ನೇಪಥ್ಯಕ್ಕೆ ಸರಿದ ರೂಪರ್ಟ್ ಮರ್ಡೋಕ್
ಮಾಧ್ಯಮ ಪರಿಣತರ ಪ್ರಕಾರ, ಮರ್ಡೋಕ್ ನಿರ್ಗಮನದಿಂದ ಫಾಕ್ಸ್‌ನ ಸಂಪಾದಕೀಯ ನೀತಿಯಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಸಾಂಪ್ರದಾಯಿಕ ಬಲಪಂಥೀಯ ರಾಜಕೀಯ ನಿಲುವು ಮುಂದುವರಿಯಲಿದೆ. ಇದರಿಂದ ಅಮೆರಿಕದ 2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ನರಿಗೆ ಪ್ರಯೋಜನ ಆಗಬಹುದು. ಮರ್ಡೋಕ್ ಗೌರವ ಸ್ಥಾನದಲ್ಲಿ ಮುಂದುವರಿಯುವುದರಿಂದ, ನಾಟಕೀಯ ಎನ್ನುವ ಬದಲಾವಣೆಯ ಸಾಧ್ಯತೆ ಕಡಿಮೆ. ‘‘ತಾವೇ ಸೃಷ್ಟಿಸಿದ ಬಿಕ್ಕಟ್ಟಿನ ಸುತ್ತ ಉನ್ಮಾದವನ್ನು ಹೆಚ್ಚಿಸುವುದು, ವಿಚ್ಛೇದ ಮತ್ತು ದ್ವೇಷ ಸೃಷ್ಟಿ ಹಾಗೂ ಸಂಪ್ರದಾಯವಾದಿ ನಿಲುವಿಗೆ ಬೆಂಬಲ ನೀಡುವಿಕೆ ಮುಂದುವರಿಯುತ್ತದೆ’’ ಎಂದು ಪೆನ್ಸಿಲ್ವೇನಿಯಾ ವಿಶ್ವವಿದ್ಯಾನಿಲಯದ ಪ್ರೊ.ವಿಕ್ಟರ್ ಪಿಕಾರ್ಡ್ ಹೇಳುತ್ತಾರೆ.
ಬಹಳ ವರ್ಷಗಳ ಹಿಂದೆ ವಿ.ಕೆ.(ವೆಂಗಾಲಿ ಕೃಷ್ಣನ್)ಕೃಷ್ಣ ಮೆನನ್, ‘‘ಭಾರತದಲ್ಲಿರುವುದು ಸೆಣಬಿನ ಮಾಧ್ಯಮ’’ ಎಂದು ಹೇಳಿದ್ದರು. ಆಗ ಅಭಿಪ್ರಾಯಗಳನ್ನು ರೂಪಿಸುತ್ತಿದ್ದುದು ಸೆಣಬು ಉದ್ಯಮಿಗಳ ಒಡೆತನದಲ್ಲಿದ್ದ ಅರ್ಧ ಡಜನ್ ಇಂಗ್ಲಿಷ್ ಪತ್ರಿಕೆಗಳು. ಈ ಹೇಳಿಕೆ ವಿವಾದ ಹುಟ್ಟುಹಾಕಿತ್ತು. ಅಂದಾಜು ನೂರು ವರ್ಷಗಳ ಬಳಿಕವೂ ಪರಿಸ್ಥಿತಿ ಬದಲಾಗಿಲ್ಲ. ಸೆಣಬಿನ ಜಾಗದಲ್ಲಿ ಬೇರೆ ಉದ್ಯಮಿಗಳು ಬಂದು ಕುಳಿತಿದ್ದಾರೆ.
ಮಾಧ್ಯಮ ಉದ್ಯಮಿ ರೂಪರ್ಟ್ ಮರ್ಡೋಕ್ ಏಳು ದಶಕಗಳ ಬಳಿಕ ಸೆಪ್ಟಂಬರ್ 21ರಂದು ನೇಪಥ್ಯಕ್ಕೆ ಸರಿದಿದ್ದಾರೆ. ಅತ್ಯಂತ ಪ್ರಭಾವಶಾಲಿ, ವಿವಾದಾತ್ಮಕ, ನಿಷ್ಕರುಣಿ ಮತ್ತು ಲಾಭವೊಂದನ್ನೇ ಗುರಿಯಾಗಿಸಿಕೊಂಡಿದ್ದ ಮರ್ಡೋಕ್, ಜನರ ಭಯ, ಅಭದ್ರತೆ ಮತ್ತು ತಾರತಮ್ಯ ಭಾವನೆಗಳನ್ನು ಬಂಡವಾಳವಾಗಿಸಿಕೊಂಡಿದ್ದವರು. ತಮ್ಮ 21ನೇ ವಯಸ್ಸಿನಲ್ಲಿ ಆಸ್ಟ್ರೇಲಿಯದಲ್ಲಿ ಮಾಧ್ಯಮ ಕ್ಷೇತ್ರವನ್ನು ಪ್ರವೇಶಿಸಿದ ಮರ್ಡೋಕ್, ಆನಂತರ ಇಂಗ್ಲೆಂಡ್ ಮತ್ತು ಅಮೆರಿಕಕ್ಕೆ ಕಾಲಿಟ್ಟರು. ಅಧಿಕಾರಸ್ಥರನ್ನು ನಿಯಂತ್ರಿಸುತ್ತ, ಪ್ರಭಾವಿಸುತ್ತ ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸಿದರು.
ಆಸ್ಟ್ರೇಲಿಯದಲ್ಲಿ ಜನಿಸಿದ ಮರ್ಡೋಕ್, ಆಕ್ಸ್‌ಫರ್ಡ್‌ನಲ್ಲಿ ಅಧ್ಯಯನ ಮಾಡುತ್ತಿದ್ದಾಗ ಪಿತ್ರಾರ್ಜಿತವಾಗಿ ಬಂದಿದ್ದ 75,000 ಪ್ರಸರಣ ಸಂಖ್ಯೆಯಿದ್ದ ‘ನ್ಯೂಸ್ ಆಫ್ ಅಡಿಲೇಡ್’ನ ಸಾರಥ್ಯ ವಹಿಸಿಕೊಳ್ಳುವ ಮೂಲಕ ಉದ್ಯಮಕ್ಕೆ ಪ್ರವೇಶಿಸಿದರು. ಆನಂತರ, ಆಸ್ಟ್ರೇಲಿಯದ ಅತ್ಯಂತ ದೊಡ್ಡ ವೃತ್ತಪತ್ರಿಕೆ ಗುಂಪನ್ನು ಸೃಷ್ಟಿಸಿದರು. ಮಹತ್ವಾಕಾಂಕ್ಷಿಯಾಗಿದ್ದ ಅವರು 1960ರ ಅಂತ್ಯಭಾಗದಲ್ಲಿ ಇಂಗ್ಲೆಂಡ್‌ನ ವೃತ್ತಪತ್ರಿಕೆಗಳಾದ ‘ನ್ಯೂಸ್ ಆಫ್ ದ ವರ್ಲ್ಡ್’ ಹಾಗೂ ‘ದ ಸನ್’ನ್ನು ಖರೀದಿಸಿದರು. 1980ರಲ್ಲಿ ‘ದ ಟೈಮ್ಸ್’ ಹಾಗೂ ‘ದ ಸಂಡೇ ಟೈಮ್ಸ್’ ಖರೀದಿಸುವ ಮೂಲಕ ಇಂಗ್ಲೆಂಡ್‌ನಲ್ಲಿ ಮಾಧ್ಯಮ ವನ್ನು ನಿಯಂತ್ರಿಸಲಾರಂಭಿಸಿದರು. ಅಟ್ಲಾಂಟಿಕ್ ದಾಟಿ ಅಮೆರಿಕಕ್ಕೆ ಕಾಲಿಟ್ಟು ಫಾಕ್ಸ್ ಕಾರ್ಪೊರೇಷನ್ ಸ್ಥಾಪಿಸಿ, ‘ನ್ಯೂಯಾರ್ಕ್ ಪೋಸ್ಟ್’ ಟ್ಯಾಬ್ಲಾಯ್ಡ್ ಖರೀದಿಸಿದರು; ಮಾರಿದರು ಹಾಗೂ ಮತ್ತೆ ಖರೀದಿಸಿದರು. ಅತಿ ಹೆಚ್ಚು ವೀಕ್ಷಕರಿರುವ ‘ಫಾಕ್ಸ್ ನ್ಯೂಸ್’ ಚಾನೆಲ್, ನ್ಯೂಸ್ ಕಾರ್ಪ್ ಒಡೆತನದ ‘ದ ಟೈಮ್ಸ್’ ಹಾಗೂ ‘ವಾಲ್‌ಸ್ಟ್ರೀಟ್ ಜರ್ನಲ್’, ಪ್ರಕಾಶನ ಸಂಸ್ಥೆ ಹಾರ್ಪರ್ ಕಾಲಿನ್ಸ್ ಮತ್ತು ಕೇಬಲ್ ಟಿವಿ ಚಾನೆಲ್ ‘ಸ್ಕೈನ್ಯೂಸ್’ ಅವರ ಬತ್ತಳಿಕೆ ಸೇರಿದವು. ಸಿನೆಮಾ ತಯಾರಿಕೆಗೂ ಕಾಲಿಟ್ಟು ‘ಟ್ವೆಂಟಿಯೆಥ್ ಸೆಂಚುರಿ ಫಾಕ್ಸ್’ ಖರೀದಿಸಿ, ಆನಂತರ ಡಿಸ್ನೆಗೆ 71 ಶತಕೋಟಿ ಡಾಲರ್‌ಗೆ ಮಾರಿದರು. ಭಾರತಕ್ಕೆ ಕಾಲಿಡಲು ಒಮ್ಮೆ ಪ್ರಯತ್ನಿಸಿದರು. ‘ದ ಮೇಕಿಂಗ್ ಆಫ್ ಸ್ಟಾರ್ ಇಂಡಿಯಾ’ದ ಲೇಖಕಿ ವನಿತಾ ಕೊಹ್ಲಿ ಖಂಡೇಕರ್, ‘‘1993ರಲ್ಲಿ ಸ್ಟಾರ್ ಟಿವಿಯಲ್ಲಿ 870 ದಶಲಕ್ಷ ಡಾಲರ್ ನಷ್ಟ ಮಾಡಿಕೊಂಡಿದ್ದರು’’ ಎಂದು ಬರೆದಿದ್ದಾರೆ.
ಅತ್ಯಂತ ಪ್ರಭಾವಶಾಲಿ
ತಮ್ಮ ಪತ್ರಿಕೆಗಳನ್ನು ಜನರು ಓದುವಂತೆ ಹಾಗೂ ಚಾನೆಲ್‌ಗಳನ್ನು ವೀಕ್ಷಿಸುವಂತೆ ಮಾಡಲು ಬೇಕಿದ್ದನ್ನೆಲ್ಲ ಮಾಡಿದರು. ‘‘ನಿಜವಾದ ಪರೀಕ್ಷೆ ಎಂದರೆ, ಪತ್ರಿಕೆಯನ್ನು ಕೈಯಲ್ಲಿ ಹಿಡಿದು ಓದುವುದು ನಮಗೆ ಆನಂದ ಕೊಡುತ್ತದೆಯೇ?’’ ಎಂಬುದು ಅವರ ಪ್ರಶ್ನೆಯಾಗಿತ್ತು. ಆಸ್ಟ್ರೇಲಿಯ, ಇಂಗ್ಲೆಂಡ್ ಮತ್ತು ಅಮೆರಿಕದ ರಾಜಕೀಯವನ್ನು ಪ್ರಭಾವಿಸಿದರು. ಇಂಗ್ಲೆಂಡ್‌ನಲ್ಲಿ ಆರಂಭಿಸಿದ ಟ್ಯಾಬ್ಲಾಯ್ಡ್ ಪತ್ರಿಕೆ ‘ದ ಸನ್’, ಪ್ರಸಿದ್ಧ ವ್ಯಕ್ತಿಗಳ ಕುರಿತ ವರ್ಣರಂಜಿತ ಗಾಳಿ ಸುದ್ದಿಗಳು ಮತ್ತು ಕ್ರೀಡೆಯ ಸಮ್ಮಿಶ್ರಣವಾಗಿತ್ತು. ರೂಪದರ್ಶಿಗಳ ಛಾಯಾಚಿತ್ರ 44 ವರ್ಷ ಎಡೆಬಿಡದೆ ಪ್ರಕಟಗೊಂಡಿತು. ಟಿವಿ ಕ್ಷೇತ್ರಕ್ಕೆ ಕಾಲಿಡಲು ನಡೆಸಿದ ಪ್ರಯತ್ನ ಅಪಾರ ನಷ್ಟಕ್ಕೆ ಕಾರಣವಾಯಿತು. ನಂತರ ಬಿಸ್ಕೈಬಿ ಮೂಲಕ ಫುಟ್ಬಾಲ್ ಕ್ರೀಡೆಯ ಪ್ರಸಾರದ ಮೇಲೆ ಹಿಡಿತ ಸಾಧಿಸಿ, ಅಪಾರ ಹಣ ಗಳಿಸಿದರು. 2011ರಲ್ಲಿ ಸ್ಕೈಯನ್ನು ವೃತ್ತಪತ್ರಿಕೆಯೊಳಗೆ ಐಕ್ಯಗೊಳಿಸಲು ನಡೆಸಿದ ಪ್ರಯತ್ನ ‘ಗಾರ್ಡಿಯನ್’ ಪ್ರಕಟಿಸಿದ ವರದಿಯಿಂದ ತಪ್ಪಿಹೋಯಿತು. ‘ನ್ಯೂಸ್ ಆಫ್ ದ ವರ್ಲ್ಡ್’ ನ ಪತ್ರಕರ್ತರು ಸುದ್ದಿಗಾಗಿ ಖಾಸಗಿ ಸಂದೇಶಗಳನ್ನು ಓದುತ್ತಿದ್ದರು ಮತ್ತು ಫೋನ್ ಕರೆಗಳನ್ನು ಕದ್ದು ಆಲಿಸುತ್ತಿದ್ದರು ಎಂಬುದು ಬೆಳಕಿಗೆ ಬಂದಿತು. ಸಾರ್ವಜನಿಕರು-ರಾಜಕಾರಣಿಗಳು ಎಬ್ಬಿಸಿದ ಕೋಲಾಹಲದಿಂದಾಗಿ, ಪತ್ರಿಕೆಯನ್ನು ಮುಚ್ಚಬೇಕಾಗಿ ಬಂದಿತು ಮತ್ತು ಸ್ಕೈಯನ್ನು ಐಕ್ಯಗೊಳಿಸುವ ಪ್ರಯತ್ನವೂ ಅಂತ್ಯಗೊಂಡಿತು. ಹ್ಯಾಕಿಂಗ್‌ನಿಂದ ತೊಂದರೆಗೊಳಗಾದವರಿಗೆ ಒಂದು ಶತಕೋಟಿ ಡಾಲರ್‌ನಷ್ಟು ಪರಿಹಾರ ಕೊಡಬೇಕಾಗಿ ಬಂದಿತು. ವಿಚಾರಣೆ ಸಂಸದರ ಸಮಿತಿ ಎದುರು ಹಾಜರಾದ ಮರ್ಡೋಕ್, ‘‘ಫೋನ್ ಕದ್ದಾಲಿಕೆ ಬಗ್ಗೆ ನನಗೇನೂ ಗೊತ್ತಿಲ್ಲ’’ ಎಂದರು. ‘ನ್ಯೂಸ್ ಆಫ್ ದ ವರ್ಲ್ಡ್’ನ ಸಂಪಾದಕ ಆಂಡಿ ಕೌಲ್ಸನ್ ಸೆರೆಮನೆಗೆ ಹೋದರು.
ಪಕ್ಷನಿಷ್ಠೆ ನಗಣ್ಯ
ಮರ್ಡೋಕ್‌ಗೆ ಪಕ್ಷನಿಷ್ಠೆ ಇರಲಿಲ್ಲ; ಇದ್ದುದು ಲಾಭಾಪೇಕ್ಷೆ ಮಾತ್ರ. 1960ರಲ್ಲಿ ಲೇಬರ್ ಪಕ್ಷವನ್ನು ಮತ್ತು ಆನಂತರ ಮಾರ್ಗರೆಟ್ ಥ್ಯಾಚರ್ ಅವರನ್ನು ಬೆಂಬಲಿಸಿದರು; ‘ಟೈಮ್ಸ್’ನ್ನು ಸರಕಾರದ ಬೆಂಬಲದಿಂದ ಖರೀದಿಸಿ, ಕೆಲಸಗಾರರ ಸಂಘಟನೆಯನ್ನು ಮುರಿದರು. ಇರಾಕ್ ಮೇಲೆ ದಾಳಿಗೆ ಸಂಬಂಧಿಸಿದಂತೆ ಟೋನಿ ಬ್ಲೇರ್ ಅವರನ್ನು ಬೆಂಬಲಿಸಿದರು. ಆನಂತರದ ಚುನಾವಣೆಯಲ್ಲಿ ಡೇವಿಡ್ ಕೆಮರೂನ್ ಅವರನ್ನು ಹಾಗೂ ಬ್ರೆಕ್ಸಿಟ್‌ನ್ನು ಬೆಂಬಲಿಸಿದರು. ಬೋರಿಸ್ ಜಾನ್ಸನ್ ಜೊತೆಗೆ ಖಾಸಗಿ ಭೇಟಿಗಳು ನಡೆದವು. ಮರ್ಡೋಕ್ ಪ್ರಭಾವ ಎಷ್ಟಿತ್ತು ಎಂದರೆ, ಟೋನಿ ಬ್ಲೇರ್ ಅಧ್ಯಕ್ಷರಾಗಿ ಆಯ್ಕೆಯಾಗುವ 2 ವರ್ಷ ಮೊದಲು ನ್ಯೂಸ್ ಕಾರ್ಪೊರೇಷನ್ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಮಾತನಾಡಲು 25 ಗಂಟೆ ಪ್ರಯಾಣ ಮಾಡಿ ಆಸ್ಟ್ರೇಲಿಯದ ಹೇಮನ್ ರೆಸಾರ್ಟ್ ಐಲ್ಯಾಂಡ್‌ಗೆ ತೆರಳಿದ್ದರು. ಮರ್ಡೋಕ್‌ರ ಭೇಟಿ ಮುಖ್ಯ ಉದ್ದೇಶವಾಗಿತ್ತು. 2012ರಲ್ಲಿ ಮಾಧ್ಯಮ ನೈತಿಕತೆಗೆ ಸಂಬಂಧಿಸಿದ ಸಾರ್ವಜನಿಕ ವಿಚಾರಣೆಯಲ್ಲಿ ಬ್ಲೇರ್ ಹೇಳಿದರು; ‘‘ಅವರು ನಮ್ಮನ್ನು ಹರಿದು ಮುಕ್ಕದಂತೆ ತಡೆಯುವುದು ಕನಿಷ್ಠ ಉದ್ದೇಶ; ಬೆಂಬಲ ಗಳಿಸುವುದು ಗರಿಷ್ಠ ಉದ್ದೇಶ’’.
ಅಮೆರಿಕದಲ್ಲೂ ಇದೇ ಕತೆ. 1974ರಲ್ಲಿ ನ್ಯೂಯಾರ್ಕ್‌ಗೆ ಬಂದ ಮರ್ಡೋಕ್ 10 ವರ್ಷಗಳ ಬಳಿಕ ಫಾಕ್ಸ್ ಟೆಲಿವಿಷನ್ ನೆಟ್‌ವರ್ಕ್ ಆರಂಭಿಸಿದರು. ಅಮೆರಿಕದಲ್ಲಿ ನಾಲ್ಕನೇ ಸುದ್ದಿ ಚಾನೆಲ್‌ಗೆ ಸ್ಥಳಾವಕಾಶವಿಲ್ಲ ಎಂಬ ವ್ಯಾಪಕ ಅಭಿಪ್ರಾಯವಿದ್ದಿತ್ತು. ರಿಚರ್ಡ್ ನಿಕ್ಸನ್ ಹಾಗೂ ರೊನಾಲ್ಡ್ ರೇಗನ್ ಅವರ ರಾಜಕೀಯ ಸಲಹೆಗಾರನಾಗಿದ್ದ ರೋಜರ್ ಐನ್ಸ್ ನೇತೃತ್ವದಲ್ಲಿ 1986ರಲ್ಲಿ ‘ಫಾಕ್ಸ್ ನ್ಯೂಸ್’ ಆರಂಭವಾಯಿತು. 20 ವರ್ಷ ಕಾಲ ‘ಫಾಕ್ಸ್ ನ್ಯೂಸ್’ ವಿಜೃಂಭಿಸಿತು. ಆ ಬಳಿಕ ಟಿವಿ ಆತಿಥೇಯರಾದ ಗ್ರಚ್ಚೆನ್ ಕಾರ್ಲ್‌ಸನ್ ನೇತೃತ್ವದಲ್ಲಿ 20 ಮಹಿಳೆಯರು ಐನ್ಸ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹೊರಿಸಿದರು. ಆರೋಪ ಸಾಬೀತಾಗಿ, ಐನ್ಸ್‌ರನ್ನು ವಜಾ ಮಾಡಲಾಯಿತು. ಹೀಗಿದ್ದರೂ, ‘‘ರೋಜರ್ ಐನ್ಸ್ ಬಗ್ಗೆ ಹೆಮ್ಮೆಯಿದೆ’’ ಎಂದು ಮರ್ಡೋಕ್ ಹೇಳಿದರು. ‘ಫಾಕ್ಸ್ ನ್ಯೂಸ್’ ಅಷ್ಟರಲ್ಲಿ ‘ಸಿಎನ್‌ಎನ್’ ಮತ್ತು ‘ಎಂಎಸ್‌ಎನ್‌ಬಿಸಿ’ ಚಾನೆಲ್‌ಗಳನ್ನು ಹಿಂದಿಕ್ಕಿ, ಲಾಭ ಗಳಿಸುತ್ತಿತ್ತು. 2000ದ ಚುನಾವಣೆಯಲ್ಲಿ ಫ್ಲೊರಿಡಾದಲ್ಲಿ ಅನಿಶ್ಚಿತತೆ ಇದ್ದರೂ, ಜಾರ್ಜ್ ಡಬ್ಲ್ಯು. ಬುಷ್ ಜಯಶಾಲಿಯಾಗಿದ್ದಾರೆ ಎಂದು ‘ಫಾಕ್ಸ್ ನ್ಯೂಸ್’ ಘೋಷಿಸಿತು. ಪೈಪೋಟಿಯಲ್ಲಿ ಹಿಂದೆ ಬೀಳಬಾರದೆಂದು ಇನ್ನಿತರ ಚಾನೆಲ್‌ಗಳು ಈ ಸುದ್ದಿಯನ್ನು ಪ್ರಕಟಿಸಬೇಕಾಗಿ ಬಂತು. ಇದರಿಂದ ಸಾರ್ವಜನಿಕ ಅಭಿಪ್ರಾಯ ಬದಲಾಗಿ, ರಿಪಬ್ಲಿಕನ್ನರಿಗೆ ಲಾಭವಾಯಿತು. ಶ್ವೇತಭವನದಲ್ಲಿ ಡೆಮಾಕ್ರಟಿಕ್ ಪಕ್ಷದ ಕಪ್ಪುವರ್ಣೀಯ ಬರಾಕ್ ಒಬಾಮಾ ಉಪಸ್ಥಿತಿ ‘ಫಾಕ್ಸ್ ನ್ಯೂಸ್’ಗೆ ಕಹಿಯಾಗಿ ಪರಿಣಮಿಸಿತ್ತು. ಒಬಾಮಾ ಅವರನ್ನು ‘ಬರಾಕ್ ಹುಸೇನ್ ಒಬಾಮಾ’ ಎಂದೇ ಕರೆಯಲಾಗುತ್ತಿತ್ತು. ಮರ್ಡೋಕ್ ರಾಜಕೀಯ ಪ್ರಭಾವ ಶಿಖರಕ್ಕೆ ಏರಿದ್ದು 2016ರಲ್ಲಿ ಟ್ರಂಪ್ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದಾಗ. ಇಂಗ್ಲೆಂಡ್‌ನಲ್ಲಿ ಥ್ಯಾಚರ್, ಬ್ಲೇರ್, ಕ್ಯಾಮೆರಾನ್ ಮತ್ತು ಬೋರಿಸ್ ಜಾನ್ಸನ್ ಅವರೊಟ್ಟಿಗೆ ನಡೆಸಿದ ವೈಯಕ್ತಿಕ ಲಾಬಿ ತಂತ್ರಗಾರಿಕೆಯನ್ನು ಅಮೆರಿಕದಲ್ಲೂ ಪ್ರಯೋಗಿಸಿದರು.
ಡೊನಾಲ್ಡ್ ಟ್ರಂಪ್ ಅಧಿಕಾರಾವಧಿಯಲ್ಲಿ ನಡೆದ ಅತಿರೇಕಗಳು 2020ರ ಚುನಾವಣೆಯಲ್ಲಿ ಅವರಿಗೆ ಅಪಾಯಕಾರಿಯಾಗಿ ಪರಿಣಮಿಸಿದವು. ಟ್ರಂಪ್ ಸೋಲಿಗೆ ತಂತ್ರಗಾರಿಕೆ ಕಾರಣ ಎಂದು ‘ಫಾಕ್ಸ್ ನ್ಯೂಸ್’ ಗುಂಪು ಪದೇಪದೇ ಹೇಳಿದ್ದಲ್ಲದೆ, ಡೊಮಿನಿಯನ್ ವೋಟಿಂಗ್ ಸಿಸ್ಟಮ್ಸ್ ವಂಚನೆಯಲ್ಲಿ ಭಾಗಿಯಾಗಿದೆ ಎಂದು ಆರೋಪಿಸಿತು. ಪ್ರತಿಯಾಗಿ ಡೊಮಿನಿಯನ್, ‘‘ಚುನಾವಣೆ ಸಂದರ್ಭದಲ್ಲಿ ‘ಫಾಕ್ಸ್ ನ್ಯೂಸ್’ ನೆಟ್‌ವರ್ಕ್ ಮತ್ತು ಫಾಕ್ಸ್ ಕಾರ್ಪೊರೇಷನ್ ಸುಳ್ಳುಗಳನ್ನು ಪ್ರಕಟಿಸಿದವು’’ ಎಂದು ಪ್ರಕರಣ ದಾಖಲಿಸಿತು. ಪ್ರಕರಣದ ವಿಚಾರಣೆ ಆರಂಭಕ್ಕೆ ಮುನ್ನವೇ ಸಂಧಾನ ಮಾಡಿಕೊಂಡು, ಡೊಮಿನಿಯನ್‌ಗೆ 787 ದಶಲಕ್ಷ ಡಾಲರ್(ಅಂದಾಜು 6,300 ಕೋಟಿ ರೂ.) ದಂಡ ತೆರಲಾಯಿತು. ಸಾಂಪ್ರದಾಯಿಕ ಮಾಧ್ಯಮ ಕಂಪೆನಿಗಳು ಆರ್ಥಿಕ ಬಿಕ್ಕಟ್ಟಿನಿಂದ ಪರದಾಡುತ್ತಿದ್ದ ಸಂದರ್ಭದಲ್ಲಿ ಭಾರೀ ಎನ್ನಬಹುದಾದ ಮೊತ್ತ ಇದು. ಪ್ಯೂ ರಿಸರ್ಚ್ ಕೇಂದ್ರದ ಅಂಕಿಅಂಶಗಳ ಪ್ರಕಾರ, 2022ರಲ್ಲಿ ‘ಫಾಕ್ಸ್ ನ್ಯೂಸ್’ ಆದಾಯ ಶೇ.5ರಷ್ಟು ಹೆಚ್ಚಳ ಕಂಡಿತು(3.1 ಶತಕೋಟಿ ಡಾಲರ್‌ನಿಂದ 3.3 ಶತಕೋಟಿ ಡಾಲರ್). ಟ್ರಂಪ್ ಮಕಾಡೆಯಾಗಿದ್ದರೂ, ಸೋಲು ಒಪ್ಪಿಕೊಂಡಿರಲಿಲ್ಲ. ಆನಂತರ ರಾಗ ಬದಲಿಸಿದ ಮರ್ಡೋಕ್ ನೇತೃತ್ವದ ಪತ್ರಿಕೆಗಳು, ಟ್ರಂಪ್ ಮೇಲೆ ದಾಳಿ ನಡೆಸಿದವು. ‘ವಾಲ್‌ಸ್ಟ್ರೀಟ್ ಜರ್ನಲ್’ ತನ್ನ ಸಂಪಾದಕೀಯದಲ್ಲಿ ‘‘ಟ್ರಂಪ್ ರಿಪಬ್ಲಿಕನ್ ಪಕ್ಷದ ಅತ್ಯಂತ ದೊಡ್ಡ ವೈಫಲ್ಯ’’ ಎಂದು ಟೀಕಿಸಿತು!
ಇನ್ನೊಂದು ವೋಟಿಂಗ್ ಯಂತ್ರ ತಯಾರಕ ಸಂಸ್ಥೆ ಸ್ಮಾರ್ಟ್‌ಮ್ಯಾಟಿಕ್, 2.7 ಶತಕೋಟಿ ಡಾಲರ್ ಪರಿಹಾರ ಕೋರಿ ದಾವೆ ದಾಖಲಿಸಿದೆ. ಒಂದುವೇಳೆ ಪ್ರತಿಕೂಲ ತೀರ್ಪು ಬಂದಲ್ಲಿ, ‘ಫಾಕ್ಸ್ ನ್ಯೂಸ್’ ಗಂಭೀರ ಸಮಸ್ಯೆಗೆ ಸಿಲುಕಲಿದೆ. ಡೊಮಿನಿಯನ್ ಪ್ರಕರಣದಿಂದಾಗಿ ಜನಪ್ರಿಯ ಆತಿಥೇಯ ಟಕ್ಕರ್ ಕಾರ್ಲ್‌ಸನ್ ಕೆಳಗಿಳಿದರು. ನ್ಯಾಯಾಲಯದ ಕದ ತಟ್ಟಿದ್ದು, ಕಾರ್ಲ್‌ಸನ್ ಮತ್ತು ‘ಫಾಕ್ಸ್ ನ್ಯೂಸ್’ ನಡುವೆ ತಿಕ್ಕಾಟ ಮುಂದುವರಿದಿದೆ.
ಕುತ್ತಾಗಿ ಪರಿಣಮಿಸಿದ ಗಾರ್ಡಿಯನ್ ವರದಿ
ಮರ್ಡೋಕ್ ಟ್ಯಾಬ್ಲಾಯ್ಡ್ ಪತ್ರಿಕೋದ್ಯಮದ ಸಂಸ್ಕೃತಿ ಮತ್ತು ಮಾದರಿಯನ್ನು ಉತ್ತೇಜಿಸಿದರು. ಸ್ವದೇಶ ಆಸ್ಟ್ರೇಲಿಯ ಸೇರಿದಂತೆ ಅಟ್ಲಾಂಟಿಕ್ ಮಹಾಸಾಗರದ ಎರಡೂ ಬದಿ ತಮ್ಮ ಸಾಮ್ರಾಜ್ಯ ವಿಸ್ತರಿಸಿದರು. ಇಂಗ್ಲೆಂಡ್‌ನಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿದ್ದ ರವಿವಾರದ ಪತ್ರಿಕೆ ‘ನ್ಯೂಸ್ ಆಫ್ ದ ವರ್ಲ್ಡ್’, ಕೊಲೆಯಾದ ವಿದ್ಯಾರ್ಥಿನಿ ಸೇರಿದಂತೆ ನೂರಾರು ಜನರ ಫೋನ್ ಕರೆಗಳನ್ನು ಕದ್ದು ಆಲಿಸುತ್ತಿತ್ತು; ಸಂದೇಶಗಳನ್ನು ಓದುತ್ತಿತ್ತು ಎಂಬುದು ಗಾರ್ಡಿಯನ್ ನಡೆಸಿದ ತನಿಖೆಯಿಂದ ಪತ್ತೆಯಾಯಿತು. ಮರ್ಡೋಕ್ ಗಾರ್ಡಿಯನ್ ಮೇಲೆ ತಮ್ಮ ಪತ್ರಿಕಾ ಸೇನೆಯನ್ನು ಛೂ ಬಿಟ್ಟು ‘‘ಸುಳ್ಳನ್ನು ಸತ್ಯವೆಂದು ಹಾಗೂ ಸುಳ್ಳು ಸುದ್ದಿಯನ್ನು ಸತ್ಯವೆಂದು ನಂಬಿಸಲು ಮುಂದಾದರು’’ ಎಂದು ಗಾರ್ಡಿಯನ್‌ನ ಮುಖ್ಯ ಸಂಪಾದಕ ಅಲನ್ ರಸ್‌ಬ್ರಿಡ್ಜರ್ ತಮ್ಮ ಹೊತ್ತಗೆ ‘ಬ್ರೇಕಿಂಗ್ ನ್ಯೂಸ್’ನಲ್ಲಿ ಬರೆದಿದ್ದಾರೆ. ವರದಿಯಿಂದಾಗಿ, 100ಕ್ಕೂ ಹೆಚ್ಚು ವರ್ಷದಿಂದ ಪ್ರಕಟಗೊಳ್ಳುತ್ತಿದ್ದ ಪತ್ರಿಕೆಯನ್ನು ಮುಚ್ಚಬೇಕಾಯಿತು. ‘ದ ಸನ್’, ಸೆಲೆಬ್ರಿಟಿಗಳು ಹೂಡಿದ್ದ ದಾವೆಗಳನ್ನು ಬಗೆಹರಿಸಿಕೊಳ್ಳಲು ಸಾಕಷ್ಟು ಪರಿಹಾರ ತೆತ್ತಿದೆ, ತೆರುತ್ತಲೇ ಇದೆ.
ಮಾಧ್ಯಮ ಪರಿಣತರ ಪ್ರಕಾರ, ಮರ್ಡೋಕ್ ನಿರ್ಗಮನದಿಂದ ಫಾಕ್ಸ್‌ನ ಸಂಪಾದಕೀಯ ನೀತಿಯಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಸಾಂಪ್ರದಾಯಿಕ ಬಲಪಂಥೀಯ ರಾಜಕೀಯ ನಿಲುವು ಮುಂದುವರಿಯಲಿದೆ. ಇದರಿಂದ ಅಮೆರಿಕದ 2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ನರಿಗೆ ಪ್ರಯೋಜನ ಆಗಬಹುದು. ಮರ್ಡೋಕ್ ಗೌರವ ಸ್ಥಾನದಲ್ಲಿ ಮುಂದುವರಿಯುವುದರಿಂದ, ನಾಟಕೀಯ ಎನ್ನುವ ಬದಲಾವಣೆಯ ಸಾಧ್ಯತೆ ಕಡಿಮೆ. ‘‘ತಾವೇ ಸೃಷ್ಟಿಸಿದ ಬಿಕ್ಕಟ್ಟಿನ ಸುತ್ತ ಉನ್ಮಾದವನ್ನು ಹೆಚ್ಚಿಸುವುದು, ವಿಚ್ಛೇದ ಮತ್ತು ದ್ವೇಷ ಸೃಷ್ಟಿ ಹಾಗೂ ಸಂಪ್ರದಾಯವಾದಿ ನಿಲುವಿಗೆ ಬೆಂಬಲ ನೀಡುವಿಕೆ ಮುಂದುವರಿಯುತ್ತದೆ’’ ಎಂದು ಪೆನ್ಸಿಲ್ವೇನಿಯಾ ವಿಶ್ವವಿದ್ಯಾನಿಲಯದ ಪ್ರೊ.ವಿಕ್ಟರ್ ಪಿಕಾರ್ಡ್ ಹೇಳುತ್ತಾರೆ. ‘ಫಾಕ್ಸ್ ನ್ಯೂಸ್’ನ ಎಲ್ಲ ಚಟುವಟಿಕೆ-ಕ್ರಿಯೆಗಳು ಆರ್ಥಿಕ ಲಾಭ ಮತ್ತು ಶೇರುದಾರರ ಆದಾಯ ಹೆಚ್ಚಳವನ್ನು ಆಧರಿಸಿರುತ್ತವೆ. ಪ್ರಸಕ್ತ ಅದು ಅಮೆರಿಕದ ಅತ್ಯಂತ ಹೆಚ್ಚು ವೀಕ್ಷಕರಿರುವ ಕೇಬಲ್ ಟಿವಿ ಚಾನೆಲ್ ಆಗಿದ್ದು, ಲಾಭ ಗಳಿಸುತ್ತಿದೆ. ಹೀಗಾಗಿ, ಮರ್ಡೋಕ್ ಸ್ಥಾನಕ್ಕೆ ಆಯ್ಕೆಯಾಗಿರುವ ಪುತ್ರ ಲಚ್ಲನ್, ಸಿದ್ಧಸೂತ್ರವನ್ನು ಬದಲಿಸುವ ಸಾಧ್ಯತೆ ಕಡಿಮೆ.
ನಾಲ್ಕು ಬಾರಿ ವಿವಾಹವಾಗಿರುವ ಮರ್ಡೋಕ್‌ಗೆ ಆರು ಮಕ್ಕಳಿದ್ದಾರೆ. ಮಗ ಜೇಮ್ಸ್ ನ್ಯೂಸ್‌ಕಾರ್ಪ್‌ನ ಆಡಳಿತ ಮಂಡಳಿಯಿಂದ 2020ರಲ್ಲಿ ಹೊರನಡೆದರು. ಮಗಳು ಎಲಿಜಬೆತ್ ತಮ್ಮದೇ ಟಿವಿ ಕಂಪೆನಿ ಆರಂಭಿಸಿದ್ದು, ಮಾಸ್ಟರ್‌ಶೆಫ್‌ನಂತಹ ಹಲವು ಕಾರ್ಯಕ್ರಮ ನಿರ್ಮಿಸಿದ್ದಾರೆ. ಹಿಂದೊಮ್ಮೆ ಕಂಪೆನಿಯಿಂದ ಹೊರನಡೆದಿದ್ದ ಲಚ್ಲನ್, ಈಗ ಎರಡೂ ಕಂಪೆನಿಗಳ ಮುಖ್ಯಸ್ಥರಾಗಿದ್ದಾರೆ.
ಅಮೆರಿಕದ ಮಾಧ್ಯಮದಲ್ಲಿ ನೈತಿಕತೆಯನ್ನು ಪ್ರತಿಪಾದಿಸುವ ಗುಂಪುಗಳು ‘ಫಾಕ್ಸ್ ನ್ಯೂಸ್’ಗೆ ನೀಡಿದ ಪ್ರಸರಣ ಪರವಾನಿಗೆ ಹಿಂಪಡೆಯಬೇಕೆಂದು ಫೆಡರಲ್ ಕಮ್ಯುನಿಕೇಷನ್ ಆಯೋಗ(ಎಫ್‌ಸಿಸಿ)ಕ್ಕೆ ದೂರು ಸಲ್ಲಿಸಿವೆ. ‘ಫಾಕ್ಸ್ ನ್ಯೂಸ್’ಗೆ ಪ್ರತಿಸ್ಪರ್ಧಿಯಾಗಿ ಹಲವು ಚಾನೆಲ್‌ಗಳು ಹುಟ್ಟಿಕೊಂಡಿದ್ದು, ಬಲಪಂಥೀಯ/ಸಂಪ್ರದಾಯವಾದಿ ವೀಕ್ಷಕರನ್ನು ಸೆಳೆಯಲು ಪ್ರಯತ್ನಿಸುತ್ತಿವೆ. ಸಂಪ್ರದಾಯವಾದಿ ಮಾಧ್ಯಮದ ಅವಲೋಕನ ಮಾಡುವ ವಾಚ್‌ಡಾಗ್ ಗುಂಪು ಮೀಡಿಯಾ ಮ್ಯಾಟರ್ಸ್, ‘‘ವಂಚನೆ, ವಿನಾಶ ಮತ್ತು ಸಾವು ಪರಂಪರೆಯನ್ನು ಬಿಟ್ಟುಹೋಗಿದ್ದಾರೆ’’ ಎಂದಿದೆ. ಇದಕ್ಕೆ ಸಮ್ಮತಿಸುವ ಆಸ್ಟ್ರೇಲಿಯದ ಮಾಜಿ ಪ್ರಧಾನಿ ಮಾಲ್ಕಂ ಟರ್ನ್ ಬಾಲ್, ‘‘ಮರ್ಡೋಕ್ ಪ್ರಜಾಪ್ರಭುತ್ವಕ್ಕೆ ಅಪಾರ ಹಾನಿಯುಂಟು ಮಾಡಿದ್ದಾರೆ’’ ಎನ್ನುತ್ತಾರೆ. ಪ್ರೇಕ್ಷಕರು/ವೀಕ್ಷಕರು ಕೇಳಿದ್ದನ್ನು ಕೊಡುತ್ತೇವೆ ಎಂದು ಸಮರ್ಥಿಸಿಕೊಳ್ಳುವವರು ಮಾಡುವ ಗಂಭೀರ ಹಾನಿ ಬಗ್ಗೆ ಆಲೋಚಿಸಬೇಕಿದೆ.
ಏತನ್ಮಧ್ಯೆ, ಇಂಡಿಯಾದಲ್ಲಿ ಆನ್‌ಲೈನ್ ಸುದ್ದಿತಾಣ ‘ನ್ಯೂಸ್‌ಕ್ಲಿಕ್’ ಮೇಲೆ ದಾಳಿ ನಡೆದಿದ್ದು, ಕರಾಳ ಯುಎಪಿಎ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪ್ರಧಾನ ಸಂಪಾದಕ ಪ್ರಬೀರ್ ಪುರಕಾಯಸ್ಥ ಅವರನ್ನು ಬಂಧಿಸಲಾಗಿದೆ ಹಾಗೂ ಸುದ್ದಿತಾಣದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪತ್ರಕರ್ತರ ಮನೆಗಳಲ್ಲಿ ಶೋಧ ನಡೆದಿದೆ. ಚರಿತ್ರೆಯಿಂದ ಯಾವುದೇ ಪಾಠ ಕಲಿಯದವರ ಪ್ರದರ್ಶನ ಮುಂದುವರಿಯುತ್ತಿದೆ.