ಮಕಾಡೆ ಮಲಗಿದ ಚುನಾವಣೆ ಆಯೋಗ

ದೇಶದ ಚುನಾವಣೆಗಳು ಮಾಡು ಇಲ್ಲವೇ ಮಡಿ ಕದನವಾಗಿ ಪರಿಣಮಿಸಿದ್ದು, ವಿರೋಧಿಯನ್ನು ಸೋಲಿಸುವುದು ಏಕೈಕ ಗುರಿಯಾಗಿದೆ. ಇದಕ್ಕಾಗಿ ಪಕ್ಷಗಳು ಎಂತಹ ನೀಚ ಸ್ಥಿತಿಗೆ ಇಳಿಯಲೂ ಹಿಂಜರಿಯುವುದಿಲ್ಲ. ಧರ್ಮ-ಜಾತಿ ಸಮಾಜವನ್ನು ವಿಭಜಿಸುವ ಸಾಧನವಾಗಿ ಬದಲಾಗಿವೆ. ಕೇಂದ್ರ ಸಚಿವ ಸಂಪುಟದ ಹಿರಿಯ ಸದಸ್ಯರು ದ್ವೇಷಪೂರಿತ ಭಾಷಣ ಮಾಡುವುದನ್ನು ತಡೆಯಲು ಆಯೋಗ ಇಲ್ಲವೇ ನ್ಯಾಯಾಲಯಗಳು ಕಠಿಣ ಕ್ರಮ ತೆಗೆದುಕೊಳ್ಳಬೇಕಿದೆ. ಟಿ.ಎನ್. ಶೇಷನ್ ಅವರ ಬಳಿಕ ಚುನಾವಣೆ ಆಯೋಗ ನಿಶ್ಶಕ್ತವಾಗಿದೆ. ಸ್ವಾಯತ್ತೆಯನ್ನು ಕೇಂದ್ರ ಸರಕಾರಕ್ಕೆ ಮಾರಿಕೊಂಡಿದೆ. ಜತೆಗೆ, ದೂರುಗಳ ಮೇಲೆ ಸಕಾಲಿಕ- ಸೂಕ್ತ ಕ್ರಮ ತೆಗೆದುಕೊಳ್ಳದೆ, ಜನರ ನಂಬಿಕೆಯನ್ನು ಕಳೆದುಕೊಂಡಿದೆ.

Update: 2024-05-31 04:56 GMT
Editor : Thouheed | Byline : ಋತ

ಚುನಾವಣೆ ಆಯೋಗ ನರ ಕಳೆದುಕೊಂಡು ನಿಶ್ಶಕ್ತವಾಗಿದೆ. ಸುಪ್ರೀಂ ಕೋರ್ಟಿನಲ್ಲಿ ‘ಕಾಮನ್ ಕಾಸ್’ ಮತ್ತು ‘ಅಸೋಷಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್’ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ‘‘ಫಾರ್ಮ್ 17ಸಿಯನ್ನು ಸಾರ್ವಜನಿಕಗೊಳಿಸಿದರೆ, ಅದನ್ನು ತಿರುಚುವ ಸಾಧ್ಯತೆ ಇದೆ. ಮತಗಟ್ಟೆವಾರು ಅಂಕಿಅಂಶಗಳನ್ನು ಸಾರ್ವಜನಿಕಗೊಳಿಸಬೇಕೆಂದು ಕಾನೂನು ಇಲ್ಲ’’ ಎಂದು ಆಯೋಗ ವಾದಿಸಿತ್ತು. ಚಲಾವಣೆ ಆಗಿರುವ ಮತಗಳ ನಿಖರ ಲೆಕ್ಕ ಕೊಡಬೇಕೆಂದು ಆಯೋಗವನ್ನು ಒತ್ತಾಯಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ(ಮೇ 24) ತೀರ್ಪು ನೀಡಿತು. ಆರನೇ ಹಂತಕ್ಕೆ ಮತದಾನ ನಡೆಯುತ್ತಿರುವಾಗ, ಚಲಾವಣೆಯಾದ ಮತಗಳ ನಿಖರ ಸಂಖ್ಯೆಯನ್ನು ಬಿಡುಗಡೆಗೊಳಿಸುವಂತೆ ನೂರಕ್ಕೂ ಅಧಿಕ ನಾಗರಿಕ ಸೇವೆಯ ಮಾಜಿ ಅಧಿಕಾರಿಗಳು ಆಯೋಗಕ್ಕೆ ಪತ್ರ ಬರೆದಿದ್ದರು. ಅದಾದ ಕೆಲವೇ ಗಂಟೆಗಳ ಬಳಿಕ ಆಯೋಗವು ಮತದಾನದ ವಿವರಗಳನ್ನು ಪ್ರಕಟಿಸಿತು.

ಮೊದಲ 5 ಹಂತಗಳಲ್ಲಿ 76.4 ಕೋಟಿ ಮತದಾರರಲ್ಲಿ 50.72 ಕೋಟಿ (ಅಂದರೆ, ಶೇ.66.39) ಮಂದಿ ಮತ ಚಲಾಯಿಸಿದ್ದಾರೆ. ಮೊದಲ ಹಂತದಲ್ಲಿ 11.0052 ಕೋಟಿ, ಎರಡನೇ ಹಂತ 10.5830 ಕೋಟಿ, ಮೂರನೇ ಹಂತ 11.3234 ಕೋಟಿ, ನಾಲ್ಕನೇ ಹಂತ 12.2469 ಕೋಟಿ ಹಾಗೂ 5ನೇ ಹಂತದಲ್ಲಿ 5.5710 ಕೋಟಿ ಮಂದಿ ಮತ ಚಲಾಯಿಸಿದ್ದಾರೆ ಎಂದು ಹೇಳಿತು. ಈ ಮೊದಲು ನಾಲ್ಕನೇ ಹಂತದವರೆಗೆ ಶೇ.66.95 ಮತ ಚಲಾವಣೆ ಆಗಿದೆ ಎಂದಿತ್ತು (67.45 ಕೋಟಿ ಮತದಾರರಲ್ಲಿ 45.1 ಕೋಟಿ ಮಂದಿ). 6ನೇ ಹಂತದಲ್ಲಿ ಶೇ. 63.37 ಮತದಾನ ನಡೆದಿದೆ (7.0544 ಕೋಟಿ ಮಂದಿ ಮತ ಚಲಾಯಿಸಿದ್ದಾರೆ). ‘‘ಚುನಾವಣೆ ಪ್ರಕ್ರಿಯೆಯನ್ನು ಹಾಳು ಮಾಡಲು ಸಂಚು ನಡೆದಿದೆ. ಸುಳ್ಳು ಸಂಕಥನ ಸೃಷ್ಟಿಸಲಾಗುತ್ತಿದೆ. ಚಲಾವಣೆಯಾದ ಮತಗಳ ಸಂಖ್ಯೆಯನ್ನು ಬದಲಿಸಲು ಅವಕಾಶ ಇಲ್ಲ’’ ಎಂದು ಚುನಾವಣೆ ಆಯೋಗ ಗೋಳಾಡಿದೆ.

ಪ್ರತೀ ಮತಗಟ್ಟೆಯಲ್ಲಿ ಚಲಾವಣೆಯಾದ ಮತಗಳ ವಿವರಗಳಿರುವ ಫಾರ್ಮ್ 17ಸಿಯನ್ನು ಮತದಾನ ನಡೆದ 48 ಗಂಟೆಗಳಲ್ಲಿ ಆಯೋಗದ ಜಾಲತಾಣದಲ್ಲಿ ಪ್ರಕಟಿಸಬೇಕು ಎಂದು ‘ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್’ ಮತ್ತು ‘ಕಾಮನ್ ಕಾಸ್’ ಸಂಘಟನೆಗಳು ಅರ್ಜಿ ಸಲ್ಲಿಸಿದ್ದವು. ‘‘ಜನರ ಮಾಹಿತಿ ಹಕ್ಕಿಗೆ ದೊಡ್ಡ ಜಯ ಸಿಕ್ಕಿದೆ. ಆಯೋಗ ಮತದಾನದ ಸಂಪೂರ್ಣ ಅಂಕಿಅಂಶ ಬಿಡುಗಡೆಗೊಳಿಸಿದೆ. ಇದೊಂದು ಪ್ರಮುಖ ಹೆಜ್ಜೆಯಾಗಿದ್ದು, ಮೊದಲೇ ಮಾಡಬೇಕಿತ್ತು. ಫಾರ್ಮ್ 17 ಸಿಯನ್ನು ಆಯೋಗದ ಜಾಲತಾಣದಲ್ಲಿ ಪ್ರಕಟಿಸಬೇಕು ಎಂಬ ಬೇಡಿಕೆಯನ್ನೂ ಪೂರೈಸಬೇಕು. ಏಕೆಂದರೆ, ಅದು ಮತದಾನ ಪ್ರಮಾಣದ ಶಾಸನಾತ್ಮಕ ಅಧಿಕೃತ ದಾಖಲೆ’’ ಎಂದು ಕಾಮನ್ ಕಾಸ್ ಸಂಘಟನೆಯ ನಿರ್ದೇಶಕಿ ಅಂಜಲಿ ಭಾರದ್ವಾಜ್ ಹೇಳಿದ್ದಾರೆ.

2024 ಲೋಕಸಭೆ ಚುನಾವಣೆ ಏ.19ರಂದು ಪ್ರಾರಂಭವಾದಾಗಿನಿಂದ ನಿಖರ ಅಂಕಿಸಂಖ್ಯೆ ಮತ್ತು ಮತದಾರರ ಕ್ಷೇತ್ರವಾರು ಸಂಖ್ಯೆಯನ್ನು ಬಿಡುಗಡೆಗೊಳಿಸಬೇಕು ಎಂಬ ಬೇಡಿಕೆ ಇದೆ. ಆದರೆ, ಆಯೋಗ ಚಲಾವಣೆಯಾದ ಮತಗಳ ಸಂಖ್ಯೆಯನ್ನು ಬಿಡುಗಡೆಗೊಳಿಸಿರಲಿಲ್ಲ. ಮತ ಪ್ರಮಾಣದ ಅಂಕಿಅಂಶವನ್ನು ತಿದ್ದುವ ಆತಂಕವನ್ನು ವಿರೋಧಪಕ್ಷಗಳು ಮಾಡಿದ ಬಳಿಕ ಮೇ 1ರಿಂದ ಪ್ರತೀ ಸಂಸದೀಯ ಕ್ಷೇತ್ರದ ಮತದಾರರ ಸಂಖ್ಯೆಯನ್ನು ನೀಡಲಾರಂಭಿಸಿತು. ಮೊದಲ ಹಂತದಲ್ಲಿ ಚಲಾವಣೆಯಾದ ಮತದಾರರ ಸಂಖ್ಯೆಯನ್ನು ಪ್ರಕಟಿಸಲು 11 ದಿನ ತೆಗೆದುಕೊಂಡಿತು. ಇದು ವಿವಾದಕ್ಕೆ ಕಾರಣವಾಗಿತ್ತು.

ನೀತಿ ಸಂಹಿತೆ ಉಲ್ಲಂಘನೆ:

ಮೇ 23ರಂದು ಆಯೋಗ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ‘‘ವಿಭಜನಕಾರಿ ಮಾತುಗಳಿಂದ ದೂರವಿರಬೇಕು’’ ಎಂದು ಆಯೋಗ ಹೇಳಿತು. ಮೋದಿ ಮತ್ತು ರಾಹುಲ್ ಅವರ ಮೇಲೆ ದೂರು ಸಲ್ಲಿಕೆಯಾದ 27 ದಿನಗಳ ಬಳಿಕ ಈ ನಿರ್ದೇಶನ ಬಂದಿತು. ಅಷ್ಟರಲ್ಲಿ 5 ಹಂತಗಳ ಚುನಾವಣೆ ಮುಗಿದಿತ್ತು; 115 ಕ್ಷೇತ್ರಗಳಲ್ಲಿ ಮಾತ್ರ ಚುನಾವಣೆ ಬಾಕಿ ಉಳಿದಿತ್ತು; 6ನೇ ಹಂತದ ಪ್ರಚಾರ ಅಂತ್ಯಗೊಂಡಿತ್ತು. ಇಂತಹ ವಿಳಂಬಕ್ಕೆ ಆಯೋಗ ಏನು ಉತ್ತರ ಕೊಡುತ್ತದೆ?

ಮುಕ್ತ-ನ್ಯಾಯಸಮ್ಮತ ಚುನಾವಣೆ ನಡೆಸುವ ಮತ್ತು ಎಲ್ಲ ಪಕ್ಷಗಳಿಗೆ ಸಮಾನಾವಕಾಶ ನೀಡುವಲ್ಲಿ ಆಯೋಗ ವಿಫಲವಾಗಿದೆ. ರಾಜಕೀಯ ಸಂವಾದ, ಚರ್ಚೆ ಮತ್ತು ಪ್ರಚಾರದ ಗುಣಮಟ್ಟ ಪಾತಾಳ ಕಂಡಿದ್ದು, ಕೋಮು ಧ್ರುವೀಕರಣ, ದ್ವೇಷ ಭಾಷಣ ಪ್ರಧಾನವಾಗಿವೆ. ಇದರಲ್ಲಿ ಮೊದಲ ಸ್ಥಾನ ಪ್ರಧಾನಿ ಅವರಿಗೆ ಸಲ್ಲಬೇಕು. ಅವರಿಂದ ಪ್ರತಿದಿನ ಮುಸ್ಲಿಮರ ವಿರುದ್ಧ ದ್ವೇಷ ಭಾಷಣ ಬಂದಿದೆ; ಆಧಾರವಿಲ್ಲದ ಆರೋಪ ಮಾಡಿದ್ದಾರೆ. ಕಲ್ಕತ್ತಾ ಹೈಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಮತ್ತು ತುಮ್ಲುಕ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಭಿಜಿತ್ ಗಂಗೋಪಾಧ್ಯಾಯ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಗ್ಗೆ ಆಡಿದ ಮಾತಿಗೆ ಆಯೋಗ 24 ಗಂಟೆಗಳ ಪ್ರಚಾರ ನಿರ್ಬಂಧ ಹೇರಿತ್ತು. ಈತ ಮಾಜಿ ನ್ಯಾಯಮೂರ್ತಿ!. ಕಾಂಗ್ರೆಸ್‌ನ ರಣದೀಪ್ ಸುರ್ಜೆವಾಲಾ, ಬಿಜೆಪಿಯ ಶೋಭಾ ಕರಂದ್ಲಾಜೆ ಮತ್ತು ದಿಲೀಪ್ ಘೋಷ್, ಕೆ.ಚಂದ್ರಶೇಖರ ರಾವ್(ಬಿಆರ್‌ಎಸ್) ಮತ್ತು ಜಗನ್ ಮೋಹನ್ ರೆಡ್ಡಿ(ವೈಎಸ್‌ಆರ್‌ಸಿಪಿ) ಅವರಿಗೂ ಪ್ರಚಾರ ನಿರ್ಬಂಧ ವಿಧಿಸಿತ್ತು. ರಾಹುಲ್ ಆಡಿದ ಮಾತು-ಬೆಲೆ ಏರಿಕೆ, ಸಂವಿಧಾನ/ಮೀಸಲು ಬದಲಾವಣೆ, ನಿರುದ್ಯೋಗ, ಹಣದುಬ್ಬರ ಇತ್ಯಾದಿ ಕುರಿತು ಇತ್ತು. ಇದನ್ನು ಪ್ರಧಾನಿ ಆಡಿದ ಮಂಗಳಸೂತ್ರ, ಮುಸ್ಲಿಮ್, ಮಟನ್, ಮುಜ್ರಾ ಇತ್ಯಾದಿಗೆ ಹೋಲಿಸಲಾಗದು. ತಮಿಳುನಾಡಿನಲ್ಲಿ ಪ್ರಚಾರದ ವೇಳೆ, ‘‘ವಿಶ್ವಸಂಸ್ಥೆಯಲ್ಲಿ ತಮಿಳಿನಲ್ಲಿ ಭಾಷಣ ಮಾಡಲು ಬಯಸಿದ್ದೆ’’ ಎಂದಿದ್ದ ಪ್ರಧಾನಿ, ಒಡಿಶಾದಲ್ಲಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಬಲಗೈ ಎನ್ನಲಾದ ಮಾಜಿ ಐಎಎಸ್ ಅಧಿಕಾರಿ ಪಾಂಡಿಯನ್ ಅವರನ್ನು ಗುರಿಯಾಗಿಟ್ಟುಕೊಂಡು, ‘‘ಜಗನ್ನಾಥನ ತಿಜೋರಿಯ ಕೀಲಿಕೈ ತಮಿಳುನಾಡಿನವರ ಕೈಯಲ್ಲಿ ಇದೆ’’ ಎಂದು ಹೇಳಿದ್ದರು. ಉತ್ತರ ಮತ್ತು ದಕ್ಷಿಣ ರಾಜ್ಯಗಳ ನಡುವೆ ಬೆಂಕಿ ಹೊತ್ತಿಸಬಲ್ಲ ಮಾತು ಇದು. ಕಚ್ಚತೀವು ದ್ವೀಪವನ್ನು ಶ್ರೀಲಂಕಾಕ್ಕೆ ಕಾಂಗ್ರೆಸ್-ಡಿಎಂಕೆ ಬಿಟ್ಟುಕೊಟ್ಟವು ಎಂದು ಸುಳ್ಳು ಹೇಳಿದ್ದರು. ಉತ್ತರಪ್ರದೇಶದ ಜನರಿಗೆ ದಕ್ಷಿಣ ರಾಜ್ಯಗಳ ಪಕ್ಷಗಳು ನಿಂದನೆಯ ಭಾಷೆ ಬಳಸುತ್ತಿವೆ ಎಂದು ಹೇಳಿದರು. ಕೋಮು ಧ್ರುವೀಕರಣದ ಮಾತು ಕೂಡದು ಎಂದು ಸೂಚನೆ ನೀಡಿದ ದಿನವೇ ಮತ್ತು ಮರುದಿನವೂ ಪ್ರಧಾನಿ ಅಂತಹ ಮಾತು ಆಡಿದರು; ಮುಂದುವರಿಸಿದರು. ರಾಹುಲ್ ಕೂಡ ‘‘ಬಿಜೆಪಿ ಸಂವಿಧಾನ ಬದಲಿಸುತ್ತದೆ’’ ಎಂದು ಹೇಳಿದರು. ಸಂವಿಧಾನಾತ್ಮಕ ಸಂಸ್ಥೆಯನ್ನು ಪ್ರಧಾನಿ, ಪಕ್ಷವೊಂದರ ಮಾಜಿ ಅಧ್ಯಕ್ಷ ಗೌರವಿಸದೆ ಇರುವಾಗ, ಜನಸಾಮಾನ್ಯರು ಗೌರವಿಸುತ್ತಾರೆಯೇ?

ಸಂವಿಧಾನದ ವಿಧಿ 354, ಮುಕ್ತ-ನ್ಯಾಯಸಮ್ಮತ ಚುನಾವಣೆಯನ್ನು ಖಾತ್ರಿಗೊಳಿಸಲು ಆಯೋಗಕ್ಕೆ ಅನಿರ್ಬಂಧಿತ ಅಧಿಕಾರವನ್ನು ನೀಡುತ್ತದೆ. ಚುನಾವಣೆ ಆಯೋಗ v/s ತಮಿಳುನಾಡು ಸರಕಾರ ಹಾಗೂ ಇತರರು ಪ್ರಕರಣದಲ್ಲಿ ಸುಪ್ರಿಂ ಕೋರ್ಟ್ ಆಯೋಗದ ಪಾತ್ರ ಮತ್ತು ಅಧಿಕಾರದ ಬಗ್ಗೆ ಹೀಗೆ ಹೇಳುತ್ತದೆ, ‘‘ಇಸಿಐ ಅತ್ಯುಚ್ಚ ಸಾಂವಿಧಾನಿಕ ಸಂಸ್ಥೆಯಾಗಿದ್ದು, ನ್ಯಾಯಬದ್ಧ ಮತ್ತು ಮುಕ್ತ ಚುನಾವಣೆ ನಡೆಸುವ ಹಾಗೂ ಚುನಾವಣೆಯ ಪಾವಿತ್ರ್ಯವನ್ನು ಖಾತ್ರಿ ಪಡಿಸುವ ಕರ್ತವ್ಯವನ್ನು ಹೊಂದಿದೆ. ಈ ಸಾಂವಿಧಾನಿಕ ಉದ್ದೇಶ ಹಾಗೂ ಗುರಿಯನ್ನು ಕಾರ್ಯಸಾಧುಗೊಳಿಸಬೇಕಾದ ಅನುಷಂಗಿಕ ಮತ್ತು ಪೂರಕ ಅಧಿಕಾರ ಅದಕ್ಕೆ ಇದೆ’’.

ಚುನಾವಣೆ ಆಯೋಗ ಚುನಾವಣೆಯನ್ನು ಮುಕ್ತ-ನ್ಯಾಯಸಮ್ಮತವಾಗಿ ನಡೆಸಲು ಹಾಗೂ ಚುನಾವಣೆಯ ಪಾವಿತ್ರ್ಯವನ್ನು ಕಾಯ್ದುಕೊಳ್ಳಲು ನೀತಿಸಂಹಿತೆಯನ್ನು ರೂಪಿಸಿದೆ. ಅವೆಂದರೆ,

►  ಯಾವುದೇ ಪಕ್ಷ ಇಲ್ಲವೇ ಅಭ್ಯರ್ಥಿ ವಿವಿಧ ಜಾತಿ, ಸಮುದಾಯಗಳ ನಡುವೆ ಧಾರ್ಮಿಕ ಅಥವಾ ಭಾಷಾ ಭಿನ್ನತೆಯನ್ನು ಹೆಚ್ಚಿಸುವ ಇಲ್ಲವೇ ಕೋಮುವಾರು ದ್ವೇಷವನ್ನು ಸೃಷ್ಟಿಸುವ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬಾರದು.

►  ಪಕ್ಷ-ಅಭ್ಯರ್ಥಿಗಳ ಟೀಕೆಗಳು ಕಾರ್ಯನೀತಿ-ಕಾರ್ಯಕ್ರಮಕ್ಕೆ ಮಾತ್ರ ಸೀಮಿತವಾಗಿರಬೇಕು.

►  ಆಧಾರವಿಲ್ಲದೆ ಆಪಾದನೆ ಇಲ್ಲವೇ ತಿರುಚುವಿಕೆ ಕೂಡದು.

►  ಜಾತಿ ಇಲ್ಲವೇ ಕೋಮು ಆಧರಿಸಿ ಮತ ಕೇಳಬಾರದು.

►  ಯಾವುದೇ ಪಕ್ಷ ಅಥವಾ ಅಭ್ಯರ್ಥಿ ಭ್ರಷ್ಟಾಚಾರದಲ್ಲಿ ಇಲ್ಲವೇ ಅಂಥ ಅಪರಾಧದಲ್ಲಿ ತೊಡಗಬಾರದು.

- ಈ ನಿರ್ದೇಶನಗಳ ಉಲ್ಲಂಘನೆಯಿಂದ ಸಂಹಿತೆಯ ಭಂಗವಾಗಲಿದೆ. ಇಂತಹ ಉಲ್ಲಂಘನೆಗಳನ್ನು ಆಯೋಗ ಗಂಭೀರವಾಗಿ ಪರಿಗಣಿಸಿ, ತಕ್ಷಣ ಪರಿಹರಿಸಬೇಕು. ಆದರೆ, ನೀತಿ ಸಂಹಿತೆಯನ್ನು ಪಾಲಿಸಿ; ಪಾಲಿಸದೆ ಇದ್ದರೆ ದಂಡನೆ ಖಚಿತ ಎಂದು ಹೇಳುವ ತಾಕತ್ತು ಕಳೆದುಕೊಂಡಿದೆ.

ಇದರಿಂದ, ನ್ಯಾಯಾಲಯಗಳು ಆಯೋಗದ ಕೆಲಸ ಮಾಡಬೇಕಾಗಿ ಬಂದಿದೆ. ಬಿಜೆಪಿ ಪ್ರಕಟಿಸಿದ ಜಾಹೀರಾತುಗಳು ನೀತಿಸಂಹಿತೆಯನ್ನು ಉಲ್ಲಂಘಿಸುತ್ತವೆ ಎಂದು ಕಲ್ಕತ್ತಾ ಹೈಕೋರ್ಟ್ ಮೇ 23ರಂದು ತೀರ್ಪು ನೀಡಿತು. ‘‘ಈ ಜಾಹೀರಾತುಗಳು ಅಪನಿಂದೆ ಮತ್ತು ಅಪಮಾನಕರವಾಗಿದ್ದು, ದೂರುಗಳನ್ನು ಬಗೆಹರಿಸುವಲ್ಲಿ ಆಯೋಗ ವಿಫಲವಾಗಿದೆ’’ ಎಂದು ಟೀಕಿಸಿತು. ತಮಾಷೆಯೆಂದರೆ, ನ್ಯಾಯಾಲಯ ದೂರಿನ ಪರಿಶೀಲನೆ ನಡೆಸುವುದಕ್ಕೆ ಆಯೋಗ ಆಕ್ಷೇಪ ವ್ಯಕ್ತಪಡಿಸಿತ್ತು. ನ್ಯಾಯಾಲಯಕ್ಕೆ ದೂರು ಸಲ್ಲಿಸಿದ ಬಳಿಕವಷ್ಟೇ ಈ ಸಂಬಂಧ ಕ್ರಮ ಕೈಗೊಳ್ಳಲು ಮುಂದಾಯಿತು ಎಂಬುದು ಬೆಳಕಿಗೆ ಬಂದಿತು. ‘‘ಆಯೋಗ ಚುನಾವಣೆ ಮುಗಿದ ಬಳಿಕ ಕ್ರಮ ತೆಗೆದುಕೊಳ್ಳುವುದೇ?’’ ಎಂದು ನ್ಯಾಯಾಲಯ ವ್ಯಂಗ್ಯವಾಗಿ ಪ್ರಶ್ನಿಸಿತ್ತು. ಇಷ್ಟಕ್ಕೆ ಸುಮ್ಮನಾಗದ ಬಿಜೆಪಿ, ಸುಪ್ರೀಂ ಕೋರ್ಟ್ ಮೊರೆ ಹೋಯಿತು. ಜಾಹೀರಾತಿನಲ್ಲಿರುವ ಅಂಶಗಳು ವಾಸ್ತವ ಎಂದು ಸಮರ್ಥಿಸಿ ಕೊಂಡಿತು. ‘‘ಈ ಜಾಹೀರಾತುಗಳು ಬರೀ ನೋಟಕ್ಕೇ ಅಪಮಾನಕರವಾಗಿವೆ’’ ಎಂದ ಸುಪ್ರೀಂ ಕೋರ್ಟ್, ಇಂತಹ ಕೀಳುಮಟ್ಟದ ಸಂವಾದಗಳು ಮತದಾರರ ಹಿತಾಸಕ್ತಿಗೆ ಮಾರಕ ಎಂದು ಹೇಳಿತು. ಇದೊಂದೇ ಪ್ರಕರಣವಲ್ಲ; ಆಯೋಗವು ದ್ವೇಷ ಭಾಷಣ ಮಾಡಿದ ಪ್ರಧಾನಿ ಅವರ ಬದಲು ಪಕ್ಷದ ಅಧ್ಯಕ್ಷನಿಗೆ ನೋಟಿಸ್ ನೀಡಿತು.

ಫಾರ್ಮ್ 17ಸಿ ಪ್ರಾಮುಖ್ಯತೆ

ನಿಖರ ಅಂಕಿಅಂಶ ಪ್ರಕಟಿಸಿದ ಬಳಿಕ ಆಯೋಗ ಹೇಳಿದ್ದು:

►  ಫಾರ್ಮ್ 17ಸಿಯಲ್ಲಿ ಮತಗಟ್ಟೆವಾರು ವಿವರ ಇರುತ್ತದೆ. ಆದ್ದರಿಂದ ಅಂಕಿಅಂಶ ಬದಲಿಸಲು ಸಾಧ್ಯವಿಲ್ಲ.

►  ಈ ದಾಖಲೆ ಎಲ್ಲ ಅಭ್ಯರ್ಥಿಗಳ ಬಳಿ ಇರುತ್ತದೆ.

►  ಇವಿಎಂ-ವಿವಿಪ್ಯಾಟ್‌ಗಳನ್ನು ಭದ್ರತಾ ಕೊಠಡಿಗೆ ಅಭ್ಯರ್ಥಿಗಳ ಏಜೆಂಟರ ಉಪಸ್ಥಿತಿಯಲ್ಲೇ ಕೊಂಡೊಯ್ಯಲಾಗುತ್ತದೆ. ಅಭ್ಯರ್ಥಿಗಳ ಏಜೆಂಟರು ಫಾರ್ಮ್ 17ಸಿಯನ್ನು ಮತ ಎಣಿಕೆ ಕೇಂದ್ರದಲ್ಲಿ ಪ್ರತೀ ಸುತ್ತಿನ ಎಣಿಕೆ ಮುಗಿದಾಗ ತಾಳೆ ಮಾಡಬಹುದು.

‘ಫಾರ್ಮ್ 17ಸಿ ಮತಗಟ್ಟೆ ಏಜೆಂಟರಿಗೆ ಮತದಾನ ಮುಗಿದ ಬಳಿಕ ಅಧಿಕಾರಿಗಳು ನೀಡುತ್ತಾರೆ. ಸಾರ್ವಜನಿಕರು ಇಲ್ಲವೇ ಮಾಧ್ಯಮಗಳಿಗೆ ನೀಡಬೇಕಿಲ್ಲ,’ ಎನ್ನುವುದು ಆಯೋಗದ ನಿಲುವು. ಆಯೋಗವು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬರೆದ ಪತ್ರದಲ್ಲಿ, ‘‘ಕ್ಷೇತ್ರವೊಂದರ ಮತದಾನದ ಅಂಕಿಅಂಶಗಳನ್ನು ಕೊಡಬೇಕೆಂದು ಶಾಸನ ಇಲ್ಲ. ಮತಗಟ್ಟೆಯ ಅಂಕಿಅಂಶ ಫಾರ್ಮ್ 17 ಸಿಯಲ್ಲಿ ಇರುತ್ತದೆ ಮತ್ತು ಅದರ ಪ್ರತಿಯನ್ನು ಮತಗಟ್ಟೆ ಏಜೆಂಟರಿಗೆ ನೀಡಲಾಗುತ್ತದೆ’’ ಎಂದು ಹೇಳಿತ್ತು.

ಆದರೆ, ಸಮಸ್ಯೆ ಏನೆಂದರೆ, ಎಲ್ಲ ಪಕ್ಷಗಳು ವಿಶೇಷವಾಗಿ, ಸಣ್ಣ ಪಕ್ಷಗಳು ಹಾಗೂ ಸ್ವತಂತ್ರ ಅಭ್ಯರ್ಥಿಗಳು ಪ್ರತಿಯೊಂದು ಮತಗಟ್ಟೆಯಲ್ಲಿ ಏಜೆಂಟರನ್ನು ನೇಮಿಸಲು ಸಾಧ್ಯವಿಲ್ಲ. ಸಂಸತ್ ಕ್ಷೇತ್ರವೊಂದರಲ್ಲಿ ಅಂದಾಜು 2,000-2,200 ಮತಗಟ್ಟೆಗಳಿರುತ್ತವೆ. ಮತಗಟ್ಟೆ ಏಜೆಂಟ್ ಮತದಾನದ ದಿನ ಬೆಳಗ್ಗೆ 5:30ಕ್ಕೆ ಬಂದು, ಇವಿಎಂ-ವಿವಿ ಪ್ಯಾಟ್ ಕಾರ್ಯನಿರ್ವಹಣೆ ಹಾಗೂ ಅವುಗಳ ಕ್ರಮಸಂಖ್ಯೆಯನ್ನು ಹೋಲಿಸಿ ನೋಡಬೇಕಾಗುತ್ತದೆ. ಬೆಳಗ್ಗೆ 7ರಿಂದ ಮತದಾನ ಆರಂಭವಾಗಲಿದ್ದು, ಸಂಜೆ 6ಕ್ಕೆ ಮುಕ್ತಾಯವಾಗುತ್ತದೆ. ಪ್ರತೀ ಮತಗಟ್ಟೆಯಲ್ಲಿ ಇಬ್ಬರು ಏಜೆಂಟರನ್ನು ನೇಮಿಸಬೇಕಾಗುತ್ತದೆ. ಹೀಗಾಗಿ, ಪ್ರತಿ ಕ್ಷೇತ್ರಕ್ಕೆ ಅಂದಾಜು 4,000 ಏಜೆಂಟರು ಬೇಕಾಗುತ್ತಾರೆ. ಇವರಿಗೆ ದಿನವೊಂದಕ್ಕೆ 1,000-1,200 ರೂ. ಗೌರವಧನ ನೀಡಲಾಗುತ್ತದೆ. ಇಷ್ಟು ಜನರನ್ನು ಹೊಂದಿಸಿಕೊಳ್ಳುವುದು ಕಷ್ಟ.

ಬೂತ್ ಹಂತದಲ್ಲಿ ಮತಗಳ ತಿದ್ದುವಿಕೆ ಸಾಧ್ಯವಿಲ್ಲ ಎನ್ನುವುದು ಆಯೋಗದ ನಿಲುವು. ಮತಗಟ್ಟೆ ಅಧಿಕಾರಿಗಳನ್ನು ಶಾಲೆ-ಕಾಲೇಜು, ಸಾರ್ವಜನಿಕ ಕ್ಷೇತ್ರದ ಬ್ಯಾಂಕ್‌ಗಳಿಂದ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಇದರಿಂದ ಲೋಪದ ಸಾಧ್ಯತೆ ಇಲ್ಲ ಎಂದು ಹೇಳುತ್ತದೆ. ಆದರೆ, ಇವರಿಗೆ ಸೂಕ್ತ ತರಬೇತಿ ನೀಡುವುದಿಲ್ಲ ಎಂಬ ದೂರು ಇದೆ.

ಆಯೋಗ ಏನು ಮಾಡಬಹುದು?

ಮಾದರಿ ನೀತಿ ಸಂಹಿತೆ ಕುರಿತು ಜನಪ್ರತಿನಿಧಿಗಳ ಕಾಯ್ದೆ ಇಲ್ಲವೇ ಚುನಾವಣೆ ನಿಯಮಗಳ ನಡಾವಳಿಗಳಲ್ಲಿ ಯಾವುದೇ ಕಟ್ಟುಪಾಡುಗಳಿಲ್ಲ. ಆದರೆ, ಆಯೋಗ 1968ರಲ್ಲಿ ವಿಧಿ 304ರ ಅಡಿ ಹೊರಡಿಸಿದ ಚುನಾವಣೆ ಚಿಹ್ನೆಗಳು(ಮೀಸಲು ಮತ್ತು ವಿನಿಯೋಗ) ಆದೇಶವು ನೀತಿಸಂಹಿತೆಯ ಉಲ್ಲಂಘನೆಯನ್ನು ತಡೆಯಬಹುದಾದ ನಿಯಮವೊಂದನ್ನು ಹೊಂದಿದೆ. ಆದೇಶದ ಖಂಡ 16ಎ ಪ್ರಕಾರ, ನೀತಿಸಂಹಿತೆಯ ಉಲ್ಲಂಘನೆ ಅಥವಾ ಯಾವುದೇ ನಿರ್ದೇಶನ ಅಥವಾ ಆದೇಶದ ಉಲ್ಲಂಘನೆಯಾದಲ್ಲಿ ಆ ಪಕ್ಷದ ಮಾನ್ಯತೆಯನ್ನು ಅಮಾನತಿನಲ್ಲಿ ಇಡಬಹುದು. ಇಲ್ಲವೇ, ಗಂಭೀರ ಪ್ರಕರಣಗಳಲ್ಲಿ ಮಾನ್ಯತೆಯನ್ನು ಹಿಂಪಡೆಯಬಹುದು. ಚಿಹ್ನೆಯ ಅಮಾನತು/ಹಿಂಪಡೆಯುವಿಕೆಯಿಂದ ಪಕ್ಷ ಸಂಕಷ್ಟಕ್ಕೆ ಸಿಲುಕುತ್ತದೆ. ಸುಪ್ರೀಂ ಕೋರ್ಟ್ ಹಲವು ಪ್ರಕರಣಗಳಲ್ಲಿ ದ್ವೇಷ ಭಾಷಣ ಕೂಡದು ಎಂದು ಹೇಳಿದೆ. ಜನಪ್ರತಿನಿಧಿ ಕಾಯ್ದೆಯ ವಿಭಾಗ 125 ಪ್ರಕಾರ, ಪ್ರಮಾಣವಚನ ಸ್ವೀಕರಿಸಿದವರು ಧರ್ಮ, ಜಾತಿ, ಭಾಷೆ, ಸಮುದಾಯ ಇಲ್ಲವೇ ಜನಾಂಗದ ಆಧಾರದಲ್ಲಿ ದ್ವೇಷ ಇಲ್ಲವೇ ಶತ್ರುತ್ವವನ್ನು ಪ್ರೋತ್ಸಾಹಿಸಿದರೆ, ಐಪಿಸಿ 153ಎ ಅನ್ವಯ ಮೂರು ವರ್ಷ ಸೆರೆವಾಸ ಇಲ್ಲವೇ ದಂಡ ಅಥವಾ ಎರಡನ್ನೂ ವಿಧಿಸಬಹುದು. ಆಯೋಗ ಈ ಕಟ್ಟುಪಾಡುಗಳನ್ನು ಬಳಸಿ, ನೀತಿ ಸಂಹಿತೆಯನ್ನು ಉಲ್ಲಂಘಿಸಿದವರನ್ನು ಶಿಕ್ಷಿಸಿದ ಪ್ರಕರಣಗಳು ಅಪರೂಪ.

ದೇಶದ ಚುನಾವಣೆಗಳು ಮಾಡು ಇಲ್ಲವೇ ಮಡಿ ಕದನವಾಗಿ ಪರಿಣಮಿಸಿದ್ದು, ವಿರೋಧಿಯನ್ನು ಸೋಲಿಸುವುದು ಏಕೈಕ ಗುರಿಯಾಗಿದೆ. ಇದಕ್ಕಾಗಿ ಪಕ್ಷಗಳು ಎಂತಹ ನೀಚ ಸ್ಥಿತಿಗೆ ಇಳಿಯಲೂ ಹಿಂಜರಿಯುವುದಿಲ್ಲ. ಧರ್ಮ-ಜಾತಿ ಸಮಾಜವನ್ನು ವಿಭಜಿಸುವ ಸಾಧನವಾಗಿ ಬದಲಾಗಿವೆ. ಕೇಂದ್ರ ಸಚಿವ ಸಂಪುಟದ ಹಿರಿಯ ಸದಸ್ಯರು ದ್ವೇಷಪೂರಿತ ಭಾಷಣ ಮಾಡುವುದನ್ನು ತಡೆಯಲು ಆಯೋಗ ಇಲ್ಲವೇ ನ್ಯಾಯಾಲಯಗಳು ಕಠಿಣ ಕ್ರಮ ತೆಗೆದುಕೊಳ್ಳಬೇಕಿದೆ. ಟಿ.ಎನ್. ಶೇಷನ್ ಅವರ ಬಳಿಕ ಚುನಾವಣೆ ಆಯೋಗ ನಿಶ್ಶಕ್ತವಾಗಿದೆ. ಸ್ವಾಯತ್ತೆಯನ್ನು ಕೇಂದ್ರ ಸರಕಾರಕ್ಕೆ ಮಾರಿಕೊಂಡಿದೆ. ಜತೆಗೆ, ದೂರುಗಳ ಮೇಲೆ ಸಕಾಲಿಕ- ಸೂಕ್ತ ಕ್ರಮ ತೆಗೆದುಕೊಳ್ಳದೆ, ಜನರ ನಂಬಿಕೆಯನ್ನು ಕಳೆದುಕೊಂಡಿದೆ. ಎ. ನೀಲಲೋಹಿತದಾಸನ್ ನಾಡಾರ್ v/s ಜಾರ್ಜ್ ಮಸ್ಕ್ರೀನ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್, ‘‘ಚುನಾವಣೆಯ ಪಾವಿತ್ರ್ಯ ಎಂದರೇನು? ನಮ್ಮ ಪ್ರಕಾರ, ಚುನಾವಣೆಗಳನ್ನು ಭ್ರಷ್ಟಾಚಾರ ಮಾತ್ರವಲ್ಲದೆ ಕೆಡುಕಿನ ಆಚರಣೆಗಳಿಂದಲೂ ಮುಕ್ತಗೊಳಿಸಬೇಕಿದೆ’’ ಎಂದು ಹೇಳಿತ್ತು. ಈಗ ಕೆಡುಕಿನ ಆಚರಣೆಗಳದ್ದೇ ಮೇಲುಗೈ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಋತ

contributor

Similar News