ನೀಟ್ ಅವ್ಯವಸ್ಥೆ: ವಿಕೇಂದ್ರೀಕರಣದಿಂದ ಶಿಕ್ಷಣದ ವ್ಯವಸ್ಥಿತ ನಾಶ
ಸ್ಪರ್ಧೆ ಇರಲೇಬೇಕು ಎಂದಾದಲ್ಲಿ, ಎಲ್ಲರಿಗೂ ಸಮಾನಾವಕಾಶ ಹಾಗೂ ಹಿಂದುಳಿದವರಿಗೆ ಸ್ಪರ್ಧಿಸಲು ಅಗತ್ಯವಾದ ತರಬೇತಿ ನೀಡಬೇಕು. ಕೀವು ತುಂಬಿರುವ ಈ ವ್ಯವಸ್ಥೆಗೆ ನಾವೀನ್ಯತೆ, ಮರುಕಲ್ಪನೆ, ಹೊಸ ಚಿಂತನೆ ಅಗತ್ಯವಿದೆ. ತೀವ್ರ ಸ್ಪರ್ಧೆ, ಅಧಿಕಾರಶಾಹಿಯ ಹಿಡಿತ, ಕೇಂದ್ರೀಕರಣ ಮತ್ತು ಪ್ರಜಾತಂತ್ರವಿರೋಧಿ ನಿರ್ಧಾರ ತೆಗೆದುಕೊಳ್ಳುವಿಕೆಗೆ ಪಕ್ಕಾಗಿರುವ ಶಿಕ್ಷಣ ವ್ಯವಸ್ಥೆಯ ಮರುರಚನೆ ಆಗಬೇಕಿದೆ.
ನೀಟ್-ಯುಜಿ ಪರೀಕ್ಷೆಯ ಹೊಸ ಶ್ರೇಣಿ ಪಟ್ಟಿಯನ್ನು ರಾಷ್ಟ್ರೀಯ ಪರೀಕ್ಷೆ ಏಜೆನ್ಸಿ(ಎನ್‌ಟಿಎ) ಮೊನ್ನೆ ಬಿಡುಗಡೆ ಮಾಡಿದೆ. ನೀಟ್-ಯುಜಿ ಪರೀಕ್ಷೆಯನ್ನು ಈ ತಿಂಗಳು ನಡೆಸಲಿದ್ದು, ಪ್ರಶ್ನೆಪತ್ರಿಕೆಯನ್ನು ಪರೀಕ್ಷೆಗೆ ಎರಡು ಗಂಟೆ ಮೊದಲಷ್ಟೇ ಸಿದ್ಧಗೊಳಿಸಲಾಗುವುದು ಎಂದು ಏಜೆನ್ಸಿ ಹೇಳಿಕೊಂಡಿದೆ.
ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ(ಎನ್‌ಟಿಎ) ಆರಂಭದಿಂದಲೇ ರೋಗಗ್ರಸ್ಥವಾಗಿತ್ತು. ವಿಶ್ವವಿದ್ಯಾನಿಲಯಗಳ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಯುಇಟಿ-ಕಾಮನ್ ಯೂನಿವರ್ಸಿಟಿ ಎಂಟ್ರೆನ್ಸ್ ಟೆಸ್ಟ್) ಪರೀಕ್ಷೆಯನ್ನು ತಾಂತ್ರಿಕ ಕಾರಣ, ತಪ್ಪು ಪ್ರಶ್ನೆಪತ್ರಿಕೆಗಳ ವಿತರಣೆ ಇತ್ಯಾದಿ ಕಾರಣಗಳಿಂದಾಗಿ ಮುಂದೆ ಹಾಕಿ, ಆನಂತರ ವಜಾಗೊಳಿಸಿತ್ತು. ಆದರೆ, ಈ ಎಲ್ಲ ಹಗರಣಗಳಿಂದ ಈ ವ್ಯವಸ್ಥೆ ಯಾರಿಗಾಗಿ ರೂಪುಗೊಂಡಿದೆಯೋ ಅವರು, ಅಂದರೆ, ವಿದ್ಯಾರ್ಥಿ ಮತ್ತು ಪೋಷಕರು, ಬದಿಗೆ ಸರಿದು ಬಿಟ್ಟಿದ್ದಾರೆ. ಶಿಕ್ಷಣದ ಹೆಸರಿನಲ್ಲಿ ನಡೆಯುವ ಎಲ್ಲ ಸರ್ಕಸ್‌ಗಳಿಗೆ ಬಲಿಪಶುಗಳು ಇವರೇ. ವಿದ್ಯಾರ್ಥಿಗಳ ಕಲಿಕೆಯ ಅನುಭವ ಇದೆಲ್ಲದರ ಮಧ್ಯೆ ಕಳೆದುಹೋಗುತ್ತದೆ. ಮೊದಲ ಪೀಳಿಗೆಯ ಕಲಿಕೆದಾರರು, ಬದಿಗೊತ್ತಲ್ಪಟ್ಟ ಸಮುದಾಯಗಳ ವಿದ್ಯಾರ್ಥಿಗಳು, ಸಾಲದ ಹೊರೆ ಹೊರುವ ಪೋಷಕರು ಈ ಪ್ರಕ್ರಿಯೆಗಳಲ್ಲಿ ಭಾಗಿದಾರರಾಗಿರುವುದಿಲ್ಲ.
ಪ್ರಶ್ನೆಪತ್ರಿಕೆ ಸೋರಿಕೆ ಎನ್ನುವುದು ಶಿಕ್ಷಣ ವ್ಯವಸ್ಥೆಯಲ್ಲಿರುವ ದುರ್ಮಾಂಸದ ಒಂದು ಲಕ್ಷಣ. ಬೋಧನೆ-ಕಲಿಕೆಗೆ ಸಂಬಂಧಿಸಿದಂತೆ ಈ ವ್ಯವಸ್ಥೆಯ ವಿನ್ಯಾಸ ಮತ್ತು ಪರಿಕಲ್ಪನೆ ಉತ್ಪ್ರೇಕ್ಷಿತವಾಗಿದ್ದು, ಅದು ವಾಸ್ತವದಲ್ಲಿ ಕಾರ್ಯ ನಿರ್ವಹಿಸುವ ರೀತಿ ಬೇರೆಯೇ ಆಗಿರುತ್ತದೆ; ವಾಸ್ತವದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ವಿದ್ಯಾರ್ಥಿಗಳ ಆತ್ಮಹತ್ಯೆಗಳ ಮೂಲಕ ಅಭಿವ್ಯಕ್ತಗೊಳ್ಳುತ್ತದೆ. ಇದರಿಂದ, ಕಠಿಣ ಶ್ರಮ ಪಡುವ ಮಕ್ಕಳು ಉತ್ಸಾಹ ಕಳೆದು ಕೊಳ್ಳುತ್ತಾರೆ. ಯುಜಿಸಿ-ನೆಟ್ ಪರೀಕ್ಷೆ ರದ್ದು, ನೀಟ್ ಪ್ರಶ್ನೆಪತ್ರಿಕೆ ಸೋರಿಕೆ-ಇದೆಲ್ಲವೂ ಪರೀಕ್ಷೆ ವ್ಯವಸ್ಥೆಯನ್ನು ಎಷ್ಟು ಕೆಟ್ಟದಾಗಿ ನಿರ್ವಹಿಸಲಾಗುತ್ತಿದೆ ಎಂಬುದಕ್ಕೆ ಉದಾಹರಣೆ. ಆನಂತರ, ನೀಟ್-ಪಿಜಿ ಪರೀಕ್ಷೆ ಮುಂದಕ್ಕೆ ಹೋಯಿತು. ಅದು ಈ ತಿಂಗಳು(ಜುಲೈ) ನಡೆಯಲಿದೆ. ಇದಕ್ಕೆ ಮುನ್ನ ಸಿಬಿಎಸ್ಸಿ(ಸೆಂಟ್ರಲ್ ಬೋರ್ಡ್ ಫಾರ್ ಸೆಕೆಂಡರಿ ಎಜುಕೇಷನ್) ಶಾಲೆಗಳು ತಮ್ಮ ಆಂತರಿಕ ಮೌಲ್ಯಮಾಪನ ಪ್ರಕ್ರಿಯೆಗಳನ್ನು ಪುನರ್ ವಿಮರ್ಶೆಗೊಳಪಡಿಸಬೇಕು ಎಂದು ಸೂಚಿಸಿತ್ತು.
ಇದೆಲ್ಲದರ ಮೂಲ-ವೈದ್ಯ/ಇಂಜಿನಿಯರಿಂಗ್ ಪದವಿಗಳಿಗೆ ಇರುವ ಅತಿ ಬೇಡಿಕೆ ಮತ್ತು ಆದ್ಯತೆ. ಇವು ವಿದ್ಯಾರ್ಥಿಗಳಿಗೆ ಇರುವ ಏಕೈಕ ಭರವಸೆ ಎಂಬಂತೆ ಬಿಂಬಿಸಲಾಗಿದೆ. ಯಶಸ್ಸು ಖಚಿತ ಎಂದುಕೊಂಡಿರುವುದರಿಂದ, ಯಾವುದೇ ಬೆಲೆ ತೆತ್ತಾದರೂ, ವೈದ್ಯ ಇಲ್ಲವೇ ಇಂಜಿನಿಯರಿಂಗ್ ಓದಲೇಬೇಕೆಂದು ಕೌಟುಂಬಿಕ, ಸಾಮಾಜಿಕ ಮತ್ತು ಸಮಕಾಲೀನರ ಒತ್ತಡ ಇರುತ್ತದೆ. ಬೇರೆ ಪದವಿ ಪಡೆದವರಿಗೆ ಖಾಸಗಿ ಶಿಕ್ಷಣ ವ್ಯವಸ್ಥೆ ಮತ್ತು ರಾಜ್ಯ ಒಟ್ಟಾಗಿ ಸೇರಿಕೊಂಡು ಅನಿಶ್ಚಿತತೆ ಮತ್ತು ನಿರುದ್ಯೋಗವನ್ನು ಸೃಷ್ಟಿಸುತ್ತವೆ.
ಶಾಲಾ ಶಿಕ್ಷಣ ಮತ್ತು ಉನ್ನತ ಶಿಕ್ಷಣದ ನಡುವಿನ ನಿರಂತರತೆಯ ನಾಶದ ಮೂಲಕ ಇನ್ನೊಂದು ಹೆಜ್ಜೆ ಇಡುತ್ತದೆ. ಶಾಲೆಯಲ್ಲಿನ ಕಲಿಕೆ ಉನ್ನತ ಶಿಕ್ಷಣಕ್ಕೆ ಸ್ಪರ್ಧಿಸಲು ಸಾಕಾಗಬೇಕಿತ್ತು. ಆದರೆ, ಈ ಆಢ್ಯ ಕೋರ್ಸ್ ಗಳಿಗೆ ಕೋಚಿಂಗ್ ತರಗತಿಗಳ ನೆರವು ಬೇಕಿದ್ದು, ಇವು ಶಾಲೆ ಮತ್ತು ಉನ್ನತ ಶಿಕ್ಷಣದ ನಡುವೆ ಸೇತುವೆಯಾಗುತ್ತವೆ. ಉತ್ತಮ ಉದ್ಯೋಗದ ಆಮಿಷ ಮತ್ತು ಆರ್ಥಿಕ ಅನಿಶ್ಚಿತತೆಯನ್ನು ಜ್ಞಾನ ಪೂರೈಕೆದಾರರು ಎಂದು ಕರೆಸಿಕೊಳ್ಳುವ ವ್ಯಾಪಾರಿಗಳು ನಗದು ಮಾಡಿಕೊಳ್ಳುತ್ತಾರೆ.
ಶಾಲೆಗಳಲ್ಲಿ ಪ್ರವೇಶ ಪರೀಕ್ಷೆಗಳಿಗೆ ಅಗತ್ಯವಿರುವುದನ್ನು ಕಲಿಸದೆ ಇರುವುದು ಮತ್ತು ಶಾಲೆಯಲ್ಲಿ ಏನು ಕಲಿತಿದ್ದೀರಿ ಎಂದು ಕೇಳದೆ ಇರುವ ವ್ಯವಸ್ಥೆಯನ್ನು ರೂಪುಗೊಳಿಸಲಾಗಿದೆ. ಈ ವ್ಯತ್ಯಯವನ್ನು ಸರಿಪಡಿಸಿದರೆ, ವೈದ್ಯ-ಇಂಜಿನಿಯರಿಂಗ್ ಪರೀಕ್ಷೆಗೆ ತರಬೇತಿ ನೀಡುವ ಕೋಚಿಂಗ್ ವ್ಯವಸ್ಥೆ ಕಣ್ಮುಚ್ಚಿಕೊಳ್ಳುತ್ತದೆ. ಆದರೆ, ರಾಜ್ಯ ಇದನ್ನು ಮಾಡದೆ, ಕೋಚಿಂಗ್ ವ್ಯವಸ್ಥೆಯ ನಿಯಂತ್ರಣದ ಬಗ್ಗೆ ಮಾತನ್ನಾಡುತ್ತದೆ. ಇದರಿಂದ, ವಿದ್ಯಾರ್ಥಿಗಳ ಬದುಕಿನ ಜೊತೆಗೆ ಚೆಲ್ಲಾಟ ಆಡುವ ಮತ್ತು ಕುಟುಂಬದ ಮೇಲೆ ಸಾಲದ ಹೊರೆ ಹೇರುವ ವ್ಯವಸ್ಥೆಯೊಂದು ಬಲಗೊಳ್ಳುತ್ತದೆ. ಕೋಚಿಂಗ್ ವ್ಯವಸ್ಥೆಯ ಒಟ್ಟು ವಾರ್ಷಿಕ ಆದಾಯ 58,000 ಕೋಟಿ ರೂ. ಮತ್ತು ಇದು 2028ರೊಳಗೆ 1.3 ಲಕ್ಷ ಕೋಟಿ ಆಗುವ ನಿರೀಕ್ಷೆಯಿದೆ ಎಂಬ ಲೆಕ್ಕಾಚಾರ ಶಿಕ್ಷಣ ವ್ಯವಸ್ಥೆಯನ್ನು ತಲ್ಲಣಗೊಳಿಸಬೇಕಿತ್ತು. ಆದರೆ, ಸಾಧನೆಯ ಕಥನಗಳ ಉಬ್ಬರ, ಪತ್ರಿಕೆಗಳಲ್ಲಿ ನೂರಾರು ಪುಟಗಳ ಜಾಹೀರಾತುಗಳ ಮೂಲಕ ಈ ವ್ಯವಸ್ಥೆಯನ್ನು ಉತ್ತೇಜಿಸಿ, ಇನ್ನಷ್ಟು ಕೊಬ್ಬಿಸಲಾಗುತ್ತದೆ. ಪ್ರಶ್ನೆಪತ್ರಿಕೆ ಸೋರಿಕೆ ಎನ್ನುವುದು ಈ ನಗದೀಕರಣ ವ್ಯವಸ್ಥೆಯು ಎಷ್ಟು ದೂರವಾದರೂ ಹೋಗುತ್ತದೆ ಎನ್ನುವುದಕ್ಕೆ ಒಂದು ಉದಾಹರಣೆ.
ಉನ್ನತ ಶಿಕ್ಷಣ ವ್ಯವಸ್ಥೆ ಎಷ್ಟು ಅಸೂಕ್ಷ್ಮವಾಗಿದೆ ಎನ್ನುವುದು ಪದೇಪದೇ ಬೆಳಕಿಗೆ ಬಂದಿದೆ. ಇಂಥ ಒಂದು ಪ್ರಕರಣದಲ್ಲಿ ವಿದ್ಯಾರ್ಥಿಯ ಕೊಲೆಯಾಗಿದ್ದರೂ, ಅದನ್ನು ಆತ್ಮಹತ್ಯೆ ಎಂದು ಐಐಟಿ ಆಡಳಿತ ವಾದಿಸಿದ್ದರಿಂದ ಸಿಟ್ಟಿಗೆದ್ದ ಆತನ ಪೋಷಕರು, ನ್ಯಾಯಾಲಯದ ಕದ ತಟ್ಟಿದರು. ಸಂಸ್ಥೆಯ ನಿರ್ದೇಶಕ ಪೋಷಕರನ್ನು ಭೇಟಿಯಾಗಲೂ ನಿರಾಕರಿಸಿದ್ದ ಎಂಬುದು ವಿಚಾರಣೆ ವೇಳೆ ಗೊತ್ತಾಗಿ ನ್ಯಾಯಾಲಯ ಆತನಿಗೆ ಛೀಮಾರಿ ಹಾಕಿತು. ನಜೀಬ್ ಅಹ್ಮದ್ ಕಣ್ಮರೆ ಇಂದಿಗೂ ಬಗೆಹರಿಯದ ನಿಗೂಢವಾಗಿ ಉಳಿದಿದೆ. ಹೊಸದಿಲ್ಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದ ನಜೀಬ್, 15 ಅಕ್ಟೋಬರ್ 2016 ರಂದು ಅನುಮಾನಾಸ್ಪದವಾಗಿ ವಿಶ್ವವಿದ್ಯಾನಿಲಯದ ಕ್ಯಾಂಪಸ್‌ನಲ್ಲಿರುವ ಹಾಸ್ಟೆಲ್‌ನಿಂದ ಕಾಣೆಯಾದರು. ಈವರೆಗೆ ಅವರ ಸುಳಿವು ಸಿಕ್ಕಿಲ್ಲ. ಸಿಬಿಐ 2018ರಲ್ಲಿ ಈ ಪ್ರಕರಣದ ಕಡತವನ್ನು ಮುಚ್ಚಿತು. ರೋಹಿತ್ ವೇಮುಲ ಆತ್ಮಹತ್ಯೆಯು ವ್ಯವಸ್ಥೆ ಮಾಡಿದ ಹತ್ಯೆ. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಆತ್ಮಹತ್ಯೆಗಳು ಮಾಮೂಲಾಗಿ ಬಿಟ್ಟಿದ್ದು, ಜನ ಸ್ಪಂದಿಸುವುದನ್ನೇ ನಿಲ್ಲಿಸಿದ್ದಾರೆ. ಕಳೆದ ಎರಡು ದಶಕಗಳಲ್ಲಿ ಐಐಟಿಗಳಲ್ಲಿ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೋಚಿಂಗ್ ಕೇಂದ್ರಗಳದ್ದು ಇನ್ನೊಂದು ವಿಷಾದ ಕಥನ. ಐಐಟಿ ಕೋಚಿಂಗ್ ಕೇಂದ್ರಗಳ ಕಾಶಿಯಾದ ಕೋಟಾದಲ್ಲಿ ಕಳೆದ ಜನವರಿಯಿಂದ 12 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2023ರಲ್ಲಿ 26, 2022ರಲ್ಲಿ 15, 2019ರಲ್ಲಿ 18, 2018ರಲ್ಲಿ 20, 2017ರಲ್ಲಿ 7, 2016ರಲ್ಲಿ 17 ಮತ್ತು 2015ರಲ್ಲಿ 18 ಮಂದಿ ಜೀವ ತೆಗೆದುಕೊಂಡಿದ್ದಾರೆ. ಇವರೆಲ್ಲರೂ ತೀವ್ರ ಒತ್ತಡ-ಹತಾಶೆಗೆ ಬಲಿಯಾದವರು.
ಸಿಯುಇಟಿ(ವಿಶ್ವವಿದ್ಯಾನಿಲಯಗಳ ಸಾಮಾನ್ಯ ಪ್ರವೇಶ ಪರೀಕ್ಷೆ) ಕೇಂದ್ರಗಳನ್ನು ತಲುಪಲು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಬಹಳ ದೂರ ಪ್ರಯಾಣ ಮಾಡಬೇಕಾಗುತ್ತದೆ. ಅವರೊಟ್ಟಿಗೆ ಪೋಷಕರು ಗಂಟೆಗಟ್ಟಲೆ ಬಿಸಿಲು, ಮಳೆ, ಚಳಿಯಲ್ಲಿ ಕಳೆಯಬೇಕಾಗುತ್ತದೆ. ಪರೀಕ್ಷೆಗಳೇ ಇಲ್ಲದ ಶಿಕ್ಷಣ ವ್ಯವಸ್ಥೆಯನ್ನು ರಾಜ್ಯ ಒಪ್ಪುವುದಿಲ್ಲವಾದ್ದರಿಂದ, ಪರೀಕ್ಷೆಯನ್ನು ಸರಳ, ಕಡಿಮೆ ವೆಚ್ಚದ, ವಿದ್ಯಾರ್ಥಿಸ್ನೇಹಿ ಆಗಿರುವಂತೆ ಮಾಡಲು ಏನು ಸಮಸ್ಯೆಯಿದೆ?
ಪರೀಕ್ಷೆಗೆ ಪದೇಪದೇ ಹಾಜರಾಗಲು ಆರ್ಥಿಕ ಸಾಮರ್ಥ್ಯವಿಲ್ಲದವರು, ಪೋಷಕರ ತ್ಯಾಗದಿಂದ ಹಾಗೂ ಕುಟುಂಬಕ್ಕೆ ಹೊರೆಯಾದರೂ ಪರೀಕ್ಷೆ ತೆಗೆದುಕೊಳ್ಳುವವರನ್ನು ಈ ವ್ಯವಸ್ಥೆ ವಂಚಿಸುತ್ತದೆ. ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂದು ರದ್ದುಗೊಂಡ ನೀಟ್-ಯುಜಿ ಪರೀಕ್ಷೆಯನ್ನು ಮತ್ತೆ ನಡೆಸಿ, ಹೊಸದಾಗಿ ಶ್ರೇಣಿ ಪ್ರಕಟಿಸಿದರೆ ಇವರಿಗೆ ನ್ಯಾಯ ಸಿಗುವುದೇ? ಬದಲಿಗೆ, ಇಡೀ ವ್ಯವಸ್ಥೆ ಬದಿಗೊತ್ತಿದ ಸಮುದಾಯಗಳಿಗೆ ಸಮಮಟ್ಟದ ಆಟದ ಮೈದಾನವನ್ನು ಕೊಡುತ್ತಿಲ್ಲ ಎನ್ನುವುದು ಸಾಬೀತಾಗುತ್ತದೆ. ಆದಿವಾಸಿ ಇಲ್ಲವೇ ದಲಿತ ವಿದ್ಯಾರ್ಥಿಯೊಬ್ಬ ಇಂತಹ ಪರೀಕ್ಷೆ ಬರೆಯುತ್ತಾನೆ ಎಂದಿಟ್ಟುಕೊಳ್ಳೋಣ: ಆತ ಪ್ರಶ್ನೆಪತ್ರಿಕೆ ಖರೀದಿಸಲಾರ, ಕೋಚಿಂಗ್ ಪಡೆಯಲಾರ ಮತ್ತು ವಿಫಲನಾದರೆ ಮರು ಪರೀಕ್ಷೆ ತೆಗೆದುಕೊಳ್ಳಲಾರ. ಪ್ರಾಯಶಃ ಆತ ಆ ಸಮುದಾಯದ ಇಂತಹ ಪರೀಕ್ಷೆ ತೆಗೆದುಕೊಳ್ಳುತ್ತಿರುವ ಮೊದಲ ಪೀಳಿಗೆಯ ವಿದ್ಯಾರ್ಥಿ ಆಗಿರಬಹುದು. ಆನಂತರವೂ ಪ್ರಶ್ನೆಪತ್ರಿಕೆಯನ್ನು ಖರೀದಿಸಿದವನೇ ಮುನ್ನಡೆ ಸಾಧಿಸುತ್ತಾನೆ ಎನ್ನುವುದು ವಾಸ್ತವ. ಒಂದು ವೇಳೆ ಇಂತಹ ವಿದ್ಯಾರ್ಥಿಯೊಬ್ಬ ಪರೀಕ್ಷೆಗೆ ಹಾಜರಾದರೂ, ಪದಾರ್ಥೀಕರಣಗೊಂಡ ಶಿಕ್ಷಣ ವ್ಯವಸ್ಥೆ ಆತನನ್ನು ವಿಸರ್ಜಿಸುತ್ತದೆ. ದಲಿತರು, ಆದಿವಾಸಿಗಳು ಮತ್ತು ಹೆಣ್ಣುಮಕ್ಕಳು ಅತಿ ಹೆಚ್ಚು ಸಂಖ್ಯೆಯಲ್ಲಿ ಶಾಲೆ ತೊರೆಯುತ್ತಿರುವ ಸಮಾಜದಲ್ಲಿ ಉನ್ನತ ಶಿಕ್ಷಣ ದಿನೇದಿನೇ ದುಬಾರಿಯಾಗುತ್ತಿರುವುದು ಒಳ್ಳೆಯ ಲಕ್ಷಣವಲ್ಲ.
ರಾಷ್ಟ್ರೀಯ ಪರೀಕ್ಷಾ ಮಂಡಳಿ ವಜಾಗೊಳಿಸಬೇಕಿದೆ
2017ರಲ್ಲಿ ರಾಷ್ಟ್ರೀಯ ಪರೀಕ್ಷಾ ಮಂಡಳಿ(ಎನ್‌ಟಿಎ)ಯನ್ನು ವಿಶಿಷ್ಟ, ಸ್ವಸಾಮರ್ಥ್ಯದ ಮತ್ತು ಸ್ವಾಯತ್ತ ಸಂಸ್ಥೆಯಾಗಿ ರಚಿಸಲಾಯಿತು. ಇದರ ಮಹಾನಿರ್ದೇಶಕ ಹಾಗೂ ಆಡಳಿತ ಮಂಡಳಿಯನ್ನು ಕೇಂದ್ರ ಸರಕಾರ ನೇಮಿಸುತ್ತದೆ. ಇದೊಂದು ನೋಂದಾಯಿತ ಸೊಸೈಟಿ ಮತ್ತು ಪ್ರತ್ಯೇಕ ಶಾಸನಾತ್ಮಕ ಘಟಕ. ಪಾರದರ್ಶಕ, ಕ್ಷಮತೆ ಹಾಗೂ ಅಂತರ್‌ರಾಷ್ಟ್ರೀಯ ಗುಣಮಟ್ಟದ ಪರೀಕ್ಷೆ ಮೂಲಕ ವಿದ್ಯಾರ್ಥಿಗಳ ಆಯ್ಕೆಗೆ ಪ್ರವೇಶಪರೀಕ್ಷೆ ನಡೆಸುವುದು ಅದರ ಕೆಲಸ. ಮಂಡಳಿ ಜೆಇಇ(ಇಂಜಿನಿಯರಿಂಗ್), ನೀಟ್-ಯುಜಿ(ವೈದ್ಯಕೀಯ) ಮತ್ತು ಯುಜಿಸಿ-ನೆಟ್(ಎರಡನ್ನೂ ಈ ಹಿಂದೆ ಸಿಬಿಎಸ್‌ಸಿ ನಡೆಸುತ್ತಿತ್ತು) ಹಾಗೂ ದಿಲ್ಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯ(ಜೆಎನ್‌ಯು) ಹಾಗೂ ದಿಲ್ಲಿ ವಿಶ್ವವಿದ್ಯಾನಿಲಯದ ಪ್ರವೇಶ ಪರೀಕ್ಷೆ ನಡೆಸುತ್ತಿತ್ತು. ಎನ್‌ಟಿಎ ಎಲ್ಲ ವಿಶ್ವವಿದ್ಯಾನಿಲಯಗಳಿಗೆ ಪ್ರವೇಶ ಅಥವಾ ಸಾಮರ್ಥ್ಯ ಪರೀಕ್ಷೆಗಳನ್ನು ನಡೆಸಬೇಕೆಂದು ರಾಷ್ಟ್ರೀಯ ಶಿಕ್ಷಣ ಕಾರ್ಯನೀತಿ 2020ಯು ಶಿಫಾರಸು ನೀಡಿತು. ಎನ್‌ಟಿಎ ಒಟ್ಟು 20ಕ್ಕೂ ಅಧಿಕ ಪರೀಕ್ಷೆಗಳನ್ನು ನಡೆಸುತ್ತಿದೆ.
ಎನ್‌ಟಿಎ ಕಂಪ್ಯೂಟರ್ ಆಧರಿತ ಪರೀಕ್ಷೆಗಳನ್ನು ಮಾತ್ರ ನಡೆಸಬೇಕಿತ್ತು. ಇದರಿಂದ ಕಡಿಮೆ ಅವಧಿಯಲ್ಲಿ ಅಧಿಕ ಸಂಖ್ಯೆಗಳ ವಿಶ್ಲೇಷಣೆ ಸಾಧ್ಯವಿದೆ: ಪ್ರಶ್ನೆಪತ್ರಿಕೆ ಸೋರಿಕೆ, ಒಎಂಆರ್ ಹಾಳೆಗಳನ್ನು ಪರೀಕ್ಷೆ ನಂತರ ಭರ್ತಿ ಮಾಡುವ ಅಕ್ರಮ, ವಿವರಣಾತ್ಮಕ ಪರೀಕ್ಷೆಗಳಲ್ಲಿ ವಿಷಯಕ್ಕೆ ಸಂಬಂಧಿಸಿ ಲೋಪ...ಇತ್ಯಾದಿಗಳನ್ನು ತಡೆಯಬಹುದು ಎಂದು ಹೇಳಲಾಗಿತ್ತು. ಸಿಬಿಎಸ್‌ಸಿ ನಡೆಸುತ್ತಿದ್ದ ಯುಜಿಸಿ-ನೆಟ್ ಪರೀಕ್ಷೆಗಳನ್ನು 6 ವರ್ಷಗಳ ಹಿಂದೆ ಎನ್‌ಟಿಎಗೆ ವಹಿಸಿದ ಬಳಿಕ, ಲೇಖನಿ-ಕಾಗದ ಮಾದರಿಯ ಪರೀಕ್ಷೆಯನ್ನು ಕಂಪ್ಯೂಟರ್ ಆಧರಿತ ಪರೀಕ್ಷೆಯಾಗಿ ಬದಲಿಸಲಾಯಿತು. ಆದರೆ, ಏನು ಕಾರಣವೋ ಗೊತ್ತಿಲ್ಲ; 2024ರಲ್ಲಿ ಯುಜಿಸಿ-ನೆಟ್ ಪರೀಕ್ಷೆ ಲೇಖನಿ-ಕಾಗದ ಮಾದರಿಗೆ ಮರಳಿತು. 11 ಲಕ್ಷ ಮಂದಿ ಪರೀಕ್ಷೆ ಬರೆದ ಮಾರನೇ ದಿನ ಸರಕಾರ ಪರೀಕ್ಷೆಯನ್ನು ರದ್ದುಗೊಳಿಸಿತು. ಯುಜಿಸಿ-ನೆಟ್ ಪರೀಕ್ಷೆಗೆ ಹೊಸ ದಿನಾಂಕ ಘೋಷಣೆಯಾಗಿದ್ದು, ಪರೀಕ್ಷೆ ಕಂಪ್ಯೂಟರನ್ನು ಆಧರಿಸಿರಲಿದೆ! ಎನ್‌ಟಿಎ ನೀಟ್-ಯುಜಿ ಪರೀಕ್ಷೆಯನ್ನು ನಿರ್ವಹಿಸಲು ಮುಂದಾದಾಗ, ಗ್ರಾಮೀಣ ಪ್ರದೇಶದ ಮಕ್ಕಳಿಗೆ ಆನ್‌ಲೈನ್ ಪರೀಕ್ಷೆಗಳು ಸೂಕ್ತವಲ್ಲ ಎಂದು ಆರೋಗ್ಯ ಮಂತ್ರಾಲಯ ಕಂಪ್ಯೂಟರ್ ಆಧರಿತ ಪರೀಕ್ಷೆಗೆ ಪ್ರತಿರೋಧ ವ್ಯಕ್ತಪಡಿಸಿತು. ಜೊತೆಗೆ, ಪರೀಕ್ಷೆ ಹೇಗೆ ನಡೆಸಬೇಕು ಎಂಬ ಸುಪ್ರೀಂ ಕೋರ್ಟಿನ ಆದೇಶದ ಹಿನ್ನೆಲೆಯಲ್ಲಿ ಎನ್‌ಟಿಎ ಪರೀಕ್ಷೆಯೊಂದನ್ನು ಪರಕೀಯ ವಿಧಾನದಲ್ಲಿ ನಡೆಸಬೇಕಾಯಿತು.
ಎನ್‌ಟಿಎ ಆರಂಭದಿಂದಲೂ ಸಿಬ್ಬಂದಿ ಕೊರತೆ ಎದುರಿಸುತ್ತಿದೆ. ಏಜೆನ್ಸಿ ಆರಂಭಗೊಂಡಾಗ 25 ಪೂರ್ಣಾವಧಿ ಸಿಬ್ಬಂದಿ ಇದ್ದರು. ಆರಂಭದಿಂದಲೇ ಹಲವು ಕೆಲಸಗಳನ್ನು ತಾಂತ್ರಿಕ ಪಾಲುದಾರರಿಗೆ ಹೊರಗುತ್ತಿಗೆ ನೀಡಲಾಯಿತು. ಈ ವರ್ಷ ನೀಟ್-ಯುಜಿ ಪರೀಕ್ಷೆಯನ್ನು 24 ಲಕ್ಷ ಮಂದಿ ತೆಗೆದುಕೊಂಡಿದ್ದರು ಮತ್ತು ದೇಶ/ಹೊರದೇಶದ 5,000 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಿತು. ಎನ್‌ಟಿಎ ಕಡಿಮೆ ಸಿಬ್ಬಂದಿ ಇರುವ ವೃತ್ತಿಪರ ಸಂಸ್ಥೆಯಾಗಿರಬೇಕು; ಹೆಚ್ಚು ಜನರಿದ್ದರೆ ಅಪಾಯ ಎನ್ನುವುದು ಮೂಲಭೂತ ಆಶಯ. ರಾಷ್ಟ್ರೀಯ ಇನ್ಫರ್ಮೇಟಿಕ್ಸ್ ಕೇಂದ್ರ(ಎನ್‌ಐಸಿ)ಬಳಿ ಅಗತ್ಯ ಸಾಮರ್ಥ್ಯದ ಕೊರತೆ ಮತ್ತು ಐಟಿ ಮೂಲವ್ಯವಸ್ಥೆ ಇಲ್ಲದೆ ಇರುವುದರಿಂದ, ಭಾರೀ ಪ್ರಮಾಣದ ಕಂಪ್ಯೂಟರ್ ಆಧರಿತ ಪರೀಕ್ಷೆ ನಡೆಸಲು ಬಲಿಷ್ಠ ಸೈಬರ್ ಸುರಕ್ಷೆ ಇರುವ 3ನೇ ತಾಂತ್ರಿಕ ಭಾಗಿದಾರರನ್ನು ಆಯ್ಕೆ ಮಾಡಿಕೊಳ್ಳಬೇಕಿತ್ತು. ಇಂತಹ ಒಳಗೊಳ್ಳುವಿಕೆಗಳು ಲೋಪಗಳಿಗೆ ಕಾರಣವಾದವು.
ಜೊತೆಗೆ, ಎನ್‌ಟಿಎ 7 ವರ್ಷಗಳ ನಂತರವೂ ದೊಡ್ಡ ಪ್ರಮಾಣದ ಲೇಖನಿ-ಕಾಗದ ಪರೀಕ್ಷೆಯನ್ನು ನಡೆಸಲು ಬೇಕಾದ ವ್ಯವಸ್ಥೆಯನ್ನು ಅಭಿವೃದ್ಧಿಗೊಳಿಸಿಕೊಳ್ಳುವಲ್ಲಿ ವಿಫಲವಾಗಿದೆ. ಪ್ರಶ್ನೆಪತ್ರಿಕೆ ರಚನೆ, ಮುದ್ರಣಾಲಯಕ್ಕೆ ರವಾನೆ, ಮುದ್ರಣಾಲಯ-ಪರೀಕ್ಷಾ ಕೇಂದ್ರಗಳ ಆಯ್ಕೆ, ಮುದ್ರಿತ ಪ್ರಶ್ನೆಪತ್ರಿಕೆಗಳ ಸಂಗ್ರಹ, ಪರೀಕ್ಷಾ ಕೇಂದ್ರಗಳಿಗೆ ವಿತರಣೆ, ಪರೀಕ್ಷೆ ಬಳಿಕ ಉತ್ತರಪತ್ರಿಕೆಗಳನ್ನು ಮೌಲ್ಯಮಾಪನ ಕೇಂದ್ರಗಳಿಗೆ ರವಾನೆ ಹಾಗೂ ಮೌಲ್ಯಮಾಪನಕ್ಕೆ ಸದೃಢ, ಲೋಪರಹಿತ ವ್ಯವಸ್ಥೆಯನ್ನು ಅಭಿವೃದ್ಧಿಗೊಳಿಸಿಕೊಂಡಿಲ್ಲ. ಈ ಸರಣಿಯ ಪ್ರತೀ ಹಂತದಲ್ಲೂ ಲೋಪದ ಸಾಧ್ಯತೆ ಇದೆ.
ದಾರಿ ಯಾವುದು?
ಇರುವ ಮಾರ್ಗಗಳೆಂದರೆ, ಎನ್‌ಟಿಎ ವಿಸರ್ಜನೆ, ಪರೀಕ್ಷೆಯಿಲ್ಲದ ಶಿಕ್ಷಣ ವ್ಯವಸ್ಥೆಗೆ ಸಮಾಜ-ಸರಕಾರ ಸಮ್ಮತಿಸುವುದಿಲ್ಲವಾದ್ದರಿಂದ ಎನ್‌ಟಿಎ ವಿಕೇಂದ್ರೀಕರಣ, ನೀಟ್ ಮತ್ತಿತರ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ರಾಚನಿಕ ಲೋಪಗಳನ್ನು ಸರಿಪಡಿಸುವ ಮೂಲಕ ಸಹನೀಯಗೊಳಿಸುವುದು.
* ಎನ್‌ಟಿಎಗೆ ಮೂಲಸೌಲಭ್ಯ ಹಾಗೂ ಅಗತ್ಯ ಮಾನವ ಸಂಪನ್ಮೂಲ ಒದಗಿಸುವ ಮೂಲಕ ಭಾರೀ ಪ್ರಮಾಣದ ಲೇಖನಿ-ಕಾಗದ ಪರೀಕ್ಷೆ ನಡೆಸಲು ಸನ್ನದ್ಧಗೊಳಿಸುವುದು. ಲೇಖನಿ-ಕಾಗದ ಪರೀಕ್ಷೆಯು ತಂತ್ರಜ್ಞಾನಕ್ಕೆ ಪ್ರವೇಶವಿಲ್ಲದ ಗ್ರಾಮೀಣ ಮಕ್ಕಳಿಗೆ ಅನುಕೂಲಕರ.
* ಎನ್‌ಟಿಎ ವಿಕೇಂದ್ರೀಕರಣ. 20ಕ್ಕೂ ಅಧಿಕ ಪರೀಕ್ಷೆಗಳನ್ನು ನಡೆಸುವ ಎನ್‌ಟಿಎ, ತೀವ್ರ ಒತ್ತಡಕ್ಕೆ ಸಿಲುಕಿದೆ. ಇಂತಹ ಸಂದರ್ಭದಲ್ಲಿ ಲೋಪಗಳು ಹೆಚ್ಚುತ್ತವೆ. ಜೆಎನ್‌ಯು ಸೇರಿದಂತೆ ಕೆಲವು ವಿವಿಗಳು ಮತ್ತು ತಮಿಳುನಾಡು ಮತ್ತಿತರ ರಾಜ್ಯ ಸರಕಾರಗಳು ತಮ್ಮದೇ ಪ್ರವೇಶ ಪರೀಕ್ಷೆ ನಡೆಸಲು ಅವಕಾಶ ಇರಬೇಕೆಂದು ಒತ್ತಾಯಿಸುತ್ತಿವೆ. ವಿಶ್ವವಿದ್ಯಾನಿಲಯಗಳ ವೈವಿಧ್ಯಮಯ ಅಗತ್ಯಗಳನ್ನು ಪೂರೈಸಲು ಹೆಚ್ಚು ವಿಕೇಂದ್ರೀಕೃತ ವಿನ್ಯಾಸ ಅಗತ್ಯವಿದೆ ಎಂದು ವಾದಿಸುತ್ತಿವೆ.
* ಮೌಲ್ಯಮಾಪನ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಸುಧಾರಣೆ. ವಿದ್ಯಾರ್ಥಿಗಳ ಮೇಲೆ ಅಪಾರ ಒತ್ತಡ ಹಾಗೂ ಪೋಷಕರ ಮೇಲೆ ಆರ್ಥಿಕ ಹೊರೆ ಹೇರುವ, ಕೋಚಿಂಗ್ ಉದ್ಯಮವನ್ನು ಸಲಹುವ ಮತ್ತು ಅಕ್ರಮಕ್ಕೆ ಒತ್ತುನೀಡುವ ಪ್ರವೇಶ ಪರೀಕ್ಷೆ ಬದಲು, ಶಾಲಾ ಶಿಕ್ಷಣದ ಕೊನೆಯ ವರ್ಷದಲ್ಲಿ ಜ್ಞಾನ, ಸೈದ್ಧಾಂತಿಕ ತಿಳಿವಳಿಕೆ ಹಾಗೂ ಸಾಮರ್ಥ್ಯವನ್ನು ಅಳೆಯಬಲ್ಲ ಪರೀಕ್ಷೆಯನ್ನು ನಡೆಸಬೇಕು. ಇದರ ಬಳಿಕ ಉನ್ನತ ಶಿಕ್ಷಣಕ್ಕೆ ಪ್ರವೇಶ ಪ್ರಕ್ರಿಯೆ ನಡೆಯಬೇಕು. ಈ ಪರೀಕ್ಷೆಯ ಮೇಲುಸ್ತುವಾರಿಯನ್ನು ಎನ್‌ಟಿಎಗೆ ನೀಡಬಹುದು.
* ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಮಾಹಿತಿ ಪ್ರಕಾರ, ರಾಜ್ಯದಲ್ಲಿ 2023ರಲ್ಲಿ ಲಭ್ಯವಿದ್ದ 10,917 ವೈದ್ಯ ಸೀಟುಗಳಲ್ಲಿ 7,012 ಸೀಟುಗಳು ಮರುಪರೀಕ್ಷೆ ತೆಗೆದುಕೊಂಡವರ ಪಾಲಾಗಿದೆ(ಶೇ.64.2). 2024ರಲ್ಲಿ ಕೌನ್ಸೆಲಿಂಗ್‌ಗೆ ಆಯ್ಕೆಯಾದ 89,088 ವಿದ್ಯಾರ್ಥಿಗಳಲ್ಲಿ 53,616 ಮಂದಿ(ಶೇ.60.2) ಮರುಪರೀಕ್ಷೆ ತೆಗೆದುಕೊಂಡವರು. ಇದರಲ್ಲಿ 1999, 2000, 2004, 2009, 2011, 2013, 2015ರಲ್ಲಿ ಪಿಯುಸಿ ಮುಗಿಸಿದವರು ಇದ್ದಾರೆ! ಸರಕಾರದ ಹುದ್ದೆಗಳಿಗೆ ವಯೋಮಿತಿ ಇರುತ್ತದೆ; ಐಎಎಸ್-ಕೆಎಎಸ್ ಪರೀಕ್ಷೆಗೆ ಇಂತಿಷ್ಟೇ ಬಾರಿ ಪರೀಕ್ಷೆ ತೆಗೆದುಕೊಳ್ಳಬಹುದು ಎಂಬ ನಿರ್ಬಂಧ ಇದೆ. ಆದರೆ, ನೀಟ್ ಪರೀಕ್ಷೆಯನ್ನು ಎಷ್ಟು ಸಲ ಆದರೂ ತೆಗೆದುಕೊಳ್ಳಬಹುದು. ಸಾಮಾಜಿಕ ನ್ಯಾಯಕ್ಕೆ ಧಕ್ಕೆ ಬಾರದೆ ಇದ್ದರೆ, ನೀಟ್ ಪರೀಕ್ಷೆಗೂ ಇಂಥದ್ದೇ ನಿರ್ಬಂಧ ವಿಧಿಸಬಹುದು.
ಕೋಚಿಂಗ್ ಕೇಂದ್ರಗಳ ನಿಯಂತ್ರಣ
ರಾಜ್ಯದಲ್ಲಿ 2,000ಕ್ಕೂ ಅಧಿಕ ಕೋಚಿಂಗ್ ಕೇಂದ್ರಗಳಿವೆ. ಮರುಪರೀಕ್ಷೆ ತೆಗೆದುಕೊಳ್ಳುವವರಲ್ಲಿ ಹೆಚ್ಚಿನವರು ಇಂತಹ ಒಂದು ಕೇಂದ್ರವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ದುಬಾರಿ ಶುಲ್ಕ ವಿಧಿಸುವ ಈ ಕೇಂದ್ರಗಳು ವಸತಿಸಹಿತ, ನಿರಂತರ ತರಬೇತಿ ನೀಡಿ ಪರೀಕ್ಷೆಗೆ ಸಿದ್ಧಪಡಿಸುತ್ತವೆ. ಉನ್ನತ ಶಿಕ್ಷಣ ಇಲಾಖೆ ಪ್ರಕಾರ, ಈ ಕೋಚಿಂಗ್ ಕೇಂದ್ರಗಳು ಕರ್ನಾಟಕ ಶಿಕ್ಷಣ ಕಾಯ್ದೆ 1983ರ ಪ್ರಕಾರ ನೋಂದಣಿ ಮಾಡಿಕೊಂಡು, 25,000 ರೂ. ಶುಲ್ಕ ಪಾವತಿಸಬೇಕು; 22 ಶರತ್ತುಗಳನ್ನು ಅನುಸರಿಸಬೇಕು. ಇದನ್ನು ಯಾರೂ ಪಾಲಿಸಿದಂತೆ ಇಲ್ಲ. ಶಿಕ್ಷಣ ದುಬಾರಿಯಾದಂತೆ, ಆರ್ಥಿಕ ಸಂಪನ್ಮೂಲವಿಲ್ಲದವರು, ಒಂದು ವರ್ಷ ಶಿಕ್ಷಣ ಸ್ಥಗಿತಗೊಳಿಸಿ ತರಬೇತಿ ತೆಗೆದುಕೊಳ್ಳಲು ಆಗದವರು, ಗ್ರಾಮೀಣ ಪ್ರದೇಶದ ಅಥವಾ ಕನ್ನಡ ಮಾಧ್ಯಮದಲ್ಲಿ ಓದಿದವರು ಹಿಂದೆ ಉಳಿಯುತ್ತಾರೆ. ನೀಟ್ 2024ರಲ್ಲಿ ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆದವರು 1,065 ಮಂದಿ ಮಾತ್ರ.
ಪ್ರವೇಶ ಪರೀಕ್ಷೆಗಳು ಇರಲೇಬೇಕು ಎಂದಾದಲ್ಲಿ, ಎಲ್ಲ ವಿದ್ಯಾರ್ಥಿಗಳಿಗೂ ಅಗತ್ಯ ತರಬೇತಿ ಸಿಗುವಂತೆ ಆಗಬೇಕು. ಒಂದು ಮತ್ತು 2ನೇ ಹಂತದ ಪಟ್ಟಣಗಳನ್ನು ಹೊರತುಪಡಿಸಿದರೆ, ಬೇರೆ ಕಡೆ ನೀಟ್-ಜೆಇಇ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಸಿಗುವುದಿಲ್ಲ. ಆದ್ದರಿಂದ, ಪಿಯು ಹಾಗೂ ಪದವಿ ಹಂತದಲ್ಲಿ ಇಂತಹ ಪರೀಕ್ಷೆಗಳಿಗೆ ಸರಕಾರವೇ ತರಬೇತಿ ನೀಡುವುದು ಸೂಕ್ತ. ಈ ಹಿಂದೆ ಉನ್ನತ ಶಿಕ್ಷಣ ಇಲಾಖೆಯು ಆನ್ ಲೈನ್ ಕಾರ್ಯಕ್ರಮ ‘ಗೆಟ್ ಸೆಟ್ ಗೋ’ ಮೂಲಕ ಇಂಜಿನಿಯರಿಂಗ್ ಕೋರ್ಸ್‌ಗಳಿಗೆ ತರಬೇತಿ ನೀಡುತ್ತಿತ್ತು. ಭೌತಶಾಸ್ತ್ರ ಮತ್ತು ರಸಾಯನ ಶಾಸ್ತ್ರ ವಿಷಯದಲ್ಲಿ ತರಬೇತಿ ನೀಡಿ, ವೈದ್ಯ ಸೀಟಿನ ಆಕಾಂಕ್ಷಿಗಳಿಗೂ ನೆರವಾಗುತ್ತಿತ್ತು. ಈ ವರ್ಷ ಅದು ನಡೆದಿಲ್ಲ. 2024ರ ಆಯವ್ಯಯದಲ್ಲಿ ಎಲ್ಲ ಸರಕಾರಿ ಪಿಯು ಕಾಲೇಜುಗಳಲ್ಲಿ ಸಿಇಟಿ-ನೀಟ್ ತರಬೇತಿ ನೀಡುವುದಾಗಿ ಸರಕಾರ ಹೇಳಿಕೊಂಡಿತ್ತು. ಆದರೆ, ಈ ದಿಕ್ಕಿನಲ್ಲಿ ಯಾವುದೇ ಕೆಲಸ ಆದಂತೆ ಇಲ್ಲ.
ಸ್ಪರ್ಧೆ ಇರಲೇಬೇಕು ಎಂದಾದಲ್ಲಿ, ಎಲ್ಲರಿಗೂ ಸಮಾನಾವಕಾಶ ಹಾಗೂ ಹಿಂದುಳಿದವರಿಗೆ ಸ್ಪರ್ಧಿಸಲು ಅಗತ್ಯವಾದ ತರಬೇತಿ ನೀಡಬೇಕು. ಕೀವು ತುಂಬಿರುವ ಈ ವ್ಯವಸ್ಥೆಗೆ ನಾವೀನ್ಯತೆ, ಮರುಕಲ್ಪನೆ, ಹೊಸ ಚಿಂತನೆ ಅಗತ್ಯವಿದೆ. ತೀವ್ರ ಸ್ಪರ್ಧೆ, ಅಧಿಕಾರಶಾಹಿಯ ಹಿಡಿತ, ಕೇಂದ್ರೀಕರಣ ಮತ್ತು ಪ್ರಜಾತಂತ್ರವಿರೋಧಿ ನಿರ್ಧಾರ ತೆಗೆದುಕೊಳ್ಳುವಿಕೆಗೆ ಪಕ್ಕಾಗಿರುವ ಶಿಕ್ಷಣ ವ್ಯವಸ್ಥೆಯ ಮರುರಚನೆ ಆಗಬೇಕಿದೆ. ‘ನೀವು ಸಾಮಾಜಿಕ ಸ್ವಾತಂತ್ರ್ಯವನ್ನು ಗಳಿಸಿಕೊಳ್ಳದೇ ಹೋದರೆ, ಕಾನೂನು ನೀಡುವ ಸ್ವಾತಂತ್ರ್ಯದಿಂದ ಯಾವುದೇ ಪ್ರಯೋಜನವಿಲ್ಲ’ ಎಂದು ಡಾ.ಬಿ.ಆರ್. ಅಂಬೇಡ್ಕರ್ ಹೇಳಿದ್ದರು. ಸಂವಿಧಾನ ನಮಗೆ ಶೈಕ್ಷಣಿಕ-ಸಾಮಾಜಿಕ ಸ್ವಾತಂತ್ರ್ಯ ನೀಡಿದೆ. ಆದರೆ, ಅದು ಎಲ್ಲರಿಗೂ ಲಭ್ಯವಾಗುವಂತೆ ಮಾಡುವುದು ರಾಜಕೀಯ ಪಕ್ಷಗಳ ಆದ್ಯತೆ ಆಗುವಂತೆ ಜನರಿಂದ ಒತ್ತಡ ಹೆಚ್ಚಬೇಕಿದೆ.