ಕ್ಷುಲ್ಲಕ ರಾಜಕೀಯ ಮತ್ತು ಎಥೆನಾಲ್ ಉರುಳಿನಲ್ಲಿ ಅನ್ನಭಾಗ್ಯ

ರಾಜ್ಯದ ಬಡವರಿಗೆ ಅನ್ನಭಾಗ್ಯ ಯೋಜನೆಯ 5 ಕೆಜಿ ಅಕ್ಕಿ ತಲುಪದೆ ಇರಲು ಒಕ್ಕೂಟ ಸರಕಾರದ ತಾರತಮ್ಯ ಅಥವಾ ಅವೈಜ್ಞಾನಿಕ ನೀತಿ ಮಾತ್ರ ಕಾರಣವಲ್ಲದೆ, ಧಾನ್ಯವನ್ನು ಎಥೆನಾಲ್ ಆಗಿ ಪರಿವರ್ತಿಸುವ ಪ್ರಕ್ರಿಯೆ ಕೂಡ ಕಾರಣ. ಅಕ್ಕಿ ಅಥವಾ ಯಾವುದೇ ಧಾನ್ಯವನ್ನು ಹಸಿದವರ ಹೊಟ್ಟೆ ತುಂಬಿಸಲು ಕೊಡಬೇಕೋ ಅಥವಾ ಎಥೆನಾಲ್ ಉತ್ಪಾದಿಸಲು ನೀಡಬೇಕೋ ಎನ್ನುವುದು ಮಿಲಿಯನ್ ಡಾಲರ್ ಪ್ರಶ್ನೆಯೇನಲ್ಲ. ಸರಳವಾದ, ನೈತಿಕ ಕಾಳಜಿಯ ಪ್ರಶ್ನೆ ಅದು; ಕ್ಷುಲ್ಲಕ ರಾಜಕೀಯದ ಪ್ರಶ್ನೆಯಲ್ಲ.

Update: 2023-07-13 18:40 GMT
Editor : Haneef | Byline : ಮಾಧವ ಐತಾಳ್

ಅನ್ನಭಾಗ್ಯ ಯೋಜನೆಗಾಗಿ ಕರ್ನಾಟಕ ಸರಕಾರ ಭಾರತೀಯ ಆಹಾರ ನಿಗಮದಿಂದ ಅಕ್ಕಿಗೆ ಕೋರಿಕೆ ಸಲ್ಲಿಸಿತ್ತು; ಇ-ಹರಾಜಿನಲ್ಲಿ ಅಕ್ಕಿ ಖರೀದಿಸಲು ಕೇಂದ್ರ ಸಚಿವರು ಸಲಹೆ ನೀಡಿದರು. ಆನಂತರ ಭಾರತೀಯ ಆಹಾರ ನಿಗಮ ಜುಲೈ 10ರಂದು 3.86 ಲಕ್ಷ ಟನ್ ಅಕ್ಕಿಯನ್ನು ಇ-ಹರಾಜಿ ಗಿಟ್ಟಿತು; ಬೇಡಿಕೆ ಬಂದಿದ್ದು 170 ಟನ್‌ಗೆ ಮಾತ್ರ. ಅದೇ ಹೊತ್ತಿನಲ್ಲಿ ಕರ್ನಾಟಕ ಸರಕಾರ ಅನ್ನಭಾಗ್ಯ ಯೋಜನೆಯಡಿ ಫಲಾನುಭವಿಗಳಿಗೆ 5 ಕೆಜಿ ಅಕ್ಕಿ ಬದಲು 170 ರೂ. ನೇರ ನಗದು ವರ್ಗಾವಣೆಗೆ ಚಾಲನೆ ನೀಡಿತು. ರಾಷ್ಟ್ರೀಯ ಆಹಾರ ಸುರಕ್ಷತಾ ಕಾಯ್ದೆ(ಎಫ್‌ಆರ್‌ಸಿಎ) 2013ರ ಅನ್ವಯ ಗ್ರಾಮೀಣ ಪ್ರದೇಶದ ಶೇ.75 ಹಾಗೂ ನಗರ ಪ್ರದೇಶಗಳ ಶೇ.50ರಷ್ಟು ಮಂದಿಯನ್ನು ಸಾರ್ವಜನಿಕ ಪಡಿತರ ವ್ಯವಸ್ಥೆ(ಪಿಡಿಎಸ್)ಯಡಿ ಒಳಗೊಳ್ಳ ಬೇಕು. ಇದರನ್ವಯ 80 ಕೋಟಿ ಜನರಿಗೆ ಮಾಸಿಕ 5 ಕೆಜಿ ಅಕ್ಕಿ ನೀಡಲಾಗುತ್ತಿದೆ. 2011ರ ಜನಗಣತಿಯನ್ನು ಆಧರಿಸಿ ರಾಜ್ಯಗಳಿಗೆ ರೇಷನ್ ಕಾರ್ಡ್‌ಗಳ ಪ್ರಮಾಣವನ್ನು ನಿರ್ಧರಿಸಲಾಗುತ್ತದೆ. 2011ರಲ್ಲಿ 121 ಕೋಟಿ ಇದ್ದ ಜನಸಂಖ್ಯೆ 2023ರಲ್ಲಿ 142.86 ಕೋಟಿಗೆ ಹೆಚ್ಚಳಗೊಂಡಿದೆ. ಆದರೆ, ಹೆಚ್ಚಿದ ಜನಸಂಖ್ಯೆಗೆ ಅನುಗುಣವಾಗಿ ಫಲಾನುಭವಿ(ರೇಷನ್ ಕಾರ್ಡ್)ಗಳನ್ನು ಹೆಚ್ಚಿಸಿಲ್ಲ. ಇದರಿಂದ ದೇಶಾದ್ಯಂತ 11.3 ಕೋಟಿ ಜನ ಪಿಡಿಎಸ್‌ನಿಂದ ಹೊರಗಿದ್ದಾರೆ; ಕರ್ನಾಟಕದಲ್ಲಿ ಇಂಥವರ ಸಂಖ್ಯೆ 11 ಲಕ್ಷ. ಅನ್ನಭಾಗ್ಯ ಯೋಜನೆಯಂತೆ ರಾಜ್ಯದ 4.42 ಕೋಟಿ ಜನರಿಗೆ(ಇದರಲ್ಲಿ ಅಂತ್ಯೋದಯ ಅನ್ನ ಯೋಜನೆಯ 45 ಲಕ್ಷ, 3.58 ಕೋಟಿ ಆದ್ಯತೆಯ ಕುಟುಂಬ ಕಾರ್ಡ್‌ದಾರರು, ಪಿಎಚ್‌ಎಚ್ ಮತ್ತು 39 ದಶಲಕ್ಷ ರಾಜ್ಯದ ಆದ್ಯತೆ ಕುಟುಂಬ ಕಾರ್ಡ್‌ದಾರರು ಸೇರಿದ್ದಾರೆ) ತಲಾ 10 ಕೆಜಿ ಅಕ್ಕಿ ನೀಡಬೇಕಾಗುತ್ತದೆ. ಹೆಚ್ಚುವರಿ ಐದು ಕೆಜಿ ಅಕ್ಕಿ ನೀಡಲು ಮಾಸಿಕ 2.3 ಲಕ್ಷ ಟನ್ ಧಾನ್ಯ ಬೇಕಾಗುತ್ತದೆ. ಕೊರತೆ ಪೂರೈಸಲು ರಾಜ್ಯ ಸಹಜವಾಗಿಯೇ ಭಾರತೀಯ ಆಹಾರ ನಿಗಮದ ಮೊರೆ ಹೋಯಿತು. ಮೊದಲು ಸಕಾರಾತ್ಮಕವಾಗಿ ಸ್ಪಂದಿಸಿದ್ದ ಎಫ್‌ಸಿಐ, ಆನಂತರ ರಾಗ ಬದಲಿಸಿತು. ಆನಂತರ, ಕೇಂದ್ರ ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ(ಒಎಂಎಸ್‌ಎಸ್)ಯಡಿ ರಾಜ್ಯಗಳಿಗೆ ಧಾನ್ಯ ಕೊಡುವುದಿಲ್ಲ; ಅಗತ್ಯವಿದ್ದವರು ಮಾರುಕಟ್ಟೆಯಿಂದ ಖರೀದಿಸಬೇಕು. ಹರಾಜಿನ ಮೂಲಕ ಖಾಸಗಿಯವರಿಗೆ-ಸಣ್ಣ ಪ್ರಮಾಣದ ಖರೀದಿದಾರರಿಗೆ ಧಾನ್ಯ ನೀಡಲಾಗುತ್ತದೆ ಎಂದು ಹೇಳಿತು. ಒಎಂಎಸ್‌ಎಸ್ ಅಡಿ ಸಣ್ಣ ಮತ್ತು ಅಂಚಿನ ವ್ಯಾಪಾರಿಗಳು 10-100 ಟನ್ ಧಾನ್ಯ ಮಾತ್ರ ಖರೀದಿಸಬಹುದಾಗಿದೆ.

ಎಫ್‌ಸಿಐ ಮೂರು ಉದ್ದೇಶಕ್ಕಾಗಿ ಧಾನ್ಯ ಸಂಗ್ರಹಿಸುತ್ತದೆ; ಕನಿಷ್ಠ ಬೆಂಬಲ ಬೆಲೆಗೆ ಧಾನ್ಯ ಖರೀದಿಸುವ ಮೂಲಕ ರೈತರಿಗೆ ಬೆಂಬಲ ನೀಡುವುದು, ಸಾರ್ವಜನಿಕ ವಿತರಣೆ ವ್ಯವಸ್ಥೆ(ಪಿಡಿಎಸ್)ಯಡಿ ಸಬ್ಸಿಡಿಯಲ್ಲಿ ಧಾನ್ಯ ಪೂರೈಸಲು ಹಾಗೂ ಕಾಪು ದಾಸ್ತಾನಿನ ಮೂಲಕ ಬೆಲೆ ಸ್ಥಿರೀಕರಣಕ್ಕಾಗಿ. ಎಫ್‌ಸಿಐ ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ-ದೇಶಿ(ಒಎಂಎಸ್‌ಎಸ್-ಡಿ)ಯಡಿ ಮೊದಲೇ ನಿರ್ಧರಿಸಿದ ಬೆಲೆಗೆ ರಾಜ್ಯಗಳಿಗೆ ಅಕ್ಕಿ-ಗೋಧಿ ಮಾರಾಟ ಮಾಡುತ್ತದೆ. ಒಎಂಎಸ್‌ಎಸ್ ಸ್ಥಗಿತಗೊಳಿಸಲು ಸರಕಾರ ನೀಡಿದ ಕಾರಣಗಳೆಂದರೆ, ಮೊದಲಿಗೆ, ಹಣದುಬ್ಬರದ ನಿಯಂತ್ರಣ; ಎರಡನೆಯದಾಗಿ, ರಾಜ್ಯಗಳಿಗೆ ಧಾನ್ಯ ನೀಡುವ ಬದಲು ಮಾರುಕಟ್ಟೆಗೆ ಧಾನ್ಯ ಬಿಡುಗಡೆ ಮಾಡಿದರೆ, ಬೆಲೆ ಸ್ಥಿರೀಕರಣ ಸಮರ್ಪಕವಾಗಿರಲಿದೆ. ಆದರೆ, ಇದು ಸಮರ್ಪಕ ಕಾರಣವಲ್ಲ. ಏಕೆಂದರೆ, ಅಕ್ಕಿ-ಗೋಧಿ ಖರೀದಿಸಿದ ಖಾಸಗಿ ವ್ಯಾಪಾರಿಗಳು ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಧಾನ್ಯ ನೀಡುವ ಖಾತ್ರಿ ಇಲ್ಲ; ಮಾತ್ರವಲ್ಲದೆ, ಅಕ್ರಮವಾಗಿ ದಾಸ್ತಾನು ಮಾಡಿ ಮಾರುಕಟ್ಟೆಯಲ್ಲಿ ಕೊರತೆ ಸೃಷ್ಟಿಸುವುದರಿಂದ ಬೆಲೆ ಏರಿಕೆಯ ಸಾಧ್ಯತೆ ಇದೆ. ಮೂರನೆಯದಾಗಿ, ಬರ-ಪ್ರವಾಹ ಮತ್ತಿತರ ನೈಸರ್ಗಿಕ ಅವಘಡಗಳ ಸಾಧ್ಯತೆ ಇರುವುದರಿಂದ ಧಾನ್ಯ ಸಂಗ್ರಹ ತೃಪ್ತಿಕರ ಮಟ್ಟದಲ್ಲಿ ಇರಬೇಕು. ಆದರೆ, ಎಫ್‌ಸಿಐ ಗೋದಾಮಿನಲ್ಲಿ ಧಾನ್ಯ ಸಂಗ್ರಹ ತೃಪ್ತಿಕರವಾಗಿದೆ. ಕೋವಿಡ್ ಸಮಯದಲ್ಲಿ ದುಪ್ಪಟ್ಟು ಪಡಿತರ ನೀಡಿದ್ದರೂ, ಸಂಗ್ರಹಿಸಿದ್ದ ಧಾನ್ಯದ ಪ್ರಮಾಣ ಕಾಪು ದಾಸ್ತಾನಿಗಿಂತ ದುಪ್ಪಟ್ಟು ಇದ್ದಿತ್ತು. ನಾಲ್ಕನೆಯದಾಗಿ, ರಾಜ್ಯಗಳು ಧಾನ್ಯವನ್ನು ಕೇಂದ್ರದ ವಿವಿಧ ಯೋಜನೆಗಳ ಫಲಾನುಭವಿಗಳಿಗೇ ನೀಡುತ್ತಿವೆ. ಐದನೆಯದಾಗಿ, ಪಿಡಿಎಸ್‌ಗೆ ಒಳಪಡದ 60 ಕೋಟಿ ಜನರಿಗೆ ಧಾನ್ಯ ಪೂರೈಸಬೇಕಾದ ಜವಾಬ್ದಾರಿ ಕೇಂದ್ರದ ಮೇಲಿದೆ.

ಒಕ್ಕೂಟ ಸರಕಾರ ಒಎಂಎಸ್‌ಎಸ್ ಅಡಿ ಧಾನ್ಯ ಮಾರಾಟ ನಿಲ್ಲಿಸಿದ್ದರಿಂದ ಅಕ್ಕಿ ಕೊರತೆಯಿದ್ದ ರಾಜ್ಯಗಳು, ವಿಶೇಷವಾಗಿ ಕರ್ನಾಟಕ ಕಷ್ಟಕ್ಕೆ ಸಿಲುಕಿದೆ. ರಾಗಿ/ಜೋಳವನ್ನು ನೀಡಬಹುದಾದರೂ, ಅಗತ್ಯವಿರುವಷ್ಟು ದಾಸ್ತಾನಿಲ್ಲ. ಕೋವಿಡ್ ವೇಳೆ ಆರಂಭಿಸಿದ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ(ಪಿಎಂಜಿಕೆಎವೈ) ಸ್ಥಗಿತಗೊಂಡಿದೆ. ಇದರಡಿ ಎಎವೈ ಮತ್ತು ಪಿಎಚ್‌ಎಚ್ ಕಾರ್ಡುದಾರರಿಗೆ 5 ಕೆಜಿ ಅಕ್ಕಿ ನೀಡಲಾಗುತ್ತಿತ್ತು. 2017-18ರಿಂದ 2020-2021ರ ಅವಧಿಯಲ್ಲಿ ಒಎಂಎಸ್‌ಎಸ್‌ನ ಅಧಿಕ ಪಾಲನ್ನು ರಾಜ್ಯಗಳೇ ಖರೀದಿಸಿವೆ. ಕಳೆದ ಎಂಟು ವರ್ಷದಲ್ಲಿ ಒಎಂಎಸ್‌ಎಸ್ ಅಡಿ 68 ಲಕ್ಷ ಮೆಟ್ರಿಕ್ ಟನ್‌ಗೂ ಅಧಿಕ ಅಕ್ಕಿ ಮಾರಾಟವಾಗಿದ್ದು, ಇದರಲ್ಲಿ ಶೇ.30ರಷ್ಟನ್ನು ಕರ್ನಾಟಕ ಖರೀದಿಸಿದೆ. ಜಮ್ಮು-ಕಾಶ್ಮೀರ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಮತ್ತು ಕೇರಳ ಹೆಚ್ಚು ಅಕ್ಕಿ ಖರೀದಿಸಿದ ಉಳಿದ ರಾಜ್ಯಗಳು. 2018-19ರಿಂದ 2022-23ರವರೆಗೆ ವಾರ್ಷಿಕ ಸರಾಸರಿ 16 ಲಕ್ಷ ಟನ್ ಧಾನ್ಯ ಎತ್ತುವಳಿಯಾಗಿದ್ದು, 2020-21ರಲ್ಲಿ ಗರಿಷ್ಠ 27.5 ಲಕ್ಷ ಟನ್ ಎತ್ತುವಳಿ ಆಗಿದೆ. ರಾಜ್ಯಗಳು ಧಾನ್ಯಗಳ ಉತ್ಪಾದನೆ ಮತ್ತು ಬೇಡಿಕೆ ನಡುವಿನ ಕೊರತೆಯನ್ನು ಒಎಂಎಸ್‌ಎಸ್ ಅಡಿ(ಕರ್ನಾಟಕ, ತಮಿಳುನಾಡು ಇತ್ಯಾದಿ) ಹಾಗೂ ಇನ್ನು ಕೆಲವು ರಾಜ್ಯಗಳು ಸ್ಥಳೀಯ ಖರೀದಿ(ಒಡಿಶಾ/ಛತ್ತೀಸ್‌ಗಡ ಇತ್ಯಾದಿ)ಯಿಂದ ತುಂಬಿಕೊಳ್ಳುತ್ತವೆ. ಹೀಗಿದ್ದರೂ, ರಾಜ್ಯಗಳು ಹಾಲಿ ಜನಸಂಖ್ಯೆಗೆ ಅನುಗುಣವಾಗಿ ಪಡಿತರ ಕಾರ್ಡ್ ಕೋಟಾ ನಿಗದಿಗೊಳಿಸಬೇಕು ಹಾಗೂ ಕೋಟಾಕ್ಕೆ ಅನುಗುಣವಾಗಿ ಆಹಾರಧಾನ್ಯ ಬಿಡುಗಡೆಗೊಳಿಸಬೇಕು ಎಂದು ಕೇಂದ್ರದ ಮೇಲೆ ಒತ್ತಡ ಹೇರಿಲ್ಲ.

ಪಿಡಿಎಸ್‌ಅಡಿ 813 ದಶಲಕ್ಷ ಫಲಾನುಭವಿಗಳಿಗೆ ವಿತರಿಸಲು 60 ದಶಲಕ್ಷ ಟನ್ ಅಕ್ಕಿ/ಗೋಧಿ ಅಗತ್ಯವಿದೆ. ಕೇಂದ್ರದ ಬಳಿ ಜೂನ್ 1, 2023ರಲ್ಲಿ 41.4 ಲಕ್ಷ ಟನ್ ಅಕ್ಕಿ ಮತ್ತು 31.4 ಲಕ್ಷ ಟನ್ ಗೋಧಿ ಇದೆ. ಮೇ 24, 2023ರಲ್ಲಿ ರಾಜ್ಯ ಸರಕಾರಗಳು 1.16 ಲಕ್ಷ ಟನ್ ಧಾನ್ಯವನ್ನು ಕ್ವಿಂಟಾಲ್‌ಗೆ 3,400 ರೂ.ನಂತೆ ಎತ್ತುವಳಿ ಮಾಡಿವೆ. ಇದರಲ್ಲಿ ಕರ್ನಾಟದ ಪಾಲು 1.12 ಲಕ್ಷ ಟನ್.

ರಾಜ್ಯದ ಬಡವರಿಗೆ ಅನ್ನಭಾಗ್ಯ ಯೋಜನೆಯ 5 ಕೆಜಿ ಅಕ್ಕಿ ತಲುಪದೆ ಇರಲು ಒಕ್ಕೂಟ ಸರಕಾರದ ತಾರತಮ್ಯ ಅಥವಾ ಅವೈಜ್ಞಾನಿಕ ನೀತಿ ಮಾತ್ರ ಕಾರಣವಲ್ಲದೆ, ಧಾನ್ಯವನ್ನು ಎಥೆನಾಲ್ ಆಗಿ ಪರಿವರ್ತಿಸುವ ಪ್ರಕ್ರಿಯೆ ಕೂಡ ಕಾರಣ.

ಎಥೆನಾಲ್ ಮಿಶ್ರಣ ಯೋಜನೆ

ಇಂಧನಗಳು ದೇಶದ ಆರ್ಥಿಕ ಪ್ರಗತಿಗೆ ಅತ್ಯಗತ್ಯ. ಆದರೆ, ದೇಶ ಈ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸಿಲ್ಲ. ಒಟ್ಟು ತೈಲ ಅಗತ್ಯದ ಶೇ.86ರಷ್ಟನ್ನು ಆಮದು ಮಾಡಿಕೊಳ್ಳಲಾಗುತ್ತಿದೆ ಮತ್ತು ಇದು ಅಪಾರ ಮೊತ್ತದ ವಿದೇಶಿ ವಿನಿಮಯ ತಿನ್ನುತ್ತಿದೆ. ಪೆಟ್ರೋಲಿಯಂ ಮತ್ತು ಸ್ವಾಭಾವಿಕ ಅನಿಲ ಮಂತ್ರಾಲಯದ ಪೆಟ್ರೋಲಿಯಂ ಪ್ಲಾನಿಂಗ್ ಆ್ಯಂಡ್ ಅನಾಲಿಸಿಸ್ ಸೆಲ್ ಪ್ರಕಾರ, ದೇಶ 232.4 ದಶಲಕ್ಷ ಟನ್ ಕಚ್ಚಾ ತೈಲ ಆಮದು ಮಾಡಿಕೊಳ್ಳುತ್ತಿದ್ದು, ಇದರ ಮೌಲ್ಯ 158.3 ಶತಕೋಟಿ ಡಾಲರ್. ದೇಶಿ ಉತ್ಪಾದನೆಯು ಬೇಡಿಕೆಯ ಶೇ.12.7ರಷ್ಟು ಮಾತ್ರ ಇದೆ. ಇದನ್ನು ತಪ್ಪಿಸಲು ಸರಕಾರ ‘ಎಥೆನಾಲ್ ಕಾರ್ಯನೀತಿ 2020-2025’ನ್ನು ರೂಪಿಸಿದ್ದು, 2025-26ರೊಳಗೆ ಪೆಟ್ರೋಲ್‌ನಲ್ಲಿ ಶೇ.20 ಎಥೆನಾಲ್ ಮಿಶ್ರಗೊಳಿಸುವುದು ಇದರ ಉದ್ದೇಶ. ಆದರೆ, ಸಮಸ್ಯೆ ಇರುವುದು ಈ ಎಥೆನಾಲ್‌ನ ಮೂಲ ಅಕ್ಕಿ, ಕಬ್ಬು ಮತ್ತು ಜೋಳ ಎಂಬುದರಲ್ಲಿ. ಅಕ್ಕಿಯಲ್ಲಿ ಪಿಷ್ಟ ಅಧಿಕ ಪ್ರಮಾಣದಲ್ಲಿ ಇರುವುದರಿಂದ, ಅದಕ್ಕೆ ಪ್ರಾಧಾನ್ಯ ನೀಡಲಾಗುತ್ತದೆ. ನೀತಿ ಆಯೋಗದ ಪರಿಣತ ಸಮಿತಿಯ ದಾಖಲೆ ‘ರೋಡ್‌ಮ್ಯಾಪ್ ಫಾರ್ ಎಥೆನಾಲ್ ಬ್ಲೆಂಡಿಂಗ್ ಇನ್ ಇಂಡಿಯಾ, 2020-25’ ಅನುಸಾರ, ಪೆಟ್ರೋಲ್‌ನಲ್ಲಿ ಶೇ.20ರಷ್ಟು ಮಿಶ್ರಗೊಳಿಸಲು 10.16 ಶತಕೋಟಿ ಲೀಟರ್ ಎಥೆನಾಲ್ ಬೇಕಾಗುತ್ತದೆ. ಇದರಲ್ಲಿ ಶೇ.45ರಷ್ಟು(4.66 ಶತಕೋಟಿ ಲೀಟರ್) ಆಹಾರ ನಿಗಮ ಇಲ್ಲವೆ ಮುಕ್ತ ಮಾರುಕಟ್ಟೆಯಲ್ಲಿ ಖರೀದಿಸಿದ ಅಕ್ಕಿಯಿಂದ ಬರಬೇಕು. ಇಷ್ಟು ಮಾತ್ರವಲ್ಲದೆ, 3.34 ಶತಕೋಟಿ ಲೀಟರ್ ಸೇವಿಸಬಹುದಾದ ಆಲ್ಕೋಹಾಲ್ ಮತ್ತು ಔಷಧ ತಯಾರಿಕೆ ಉದ್ಯಮಕ್ಕೆ 2 ಶತಕೋಟಿ ಲೀಟರ್ ಎಥೆನಾಲ್ ಅಗತ್ಯವಿದ್ದು, ಇದರ ಮೂಲ ಕೂಡ ಅಕ್ಕಿ. 100 ಗ್ರಾಂ ಅಕ್ಕಿಯಿಂದ 29.2 ಗ್ರಾಂ ಎಥೆನಾಲ್ ಉತ್ಪಾದಿಸಬಹುದು. 2022ರಲ್ಲಿ 5.3 ಶತಕೋಟಿ ಲೀಟರ್ ಎಥೆನಾಲ್ ಉತ್ಪತ್ತಿಯಾಗಿತ್ತು ಮತ್ತು 2023ರಲ್ಲಿ 6.3 ಶತಕೋಟಿ ಲೀಟರ್ ಎಥೆನಾಲ್ ಉತ್ಪಾದನೆಯ ಗುರಿ ಹಾಕಿಕೊಳ್ಳಲಾಗಿದೆ(ಸ್ಟಾಟಿಸ್ಟಾ.ಕಾಂ). ಇದಕ್ಕಾಗಿ ಬಳಸಬೇಕಾದ ಅಕ್ಕಿ/ಕಬ್ಬು/ಜೋಳದ ಪ್ರಮಾಣವನ್ನು ಲೆಕ್ಕ ಹಾಕಿದರೆ ದಿಗಿಲಾಗುತ್ತದೆ.

ಒಎಂಎಸ್‌ಎಸ್ ಕಟ್ಟುಪಾಡು ಎಥೆನಾಲ್ ಉತ್ಪಾದನೆಗೆ ನೀಡುವ ಅಕ್ಕಿಗೆ ಅನ್ವಯಿಸುವುದಿಲ್ಲ. ಎಫ್‌ಸಿಐ ಈ ಅಕ್ಕಿಗೆ ಕೆಜಿಗೆ 20 ರೂ. ನಿಗದಿಪಡಿಸಿದೆ. ಎಥೆನಾಲ್ ಉತ್ಪಾದನೆಗೆ ನೀಡಿದ ಅಕ್ಕಿ ಪ್ರಮಾಣ ಎಪ್ರಿಲ್ 2021ರಲ್ಲಿ 5,500 ಮೆಟ್ರಿಕ್ ಟನ್‌ನಿಂದ ಮೇ 2023ಕ್ಕೆ 2,50,000 ಮೆಟ್ರಿಕ್ ಟನ್‌ಗೆ ಹೆಚ್ಚಳಗೊಂಡಿದೆ (ಶೇ.4748 ಹೆಚ್ಚಳ)! 2022-23ರಲ್ಲಿ ಎಥೆನಾಲ್ ಉತ್ಪಾದನೆಗೆ ನೀಡಿದ ಅಕ್ಕಿ ಪ್ರಮಾಣವು ಎಲ್ಲ ರಾಜ್ಯಗಳಿಗೆ ಒಎಂಎಸ್‌ಎಸ್ ನೀಡಲಾದ ಧಾನ್ಯಕ್ಕಿಂತ ಆರು ಪಟ್ಟು ಹೆಚ್ಚು ಇದ್ದಿತ್ತು. ಒಕ್ಕೂಟ ಸರಕಾರದ ಆದ್ಯತೆ ಎಥೆನಾಲ್ ಉತ್ಪಾದನೆಯೇ ಹೊರತು ಅನ್ನಭಾಗ್ಯವಲ್ಲ ಎನ್ನುವುದು ಇದರಿಂದ ಖಾತ್ರಿಯಾಗುತ್ತದೆ. ಪೂರ್ವಸಿದ್ಧತೆಯ ಕೊರತೆ

ಅನ್ನಭಾಗ್ಯ ಯೋಜನೆ ಜಾರಿಗೆ ಸಾಕಷ್ಟು ಪೂರ್ವಸಿದ್ಧತೆ ನಡೆದಿಲ್ಲ. ಬಿಪಿಎಲ್ ಕುಟುಂಬಗಳು ಮಾತ್ರವಲ್ಲದೆ, ಪಿಡಿಎಸ್ ವ್ಯವಸ್ಥೆಯಡಿ ಬಾರದ ಬಡವವರಿಗೂ ಪಡಿತರ ವಿತರಣೆ ಆಗಬೇಕಿದೆ. ಫಲಾನುಭವಿಗಳಿಗೆ ಅಕ್ಕಿ/ಗೋಧಿ ನೀಡಲಾಗುತ್ತಿದೆಯೇ ಹೊರತು ಖಾದ್ಯತೈಲ, ಬೇಳೆ ನೀಡುತ್ತಿಲ್ಲ. ತಮಿಳುನಾಡು, ಆಂಧ್ರಪ್ರದೇಶ, ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಸಬ್ಸಿಡಿ ದರದಲ್ಲಿ ಬೇಳೆ ಮತ್ತು ಖಾದ್ಯ ತೈಲ ನೀಡಲಾಗುತ್ತಿದೆ. ಅಕ್ಕಿ/ಗೋಧಿಗೆ ಸೀಮಿತಗೊಳಿಸದೆ, ಪ್ರದೇಶಕ್ಕೆ ಅನುಗುಣವಾಗಿ ರಾಗಿ/ಜೋಳ ಇಲ್ಲವೇ ಸಿರಿಧಾನ್ಯಗಳ ವಿತರಣೆಯನ್ನು ಪರಿಗಣಿಸಬಹುದು. ಸ್ಥಳೀಯ ಆಹಾರ ಕ್ರಮಗಳ ಭಾಗವಾದ ರಾಗಿ/ಜೋಳ, ಅಕ್ಕಿಗಿಂತ ಹೆಚ್ಚು ಪುಷ್ಟಿಕರ. ಕರ್ನಾಟಕ ಸಿರಿಧಾನ್ಯದ ಪ್ರಮುಖ ಉತ್ಪಾದಕ ರಾಜ್ಯವಾಗಿದ್ದು, ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿಸಿದರೆ ರೈತರಿಗೆ ಪ್ರಯೋಜನವಾಗಲಿದೆ. ಯೋಜನೆಯನ್ನು ಅಕ್ಕಿ-ಗೋಧಿಗೆ ಸೀಮಿತಗೊಳಿಸಬಾರದು. ರಾಜ್ಯದಲ್ಲಿ 2022ರಲ್ಲಿ 115 ಲಕ್ಷ ಟನ್ ಆಹಾರ ಧಾನ್ಯಗಳು/ಬೇಳೆಕಾಳು ಉತ್ಪಾದನೆಯಾಗಿದೆ(2019-20ರಲ್ಲಿ 141 ಲಕ್ಷ ಟನ್ ಹಾಗೂ 2020-21ರಲ್ಲಿ 161 ಲಕ್ಷ ಟನ್). ‘‘ಅನ್ನಭಾಗ್ಯವನ್ನು ರಾಜ್ಯದಲ್ಲಿನ ಉತ್ಪಾದನೆಯಿಂದಲೇ ನಿಭಾಯಿಸಬಹುದು. ನಿಜವಾದ ಫಲಾನುಭವಿಗಳನ್ನು ಗುರುತಿಸಲು ಸಮೀಕ್ಷೆ ನಡೆಸಬೇಕು. ಒಂದು ವೇಳೆ ಆದಾಯ ಕೊರತೆಯಾದಲ್ಲಿ ಕೈಗಾರಿಕೆಗಳಿಗೆ ನೀಡುವ ನಿವೇಶನ, ಪೂರೈಕೆಯಾಗುವ ನೀರು, ವಿದ್ಯುತ್‌ಗೆ ಸಬ್ಸಿಡಿ ಕಡಿತಗೊಳಿಸಬೇಕು. ಸಂಪತ್ತಿನ ಸಮಾನ ಹಂಚಿಕೆ ಆಗಬೇಕು’’ ಎನ್ನುತ್ತಾರೆ ರೈತ ಮುಖಂಡ ಅರಳಾಳುಸಂದ್ರದ ಸಿ.ಪುಟ್ಟಸ್ವಾಮಿ.

ಅಕ್ಕಿ ಅಥವಾ ಯಾವುದೇ ಧಾನ್ಯವನ್ನು ಹಸಿದವರ ಹೊಟ್ಟೆ ತುಂಬಿಸಲು ಕೊಡಬೇಕೋ ಅಥವಾ ಎಥೆನಾಲ್ ಉತ್ಪಾದಿಸಲು ನೀಡಬೇಕೋ ಎನ್ನುವುದು ಮಿಲಿಯನ್ ಡಾಲರ್ ಪ್ರಶ್ನೆಯೇನಲ್ಲ. ಸರಳವಾದ, ನೈತಿಕ ಕಾಳಜಿಯ ಪ್ರಶ್ನೆ ಅದು; ಕ್ಷುಲ್ಲಕ ರಾಜಕೀಯದ ಪ್ರಶ್ನೆಯಲ್ಲ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ಮಾಧವ ಐತಾಳ್

contributor

Similar News