ಕೇಂದ್ರದಲ್ಲಿ ಕರ್ನಾಟಕದ ಸಚಿವರ ಕಾರುಬಾರು

ಕೇಂದ್ರದಲ್ಲಿ ಸಚಿವರಾಗುವ ಅವಕಾಶ ಪಡೆದ ಕರ್ನಾಟಕದ ಸಂಸದರು ಪಕ್ಷರಾಜಕಾರಣವನ್ನು ಪಕ್ಕಕ್ಕಿಟ್ಟು ಕರ್ನಾಟಕದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದರೆ ರಾಜ್ಯ ಮತ್ತಷ್ಟು ಅಭಿವೃದ್ಧಿ ಹೊಂದುತ್ತದೆ. ನಿರ್ಮಲಾ ಸೀತಾರಾಮನ್ ಅವರನ್ನು ಸೇರಿಸಿಕೊಂಡೇ ಕರ್ನಾಟಕದ ಒಳಿತಿಗೆ ಎಲ್ಲ ಮಂತ್ರಿಗಳು ಶ್ರಮಿಸಬೇಕು. ಹಿರಿಯರು ಹಾಕಿದ ಮೇಲ್ಪಂಕ್ತಿ ಅನುಸರಿಸಿದರೆ ನಿರ್ಮಲಾ ಸೀತಾರಾಮನ್, ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ, ವಿ. ಸೋಮಣ್ಣ, ಶೋಭಾ ಕರಂದ್ಲಾಜೆಯವರು ಕನ್ನಡಿಗರ ಸ್ಮತಿಕೋಶದಲ್ಲಿ ಉಳಿಯುತ್ತಾರೆ. ನಾಡಿಗೆ ಒಳಿತಾಗುವ ಕೆಲಸದಲ್ಲಿ ಕುಮಾರಸ್ವಾಮಿಯವರು ಮುಂಚೂಣಿಯಲ್ಲಿ ನಿಂತರೆ ಕರ್ನಾಟಕ ಮುನ್ನಡೆಯುತ್ತದೆ.

Update: 2024-07-06 05:14 GMT

‘‘ನಾಯಕರ ಕೈಯಲ್ಲಿ ಆಡಳಿತ ಸೂತ್ರ ಇದೆ, ಕೋಟ್ಯಂತರ ಹಣ ಇದೆ ವಿಲೇವಾರಿಗೆ. ಅವರು ಜಾಗರೂಕರಾಗಿರಬೇಕು. ನಮ್ರರಾಗಿರಬೇಕು. ಎಷ್ಟೋ ಸಲ ಜನ ತಾವು ಆಡಿದ್ದನ್ನು ಮರೆತೇ ಬಿಡುತ್ತಾರೆ. ನಾಯಕರು ತಮಗೆ ಮಾಡಲು ಅಸಾಧ್ಯವಾದುದರ ಬಗ್ಗೆ ಯಾವತ್ತೂ ಆಶ್ವಾಸನೆ ಕೊಡಬಾರದು. ಒಮ್ಮೆ ಮಾತು ಕೊಟ್ಟರೆ ಏನೇ ಆಗಲಿ ಅದನ್ನು ಪಾಲಿಸಲೇಬೇಕು.’’

-ಮಹಾತ್ಮಾ ಗಾಂಧೀಜಿ

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರ ಅಸ್ತಿತ್ವಕ್ಕೆ ಬಂದಿದೆ. ಮೋದಿ ಮತ್ತು ಅವರ ಸಚಿವ ಸಂಪುಟದ ಸದಸ್ಯರು ಅಧಿಕಾರ ವಹಿಸಿಕೊಂಡು ಕಾರ್ಯಪ್ರವೃತ್ತರಾಗಿದ್ದಾರೆ. ಕರ್ನಾಟಕದ ಮೂವರಿಗೆ ಸಂಪುಟ ದರ್ಜೆಯ ಸಚಿವ ಸ್ಥಾನ ನೀಡಲಾಗಿದೆ. ಇಬ್ಬರನ್ನು ರಾಜ್ಯ ಸಚಿವರನ್ನಾಗಿಸಲಾಗಿದೆ. ಸಂಪುಟ ದರ್ಜೆಯ ಮೂವರು ಸಚಿವರಲ್ಲಿ ಕರ್ನಾಟಕದಿಂದ ರಾಜ್ಯಸಭಾ ಸದಸ್ಯರಾಗಿರುವ ನಿರ್ಮಲಾ ಸೀತಾರಾಮನ್ ಅವರಿಗೆ ಅತ್ಯಂತ ಮಹತ್ವದ ಹಣಕಾಸು ಖಾತೆಯ ಜವಾಬ್ದಾರಿಯನ್ನು ನೀಡಲಾಗಿದೆ. ಎನ್‌ಡಿಎ ಮೈತ್ರಿಕೂಟದ ಭಾಗವಾಗಿರುವ ಜಾತ್ಯತೀತ ಜನತಾದಳದ ಸಂಸದ ಎಚ್.ಡಿ. ಕುಮಾರಸ್ವಾಮಿಯವರಿಗೂ ತೂಕದ ಖಾತೆಯಾಗಿರುವ ಭಾರೀ ಕೈಗಾರಿಕೆ ಮತ್ತು ಉಕ್ಕು ಸಚಿವಾಲಯದ ಹೊಣೆಗಾರಿಕೆಯನ್ನು ವಹಿಸಿಕೊಡಲಾಗಿದೆ. ಧಾರವಾಡ ಸಂಸದ ಪ್ರಹ್ಲಾದ್ ಜೋಷಿ ಈ ಹಿಂದಿನ ಮೋದಿ ಸಚಿವ ಸಂಪುಟದಲ್ಲಿ ಮಹತ್ವದ ಖಾತೆ ಎನಿಸಿರುವ ಸಂಸದೀಯ ವ್ಯವಹಾರ, ಕಲ್ಲಿದ್ದಲು, ಗಣಿ ಖಾತೆಯನ್ನು ನಿರ್ವಹಿಸಿದ್ದರು. ಆದರೆ ಈ ಬಾರಿ ಅವರಿಗೆ ಆಹಾರ ಮತ್ತು ನಾಗರಿಕ ಪೂರೈಕೆ, ಗ್ರಾಹಕ ವ್ಯವಹಾರಗಳ ಸಚಿವ ಖಾತೆ ನೀಡಲಾಗಿದೆ. ಇನ್ನು ಹಿಂದಿ ಭಾಷೆಯ ಅರಿವಿರದ ಶೋಭಾ ಕರಂದ್ಲಾಜೆ ಮತ್ತು ವಿ. ಸೋಮಣ್ಣ ಅವರನ್ನು ರಾಜ್ಯ ಸಚಿವರನ್ನಾಗಿಸಿದ್ದಾರೆ. ಶೋಭಾ ಅವರು ಹಿಂದಿ ಮತ್ತು ಇಂಗ್ಲಿಷ್ ಭಾಷೆಯ ಮೇಲೆ ಪ್ರಭುತ್ವ ಸಾಧಿಸಲು ಪ್ರಯತ್ನಿಸಿದ್ದರೆ ಸಂಪುಟ ದರ್ಜೆಯ ಮಂತ್ರಿಯಾಗುತ್ತಿದ್ದರು. ಈ ಹಿಂದಿನ ಸರಕಾರದಲ್ಲಿ ಶೋಭಾ ಕರಂದ್ಲಾಜೆ ಅವರೊಂದಿಗೆ ಶಿಕ್ಷಣ ಖಾತೆಯ ರಾಜ್ಯಮಂತ್ರಿಯಾಗಿದ್ದ ಜಾರ್ಖಂಡ್ ರಾಜ್ಯದ ಅನ್ನಪೂರ್ಣಾ ದೇವಿಯವರನ್ನು ಈ ಬಾರಿ ಸ್ಮತಿ ಇರಾನಿಯವರು ನಿರ್ವಹಿಸುತ್ತಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರನ್ನಾಗಿಸಿ ಭಡ್ತಿ ನೀಡಿದ್ದಾರೆ.

ಅಷ್ಟಕ್ಕೂ ಅನ್ನಪೂರ್ಣಾ ದೇವಿ 2019ರಲ್ಲಿ ಮೊದಲ ಬಾರಿಗೆ ಜಾರ್ಖಂಡ್ ರಾಜ್ಯದ ಕೊದರಾಮ್ ಲೋಕಸಭಾ ಕ್ಷೇತ್ರದಿಂದ ಲೋಕಸಭೆ ಪ್ರವೇಶಿಸಿದವರು. ಅಷ್ಟು ಮಾತ್ರವಲ್ಲ ಅವರು 2014ಕ್ಕೂ ಮಂಚೆ ರಾಷ್ಟ್ರೀಯ ಜನತಾದಳದಲ್ಲಿದ್ದು ಶಾಸಕಿ, ಸಚಿವೆಯಾಗಿ ಕಾರ್ಯನಿರ್ವಹಿಸಿದವರು. ಸಂಘ ಪರಿವಾರದ ಮೂಲದವರಲ್ಲ. 54 ವರ್ಷ ವಯಸ್ಸಿನ ಅನ್ನಪೂರ್ಣಾ ದೇವಿ ಅಲ್ಪ ಅವಧಿಯಲ್ಲಿ ಸಂಪುಟ ದರ್ಜೆಯ ಸಚಿವ ಸ್ಥಾನಕ್ಕೆ ಭಡ್ತಿಹೊಂದಲು ಸಾಧ್ಯವಾದದ್ದು ಅವರ ಹಿಂದಿ ಭಾಷೆಯಲ್ಲಿನ ಸಂವಹನ ಕೌಶಲ್ಯ. 2014ರಿಂದ ಸಂಸದರಾಗಿ ಆಯ್ಕೆಯಾಗುತ್ತಿರುವ ಎಬಿವಿಪಿ ಮೂಲದ ಶೋಭಾಕರಂದ್ಲಾಜೆಯವರು ಯಡಿಯೂರಪ್ಪ, ಸದಾನಂದ ಗೌಡರು ಮತ್ತು ಜಗದೀಶ್ ಶೆಟ್ಟರ್ ಸಚಿವ ಸಂಪುಟದಲ್ಲಿ ಇಂಧನ, ಗ್ರಾಮೀಣಾಭಿವೃದ್ಧಿಯಂತಹ ಪ್ರಮುಖ ಖಾತೆಗಳನ್ನು ಯಶಸ್ವಿಯಾಗಿ ನಿಭಾಯಿಸಿ ಅನುಭವ ಹೊಂದಿದವರು. ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಸಂವಹನ ಕೌಶಲ್ಯದ ಕೊರತೆಯ ಕಾರಣಕ್ಕೆ ಮಹತ್ವದ ಖಾತೆ ಮತ್ತು ಸಂಪುಟ ದರ್ಜೆಯ ಸಚಿವ ಗಿರಿಯಿಂದ ವಂಚಿತರಾಗಿದ್ದಾರೆ. ಈ ಹಿಂದಿನ ಸರಕಾರದಲ್ಲಿ ಕೃಷಿ, ರೈತ ಕಲ್ಯಾಣ ಮತ್ತು ಆಹಾರ ಸಂಸ್ಕರಣ ಖಾತೆಯ ರಾಜ್ಯ ಸಚಿವರಾಗಿದ್ದ ಶೋಭಾ ಅವರ ಕಾರ್ಯವೈಖರಿಯಿಂದ ಯಾವ ಲಾಭವಾಯಿತು ಎಂಬುದು ಕರ್ನಾಟಕ ರಾಜ್ಯದ ಜನಸಾಮಾನ್ಯರಿಗೆ ತಿಳಿದಿಲ್ಲ. ಮಂತ್ರಿಯಾಗಿ ಕಾರ್ಯನಿರ್ವಹಿಸಿದ ಮೇಡಂ ಅವರೇ ಹೇಳಬೇಕು. ಉಡುಪಿ -ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮತದಾರರು ಗೋಬ್ಯಾಕ್ ಘೋಷಣೆ ಕೂಗುವಂತಾಯಿತು.

ಬಿಜೆಪಿಯೊಳಗಿನ ಮೇಲಾಟದಲ್ಲಿ ತುಮಕೂರು ಸಂಸದ ವಿ. ಸೋಮಣ್ಣ ರಾಜ್ಯ ಸಚಿವರಾಗಿದ್ದರೂ ಜಲಶಕ್ತಿ, ರೈಲ್ವೆಯಂತಹ ಮಹತ್ವದ ಖಾತೆಯನ್ನು ಗಿಟ್ಟಿಸಿಕೊಂಡಿದ್ದಾರೆ. ಮೊದಲ ಬಾರಿಗೆ ಸಂಸದರಾದವರು, ಸಂಘ ಪರಿವಾರದ ಮೂಲದವರಲ್ಲದ ವಿ. ಸೋಮಣ್ಣ ಅವರಿಗೆ ಮಹತ್ವದ ಖಾತೆಯ ಮಂತ್ರಿಗಿರಿ ದೊರೆತದ್ದು ಸಂತೋಷ ಪವಾಡವೇ ಸರಿ. ಎಲ್ಲಕ್ಕೂ ಮಿಗಿಲಾಗಿ ಸೋಮಣ್ಣ ಅವರಿಗೆ ಹಿಂದಿ-ಇಂಗ್ಲಿಷ್ ಭಾಷೆಗಳ ಗಂಧಗಾಳಿ ಇಲ್ಲ. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಹಿಂದಿ ಗೊತ್ತಿಲ್ಲದಿದ್ದರೂ ಆಂಗ್ಲ ಭಾಷೆಯಲ್ಲಿ ವ್ಯವಹರಿಸುತ್ತಾರೆ. ಎರಡು ಬಾರಿ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿರುವ ಅನುಭವ ಹೊಂದಿರುವ ಕುಮಾರಸ್ವಾಮಿಯವರಿಗೆ ಮಾಜಿ ಪ್ರಧಾನಿ ದೇವೇಗೌಡರ ಮಾರ್ಗದರ್ಶನ ಮತ್ತು ತಿಪ್ಪೇಸ್ವಾಮಿಯವರ ಸಲಹೆ ಸದಾ ದೊರೆಯುತ್ತವೆ. ಪ್ರಹ್ಲಾದ್ ಜೋಶಿಯವರಿಗೆ ದಿಲ್ಲಿ ಮಟ್ಟದಲ್ಲಿ ಮ್ಯಾನೇಜ್ ಮಾಡುವಷ್ಟು ಹಿಂದಿ-ಇಂಗ್ಲಿಷ್ ಗೊತ್ತಿದೆ. ಆ ಕಾರಣಕ್ಕೆ ಮತ್ತೆ ಮಂತ್ರಿಯಾಗಿ ಮುಂದುವರಿದಿದ್ದಾರೆ. ಆದರೆ ದೇಶಕ್ಕೆ, ನಾಡಿಗೆ ಹೆಜ್ಜೆ ಗುರುತು ಮೂಡಿಸುವಷ್ಟು ಒಳ್ಳೆಯ ಕೆಲಸ ಮಾಡುವ ಇರಾದೆಯೇ ಅವರಿಗಿಲ್ಲ. ಆ ಕಾರಣಕ್ಕೆ ಜೋಶಿಯವರಿಗೆ ಮಹತ್ವದ ಖಾತೆಯ ಭಡ್ತಿ ಸಿಕ್ಕಿಲ್ಲ. ಜೆಎನ್‌ಯುನಲ್ಲಿ ಅರ್ಥಶಾಸ್ತ್ರ ವಿಷಯದ ಮೇಲೆ ಎಂ.ಫಿಲ್. ಮಾಡಿರುವ ಹಿಂದಿ-ಇಂಗ್ಲಿಷ್ ಭಾಷೆಗಳಲ್ಲಿ ನಿರರ್ಗಳವಾಗಿ ವ್ಯವಹರಿಸುವ ನಿರ್ಮಲಾ ಸೀತಾರಾಮನ್ ಮೋದಿ-ಅಮಿತ್ ಶಾ ಅವರ ಸೂತ್ರದ ಗೊಂಬೆಯಷ್ಟೇ. ಅವರಿಂದ ಕರ್ನಾಟಕದ ಜನತೆ ಹೆಚ್ಚಿನದೇನೂ ನಿರೀಕ್ಷಿಸುವಂತಿಲ್ಲ.

ಕುಮಾರಸ್ವಾಮಿಯವರಿಗೆ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ, ಪ್ರಹ್ಲಾದ್ ಜೋಶಿ ಅವರಿಗೆ ಆಹಾರ ಮತ್ತು ನಾಗರಿಕ ಪೂರೈಕೆ, ಗ್ರಾಹಕ ವ್ಯವಹಾರ ಖಾತೆ, ವಿ. ಸೋಮಣ್ಣ ಅವರಿಗೆ ಜಲಶಕ್ತಿ, ರೈಲ್ವೆ ಖಾತೆ, ಶೋಭಾ ಅವರಿಗೆ ಕಾರ್ಮಿಕ ಎಂಎಸ್‌ಎಂಇ ಖಾತೆಗಳು ಹೊಸ ಇಲಾಖೆಗಳೆಂದು ಗೋಚರಿಸಬಹುದು. ಆದರೆ ಕರ್ನಾಟಕದ ರಾಜಕಾರಣಿಗಳು ಮಹತ್ವದ ಖಾತೆಗಳನ್ನು ನಿರ್ವಹಿಸಿ ಮೆಚ್ಚುಗೆಗಳಿಸಿದ ನಿದರ್ಶನಗಳು ಸಾಕಷ್ಟಿವೆ. ಕರ್ನಾಟಕಕ್ಕೆ ಮಾತ್ರವಲ್ಲ ಇಡೀ ಭಾರತ ದೇಶಕ್ಕೆ ಮಾದರಿಯಾಗಿ ನಿಲ್ಲುವ ಸಾಧನೆ ಕರ್ನಾಟಕದ ಹಿರಿಯ ರಾಜಕಾರಣಿಗಳು ಮಾಡಿದ್ದಾರೆ. ನಾಲ್ಕು ವರ್ಷಗಳ ಕಾಲ ಮೈಸೂರು ರಾಜ್ಯದ ಮುಖ್ಯಮಂತ್ರಿ ಆಗಿದ್ದ ಕೆಂಗಲ್ ಹನುಮಂತಯ್ಯನವರು ವಿಧಾನಸೌಧ ಕಟ್ಟಿದ ಕೀರ್ತಿಗೆ ಭಾಜನರಾಗಿದ್ದಾರೆ. 1962ರಿಂದ 1977 ರವರೆಗೆ ಲೋಕಸಭಾ ಸದಸ್ಯರಾಗಿದ್ದ ಅವರು ಕೇಂದ್ರದಲ್ಲಿ ರೈಲ್ವೆ, ಕೈಗಾರಿಕಾ ಸಚಿವರಾಗಿ ಅತ್ಯುತ್ತಮ ಕೆಲಸ ಮಾಡಿದ್ದಾರೆ. ಕೈಗಾರಿಕಾ ಸಚಿವರಾಗಿ ಅವರು ನಿರ್ವಹಿಸಿದ ಕೆಲಸಗಳ ಮೇಲೆ ಕುಮಾರಸ್ವಾಮಿಯವರು ಒಮ್ಮೆ ಕಣ್ಣಾಡಿಸಿದರೂ ಅತ್ಯುತ್ತಮ ಕೆಲಸ ಮಾಡಲು ಪ್ರೇರಣೆಯೊದಗಿಸುತ್ತವೆ.

ಸುದೀರ್ಘ ಅವಧಿಗೆ ಕೇಂದ್ರ ರೈಲ್ವೆ ಮಂತ್ರಿಯಾಗಿ ಕಾರ್ಯನಿರ್ವಹಿಸಿದ ಸಿ.ಕೆ. ಜಾಫರ್ ಷರೀಫ್ ಅವರು ಮಂತ್ರಿಗಿರಿ ಅವಕಾಶ ಪಡೆದ ಎಲ್ಲರಿಗೂ ಮಾದರಿ. ಕೆಲಸ ಮಾಡಿದರೆ ಅವರ ಹಾಗೆ ಮಾಡಬೇಕು ಎನ್ನುವಷ್ಟರ ಮಟ್ಟಿಗೆ ತಮಗೆ ದೊರೆತ ಖಾತೆಗಳಿಗೆ ಸಮರ್ಪಿಸಿಕೊಂಡವರು. ಶ್ರೀಮತಿ ಇಂದಿರಾಗಾಂಧಿಯವರು ಪ್ರಧಾನಮಂತ್ರಿಯಾಗಿದ್ದ ಅವಧಿಯಲ್ಲಿ ಜಾಫರ್ ಷರೀಫ್ ಅವರು ರೈಲ್ವೆ ಖಾತೆಯ ರಾಜ್ಯ ಸಚಿವರಾಗಿ(80- 84) ಸೈ ಎನಿಸಿಕೊಂಡಿದ್ದರು. ನಂತರ 1991ರಿಂದ 1995ರ ವರೆಗೆ ಪ್ರಧಾನಮಂತ್ರಿ ಪಿ.ವಿ. ನರಸಿಂಹರಾವ್ ಸರಕಾರದಲ್ಲಿ ರೈಲ್ವೆ ಖಾತೆಯ ಸಂಪುಟ ದರ್ಜೆಯ ಸಚಿವರಾಗಿ ಕಾರ್ಯನಿರ್ವಹಿಸಿ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು. ದಕ್ಷಿಣ ಭಾರತದವರಿಗೆ ರೈಲ್ವೆ ಖಾತೆ ನೀಡುವುದು ಅಪರೂಪ. ಅಂತಹ ಖಾತೆಯಲ್ಲಿ ಚರಿತ್ರಾರ್ಹ ಕೆಲಸ ಮಾಡಿದವರು ಜಾಫರ್ ಷರೀಫ್ ಸಾಹೇಬರು. ರೈಲ್ವೆಯ ಎಲ್ಲ ಬಗೆಯ ಗೇಜ್‌ಗಳನ್ನು ಬ್ರಾಡ್‌ಗೇಜ್‌ಗೆ ಪರಿವರ್ತಿಸಿದವರೇ ಅವರು. ಅವರ ಅಧಿಕಾರಾವಧಿಯಲ್ಲಿ ಬೆಂಗಳೂರಿಗೆ ರೈಲ್ವೆ ಇಲಾಖೆಯ ಗಾಲಿ ಮತ್ತು ಅಚ್ಚು ಕಾರ್ಖಾನೆಯ ಒಂದು ಘಟಕ ಆಗಮಿಸಿತು. ಕರ್ನಾಟಕದ ಬಹುಪಾಲು ರೈಲ್ವೆ ಯೋಜನೆಗಳಿಗೆ ಚಾಲನೆ ದೊರಕಿದ್ದೇ ಆಗ. ನಂತರ ರೈಲ್ವೆ ಖಾತೆಯ ರಾಜ್ಯ ಸಚಿವರಾಗಿದ್ದ ಬಾಬಗೌಡ ಪಾಟೀಲ, ಬಸನಗೌಡ ಪಾಟೀಲ ಯತ್ನಾಳ್, ಸದಾನಂದ ಗೌಡರು ಅದೇ ವೇಗದಲ್ಲಿ ಕಾರ್ಯನಿರ್ವಹಿಸಿದ್ದರೆ ಕರ್ನಾಟಕ ಹೆಚ್ಚು ಸವಲತ್ತುಗಳನ್ನು ಪಡೆದುಕೊಳ್ಳುತ್ತಿತ್ತು. ಕೊನೆಯ ಒಂಭತ್ತು ತಿಂಗಳಿಗೆ ರೈಲ್ವೆ ಮಂತ್ರಿಯಾಗಿದ್ದ ಮಲ್ಲಿಕಾರ್ಜುನ ಖರ್ಗೆಯವರು ಅದ್ಭುತ ಕೆಲಸ ಮಾಡಿ ತೋರಿಸಿದರು. ರೈಲ್ವೆ ಖಾತೆಯ ಹೊಸ ಮಂತ್ರಿ ವಿ. ಸೋಮಣ್ಣ ಅವರು ರೈಲ್ವೆ ಖಾತೆಯ ಪುಟಗಳನ್ನು ತಿರುವಿ ಹಾಕಬೇಕಾಗಿದೆ. ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರ ಸಚಿವ ಸಂಪುಟದಲ್ಲಿ ಮಂತ್ರಿಯಾಗಿ ಕಾರ್ಯನಿರ್ವಹಿಸುವ ಅವಕಾಶ ಪಡೆದ ಜನಾರ್ದನ ಪೂಜಾರಿಯವರು ಹೆಜ್ಜೆ ಗುರುತುಗಳನ್ನು ಮೂಡಿಸಿದವರು. 1982ರಿಂದ 1984ರ ವರೆಗೆ ಅಂದಿನ ಪ್ರಧಾನಿ ಇಂದಿರಾಗಾಂಧಿ ಸಚಿವ ಸಂಪುಟದಲ್ಲಿ ಹಣಕಾಸು ಖಾತೆಯ ರಾಜ್ಯ ಸಚಿವರಾಗಿ ಸಾಲ ಮೇಳದ ಮೂಲಕ ಬ್ಯಾಂಕುಗಳನ್ನು ಜನಸಾಮಾನ್ಯರಿಗೆ ಹತ್ತಿರವಾಗಿಸಿದ್ದರು. 1985ರಿಂದ 87ರವರೆಗೆ ರಾಜೀವ್ ಗಾಂಧಿ ಸಂಪುಟದಲ್ಲಿ ಅದೇ ಖಾತೆಯಲ್ಲಿ ಮುಂದುವರಿದಿದ್ದರು. 1987ರಿಂದ 1989ರವರೆಗೆ ಗ್ರಾಮೀಣಾಭಿವೃದ್ಧಿಯಂತಹ ಮಹತ್ವದ ಖಾತೆಯನ್ನು ನಿರ್ವಹಿಸಿ ಮೆಚ್ಚುಗೆ ಗಳಿಸಿದ್ದರು. ಕುದುರೆಮುಖ ಅದಿರು ಕಂಪೆನಿ ಸೇರಿದಂತೆ ಹಲವಾರು ಹೊಸ ಯೋಜನೆಗಳನ್ನು ರಾಜ್ಯಕ್ಕೆ ತಂದ ಕೀರ್ತಿ ಅವರಿಗೆ ಸಲ್ಲುತ್ತದೆ. ಕೇಂದ್ರದಲ್ಲಿ ಸುದೀರ್ಘ ಅವಧಿಗೆ ಕರ್ನಾಟಕದಿಂದ ಮಂತ್ರಿಯಾಗಿ ಕಾರ್ಯನಿರ್ವಹಿಸಿದ ಬಿ. ಶಂಕರಾನಂದ ಬಹುಪಾಲು ಪ್ರಮುಖ ಖಾತೆಗಳಲ್ಲೇ ದುಡಿದಿದ್ದಾರೆ. ಮೊದಲ ಬಾರಿಗೆ ಇಂದಿರಾಗಾಂಧಿಯವರ ಸಂಪುಟದಲ್ಲಿ ಸಂಸದೀಯ ವ್ಯವಹಾರಗಳ ಉಪಮಂತ್ರಿಯಾಗಿ ಸೇವೆ ಸಲ್ಲಿಸಿದ ಅವರು ನಂತರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ (80-84), ಕೆಲಕಾಲ ಶಿಕ್ಷಣ ಸಚಿವರಾಗಿ, 1984ರಿಂದ 1987ರವರೆಗೆ ಇಂಧನ, 1988ರಿಂದ 1989ರವರೆಗೆ ಜಲ ಸಂಪನ್ಮೂಲ, ಕಾನೂನು, 1991ರಿಂದ 1993ರವರೆಗೆ ಪೆಟ್ರೋಲಿಯಂ, 1993ರಿಂದ 1994ರ ವರೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿ ಹೆಸರು ಮಾಡಿದ್ದರು. ಇಂದಿರಾಗಾಂಧಿ, ರಾಜೀವ್ ಗಾಂಧಿ ಮತ್ತು ಪಿ. ವಿ. ನರಸಿಂಹರಾವ್ ಸರಕಾರಗಳಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದವರು.

ಕೊಂಡಜ್ಜಿ ಬಸಪ್ಪ, ವೀರೇಂದ್ರ ಪಾಟೀಲ್, ಎಸ್.ಎಂ. ಕೃಷ್ಣ ಅವರು ಇಂದಿರಾ ಗಾಂಧಿ ಅವರ ಸಂಪುಟದಲ್ಲೇ ಮಂತ್ರಿಯಾಗಿದ್ದವರು. ಕೊಂಡಜ್ಜಿ ಬಸಪ್ಪನವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣದಂತಹ ಮಹತ್ವದ ಖಾತೆ ನಿಭಾಯಿಸಿದ್ದರು. ವೀರೇಂದ್ರ ಪಾಟೀಲರು ಕೇಂದ್ರದಲ್ಲಿ ಪೆಟ್ರೋಲಿಯಂ, ಕಾರ್ಮಿಕ ಖಾತೆಯ ಸಂಪುಟ ದರ್ಜೆಯ ಸಚಿವರಾಗಿದ್ದರು. ಎಸ್.ಎಂ. ಕೃಷ್ಣ ಅವರು 1983 -1984ರಲ್ಲೇ ಕೇಂದ್ರದಲ್ಲಿ ಕೈಗಾರಿಕಾ ರಾಜ್ಯ ಸಚಿವರಾಗಿದ್ದರು. 1984 -1985ರಲ್ಲಿ ರಾಜ್ಯ ಹಣಕಾಸು ಸಚಿವರಾಗಿದ್ದರು. ಮನಮೋಹನ್ ಸಿಂಗ್ ಸರಕಾರದಲ್ಲಿ (2009-2012) ವಿದೇಶಾಂಗ ಮಂತ್ರಿಯಾಗಿಯೂ ಕಾರ್ಯ ನಿರ್ವಹಿಸಿದ್ದರು. ಆಸ್ಕರ್ ಫೆರ್ನಾಂಡಿಸ್, ವೀರಪ್ಪ ಮೊಯ್ಲಿ, ಮನಮೋಹನ್ ಸಿಂಗ್ ಸರಕಾರದಲ್ಲಿ ಮಹತ್ವದ ಖಾತೆಯ ಮಂತ್ರಿಗಳಾಗಿದ್ದರು. ಪೆಟ್ರೋಲಿಯಂ ಸಚಿವರಾಗಿದ್ದಾಗ ಮೊಯ್ಲಿಯವರ ಮೇಲೆ ಆರೋಪಗಳು ಕೇಳಿಬಂದಿದ್ದವು. ರಾಮಕೃಷ್ಣ ಹೆಗಡೆ, ಎಂ.ಎಸ್. ಗುರುಪಾದ ಸ್ವಾಮಿ, ಎಂ.ವಿ. ರಾಜಶೇಖರನ್ ಅವರು ಕಡಿಮೆ ಅವಧಿಗೆ ಮಂತ್ರಿಯಾಗಿದ್ದರು. ಹಾಗೆ ನೋಡಿದರೆ ಕಾಂಗ್ರೆಸೇತರ ಮುಖಂಡರಲ್ಲಿ ಹೆಚ್ಚು ಅವಧಿಗೆ ಕೇಂದ್ರ ಮಂತ್ರಿಯಾದವರೆಂದರೆ; ಬಿಜೆಪಿಯ ಅನಂತಕುಮಾರ್. ಅವರ ಕಾರ್ಯವೈಖರಿಯನ್ನು ಪ್ರತಿಪಕ್ಷದವರೂ ಶ್ಲಾಘಿಸುತ್ತಾರೆ. ಕರ್ನಾಟಕಕ್ಕೆ ಹಲವು ಯೋಜನೆಗಳನ್ನು ತರುವಲ್ಲಿ ಅವರ ಪಾತ್ರ ಪ್ರಮುಖವಾದುದಾಗಿದೆ. ನಗರಾಭಿವೃದ್ಧಿ, ಪ್ರವಾಸೋದ್ಯಮ, ಸಂಸ್ಕೃತಿ, ರಸಗೊಬ್ಬರದಂತಹ ಖಾತೆಗಳ ಮಂತ್ರಿ ಆಗಿದ್ದ ಅವರು ಅಭಿವೃದ್ಧಿ ವಿಷಯದಲ್ಲಿ ಪಕ್ಷಾತೀತವಾಗಿ ಕಾರ್ಯನಿರ್ವಹಿಸುತ್ತಿದ್ದರು. ಕರ್ನಾಟಕದ ವಿಷಯದಲ್ಲಿ ಹೆಚ್ಚು ಸ್ವಾರ್ಥಿಯಾಗಿದ್ದರು. ಸಿ.ಎಂ. ಇಬ್ರಾಹೀಂ ಬಸವರಾಜ ಪಾಟೀಲ ಅನ್ವರಿ ಸೇರಿದಂತೆ ಹಲವರು ಕೇಂದ್ರದಲ್ಲಿ ಮಂತ್ರಿಯಾಗುವ ಅವಕಾಶ ಪಡೆದಿದ್ದರೂ ಹೇಳಿಕೊಳ್ಳುವ ಸಾಧನೆಯನ್ನೇನೂ ಮಾಡಲಿಲ್ಲ. ಸುರೇಶ್ ಅಂಗಡಿ, ಜಿ.ಎಂ. ಸಿದ್ದೇಶ್, ಭಗವಂತ ಖೂಬಾ ಮುಂತಾದವರಿಗೆ ಕೇಂದ್ರದಲ್ಲಿ ಮಂತ್ರಿಯಾಗುವ ಯೋಗವೇನೋ ದೊರೆಯಿತು. ಅತ್ಯುತ್ತಮ ಕೆಲಸ ಮಾಡುವ ಕ್ರಿಯಾಶೀಲತೆ ತೋರಲಿಲ್ಲ. ಹಿಂದಿ- ಇಂಗ್ಲಿಷ್ ಭಾಷೆಯ ತೊಡಕನ್ನು ನಿವಾರಿಸಿಕೊಳ್ಳಲಿಲ್ಲ.

ಹಾಗೆ ನೋಡಿದರೆ; 2009ರಲ್ಲಿ ಮೊದಲ ಬಾರಿಗೆ ಲೋಕಸಭೆ ಪ್ರವೇಶಿಸಿದಾಗ ಕಾಂಗ್ರೆಸ್‌ನ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆಯವರ ಸಾಮರ್ಥ್ಯವನ್ನು ಹೈಕಮಾಂಡ್ ಸಮರ್ಥವಾಗಿ ಅಂದಾಜಿಸಿರಲಿಲ್ಲ. ಮನಮೋಹನ್ ಸಿಂಗ್ ಸರಕಾರದಲ್ಲಿ ಖರ್ಗೆಯವರನ್ನು ಸಂಪುಟ ದರ್ಜೆಯ ಮಂತ್ರಿಯನ್ನಾಗಿ ಮಾಡಿದ್ದರೂ ಕಾರ್ಮಿಕ-ಉದ್ಯೋಗ ಖಾತೆಯನ್ನು ನೀಡಲಾಗಿತ್ತು. ಆದರೆ ಖರ್ಗೆಯವರು ಯಾರನ್ನೂ ದೂರಲಿಲ್ಲ. ಅದನ್ನು ಸವಾಲಾಗಿ ಸ್ವೀಕರಿಸಿ ಕಾರ್ಮಿಕ ಖಾತೆಯಲ್ಲಿ ಅತ್ಯುತ್ತಮ ಕೆಲಸ ಮಾಡಿ ತೋರಿಸಿದರು. ಎಲ್ಲರ ಗಮನ ಸೆಳೆಯುವಂತೆ ಮಾಡಿದರು. ಅವರಿಗೆ ಹಿಂದಿ ಚೆನ್ನಾಗಿ ಗೊತ್ತಿತ್ತು. ಇಂಗ್ಲಿಷನ್ನು ಉತ್ತಮಗೊಳಿಸಿಕೊಂಡರು. 9 ತಿಂಗಳ ಅವಧಿಗೆ ರೈಲ್ವೆ ಮಂತ್ರಿಯನ್ನಾಗಿಸಿದರು. ಅಲ್ಲಿಯೂ ಅತ್ಯುತ್ತಮ ಕೆಲಸ ಮಾಡಿದರು. ಕಾರ್ಮಿಕ ಮತ್ತು ರೈಲ್ವೆ ಮಂತ್ರಿಯಾಗಿ ಮಾಡಿದ ಕೆಲಸಗಳೇ ಅವರ ಸಾಮರ್ಥ್ಯ ಗುರುತಿಸಲು ಕಾರಣವಾದವು. 2014ರಲ್ಲಿ ಖರ್ಗೆಯವರನ್ನು ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕನನ್ನಾಗಿಸಿದರು. 2019ರ ಲೋಕಸಭೆ ಚುನಾವಣೆಯಲ್ಲಿ ಸೋತಾಗಲೂ ರಾಜ್ಯಸಭಾ ಸದಸ್ಯನನ್ನಾಗಿ ಮಾಡಿ ರಾಜ್ಯಸಭೆಯ ಪ್ರತಿಪಕ್ಷದ ನಾಯಕನನ್ನಾಗಿಸಿದರು. ಅವರ ಸಾಮರ್ಥ್ಯವನ್ನು ಮನಗಂಡೇ ಅಖಿಲ ಭಾರತ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನದಲ್ಲಿ ಕೂರಿಸಿದರು. ಭಾಷೆಯ ತೊಡಕನ್ನು ಮೀರಿ ಅತ್ಯುತ್ತಮ ಸಾಧನೆ ತೋರಿ ದಿಲ್ಲಿ ರಾಜಕಾರಣದಲ್ಲೂ ಪ್ರಾಮುಖ್ಯತೆ ಪಡೆದುಕೊಳ್ಳಬಹುದು ಎಂಬುದಕ್ಕೆ ಮಲ್ಲಿಕಾರ್ಜುನ ಖರ್ಗೆಯವರು ಬಹುದೊಡ್ಡ ನಿದರ್ಶನ.

ಕರ್ನಾಟಕದ ಐವರು ಕೇಂದ್ರ ಮಂತ್ರಿಗಳಲ್ಲಿ ನಿರ್ಮಲಾ ಸೀತಾರಾಮನ್ ಅವರಿಂದ ರಾಜ್ಯಕ್ಕೆ ಏನನ್ನೂ ನಿರೀಕ್ಷಿಸಲಾಗದು. ಬರಗಾಲದ ಸಂದರ್ಭದಲ್ಲೇ ಪರಿಹಾರ ನೀಡುವಲ್ಲಿ ಮಾನವೀಯತೆ ತೋರಲಿಲ್ಲ. ರಾಜ್ಯಕ್ಕೆ ಹೆಚ್ಚಿನ ಹಣಕಾಸಿನ ನೆರವು ಕೊಡಿಸಲು ವಿಶೇಷ ಪ್ರಯತ್ನವನ್ನೇನೂ ಮಾಡಲಿಲ್ಲ. ಕರ್ನಾಟಕದಿಂದ ರಾಜ್ಯಸಭಾ ಸದಸ್ಯರಾಗಿರುವುದರಿಂದ ತಾಂತ್ರಿಕವಾಗಿ ನಿರ್ಮಲಾ ಸೀತಾರಾಮನ್ ನಮ್ಮ ರಾಜ್ಯದವರು. ಆದರೆ ಭಾವನಾತ್ಮಕವಾಗಿ ಕರ್ನಾಟಕದೊಂದಿಗೆ ಬೆಸೆದುಕೊಳ್ಳಲಿಲ್ಲ. ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ, ಶೋಭಾ ಕರಂದ್ಲಾಜೆ, ವಿ. ಸೋಮಣ್ಣ ಅವರು ಕರ್ನಾಟಕದ ಶ್ರೇಯೋಭಿವೃದ್ಧಿಗೆ ಹೆಚ್ಚು ಕೆಲಸ ಮಾಡಲಿ ಎಂದು ನಿರೀಕ್ಷಿಸುವುದರಲ್ಲಿ ತಪ್ಪಿಲ್ಲ. ಕುಮಾರಸ್ವಾಮಿಯವರು ತಮಗೆ ದೊರೆತ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆಯನ್ನು ಸದವಕಾಶವೆಂದು ನಾಡಿನ ಏಳಿಗೆಗೆ ಬಳಸಿಕೊಳ್ಳುವ ಸಂಕಲ್ಪ ಮಾಡಿದರೆ ಒಂದು ತಲೆಮಾರು ನೆನಪಿಟ್ಟುಕೊಳ್ಳುವಷ್ಟು ಅದ್ಭುತ ಕೆಲಸ ಮಾಡಬಹುದು. ಉತ್ತರ ಕರ್ನಾಟಕ, ಅದರಲ್ಲೂ ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಹೆಚ್ಚು ಉದ್ಯೋಗ ಸೃಷ್ಟಿಸುವ ಕೈಗಾರಿಕೆ ಸ್ಥಾಪನೆಗೆ ಮುಂದಾದರೆ ಉದ್ಯೋಗ ಕ್ರಾಂತಿಗೆ ನಾಂದಿ ಹಾಡಿದಂತಾಗುತ್ತದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತಿಗೆ ಪ್ರತಿ ಮಾತು ಜೋಡಿಸುತ್ತಾ ಹೋದರೆ ಕೋಳಿ ಜಗಳದಲ್ಲೇ ಐದು ವರ್ಷ ಕಳೆದು ಹೋಗುತ್ತದೆ. ನಾಡಿಗೆ ಮಾಡಿದ್ದು ಕಡೆತನಕ ಉಳಿಯುತ್ತದೆ. ಸೇಡಿಗೆ ಮಾಡಿದ್ದು ಶತ್ರುವಿಗೆ ಅನುಕೂಲ.

ಪ್ರಹ್ಲಾದ್ ಜೋಶಿಯವರು ಧಾರವಾಡ, ಕರ್ನಾಟಕದ ಜನತೆ ನೆನಪಿಸಿಕೊಳ್ಳುವ ಕೆಲಸ ಮಾಡಲಿ. ಅನಂತ ಕುಮಾರ್ ಮಾಡಿದ ಕೆಲಸಗಳನ್ನು ಜನ ಈಗಲೂ ಸ್ಮರಿಸಿಕೊಳ್ಳುತ್ತಾರೆ. ಬೆಂಗಳೂರು ಮೆಟ್ರೋದಲ್ಲಿ ಅವರ ಪ್ರಯತ್ನದ ಪಾಲಿದೆ. ಜೋಶಿಯವರಿಗೆ ಭಾಷೆಯ ಸಮಸ್ಯೆ ಇಲ್ಲ. ದಿಲ್ಲಿ ರಾಜಕಾರಣ, ಅಧಿಕಾರ ಶಾಹಿ ಅರ್ಥವಾಗಿರುತ್ತದೆ. ನಾಡಿಗಾಗಿ ತುಸು ಶ್ರಮ ಹಾಕಿ ಕೆಲಸ ಮಾಡಿದರೆ ನಾಡ ಜನತೆ ಸದಾ ನೆನಪಿಸಿಕೊಳ್ಳುತ್ತಾರೆ. ಜೋಶಿಯವರ ಖಾತೆ ಆಹಾರ ಮತ್ತು ನಾಗರಿಕ ಪೂರೈಕೆ, ಗ್ರಾಹಕ ವ್ಯವಹಾರಗಳ ಸಚಿವಾಲಯ. ಜನಸಾಮಾನ್ಯರ ಅಗತ್ಯಗಳಿಗನುಗುಣವಾಗಿ ಸಚಿವಾಲಯವನ್ನು ಮರುರೂಪಿಸಿದರೆ ಅದೊಂದು ಕ್ರಾಂತಿಕಾರಿ ಬದಲಾವಣೆಯಾಗುತ್ತದೆ. ಶೋಭಾ ಕರಂದ್ಲಾಜೆಯವರು ಕಾರ್ಮಿಕ, ಉದ್ಯೋಗ ಹಾಗೂ ಎಂಎಸ್‌ಎಂಇ ಖಾತೆಯಲ್ಲಿ ಹೆಚ್ಚು ಕ್ರಿಯಾಶೀಲರಾದರೆ ಅತ್ಯುತ್ತಮ ಕೆಲಸ ಮಾಡಲು ಸಾಧ್ಯ. ಕರ್ನಾಟಕದಲ್ಲಿ ಅತಿ ಸಣ್ಣ, ಸಣ್ಣ, ಮಧ್ಯಮ ಉದ್ಯಮಗಳಿಗೆ ಕೇಂದ್ರದ ಬೆಂಬಲ ದೊರೆತರೆ ಯುವಸಮುದಾಯ ಉದ್ಯೋಗ ಹುಡುಕುವುದು ಬಿಟ್ಟು ಉದ್ಯೋಗದಾತರಾಗಬಲ್ಲರು. ರೈಲ್ವೆ ಮತ್ತು ಜಲಶಕ್ತಿಯ ರಾಜ್ಯ ಸಚಿವರಾಗಿರುವ ಸೋಮಣ್ಣ ಬಲ್ಲವರ ಸಲಹೆ ಪಡೆದು ಕೆಲಸ ಮಾಡಿದರೆ ಕರ್ನಾಟಕದಲ್ಲಿ ಚರಿತ್ರಾರ್ಹ ಕಾರ್ಯ ಮಾಡಬಹುದು. ಯಾವುದೋ ರೈಲಿಗೆ ಯಾರದೋ ಹೆಸರು ಇಡುವಷ್ಟಕ್ಕೆ ತೃಪ್ತಿ ಪಟ್ಟರೆ ಸೋಮಣ್ಣರ ಹೆಸರು ಹತ್ತರಲ್ಲಿ ಹನ್ನೊಂದಾಗುತ್ತದೆ.

ಕೇಂದ್ರದಲ್ಲಿ ಸಚಿವರಾಗುವ ಅವಕಾಶ ಪಡೆದ ಕರ್ನಾಟಕದ ಸಂಸದರು ಪಕ್ಷರಾಜಕಾರಣವನ್ನು ಪಕ್ಕಕ್ಕಿಟ್ಟು ಕರ್ನಾಟಕದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದರೆ ರಾಜ್ಯ ಮತ್ತಷ್ಟು ಅಭಿವೃದ್ಧಿ ಹೊಂದುತ್ತದೆ. ನಿರ್ಮಲಾ ಸೀತಾರಾಮನ್ ಅವರನ್ನು ಸೇರಿಸಿಕೊಂಡೇ ಕರ್ನಾಟಕದ ಒಳಿತಿಗೆ ಎಲ್ಲ ಮಂತ್ರಿಗಳು ಶ್ರಮಿಸಬೇಕು. ಹಿರಿಯರು ಹಾಕಿದ ಮೇಲ್ಪಂಕ್ತಿ ಅನುಸರಿಸಿದರೆ ನಿರ್ಮಲಾ ಸೀತಾರಾಮನ್, ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ, ವಿ. ಸೋಮಣ್ಣ, ಶೋಭಾ ಕರಂದ್ಲಾಜೆಯವರು ಕನ್ನಡಿಗರ ಸ್ಮತಿಕೋಶದಲ್ಲಿ ಉಳಿಯುತ್ತಾರೆ. ನಾಡಿಗೆ ಒಳಿತಾಗುವ ಕೆಲಸದಲ್ಲಿ ಕುಮಾರಸ್ವಾಮಿಯವರು ಮುಂಚೂಣಿಯಲ್ಲಿ ನಿಂತರೆ ಕರ್ನಾಟಕ ಮುನ್ನಡೆಯುತ್ತದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಡಾ. ರಾಜಶೇಖರ ಹತಗುಂದಿ

contributor

Similar News