ಒಬಿಸಿ ಒಳಮೀಸಲು ಎಂಬ ಗೊಂದಲಗಳ ಗೂಡು

ಉಪವರ್ಗೀಕರಣದ ರಾಜಕೀಯ ಪರಿಣಾಮವನ್ನು ಊಹಿಸುವುದು ಕಷ್ಟಕರ. ಏಕೆಂದರೆ, ಕೇಂದ್ರೀಯ ಒಬಿಸಿ ಪಟ್ಟಿಯಲ್ಲಿ 5,013ಕ್ಕೂ ಅಧಿಕ ಜಾತಿಗಳಿವೆ(ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗ, 2006ರ ಮಾಹಿತಿ). ಜತೆಗೆ, ರಾಜ್ಯ/ಕೇಂದ್ರಾಡಳಿತ ಪ್ರದೇಶಗಳು ತಮ್ಮದೇ ಆದ ಒಬಿಸಿ ಪಟ್ಟಿ ಹೊಂದಿವೆ. ಸಂವಿಧಾನದ ವಿಧಿ 15(4) ಮತ್ತು 16(4)ರ ಅನ್ವಯ ಶಿಕ್ಷಣ/ಸರಕಾರಿ ಉದ್ಯೋಗದಲ್ಲಿ ಮೀಸಲು ನೀಡಲು ಹಲವು ರಾಜ್ಯಗಳು ಉಪವರ್ಗೀಕರಣ ಮಾಡಿಕೊಂಡಿವೆ.

Update: 2023-09-15 07:21 GMT

ರಾಜೀವ್ ಗೋಸ್ವಾಮಿ ಎಂಬ ಹೆಸರು ನೆನಪಿದೆಯೇ? 1990ರಲ್ಲಿ ಮಂಡಲ್ ವರದಿಯನ್ನು ವಿರೋಧಿಸಿ, ಬೆಂಕಿ ಹಚ್ಚಿಕೊಂಡ ದಿಲ್ಲಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ; ಫೆಬ್ರವರಿ 24,2004ರಂದು ಮೃತಪಟ್ಟರು. ಸಂಸದ ಬಿಂದೇಶ್ವರಿ ಪ್ರಸಾದ್ ಮಂಡಲ್ ನೇತೃತ್ವದ 2ನೇ ಹಿಂದುಳಿದ ವರ್ಗಗಳ ಆಯೋಗ ಸಲ್ಲಿಸಿದ್ದ ವರದಿಯನ್ನು ವಿ.ಪಿ. ಸಿಂಗ್ ಸರಕಾರ ಜಾರಿಗೊಳಿಸಿದ್ದನ್ನು ವಿರೋಧಿಸಿ ದೇಶದೆಲ್ಲೆಡೆ ಪ್ರತಿಭಟನೆ, ದೊಂಬಿ ನಡೆಯಿತು. ಹಿಂದಿ ಭಾಷಿಕ ರಾಜ್ಯಗಳಲ್ಲಿ ಕಾಂಗ್ರೆಸ್ ತೀವ್ರ ಹಿನ್ನಡೆ ಅನುಭವಿಸಿತು; ಬಿಜೆಪಿ ಅಧಿಕಾರಕ್ಕೆ ಬರಲು ಭೂಮಿಕೆ ಸಿದ್ಧವಾಯಿತು.

ಮೊರಾರ್ಜಿ ದೇಸಾಯಿ ಸರಕಾರ ನೇಮಿಸಿದ್ದ ಮಂಡಲ್ ಆಯೋಗ 1979ರಲ್ಲಿ ವರದಿ ಸಲ್ಲಿಸಿತು. ವಿ.ಪಿ. ಸಿಂಗ್ ಆಗಸ್ಟ್ 7,1990ರಲ್ಲಿ ವರದಿಯನ್ನು ಜಾರಿಗೊಳಿಸಿ, ಸರಕಾರಿ ಹುದ್ದೆ ಹಾಗೂ ಶೈಕ್ಷಣಿಕ ಸಂಸ್ಥೆಗಳಲ್ಲಿ ಇನ್ನಿತರ ಹಿಂದುಳಿದ ವರ್ಗ(ಒಬಿಸಿ)ಗಳಿಗೆ ಶೇ.27ರಷ್ಟು ಮೀಸಲು ನೀಡಬೇಕೆಂದು ಆದೇಶಿಸಿದರು. ಮಂಡಲ್ ವರದಿ ಜಾರಿಗೊಂಡ 34 ವರ್ಷಗಳ ಬಳಿಕ ಒಬಿಸಿ ರಾಜಕೀಯದಲ್ಲಿ ಮತ್ತೊಂದು ಸಂಚಲನ ಸೃಷ್ಟಿಸಬಲ್ಲ ನ್ಯಾ. ಜಿ. ರೋಹಿಣಿ ನೇತೃತ್ವದ ಆಯೋಗದ ವರದಿಯು ರಾಷ್ಟ್ರಪತಿ ಅವರಿಗೆ ಸಲ್ಲಿಕೆಯಾಗಿದೆ. ವರದಿ ಜಾರಿಗೊಂಡಲ್ಲಿ ದೇಶದ ರಾಜಕೀಯದಲ್ಲಿ ದೂರಕಾಲೀನ ಪರಿಣಾಮ ಉಂಟಾಗಬಹುದು.

ಹಿಂದುಳಿದ ಆಯೋಗಗಳು ಮತ್ತು ರಾಜಕೀಯ

ಒಬಿಸಿಗಳಿಗೆ ಸಂವಿಧಾನ ನೀಡಿದ ಹೆಸರು-ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳು(ಎಸ್‌ಇಬಿಸಿ). 1955ರಲ್ಲಿ ಕಾಕಾ ಕಾಲೇಲ್ಕರ್ ನೇತೃತ್ವದ ಮೊದಲ ಹಿಂದುಳಿದ ವರ್ಗಗಳ ಸಮಿತಿಯು 1961ರ ಜನಗಣತಿಯಲ್ಲಿ ಜಾತಿಗಣತಿಯನ್ನೂ ಮಾಡಬೇಕೆಂದು ಶಿಫಾರಸು ಮಾಡಿತ್ತು. ಮಂಡಲ್ ಆಯೋಗದ ವರದಿಯು ಬ್ರಿಟಿಷರು 1931ರಲ್ಲಿ ನಡೆಸಿದ ಕೊನೆಯ ಜಾತಿ ಗಣತಿಯ ಅಂಕಿ ಅಂಶಗಳನ್ನು ಆಧರಿಸಿತ್ತು ಮತ್ತು 3,743 ಜಾತಿಗಳ ಒಟ್ಟು ಜನಸಂಖ್ಯೆಯ ಶೇ.52 ಮಂದಿ ಹಿಂದುಳಿದವರು ಎಂದು ಹೇಳಿತ್ತು. ಒಬಿಸಿಗಳ ಒಟ್ಟು ಜನಸಂಖ್ಯೆ ಶೇ.52ರಷ್ಟಿದ್ದರೂ, ಮೀಸಲು ಶೇ.50ನ್ನು ಮೀರಬಾರದು ಎಂಬ ನಿರ್ಬಂಧದಿಂದಾಗಿ ಶೇ.27ರಷ್ಟು ಮೀಸಲು ನಿಗದಿಗೊಳಿಸಿತು. 1992ರಲ್ಲಿ ಇಂದಿರಾ ಸಾಹ್ನಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಆರ್ಥಿಕವಾಗಿ ಬಲಾಢ್ಯರಾದ ಒಬಿಸಿಗಳನ್ನು ಮೀಸಲಿನಿಂದ ಹೊರಗಿಡಲು ‘ಕೆನೆ ಪದರ’ ಎಂಬ ಪರಿಕಲ್ಪನೆಯನ್ನು ಪರಿಚಯಿಸಿತು. ಮನಮೋಹನ್ ಸಿಂಗ್ ನೇತೃತ್ವದ ಸರಕಾರದಲ್ಲಿ ಮಾನವ ಸಂಪನ್ಮೂಲ ಸಚಿವರಾಗಿದ್ದ ಅರ್ಜುನ್ ಸಿಂಗ್, ಉನ್ನತ ಶಿಕ್ಷಣದಲ್ಲಿ ಮೀಸಲು ಪರಿಚಯಿಸುವ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಮಂಡಿಸಿದರು.

ಮಂಡಲ್ ವರದಿ ಜಾರಿಗೊಂಡ ನಂತರದ ಮೊದಲ ದಶಕದಲ್ಲಿ ಹಿಂದುಳಿದ ವರ್ಗಗಳ ರಾಜಕೀಯ ಏಕಶಿಲ್ಪದಂತೆ ಇತ್ತು. ಪ್ರಭಾವಶಾಲಿ ಜಾತಿಗಳು ಮುಂಚೂಣಿಯಲ್ಲಿದ್ದವು. ಬಿಹಾರ ಮತ್ತು ಉತ್ತರಪ್ರದೇಶದಲ್ಲಿ ಯಾದವರು, ಆರ್ಥಿಕ/ಶೈಕ್ಷಣಿಕವಾಗಿ ಉತ್ತಮ ಸ್ಥಿತಿಯಲ್ಲಿದ್ದರು; ಸ್ಥಿರೀಕರಣ ಕ್ರಿಯೆಗಳ ಲಾಭ ಪಡೆದುಕೊಂಡರು. 2001ರಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ರಾಜನಾಥ್ ಸಿಂಗ್, ಮೀಸಲು ಹಂಚಿಕೆಯ ಲಾಭವನ್ನು ಅಳೆಯಲು ಹುಕುಂ ಸಿಂಗ್ ನೇತೃತ್ವದ ಮೌಲ್ಯಮಾಪನ ಸಮಿತಿ ರಚಿಸಿದರು. ‘ಒಬಿಸಿಗಳಲ್ಲಿ ಶೇ.26ರಷ್ಟಿರುವ ಯಾದವರು/ಕುರ್ಮಿಗಳು ಉದ್ಯೋಗದಲ್ಲಿ ಶೇ.46ರಷ್ಟು ಪಾಲು ಪಡೆದಿದ್ದಾರೆ’ ಎಂದು ಸಮಿತಿ ಹೇಳಿತು. ಸಮಾಜವಾದಿ ಪಕ್ಷದ ಬೆಂಬಲಿಗರಾಗಿದ್ದ ಯಾದವರ ವಿರುದ್ಧ ಬಿಜೆಪಿ ಯಾದವೇತರ ಒಬಿಸಿಗಳನ್ನು ಕ್ರೋಡೀಕರಿಸಿತು. ಬಿಹಾರದಲ್ಲಿ ಕುರ್ಮಿ ಸಮುದಾಯದ ನಿತೀಶ್ ಕುಮಾರ್ ನೇತೃತ್ವದಲ್ಲಿ ಇನ್ನಿತರ ಹಿಂದುಳಿದ ವರ್ಗಗಳು ಒಟ್ಟಾದವು. ಬಿಜೆಪಿ ಜತೆ ಕೈಜೋಡಿಸಿದ ನಿತೀಶ್, ಮೂರು ಚುನಾವಣೆಗಳನ್ನು ಗೆದ್ದರು. ಇಲ್ಲಿ ಪರಾಜಯಗೊಂಡಿದ್ದು ಲಾಲು ಪ್ರಸಾದ್ ಯಾದವ್ ಅವರ ಆರ್‌ಜೆಡಿ.

ಮಂಡಲೋತ್ತರ ರಾಜಕೀಯ ಅಲ್ಲೋಲಕಲ್ಲೋಲದ ಲಾಭ ದಕ್ಕಿದ್ದು ಬಿಜೆಪಿಗೆ. 1996-2017ರ ಅವಧಿಯಲ್ಲಿ ಬಿಜೆಪಿಗೆ ಒಬಿಸಿಗಳ ಮತಪ್ರಮಾಣ ಶೇ.10ರಷ್ಟು ಹೆಚ್ಚಿದೆ. ಇದರೊಟ್ಟಿಗೆ ಬಿಜೆಪಿ ಕಮಂಡಲ ರಾಜಕೀಯವನ್ನೂ ಆರಂಭಿಸಿತು. ಪ್ರತಿಫಲವೆಂಬಂತೆ, 2014ರ ಚುನಾವಣೆಯಲ್ಲಿ ಬಿಜೆಪಿ ಜಯ ಗಳಿಸಿ, ನರೇಂದ್ರ ಮೋದಿ ಪ್ರಧಾನಿಯಾದರು. ಒಬಿಸಿಯೇತರ ಜಾತಿಗಳ ಮೇಲಿನ ಬಿಜೆಪಿಯ ಹಿಡಿತವನ್ನು ಸಡಿಲಗೊಳಿಸಲು ಪ್ರತಿಪಕ್ಷಗಳು ಜಾತಿಗಣತಿಗೆ ಆಗ್ರಹಿಸುತ್ತಿವೆ. ಇದಕ್ಕೆ ಪ್ರತಿಕ್ರಿಯೆಯಾಗಿ ಒಬಿಸಿಗಳ ಉಪವರ್ಗೀಕರಣವನ್ನು ಪರಿಶೀಲಿಸಲು ದಿಲ್ಲಿ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಜಿ. ರೋಹಿಣಿ ನೇತೃತ್ವದ ಆಯೋಗವನ್ನು 2017ರಲ್ಲಿ ನೇಮಿಸಲಾಯಿತು.

ನ್ಯಾ. ರೋಹಿಣಿ ಆಯೋಗ

ಸಂವಿಧಾನದ 340ನೇ ವಿಧಿಯಡಿ ನೇಮಕಗೊಂಡ ನಾಲ್ವರು ಸದಸ್ಯರ ಆಯೋಗಕ್ಕೆ ನೀಡಿದ್ದ ಕಾಲಾವಕಾಶ 12 ವಾರ. ಆನಂತರ ಆರು ತಿಂಗಳಿಗೊಮ್ಮೆ 14 ಬಾರಿ ಅವಧಿಯನ್ನು ವಿಸ್ತರಿಸಲಾಯಿತು. ಆಯೋಗದ ಕಾರ್ಯನಿರ್ವಹಣೆ ಬಗ್ಗೆ ಸರಕಾರ ಮೌನವಾಗಿತ್ತು. ಕೋವಿಡ್‌ನಿಂದ ವಿಳಂಬ ಆಗುತ್ತಿದೆ ಎಂದು ಹೇಳಿತು; ಆನಂತರ, ಕೇಂದ್ರೀಯ ಒಬಿಸಿ ಪಟ್ಟಿಯ ತಾರ್ಕಿಕೀಕರಣ ಕ್ಲಿಷ್ಟ ಕೆಲಸವಾದ್ದರಿಂದ, ವಿಳಂಬ ಆಗುತ್ತಿದೆ ಎಂದಿತು. ಆಯೋಗಕ್ಕೆ ನೀಡಲಾಗಿದ್ದ ಕಾರ್ಯಸೂಚಿ ಏನೆಂದರೆ, ಕೇಂದ್ರೀಯ ಪಟ್ಟಿಯಲ್ಲಿರುವ ಒಬಿಸಿಗಳಲ್ಲಿ ಮೀಸಲು ಹಂಚಿಕೆಯು ಅಸಮಾನವಾಗಿದೆಯೇ ಎಂದು ಪರಿಶೀಲನೆ; ನ್ಯಾಯಸಮ್ಮತ ಹಂಚಿಕೆಗೆ ಕಾರ್ಯತಂತ್ರ, ಶರತ್ತುಗಳು ಹಾಗೂ ಪ್ರಮಾಣಾಂಕಗಳನ್ನು ವೈಜ್ಞಾನಿಕವಾಗಿ ನಿಗದಿಗೊಳಿಸುವುದು ಮತ್ತು ಸಂಬಂಧಪಟ್ಟ ಜಾತಿಗಳನ್ನು ಗುರುತಿಸಿ, ಅವುಗಳನ್ನು ಉಪವರ್ಗದಲ್ಲಿ ವರ್ಗೀಕರಿಸುವುದು. ಒಬಿಸಿ ಮೀಸಲಿನ ನ್ಯಾಯಸಮ್ಮತ ಹಂಚಿಕೆಗೆ ಮಾರ್ಗೋಪಾಯಗಳನ್ನು ಕಂಡುಹಿಡಿಯುವುದು ಮತ್ತು ಜಾತಿಗಳ ಉಪವರ್ಗೀಕರಣ(ಅಥವಾ ಒಳಮೀಸಲು)ದ ಮೂಲಕ ಸ್ಥಿರೀಕರಣ ಕ್ರಿಯೆಗಳ ಲಾಭ ಎಲ್ಲರಿಗೂ ಸಿಗುವಂತೆ ಮಾಡಬೇಕು ಎನ್ನುವುದು ಆಯೋಗದ ಆಶಯವಾಗಿತ್ತು.

ಆದರೆ, ಉಪವರ್ಗೀಕರಣದ ರಾಜಕೀಯ ಪರಿಣಾಮವನ್ನು ಊಹಿಸುವುದು ಕಷ್ಟಕರ. ಏಕೆಂದರೆ, ಕೇಂದ್ರೀಯ ಒಬಿಸಿ ಪಟ್ಟಿಯಲ್ಲಿ 5,013ಕ್ಕೂ ಅಧಿಕ ಜಾತಿಗಳಿವೆ(ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗ, 2006ರ ಮಾಹಿತಿ). ಜತೆಗೆ, ರಾಜ್ಯ/ಕೇಂದ್ರಾಡಳಿತ ಪ್ರದೇಶಗಳು ತಮ್ಮದೇ ಆದ ಒಬಿಸಿ ಪಟ್ಟಿ ಹೊಂದಿವೆ. ಸಂವಿಧಾನದ ವಿಧಿ 15(4) ಮತ್ತು 16(4)ರ ಅನ್ವಯ ಶಿಕ್ಷಣ/ಸರಕಾರಿ ಉದ್ಯೋಗದಲ್ಲಿ ಮೀಸಲು ನೀಡಲು ಹಲವು ರಾಜ್ಯಗಳು ಉಪವರ್ಗೀಕರಣ ಮಾಡಿಕೊಂಡಿವೆ. 1972ರಲ್ಲಿ ರಾಜ್ಯದಲ್ಲಿ ದೇವರಾಜ ಅರಸು ಅವರು ಲಕ್ಷ್ಮಣ ಹಾವನೂರು ಆಯೋಗದ ವರದಿ ಆಧರಿಸಿ, ಉಪ ವರ್ಗೀಕರಣ ಮಾಡಿದ್ದರು. 1977ರಲ್ಲಿ ಬಿಹಾರದಲ್ಲಿ ಕರ್ಪೂರಿ ಠಾಕೂರ್, ಮುಂಗೇರಿಲಾಲ್ ಆಯೋಗದ ವರದಿ ಆಧರಿಸಿ ಒಬಿಸಿಗಳನ್ನು ಅತಿ ಹಿಂದುಳಿದ ವರ್ಗಗಳು, ಇಬಿಸಿ ಹಾಗೂ ಹಿಂದುಳಿದ ವರ್ಗಗಳು ಎಂದು ವರ್ಗೀಕರಿಸಿದ್ದರು. 2002ರಲ್ಲಿ ರಾಜನಾಥ್ ಸಿಂಗ್ ನೇಮಿಸಿದ ಹುಕುಂ ಸಿಂಗ್ ಸಮಿತಿಯು ಯಾದವರಿಗೆ ಶೇ.5 ಹಾಗೂ ಅತಿ ಹಿಂದುಳಿದ ವರ್ಗಗಳಿಗೆ ಶೇ. 14 ಮೀಸಲು ನಿಗದಿಗೊಳಿಸಿತ್ತು. ಇತ್ತೀಚೆಗೆ ಗುಜರಾತ್ ಸರಕಾರ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಒಬಿಸಿ ಮೀಸಲನ್ನು ಶೇ.10ರಿಂದ ಶೇ.27ಕ್ಕೆ ಹೆಚ್ಚಿಸಿದೆ. ಕೇಂದ್ರದ ಪಟ್ಟಿ ಪ್ರಕಾರ, ಕರ್ನಾಟಕದಲ್ಲಿ 199 ಜಾತಿಗಳು ಒಬಿಸಿ ಪಟ್ಟಿಯಲ್ಲಿದ್ದು, ಇದರಲ್ಲಿ ಹಿಂದುಳಿದವರು, ಅತಿ ಹಿಂದುಳಿದವರು ಹಾಗೂ ಹೆಚ್ಚು ಹಿಂದುಳಿದವರು ಎಂಬ ಪ್ರತ್ಯೇಕತೆ ಇಲ್ಲ. ಆದರೆ, ರಾಜ್ಯದ ಪಟ್ಟಿಯಲ್ಲಿ ಅಂಥ ವರ್ಗೀಕರಣ ಇದೆ. ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಎಚ್.ಕಾಂತರಾಜು ನೇತೃತ್ವದ ಸಮಿತಿ ಸಲ್ಲಿಸಿದ್ದ ಸಾಮಾಜಿಕೋ ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವರದಿ ಇನ್ನೂ ಕತ್ತಲೆಯಲ್ಲಿದೆ. ಪ್ರಬಲ ಜಾತಿಗಳು ವರದಿಗೆ ವಿರೋಧ ವ್ಯಕ್ತಪಡಿಸುತ್ತಿವೆ.

ಉತ್ತರಪ್ರದೇಶದ ನಂತರ ಹೆಚ್ಚು ಸಂಸದರನ್ನು ಹೊಂದಿರುವ(48) ಮಹಾರಾಷ್ಟ್ರದಲ್ಲಿ ಮರಾಠಾ ಸಮುದಾಯಕ್ಕೆ ಕುಣಬಿ ಪ್ರಮಾಣಪತ್ರ ನೀಡಬೇಕೆಂದು ಕಾರ್ಯಕರ್ತ ಮನೋಜ್ ಜರಂಗೆ ಪಾಟೀಲ್ ಆಗಸ್ಟ್ 29ರಿಂದ ಆರಂಭಿಸಿದ ನಿರಶನವು ಬಿಜೆಪಿ-ಎನ್‌ಸಿಪಿ-ಶಿವಸೇನೆ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಮರಾಠಾ ಮೀಸಲು ಹೋರಾಟಕ್ಕೆ 3 ದಶಕಗಳ ಚರಿತ್ರೆ ಇದೆ. ಪೃಥ್ವಿರಾಜ್ ಚೌಹಾಣ್ ನೇತೃತ್ವದ ಕಾಂಗ್ರೆಸ್-ಎನ್‌ಸಿಪಿ ಸರಕಾರ ಜೂನ್ 2014ರಲ್ಲಿ ಮರಾಠಾ ಸಮುದಾಯಕ್ಕೆ ನೀಡಿದ್ದ ಶೇ.16 ಮೀಸಲನ್ನು ಬಾಂಬೆ ಹೈಕೋರ್ಟ್ ಅದೇ ನವೆಂಬರ್‌ನಲ್ಲಿ ತಡೆಹಿಡಿಯಿತು. ಆನಂತರ ಅಧಿಕಾರಕ್ಕೆ ಬಂದ ದೇವೇಂದ್ರ ಫಡ್ನವೀಸ್, ಸುಪ್ರೀಂ ಕೋರ್ಟ್ ಮೊರೆ ಹೋದರು. ಹೈಕೋರ್ಟ್ ಆದೇಶಕ್ಕೆ ತಡೆ ನೀಡಲು ಸುಪ್ರೀಂ ನಿರಾಕರಿಸಿತು. ಮೇ 5, 2021ರಂದು ರಂಜನ್ ಗೊಗೊಯಿ ನೇತೃತ್ವದ ಐವರು ನ್ಯಾಯಮೂರ್ತಿಗಳ ಪೀಠ ಮೀಸಲು ವಜಾಗೊಳಿಸಿತು. 1960ರಲ್ಲಿ ರಾಜ್ಯ ಸ್ಥಾಪನೆಯಾದ ಬಳಿಕ ಅಧಿಕಾರ ನಡೆಸಿದ 20 ಮುಖ್ಯಮಂತ್ರಿಗಳಲ್ಲಿ 12 ಮಂದಿ ಮರಾಠರು. ರಾಜ್ಯದ ಜನಸಂಖ್ಯೆಯಲ್ಲಿ ಮರಾಠರ ಪಾಲು ಶೇ.33. ಸೆಪ್ಟಂಬರ್ 11ರಂದು ಸರ್ವ ಪಕ್ಷಗಳ ಸಭೆ ನಡೆದಿದೆ. ಪರ-ವಿರೋಧ ಪ್ರತಿಭಟನೆ ರಾಜ್ಯವಿಡೀ ವ್ಯಾಪಿಸಿದ್ದು, ಸಮ್ಮಿಶ್ರ ಸರಕಾರಕ್ಕೆ ಬಿಸಿತುಪ್ಪವಾಗಿ ಪರಿಣಮಿಸಿದೆ.

ಒಕ್ಕೂಟ ಸರಕಾರ ಒಬಿಸಿ ಒಳಮೀಸಲಿಗೆ ಸಂಬಂಧಿಸಿದಂತೆ ನ್ಯಾ. ರೋಹಿಣಿ ಆಯೋಗದ ನೇಮಕವಲ್ಲದೆ, ಆಗಸ್ಟ್ 2018ರಲ್ಲಿ ಸ್ಥಿರೀಕರಣ ಕ್ರಿಯೆಗಳಿಗೆ ಎರಡು ಸಂವಿಧಾನಾತ್ಮಕ ಕಟ್ಟುಪಾಡುಗಳನ್ನು ವಿಧಿಸಿತು. ಅವುಗಳೆಂದರೆ, 1. ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗ(ಎನ್‌ಸಿಬಿಸಿ)ಕ್ಕೆ ಸಂವಿಧಾನಾತ್ಮಕ ಸ್ಥಾನಮಾನ ಮತ್ತು 2. ಹಿಂದುಳಿದ ವರ್ಗಗಳ ಪಟ್ಟಿಗೆ ಜಾತಿಗಳನ್ನು ಸೇರ್ಪಡೆ/ತೆಗೆದುಹಾಕುವ ಅಧಿಕಾರವನ್ನು ರಾಜ್ಯ ಸರಕಾರಗಳಿಂದ ಕಿತ್ತುಕೊಂಡು, ಸಂಸತ್ತಿಗೆ ನೀಡಿತು. ಆದರೆ, ಅದೇನಾಯಿತೋ ಗೊತ್ತಿಲ್ಲ; ಆಗಸ್ಟ್ 2021ರಲ್ಲಿ ಯು-ಟರ್ನ್ ಹೊಡೆದು, ಜಾತಿಗಳ ಹೆಸರು ಸೇರ್ಪಡೆ/ತೆಗೆದುಹಾಕುವ ಅಧಿಕಾರವನ್ನು ಮತ್ತೆ ರಾಜ್ಯಗಳಿಗೆ ನೀಡಿತು ಹಾಗೂ ಅವು ಎನ್‌ಸಿಬಿಸಿ ಸಲಹೆ ಕೇಳಬೇಕಿಲ್ಲ ಎಂದುಬಿಟ್ಟಿತು!

ಒಕ್ಕೂಟ ಸರಕಾರ ಜನವರಿ 2019ರಲ್ಲಿ ಆರ್ಥಿಕವಾಗಿ ಹಿಂದುಳಿದವರು(ಇಡಬ್ಲ್ಯುಎಸ್) ಶೇ.10 ಮೀಸಲು ನೀಡುವ ಮೂಲಕ ಮೀಸಲು ಪ್ರಮಾಣ ಶೇ.50 ಮೀರಬಾರದು ಎಂಬ ನಿರ್ಬಂಧವನ್ನು ಉಲ್ಲಂಘಿಸಿತು. ಮಂಡಲ್ ವರದಿ ವಿರೋಧಿಸಿ ಉಗ್ರ ಪ್ರತಿಭಟನೆ ನಡೆಸಿದ ಸಮುದಾಯಗಳು ಉಸಿರೆತ್ತಲಿಲ್ಲ. ಚುನಾವಣೆ ಮುಗಿಯುವವರೆಗೆ ಸುಮ್ಮನಿದ್ದ ಒಬಿಸಿ ಸಮುದಾಯ, ಆನಂತರ ಜನಸಂಖ್ಯೆಗೆ ಅನುಗುಣವಾಗಿ ಮೀಸಲು ನೀಡಬೇಕೆಂದು ಬೇಡಿಕೆ ಮುಂದಿಟ್ಟವು. ಮಂಡಲ್ ವರದಿಯು ಒಬಿಸಿಗಳ ಜನಸಂಖ್ಯೆ ಶೇ.52ರಷ್ಟಿದ್ದರೂ, ಶೇ.50ರ ನಿರ್ಬಂಧದಿಂದ ಶೇ.27 ಮೀಸಲು ನೀಡಿತ್ತು. ಸುಪ್ರೀಂ ಕೋರ್ಟ್ 2022ರಲ್ಲಿ ಇಡಬ್ಲ್ಯುಎಸ್ ಮೀಸಲು ಎತ್ತಿ ಹಿಡಿಯಿತು. ಇದರ ಫಲಾನುಭವಿಗಳು ಮೇಲ್ವರ್ಗದವರು.

ರಾಜಕೀಯ ಲಾಭದ ಹುನ್ನಾರ

ಒಬಿಸಿಗಳಿಗೆ ನೀಡಲಾದ ಶೇ.27 ಮೀಸಲಿನಲ್ಲಿ ಒಂದು ಸಣ್ಣ ಗುಂಪು ಹೆಚ್ಚು ಲಾಭ ಪಡೆದುಕೊಂಡಿದೆ ಎಂದು ನ್ಯಾ.ರೋಹಿಣಿ ಆಯೋಗ ಹೇಳಿದೆ. ಪ್ರಯೋಜನಗಳು ಎಲ್ಲರಿಗೂ ಸಮಾನವಾಗಿ ಹಂಚಿಕೆಯಾಗುವಂತೆ ಹೇಗೆ ಉಪವರ್ಗೀಕರಿಸಬಹುದು ಎಂದು ಸೂತ್ರವೊಂದನ್ನು ರೂಪಿಸಿದೆ. 1992ರ ಬಳಿಕ ಒಬಿಸಿ ಮೀಸಲಿನ ಪ್ರಯೋಜನ ಪಡೆದುಕೊಂಡ ಸಮುದಾಯಗಳು ಯಾವುವು ಎಂಬ ಅಂಕಿಅಂಶ ಇದರಿಂದ ಲಭ್ಯವಾಗಲಿದೆ. ಒಬಿಸಿಗಳ ಸಾಮಾಜಿಕೋ-ಆರ್ಥಿಕ ಉನ್ನತಿ ಸಾಧ್ಯವಾಗಿದೆಯೇ ಎಂಬುದು ಗೊತ್ತಾಗಲಿದೆ. ದೇಶ ಚುನಾವಣೆ ಹೊಸ್ತಿಲಲ್ಲಿ ಇದ್ದು, ಸರಕಾರ ಎಲ್ಲ ಭಾಗೀದಾರರೊಡನೆ ಚರ್ಚೆ ನಡೆಸದೆ ಶಿಫಾರಸುಗಳ ಕುರಿತು ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಕಡಿಮೆ. ಹೆಚ್ಚು ಪ್ರಯೋಜನ ಪಡೆದ ಜಾತಿಗಳು ರಾಜಕೀಯವಾಗಿ ಪ್ರಬಲವಾಗಿರುವುದರಿಂದ, ಬಿಜೆಪಿ ಇಕ್ಕಟ್ಟಿಗೆ ಸಿಲುಕಬಹುದು. ಇಲ್ಲವೇ, ಒಬಿಸಿ ಸಮುದಾಯಕ್ಕೆ ವಿರುದ್ಧವಾಗಿ ಸಣ್ಣ ಜಾತಿಗಳು ಒಟ್ಟಾಗಬಹುದು. ಈ ಸಣ್ಣ ಜಾತಿಗಳ ಕ್ರೋಡೀಕರಣದಿಂದ ಬಿಜೆಪಿಗೆ ಕಳೆದ ಚುನಾವಣೆಗಳಲ್ಲಿ ಲಾಭವಾಗಿದೆ.

ಒಬಿಸಿ ಮೀಸಲು ಸಂಬಂಧಿಸಿದಂತೆ ಕಳೆದ 4 ವರ್ಷದಲ್ಲಿ 3 ಸಂವಿಧಾನ ತಿದ್ದುಪಡಿಗಳನ್ನು ತರಲಾಗಿದೆ. ವಿಧಿ 342ಎ ಅಡಿ ತಂದ ತಿದ್ದುಪಡಿಯು ಒಬಿಸಿಗಳನ್ನು ಉಪಗುಂಪುಗಳಾಗಿಸಲು ನೆರವಾಗಲಿದೆ. ಒಬಿಸಿಗಳ ಇಂಥ ಉಪವರ್ಗೀಕರಣ ಹೊಸದೇನೂ ಅಲ್ಲ. ಎಲ್ಲ ರಾಜ್ಯಗಳಲ್ಲೂ ಉಪವರ್ಗೀಕರಣ ಆಗಿದೆ. ಇದು ಸಂವಿಧಾನಾತ್ಮಕವಾಗಿ ಅಮಾನ್ಯವಲ್ಲ. 2011ರ ಜನಗಣತಿಯ ಸಾಮಾಜಿಕೋ-ಆರ್ಥಿಕ ಜಾತಿ ಗಣತಿಯ ಅಂಕಿಸಂಖ್ಯೆಯನ್ನು ಬಿಡುಗಡೆಗೊಳಿಸಬೇಕೆಂಬ ಪ್ರತಿಪಕ್ಷಗಳ ಬೇಡಿಕೆಯನ್ನು ಸರಕಾರ ನಿರಾಕರಿಸಿತ್ತು. 2021ರ ಜನಗಣತಿಯಲ್ಲಿ ಒಬಿಸಿ ಹಾಗೂ ಜಾತಿಗಣತಿ ನಡೆಸಬೇಕೆಂದು ಒತ್ತಾಯವಿದ್ದು, ಸರಕಾರ ಜನಗಣತಿ ನಡೆಸಲು ಆಸಕ್ತಿ ತೋರಿಸಿಲ್ಲ. ಹೀಗಾಗಿ, ಅಧಿಕೃತ, ತಾಜಾ ಅಂಕಿಅಂಶ ಲಭ್ಯವಿಲ್ಲ.

ಒಳಮೀಸಲು ಜೇನಿನ ಗೂಡು ಇದ್ದಂತೆ; ಎರಡು ಅಲಗಿನ ಕತ್ತಿ. ಕೇಂದ್ರ ಸರಕಾರದ ಒಬಿಸಿ ಪಟ್ಟಿಯಲ್ಲಿ ಒಳವರ್ಗೀಕರಣ ಆಗಬೇಕಿದೆ. ಪ್ರಾಯೋಗಿಕ ಅಂಕಿಅಂಶದ ಅಲಭ್ಯತೆಯಿಂದ ವರದಿ ಕಾನೂನು ಸಮಸ್ಯೆಗೆ ಸಿಲುಕಿಕೊಳ್ಳಬಹುದು. ವಿವಿಧ ಒಬಿಸಿ ಜಾತಿಗಳ ಜನಸಂಖ್ಯೆ ಹಾಗೂ ಸಾಮಾಜಿಕೋ-ಆರ್ಥಿಕ ಪರಿಸ್ಥಿತಿಯನ್ನು ತಿಳಿಯಲು ರಾಷ್ಟ್ರವ್ಯಾಪಿ ಜಾತಿಗಣತಿ ನಡೆಸಬೇಕೆಂದು ಪ್ರತಿಪಕ್ಷಗಳು ಆಗ್ರಹಿಸುತ್ತಿವೆ. ಈ ನಡುವೆ ಬಿಹಾರ ಜಾತಿ ಸಮೀಕ್ಷೆಯನ್ನು ನಡೆಸಿದೆ. ಮಾಹಿತಿಯನ್ನು ಪ್ರಕಟಿಸಿದಲ್ಲಿ ಖಾಸಗಿತನದ ಮೂಲಭೂತ ಹಕ್ಕಿಗೆ ಧಕ್ಕೆಯಾಗುತ್ತದೆ ಎಂದು ದಾವೆ ಸಲ್ಲಿಕೆಯಾಗಿತ್ತು. ವಾದವನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್, ಮಾಹಿತಿಯನ್ನು ಜಾಲತಾಣದಲ್ಲಿ ಪ್ರಕಟಿಸಲು ಸಮ್ಮತಿಸಿದೆ. ಕೇಂದ್ರ ಒಬಿಸಿ ಪಟ್ಟಿಯಲ್ಲಿ ಇಲ್ಲದೆ ಇರುವವರು ಇಡಬ್ಲ್ಯುಎಸ್ ಮೀಸಲು ಪಡೆಯಬಹುದು. ಇದರಿಂದ ಒಬಿಸಿಗಳಿಗೆ ಮೀಸಲು ಪ್ರಮಾಣ ಕಡಿಮೆಯಾಗುತ್ತದೆ. ಇದಲ್ಲದೆ, ಸಾರ್ವಜನಿಕ ಕ್ಷೇತ್ರದ ಉದ್ಯಮಗಳ ಖಾಸಗೀಕರಣದಿಂದ ಉದ್ಯೋಗಾವಕಾಶ ಕ್ಷೀಣಿಸಿದೆ; ನಿರುದ್ಯೋಗ ಹೆಚ್ಚುತ್ತಿದೆ. ಮೀಸಲು ಶಿಲ್ಪ ಧಕ್ಕೆಗೊಳಗಾಗಿದೆ. ಆದರೆ, ಮೀಸಲು ಇಲ್ಲದೆ ಸಾಮಾಜಿಕ ನ್ಯಾಯ ಸಾಧ್ಯವಿಲ್ಲ. ಸಣ್ಣ ಜಾತಿಗಳಿಗೆ ಧ್ವನಿ ಸಿಗಬೇಕೆಂದರೆ, ಒಳ ಮೀಸಲು ಅಗತ್ಯವಿದೆ.

ಉತ್ತರಪ್ರದೇಶದ ಘೋಸಿ ಕ್ಷೇತ್ರಕ್ಕೆ ನಡೆದ ಮರುಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ದಾರಾ ಸಿಂಗ್ ಚೌಹಾಣ್ ಸೋತು, ಸಮಾಜವಾದಿ ಪಕ್ಷ ಜಯ ಗಳಿಸಿದೆ. ಬಿಜೆಪಿ ಒಬಿಸಿ ಮತಗಳನ್ನು ಕ್ರೋಡೀಕರಿಸಲು ಪ್ರಯಾಗ್‌ರಾಜ್‌ನಲ್ಲಿ ನವೆಂಬರ್‌ನಲ್ಲಿ ಒಬಿಸಿ ಮಹಾಕುಂಭ ನಡೆಸಲು ಮುಂದಾಗಿದೆ. ಸಾಧನೆ, ವೈಫಲ್ಯ ಮತ್ತು ದುಸ್ಸಾಹಸ ಎಲ್ಲವನ್ನೂ ರಾಜಕೀಯ ಲಾಭಕ್ಕಾಗಿ ಬಳಸಿ ಕೊಳ್ಳುವ ಸ್ಪಿನ್ ಡಾಕ್ಟರ್‌ಗಳಿರುವ ಮತ್ತು ಸದಾ ಚುನಾವಣೆಗೆ ಸನ್ನದ್ಧವಾಗಿರುವ ಬಿಜೆಪಿ, ಒಳಮೀಸಲು ಸಮಸ್ಯೆಯನ್ನು ಹೇಗೆ ನಿಭಾಯಿಸುತ್ತದೆ ಎಂಬುದನ್ನು ಕಾಯ್ದುನೋಡಬೇಕಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Contributor - ಮಾಧವ ಐತಾಳ್

contributor

Similar News