ಮತ್ತೆ ಮತ್ತೆ ಕಾಡುತ್ತಿರುವ ನಿಫಾ, ಕ್ಯಾಸನೂರು ಅರಣ್ಯ ಕಾಯಿಲೆ
ದುರಂತವೆಂದರೆ, ಜನ ರೋಗಪೀಡಿತರಾದಾಗ ವ್ಯವಸ್ಥೆ ಎಚ್ಚೆತ್ತುಕೊಳ್ಳುತ್ತದೆ. ಸಮಸ್ಯೆಯನ್ನು ತಾತ್ಕಾಲಿಕವಾಗಿ ಬಗೆಹರಿಸಿದ ಬಳಿಕ ಮರೆತು ನಿದ್ರೆಗೆ ಜಾರುತ್ತದೆ. ಇಂತಹ ಕಾಯಿಲೆಗಳು ಹೇಗೆ ಸಂಭವಿಸುತ್ತವೆ, ಕಾರಣಗಳೇನು, ರೋಗ ಹರಡದಂತೆ ತಡೆಯಲು ಏನು ಮಾಡಬೇಕು ಮತ್ತು ಸಂಭವಿಸಿದಾಗ ವ್ಯಾಪಿಸದಂತೆ ತಡೆಯುವುದು ಹೇಗೆ ಎಂಬ ಬಗ್ಗೆ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿ ಮಾಹಿತಿ ಇರಬೇಕು. ಮುಖ್ಯವಾಗಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಿಬ್ಬಂದಿ, ಆಶಾ ಸೇರಿದಂತೆ ತಳ ಮಟ್ಟದ ಆರೋಗ್ಯ ಕಾರ್ಯಕರ್ತರಿಗೆ ಇಂತಹ ರೋಗಗಳ ಲಕ್ಷಣದ ಅರಿವು ಇರಬೇಕು ಹಾಗೂ ಅವರಲ್ಲಿ ಜಾಗೃತಿ ಮೂಡಿಸಬೇಕು. ಸ್ಥಳೀಯ, ರಾಷ್ಟ್ರೀಯ ಮತ್ತು ಜಾಗತಿಕ ಮಟ್ಟದಲ್ಲಿ ಹಲವು ಏಜೆನ್ಸಿಗಳು ಸಂಯೋಜಿತವಾಗಿ ಕೆಲಸ ಮಾಡಿದರಷ್ಟೇ ರೋಗ ನಿವಾರಣೆ ಸಾಧ್ಯ. ಅದು ಅಸಾಧ್ಯ ಕೆಲಸವಲ್ಲ.
ಕೇರಳಕ್ಕೆ ಆರು ವರ್ಷದಲ್ಲಿ 4ನೇ ಬಾರಿ ನಿಫಾ ಕಾಲಿಟ್ಟಿದೆ. ಅದೇ ಹೊತ್ತಿನಲ್ಲಿ ಕರ್ನಾಟಕದಲ್ಲಿ ಮಂಗನ ಕಾಯಿಲೆ ಅಥವಾ ಕ್ಯಾಸನೂರು ಅರಣ್ಯ ಕಾಯಿಲೆ(ಕೆಎಫ್‌ಡಿ) ಋತು ಅಕ್ಟೋಬರ್‌ನಲ್ಲಿ ಆರಂಭವಾಗಲಿದೆ. ಸಾಂಕ್ರಾಮಿಕ ರೋಗ ಇಲ್ಲವೇ ಸಮಸ್ಯೆಯೊಂದು ಕುತ್ತಿಗೆಗೆ ಬಂದಾಗ ಮಾತ್ರ ಪ್ರತಿಕ್ರಿಯಿಸುವ ಪ್ರವೃತ್ತಿಯಿಂದಾಗಿ, ಯಾವ ಸಮಸ್ಯೆಯೂ ಸಂಪೂರ್ಣವಾಗಿ ಬಗೆಹರಿಯದ ಸನ್ನಿವೇಶವನ್ನು ಸೃಷ್ಟಿಸಿಕೊಂಡಿದ್ದೇವೆ.
1999ರಲ್ಲಿ ಮಲೇಶ್ಯದ ಸುಂಗೈನಿಫಾದಲ್ಲಿ ಹಂದಿ ಸಾಕಣೆದಾರನ ದೇಹದಲ್ಲಿ ಈ ವೈರಾಣು ಮೊದಲು ಪತ್ತೆಯಾಯಿತು. ಹೀಗಾಗಿ, ಅದಕ್ಕೆ ‘ನಿಫಾ’ ಎಂಬ ನಾಮಕರಣ. ಫ್ಲೈಯಿಂಗ್ ಫಾಕ್ಸ್ ಬಾವಲಿಗಳು ತಿಂದು ಬಿಟ್ಟ ಹಣ್ಣುಗಳನ್ನು ಸೇವಿಸಿದ ಹಂದಿಗಳ ಮೂಲಕ ವೈರಾಣು ಮನುಷ್ಯರ ದೇಹ ಸೇರಿತು. 300 ನಿಫಾ ಪ್ರಕರಣಗಳಲ್ಲಿ 105 ಮಂದಿ ಮೃತಪಟ್ಟರು. ಸರಕಾರ 850 ಹಂದಿಸಾಕಣೆ ಕೇಂದ್ರಗಳ ಮೇಲೆ ತೀವ್ರ ನಿಗಾ ಇರಿಸಿತಲ್ಲದೆ, 2 ಹಂತಗಳಲ್ಲಿ 11 ಲಕ್ಷ ಹಂದಿಗಳನ್ನು ಕೊಂದಿತು. ಹತ್ಯೆಯಲ್ಲಿ ಪಾಲ್ಗೊಂಡವರು, ಮರಣೋತ್ತರ ಪರೀಕ್ಷೆ ನಡೆಸಿದವರು ಮತ್ತು ಪ್ರಯೋಗಾಲಯದ ಸಿಬ್ಬಂದಿಗೆ ಸೋಂಕು ಹರಡಿತು. ಈ ಮೂಲೋತ್ಪಾಟನೆ ಬಳಿಕ ಮಲೇಶ್ಯದಲ್ಲಿ ನಿಫಾ ಕಾಣಿಸಿಕೊಂಡಿಲ್ಲ. ಸಿಂಗಾಪುರದಲ್ಲಿ ಕುದುರೆಗಳ ಮೂಲಕ ವೈರಾಣು ಮನುಷ್ಯರ ದೇಹ ಸೇರಿತು. 2001ರಲ್ಲಿ ಬಾಂಗ್ಲಾದೇಶದಲ್ಲಿ ತಾಳೆ ಹೆಂಡ ಕುಡಿದವರಿಗೆ ನಿಫಾ ಬಂತು. ಈ ವೈರಾಣು ಮಲೇಶ್ಯದಲ್ಲಿ ಕಂಡುಬಂದ ವೈರಾಣುಗಿಂತ ಭಿನ್ನವಾಗಿತ್ತು. ಆನಂತರ ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ 2001ರಲ್ಲಿ 66 ಮಂದಿಗೆ ಸೋಂಕು ತಗಲಿತು; ಮರಣ ಪ್ರಮಾಣ ಶೇ.74 ಇತ್ತು. ಆಗ ರಕ್ತದ ನಮೂನೆಗಳನ್ನು ನಿಫಾ ವೈರಾಣುವನ್ನು ದೃಷ್ಟಿಯಲ್ಲಿಟ್ಟುಕೊಂಡು ಪರೀಕ್ಷಿಸಿರಲಿಲ್ಲ. ಕೆಲವು ವರ್ಷಗಳ ಬಳಿಕ ಸೋಂಕಿಗೆ ನಿಫಾ ಕಾರಣ ಎಂದು ಗೊತ್ತಾಯಿತು. 2007ರಲ್ಲಿ ಪಶ್ಚಿಮ ಬಂಗಾಳದ ನಡಿಯಾ ಜಿಲ್ಲೆಯ ಗಡಿ ಭಾಗದ ಗ್ರಾಮವೊಂದರಲ್ಲಿ ಸೋಂಕು ಹರಡಿ, ಐವರು ಮೃತಪಟ್ಟರು. ಬಾಂಗ್ಲಾ ಮತ್ತು ಇಂಡಿಯಾದಲ್ಲಿ ಕಂಡುಬಂದಿರುವ ತಳಿಗಳು ಮಲೇಶ್ಯದಲ್ಲಿ ಕಾಣಿಸಿಕೊಂಡಿದ್ದ ತಳಿಗಿಂಥ ವಿಭಿನ್ನ ಎನ್ನುತ್ತಾರೆ ಸ್ಟ್ಯಾನ್ಫಿರ್ಡ್ ವಿಶ್ವವಿದ್ಯಾನಿಲಯದ ವಿಜ್ಞಾನಿ ಸ್ಟೀಫನ್ ಲೂಬಿ.
ನಿಫಾ ಪ್ರಾಣಿಯಿಂದ ಮನುಷ್ಯರಿಗೆ ಹರಡುವ(ಝೂನೋಟಿಕ್) ಪ್ಯಾರಾಮೈಕ್ಸೋವೈರಾಣು. ಟೆರೋಪೋಡಿಡೆ ಕುಟುಂಬಕ್ಕೆ ಸೇರಿದ ಹಣ್ಣಿನ ಬಾವಲಿಗಳು ಈ ವೈರಾಣುವಿನ ಸ್ವಾಭಾವಿಕ ಅಭ್ಯಾಗತರು. ನಡಿಯಾ ಪ್ರಕರಣದ ನಂತರ ಮೇ-ಜೂನ್ 2018ರಲ್ಲಿ ಕೋಝಿಕ್ಕೋಡ್-ಮಲಪ್ಪುರಂ ಜಿಲ್ಲೆಯಲ್ಲಿ ಸೋಂಕು ಕಾಣಿಸಿಕೊಂಡಿತು. 21 ಮಂದಿ ಮೃತಪಟ್ಟರು. ಜೂನ್ 2019ರಲ್ಲಿ ಎರ್ನಾಕುಲಂ ಜಿಲ್ಲೆಯಲ್ಲಿ ಸೋಂಕಿತ ವ್ಯಕ್ತಿಯೊಬ್ಬರು ಗುಣ ಹೊಂದಿದರು. ಆಗಸ್ಟ್ 31, 2021ರಲ್ಲಿ ಕೋಝಿಕ್ಕೋಡ್ ಜಿಲ್ಲೆಯ ಪಳೂರಿನ ಮುಹಮ್ಮದ್ ಹಶೀಮ್(12) ಎಂಬ ಬಾಲಕ ಮೃತಪಟ್ಟ. 2023ರಲ್ಲಿ ಈವರೆಗೆ ಆರು ಪ್ರಕರಣಗಳು ಪತ್ತೆಯಾಗಿವೆ. ಕೋಝಿಕ್ಕೋಡ್‌ನ ಮರುತೊಂಕಾರ ಗ್ರಾಮಪಂಚಾಯತ್‌ಗೆ ಸೇರಿದ ಕಲ್ಲಡ ಗ್ರಾಮದ ಕಲ್ಲತ್ ಮುಹಮ್ಮದ್ ಅಲಿ ಆಗಸ್ಟ್ 30ರಂದು ಮೃತಪಟ್ಟರು. ಅವರ ಪತ್ನಿ, ಮಗ, ಭಾವಮೈದುನ ಹಾಗೂ ಆತನ ಮಗು ಸೋಂಕಿಗೀಡಾದರು. ಸೆಪ್ಟಂಬರ್ 11ರಂದು ವಡಕರದ ಖಾಸಗಿ ಆಸ್ಪತ್ರೆಯಲ್ಲಿ ಅಯ್ಯನಚೇರಿಯ ಎಂ.ಹ್ಯಾರಿಸ್ ಎಂಬವರು ಮೃತಪಟ್ಟರು. ಇವರಿಬ್ಬರಿಗೂ ಸಾಮಾನ್ಯ ಕೊಂಡಿ ಏನಾದರೂ ಇದೆಯೇ ಎಂದು ಪರಿಶೀಲಿಸಿದಾಗ, ಇಬ್ಬರೂ ಒಂದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು ಪತ್ತೆಯಾಯಿತು. ಸೋಂಕಿತರ ಸಂಪರ್ಕಕ್ಕೆ ಬಂದ 800 ಮಂದಿಯನ್ನು ಪ್ರತ್ಯೇಕಿಸಿ ಇರಿಸಲಾಯಿತು.
ಕೋಝಿಕ್ಕೋಡ್‌ನ 45 ವಾರ್ಡ್‌ಗಳು ಮತ್ತು ಜಿಲ್ಲೆಯ 9 ಗ್ರಾಮ ಪಂಚಾಯತ್‌ಗಳನ್ನು ರೋಗನಿಗ್ರಹ ವಲಯ ಎಂದು ಜಿಲ್ಲಾಡಳಿತ ಘೋಷಿಸಿತು. ಜನರ ಸಂಚಾರ, ಸಾರ್ವಜನಿಕ ಸಭೆಗಳನ್ನು ನಿರ್ಬಂಧಿಸಿ, ಶಾಲೆ-ಕಾಲೇಜುಗಳಿಗೆ ರಜೆ ನೀಡಲಾಯಿತು. ಕೇಂದ್ರ ಸರಕಾರ ತಜ್ಞರ ತಂಡವನ್ನು ಕಳಿಸಿದ್ದು, ಸರಕಾರಿ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯಲ್ಲಿ ಸಂಚಾರ ಪ್ರಯೋಗಶಾಲೆಯನ್ನು ಚಾಲನೆಗೊಳಿಸಲಾಗಿದೆ. ಪ್ರತ್ಯೇಕ ಇರಿಸುವ ವಿಭಾಗವನ್ನು ಸಿದ್ಧಪಡಿಸಲಾಗಿದೆ. ಆರೋಗ್ಯ ಸಚಿವೆ ವೀಣಾ ಜಾರ್ಜ್, ಜಿಲ್ಲಾಧಿಕಾರಿ ಎ.ಗೀತಾ, ಆರೋಗ್ಯ ಇಲಾಖೆ ನಿರ್ದೇಶಕಿ ಡಾ. ಕೆ.ಜೆ. ರೀನಾ, ಉಪ ಕಲೆಕ್ಟರ್ ಚೆಲ್ಸಾಸಿನಿ, ಡೆಪ್ಯುಟಿ ಕಲೆಕ್ಟರ್ ಇ. ಅನಿತಾ ಕುಮಾರಿ, ಹೆಚ್ಚುವರಿ ಡಿಎಂಒ ಡಾ. ವಿ.ಆರ್. ಲತಿಕಾ, ಸರ್ವೇಕ್ಷಣಾ ತಂಡದ ಸದಸ್ಯರಾದ ಡಾ. ಆಶಾದೇವಿ, ಡಾ. ಸೀತು ಹಾಗೂ ಡಾ. ಶಮಿನ್ ಸೆಬಾಸ್ಟಿಯನ್ ಒಳಗೊಂಡ ಮಹಿಳಾ ತಂಡದ ದಕ್ಷ ಕಾರ್ಯ ನಿರ್ವಹಣೆಯಿಂದ ಸೋಂಕು ಹರಡುವಿಕೆ ತಹಬಂದಿಗೆ ಬಂದಿದೆ. ಆದರೆ, ಪ್ರಶ್ನೆಗಳು ಉಳಿದುಕೊಂಡಿವೆ.
ಕೇರಳದಲ್ಲೇ ಏಕೆ?
ರಾಷ್ಟ್ರೀಯ ವೈರಾಲಜಿ ಸಂಸ್ಥೆ ಪ್ರಕಾರ, ಮಲೇಶ್ಯ/ಬಾಂಗ್ಲಾದೇಶದ ವೈರಸ್‌ಗೂ ಕೇರಳದ ವೈರಾಣುವಿಗೂ ವ್ಯತ್ಯಾಸವಿದೆ. ದಕ್ಷಿಣ ಭಾರತದಲ್ಲಿ ಹರಡಿರುವ ವೈರಾಣುವಿನ ವಂಶವಾಹಿಗಳು ಬದಲಾಗಿವೆ. ಪ್ರತೀ ಬಾರಿ ಸೋಂಕು ಹರಡಿದಾಗ, ವೈರಾಣು ತನ್ನ ವಂಶವಾಹಿಗಳನ್ನು ಬದಲಿಸಿಕೊಳ್ಳುತ್ತಿದೆ. ಯಾವ ಅಭ್ಯಾಗತ ಪ್ರಾಣಿ-ಪಕ್ಷಿ ಮೂಲಕ ಹರಡುತ್ತಿದೆ ಮತ್ತು ಹೇಗೆ ಮನುಷ್ಯರ ದೇಹ ಪ್ರವೇಶಿಸುತ್ತಿದೆ ಎಂಬುದು ಗೊತ್ತಾಗುತ್ತಿಲ್ಲ. ಇದರಿಂದ ಸೋಂಕು ಪತ್ತೆ ಕಠಿಣವಾಗುತ್ತಿದೆ. ದೇಶದೆಲ್ಲೆಡೆ ಬಾವಲಿಗಳು ಇದ್ದರೂ, ಕೋಝಿಕ್ಕೋಡ್ ಜಿಲ್ಲೆಯಲ್ಲಿ ಮಾತ್ರ ನಿಫಾ ಸೋಂಕು ಹರಡಲು ಕಾರಣವೇನು? ಮೊದಲ ವ್ಯಕ್ತಿಗೆ ರೋಗ ಹೇಗೆ ತಗಲಿತು ಎನ್ನುವುದು ಸ್ಪಷ್ಟವಾಗುತ್ತಿಲ್ಲ. ಮಲಪ್ಪುರಂ/ಕೋಝಿಕ್ಕೋಡ್ ಜಿಲ್ಲೆಯ ಹತ್ತಾರು ಕಿಮೀ ವ್ಯಾಪ್ತಿಯಲ್ಲಿರುವ ಗ್ರಾಮಗಳಲ್ಲಿ ವೈರಾಣು ಕಾಣಿಸಿಕೊಳ್ಳುತ್ತಿದೆ. ಸೋಂಕು ಕಾಣಿಸಿಕೊಂಡ ಸೂಪಿಕ್ಕಡ ಮತ್ತು ಕಲ್ಲಡದ ಸಮೀಪದಲ್ಲೇ ಜಾನಕಿಕ್ಕಾಡ್ ಜೈವಿಕವೈವಿಧ್ಯ ಪ್ರದೇಶ ಇದೆ. ಬಾವಲಿಗಳು ಆಹಾರ ಹುಡುಕಿಕೊಂಡು ಕಾಡಿನಿಂದ ಹೊರಗೆ ಬರುತ್ತಿವೆ ಎಂದುಕೊಂಡರೆ, ಹಣ್ಣು ಬಿಡುವ ಮರ/ಗಿಡಗಳ ಕೊರತೆ ಇದೆ. ಬಾವಲಿಗಳು ಹಾಗೂ ಅವುಗಳ ಜೀವಾವಾಸ ಸ್ಥಳದ ಮೇಲೆ ಏಕ ತಳಿ ರಬ್ಬರ್ ಪ್ಲಾಂಟೇಷನ್‌ಗಳು ಪರಿಣಾಮ ಬೀರುತ್ತಿವೆಯೇ? ಕಲ್ಲಿನ ಕ್ವಾರಿಗಳಿಂದ ಬರುವ ಭಾರೀ ಶಬ್ದ ಬಾವಲಿಗಳ ದಿಕ್ಕು ತಪ್ಪಿಸುತ್ತಿದೆಯೇ ಎಂಬ ಪ್ರಶ್ನೆಗಳು ಎದ್ದಿವೆ. ಕಾಡಿನ ಸುತ್ತ ಕಾಪು ಅರಣ್ಯ ಸೃಷ್ಟಿ ಹಾಗೂ ಅರಣ್ಯದಲ್ಲಿ ಹಣ್ಣಿನ ಗಿಡಗಳನ್ನು ನೆಡುವುದರಿಂದ, ಬಾವಲಿಗಳು ಜನವಸತಿ ಕಡೆಗೆ ಬರುವುದನ್ನು ತಪ್ಪಿಸಬಹುದೇ? ಈ ಕುರಿತು ಅಧ್ಯಯನ ನಡೆಯಬೇಕಿದೆ.
ಸೂಪಿಕ್ಕಡದಲ್ಲಿ ವೈರಾಣು ಅಂಟಿಸಿಕೊಂಡಿದ್ದ ಮಹಿಳೆ ಬಾವಲಿಯನ್ನು ಮುಟ್ಟಿದ್ದರು ಎಂದು ಆನಂತರ ತಿಳಿದುಬಂತು. ಆಕೆಯಲ್ಲಿದ್ದ ವೈರಾಣು ಹಾಗೂ ಬಾವಲಿಯಲ್ಲಿದ್ದ ವೈರಾಣು ಎರಡೂ ಒಂದೇ ಆಗಿತ್ತು. ರಾಷ್ಟ್ರೀಯ ವೈರಾಣು ವಿಜ್ಞಾನ ಸಂಸ್ಥೆಯು ಫ್ಲೈಯಿಂಗ್ ಫಾಕ್ಸ್ ಬಾವಲಿಗಳಲ್ಲಿ ನಿಫಾ ವೈರಾಣು ಪತ್ತೆ ಹಚ್ಚಿತ್ತು. ಕೋಝಿಕ್ಕೋಡ್‌ನಲ್ಲಿ 2021ರಲ್ಲಿ ನಿಫಾ ಕಾಣಿಸಿಕೊಂಡಾಗ, ಸರ್ವೇಕ್ಷಣೆ ನಡೆಸುವ ಯೋಜನೆಯೊಂದನ್ನು ಹಾಕಿಕೊಳ್ಳಲಾಗಿತ್ತು. ಆದರೆ, ಅದು ಕಾರ್ಯಗತವಾಗಲಿಲ್ಲ. ಬಾವಲಿ ಸೇರಿದಂತೆ ಹಕ್ಕಿ-ಪ್ರಾಣಿಗಳನ್ನು ಕಾಲಕಾಲಕ್ಕೆ ಪರಿಶೀಲಿಸಬೇಕು ಎಂದು ಶಿಫಾರಸು ಮಾಡಲಾಗಿತ್ತು. ಅದು ಜಾರಿಯಾಗಿಲ್ಲ. ಸೋಂಕು ದೃಢಪಡುವುದು ತಡವಾದಷ್ಟೂ ಸಾವಿನ ಸಾಧ್ಯತೆ ಹೆಚ್ಚುತ್ತದೆ ಮತ್ತು ಸೋಂಕು ವ್ಯಾಪಿಸುತ್ತದೆ. ವೈದ್ಯ ಕಾಲೇಜು ಆಸ್ಪತ್ರೆಯಲ್ಲಿ ಪ್ರತ್ಯೇಕ ಇರಿಸುವ ಘಟಕ ಆರಂಭಿಸಲು 25 ಕೋಟಿ ರೂ. ಅನುದಾನ ನೀಡಲಾಗಿತ್ತು. ಆದರೆ, ಏನೇನೂ ಆಗಲಿಲ್ಲ. ಮಲೇಶ್ಯದಲ್ಲಿ ವೈರಸ್ ಹೇಗೆ ಹರಡುತ್ತದೆ ಎಂಬುದನ್ನು ಸರ್ವೇಕ್ಷಣೆಗಳಿಂದ ಪತ್ತೆ ಹಚ್ಚಿದ್ದು, 3-4 ವರ್ಷದೊಳಗೆ ರೋಗ ಮರುಕಳಿಕೆಯನ್ನು ತಡೆದಿದ್ದಾರೆ. ಕೇರಳದಲ್ಲಿ ಬಾವಲಿಗಳ ಸರ್ವೇಕ್ಷಣೆ ನಡೆಸಬೇಕಿದೆ ಮತ್ತು ಅರಣ್ಯ, ವನ್ಯಜೀವಿ, ಪಶುಸಂಗೋಪನೆ, ಆರೋಗ್ಯ ಇತ್ಯಾದಿ ಇಲಾಖೆಗಳ ಅಧಿಕಾರಿಗಳ ತಂಡವೊಂದನ್ನು ರಚಿಸುವ ಅಗತ್ಯವಿದೆ. ಇದರಿಂದ ಸಂಪನ್ಮೂಲವನ್ನು ಪರಿಣಾಮಕಾರಿಯಾಗಿ ಬಳಸಲು ಸಾಧ್ಯವಾಗಲಿದೆ. ಕೇರಳ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯ ಇಂಥದ್ದೊಂದು ಪ್ರಯತ್ನಕ್ಕೆ ಮುಂದಾಗಿದೆ.
ಪ್ರಸಕ್ತ ರಕ್ತದ ನಮೂನೆಗಳನ್ನು ಪುಣೆಯ ರಾಷ್ಟ್ರೀಯ ವೈರಾಲಜಿ ಪ್ರಯೋಗಾಲಯಕ್ಕೆ ಕಳಿಸಲಾಗುತ್ತಿದೆ. ಫಲಿತಾಂಶ ಬರಲು ದೀರ್ಘಕಾಲ ತೆಗೆದುಕೊಳ್ಳುತ್ತಿದೆ. ರಾಜ್ಯದಲ್ಲಿ ‘ಜೈವಿಕ ಸುರಕ್ಷೆ ಹಂತ-4’ ಪ್ರಯೋಗಾಲಯ ಅಗತ್ಯವಿದೆ. ಇದರಿಂದ ರಕ್ತದ ಮಾದರಿಗಳನ್ನು ಪುಣೆಗೆ ಕಳಿಸುವುದು ತಪ್ಪಲಿದೆ. ಈ ರೋಗದ ಚಿಕಿತ್ಸೆಗೆ ನಿರ್ದಿಷ್ಟ ವಿಧಾನವಿಲ್ಲ. ಹೀಗಾಗಿ, ಉಪಶಮನ ಪ್ರೋಟೋಕಾಲ್ ಸಿದ್ಧಗೊಳಿಸಬೇಕಿದೆ.
ಮಾನವರ ಹಸ್ತಕ್ಷೇಪ
ಸೋಂಕಿಗೆ ಮಾನವರ ಹಸ್ತಕ್ಷೇಪದಿಂದ ಪ್ರಕೃತಿಯಲ್ಲಿ ಆಗುತ್ತಿರುವ ಬದಲಾವಣೆ ಕಾರಣ. ಅರಣ್ಯನಾಶ, ಕೃಷಿ ಕ್ಷೇತ್ರದ ವಿಸ್ತರಣೆ, ವನ್ಯಜೀವಿಗಳ ಜೀವಾವಾಸ ನಾಶ, ಹವಾಮಾನ ಬದಲಾವಣೆಯಿಂದ ಆದ ಋತುಮಾನದಲ್ಲಿನ ವ್ಯತ್ಯಯ ಇವು ಬಾವಲಿಗಳು-ವೈರಾಣುಗಳು ಮಾತ್ರವಲ್ಲ ಇಡೀ ಪರಿಸರ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತಿವೆ. 2019ರಲ್ಲಿ ತಿರುವನಂತಪುರದ ಸರಕಾರಿ ವೈದ್ಯ ಕಾಲೇಜಿನ ಅಂಟುರೋಗ ವಿಭಾಗ ಹಾಗೂ ತ್ರಿಶೂರ್‌ನ ಹವಾಮಾನ ಬದಲಾವಣೆ ಮತ್ತು ಪರಿಸರ ವಿಜ್ಞಾನ ಕಾಲೇಜು ನಡೆಸಿದ ಅಧ್ಯಯನದ ಪ್ರಕಾರ, ‘ನಿಫಾ ವೈರಾಣು ಫ್ಲೈಯಿಂಗ್ ಫಾಕ್ಸ್ ಬಾವಲಿಗಳಲ್ಲಿ ಸದಾ ಕಾಲ ಇರುತ್ತದೆ. ಬಾಹ್ಯ ಒತ್ತಡಗಳಿಂದ ವೈರಾಣು ಹೊರಬಿದ್ದಾಗ ರೋಗ ಹರಡುತ್ತದೆ’. 2018 ಮತ್ತು 2019ರಲ್ಲಿ ನಿಫಾ ಕಾಣಿಸಿಕೊಂಡಿದ್ದು ಎಪ್ರಿಲ್-ಮೇ ತಿಂಗಳಿನಲ್ಲಿ. 2021ರ ಸೆಪ್ಟ್ಟಂಬರ್‌ನಲ್ಲಿ ಹಾಗೂ 2023 ಆಗಸ್ಟ್‌ನಲ್ಲಿ. ಫ್ಲೈಯಿಂಗ್ ಫಾಕ್ಸ್ ಬಾವಲಿಗಳ ಸಂತಾನಾಭಿವೃದ್ಧಿ ಕಾಲ ಡಿಸೆಂಬರ್-ಮೇ. ಈ ಅವಧಿಯಲ್ಲಿ ಆಂತರಿಕ ಒತ್ತಡದಿಂದಾಗಿ ವೈರಾಣು ಹೊರಬೀಳುತ್ತದೆ ಎಂದು ಭಾವಿಸಲಾಗಿತ್ತು. ಹಾಗಿದ್ದಲ್ಲಿ ಈ ಬಾವಲಿಗಳು ಇರುವಲ್ಲೆಲ್ಲ ನಿಫಾ ಹರಡಬೇಕಿತ್ತು. ಆದರೆ, ಹಾಗೆ ಆಗುತ್ತಿಲ್ಲ. ಇದರರ್ಥ-ವೈರಾಣು ಹೊರಬೀಳಲು ಬಾಹ್ಯ ಕಾರಣಗಳೂ ಇವೆ. ಜಾನಕಿಕಾಡ್ ಅರಣ್ಯ ಪ್ರದೇಶದ ಸುತ್ತಮುತ್ತಲಿನ ಕಲ್ಲಡ, ಸೂಪಿಕ್ಕಡ, ಪಳೂರು ಗ್ರಾಮಗಳ ಭೌಗೋಳಿಕ ಲಕ್ಷಣಗಳು ಒಂದೇ ರೀತಿ ಇವೆ. ಈ ಪ್ರದೇಶ ಕಾಡು, ನದಿಯಿಂದ ಸುತ್ತುವರಿದಿದ್ದು, ಅಧಿಕ ಸಂಖ್ಯೆಯಲ್ಲಿ ಫ್ಲೈಯಿಂಗ್ ಫಾಕ್ಸ್ ಬಾವಲಿಗಳಿವೆ. ಅತಿ ಮಳೆ, ಬಿರುಬಿಸಿಲ ವರ್ಷಗಳಲ್ಲಿ ಈ ವೈರಾಣು ಪ್ರಕಟಗೊಳ್ಳುತ್ತಿದೆ. ಕೇರಳದಲ್ಲಿ 2018 ಮತ್ತು 2019ರಲ್ಲಿ ತೀವ್ರ ಪ್ರವಾಹ ಹಾಗೂ 2021/2013ರಲ್ಲಿ ಮಳೆ ಕೊರತೆಯಾಗಿದೆ. ಇಂತಹ ಸಂದರ್ಭದಲ್ಲಿ ಬಾಹ್ಯ ಒತ್ತಡದಿಂದ ಬಾವಲಿಗಳು ವೈರಾಣುಗಳನ್ನು ಹೊರಹಾಕುತ್ತವೆ ಎಂದು ವಿಜ್ಞಾನಿಗಳು ಊಹಿಸಿದ್ದಾರೆ. ಇದಿನ್ನೂ ದೃಢಪಡಬೇಕಿದೆ.
ನಿಫಾ ನೆಪದಲ್ಲಿ ಮಲೆನಾಡಿಗರನ್ನು ಕಾಡುತ್ತಿರುವ ಕೆಎಫ್‌ಡಿ ಬಗ್ಗೆಯೂ ಹೇಳಬೇಕು.
ಮಂಗನ ಕಾಯಿಲೆ ಅಥವಾ
ಕ್ಯಾಸನೂರು ಅರಣ್ಯ ಕಾಯಿಲೆ(ಕೆಎಫ್‌ಡಿ)
ಕೆಎಫ್‌ಡಿಯ ಋತು ಸಾಮಾನ್ಯವಾಗಿ ಅಕ್ಟೋಬರ್‌ನಲ್ಲಿ ಆರಂಭವಾಗುತ್ತದೆ. ಉಣ್ಣಿ ಮತ್ತು ಮಂಗಗಳಿಂದ ಹರಡುವ ಈ ವೈರಾಣು, ಕಾಡು/ಬೇಣದಲ್ಲಿ ತರಗು ಸಂಗ್ರಹಿಸುವವರಿಗೆ ಅಂಟಿಕೊಳ್ಳುತ್ತದೆ. 2019ರಲ್ಲಿ 434 ಮಂದಿಗೆ ಸೋಂಕು ತಗಲಿ, 15 ಮಂದಿ ಮೃತಪಟ್ಟಿದ್ದರು. 2020ರಲ್ಲಿ ಐವರು ಹಾಗೂ 2022ರಲ್ಲಿ ಇಬ್ಬರು ಸಾವಿಗೀಡಾಗಿದ್ದರು. ರೋಗಕ್ಕೆ ಲಸಿಕೆ ಇಲ್ಲವೇ ನಿರ್ದಿಷ್ಟ ರೋಗೋಪಚಾರ ಪದ್ಧತಿಯಿಲ್ಲ. ಸಾವಿನ ಪ್ರಮಾಣ ಶೇ.3-5.
1970ರಲ್ಲಿ ಆರಂಭವಾದ ವೈರಾಣು ರೋಗನಿರ್ಣಯ ಪ್ರಯೋಗಾಲಯ(ವಿಡಿಎಲ್) ರಾಜ್ಯದ ಏಕೈಕ ಕೆಎಫ್‌ಡಿ ವೈರಾಣು ಪ್ರಯೋಗಾಲಯ. ಇದಕ್ಕೆ ಮಾನ್ಯತೆ ಸಿಗದೆ ಇರುವುದರಿಂದ, ಸರ್ವೇಕ್ಷಣೆ ಕಠಿಣವಾಗುತ್ತಿದೆ. ಕೇಂದ್ರ ಜೈವಿಕ ತಂತ್ರಜ್ಞಾನ ಇಲಾಖೆ ಪ್ರಕಾರ, ಕೆಎಫ್‌ಡಿಯ ಡಿ ವರ್ಗಕ್ಕೆ ಸೇರಿದ ವೈರಸ್. ಅದರ ಜೀವಂತ ಸ್ಯಾಂಪಲ್‌ಗಳ ಪರೀಕ್ಷೆಗೆ ಬಿಎಸ್‌ಎಲ್-3 ಪ್ರಯೋಗಾಲಯ ಸೌಲಭ್ಯ ಅಗತ್ಯವಿದೆ. ಪ್ರಸಕ್ತ ವೈರಾಣುವಿನ ನಮೂನೆಯನ್ನು ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಯಲ್ಲಿ ಪರೀಕ್ಷಿಸಲಾಗುತ್ತಿದೆ. ಫಲಿತಾಂಶಕ್ಕೆ 10 ದಿನದಿಂದ ಎರಡು ತಿಂಗಳು ತೆಗೆದುಕೊಳ್ಳುತ್ತಿದೆ. ಅಷ್ಟರಲ್ಲಿ ರೋಗ ವ್ಯಾಪಿಸುವ ಸಾಧ್ಯತೆ ಇರುತ್ತದೆ. ವಿಡಿಎಲ್‌ನ್ನು ಬಿಎಸ್‌ಎಲ್-3 ಸೌಲಭ್ಯವಾಗಿ ಪರಿವರ್ತಿಸಲು 2019ರಲ್ಲಿ ರಾಜ್ಯ ಸರಕಾರ ಆಯವ್ಯಯದಲ್ಲಿ 15 ಕೋಟಿ ರೂ. ಅನುದಾನ ಮೀಸಲಿರಿಸಿ, ವಿಸ್ತೃತ ಯೋಜನಾ ವರದಿಯನ್ನು ಕೇಳಿತ್ತು. ಅಷ್ಟಕ್ಕೆ ಸ್ಥಗಿತವಾಯಿತು. ಆನಂತರ ಪ್ರಯೋಗಾಲಯದ ಉನ್ನತೀಕರಣ ಪ್ರಯತ್ನಗಳು ನಡೆಯಲಿಲ್ಲ. ರಾಜ್ಯಕ್ಕೆ ನಾಲ್ಕು ಮುಖ್ಯಮಂತ್ರಿಗಳನ್ನು ಕೊಟ್ಟ ಶಿವಮೊಗ್ಗ ಜಿಲ್ಲೆಯ ಕಥೆ ಹೀಗಿದೆ.
ಪ್ರಾಣಿಗಳಿಂದ ಮನುಷ್ಯರಿಗೆ ಹಬ್ಬುವ ನಿಫಾ-ಕೆಎಫ್‌ಡಿಯಂಥ ರೋಗಗಳು ಜನಜೀವನಕ್ಕೆ ಭಂಗ ತರುತ್ತವೆ; ಸಾಮಾಜಿಕ ನೇಯ್ಗೆಯನ್ನು ಬದಲಿಸುತ್ತವೆ. ಆರ್ಥಿಕ ದುಷ್ಪರಿಣಾಮ ಬೀರುತ್ತವೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್) ನಡೆಸಿದ ಸಮೀಕ್ಷೆ ಪ್ರಕಾರ, ಕರ್ನಾಟಕ, ಕೇರಳ, ತಮಿಳುನಾಡು ಸೇರಿದಂತೆ 9 ರಾಜ್ಯಗಳಲ್ಲಿ ಸೋಂಕಿನ ಸಾಧ್ಯತೆ ಹೆಚ್ಚು. ಭಾರತ ಮತ್ತು ಚೀನಾ ಇಂತಹ ರೋಗಗಳ ಕೇಂದ್ರ ಸ್ಥಾನ ಆಗಬಹುದು ಎಂದು ಭಾರತದ ಅರಣ್ಯ ಪರಿಸ್ಥಿತಿ ವರದಿ, 2022 ಎಚ್ಚರಿಸಿದೆ. ದುರಂತವೆಂದರೆ, ಜನ ರೋಗಪೀಡಿತರಾದಾಗ ವ್ಯವಸ್ಥೆ ಎಚ್ಚೆತ್ತುಕೊಳ್ಳುತ್ತದೆ. ಸಮಸ್ಯೆಯನ್ನು ತಾತ್ಕಾಲಿಕವಾಗಿ ಬಗೆಹರಿಸಿದ ಬಳಿಕ ಮರೆತು ನಿದ್ರೆಗೆ ಜಾರುತ್ತದೆ. ಇಂತಹ ಕಾಯಿಲೆಗಳು ಹೇಗೆ ಸಂಭವಿಸುತ್ತವೆ, ಕಾರಣಗಳೇನು, ರೋಗ ಹರಡದಂತೆ ತಡೆಯಲು ಏನು ಮಾಡಬೇಕು ಮತ್ತು ಸಂಭವಿಸಿದಾಗ ವ್ಯಾಪಿಸದಂತೆ ತಡೆಯುವುದು ಹೇಗೆ ಎಂಬ ಬಗ್ಗೆ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿ ಮಾಹಿತಿ ಇರಬೇಕು. ಮುಖ್ಯವಾಗಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಿಬ್ಬಂದಿ, ಆಶಾ ಸೇರಿದಂತೆ ತಳ ಮಟ್ಟದ ಆರೋಗ್ಯ ಕಾರ್ಯಕರ್ತರಿಗೆ ಇಂತಹ ರೋಗಗಳ ಲಕ್ಷಣದ ಅರಿವು ಇರಬೇಕು ಹಾಗೂ ಅವರಲ್ಲಿ ಜಾಗೃತಿ ಮೂಡಿಸಬೇಕು. ಸ್ಥಳೀಯ, ರಾಷ್ಟ್ರೀಯ ಮತ್ತು ಜಾಗತಿಕ ಮಟ್ಟದಲ್ಲಿ ಹಲವು ಏಜೆನ್ಸಿಗಳು ಸಂಯೋಜಿತವಾಗಿ ಕೆಲಸ ಮಾಡಿದರಷ್ಟೇ ರೋಗ ನಿವಾರಣೆ ಸಾಧ್ಯ. ಅದು ಅಸಾಧ್ಯ ಕೆಲಸವಲ್ಲ.