ಪ್ರಜಾಸತ್ತೆಯ ಅಣಕ ದೇಶದ್ರೋಹ ಕಾಯ್ದೆ

ಮಾರ್ಚ್ ೨೦೨೧ರಲ್ಲಿ ಲೋಕಸಭೆಯಲ್ಲಿ ಗೃಹಖಾತೆ ರಾಜ್ಯ ಸಚಿವ ಕಿಶನ್ ರೆಡ್ಡಿ, ಕಳೆದ ಐದು ವರ್ಷಗಳಲ್ಲಿ ದೇಶದ್ರೋಹ ಪ್ರಕರಣಗಳ ಸಂಖ್ಯೆ ದುಪ್ಪಟ್ಟಾಗಿದೆ ಎಂದಿದ್ದರು. ೨೦೧೪ರಲ್ಲಿ ೪೭ ಪ್ರಕರಣಗಳು ದಾಖಲಾಗಿದ್ದವು. ೨೦೧೯ರಲ್ಲಿ ದಾಖಲಾದ ೯೩ ಪ್ರಕರಣಗಳಲ್ಲಿ ಕೇವಲ ಒಂದರಲ್ಲಿ ಮಾತ್ರ ಶಿಕ್ಷೆಯಾಗಿದೆ. ವಾಟ್ಸ್‌ಆ್ಯಪ್ ಸಂದೇಶ ಕಳುಹಿಸಿದ ಪರಿಸರ ಕಾರ್ಯಕರ್ತೆ, ಸರಕಾರದ ಕಾರ್ಯನೀತಿ ವಿರುದ್ಧ ಪ್ರತಿಭಟಿಸುವ ವಿದ್ಯಾರ್ಥಿಗಳು, ಸಾಮಾಜಿಕ ಕಾರ್ಯಕರ್ತರು, ಪತ್ರಕರ್ತರು, ಶಿಕ್ಷಣ ಕ್ಷೇತ್ರದವರು ಸಂತ್ರಸ್ತರು. ಇದಕ್ಕೆ ಕೇಂದ್ರ ಸಚಿವರ ಪ್ರತಿಕ್ರಿಯೆ-ಹಿಂದಿನ ಕಾಂಗ್ರೆಸ್ ಸರಕಾರಗಳು ಬೇರೆ ಕಾನೂನಿನಡಿ ಜೈಲಿಗೆ ತಳ್ಳಿವೆ! ಇಷ್ಟೊಂದು ದುರುಪಯೋಗವಾಗುತ್ತಿರುವ ಕಾನೂನು ಪ್ರಜಾಪ್ರಭುತ್ವದಲ್ಲಿ ಇರಲೇಬಾರದಿತ್ತು.

Update: 2023-09-22 09:32 GMT

ದೇಶದ್ರೋಹ ಕಾಯ್ದೆಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಮೂವರು ನ್ಯಾಯಮೂರ್ತಿಗಳ ಪೀಠವು ಸಂವಿಧಾನ ಪೀಠಕ್ಕೆ ವರ್ಗಾಯಿಸಿದೆ. ಸಂವಿಧಾನ ಪೀಠವು ಬದುಕುವ ಹಕ್ಕು(ವಿಧಿ ೨೧) ಹಾಗೂ ಸಮಾನತೆಯ ಹಕ್ಕು(ವಿಧಿ ೧೪) ಹಾಗೂ ೧೯೬೨ರಿಂದ ಬಂದ ವಿವಿಧ ಹಕ್ಕುಗಳ ಬೆಳಕಿನಲ್ಲಿ ಮೌಲ್ಯಮಾಪನ ಮಾಡಲಿದೆ. ಸಂಸತ್ತಿನ ಸ್ಥಾಯಿ ಸಮಿತಿಯ ಪರಿಶೀಲನೆಯಲ್ಲಿ ರುವ ಭಾರತೀಯ ನ್ಯಾಯ ಸಂಹಿತೆ ಮಸೂದೆ ಬಗ್ಗೆ ಸಂಸತ್ತು ನಿರ್ಧಾರ ತೆಗೆದುಕೊಳ್ಳುವವರೆಗೆ ಕಾಯಬೇಕು ಎಂಬ ಸರಕಾರದ ಸಲಹೆಯನ್ನು ಕೋರ್ಟ್ ಮನ್ನಿಸಿಲ್ಲ. ವಿಧಿ ೧೨೪ಎ ಅನ್ನು ಪ್ರಶ್ನಿಸಿ ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದವು. ೨೦೨೨ರಿಂದ ಇಂಥ ಪ್ರಕರಣಗಳು ನ್ಯಾಯಾಲಯದಲ್ಲಿ ಬಾಕಿಯಿವೆ. ನವೆಂಬರ್ ೧, ೧೯೫೬ರ ರಾಜ್ಯಪತ್ರದಲ್ಲಿ ಪ್ರಕಟಗೊಂಡ ಈ ಕಾಯ್ದೆಯು ೧೯೧೧ರ ದೇಶದ್ರೋಹ ಸಭೆಗಳ ತಡೆ ಕಾಯ್ದೆಯ ಹೊಸ ರೂಪ. ಈ ವಿಧಿಯಡಿ ೨೦೨೨ರಿಂದ ಪ್ರಕರಣಗಳು ನ್ಯಾಯಾಲಯದಲ್ಲಿ ಬಾಕಿಯಿವೆ.

ಸಂವಿಧಾನ ರಚನಾ ಮಂಡಳಿಯಲ್ಲೂ ಚರ್ಚೆ

ಅಭಿವ್ಯಕ್ತಿ-ವಾಕ್ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಇಂಥ ಕಾಯ್ದೆಗಳನ್ನು ಪ್ರಭುತ್ವಗಳು ಭಿನ್ನಾಭಿಪ್ರಾಯವನ್ನು ಹತ್ತಿಕ್ಕಲು ನಿರಂತರವಾಗಿ ದುರುಪಯೋಗ ಪಡಿಸಿಕೊಳ್ಳುತ್ತಿವೆ. ೧೮೩೭ರಲ್ಲಿ ಬ್ರಿಟಿಷ್ ಅಧಿಕಾರಿ ಥಾಮಸ್ ಮೆಕಾಲೆ ರಚಿಸಿದ ಕರಡು ದಂಡ ಸಂಹಿತೆಯಲ್ಲಿ ಮೊದಲ ಬಾರಿಗೆ ೧೨೪ಎ ವಿಧಿ ಪ್ರಸ್ತಾಪಿಸಲ್ಪಟ್ಟಿತು. ೧೮೬೦ರಲ್ಲಿ ಜಾರಿಗೊಂಡ ಭಾರತೀಯ ದಂಡ ಸಂಹಿತೆ(ಐಪಿಸಿ)ಯಿಂದ ಇದನ್ನು ಹೊರಗಿಡಲಾಯಿತು. ವಹಾಬಿ ಚಳವಳಿಯನ್ನು ಹತ್ತಿಕ್ಕಲು ೧೮೭೦ರಲ್ಲಿ ಐಪಿಸಿಗೆ ಮರುಸೇರ್ಪಡೆಗೊಳಿಸಲಾಯಿತು. ಕಾಲಕ್ರಮೇಣ ವಾಕ್-ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಂಬಂಧಿಸಿದಂತೆ ಐಪಿಸಿಯಲ್ಲಿ ಬಹಳಷ್ಟು ಬದಲಾವಣೆ ಆಗಿದೆ.

ದೇಶದ್ರೋಹ ಸಂವಿಧಾನ ರಚನಾ ಮಂಡಳಿಯಲ್ಲಿ ಹಲವು ಬಾರಿ ಬಿಸಿಬಿಸಿ ಚರ್ಚೆಗೆ ಕಾರಣವಾಗಿತ್ತು. ವಲ್ಲಭಭಾಯಿ ಪಟೇಲ್ ‘ಸ್ವಾತಂತ್ರ್ಯದ ಹಕ್ಕು’ಗಳ ಸ್ವರೂಪದ ಬಗ್ಗೆ ಚರ್ಚಿಸಿದ್ದರು. ಸಿಪಿಎಂ ಮುಖಂಡ ಸೋಮನಾಥ ಲಾಹಿರಿ ಆ ಪದದ ಬಳಕೆಯನ್ನೇ ವಿರೋಧಿಸಿದ್ದರು. ೧೯೫೧ರಲ್ಲಿ ಮೊದಲ ಸಂವಿಧಾನ ತಿದ್ದುಪಡಿ ಮಸೂದೆ ಮಂಡನೆ ವೇಳೆ ಪ್ರಧಾನಿ ನೆಹರೂ, ‘ಆಕ್ಷೇಪಾರ್ಹ ಸೆಕ್ಷನ್ ಸರಿಯಿಲ್ಲ’ ಎಂದಿದ್ದರು. ೧೮೯೭ರಲ್ಲಿ ಬಾಲ ಗಂಗಾಧರ ತಿಲಕ್ ಅವರ ಭಾಷಣ ಈ ಕಾಯ್ದೆಯ ನಿಕಷಕ್ಕೊಳಪಟ್ಟಿತು. ನ್ಯಾಯಾಧೀಶ ಜೇಮ್ಸ್ ಸ್ಟ್ರಾಚೆ, ‘ಅತೃಪ್ತಿಯ ಭಾವನೆಯು ದ್ವೇಷ, ಹಗೆತನ, ತಿರಸ್ಕಾರ, ನಿಂದನೆ ಹಾಗೂ ಸರಕಾರದ ವಿರುದ್ಧ ಕೆಟ್ಟ ನಡವಳಿಕೆಯನ್ನು ಒಳಗೊಂಡಿರುತ್ತದೆ’ ಎಂದು ವ್ಯಾಖ್ಯಾನಿಸಿದರು. ಕೇಸರಿ ಪತ್ರಿಕೆಯಲ್ಲಿ ಪ್ರಕಟಿಸಿದ್ದ ಲೇಖನದಿಂದಾಗಿ ತಿಲಕ್ ಅವರು ಆರು ವರ್ಷ ಸೆರೆವಾಸ ಅನುಭವಿಸಿದರು. ೧೯೨೨ರಲ್ಲಿ ‘ಯಂಗ್ ಇಂಡಿಯಾ’ ಪತ್ರಿಕೆಯಲ್ಲಿ ಪ್ರಕಟಗೊಂಡ ಲೇಖನದಿಂದಾಗಿ ಗಾಂಧಿ ಕಟಕಟೆ ಹತ್ತಬೇಕಾಯಿತು. ಕಾಯ್ದೆಯನ್ನು ತೀವ್ರವಾಗಿ ವಿರೋಧಿಸಿದ ಅವರು, ‘‘ನಾಗರಿಕರ ಸ್ವಾತಂತ್ರ್ಯಹರಣಕ್ಕಾಗಿ ಐಪಿಸಿಯನ್ನು ರೂಪಿಸಲಾಗಿದೆ. ನನ್ನನ್ನು ಬಂಧಿಸಲು ಬಳಸಿದ ಐಪಿಸಿಯ ವಿಧಿ ೧೨೪ಎ ನಾಗರಿಕರ ಹಕ್ಕುಗಳನ್ನು ಹತ್ತಿಕ್ಕಲು ವಿನ್ಯಾಸಗೊಂಡ ಕಾನೂನುಗಳ ಯುವರಾಜನಿದ್ದಂತೆ’’ ಎಂದಿದ್ದರು.

ತಿರುವಿಗೆ ಕಾರಣವಾದ ತೀರ್ಪು

ಕೇದಾರ್‌ನಾಥ್ ಸಿಂಗ್ ವಿ/ಎಸ್ ಬಿಹಾರ ರಾಜ್ಯ(೧೯೬೨) ಸ್ವತಂತ್ರ ಭಾರತದ ಮೊದಲ ದೇಶದ್ರೋಹ ಪ್ರಕರಣ. ಬಿಹಾರದ ಫಾರ್ವರ್ಡ್ ಕಮ್ಯುನಿಸ್ಟ್ ಪಕ್ಷದ ಸದಸ್ಯ ಕೇದಾರ್‌ನಾಥ್ ಸಿಂಗ್, ಭಾಷಣವೊಂದರಲ್ಲಿ ಆಳ್ವಿಕೆ ನಡೆಸುತ್ತಿದ್ದ ಸರಕಾರವನ್ನು ಹೀಗಳೆದರು ಹಾಗೂ ಕ್ರಾಂತಿಗೆ ಕರೆ ಕೊಟ್ಟರು; ‘‘ಇಂದು ಬರೌನಿಯ ರಸ್ತೆಗಳಲ್ಲಿ ಸಿಐಡಿಯ ನಾಯಿಗಳು ಅಲೆದಾಡುತ್ತಿವೆ. ಈ ಸಭೆಯಲ್ಲೂ ಹಲವು ಅಧಿಕಾರಿ ನಾಯಿಗಳು ಕುಳಿತುಕೊಂಡಿವೆ. ಭಾರತದ ಜನರು ಬ್ರಿಟಿಷರನ್ನು ಓಡಿಸಿ, ಕಾಂಗ್ರೆಸ್ ಗೂಂಡಾಗಳನ್ನು ಚುನಾಯಿಸಿ, ಕುರ್ಚಿ ಮೇಲೆ ಕೂರಿಸಿದ್ದಾರೆ. ಅವರು ಅಲ್ಲಿ ಕುಳಿತಿರುವುದು ಜನರ ತಪ್ಪಿನಿಂದ. ಬ್ರಿಟಿಷರನ್ನು ಓಡಿಸಿದಂತೆ, ಈ ಕಾಂಗ್ರೆಸ್ ಗೂಂಡಾಗಳನ್ನೂ ಹೊಡೆದು ಓಡಿಸಬೇಕಿದೆ’’(೨೬ ಮೇ ೧೯೫೩ರಂದು). ಬೇಗುಸರಾಯ್‌ನ ಮೊದಲನೇ ದರ್ಜೆ ಮ್ಯಾಜಿಸ್ಟ್ರೇಟ್ ಕೇದಾರ್‌ನಾಥ್ ಸಿಂಗ್‌ಗೆ ಒಂದು ವರ್ಷ ಕಠಿಣ ಸೆರೆವಾಸ ವಿಧಿಸಿದರು. ಪಾಟ್ನಾದ ಹೈಕೋರ್ಟ್ ಈ ಆದೇಶವನ್ನು ಎತ್ತಿಹಿಡಿಯಿತು. ಪ್ರಕರಣ ಸುಪ್ರೀಂ ಕೋರ್ಟ್‌ನ ವಿಭಾಗೀಯ ಪೀಠಕ್ಕೆ ಬಂತು. ಸಂವಿಧಾನಕ್ಕೆ ಸಂಬಂಧಿಸಿದ್ದರಿಂದ ಅರ್ಜಿಯನ್ನು ಐವರು ನ್ಯಾಯಮೂರ್ತಿಗಳಿದ್ದ ಸಂವಿಧಾನ ಪೀಠಕ್ಕೆ ವರ್ಗಾಯಿಸಲಾಯಿತು. ಜನವರಿ ೨೦, ೧೯೬೨ರ ಆದೇಶದಲ್ಲಿ ವಿಧಿ ೧೨೪ಎ ಹಾಗೂ ೫೦೫ರ ಊರ್ಜಿತತ್ವವನ್ನು ಎತ್ತಿ ಹಿಡಿದ ನ್ಯಾಯಾಲಯ, ಅರ್ಜಿಯನ್ನು ವಜಾಗೊಳಿಸಿತು. ‘‘ಶಾಸನಬದ್ಧವಾಗಿ ಸ್ಥಾಪನೆಯಾದ ಸರಕಾರದ ವಿರುದ್ಧ ಹಿಂಸೆಗೆ ಪ್ರೇರೇಪಿಸದೆ ಇದ್ದರೆ ಅಥವಾ ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತಾರದೆ ಇದ್ದರೆ, ವ್ಯಕ್ತಿಯೊಬ್ಬನಿಗೆ ತನ್ನ ಅನಿಸಿಕೆಗಳನ್ನು ಹೇಳುವ/ಬರೆಯುವ ಹಕ್ಕು ಇದೆ’’ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು.

ಬಿಸಿ ಎದುರಿಸಿದ ಮೊದಲ ಪತ್ರಕರ್ತ

ಸ್ವಾತಂತ್ರ್ಯಾನಂತರ ದೇಶದ್ರೋಹದ ಆರೋಪ ಎದುರಿಸಿದ ಮೊದಲ ಪತ್ರಕರ್ತ ಬ್ರಹ್ಮ ಚೆಲನಿ. ದಿಲ್ಲಿ ಸ್ಕೂಲ್ ಆಫ್ ಇಕನಾಮಿಕ್ಸ್‌ನಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಜೆಎನ್‌ಯುನಿಂದ ನ್ಯೂಕ್ಲಿಯರ್ ರಿಲೇಶನ್ಸ್‌ನಲ್ಲಿ ಎಂ.ಫಿಲ್. ಪಡೆದ ಚೆಲನಿ, ೨೧ನೇ ವಯಸ್ಸಿನಲ್ಲಿ ಪಿಟಿಐ ಸೇರಿದರು. ಆನಂತರ ಅಸೋಸಿಯೇಟೆಡ್ ಪ್ರೆಸ್‌ನ ವರದಿಗಾರರಾದರು. ೧೯೮೪ರಲ್ಲಿ ಶಿಮ್ಲಾದ ಒಬೆರಾಯ್ ಕ್ಲಾರ್ಕ್ಸ್‌ನಿಂದ ಕಳಿಸಿದ ಟೆಲೆಕ್ಸ್‌ನಿಂದ ಅವರ ಬದುಕು ತಿರುವು ಪಡೆದುಕೊಂಡಿತು. ‘ಆಪರೇಷನ್ ಬ್ಲೂಸ್ಟಾರ್’ನಲ್ಲಿ ಸಿಖ್ ಹತ್ಯಾಕಾಂಡ ಕುರಿತು ಚೆಲನಿ ಕಳಿಸಿದ ವರದಿಯನ್ನು ಭಾರತದಲ್ಲಿ ಪ್ರಕಟಿಸದ ಅಸೋಸಿಯೇಟೆಡ್ ಪ್ರೆಸ್, ‘ಟೈಮ್ಸ್ ಆಫ್ ಲಂಡನ್’ನಲ್ಲಿ ಅಗ್ರಲೇಖನವಾಗಿ ಪ್ರಕಟಿಸಿತು. ಜುಲೈ ೨೪, ೧೯೮೪ರಂದು ‘ಸಂಡೆ ಅಬ್ಸರ್ವರ್’ ನಲ್ಲಿದ್ದ ತುಣುಕೊಂದು ಅಮೃತಸರದ ಪೊಲೀಸ್ ಅಧೀಕ್ಷಕರ ಕೈ ಸೇರಿತು. ಜುಲೈ ೩೦ರಂದು ಚೆಲನಿ ವಿರುದ್ಧ ಪ್ರಥಮ ಮಾಹಿತಿ ವರದಿ ದಾಖಲಾಯಿತು. ವಾಸ್ತವವೆಂದರೆ, ‘ಸಂಡೆ ಅಬ್ಸರ್ವರ್’ನಲ್ಲಿ ವರದಿ ಪ್ರಕಟಗೊಂಡಿರಲಿಲ್ಲ. ಅದರಲ್ಲಿ ಅಸೋಸಿಯೇಟೆಡ್ ಪ್ರೆಸ್‌ನ ವರದಿಯನ್ನು ಉಲ್ಲೇಖಿಸಲಾಗಿತ್ತಷ್ಟೆ! ಅಕ್ಟೋಬರ್‌ನಲ್ಲಿ ಚೆಲನಿಯ ಹೊಸದಿಲ್ಲಿಯಲ್ಲಿನ ಕಚೇರಿ ಹಾಗೂ ಮನೆಯನ್ನು ಮುತ್ತಿದ ಪೊಲೀಸರು, ಸಮುದಾಯದ ಧಾರ್ಮಿಕ ಭಾವನೆಗೆ ಧಕ್ಕೆ ಹಾಗೂ ಸಮುದಾಯಗಳ ನಡುವೆ ದ್ವೇಷ ಉತ್ತೇಜಿಸಿದರೆಂದು ಪ್ರಕರಣ ದಾಖಲಿಸಿದರು. ಜತೆಗೆ, ಪಂಜಾಬ್‌ನ ೧೯೫೬ರ ಪತ್ರಿಕೆಗಳ ವಿಶೇಷಾಧಿಕಾರ ಕಾಯ್ದೆಯನ್ನು ಉಲ್ಲಂಘಿಸಿದ್ದಾರೆಂದು ಆಪಾದನೆ ಹೊರಿಸಲಾಯಿತು. ಸುಪ್ರೀಂ ಕೋರ್ಟ್ ಅವರಿಗೆ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಿತು (ನವೆಂಬರ್ ೬). ಚೆಲನಿಯ ನ್ಯಾಯವಾದಿಗೆ ವಿಚಾರಣೆ ಸಮಯದಲ್ಲಿ ಇರಲು ಅವಕಾಶ ನೀಡಲಿಲ್ಲ. ದೇಶದ್ರೋಹ ಗಂಭೀರ ಅಪವಾದವಾದ್ದರಿಂದ ಹಾಗೂ ಪತ್ರಿಕಾ ಚರಿತ್ರೆಯಲ್ಲಿ ಈತನಕ ನಡೆಯದ ಘಟನೆಯಾದ್ದರಿಂದ, ಚೆಲನಿಗೆ ವ್ಯಾಪಕ ಬೆಂಬಲ ಸಿಕ್ಕಿತು. ಚೆಲನಿ ಪರ ನ್ಯಾ. ವಿ.ಎಂ. ತಾರ್ಕುಂಡೆ ವಕಾಲತ್ತು ವಹಿಸಿದ್ದರು. ಇಂದಿರಾ ಗಾಂಧಿ ಸರಕಾರ ಚೆಲನಿಯನ್ನು ಬಂಧಿಸಿ, ಅವರ ಪಾಸ್‌ಪೋರ್ಟ್ ಇತ್ಯಾದಿಗಳನ್ನು ಮುಟ್ಟುಗೋಲು ಹಾಕಿಕೊಂಡಿತು. ಆನಂತರ ರಾಜೀವ್ ಗಾಂಧಿ ಅಧಿಕಾರಾವಧಿಯಲ್ಲಿ ಚೆಲನಿ ಬಿಡುಗಡೆ ಹೊಂದಿದರು.

ಕಾನೂನು ಆಯೋಗದ ವರದಿ

ಕೇಂದ್ರ ಸರಕಾರವು ಐಪಿಸಿ ಸೆಕ್ಷನ್ ೧೨೪ಎ ಅಗತ್ಯವಿದೆಯೇ ಎಂಬ ಕುರಿತು ವರದಿ ಸಲ್ಲಿಸುವಂತೆ ಕಾನೂನು ಆಯೋಗವನ್ನು ೨೦೧೭ರಲ್ಲಿ ಕೋರಿತು. ಆಯೋಗ ಆಗಸ್ಟ್ ೨೦೧೮ರಲ್ಲಿ ನೀಡಿದ ವರದಿಯಲ್ಲಿ, ಬ್ರಿಟಿಷರು ಈಗಾಗಲೇ ಈ ಕಾನೂನು ರದ್ದುಗೊಳಿಸಿದ್ದಾರೆ. ನಾವು ಈ ಕಾನೂನು ಇನ್ನೂ ಉಳಿಸಿಕೊಳ್ಳಬೇಕೇ? ಧರ್ಮ-ಜನಾಂಗ-ಜಾತಿಗಳ ನಡುವೆ ದ್ವೇಷ ಹುಟ್ಟುಹಾಕುವುದನ್ನು ಐಪಿಸಿ ವಿಭಾಗ ೧೫೩ಎ ನಿರ್ಬಂಧಿಸುತ್ತದೆ. ೧೨೪ ಎ ಕೂಡ ಅದೇ ಕೆಲಸ ಮಾಡುವುದರಿಂದ, ಅದರ ಅಗತ್ಯವೇನಿದೆ? ಒಂದು ವೇಳೆ ಈ ವಿಭಾಗವನ್ನು ಉಳಿಸಿಕೊಳ್ಳಲೇಬೇಕೆಂದಿದ್ದರೆ, ‘ದೇಶದ್ರೋಹ’ ಎನ್ನುವ ಪದವನ್ನು ಬದಲಿಸಬೇಕು, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ೧೨೪ಎ ನಡುವೆ ಸ್ಪಷ್ಟ ಗೆರೆ ಇರಬೇಕು ಮತ್ತು ವಿಭಾಗ ೧೨೪ ಎ ದುರುಪಯೋಗ ಆಗದಂತೆ ನೋಡಿಕೊಳ್ಳಬೇಕು ಎಂದು ಶಿಫಾರಸು ಮಾಡಿತು. ‘‘ಪ್ರಜಾಪ್ರಭುತ್ವದಲ್ಲಿ ದೇಶಭಕ್ತಿ ಗೀತೆಯ ಗಾಯನ ಮಾತ್ರ ದೇಶಪ್ರೇಮ ಆಗಬಾರದು. ದೇಶಭಕ್ತಿಯನ್ನು ವ್ಯಕ್ತಪಡಿಸಲು ತಮಗಿಷ್ಟವಾದ ದಾರಿಯನ್ನು ಆಯ್ದುಕೊಳ್ಳುವ ಸ್ವಾತಂತ್ರ್ಯ ದೇಶವಾಸಿಗಳಿಗೆ ಇರಬೇಕು. ಸರಕಾರದ ನೀತಿಯ ಟೀಕೆ ಕೂಡ ದೇಶ ಪ್ರೇಮವೇ. ಇಂಥ ಅಭಿವ್ಯಕ್ತಿ ಒರಟು ಅನ್ನಿಸಬಹುದು. ಟೀಕೆ ಮಾಡುವವರು ದೇಶದ್ರೋಹಿಗಳಲ್ಲ. ಸರಕಾರದ ನೀತಿ, ದೇಶದ ಪರಿಸ್ಥಿತಿ ಬಗ್ಗೆ ಟೀಕೆ/ಧ್ವನಿ ಎತ್ತುವುದು ದೇಶದ್ರೋಹವಲ್ಲ. ಸಮಾಜದ ಸ್ವಾಸ್ಥ್ಯ ಹಾಳುಮಾಡುವ ಕೃತ್ಯ, ಸರಕಾರವನ್ನು ಉರುಳಿಸುವ ಹಿಂಸಾಕ್ರಾಂತಿ ಮತ್ತು ಅಕ್ರಮ ಕ್ರಿಯೆಗಳ ವಿರುದ್ಧ ಮಾತ್ರ ವಿಭಾಗ ೧೨೪ಎ ಬಳಸಬೇಕು’’ ಎಂದು ಆಯೋಗ ಹೇಳಿತು.

ಅಭಿಪ್ರಾಯಭೇದ ದೇಶದ್ರೋಹ ಅಲ್ಲ

ವ್ಯಂಗ್ಯಚಿತ್ರಕಾರ ಅಸೀಮ್ ತ್ರಿವೇದಿ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್, ದೇಶದ್ರೋಹ ಆರೋಪದಡಿ ಬಂಧನಕ್ಕೆ ಪೊಲೀಸರು ಅನುಸರಿಸಬೇಕಾದ ಮಾರ್ಗಸೂಚಿ ನಿಯಮಗಳನ್ನು ರೂಪಿಸಿತು. ಅದರಲ್ಲಿ ಒಂದು- ‘‘ಉಲ್ಲೇಖಿಸಿದ ಪದ ಮತ್ತು ಕ್ರಿಯೆಗಳು ಸರಕಾರದ ವಿರುದ್ಧ ಅತೃಪ್ತಿ, ದ್ವೇಷ ಮತ್ತು ಅಪನಂಬಿಕೆಗೆ ಕಾರಣವಾಗಿ, ಸರಕಾರದ ವಿರುದ್ಧ ಹಿಂಸೆಯನ್ನು ಪ್ರಚೋದಿಸುವ ಇಲ್ಲವೇ ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತರುವಂಥ ಪರಿಸ್ಥಿತಿಯನ್ನು ಸೃಷ್ಟಿಸುತ್ತವೆಯೇ ಎನ್ನುವ ಕುರಿತು ತಾರ್ಕಿಕ ಮೌಲ್ಯಮಾಪನ ಮಾಡಬೇಕು. ಈ ಷರತ್ತುಗಳನ್ನು ಹೇಗೆ ಅನುಸರಿಸಲಾಗಿದೆ ಎನ್ನುವ ಬಗ್ಗೆ ಕಾನೂನು ಅಧಿಕಾರಿಯೊಬ್ಬರಿಂದ ಲಿಖಿತ ಅಭಿಪ್ರಾಯ ಪಡೆದುಕೊಳ್ಳಬೇಕು. ಆನಂತರ, ರಾಜ್ಯದ ಪಬ್ಲಿಕ್ ಪ್ರಾಸಿಕ್ಯೂಟರ್ ಅವರಿಂದ ಎರಡನೇ ಅಭಿಪ್ರಾಯ ಪಡೆಯಬೇಕು’’. ಈ ಮಾರ್ಗಸೂಚಿಯನ್ನು ಅನುಸರಿಸಿದರೆ ದೇಶದ್ರೋಹ ಕಾಯ್ದೆಯಡಿ ಒಬ್ಬರ ಬಂಧನ ಕೂಡ ಕಷ್ಟವೇ. ಕಾಯ್ದೆಯ ದುರುಪಯೋಗ ಕೂಡದು ಎಂದು ಹಲವು ಪ್ರಕರಣಗಳಲ್ಲಿ ನ್ಯಾಯಾಲಯಗಳು ನಿರ್ದೇಶನ ನೀಡಿದ್ದರೂ, ಉಲ್ಲಂಘನೆ ನಿರಂತರವಾಗಿ ನಡೆಯುತ್ತಿದೆ. ಕಾನೂನಿನ ಲೋಪ, ಮಾರ್ಗಸೂಚಿಯ ಅನುಷ್ಠಾನದಲ್ಲಿನ ವೈಫಲ್ಯ ಹಾಗೂ ಸರಕಾರ-ಅಧಿಕಾರಿಗಳ ಮನೋಭಾವ ಇದಕ್ಕೆ ಕಾರಣ.

ವಿನೋದ್ ದುವಾ ಪ್ರಕರಣ

ಹಿರಿಯ ಪತ್ರಕರ್ತ ವಿನೋದ್ ದುವಾ ಮೇ ೬, ೨೦೨೧ರಂದು ತಮ್ಮ ಯುಟ್ಯೂಬ್ ಶೋನಲ್ಲಿ ಪುಲ್ವಾಮಾ ದಾಳಿ ಹಾಗೂ ಕೋವಿಡ್ ನಿರ್ವಹಣೆಯಲ್ಲಿ ಸರಕಾರದ ವೈಫಲ್ಯವನ್ನು ಖಂಡಿಸಿದ್ದರು. ಪೊಲೀಸರು ದೇಶ ದ್ರೋಹ ಪ್ರಕರಣ ದಾಖಲಿಸಿದರು. ವಿಚಾರಣೆ ನಡೆಸಿದ ನ್ಯಾಯಾಲಯ, ‘‘ದುವಾ ಸರಕಾರವನ್ನು ‘ಅನುಮತಿಯಿರುವ ಮಿತಿ’ಯಲ್ಲೇ ಟೀಕಿಸಿದ್ದಾರೆ. ಪತ್ರಕರ್ತರಿಗೆ ದೇಶದ್ರೋಹ ಕಾಯ್ದೆಯಿಂದ ರಕ್ಷಣೆ ಕೊಡುವ ಅಗತ್ಯವಿದೆ. ೧೨೪ಎ ಅಡಿ ಕ್ರಮ ಜರುಗಿಸಬೇಕೆಂದಿದ್ದರೆ, ಕೇದಾರನಾಥ್ ಸಿಂಗ್ ಪ್ರಕರಣದ ತೀರ್ಪಿನಲ್ಲಿ ವಿವರಿಸಿರುವ ರೀತಿಯಲ್ಲೇ ಆಗಬೇಕು’’ ಎಂದಿತು. ಇನ್ನೊಂದು ಪ್ರಕರಣ(ಭಾರತೀಯ ಸಂಪಾದಕರ ಒಕ್ಕೂಟ ಮತ್ತು ಜಿ.ಎಸ್. ಒಂಬತ್ಕೆರೆ ವಿ/ಎಸ್ ಭಾರತ ಸರಕಾರ)ದ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಹಾಗೂ ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ ಮತ್ತು ಹೃಷಿಕೇಶ್ ರಾಯ್ ಅವರ ಪೀಠ, ‘‘ಮಹಾತ್ಮಾ ಗಾಂಧಿ ಅವರನ್ನು ಮೌನವಾಗಿಸಿ ಸ್ವಾತಂತ್ರ್ಯ ಚಳವಳಿಯನ್ನು ದಮನ ಮಾಡಲು ಬ್ರಿಟಿಷರು ರೂಪಿಸಿದ ವಿಭಾಗ ೧೨೪ಎಯನ್ನು ಏಕೆ ಕೈಬಿಡಬಾರದು?’’ ಎಂದು ಪ್ರಶ್ನಿಸಿತು(ಜುಲೈ ೫,೨೦೨೧). ‘‘ಗಾಂಧಿ, ಗೋಖಲೆ ಇನ್ನಿತರರನ್ನು ಬಾಯಿ ಮುಚ್ಚಿಸಲು ಬಳಸಿದ ಕಾನೂನನ್ನು ೭೫ ವರ್ಷಗಳ ಬಳಿಕವೂ ಬಳಸುವ ಅಗತ್ಯವಿದೆಯೇ? ಈ ಸೆಕ್ಷನ್ ಅತಿ ಹೆಚ್ಚು ದುರ್ಬಳಕೆಯಾಗಿದೆ. ನ್ಯಾಯಾಲಯ ರದ್ದುಪಡಿಸಿದ್ದ ಐಟಿ ಕಾಯ್ದೆಯ ಸೆಕ್ಷನ್ ೬೬ಎ ಕೂಡ ಬಳಕೆಯಾಗುತ್ತಿದೆ. ಅನಗತ್ಯ-ಅಪ್ರಯೋಜಕ ಕಾನೂನುಗಳನ್ನು ರದ್ದುಗೊಳಿಸುತ್ತಿರುವ ಸರಕಾರ ಈ ಸೆಕ್ಷನ್ ಬಗ್ಗೆ ಏಕೆ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ ಎನ್ನುವುದು ಅರ್ಥವಾಗುತ್ತಿಲ್ಲ. ಕಾನೂನು ಜಾರಿಗೊಳಿಸುತ್ತಿರುವವರು ಈ ಕಾಯ್ದೆಗಳನ್ನು ದುರ್ಬಳಕೆ ಮಾಡುತ್ತಿದ್ದಾರೆ ಮತ್ತು ಉತ್ತರದಾಯಿತ್ವ ಕಾಣುತ್ತಿಲ್ಲ. ಪೊಲೀಸ್ ಅಧಿಕಾರಿಯೊಬ್ಬ ವ್ಯಕ್ತಿಯೊಬ್ಬರನ್ನು ಸುಲಭವಾಗಿ ದೇಶದ್ರೋಹ ಪ್ರಕರಣದಲ್ಲಿ ಸಿಲುಕಿಸಬಹುದು. ಇಂಥ ಪ್ರಕರಣಗಳಲ್ಲಿ ಶಿಕ್ಷೆ ಪ್ರಮಾಣ ತೀರ ಕಡಿಮೆ ಇದೆ. ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕಿದೆ’’ ಎಂದು ಹೇಳಿತು.

ಪ್ರಕರಣಗಳ ದಾಖಲು ಹೆಚ್ಚಳ

ಅಂತರ್ಜಾಲ ಎಲ್ಲೆಡೆ ವ್ಯಾಪಿಸಿರುವ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿಗಳು ಮಿಂಚಿನಂತೆ ಸಂಚರಿಸುವ ಈ ಯುಗದಲ್ಲಿ ಸಾರ್ವಜನಿಕ ಸುವ್ಯವಸ್ಥೆಯನ್ನು ಯಾವುದು ಹದಗೆಡಿಸುತ್ತದೆ ಎನ್ನುವುದೇ ಚರ್ಚಾರ್ಹ. ೨೦೧೬-೧೯ರ ಅವಧಿಯಲ್ಲಿ ವಿಧಿ ೧೨೪ಎ ಬಳಕೆ ಶೇ.೧೬೦ರಷ್ಟು ಹೆಚ್ಚಿತು. ಆದರೆ, ಅಪರಾಧ ಸಾಬೀತು ಪ್ರಮಾಣ ಶೇ.೩.೩ಕ್ಕೆ ಕುಸಿಯಿತು. ಯುಪಿಎ-೨ರ ಮೊದಲ ನಾಲ್ಕು ವರ್ಷಗಳಲ್ಲಿ ೨೭೯(ವರ್ಷಕ್ಕೆ ೬೨) ಪ್ರಕರಣ ದಾಖಲಾಗಿತ್ತು. ೨೦೧೪-೨೦೨೦ರ ಆರು ವರ್ಷದಲ್ಲಿ ೫೧೯ಕ್ಕೂ ಅಧಿಕ ಪ್ರಕರಣ (ವರ್ಷಕ್ಕೆ ೭೯) ದಾಖಲಾಗಿದೆ. ಆರೋಪಿಗಳ ಸಂಖ್ಯೆ ೩,೭೬೨ (ಯುಪಿಎ ೨ರಲ್ಲಿ) ಹಾಗೂ ೭,೧೩೬ (ಎನ್‌ಡಿಎ ೧ ಮತ್ತು ೨). ಪ್ರಧಾನಿ (೧೪೯), ಉತ್ತರಪ್ರದೇಶದ ಮುಖ್ಯಮಂತ್ರಿ (೨೨೬) ಹಾಗೂ ಸರಕಾರದ ಟೀಕೆ/ಪ್ರತಿಭಟನೆ, ಸರಕಾರವನ್ನು ಉರುಳಿಸುವಿಕೆಗೆ ಸಂಚು ಆರೋಪ ಹೊರಿಸಿ, ೨೨೬ ಪ್ರಕರಣ ದಾಖಲಾಗಿದೆ. ಪಾಟೀದಾರ್/ಉದ್ಯೋಗದಲ್ಲಿ ಮೀಸಲು, ಪೌರತ್ವ ತಿದ್ದುಪಡಿ ಕಾಯ್ದೆ, ಕೃಷಿಕಾಯ್ದೆ ತಿದ್ದುಪಡಿ ವಿರುದ್ಧದ ಪ್ರತಿಭಟನಾಕಾರರ ಮೇಲೆಯೂ ಪ್ರಕರಣಗಳು ದಾಖಲಾಗಿವೆ (ಮೂಲ: ಆರ್ಟಿಕಲ್‌೧೪ ಇಂಡಿಯಾ, ಭಾರತದಲ್ಲಿ ಅಪರಾಧ ವರದಿ ೨೦೧೪-೨೦೧೯). ಮಾರ್ಚ್ ೨೦೨೧ರಲ್ಲಿ ಲೋಕಸಭೆಯಲ್ಲಿ ಗೃಹಖಾತೆ ರಾಜ್ಯ ಸಚಿವ ಕಿಶನ್ ರೆಡ್ಡಿ, ಕಳೆದ ಐದು ವರ್ಷಗಳಲ್ಲಿ ದೇಶದ್ರೋಹ ಪ್ರಕರಣಗಳ ಸಂಖ್ಯೆ ದುಪ್ಪಟ್ಟಾಗಿದೆ ಎಂದಿದ್ದರು. ೨೦೧೪ರಲ್ಲಿ ೪೭ ಪ್ರಕರಣಗಳು ದಾಖಲಾಗಿದ್ದವು. ೨೦೧೯ರಲ್ಲಿ ದಾಖಲಾದ ೯೩ ಪ್ರಕರಣಗಳಲ್ಲಿ ಕೇವಲ ಒಂದರಲ್ಲಿ ಮಾತ್ರ ಶಿಕ್ಷೆಯಾಗಿದೆ. ವಾಟ್ಸ್‌ಆ್ಯಪ್ ಸಂದೇಶ ಕಳುಹಿಸಿದ ಪರಿಸರ ಕಾರ್ಯಕರ್ತೆ, ಸರಕಾರದ ಕಾರ್ಯನೀತಿ ವಿರುದ್ಧ ಪ್ರತಿಭಟಿಸುವ ವಿದ್ಯಾರ್ಥಿಗಳು, ಸಾಮಾಜಿಕ ಕಾರ್ಯಕರ್ತರು, ಪತ್ರಕರ್ತರು, ಶಿಕ್ಷಣ ಕ್ಷೇತ್ರದವರು ಸಂತ್ರಸ್ತರು. ಇದಕ್ಕೆ ಕೇಂದ್ರ ಸಚಿವರ ಪ್ರತಿಕ್ರಿಯೆ-ಹಿಂದಿನ ಕಾಂಗ್ರೆಸ್ ಸರಕಾರಗಳು ಬೇರೆ ಕಾನೂನಿನಡಿ ಜೈಲಿಗೆ ತಳ್ಳಿವೆ! ಇಷ್ಟೊಂದು ದುರುಪಯೋಗವಾಗುತ್ತಿರುವ ಕಾನೂನು ಪ್ರಜಾಪ್ರಭುತ್ವದಲ್ಲಿ ಇರಲೇಬಾರದಿತ್ತು.

ವಿಧಿ ೧೨೪ಎ ಅಡಿ ಹೆಚ್ಚು ಪ್ರಕರಣ ದಾಖಲಾದ ರಾಜ್ಯಗಳಲ್ಲಿ ಕರ್ನಾಟಕವೂ ಒಂದು-೨೦೧೯ರಲ್ಲಿ ೨೨ ಪ್ರಕರಣಗಳು ದಾಖಲಾಗಿವೆ. ಮೈಸೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ‘ಫ್ರೀ ಕಾಶ್ಮೀರ’ ಫಲಕ ಹಿಡಿದಿದ್ದ ನಳಿನಿ, ಬೆಂಗಳೂರಿನ ಟೌನ್‌ಹಾಲ್ ಬಳಿ ಇಂಥದ್ದೇ ಫಲಕ ಹಿಡಿದಿದ್ದ ಆರ್ದ್ರಾ, ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಎಐಎಂಐಎಂ ಆಯೋಜಿಸಿದ್ದ ಸಭೆಯಲ್ಲಿ ಘೋಷಣೆ ಕೂಗಿದ ಅಮೂಲ್ಯ ಲಿಯೊನ್, ಬೀದರ್‌ನ ಶಾಲೆಯೊಂದರಲ್ಲಿ ಸಿಎಎ ವಿರೋಧಿಸಿ ನಡೆದ ನಾಟಕದಲ್ಲಿ ಪಾಲ್ಗೊಂಡಿದ್ದ ಮಕ್ಕಳ ಮೇಲೆ ಹಾಗೂ ಆನೆಗೊಂದಿ ಉತ್ಸವದಲ್ಲಿ ‘‘ನಿಮ್ಮ ದಾಖಲೆ ಯಾವಾಗ ನೀಡುತ್ತೀರಿ?’’ ಎಂಬ ಕವನ ವಾಚಿಸಿದ್ದ ಸಿರಾಜ್ ಬಿಸರಳ್ಳಿ ಮೇಲೆ ಪ್ರಕರಣ ದಾಖಲಿಸಲಾಯಿತು. ಸರಕಾರದ ಕ್ರಮವನ್ನು ಖಂಡಿಸಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಸದನದಲ್ಲೇ ಕವನ ವಾಚಿಸಿದರು. ಟೂಲ್‌ಕಿಟ್‌ಗೆ ಸಂಬಂಧಿಸಿದಂತೆ ಪರಿಸರ ಕಾರ್ಯಕರ್ತೆ ದಿಶಾ ರವಿ ಬಂಧನ ಜಗತ್ತಿನೆಲ್ಲೆಡೆ ಸುದ್ದಿ ಮಾಡಿತು. ಜೈಲಿನಲ್ಲಿ ಕೆಲಕಾಲ ಕಳೆದ ಅವರು ಜಾಮೀನು ದೊರೆತು ಹೊರಬಂದರು.

ಹಾಥರಸ್‌ನಲ್ಲಿ ದಲಿತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣದ ವರದಿಗಾರಿಕೆಗೆ ತೆರಳುತ್ತಿದ್ದ ಸಿದ್ದೀಕ್ ಕಪ್ಪನ್ ಅವರ ಬಂಧನ ಪ್ರಕರಣದಲ್ಲಿ ಮುಖ್ಯ ನ್ಯಾ. ಯು.ಯು. ಲಲಿತ್ ಹಾಗೂ ನ್ಯಾ. ಎಸ್.ರವೀಂದ್ರ ಭಟ್ ಅವರ ಪೀಠ, ‘‘ಸಂತ್ರಸ್ತರ ಪರವಾಗಿ ನ್ಯಾಯ ಕೇಳುವುದು ಹೇಗೆ ಅಪರಾಧವಾಗುತ್ತದೆ ಮತ್ತು ಕೋಮು ಹಿಂಸೆಯ ಷಡ್ಯಂತ್ರ ನಡೆಸುವ ವ್ಯಕ್ತಿ ಬೇರೆ ದೇಶದಲ್ಲಿ ನಡೆದ ಪ್ರತಿಭಟನೆಯಲ್ಲಿ ಬಳಸಿದ ಇಂಗ್ಲಿಷ್ ಭಾಷೆಯ ಕರಪತ್ರಗಳನ್ನು ಏಕೆ ಬಳಸುತ್ತಾನೆ?’’ ಎಂದು ಪ್ರಶ್ನಿಸಿತು. ಮುಕ್ತ-ಸಮ ಸಮಾಜದ ಆಶಯವಿರುವವರು ಕೇಳಬೇಕಾದ ಅತಿ ಮುಖ್ಯ ಪ್ರಶ್ನೆ ಇದು. ಸಿದ್ದೀಕ್ ಪ್ರಕರಣದ ತೀರ್ಪು ಭಯೋತ್ಪಾದನೆ ವಿರುದ್ಧದ ಕಾನೂನುಗಳನ್ನು ಬಳಸಿ ಭಿನ್ನಾಭಿಪ್ರಾಯವನ್ನು ಹತ್ತಿಕ್ಕಿ ಜೈಲಿಗಟ್ಟಬಹುದು ಎಂದುಕೊಂಡಿರುವ ಅಧಿಕಾರಿ-ರಾಜಕಾರಣಿಗಳ ಕುತಂತ್ರವನ್ನು ವಿಫಲಗೊಳಿಸಬಹುದು ಎಂಬ ಸಂದೇಶವನ್ನು ನೀಡಿದೆ. ಅದೇ ಹೊತ್ತಿನಲ್ಲಿ ವ್ಯಕ್ತಿಯನ್ನು ಯಾವುದೇ ಆಧಾರವಿಲ್ಲದೆ ೨ ವರ್ಷ ಕಾಲ ಸೆರೆಮನೆಯಲ್ಲಿಡಲಾಗಿತ್ತು ಎಂಬುದು ನ್ಯಾಯಾಲಯಗಳ ಲೋಪವನ್ನು ತೋರಿಸುತ್ತದೆ.

ಸದ್ಯಕ್ಕೆ ಚೆಂಡು ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠದ ಬಳಿ ಇದೆ.

Tags:    

Writer - ವಾರ್ತಾಭಾರತಿ

contributor

Editor - Safwan

contributor

Contributor - ಮಾಧವ ಐತಾಳ್

contributor

Similar News