ್ಲಿ ಕಟ್ಟಡ ನಿರ್ಮಾಣ ಮತ್ತು ಹಸಿರು ಕವಚಗಳ ನಾಶ ಅವಘಡಕ್ಕೆ ಕಾರಣ. ಸಿಕ್ಕಿಂನಲ್ಲಿ ತೀಸ್ತಾ ಅಣೆಕಟ್ಟು ಸೀಳು ಬಿಟ್ಟಿದ್ದು ಮತ್ತು ಹಿಮಾಚಲ ಪ್ರದೇಶದಲ್ಲಿ ಪ್ರವಾಹ/ಭೂ ಕುಸಿತ ಅನಿಯಂತ್ರಿತ-ಅವೈಜ್ಞಾನಿಕ ಅಭಿವೃದ್ಧಿಯ ಫಲ. ಅಶೋಕ್ ರಾಘವ್ v/s ಭಾರತ ಸರಕಾರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್, ಹಿಮಾಲಯದ ರಾಜ್ಯಗಳು-ನಗರಗಳ ಧಾರಣ ಸಾಮರ್ಥ್ಯ ಕುರಿತು ನಿರ್ದೇಶನ ನೀಡಲು ಕೇಂದ್ರ ಸರಕಾರ ಮತ್ತು ಅರ್ಜಿದಾರರು ನೆರವಾಗಬೇಕೆಂದು ಕೋರಿತ್ತು.

ಮೂಲಸೌಲಭ್ಯ ಸುಸ್ಥಿರ ಹಾಗೂ ನಂಬಿಕೆಗೆ ಅರ್ಹವಾಗಿಲ್ಲದಿದ್ದರೆ, ಅದು ಜನರ ಅಭಿವೃದ್ಧಿಯ ಬುನಾದಿ ಆಗಲಾರದು. ಮೂಲಸೌಲಭ್ಯದ ಸುಸ್ಥಿರತೆ ಎಂದರೆ ಅದು ಹವಾಮಾನ ಬದಲಾವಣೆಯ ವಿಪರಿಣಾಮಗಳಿಂದ ಪುಟಿದೇಳುವ ಸಾಮರ್ಥ್ಯ ಹೊಂದಿರಬೇಕು. ದೇಶದೆಲ್ಲೆಡೆಯ ಅವಕಾಶಗಳಿಗೆ ಜನರಿಗೆ ಸಮಾನಾವಕಾಶ ಇರಬೇಕು. ಸ್ವಾಭಾವಿಕ ಅವಘಡಗಳಿಂದ ಹೆಚ್ಚು ಸಂಕಷ್ಟಕ್ಕೀಡಾಗುವವರು ಬಡಜನರು ಮತ್ತು ಇಂಥ ಅವಘಡಗಳಿಂದ ಸಾಮಾಜಿಕ ಅಸಮಾನತೆ ಹೆಚ್ಚುತ್ತದೆ.

ಹಲವು ದೇಶಗಳ ಕಾಯ್ದೆ

೬೭ ದೇಶಗಳು ‘ಹವಾಮಾನ ಕಾಯ್ದೆ’ಯ ಚೌಕಟ್ಟು ರೂಪಿಸಿ, ಅನುಷ್ಠಾನಕ್ಕೆ ಪ್ರಯತ್ನಿಸಿವೆ. ಆದರೆ, ಈ ಕಾನೂನುಗಳು ಬೇರೆಬೇರೆ ರೀತಿ ಇವೆ. ಭಾರತೀಯರ ತಲಾ ಇಂಗಾಲ ಹೊರಸೂಸುವಿಕೆ ಪ್ರಮಾಣ ಜಾಗತಿಕ ಮಟ್ಟಕ್ಕಿಂತ ಅರ್ಧಕ್ಕಿಂತ ಕಡಿಮೆ ಇದ್ದು, ಪ್ರತೀ ಟನ್ ಇಂಗಾಲಕ್ಕೆ ಗರಿಷ್ಠ ಅಭಿವೃದ್ಧಿ ನಮ್ಮ ಗುರಿ ಆಗಬೇಕಿದೆ. ಭಾರತ ಹವಾಮಾನ ವೈಪರೀತ್ಯಕ್ಕೆ ತುತ್ತಾಗಬಲ್ಲ ದೇಶಗಳಲ್ಲಿ ಒಂದಾಗಿರುವುದರಿಂದ, ಹವಾಮಾನ ಪುನಶ್ಚೇತನ ಹೊಸ ಕಾನೂನಿನ ಅವಿಭಾಜ್ಯ ಅಂಗ ಆಗಿರಬೇಕು. ಕಾನೂನು ಸಾಮಾಜಿಕ ಸಮಾನತೆಯನ್ನು ಕೇಂದ್ರವಾಗಿಟ್ಟು ಕೊಂಡಿರಬೇಕು. ದೇಶದ ನಗರಗಳು ಅಭಿವೃದ್ಧಿ ಹೊಂದುತ್ತಿದ್ದು, ಕಡಿಮೆ ಇಂಗಾಲ ಬಳಸುವ-ಹವಾಮಾನ ಪುನಶ್ಚೇತನ ನಗರಗಳು ಹೇಗಿರಲಿವೆ? ನಗರ ಯೋಜನೆಗಳು ಪ್ರವಾಹ ಹಾಗೂ ಉಷ್ಣ ಅಲೆಗಳ ಅಪಾಯವನ್ನು ಹೇಗೆ ನಿರ್ವಹಿಸುತ್ತವೆ? ಸಂಚಾರ ವ್ಯವಸ್ಥೆಯನ್ನು ವಿದ್ಯುತ್ ವಾಹನಗಳಿಂದ ಸ್ಥಿತ್ಯಂತರಗೊಳಿಸುವುದು ಹೇಗೆ? ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಆದ್ಯತೆ ಮತ್ತು ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುವುದು ಹೇಗೆ?

ತಂತ್ರಜ್ಞಾನ ಸ್ಥಿತ್ಯಂತರದಿಂದ ಕಳೆದುಕೊಳ್ಳುವ ಸಮುದಾಯಗಳನ್ನು ಸಂಪರ್ಕಿಸಿ, ಸಲಹೆ ಪಡೆಯಬೇಕು. ಇದಕ್ಕೊಂದು ಉದಾಹರಣೆ- ದಕ್ಷಿಣ ಆಫ್ರಿಕಾದ ಪ್ರೆಸಿಡೆನ್ಷಿಯಲ್ ಕ್ಲೈಮೇಟ್ ಕಮಿಷನ್. ಈ ಆಯೋಗವು ಭಾಗಿದಾರರ ಒಳಸುರಿ ಮತ್ತು ಅಭಿಪ್ರಾಯಗಳನ್ನು ಆಧರಿಸಿ, ಸ್ಥಿತ್ಯಂತರ ಮಾರ್ಗಗಳನ್ನು ರೂಪಿಸುತ್ತಿದೆ. ಹವಾಮಾನ ಕಾನೂನು ಮುಖ್ಯಮಂತ್ರಿಗಳು-ಸಂಬಂಧಿಸಿದ ಕೇಂದ್ರ ಸಚಿವರನ್ನು ಒಳಗೊಂಡ ಸ್ವತಂತ್ರ ಸ್ಥಾನಮಾನವಿರುವ ಕಡಿಮೆ ಇಂಗಾಲ ಅಭಿವೃದ್ಧಿ ಆಯೋಗದ ರಚನೆಗೆ ದಾರಿ ಮಾಡಿಕೊಡಬೇಕು. ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಪ್ರಮುಖ ಪಾತ್ರ ಮುಂದುವರಿದು, ಅದರೊಟ್ಟಿಗೆ ಉನ್ನತ ಮಟ್ಟದ ಸಹಯೋಗದ ಅಗತ್ಯವಿದೆ. ಈಗಾಗಲೇ ಇರುವ ಹವಾಮಾನ ಬದಲಾವಣೆ ಕಾರ್ಯಕಾರಿ ಸಮಿತಿಯನ್ನು ಪುನಶ್ಚೇತನಗೊಳಿಸಬೇಕಿದೆ.

ಕಡಿಮೆ ಇಂಗಾಲ ಅಭಿವೃದ್ಧಿ ಆಯೋಗದ ಮೂಲಕ,

* ರಾಜ್ಯ-ಸ್ಥಳೀಯ ಸಂಸ್ಥೆಗಳಿಗೆ ರಾಷ್ಟ್ರೀಯ ವೈಜ್ಞಾನಿಕ ಸಾಮರ್ಥ್ಯ ಲಭ್ಯವಾಗಬೇಕು. ಇದರಿಂದ ಕೆಳ ಹಂತದಲ್ಲಿ ವೈಜ್ಞಾನಿಕ ಮಾಹಿತಿಯ ಕೊರತೆ ನೀಗುತ್ತದೆ.

* ಸ್ಥಳೀಯ ಕ್ರಿಯೆಗಳಿಗೆ ಹಣಕಾಸು ನೆರವು-ಕೇಂದ್ರ ಪ್ರಾಯೋಜಿತ ಯೋಜನೆಗಳನ್ನು ಹವಾಮಾನ ಗುರಿಗಳಿಗೆ ಹೊಂದಾಣಿಕೆ ಆಗುವಂತೆ ರೂಪಿಸುವುದು ಇಲ್ಲವೇ ರಾಷ್ಟ್ರೀಯ ಇಲಾಖೆಗಳು ತಮ್ಮ ಯೋಜನೆಗಳನ್ನು ಸ್ಥಳೀಯ ಪುನಶ್ಚೇತನದೊಂದಿಗೆ ತಳಕು ಹಾಕುವುದು.

* ಕೇಂದ್ರ ಮತ್ತು ರಾಜ್ಯಗಳ ಪ್ರಮುಖ ಹವಾಮಾನ ನಿರ್ಧಾರಗಳಲ್ಲಿ ಸಹಯೋಗ. ಕೇಂದ್ರ-ರಾಜ್ಯ ಸರಕಾರಗಳು ನಿಗದಿತ ಅವಧಿಗೊಮ್ಮೆ ಏಕೀಕೃತ ಗುರಿಯುಳ್ಳ ಮಧ್ಯಂತರ ಯೋಜನೆಗಳನ್ನು ಮೇಲ್ಮಟ್ಟಕ್ಕೇರಿಸುವುದು.

* ರಾಜ್ಯ ನಿರ್ದಿಷ್ಟ ಪರಿಹಾರಗಳನ್ನು ಅಭಿವೃದ್ಧಿಪಡಿಸಲು, ಸ್ಥಳೀಯ ಮಟ್ಟದ ಸಂಸ್ಥೆಗಳನ್ನು ರೂಪಿಸಬೇಕಾಗುತ್ತದೆ. ಈ ಸಂಸ್ಥೆಗಳು ಕೇಂದ್ರದ ಇಂಥದ್ದೇ ಸಂಸ್ಥೆಗಳಿಗೆ ಪೂರಕವಾಗಿರಬೇಕು.

ರಂಜಿತ್ ಸಿಂಗ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ಚಾರಿತ್ರಿಕ ಆದೇಶವು ಹವಾಮಾನ ವೈಪರೀತ್ಯದ ವಿರುದ್ಧದ ಕ್ರಿಯಾಶೀಲ ಹಕ್ಕಾಗಿ ರೂಪುಗೊಳ್ಳಬೇಕೆಂದರೆ, ಕಾನೂನು-ಆಡಳಿತದಲ್ಲಿ ಸ್ಥಿತ್ಯಂತರ ಆಗಬೇಕಿದೆ. ಇದನ್ನು ಆಗುಮಾಡಲು ದೇಶದ ಪರಿಸ್ಥಿತಿಗೆ ಅನುಗುಣವಾದ ಹವಾಮಾನ ಕಾನೂನು ಅಗತ್ಯವಿದೆ. ಕಡಿಮೆ ಇಂಗಾಲ ಹೊರಸೂಸುವಿಕೆ, ಹವಾಮಾನ ಪುನಶ್ಚೇತನದೊಡನೆ ಸಾಮಾಜಿಕ ನ್ಯಾಯವನ್ನು ನೀಡುವ ಅಭಿವೃದ್ಧಿ ಆಯ್ಕೆಗಳನ್ನು ಮಾಡಬೇಕಿದೆ. ಸುಪ್ರೀಂ ಕೋರ್ಟಿನ ತೀರ್ಪನ್ನು ಮುಂದಕ್ಕೊಯ್ಯುವ ಮತ್ತು ಪೂರ್ತಿಗೊಳಿಸುವ, ಸಮಾಜದ ಎಲ್ಲ ಸಮುದಾಯಗಳನ್ನು ಒಳಗೊಳ್ಳುವ ಕಾನೂನು ರೂಪುಗೊಳ್ಳಬೇಕಿದೆ. ನಮ್ಮದು ಕಡಿಮೆ-ಮಧ್ಯಮ ಆದಾಯದ, ಅಧಿಕ ಯುವಜನರು ಇರುವ ದೇಶ. ನ್ಯಾಯಾಲಯಗಳು ಮೂಲಭೂತ ಹಕ್ಕುಗಳ ರಕ್ಷಣೆಗೆ ನೀಡಿದ ಹಲವು ಆದೇಶಗಳಂತೆ ಹವಾಮಾನ ಹಕ್ಕುಗಳನ್ನು ಹಲವು ಸಕ್ರಿಯ ಕಾರ್ಯನೀತಿಗಳ ಮೂಲಕ ದಕ್ಕಿಸಿಕೊಳ್ಳಬಹುದು. ಹವಾಮಾನ ಕಾನೂನಿನ ಸಬಲಗೊಳಿಸುವ ಪಾತ್ರವು ಸರಕಾರವನ್ನೂ ಮೀರಿ, ಉದ್ಯಮ, ನಾಗರಿಕ ಸಮಾಜ ಮತ್ತು ಸಮುದಾಯಗಳಿಗೂ ವಿಸ್ತರಿಸಬೇಕಾಗುತ್ತದೆ. ಸುಪ್ರೀಂ ಕೋರ್ಟ್ ತೀರ್ಪನ್ನು ಮುಂದಕ್ಕೊಯ್ಯುವ ಮತ್ತು ಪೂರ್ತಿಗೊಳಿಸುವ, ಸಮಾಜದ ಎಲ್ಲ ಸಮುದಾಯಗಳನ್ನು ಒಳಗೊಳ್ಳುವ ಹಾಗೂ ಒಕ್ಕೂಟ ನೀತಿಯನ್ನು ಗೌರವಿಸುವ ಕಾನೂನಿನ ಅಗತ್ಯವಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಋತ

contributor

Similar News