ಸುಸಂಸ್ಕೃತರ ಆಟದ ರಾಜಕೀಕರಣ

Update: 2023-10-20 07:27 GMT

Photo: PTI

ಸುಸಂಸ್ಕೃತರ ಆಟವೆಂದೇ ಹೆಸರಾಗಿದ್ದ ಕ್ರಿಕೆಟ್ ಕಾಂಚಾಣದ ಕುಣಿತದಿಂದ ಭ್ರಷ್ಟಾಚಾರದ ಕೂಪದಲ್ಲಿ ಸಿಲುಕಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ತಿಜೋರಿ ತುಂಬಿದ್ದು, ಆಡಳಿತ ಪಕ್ಷದ ಕಪಿಮುಷ್ಟಿಯಲ್ಲಿದೆ. ಕ್ರೀಡೆ ಸಂಪೂರ್ಣ ರಾಜಕೀಕರಣಗೊಂಡಿದೆ.

ಇಂಡಿಯಾದಲ್ಲಿ ಮೊದಲ ಕ್ರಿಕೆಟ್ ಪಂದ್ಯ ನಡೆದಿದ್ದು 18ನೇ ಶತಮಾನದಲ್ಲಿ. ‘‘ಕ್ರಿಕೆಟ್ ಇಂಗ್ಲಿಷರು ಕಂಡುಹಿಡಿದ ಭಾರತೀಯ ಕ್ರೀಡೆ’’ ಎಂದು ಚಿಂತಕ ಆಶಿಷ್ ನಂದಿ ಹೇಳುತ್ತಾರೆ. ಬ್ರಿಟಿಷರು ಜನರ ಮನಸ್ಸನ್ನು ವಾಸ್ತವದಿಂದ ಸೆಳೆಯಲು ಕ್ರಿಕೆಟನ್ನು ಬಳಸಿಕೊಂಡರು. ಅದೇ ಪ್ರವೃತ್ತಿಯನ್ನು ಮುಂದುವರಿಸಿದ ದೇಶಿ ರಾಜಕಾರಣಿಗಳು, ತಮ್ಮ ಕಾರ್ಯಸೂಚಿಯನ್ನು ಜಾರಿಗೊಳಿಸಲು ಕ್ರಿಕೆಟನ್ನು ಬಳಸಿಕೊಳ್ಳುತ್ತಿದ್ದಾರೆ. ವಸಾಹತುಶಾಹಿಯ ಹಿಮ್ಮೊಗ ನಡೆ ಎನ್ನಬಹುದಾದ ಈ ಪ್ರಕ್ರಿಯೆಯಲ್ಲಿ ಕ್ರೀಡೆಯನ್ನು ಅಧಿಕಾರ ಹಿಡಿಯುವ ಸಾಧನವನ್ನಾಗಿಸಲಾಗಿದೆ. ಚಂದ್ರಯಾನದಲ್ಲಿ ಯಶಸ್ಸು ಕಂಡ ದೇಶಕ್ಕೆ 300 ವರ್ಷಗಳ ಬಳಿಕವೂ ಕ್ರಿಕೆಟ್‌ನ ಹಿಡಿತದಿಂದ ಬಿಡಿಸಿಕೊಳ್ಳಲು ಸಾಧ್ಯವಾಗಿಲ್ಲ ಎನ್ನುವುದು ವ್ಯಂಗ್ಯ.

ಕ್ರೀಡೆಯನ್ನು ಅಧಿಕಾರ-ಬಲದ ಪ್ರದರ್ಶನಕ್ಕೆ ಬಳಸುವ ಪ್ರವೃತ್ತಿ ಹಿಂದಿನಿಂದಲೂ ಜಾರಿಯಲ್ಲಿದೆ. ಹಿಟ್ಲರ್ 1936ರಲ್ಲಿ ಬರ್ಲಿನ್ ಒಲಿಂಪಿಕ್ಸ್ ಅನ್ನು, ಅರ್ಜೆಂಟೀನಾದ ಮಿಲಿಟರಿ ಆಡಳಿತ 1978ರಲ್ಲಿ ವಿಶ್ವಕಪ್ ಫುಟ್ಬಾಲನ್ನು ಹಾಗೂ ಇತ್ತೀಚೆಗೆ ಸೌದಿ ಅರೇಬಿಯ ತನ್ನ ಆರ್ಥಿಕ ಬಲವನ್ನು ಪ್ರದರ್ಶಿಸಲು ಫುಟ್ಬಾಲ್, ಗಾಲ್ಫ್ ಮತ್ತು ಕ್ರಿಕೆಟ್ ಪಂದ್ಯಾವಳಿ ನಡೆಸಿರುವುದು ಇದಕ್ಕೆ ಉದಾಹರಣೆ. 1981-82ರಲ್ಲಿ ಇಂಗ್ಲೆಂಡ್ ತಂಡ ಭಾರತದಲ್ಲಿ ಆಡುತ್ತಿದ್ದಾಗ, ವರ್ಣದ್ವೇಷದ ಹಿನ್ನೆಲೆಯಲ್ಲಿ ಬಹಿಷ್ಕೃತವಾಗಿದ್ದ ದಕ್ಷಿಣ ಆಫ್ರಿಕಾದಲ್ಲಿ ಆಟವಾಡಿದ್ದ ಜೆಫ್ ಬಾಯ್ಕಾಟ್ ಮತ್ತು ಜೆಫ್ ಕುಕ್‌ರಿಂದ ಕ್ಷಮಾಪಣೆ ಪಡೆದುಕೊಂಡಿದ್ದ ಪ್ರಧಾನಿ ಇಂದಿರಾಗಾಂಧಿ, ಸರಣಿ ಮುಂದುವರಿಯಲು ಅನುವು ಮಾಡಿಕೊಟ್ಟಿದ್ದರು.

ಬಿಸಿಸಿಐ ಪ್ರಾಬಲ್ಯ ಮತ್ತು ಬಿಜೆಪಿ ಹಿಡಿತ

ಮಾರ್ಚ್ 9ರಂದು ಇಂಡಿಯಾ ಮತ್ತು ಆಸ್ಟ್ರೇಲಿಯ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಪಿಯ 4ನೇ ಪಂದ್ಯಕ್ಕೆ ಪ್ರಧಾನಿ ಮೋದಿ ಹಾಗೂ ಆಸ್ಟ್ರೇಲಿಯದ ಪ್ರಧಾನಿ ಅಂಥೋಣಿ ಅಲ್ಬನೀಸ್ ಜೊತೆಯಾಗಿ ಆಗಮಿಸಿದರು. ಆಯಾ ತಂಡದ ನಾಯಕನಿಗೆ ಟೋಪಿ ನೀಡಿ, ಆಟಗಾರರ ಕೈ ಕುಲುಕಿದರು. ‘ಕ್ರಿಕೆಟಿಗರು ನಗಣ್ಯವಾಗಿ ರಾಜಕೀಯ ನಾಯಕರು ವಿಜೃಂಭಿಸಿದರು’ ಎಂದು ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ಬರೆಯಿತು. ಗುಜರಾತಿ ಪತ್ರಿಕೆ ‘ದಿವ್ಯಭಾಸ್ಕರ್’ ಪ್ರಕಾರ, ಬಿಜೆಪಿ ಆ ಪಂದ್ಯದ 80,000 ಟಿಕೆಟ್ ಖರೀದಿಸಿತ್ತು. ಇವರಿಬ್ಬರ ಜೊತೆಯಲ್ಲಿದ್ದವರು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ. ಅಲ್ಲಿಯವರೆಗೆ ತೆರೆಮರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಶಾ ಜೂನಿಯರ್, ಮೊದಲ ಬಾರಿಗೆ ಮುಂಚೂಣಿಗೆ ಬಂದರು.

2009ರಲ್ಲಿ ನರೇಂದ್ರ ಮೋದಿ ಗುಜರಾತ್ ಕ್ರಿಕೆಟ್ ಅಸೋಸಿಯೇಷನ್(ಜಿಸಿಎ) ಅಧ್ಯಕ್ಷರಾಗಿದ್ದರು; ಉಪಾಧ್ಯಕ್ಷ ಅಮಿತ್ ಶಾ. ಅದೇ ವರ್ಷ ಜಯ್ ಶಾ ಅವರನ್ನು ಅಹ್ಮದಾಬಾದ್ ಸೆಂಟ್ರಲ್ ಬೋರ್ಡ್ ಆಫ್ ಕ್ರಿಕೆಟ್‌ನ ಕಾರ್ಯನಿರ್ವಾಹಕ ಮಂಡಳಿಗೆ ಸದಸ್ಯನಾಗಿ ನೇಮಿಸಲಾಯಿತು. 2014ರಲ್ಲಿ ಅಮಿತ್ ಶಾ ಜಿಸಿಎ ಅಧ್ಯಕ್ಷರಾದರು; ಜಯ್ ಶಾ ಜಂಟಿ ಕಾರ್ಯದರ್ಶಿಯಾದರು. ಮೊಟೇರಾ ಕ್ರೀಡಾಂಗಣವನ್ನು ಕೆಡವಿ 580 ಕೋಟಿ ರೂ. ವೆಚ್ಚದಲ್ಲಿ ಮರುನಿರ್ಮಿಸಲಾಯಿತು. ಜಗತ್ತಿನ ಅತಿ ದೊಡ್ಡ ಕ್ರಿಕೆಟ್ ಕ್ರೀಡಾಂಗಣ ಎನ್ನಲಾದ, ಮರುನಾಮಕರಣಗೊಂಡ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಫೆಬ್ರವರಿ 24, 2020ರಂದು ನಡೆದ ಮೊದಲ ಕಾರ್ಯಕ್ರಮ ಕ್ರೀಡಾಕೂಟವಲ್ಲ; ಬದಲಾಗಿ, ನಮಸ್ತೆ ಟ್ರಂಪ್ ರ್ಯಾಲಿ. ಆನಂತರ ಇಂಗ್ಲೆಂಡ್ ವಿರುದ್ಧ ಫೆಬ್ರವರಿ-ಮಾರ್ಚ್ 2021ರಲ್ಲಿ 2 ಟೆಸ್ಟ್, ಐದು ಟಿ20 ಪಂದ್ಯ ನಡೆಯಿತು. ಇದೇ ಕ್ರೀಡಾಂಗಣದಲ್ಲಿ 2023ರ ವಿಶ್ವಕಪ್‌ನ ಆರಂಭಿಕ ಪಂದ್ಯ ಅಕ್ಟೋಬರ್ 5ರಂದು ನಡೆದಿದ್ದು, ನವೆಂಬರ್ 19ರಂದು ಫೈನಲ್ ಪಂದ್ಯ ನಡೆಯಲಿದೆ. ಈ ಕ್ರೀಡಾಂಗಣಕ್ಕೆ ಆದ್ಯತೆ ಮೇರೆಗೆ ಪಂದ್ಯಗಳನ್ನು ನೀಡಲಾಗುತ್ತಿದೆ. ಅದಕ್ಕೆ ಕಾರಣ ಸ್ಪಷ್ಟ.

ನಗರ ಕೇಂದ್ರಿತ, ಮಧ್ಯಮ ವರ್ಗದವರ ಕ್ರೀಡೆಯಾಗಿದ್ದ ಕ್ರಿಕೆಟ್, ಈಗ ಭಾರೀ ಉದ್ಯಮವಾಗಿ ಬದಲಾಗಿದೆ. 1983ರಲ್ಲಿ ವಿಶ್ವಕಪ್ ವಿಜಯದ ಬಳಿಕ ಕ್ರಿಕೆಟ್‌ನ ಬೆಳವಣಿಗೆಯ ಕಥನ ಉದಾರೀಕರಣದ ಜೊತೆಜೊತೆಗೆ ನಡೆಯಿತು. ಮೆಟ್ರೋ ನಗರಗಳ ಬಳಿಕ ಸಣ್ಣ ಪಟ್ಟಣಗಳು, ಒಳನಾಡನ್ನು ಪ್ರವೇಶಿಸಿ, ಪ್ರತಿಭೆಗಳನ್ನು ಆಕರ್ಷಿಸಿತು; ಜನರನ್ನು ಸೆಳೆಯಿತು. ಬ್ರಾಡ್‌ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ ಪ್ರಕಾರ, 2018ರಲ್ಲಿ ಟಿವಿಯಲ್ಲಿ ಕ್ರಿಕೆಟ್ ವೀಕ್ಷಿಸಿದವರ ಪ್ರಮಾಣ 715 ದಶಲಕ್ಷ. ಇದು ಅಂತರ್‌ರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಎಲ್ಲ ಸದಸ್ಯ ರಾಷ್ಟ್ರಗಳ ಒಟ್ಟು ಜನಸಂಖ್ಯೆಗಿಂತ ಹೆಚ್ಚು ಮತ್ತು ಅಮೆರಿಕದ ಜನಸಂಖ್ಯೆಯ ದುಪ್ಪಟ್ಟು. ಬಿಸಿಸಿಐನ ಆರ್ಥಿಕ ಬಲದ ಮೂಲ ಈ ವೀಕ್ಷಕರು. ಇವರನ್ನು ತಮ್ಮ ಉತ್ಪನ್ನಗಳೆಡೆಗೆ ಸೆಳೆಯಲು ಬಹುರಾಷ್ಟ್ರೀಯ/ದೇಸಿ ಕಂಪೆನಿಗಳು ಜಾಹೀರಾತು ರೂಪದಲ್ಲಿ ಬಿಸಿಸಿಐಗೆ ಹಣದ ಹೊಳೆ ಹರಿಸುತ್ತವೆ. ಜಾಗತೀಕರಣಗೊಂಡ ದೇಶದಲ್ಲಿ ಬಾಲಿವುಡ್‌ನಂತೆ ಕ್ರಿಕೆಟ್ ಅಸ್ಮಿತೆಯ ಭಾಗವಾಗಿದೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಸ್ಥಾಪನೆ ಆಗಿದ್ದು 1929ರಲ್ಲಿ. 1990ರಲ್ಲಿ ಟೆಲಿವಿಷನ್ ಹಕ್ಕುಗಳ ಮಾರಾಟದ ಮೂಲಕ ಕ್ರಿಕೆಟನ್ನು ಆರ್ಥಿಕವಾಗಿ ಬಲಪಡಿಸಿದವರು ಜಗನ್ಮೋಹನ್ ದಾಲ್ಮಿಯ ಮತ್ತು ಇಂದರ್‌ಜಿತ್ ಸಿಂಗ್ ಭಿಂದ್ರಾ. 2008ರವರೆಗೆ ಟೆಲಿವಿಷನ್, ಮಲ್ಟಿಮೀಡಿಯಾ, ಇಂಟರ್‌ನೆಟ್ ಹಕ್ಕುಗಳ ಮಾರಾಟದಿಂದ ಬಿಸಿಸಿಐ ಹಣ ಗಳಿಸುತ್ತಿತ್ತು. 2006ರಲ್ಲಿ ನಿಂಬಸ್ 4 ವರ್ಷ ಅವಧಿ(22 ಟೆಸ್ಟ್, 55 ಏಕದಿನ ಪಂದ್ಯ)ಗೆ 612 ದಶಲಕ್ಷ ಡಾಲರ್‌ಗೆ ಪ್ರಸಾರ ಹಕ್ಕುಗಳನ್ನು ಖರೀದಿಸಿತು. ಕ್ರಿಕೆಟ್‌ಗೆ ಆರ್ಥಿಕ ಬಾಹುಬಲ ತುಂಬಿದ್ದು 2008ರಲ್ಲಿ ಆರಂಭಗೊಂಡ ಐಪಿಎಲ್. ಇದರ ಹಿಂದೆ ಇದ್ದವರು ಬಿಸಿಸಿಐ ಉಪಾಧ್ಯಕ್ಷ ಲಲಿತ್ ಮೋದಿ(2005-10). 8 ನಗರ ಫ್ರಾಂಚೈಸಿಗಳನ್ನು ರೂಪಿಸಿ, ಮಾರಾಟಕ್ಕಿಡಲಾಯಿತು. ರಾಜಸ್ಥಾನ್ ರಾಯಲ್ಸ್ 76 ದಶಲಕ್ಷ ಡಾಲರ್‌ಗೆ ಹಾಗೂ ಮುಂಬೈ ಇಂಡಿಯನ್ಸ್ 111.6 ದಶಲಕ್ಷ ಡಾಲರ್‌ಗೆ ಮಾರಾಟವಾದವು. 2022ರಲ್ಲಿ ಸೇರ್ಪಡೆಯಾದ ಲಕ್ನೊ ಮತ್ತು ಅಹ್ಮದಾಬಾದ್ ತಂಡಗಳು 12,200 ಕೋಟಿ ರೂ.ಗೆ ಮಾರಾಟವಾದವು. 2017ರಲ್ಲಿ ಸ್ಟಾರ್ ಇಂಡಿಯಾ ಐಪಿಎಲ್‌ನ ಟಿವಿ-ಡಿಜಿಟಲ್ ಹಕ್ಕುಗಳಿಗೆ 2.55 ಶತಕೋಟಿ ಡಾಲರ್ ನೀಡಿತು. ಈ ಹಕ್ಕನ್ನು 2023-27ರ ಅವಧಿಗೆ ವಯಾಕಾಂ 18 ಮತ್ತು ಡಿಸ್ನೆ ಸ್ಟಾರ್ 6.2 ಶತಕೋಟಿ ಡಾಲರ್ ನೀಡಿ ಖರೀದಿಸಿವೆ. ಜತೆಗೆ, ವಯಾಕಾಂ ಬಿಸಿಸಿಐನ ಎಲ್ಲ ಪಂದ್ಯಗಳ ಹಕ್ಕುಗಳನ್ನು 2028ರವರೆಗೆ 67.8 ಕೋಟಿ ರೂ.ಗೆ ಪಡೆದುಕೊಂಡಿದೆ. ತಿಜೋರಿ ತುಂಬಿ ತುಳುಕುತ್ತಿದೆ. ಇದನ್ನು ಬಳಸಿಕೊಂಡು ಬಿಸಿಸಿಐ, ಅಂತರ್‌ರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ)ಯನ್ನು ತನಗಿಷ್ಟ ಬಂದಂತೆ ಕುಣಿಸುತ್ತಿದೆ. ಇಷ್ಟೊಂದು ಹಣ ಎಲ್ಲಿಗೆ ಹೋಗುತ್ತಿದೆ?

ಲೋಧಾ ಸಮಿತಿ ವರದಿ

2013ರಲ್ಲಿ ಭ್ರಷ್ಟಾಚಾರ ಹಗರಣ ಹೊರಬಂದ ಬಳಿಕ ಸುಪ್ರೀಂ ಕೋರ್ಟ್ ನೇಮಿಸಿದ ಲೋಧಾ ಸಮಿತಿಯ ಶಿಫಾರಸುಗಳ ಅನ್ವಯ ಬಿಸಿಸಿಐ ಸಂವಿಧಾನವನ್ನು ಬದಲಿಸಲಾಯಿತು(ಜುಲೈ 2016). ಇದಕ್ಕೆ 2 ತಿಂಗಳು ಹಿಂದೆ ಬಿಜೆಪಿ ಸಂಸದ ಅನುರಾಗ್ ಠಾಕೂರ್ ಬಿಸಿಸಿಐ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಜನವರಿ 2017ರಲ್ಲಿ ಠಾಕೂರ್ ಹಾಗೂ ಕಾರ್ಯದರ್ಶಿ ಅಜಯ್ ಶಿರ್ಕೆಯನ್ನು ಸುಪ್ರೀಂ ಕೋರ್ಟ್ ತೆಗೆದುಹಾಕಿ, ಲೋಧಾ ಸಮಿತಿಯ ಶಿಫಾರಸುಗಳನ್ನು ಅನುಷ್ಠಾನಗೊಳಿಸಲು 4 ಸದಸ್ಯರ ಸಮಿತಿಯನ್ನು ನೇಮಿಸಿತು. ಸುಪ್ರೀಂ ಕೋರ್ಟ್ ಮತ್ತು ಬಿಸಿಸಿಐ ನಡುವಿನ ಹಣಾಹಣಿಯಲ್ಲಿ ಮೂಡಿಬಂದವರು ಜಯ್ ಶಾ ಹಾಗೂ ಸೌರವ್ ಗಂಗುಲಿ. ಪಶ್ಚಿಮ ಬಂಗಾಳ ಕ್ರಿಕೆಟ್ ಅಸೋಸಿಯೇಷನ್‌ನ ಕಾರ್ಯದರ್ಶಿ ಆಗಿದ್ದ ಗಂಗುಲಿ ಅವರನ್ನು 2021ರ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ವೇಳೆ ಪಕ್ಷಕ್ಕೆ ಸೆಳೆಯಲು ಯತ್ನಿಸುತ್ತಿದ್ದ ಬಿಜೆಪಿ, ಅವರ ಪರ ನಿಂತಿತು. ಆದರೆ, ಈಗಾಗಲೇ ಎರಡು ಅವಧಿ ಮುಗಿಸಿರುವ ಗಂಗುಲಿ ಮತ್ತು ಜಯ್ ಶಾ ಅಧಿಕಾರದಲ್ಲಿರಲು ಅನರ್ಹರೆಂದು ಲೋಧಾ ಸಮಿತಿ ಹೇಳಿತ್ತು. ಇದನ್ನು ಉಲ್ಲಂಘಿಸಲಾಯಿತು. ಬಿಸಿಸಿಐ ಎಪ್ರಿಲ್ 2020ರಲ್ಲಿ ನಿಯಮಗಳಲ್ಲಿ ಬದಲಾವಣೆ ತರಲು ಅನುಮತಿ ನೀಡಬೇಕೆಂದು ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿತು. ವಿಚಾರಣೆ ವಿಳಂಬಗೊಂಡು, ಸುಪ್ರೀಂ ಕೋರ್ಟ್ ತನ್ನದೇ ಆದೇಶವನ್ನು ಬದಲಿಸಿ ಮಂಡಳಿಯ ಅಧಿಕಾರಿಗಳ ಅವಧಿಯನ್ನು ವಿಸ್ತರಿಸಿತು. ಸೆಪ್ಟ್ಟಂಬರ್ 2022ರಲ್ಲಿ ಗಂಗುಲಿ ಹೊರನಡೆದರು ಹಾಗೂ ಉಳಿದ ಹುದ್ದೆಗಳನ್ನು ತೆಗೆದುಹಾಕಲಾಯಿತು. ಉಳಿದವರು ಏಕಮೇವಾದ್ವಿತೀಯ ಜಯ್ ಶಾ!

ಉಸಿರೆತ್ತದ, ಮುಖವಿಲ್ಲದ ಹೇಮಂಗ್ ಅಮೀನ್ ಸಿಇಒ ಆಗಿ ಮತ್ತು ಗಂಗುಲಿ ಸ್ಥಾನಕ್ಕೆ ರೋಜರ್ ಬಿನ್ನಿ ನೇಮಕಗೊಂಡವರು. ಸಮಿತಿಯಲ್ಲಿದ್ದ ಮೂವರಲ್ಲಿ ಖಜಾಂಚಿ ಅಶಿಶ್ ಶೇಲಾರ್ ಬಿಜೆಪಿ ಮುಂಬೈ ಶಾಸಕ ಹಾಗೂ ಜಂಟಿ ಕಾರ್ಯದರ್ಶಿ ದೇವದತ್ ಸೈಕಿಯಾ ಅಸ್ಸಾಮ್ ಸರಕಾರದ ಅಡ್ವೊಕೇಟ್ ಜನರಲ್ ಹಾಗೂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಬೆಂಬಲಿಗ. ಇನ್ನೊಬ್ಬ ಸದಸ್ಯ ಬಿಸಿಸಿಐ ಉಪಾಧ್ಯಕ್ಷ ಮತ್ತು ಕಾಂಗ್ರೆಸ್‌ನ ರಾಜ್ಯಸಭೆ ಸದಸ್ಯ ರಾಜೀವ್ ಶುಕ್ಲಾ. ಈತ ಯಾವುದೇ ಸರಕಾರವಿದ್ದರೂ ಬಿಸಿಸಿಐನಲ್ಲಿ ಇರುತ್ತಾರೆ! ಈ ರೀತಿ ಎಲ್ಲ ಅಧಿಕಾರ ಜಯ್ ಶಾ ಕೈಯಲ್ಲಿ ಕೇಂದ್ರೀಕೃತಗೊಂಡಿತು. ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್‌ಭೂಷಣ್ ವಿರುದ್ಧ ವಿಶ್ವ ಕಪ್ ಕ್ರಿಕೆಟ್ ವಿಜೇತ ತಂಡದ ಸದಸ್ಯರು ಹೇಳಿಕೆ ನೀಡಿದಾಗ, ಬಿನ್ನಿ ಅದರಿಂದ ಅಂತರ ಕಾಯ್ದುಕೊಂಡರು. ‘‘ಕಾನೂನಿನಂತೆ ಕ್ರಮ ತೆಗೆದುಕೊಳ್ಳುತ್ತಾರೆ’’ ಎಂದು ಪ್ರತಿಕ್ರಿಯಿಸಿದರು.

ಅಕ್ಟೋಬರ್ 2022ರಲ್ಲಿ ಶಾ ಎರಡನೇ ಅವಧಿಗೆ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಅವರು ಮಾಡಿದ ಮೊದಲ ಕೆಲಸ-ಪಾಕಿಸ್ತಾನದಲ್ಲಿ ನಡೆಯಬೇಕಿದ್ದ ಏಶ್ಯ ಕಪ್ ಪಂದ್ಯಗಳು ತಟಸ್ಥ ಕ್ರೀಡಾಂಗಣಗಳಲ್ಲಿ ನಡೆಯಲಿವೆ ಎಂದು ಘೋಷಣೆ. ಆತಿಥೇಯ ಪಾಕಿಸ್ತಾನಕ್ಕೆ ಸಿಕ್ಕಿದ್ದು 13ರಲ್ಲಿ 4 ಪಂದ್ಯ ಮಾತ್ರ; ಉಳಿದವು ಶ್ರೀಲಂಕಾ ಪಾಲಾದವು. ಈ ಹಿಂದೆ ಬಿಸಿಸಿಐ ಮುಖ್ಯಸ್ಥರಿಗೆ ತಿಜೋರಿಗೆ ಪ್ರವೇಶ ಇರಲಿಲ್ಲ ಮತ್ತು ಅಂತಹ ಅಧಿಕಾರ ಇದ್ದವರು ಸರಕಾರದ ನಿಯಂತ್ರಣದಲ್ಲಿ ಇರಲಿಲ್ಲ. ಈ ಎರಡೂ ಅಧಿಕಾರ ಜಯ್ ಶಾಗೆ ಇದೆ.

ಐಪಿಎಲ್‌ನ ಆರಂಭದಲ್ಲಿ ಪ್ರತೀ ತಂಡಕ್ಕೆ 20 ಕೋಟಿ ರೂ. ವೇತನ ನಿಗದಿಪಡಿಸಲಾಗಿತ್ತು. ಆನಂತರ ವೇತನವನ್ನು 2014ರಲ್ಲಿ 60 ಕೋಟಿಗೆ ಹಾಗೂ 2022ರಲ್ಲಿ 95 ಕೋಟಿ ರೂ.ಗೆ ಹೆಚ್ಚಿಸಲಾಯಿತು. ಐಪಿಎಲ್ ಹರಾಜಿನಿಂದ ಮೂಡಿಬಂದ ಮೊದಲ ಲಕ್ಷಾಧೀಶ್ವರ ಮಹೇಂದ್ರ ಸಿಂಗ್ ಧೋನಿ(1.5 ದಶಲಕ್ಷ ಡಾಲರ್). ಕಳೆದ 15 ಋತುಗಳಲ್ಲಿ ಐಪಿಎಲ್‌ನ ಆರು ವಾರಗಳ ಮೇಳ ಆಟಗಾರರಿಗೆ ಅತ್ಯಂತ ಲಾಭ ದಾಯಕವಾಗಿ ಪರಿಣಮಿಸಿದೆ. ಋತುವೊಂದಕ್ಕೆ ಇಂಗ್ಲೆಂಡ್‌ನ ಸ್ಯಾಮ್ ಕರನ್(18.5 ಕೋಟಿ ರೂ) ಮತ್ತು ಕೆ.ಎಲ್. ರಾಹುಲ್ 17 ಕೋಟಿ ರೂ. ಗಳಿಸುತ್ತಾರೆ. ಡಿಸೆಂಬರ್ 2022ರಲ್ಲಿ ನಡೆದ ಹರಾಜಿನಲ್ಲಿ 6 ಕೋಟಿ ರೂ.ಗೆ ಹರಾಜಾದ ಉತ್ತರಪ್ರದೇಶದ ವೇಗಿ ಶಿವಂ ಮವಿ ಒಂದೇ ಒಂದು ಪಂದ್ಯದಲ್ಲೂ ಆಡದೆ, ‘ಬೆಂಚು ಬಿಸಿ ಮಾಡುತ್ತಿದ್ದಾರೆ’! ಈಗ ಕ್ರಿಕೆಟ್ ಆಟಗಾರರ ಏಕೈಕ ಕನಸು ಐಪಿಎಲ್; ರಾಜ್ಯ-ದೇಶವನ್ನು ಪ್ರತಿನಿಧಿಸುವುದಲ್ಲ. ಆದರೆ, ಬಿಸಿಸಿಐಯಲ್ಲಿ ನೋಂದಾಯಿಸಿಕೊಂಡ 1,041 ದೇಸಿ ಆಟಗಾರರಲ್ಲಿ ಶೇ.90ರಷ್ಟು ಮಂದಿ ಐಪಿಎಲ್‌ನಲ್ಲಿ ಆಡುವುದಿಲ್ಲ. ಇವರಿಗೆ ಬಿಸಿಸಿಐ ಆದಾಯದಲ್ಲಿ ಪಾಲು ಸಿಗುವುದಿಲ್ಲ. ಯಶಸ್ವಿಯಾದವರನ್ನು ಹೊರತುಪಡಿಸಿದರೆ, ಉಳಿದ ಕ್ರಿಕೆಟ್ ಆಟಗಾರರ ಬದುಕು ರೋಮಾಂಚನಕಾರಿಯಾಗಿಲ್ಲ. ಇದು ವಾಸ್ತವ.

ಜಾಲತಾಣದ ಪ್ರಕಾರ, ಬಿಸಿಸಿಐ ಆಸ್ತಿ ಮೌಲ್ಯ 23,519 ಕೋಟಿ. ವಾರ್ಷಿಕ ಆದಾಯ 4,360 ಕೋಟಿ ರೂ.; ವೆಚ್ಚ 1,668.96 ಕೋಟಿ ರೂ. 38 ರಾಜ್ಯ ಅಸೋಸಿಯೇಷನ್‌ಗಳಿಗೆ 840.23 ಕೋಟಿ ರೂ. ಹಾಗೂ ಇತರ ಕ್ರಿಕೆಟ್ ಚಟುವಟಿಕೆಗಳಿಗೆ 629.11 ಕೋಟಿ ರೂ. ವೆಚ್ಚವಾಗಿದೆ. ಬಿಸಿಸಿಐನ ಆದಾಯದಲ್ಲಿ ಶೇ.70ರಷ್ಟು 38 ರಾಜ್ಯ ಅಸೋಸಿಯೇಷನ್‌ಗಳಿಂದ ಬರುತ್ತದೆ. ಇದರೊಟ್ಟಿಗೆ 3 ಆಟವಾಡದ ಸದಸ್ಯರಿದ್ದು (ಇಂಡಿಯಾ ಕ್ರಿಕೆಟ್ ಕ್ಲಬ್, ನ್ಯಾಷನಲ್ ಕ್ರಿಕೆಟ್ ಕ್ಲಬ್ ಆಫ್ ಕೋಲ್ಕತಾ ಮತ್ತು ವಿಶ್ವವಿದ್ಯಾನಿಲಯಗಳ ಅಸೋಸಿಯೇಷನ್), ಇವರೆಲ್ಲ ಮತ ಚಲಾವಣೆ ಹಕ್ಕು ಹೊಂದಿದ್ದಾರೆ. ರಾಜ್ಯ ಅಸೋಸಿಯೇಷನ್‌ಗಳನ್ನು ಸಂತೋಷವಾಗಿಡಲು ಬಿಸಿಸಿಐ ಸಾಧ್ಯವಿರುವುದನ್ನೆಲ್ಲ ಮಾಡುತ್ತದೆ. 2015ರಲ್ಲಿ 27 ರಾಜ್ಯ ಅಸೋಸಿಯೇಷನ್‌ಗಳ ಲೆಕ್ಕಪತ್ರ ಪರಿಶೀಲಿಸಲು ಬ್ರಿಟಿಷ್ ಸಂಸ್ಥೆ ಡಿಲಾಟ್ ಟಚ್ ಟೊಹ್‌ಮ್ಯಾಟ್ಸುವನ್ನು ನೇಮಿಸಲಾಯಿತು. ಎಲ್ಲ ಅಸೋಸಿಯೇಷನ್‌ಗಳಿಗೆ ಒಂದೇ ಮೊತ್ತವನ್ನು ನೀಡಿದ್ದರೂ, ಹಲವು ನಷ್ಟದಲ್ಲಿದ್ದವು. ಹಣ ದುರುಪಯೋಗ-ಭ್ರಷ್ಟಾಚಾರ ಎಷ್ಟು ವ್ಯಾಪಕವಾಗಿತ್ತೆಂದರೆ, ಸುಪ್ರೀಂ ಕೋರ್ಟ್ ನೇಮಿಸಿದ್ದ ಸಮಿತಿಗೂ ‘ಗೋಪ್ಯ ರಕ್ಷಣೆ’ ಹೆಸರಿನಲ್ಲಿ ಮಾಹಿತಿ ನಿರಾಕರಿಸಲಾಯಿತು. ತಾನು ಖಾಸಗಿ ಸೊಸೈಟಿಯಾಗಿದ್ದು, ಸರಕಾರದ ಹಣ ಪಡೆಯುತ್ತಿಲ್ಲವಾದ್ದರಿಂದ ಆರ್‌ಟಿಐನಿಂದ ತನಗೆ ವಿನಾಯಿತಿ ನೀಡಬೇಕು ಎಂದು ಬಿಸಿಸಿಐ ವಾದಿಸುತ್ತದೆ.

ವಿಶ್ವ ಕಪ್ ಮತ್ತು ರಾಜಕೀಯ ಮೇಲಾಟ

ಬಿಜೆಪಿ ವಿಶ್ವಕಪ್ ಕ್ರಿಕೆಟನ್ನು 2024ರ ಲೋಕಸಭೆ ಚುನಾವಣೆ ಪ್ರಚಾರದ ಆರಂಭ ಬಿಂದುವಾಗಿ ಬಳಸಿಕೊಳ್ಳುತ್ತಿದೆ. ಜತೆಗೆ, ಫುಟ್ಬಾಲ್, ಬ್ಯಾಡ್ಮಿಂಟನ್, ಕುಸ್ತಿ ಮತ್ತು ಟೆನಿಸ್ ಹಾಗೂ ಇಂಡಿಯನ್ ಒಲಿಂಪಿಕ್ ಅಸೋಸಿಯೇಷನ್‌ನ ಚುಕ್ಕಾಣಿ ಕೂಡ ಬಿಜೆಪಿ ಮುಖಂಡರ ಕೈಯಲ್ಲಿ ಇದೆ. ಅಂತರ್‌ರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಬಿಸಿಸಿಐಗೆ ಶರಣಾಗಿದೆ. ಎಷ್ಟರಮಟ್ಟಿಗೆಂದರೆ, ಬಿಸಿಸಿಐ ಇತ್ತೀಚೆಗೆ ಅಂತ್ಯಗೊಂಡ ಏಶ್ಯ ಕಪ್‌ನಲ್ಲಿ ಆಟದ ಮಧ್ಯದಲ್ಲಿ ನಿಯಮ ಬದಲಿಸಿ, ಇಂಡಿಯಾ ಮತ್ತು ಪಾಕಿಸ್ತಾನ ಪಂದ್ಯಕ್ಕೆ ಇನ್ನೊಂದು ದಿನವನ್ನು ಸೇರಿಸಿತು. ಐಸಿಸಿ ಉಸಿರೆತ್ತಲಿಲ್ಲ.

ಇಂಡಿಯಾ 2011ರಲ್ಲಿ ವಿಶ್ವ ಕಪ್ ಗೆದ್ದಿತ್ತು. ಈ ವರ್ಷ ಏಶ್ಯ ಕಪ್‌ನಲ್ಲಿ ಹಾಗೂ ಆಸ್ಟ್ರೇಲಿಯದಲ್ಲಿ ಸರಣಿ ಗೆಲುವು ಸಾಧಿಸಿದೆ. ಇಂಡಿಯಾ ಒಂದುವೇಳೆ ಗೆದ್ದರೆ, ಅದನ್ನು ಪ್ರತಿಯೊಬ್ಬ ಭಾರತೀಯನ, ವಿಶೇಷವಾಗಿ ಆಳುವ ಪಕ್ಷದ ವಿಜಯ ಎನ್ನಲಾಗುತ್ತದೆ. ಆದರೆ, ಸೋಲಿಗೆ ತಂದೆ ಇರುವುದಿಲ್ಲ. ಆಗ ಅಂಕಣಕ್ಕೆ ಇಳಿಯುವ ಸಾರ್ವಜನಿಕ ಸಂಪರ್ಕ ಯಂತ್ರ, ‘ಕ್ರಿಕೆಟ್ ಗೆದ್ದಿತು’, ‘ಆಟ ಎಂದ ಮೇಲೆ ಸೋಲು-ಗೆಲುವು ಇದ್ದದ್ದೇ’, ‘ಉತ್ತಮ ತಂಡ ಗೆದ್ದಿತು’ ಇತ್ಯಾದಿ ಪದ ಹಾಡುತ್ತವೆ. ಸೋಲಿನಿಂದ ಕೋಚ್ ಇಲ್ಲವೇ ಕೆಲವು ಆಟಗಾರರ ತಲೆದಂಡ ಆಗಬಹುದು; ಆದರೆ, ಆಡಳಿತದಲ್ಲಿರುವ ಪಕ್ಷ ನಿರುಮ್ಮಳವಾಗಿರುತ್ತದೆ. ಏಕೆಂದರೆ, ಅದಕ್ಕೆ ಬೇಕಿದ್ದ ಪ್ರಚಾರ ಅಷ್ಟರಲ್ಲಿ ಸಿಕ್ಕಿರುತ್ತದೆ.

ಪಾಕಿಸ್ತಾನ ವಿಕೆಟ್ ಕೀಪರ್ ರಿಝ್ವಾನ್ ಅಂಕಣದಲ್ಲಿ ಪ್ರಾರ್ಥನೆ ಸಲ್ಲಿಸಿರುವುದು ‘ಕ್ರೀಡಾಸ್ಫೂರ್ತಿಗೆ ಧಕ್ಕೆ ತರುವ ನಡೆ’ ಎಂದು ವಕೀಲನೊಬ್ಬ ದೂರು ದಾಖಲಿಸಿದರು. ಅಕ್ಟೋಬರ್ 14ರಂದು ನಡೆದ ಇಂಡಿಯಾ ಮತ್ತು ಪಾಕಿಸ್ತಾನ ಪಂದ್ಯದಲ್ಲಿ ಪ್ರೇಕ್ಷಕರು ಅಸಭ್ಯ ನಡವಳಿಕೆ ತೋರಿದರು. ಇದನ್ನು ಪ್ರತಿಭಟಿಸಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಐಸಿಸಿಗೆ ಪ್ರತಿಭಟನೆ ದಾಖಲಿಸಿದೆ. ಬಿಸಿಸಿಐ ಕಿಸೆಯಲ್ಲಿರುವ ಐಸಿಸಿ ಕ್ರಮ ತೆಗೆದುಕೊಳ್ಳುವುದೇ? ಕ್ರಿಕೆಟ್ ಈಗ ಕ್ರೀಡೆಯಾಗಿ ಉಳಿದಿಲ್ಲ. ಹಣ, ರಾಜಕೀಯ ಮೇಲಾಟದ ಅಂಗಣವಾಗಿ ಬದಲಾಗಿದೆ. ಬಿತ್ತಿದ್ದ ಬೀಜ ಹುಲುಸಾಗಿ ಫಲ ನೀಡುತ್ತಿದೆ!

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Contributor - ಮಾಧವ ಐತಾಳ್

contributor

Similar News