ಸೆಮಿಕಂಡಕ್ಟರ್ ಕ್ಷೇತ್ರದಲ್ಲಿನ ಅವಕಾಶ ಬಳಸಿಕೊಳ್ಳುತ್ತೇವೆಯೇ?
ಇಂಡಿಯಾದಲ್ಲಿ ಜಗತ್ತಿನ ಅತಿ ದೊಡ್ಡ ಯುವ ಪಡೆಯಿದೆ. ಆದರೆ, ಯುವಜನರು ದೇಶದ ಆಸ್ತಿಯಾಗಲು ಅವರಿಗೆ ಅಗತ್ಯವಾದ ಶಿಕ್ಷಣ ಹಾಗೂ ತರಬೇತಿ ನೀಡುತ್ತಿದ್ದೇವೆಯೇ? ಪ್ರಾಯಶಃ ಇಲ್ಲ. ರಾಷ್ಟ್ರೀಯ ಶೈಕ್ಷಣಿಕ ಯೋಜನೆ ಮತ್ತು ಆಡಳಿತ ವಿಶ್ವವಿದ್ಯಾನಿಲಯ(ಎನ್‌ಯುಇಪಿಎ)ದ ಪ್ರಕಾರ, ಪದವಿ ಹಂತದಲ್ಲಿ ಶೇ.25ರಷ್ಟು ಮಂದಿ ಕಾಲೇಜು ತೊರೆಯುತ್ತಿದ್ದಾರೆ ಹಾಗೂ ಬ್ಲೂಮ್‌ಬರ್ಗ್ ವರದಿಯನ್ವಯ ಒಟ್ಟಾರೆ ನಿರುದ್ಯೋಗ ಪ್ರಮಾಣ ಶೇ.7.95 ಇದೆ(ಜುಲೈ 2023). ಚೀನಾ ಹಲವು ದೇಶಗಳಿಂದ ನಿರ್ಬಂಧ ಎದುರಿಸುತ್ತಿದೆ ಹಾಗೂ ಹಿರಿಯ ನಾಗರಿಕರ ಸಂಖ್ಯೆ ಹೆಚ್ಚುತ್ತಿರುವುದರಿಂದ, ಭವಿಷ್ಯದಲ್ಲಿ ತನ್ನ ಹಿಡಿತ ಕಳೆದುಕೊಳ್ಳುವ ಸಾಧ್ಯತೆಯಿದೆ. ಇದು ಇಂಡಿಯಾಕ್ಕೆ ಸುವರ್ಣಾವಕಾಶವನ್ನು ಕಲ್ಪಿಸಿದೆ; ಅದನ್ನು ಬಳಸಿಕೊಳ್ಳುವ ಇಚ್ಛಾಶಕ್ತಿ, ಕಾರ್ಯಯೋಜನೆ ಅಗತ್ಯವಿದೆ.
ಇಂಡಿಯಾದ ಪ್ರಧಾನಿ ಅಮೆರಿಕಕ್ಕೆ ಜೂನ್‌ನಲ್ಲಿ ಭೇಟಿ ನೀಡಿದ್ದಾಗ, ‘‘ಗುಜರಾತ್‌ನಲ್ಲಿ 825 ದಶಲಕ್ಷ ಡಾಲರ್ ವೆಚ್ಚದಲ್ಲಿ ಅರೆವಾಹಕ(ಸೆಮಿ ಕಂಡಕ್ಟರ್) ಉತ್ಪಾದನಾ ಘಟಕವನ್ನು ಸ್ಥಾಪಿಸಿ, 2024ರ ಅಂತ್ಯದೊಳಗೆ ಚಿಪ್‌ಗಳನ್ನು ಉತ್ಪಾದಿಸಲಾಗುವುದು’’ ಎಂದು ಭಾರತ ಮೂಲದ ಸಂಜಯ್ ಮೆಹ್ರೋತ್ರಾ ಅವರ ಮೈಕ್ರಾನ್ ಟೆಕ್ನಾಲಜಿ ಹೇಳಿತು. ಇಂಡಿಯಾ 4 ದಶಕಗಳಿಂದ ಸೆಮಿಕಂಡಕ್ಟರ್ ತಂತ್ರಜ್ಞಾನ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರೂ, ದೇಶಿ ಅಗತ್ಯಗಳನ್ನು ಪೂರೈಸಿಕೊಳ್ಳುವಲ್ಲಿ ವಿಫಲವಾಗಿದೆ. ಕೋವಿಡ್-19 ಸಮಯದಲ್ಲಿ ಚಿಪ್‌ಗಳ ಕೊರತೆಯಿಂದ ಗ್ರಾಹಕರಿಗೆ ಕಾರುಗಳನ್ನು ವಿತರಿಸಲು ವಿಳಂಬವಾಗಿತ್ತು.
ಸೆಮಿಕಂಡಕ್ಟರ್(ಐಸಿ, ಇಂಟಿಗ್ರೇಟೆಡ್ ಸರ್ಕೀಟ್) ಹಾರ್ಡ್ ವೇರ್‌ನ ಸಣ್ಣ ತುಣುಕು. ಆಧುನಿಕ ವಿದ್ಯುನ್ಮಾನದ ಮಿದುಳು ಎನ್ನಿಸಿಕೊಂಡಿರುವ ಇವು ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್, ಟಿವಿ, ಕಾರ್, ರಕ್ಷಣಾ ಸಾಮಗ್ರಿ ಮತ್ತು ವೈಮಾನಿಕ ಕ್ಷೇತ್ರ ಸೇರಿದಂತೆ ಮನುಷ್ಯರ ಜೀವನದ ಎಲ್ಲ ಆಯಾಮಗಳನ್ನು ಆವರಿಸಿಕೊಂಡಿವೆ. ತಂತ್ರಜ್ಞಾನ ಮುಂದುವರಿದಂತೆ ಅವುಗಳ ಗಾತ್ರ ಸಣ್ಣದಾಗುತ್ತಿದೆ. ತೈವಾನ್, ನೆದರ್‌ಲ್ಯಾಂಡ್ಸ್, ಜಪಾನ್, ಚೀನಾ, ದಕ್ಷಿಣ ಕೊರಿಯಾ ಮತ್ತು ಅಮೆರಿಕ ಚಿಪ್ ತಯಾರಿಕೆಗೆ ಬೇಕಾದ ಆರ್ಥಿಕ ಸಂಪನ್ಮೂಲ, ಉತ್ಪಾದನೆ, ಪ್ಯಾಕೇಜಿಂಗ್ ಮತ್ತು ವಿತರಣೆಯಲ್ಲಿ ಮೇಲುಗೈ ಸಾಧಿಸಿವೆ. ಚಿಪ್‌ಗಳ ಉತ್ಪಾದನೆ ಸಂಕೀರ್ಣ, ದುಬಾರಿ ಮತ್ತು ಪರಿಣತ ಮಾನವ ಸಂಪನ್ಮೂಲದ ಅಗತ್ಯವಿದೆ. ಯಾವುದೇ ದೇಶ ಸೆಮಿ ಕಂಡಕ್ಟರ್ ವಿಷಯದಲ್ಲಿ ಸ್ವಾವಲಂಬಿಯಲ್ಲ ಮತ್ತು ಯಾವ ದೇಶವೂ ಎಲ್ಲ ಚಿಪ್ ತಯಾರಿಸುವ ಸಾಮರ್ಥ್ಯ ಹೊಂದಿಲ್ಲ. ಹೀಗಾಗಿ ಇದು ಪರಸ್ಪರ ಅವಲಂಬನೆ ಹಾಗೂ ಸಂಯೋಜನೆ ಅಗತ್ಯವಿರುವ ಕ್ಷೇತ್ರ. ಈ ಕ್ಷೇತ್ರದಲ್ಲಿ ಚೀನಾದ ಹಿಡಿತ ಕಡಿಮೆ ಮಾಡಲು ಎಲ್ಲ ದೇಶಗಳು ಪ್ರಯತ್ನಿಸುತ್ತಿವೆ.
ಭಸ್ಮವಾದ ಘಟಕ
ಪ್ರಧಾನಿ ಇಂದಿರಾಗಾಂಧಿ ಅವರು 1976ರಲ್ಲಿ ಸೆಮಿಕಂಡಕ್ಟರ್ ಸಂಕೀರ್ಣಕ್ಕೆ ಅನುಮತಿ ನೀಡಿದರು. ಶೇ.100ರಷ್ಟು ಸರಕಾರದ ಪಾಲುದಾರಿಕೆ ಇದ್ದ ಸೆಮಿಕಂಡಕ್ಟರ್ ಕಾಂಪ್ಲೆಕ್ಸ್ ಲಿಮಿಟೆಡ್(ಎಸ್‌ಸಿಎಲ್), 1980ರ ಆರಂಭದಲ್ಲಿ ಶುರುವಾಯಿತು. ಪಂಜಾಬಿನ ಮೊಹಾಲಿಯಲ್ಲಿ ಅಮೆರಿಕನ್ ಮೈಕ್ರೋಸಿಸ್ಟಮ್ಸ್‌ನ ತಾಂತ್ರಿಕ ಸಹಯೋಗದಲ್ಲಿ ಐದು ಮೈಕ್ರಾನ್‌ನ ಸಿಎಂಒಎಸ್(ಕಾಂಪ್ಲಿಮೆಂಟರಿ ಮೆಟಲ್ ಆಕ್ಸೈಡ್ ಸೆಮಿ ಕಂಡಕ್ಟರ್) ಉತ್ಪಾದನೆ 1984ರಲ್ಲಿ ಆರಂಭವಾಯಿತು. ಆದರೆ, ಫೆಬ್ರವರಿ 1989ರಲ್ಲಿ ಸಂಭವಿಸಿದ ಅಗ್ನಿ ದುರಂತದಿಂದ ಘಟಕ ಭಸ್ಮವಾಯಿತು. 2006ರಲ್ಲಿ ಎಸ್‌ಸಿಎಲ್‌ನ್ನು ಬಾಹ್ಯಾಕಾಶ ಇಲಾಖೆಯೊಳಗೆ ಸೇರ್ಪಡೆಗೊಳಿಸಿ, ಸಂಶೋಧನೆ ಹಾಗೂ ಅಭಿವೃದ್ಧಿ ಘಟಕವಾಗಿ ಪುನರ್ ವಿನ್ಯಾಸ ಮಾಡಲಾಯಿತು.
ಸೆಮಿಕಂಡಕ್ಟರ್ ವಿನ್ಯಾಸ ಘಟಕಗಳು(ಫ್ಯಾಬ್ಸ್) ಕಚ್ಚಾವಸ್ತುವಾದ ಸಿಲಿಕಾನ್‌ನ್ನು ಐಸಿಗಳಾಗಿ ಪರಿವರ್ತಿಸುತ್ತವೆ. ಇಂಥ ಉತ್ಪಾದಕ ಘಟಕಗಳಿಗೆ ಅಪಾರ ಹೂಡಿಕೆಯಲ್ಲದೆ, ಶುದ್ಧ ನೀರು, ನಿರಂತರ ವಿದ್ಯುತ್, ಅತ್ಯುನ್ನತ ಮಟ್ಟದ ನಿಷ್ಕಷ್ಟತೆ, ಪರಿಣತ ಮಾನವ ಸಂಪನ್ಮೂಲ ಬೇಕಾಗುತ್ತದೆ. ದೇಶದಲ್ಲಿ ಸೆಮಿಕಂಡಕ್ಟರ್ ವಿನ್ಯಾಸ/ಉತ್ಪಾದನೆಗೆ ವೇಗ ನೀಡಲು ಡಿಸೆಂಬರ್ 2021ರಲ್ಲಿ ಒಕ್ಕೂಟ ಸರಕಾರ 76,000 ಕೋಟಿ ರೂ.ಗಳ ಉತ್ಪಾದನೆಯೊಡನೆ ಜೋಡಣೆಯಾದ ಪ್ರೋತ್ಸಾಹಕ(ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್,ಪಿಎಲ್‌ಐ) ಯೋಜನೆ ಆರಂಭಿಸಿತು. ಇದರಡಿ ಘಟಕಗಳ ಶೇ.50ರಷ್ಟು ವೆಚ್ಚವನ್ನು ಭರಿಸುವುದಾಗಿ ಸರಕಾರ ಹೇಳಿತು. ಆರು ವರ್ಷಗಳಲ್ಲಿ ಕನಿಷ್ಠ 20 ಸೆಮಿಕಂಡಕ್ಟರ್ ವಿನ್ಯಾಸ, ಬಿಡಿಭಾಗಗಳು ಹಾಗೂ ಡಿಸ್‌ಪ್ಲೇಗಳ ತಯಾರಿಕೆ ಘಟಕ ಸ್ಥಾಪನೆಯ ಗುರಿ ಇರಿಸಿಕೊಳ್ಳಲಾಗಿದೆ. ಮಾರ್ಚ್ 2023ರೊಳಗೆ ಸರಕಾರ ಪಿಎಲ್‌ಐ ಅಡಿ 1,645 ಕೋಟಿ ರೂ. ಬಿಡುಗಡೆಗೊಳಿಸಿದೆ.
ಅನಿಲ್ ಅಗರ್ವಾಲ್ ನೇತೃತ್ವದ ವೇದಾಂತ ಹಾಗೂ ತೈವಾನ್‌ನ ಫಾಕ್ಸ್ಕಾನ್ ಗುಜರಾತಿನಲ್ಲಿ 1.54 ಲಕ್ಷ ಕೋಟಿ ರೂ. ವೆಚ್ಚದ ಸೆಮಿಕಂಡಕ್ಟರ್ ಹಾಗೂ ಡಿಸ್‌ಪ್ಲೇ ತಯಾರಿಕೆ ಘಟಕ ಸ್ಥಾಪಿಸುವುದಾಗಿ ಸೆಪ್ಟಂಬರ್ 2022ರಲ್ಲಿ ಘೋಷಿಸಿದ್ದವು. ಈ ಒಪ್ಪಂದ ಮುರಿದುಬಿದ್ದಿತು ಮತ್ತು ಅನಿಲ್ ಅಗರ್ವಾಲ್ ‘‘ಎರಡೂವರೆ ವರ್ಷದೊಳಗೆ ದೇಶಿ ಸೆಮಿಕಂಡಕ್ಟರ್ ಚಿಪ್‌ಗಳು ಲಭ್ಯವಾಗಲಿವೆ’’ ಎಂದು ಹೇಳಿದರು. ಆದರೆ, ತನ್ನ ಪಾಲುದಾರ ಯಾರು ಎಂದು ಹೇಳಲಿಲ್ಲ. ಇಸ್ರೇಲ್ ಮೂಲದ ಟವರ್ ಸೆಮಿಕಂಡಕ್ಟರ್ ಹಾಗೂ ಸಿಂಗಾಪುರದ ಐಜಿಎಸ್‌ಎಸ್ ವೆಂಚರ್ಸ್ ಒಳಗೊಂಡ ಅಂತರ್‌ರಾಷ್ಟ್ರೀಯ ಒಕ್ಕೂಟ ಐಎಸ್‌ಎಂಸಿ, ಕರ್ನಾಟಕದಲ್ಲಿ 3 ಶತಕೋಟಿ ಡಾಲರ್ ವೆಚ್ಚದಲ್ಲಿ ಚಿಪ್ ತಯಾರಿಕೆ ಘಟಕವನ್ನು ಸ್ಥಾಪಿಸುವುದಾಗಿ ಹೇಳಿಕೊಂಡಿದೆ.
ಅಮೆರಿಕದ ಚಿಪ್ಸ್ ಕಾಯ್ದೆ
ಅಮೆರಿಕ ಆಗಸ್ಟ್ 2022ರಲ್ಲಿ ಚಿಪ್ಸ್(ಕ್ರಿಯೇಟಿಂಗ್ ಹೆಲ್ಪ್‌ಫುಲ್ ಇನ್ಸೆಂಟಿವ್ ಟು ಸೆಮಿಕಂಡಕ್ಟರ್ಸ್ ಆ್ಯಂಡ್ ಸೈನ್ಸ್ ಆ್ಯಕ್ಟ್ಸ್) ಕಾಯ್ದೆ ಜಾರಿಗೊಳಿಸಿತು. ವಿವಿಧ ಇಲಾಖೆಗಳೊಂದಿಗೆ ಸಂಯೋಜನೆ-ಸಮನ್ವಯದ ಮೂಲಕ ಸ್ಪರ್ಧಾತ್ಮಕತೆ, ಅನ್ವೇಷಣೆ ಹಾಗೂ ರಾಷ್ಟ್ರೀಯ ಸುರಕ್ಷತೆಯನ್ನು ಹೆಚ್ಚಿಸುವುದು ಕಾಯ್ದೆಯ ಉದ್ದೇಶ. ಫ್ಯಾಬ್ಸ್ ಆರಂಭ ಹಾಗೂ ಸೆಮಿಕಂಡಕ್ಟರ್‌ಗಳ ತಯಾರಿಕೆಗೆ 28,000 ಕೋಟಿ ಡಾಲರ್ ಸಬ್ಸಿಡಿ ನೀಡುತ್ತಿದೆ. ಜೊತೆಗೆ, ಚೀನಾದ ಸೆಮಿಕಂಡಕ್ಟರ್ ಉತ್ಪಾದನೆಗಳ ಮೇಲೆ ನಿರ್ಬಂಧಗಳನ್ನು ಹೇರಿದೆ. ಚಿಪ್ಸ್ ಕಾಯ್ದೆಯಡಿ 5 ವರ್ಷದಲ್ಲಿ 52.7 ಶತಕೋಟಿ ಡಾಲರ್ ಹೂಡಿಕೆ ಉದ್ದೇಶಿಸಲಾಗಿದೆ. ಕಾಯ್ದೆ ಅನುಷ್ಠಾನಕ್ಕೆ 4 ಪ್ರತ್ಯೇಕ ನಿಧಿಗಳನ್ನು ಸೃಷ್ಟಿಸಲಾಗಿದೆ- ಸೆಮಿಕಂಡಕ್ಟರ್ ಉತ್ಪಾದನೆಗೆ ವಾಣಿಜ್ಯ ಇಲಾಖೆಯ 50 ಶತಕೋಟಿ ಡಾಲರ್, ಸಂಶೋಧನೆಯ ವೇಗವರ್ಧನೆಗೆ ರಕ್ಷಣಾ ಇಲಾಖೆಗೆ 2 ಶತಕೋಟಿ ಡಾಲರ್, ರಾಜ್ಯ ಇಲಾಖೆ 0.5 ಶತಕೋಟಿ ಡಾಲರ್ ಮತ್ತು ರಾಷ್ಟ್ರೀಯ ವಿಜ್ಞಾನ ಪ್ರತಿಷ್ಠಾನ 0.2 ಶತಕೋಟಿ ಡಾಲರ್ ವೆಚ್ಚ ಮಾಡಲಿವೆ. ಅಮೆರಿಕ ಸೆಮಿಕಂಡಕ್ಟರ್ ಉತ್ಪಾದನೆಗೆ ನೀಡುತ್ತಿರುವ ಆದ್ಯತೆಗೆ ಇದು ಸಾಕ್ಷಿ. ಪ್ರಸ್ತಾವನೆಗಳು ಆರ್ಥಿಕವಾಗಿ ಲಾಭದಾಯಕವೇ ಎಂಬುದನ್ನು ಮೌಲ್ಯಮಾಪನ ಮಾಡಲು ಮಾರ್ಗದರ್ಶಿ ಸೂತ್ರವನ್ನು ರಚಿಸಲು ಚಿಪ್ಸ್ ಕಾರ್ಯಕ್ರಮ ಕಚೇರಿ(ಸಿಪಿಒ)ಯನ್ನು ಸೃಷ್ಟಿಸಲಾಗಿದೆ. ಕಾಯ್ದೆಯು ಅಮೆರಿಕಕ್ಕೆ ಸೆಮಿಕಂಡಕ್ಟರ್ ಉತ್ಪಾದನೆಯನ್ನು ವಾಪಸ್ ತರುವುದಕ್ಕೆ ಸೀಮಿತವಾಗಿಲ್ಲ. ವಾಣಿಜ್ಯ ಇಲಾಖೆ ಸಂಶೋಧನೆಗೆ 11 ದಶಕೋಟಿ ಡಾಲರ್ ಹೂಡಿದೆ. ಕಡಿಮೆ ಲಾಭ ತರುವ ಹಾಗೂ ಹೆಚ್ಚು ಮಾನವ ಸಂಪನ್ಮೂಲ ಅಗತ್ಯವಿರುವ ಪ್ಯಾಕೇಜಿಂಗ್ ಕ್ಷೇತ್ರದಲ್ಲಿ ಸುಧಾರಣೆಗೆ ನ್ಯಾಷನಲ್ ಅಡ್ವಾನ್ಸ್ಡ್ ಪ್ಯಾಕೇಜಿಂಗ್ ಮ್ಯಾನ್ಯುಫ್ಯಾಕ್ಚರಿಂಗ್ ಪ್ರೋಗ್ರಾಂ(ಎನ್‌ಎಪಿಎಂಪಿ) ಆರಂಭಿಸಲಾಗಿದೆ. ಕಾಯ್ದೆಯಡಿ ಅನುದಾನ ಕೇಳುವವರು ಯೋಜನೆಯ ನೀಲನಕ್ಷೆಯನ್ನು ನೀಡಬೇಕು. ವಿದ್ಯಾರ್ಥಿಗಳಿಗೆ ತರಬೇತಿ ನೀಡಲು, ಉದ್ಯಮ ಮತ್ತು ಶೈಕ್ಷಣಿಕ ಸಂಸ್ಥೆಗಳ ನಡುವೆ ಸಂಯೋಜನೆಗೆ ರಾಷ್ಟ್ರೀಯ ಸೆಮಿಕಂಡಕ್ಟರ್ ತಂತ್ರಜ್ಞಾನ ಕೇಂದ್ರ(ಎನ್‌ಎಸ್‌ಟಿಸಿ) ರಚಿಸಲಾಗಿದೆ.
ಇಂಡಿಯಾದಲ್ಲಿ ಸೆಮಿಕಂಡಕ್ಟರ್ ಕೈಗಾರಿಕಾ ನೀತಿ ಕೇಂದ್ರೀಕೃತವಾಗಿದ್ದು, ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಮಂತ್ರಾಲಯ(ಎಂಇಐಟಿವೈ)ದ ಹಿಡಿತದಲ್ಲಿದೆ. ಇದರಡಿ ಸೃಷ್ಟಿಯಾದ ಲಾಭೋದ್ದೇಶವಿಲ್ಲದ ಕಂಪೆನಿಯಾದ ಇಂಡಿಯಾ ಸೆಮಿ ಕಂಡಕ್ಟರ್ ಮಿಷನ್(ಐಎಸ್‌ಎಂ)ಗೆ ಉತ್ಪಾದನೆ, ಜೋಡಣೆ ಹಾಗೂ ವಿತರಣೆಯ ಜವಾಬ್ದಾರಿ ನೀಡಲಾಗಿದೆ; ಚಿಪ್ ವಿನ್ಯಾಸ ಕಾರ್ಯನೀತಿಯನ್ನು ಸಿಡಾಟ್ ನಿರ್ವಹಿಸುತ್ತಿದೆ. ಐಎಸ್‌ಎಂ ಸಮಿತಿಯಲ್ಲಿ ಮಂತ್ರಾಲಯದ ಅಧಿಕಾರಿಗಳದ್ದೇ ಮೇಲುಗೈ. ದೇಶದಲ್ಲಿ ಸಾಂಪ್ರದಾಯಿಕ ವಿಶ್ವವಿದ್ಯಾನಿಲಯಗಳ ಹೊರಗೆ ಹಲವು ಖಾಸಗಿ ತರಬೇತಿ ಕೇಂದ್ರಗಳು ಚಿಪ್ ವಿನ್ಯಾಸಕರನ್ನು ಸಿದ್ಧಗೊಳಿಸುತ್ತಿವೆ. ಚಿಪ್ಸ್ ಟು ಸ್ಟಾರ್ಟ್‌ಅಪ್(ಸಿ2ಎಸ್) ಕಾರ್ಯಕ್ರಮದ ಮೂಲಕ ಮಾನವ ಸಂಪನ್ಮೂಲದ ವಿಸ್ತರಣೆ ಗುರಿ ಇರಿಸಿಕೊಳ್ಳಲಾಗಿದೆ. 100 ವಿಶ್ವವಿದ್ಯಾನಿಲಯಗಳು- ಕಾಲೇಜುಗಳೊಡನೆ ಸಹಭಾಗಿತ್ವ ಹೊಂದಲಾಗಿದೆ.
ದೇಶದಲ್ಲಿ ಅಂತಿಮ ಉತ್ಪನ್ನದ ಜೋಡಣೆ ಘಟಕಗಳು ಹೆಚ್ಚುತ್ತಿದ್ದರೂ, ಚಿಪ್ ಮತ್ತು ಡಿಸ್‌ಪ್ಲೇಗಳನ್ನು ತಯಾರಿಸುವ ಫ್ಯಾಬ್ಸ್‌ಗಳು ಅಪರೂಪ. ಇವನ್ನು ಆರಂಭಿಸುವುದು ಉತ್ಪಾದನೆ ಪ್ರೋತ್ಸಾಹಕ ಕಾರ್ಯಕ್ರಮದ ಗುರಿ. ಸಚಿವ ರಾಜೀವ್ ಚಂದ್ರಶೇಖರ್ ರೈಸಿನಾ ಡೈಲಾಗ್‌ನಲ್ಲಿ ‘‘ವಿದ್ಯುನ್ಮಾನ ಮೌಲ್ಯ ಸರಪಳಿ ಪರಿಣಾಮಕಾರಿ ಆಗಿರಬೇಕೆಂದರೆ ಅಂತರ್‌ರಾಷ್ಟ್ರೀಯ ಒಕ್ಕೂಟ ರಚಿಸಿಕೊಳ್ಳಬೇಕಿದೆ’’ ಎಂದಿದ್ದರು. ಜಗತ್ತಿನೆಲ್ಲೆಡೆಯ ಸೆಮಿಕಂಡಕ್ಟರ್ ಉತ್ಪಾದಕರ ಸಂಘಟನೆ ಎಸ್‌ಐಎ ಪ್ರಕಾರ, ಸಿಲಿಕಾನ್‌ನ್ನು ಸೆಮಿಕಂಡಕ್ಟರ್ ಆಗಿ ಪರಿವರ್ತಿಸಲು ಅಪಾರ ಬಂಡವಾಳ ಬೇಕಾಗುತ್ತದೆ. ಆದರೆ, ಉತ್ಪಾದಿತ ಚಿಪ್‌ಗಳನ್ನು ಜೋಡಿಸುವ ಮತ್ತು ಪರಿಶೀಲಿಸಿ ಅನುಮತಿ ನೀಡುವ ಸೆಮಿಕಂಡಕ್ಟರ್ ಜೋಡಣೆ ಮತ್ತು ಪರೀಕ್ಷೆ ಹೊರಗುತ್ತಿಗೆ(ಔಟ್‌ಸೋರ್ಸ್ಡ್ ಸೆಮಿಕಂಡಕ್ಟರ್ ಅಸೆಂಬ್ಲಿ ಆ್ಯಂಡ್ ಟೆಸ್ಟ್, ಒಎಸ್‌ಎಟಿ) ಕಂಪೆನಿಗಳಿಗೆ ಹೆಚ್ಚು ಬಂಡವಾಳ ಬೇಕಾಗುವುದಿಲ್ಲ; ಹೆಚ್ಚು ಲಾಭ ದೊರೆಯುತ್ತದೆ. ಆದರೆ, ಸಮಸ್ಯೆ ಏನೆಂದರೆ ಇಂಥ ಕಂಪೆನಿಗಳು ದೈತ್ಯ ಕಂಪೆನಿಗಳ ಸ್ವಾಧೀನ ಘಟಕಗಳಾಗಿ ಬಿಡುತ್ತವೆ. ಉದ್ಯೋಗ ಸೃಷ್ಟಿ ಹಾಗೂ ಬಂಡವಾಳ ಆಕರ್ಷಿಸುತ್ತೇನೆ ಎಂದು ಫಾಕ್ಸ್ಕಾನ್ ಹೇಳಿದ್ದರೂ, ಅದರ ಜಗತ್ತಿನೆಲ್ಲೆಡೆಯ ಘಟಕಗಳು ಆ್ಯಪಲ್ ಸಾಧನಗಳ ಉತ್ಪಾದನೆಗೆ ಸೀಮಿತವಾಗಿವೆ. ಇವುಗಳಿಗೆ ಭಾರತದಲ್ಲಿ ಬೇಡಿಕೆ ಕಡಿಮೆ.
ಡಿಸೆಂಬರ್ 2021ರಲ್ಲಿ ಪರಿಚಯಿಸಿದ ವಿನ್ಯಾಸಕ್ಕೆ ಜೋಡಿಸಲ್ಪಟ್ಟ ಪ್ರೋತ್ಸಾಹಕ(ಡಿಎಲ್‌ಐ) ಮುಂದಿನ ಐದು ವರ್ಷದಲ್ಲಿ 1,500 ಕೋಟಿ ರೂ. ಮೌಲ್ಯದ 20 ಕಂಪೆನಿಗಳನ್ನು ಸೃಷ್ಟಿಸುವ ಉದ್ದೇಶ ಹೊಂದಿದೆ. ಈ ಉಪಕ್ರಮದಡಿ ಪ್ರಸಕ್ತ 30 ಸೆಮಿಕಂಡಕ್ಟರ್ ವಿನ್ಯಾಸ ಸ್ಟಾರ್ಟ್‌ಅಪ್‌ಗಳು ಆರಂಭಗೊಂಡಿವೆ. ಡಿಎಲ್‌ಐ 2ನೇ ಹಂತದ ಭಾಗವಾಗಿ ದೇಶಿ ಚಿಪ್ ಕಂಪೆನಿಗಳಲ್ಲಿ ಪಾಲುದಾರಿಕೆಗೆ ಸರಕಾರ ಮುಂದಾಗಿದೆ. ‘ಫ್ಯಾಬ್ ಅಲ್ಲದ (ಚಿಪ್‌ಗಳನ್ನು ವಿನ್ಯಾಸಗೊಳಿಸಿ, ಉತ್ಪಾದನೆಯನ್ನು ಹೊರಗುತ್ತಿಗೆ ಕೊಡುವ) ಕಂಪೆನಿ’ಗಳನ್ನು ಸೃಷ್ಟಿಸುವುದು ಇದರ ಉದ್ದೇಶ. ಸೆಮಿಕಂಡಕ್ಟರ್‌ಗಳ ತಯಾರಿಕೆ ಅಥವಾ ವಿನ್ಯಾಸಕ್ಕೆ ದೀರ್ಘಕಾಲೀನ ಕಾರ್ಯತಂತ್ರ ಅಗತ್ಯವಿದ್ದು, ಘಟಕಗಳ ಸ್ಥಾಪನೆ, ಸಂಶೋಧನೆ-ಅಭಿವೃದ್ಧಿ, ಮಾನವ ಸಂಪನ್ಮೂಲದ ಅಭಿವೃದ್ಧಿ, ನೇಮಕ-ತರಬೇತಿ, ಸಾಧನ ಸಲಕರಣೆಗಳು ಹಾಗೂ ಹಾಲಿ ವ್ಯವಸ್ಥೆಯ ಉನ್ನತೀಕರಣಕ್ಕೆ ಬಂಡವಾಳ ಅಗತ್ಯವಿದೆ. ಆದರೆ, ಲಾಭ ಬೇಗ ಬರುವುದಿಲ್ಲ. ನಾಸ್ಕಾಂ ಪ್ರಕಾರ, ಮೊದಲ ಉತ್ಪನ್ನ ಹೊರಬರಲು ಕನಿಷ್ಠ 2-3 ವರ್ಷ ಬೇಕಿದ್ದು, ಚಿಪ್ ಉದ್ಯಮಕ್ಕೆ ಸಾಮಾನ್ಯ ಸ್ಟಾರ್ಟ್‌ಅಪ್‌ಗಳಿಗಿಂತ ಹೆಚ್ಚು ಬಂಡವಾಳ ಬೇಕಾಗುತ್ತದೆ. ಚಿಪ್‌ಗಳ ಗಾತ್ರ ಹಾಗೂ ಉದ್ದೇಶ ನಿರಂತರವಾಗಿ ಬದಲಾಗುವುದರಿಂದ, ಸಂಶೋಧನೆ ಹಾಗೂ ಅಭಿವೃದ್ಧಿ ಸವಾಲಾಗಿರುತ್ತದೆ.
ಸಾಮರ್ಥ್ಯದ ಬಳಕೆ
ಸೆಮಿಕಂಡಕ್ಟರ್ ವಿನ್ಯಾಸ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಇರುವವರಲ್ಲಿ ಹೆಚ್ಚಿನವರು ಭಾರತೀಯರು ಇಲ್ಲವೇ ಭಾರತ ಮೂಲದವರು. ಇಂಟೆಲ್ ಹಾಗೂ ಎನ್‌ವಿಡಿಯಾದ ಚಿಪ್ ತಯಾರಿಕೆ ಘಟಕಗಳು ದೇಶದಲ್ಲಿದ್ದು, ಇವು ವಿನ್ಯಾಸಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುತ್ತವೆ. ದೇಶ ಜಾಗತಿಕ ಸೆಮಿಕಂಡಕ್ಟರ್ ಉದ್ಯಮದ ಪ್ರಮುಖ ನೆಲೆಯಾಗಿರುವುದಕ್ಕೆ ಇಲ್ಲಿರುವ ವಿನ್ಯಾಸ ಇಂಜಿನಿಯರ್‌ಗಳೇ ಕಾರಣ. ಜಾಗತಿಕ ಸಿಬ್ಬಂದಿ ಬಲದಲ್ಲಿ ಶೇ.20ರಷ್ಟು ಮಂದಿ ಇಲ್ಲಿದ್ದಾರೆ; ಪ್ರತಿವರ್ಷ 2,000 ಇಂಟಿಗ್ರೇಟೆಡ್ ಸರ್ಕೀಟ್‌ಗಳು ಹಾಗೂ ಚಿಪ್‌ಗಳು ಇಲ್ಲಿ ವಿನ್ಯಾಸಗೊಳ್ಳುತ್ತಿವೆ. ಇಂಟೆಲ್, ಮೈಕ್ರಾನ್ ಮತ್ತು ಕ್ವಾಲ್‌ಕಾಮ್ ಇಲ್ಲಿ ಸಂಶೋಧನೆ-ಅಭಿವೃದ್ಧಿ ನಡೆಸುತ್ತಿವೆ. ಆದರೆ, ಬೌದ್ಧಿಕ ಆಸ್ತಿ ಹಕ್ಕು(ಐಪಿಆರ್)ಗಳ ಸಂಖ್ಯೆ ಕಡಿಮೆ ಇದೆ.
ಉದ್ಯಮದ ಪರಿಣತರ ಪ್ರಕಾರ, ಸರಕಾರ ಚಿಪ್ ವಿನ್ಯಾಸ ಕಂಪೆನಿಗಳಲ್ಲಿ ಹೂಡಿಕೆ ಮಾಡುವುದು ಪರಿಣಾಮಕಾರಿ ಆಗುವುದಿಲ್ಲ. ಏಕೆಂದರೆ, ಕಂಪೆನಿಗಳು ವಿದೇಶಿ ಖರೀದಿದಾರರನ್ನು ಆಯ್ಕೆ ಮಾಡಿಕೊಳ್ಳುತ್ತವೆ. ಇದರಿಂದ ಅವುಗಳ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆ ಮತ್ತು ವಿದೇಶಿ ಗ್ರಾಹಕರು-ಹೂಡಿಕೆದಾರರು ಲಭ್ಯವಾಗುತ್ತಾರೆ. ಜೊತೆಗೆ, ದೇಶದ ಖಾಸಗಿ ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ವೆಂಚರ್ ಹೂಡಿಕೆದಾರರು ಇಲ್ಲ. ಜಾಗತಿಕ ಗುಣಮಟ್ಟದ ಮಾನವ ಸಂಪನ್ಮೂಲವಿದ್ದರೂ, ಬಂಡವಾಳ ವಾಪಸಾಗುವುದು ತಡವಾದ್ದರಿಂದ ಸಾಫ್ಟ್ ವೇರ್ ಕ್ಷೇತ್ರದಂತೆ ಬಂಡವಾಳ ಆಕರ್ಷಿಸುವುದಿಲ್ಲ.
ಸ್ಪರ್ಧೆಯ ಲಾಭ ಪಡೆದುಕೊಳ್ಳಬಹುದೇ?
ಅಮೆರಿಕ ಮತ್ತು ಚೀನಾ ನಡುವಿನ ಸ್ಪರ್ಧೆ ಜಗತ್ತನ್ನು ಎರಡು ರೀತಿ ಬಾಧಿಸಲಿದೆ- ಮನುಷ್ಯರ ಬದುಕು ಹಾಗೂ ಅಂತರ್‌ರಾಷ್ಟ್ರೀಯ ಸಂಬಂಧಗಳ ಅವಿಭಾಜ್ಯ ಅಂಗವಾಗಿರುವ ಚಿಪ್‌ಗಳನ್ನು ನಿರಾಕರಿಸಲು ಸಾಧ್ಯವಿಲ್ಲ ಹಾಗೂ ಎರಡು ಪ್ರಬಲ ಆರ್ಥಿಕ ಶಕ್ತಿಗಳ ನಡುವಿನ ಸ್ಪರ್ಧೆಯ ಪರಿಣಾಮ ಎಲ್ಲ ದೇಶ-ಪ್ರಜೆಗಳ ಮೇಲೆ ಆಗಲಿದೆ. ಚೀನಾ ನ್ಯಾಯಸಮ್ಮತವಲ್ಲದ ಮಾರ್ಗಗಳಿಂದ ಪ್ರಯೋಜನ ಪಡೆಯುತ್ತಿದೆ ಎಂಬುದು ಎಲ್ಲ ದೇಶಗಳ ಆರೋಪ. ಚೀನಾದ ಇಂಥ ಕಾರ್ಯತಂತ್ರಗಳಿಂದ ತಂತ್ರಜ್ಞಾನ ಕ್ಷೇತ್ರದಲ್ಲಿ ಲಕ್ಷಾಂತರ ಅಮೆರಿಕನ್ನರು ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಅಮೆರಿಕದ ವ್ಯಾಪಾರ ಪ್ರತಿನಿಧಿ(ಯುಎಸ್‌ಟಿಆರ್) 2017ರಲ್ಲಿ ದೂರಿದ್ದರು. ಇಂಥ ತಿರುಚುವಿಕೆಯನ್ನು ತಡೆಯಲು ಚಿಪ್ಸ್ ಕಾಯ್ದೆಯನ್ನು ತರಲಾಯಿತು. ಕಾಯ್ದೆ ಜಾರಿಗೊಂಡ ವರ್ಷದೊಳಗೆ 166 ಶತಕೋಟಿ ಡಾಲರ್ ಹೂಡಿಕೆ ಆಗಿದೆ. 19 ರಾಜ್ಯಗಳ 50 ಸಮುದಾಯ ಕಾಲೇಜುಗಳಲ್ಲಿ ಉದ್ಯೋಗಸೃಷ್ಟಿ ಉಪಕ್ರಮಗಳನ್ನು ಆರಂಭಿಸಲಾಗಿದೆ.
ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಚೀನಾದ ಸಂಪೂರ್ಣ ಬಹಿಷ್ಕಾರ ಸಾಧ್ಯವಿಲ್ಲ ಎಂದು ಅಮೆರಿಕ ಮಾತ್ರವಲ್ಲದೆ ಎಲ್ಲ ದೇಶಗಳಿಗೂ ಗೊತ್ತಿದೆ. ಒಂದು ವೇಳೆ ಚೀನಾದ ಮೇಲೆ ಕಠಿಣ ಕ್ರಮ ಕೈಗೊಂಡರೆ, ಅದು ಅಷ್ಟೇ ಕಠಿಣವಾಗಿ ಪ್ರತಿಕ್ರಿಯಿಸುತ್ತದೆ ಎಂಬ ಭೀತಿ ಇದೆ. ಪಾಶ್ಚಾತ್ಯ ದೇಶಗಳು ಮುಖ್ಯವಾಗಿ ಅಮೆರಿಕದ ಮೇಲೆ ಅವಲಂಬನೆಯನ್ನು ತಪ್ಪಿಸಲು ಚೀನಾ 2015ರಲ್ಲೇ ಮೇಡ್ ಇನ್ ಚೀನಾ 2015(ಎಂಎಲ್‌ಸಿ2015) ಉಪಕ್ರಮ ಆರಂಭಿಸಿತು. ಅಮೆರಿಕದ ಕಂಪೆನಿ ಮೈಕ್ರಾನ್‌ನಿಂದ ಉತ್ಪನ್ನಗಳನ್ನು ಖರೀದಿಸಬಾರದೆಂದು ನಿರ್ಬಂಧ ಹೇರಿತು. ಚೀನಾ ಫ್ಯಾಬ್ಸ್ ಮಾರಾಟದಲ್ಲಿ ತೈವಾನ್‌ನ್ನು ಹಿಂದೆ ಹಾಕಿದೆ ಎಂದು ಸೆಮಿಕಂಡಕ್ಟರ್ ಇಂಡಸ್ಟ್ರಿ ಅಸೋಸಿಯೇಷನ್(ಎಸ್‌ಐಎ) ವರದಿ ಕಳೆದ ವರ್ಷ ಹೇಳಿದೆ. ಸೆಮಿಕಂಡಕ್ಟರ್ ಮತ್ತು ವಿದ್ಯುನ್ಮಾನ ಉತ್ಪಾದನಾ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿರುವ ಎಲ್ಲ ದೇಶಗಳು ಒಟ್ಟಾಗಿ ಕೆಲಸ ಮಾಡಿದಲ್ಲಿ ಮಾತ್ರ ಭೌಗೋಳಿಕ ಅಡೆತಡೆಗಳನ್ನು ದಾಟಿ ಯಾವುದೇ ದೇಶ ಏಕಸ್ವಾಮ್ಯ ಸಾಧಿಸದಂತೆ ಮಾಡಬಹುದು.
ಇಂಡಿಯಾದಲ್ಲಿ ಜಗತ್ತಿನ ಅತಿ ದೊಡ್ಡ ಯುವ ಪಡೆಯಿದೆ. ಆದರೆ, ಯುವಜನರು ದೇಶದ ಆಸ್ತಿಯಾಗಲು ಅವರಿಗೆ ಅಗತ್ಯವಾದ ಶಿಕ್ಷಣ ಹಾಗೂ ತರಬೇತಿ ನೀಡುತ್ತಿದ್ದೇವೆಯೇ? ಪ್ರಾಯಶಃ ಇಲ್ಲ. ರಾಷ್ಟ್ರೀಯ ಶೈಕ್ಷಣಿಕ ಯೋಜನೆ ಮತ್ತು ಆಡಳಿತ ವಿಶ್ವವಿದ್ಯಾನಿಲಯ(ಎನ್‌ಯುಇಪಿಎ)ದ ಪ್ರಕಾರ, ಪದವಿ ಹಂತದಲ್ಲಿ ಶೇ.25ರಷ್ಟು ಮಂದಿ ಕಾಲೇಜು ತೊರೆಯುತ್ತಿದ್ದಾರೆ ಹಾಗೂ ಬ್ಲೂಮ್‌ಬರ್ಗ್ ವರದಿಯನ್ವಯ ಒಟ್ಟಾರೆ ನಿರುದ್ಯೋಗ ಪ್ರಮಾಣ ಶೇ.7.95 ಇದೆ(ಜುಲೈ 2023). ಚೀನಾ ಹಲವು ದೇಶಗಳಿಂದ ನಿರ್ಬಂಧ ಎದುರಿಸುತ್ತಿದೆ ಹಾಗೂ ಹಿರಿಯ ನಾಗರಿಕರ ಸಂಖ್ಯೆ ಹೆಚ್ಚುತ್ತಿರುವುದರಿಂದ, ಭವಿಷ್ಯದಲ್ಲಿ ತನ್ನ ಹಿಡಿತ ಕಳೆದುಕೊಳ್ಳುವ ಸಾಧ್ಯತೆಯಿದೆ. ಇದು ಇಂಡಿಯಾಕ್ಕೆ ಸುವರ್ಣಾವಕಾಶವನ್ನು ಕಲ್ಪಿಸಿದೆ; ಅದನ್ನು ಬಳಸಿಕೊಳ್ಳುವ ಇಚ್ಛಾಶಕ್ತಿ, ಕಾರ್ಯಯೋಜನೆ ಅಗತ್ಯವಿದೆ.