ಕಾಡಿನ ಸಂರಕ್ಷಣೆಗೆ ಮುಂದಾದ ಸುಪ್ರೀಂ ಕೋರ್ಟ್

‘‘ಅರಣ್ಯ ಕಾಯ್ದೆಗೆ ಕೇಂದ್ರ ಸರಕಾರ 2023ರಲ್ಲಿ ತಂದ ತಿದ್ದುಪಡಿಗಳು ಪರಿಗಣಿಸಲ್ಪಡುವುದಿಲ್ಲ. ಅದಕ್ಕಿಂತ ಮುಖ್ಯವಾಗಿ, ನಿಯಮ 16ರಡಿ ರಾಜ್ಯಗಳು ತಮ್ಮ ವ್ಯಾಪ್ತಿಯಲ್ಲಿರುವ ಪರಿಭಾವಿತ ಅರಣ್ಯಗಳ ಕುರಿತು ಪರಿಣತರ ಸಮಿತಿ ನೀಡಿದ ವರದಿಯನ್ನು ಕೇಂದ್ರ ಪ್ರಕಟಿಸ ಬೇಕಾಗುತ್ತದೆ. ಟಿ.ಎನ್. ಗೋದವರ್ಮನ್ ತಿರುಮುಲ್ಪಾದ್ ಪ್ರಕರಣದ ಆದೇಶದಲ್ಲಿ ಎತ್ತಿಹಿಡಿದ ‘ಅರಣ್ಯ’ದ ಪದಕೋಶದ ಅರ್ಥಕ್ಕೆ ವಾಪಸಾಗಬೇಕು. ತನ್ನ ಸಮ್ಮತಿ ಇಲ್ಲದೆ ಅರಣ್ಯ ಭೂಮಿಯಲ್ಲಿ ಮೃಗಾಲಯ ಮತ್ತು ಸಫಾರಿ ಯೋಜನೆಗಳು ಕೂಡದು’’ ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ.

Update: 2024-03-01 04:47 GMT
Editor : Thouheed | Byline : ಋತ

ಕಾಡು ಎಂಬ ಪದಕ್ಕೆ ಶಬ್ದಕೋಶದ ಅರ್ಥ ಬಳಸಿ ಎಂದು ಮೂವರು ನ್ಯಾಯಮೂರ್ತಿಗಳ ಪೀಠ ಫೆ.19ರಂದು ಆದೇಶ ನೀಡಿದೆ. ‘ವಿಶಾಲವಾದ ಮತ್ತು ಎಲ್ಲವನ್ನೂ ಒಳಗೊಳ್ಳುವ 1996ರ ಆದೇಶಕ್ಕೆ ವಾಪಸಾಗಬೇಕು’ ಎಂದಿದ್ದು, ಇದರಿಂದ 1.97 ಲಕ್ಷ ಚದರ ಕಿಲೋಮೀಟರ್ ಘೋಷಿತ ಅರಣ್ಯಭೂಮಿ ‘ಕಾಡು’ ಎಂಬುದಕ್ಕೆ ಸೇರ್ಪಡೆಯಾಗಲಿದೆ. ಮು.ನ್ಯಾ. ಡಿ.ವೈ. ಚಂದ್ರಚೂಡ್ ನೇತೃತ್ವದ ಪೀಠವು ಅರಣ್ಯ(ಸಂರಕ್ಷಣೆ) ಕಾಯ್ದೆ 1980ಕ್ಕೆ ತಂದ ತಿದ್ದುಪಡಿಗಳನ್ನು ಪ್ರಶ್ನಿಸಿದ್ದ ಅರ್ಜಿಯ ವಿಚಾರಣೆ ನಡೆಸುತ್ತಿತ್ತು. 1980ರ ಕಾಯ್ದೆಯನ್ನು ಪರಿಸರ ಅಸಮತೋಲನಕ್ಕೆ ಕಾರಣವಾಗುವ ಅರಣ್ಯನಾಶ ತಡೆಯಲು ರೂಪಿಸಲಾಗಿತ್ತು. ಈ ಕಾಯ್ದೆಗೆ ತರಾತುರಿಯಲ್ಲಿ ತಿದ್ದುಪಡಿ ತಂದ ಕೇಂದ್ರ ಸರಕಾರ, ಅರಣ್ಯ ಸಂರಕ್ಷಣೆ(ತಿದ್ದುಪಡಿ) ಕಾಯ್ದೆ 2023(ಎಫ್‌ಸಿಎಎ)ನ್ನು ಜಾರಿಗೊಳಿಸಿತು.

ಅರಣ್ಯ ಸಂರಕ್ಷಣೆ ಕಾಯ್ದೆ, 1980(ಎಫ್‌ಸಿಎ) ಅಡಿ ಅಕ್ರಮ ಎನ್ನಲಾಗುವ ಅರಣ್ಯಗಳನ್ನು ತೆರವುಗೊಳಿಸುವ ಅಧಿಕಾರವನ್ನು ರಾಜ್ಯ ಸರಕಾರಗಳಿಗೆ ನೀಡಲಾಯಿತು. ಜುಲೈ 26, 2023ರಲ್ಲಿ ಸಂಸತ್ತಿನಿಂದ ಅಂಗೀಕಾರ ಹಾಗೂ ಆಗಸ್ಟ್ 4, 2023ರಲ್ಲಿ ರಾಷ್ಟ್ರಪತಿ ಅವರಿಂದ ಅನುಮೋದನೆ ಪಡೆದುಕೊಂಡು, ವನ(ಸಂರಕ್ಷಣೆ ಮತ್ತು ಸಂವರ್ಧನೆ)ನಿಯಮಗಳು 2023 ಅಧಿಸೂಚನೆ ಹೊರಡಿಸಲಾಯಿತು. ನವೆಂಬರ್ 2023ರಲ್ಲಿ ಪರಿಸರ ಮಂತ್ರಾಲಯವು ರಾಜ್ಯ ಸರಕಾರಗಳಿಗೆ ಅರಣ್ಯ ಒತ್ತುವರಿಯನ್ನು ಸಕ್ರಮಗೊಳಿಸುವ ಹಾಗೂ ಅರಣ್ಯ ಭೂಮಿಯನ್ನು ಇತರ ಉದ್ದೇಶಗಳಿಗೆ ನೀಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವನ್ನು ನೀಡಿತು. ಈ ಕಾಯ್ದೆಯು ಕಾಯ್ದಿಟ್ಟ ಅರಣ್ಯಗಳ ತೆರವು, ಅರಣ್ಯ ಭೂಮಿಯನ್ನು ಅರಣ್ಯೇತರ ಉದ್ದೇಶಕ್ಕಾಗಿ ಬಳಕೆ, ಭೋಗ್ಯ ಇಲ್ಲವೇ ಇನ್ನಿತರ ವಿಧಾನಗಳ ಮೂಲಕ ಖಾಸಗಿಯವರಿಗೆ ಅರಣ್ಯ ಭೂಮಿಯ ಪರಭಾರೆ, ಸ್ವಾಭಾವಿಕವಾಗಿ ಬೆಳೆದ ಮರಗಳನ್ನು ಮರುಅರಣ್ಯೀಕರಣಕ್ಕೆ ತೆರವುಗೊಳಿಸುವುದಕ್ಕೆ ಅನುವು ನೀಡುತ್ತದೆ. ಎಫ್‌ಸಿಎಎ ಸುಪ್ರೀಂ ಕೋರ್ಟಿನ ಎರಡು ಪ್ರಮುಖ ತೀರ್ಪುಗಳನ್ನು ಬುಡಮೇಲು ಮಾಡುತ್ತದೆ-ಟಿ.ಎನ್.ಗೋದವರ್ಮನ್ ತಿರುಮುಲ್ಪಾದ್ ವಿ/ಎಸ್ ಭಾರತ ಸರಕಾರ 1996 ಹಾಗೂ ಲಾಫಾರ್ಜ್ ಉಮಿಯಂ ಮೈನಿಂಗ್ ಪ್ರೈವೇಟ್ ಲಿಮಿಟೆಡ್ ವಿ/ಎಸ್ ಭಾರತ ಸರಕಾರ 2011. ಗೋದವರ್ಮನ್ ಪ್ರಕರಣದಲ್ಲಿ ನ್ಯಾಯಾಲಯವು ಈಗಾಗಲೇ ಸಂರಕ್ಷಿಸಲ್ಪಡುತ್ತಿರುವ ಕಾಡುಗಳು ಸೇರಿದಂತೆ ಅರಣ್ಯದ ಶಬ್ದಕೋಶದ ಅರ್ಥವನ್ನು ಅನ್ವಯಿಸಿ ಎಲ್ಲ ಅವರ್ಗೀಕೃತ ಕಾಡುಗಳನ್ನು ಗುರುತಿಸಬೇಕು ಮತ್ತು ಇದಕ್ಕಾಗಿ ರಾಜ್ಯ ಪರಿಣತ ಸಮಿತಿಗಳನ್ನು ನೇಮಿಸಬೇಕು ಎಂದು ಹೇಳಿತ್ತು. 2023ರ ತಿದ್ದುಪಡಿ ಕಾಯ್ದೆಯನ್ನು ಪ್ರಶ್ನಿಸಿ, ಅರ್ಜಿ ಸಲ್ಲಿಕೆಯಾಗಿತ್ತು.

ಅರಣ್ಯ ಸಂರಕ್ಷಣೆ ಕಾಯ್ದೆ 1980

ಈ ಕಾಯ್ದೆಯನ್ನು ಅರಣ್ಯನಾಶ ತಡೆಗೆ ರೂಪಿಸಲಾಗಿತ್ತು. 1951-75ರ ಅವಧಿಯಲ್ಲಿ ಅಂದಾಜು 4 ದಶಲಕ್ಷ ಹೆಕ್ಟೇರ್ ಅರಣ್ಯವನ್ನು ಬೇರೆ ಉದ್ದೇಶಕ್ಕೆ ಬಳಸಲಾಗಿತ್ತು ಮತ್ತು ಕಾಯ್ದೆ ಅನುಷ್ಠಾನಗೊಂಡ ಬಳಿಕ ವಾರ್ಷಿಕ ಪ್ರಮಾಣ 22,000 ಹೆಕ್ಟೇರ್(ಮೊದಲಿನ 1/10 ಭಾಗ)ಗೆ ಕುಸಿಯಿತು ಎಂದು ಸಂಸದೀಯ ಸ್ಥಾಯಿ ಸಮಿತಿಗೆ ಸರಕಾರ ಹೇಳಿತ್ತು. ಆದರೆ, ಈ ಶಾಸನವು ಭಾರತೀಯ ಅರಣ್ಯ ಕಾಯ್ದೆ ಗುರುತಿಸಿದ ಅಥವಾ 1980ರವರೆಗೆ ರಾಜ್ಯಗಳ ದಾಖಲೆಗಳಲ್ಲಿದ್ದ ಅರಣ್ಯ ಪ್ರದೇಶಕ್ಕೆ ಮಾತ್ರ ಅನ್ವಯಿಸುತ್ತಿತ್ತು. ತಮಿಳುನಾಡಿನ ಗುಡಲೂರಿನಲ್ಲಿ ಅಕ್ರಮ ಮರಮಟ್ಟು ಕಟಾವು ತಡೆಯಲು 1986ರಲ್ಲಿ ಸುಪ್ರೀಂ ಕೋರ್ಟ್ ಗೋದವರ್ಮನ್ ತಿರುಮುಲ್ಪಾದ್ ಪ್ರಕರಣದಲ್ಲಿ ನೀಡಿದ ಆದೇಶದಲ್ಲಿ, ಅರಣ್ಯದ ವರ್ಗೀಕರಣ ಯಾವುದೇ ರೀತಿ ಆಗಿರಲಿ ಮತ್ತು ಅದರ ಮಾಲಕರು ಯಾರೇ ಆಗಿದ್ದರೂ, ಅರಣ್ಯವನ್ನು ಸಂರಕ್ಷಿಸಬೇಕು ಎಂದಿತು. ‘ಪರಿಭಾವಿತ ಅರಣ್ಯ(ಡೀಮ್ಡ್ ಫಾರೆಸ್ಟ್) ಅಥವಾ ಸರಕಾರ ಇಲ್ಲವೇ ಕಂದಾಯ ಇಲಾಖೆಯ ದಾಖಲೆಗಳಲ್ಲಿ ಅಧಿಕೃತವಾಗಿ ವರ್ಗೀಕರಣಗೊಳ್ಳದ ಅರಣ್ಯವನ್ನು ಹೋಲುವಂಥ ಕಾಡು’ ಎಂಬ ಪರಿಕಲ್ಪನೆಯನ್ನು ಮುನ್ನೆಲೆಗೆ ತಂದಿತು.

ತೀರ್ಪು ಹೊರಬಂದು 28 ವರ್ಷವಾಗಿದ್ದು, ರಾಜ್ಯಗಳು ಪರಿಣತ ಸಮಿತಿಗಳ ವರದಿ ಹಾಗೂ ಸಮೀಕ್ಷೆಗಳನ್ನು ಆಧರಿಸಿ, ಅರಣ್ಯಗಳನ್ನು ಬೇರೆಯದೇ ರೀತಿ ವ್ಯಾಖ್ಯಾನಿಸಿವೆ. ದೇಶದ ವೈವಿಧ್ಯಮಯ ಅರಣ್ಯ ಸಂಪತ್ತನ್ನು ಪರಿಗಣಿಸಿದರೆ, ಇದು ಸಹಜ ಕೂಡ. ಛತ್ತೀಸ್‌ಗಡ ಮತ್ತು ಮಧ್ಯಪ್ರದೇಶದಲ್ಲಿ ಸ್ವಾಭಾವಿಕವಾಗಿ ಬೆಳೆಯುವ, ಉರುವಲು ಮತ್ತು ಫಲ ನೀಡುವ, ಹೆಕ್ಟೇರಿಗೆ 200 ಅಥವಾ ಅದಕ್ಕಿಂತ ಹೆಚ್ಚು ಮರಗಳಿರುವ, ಕನಿಷ್ಠ 10 ಹೆಕ್ಟೇರ್ ಪ್ರದೇಶದಲ್ಲಿರುವ ವನ್ಯ ವೈವಿಧ್ಯವನ್ನು ಅರಣ್ಯ ಎನ್ನಲಾಗುತ್ತದೆ. ಗೋವಾದಲ್ಲಿ ಕನಿಷ್ಠ ಶೇ.75ರಷ್ಟು ಅರಣ್ಯದಲ್ಲಿ ಬೆಳೆಯುವ ಪ್ರಭೇದಗಳಿರುವ ಭೂಮಿಯನ್ನು ಕಾಡು ಎನ್ನಲಾಗುತ್ತದೆ. ಕೆಲವು ರಾಜ್ಯಗಳು ಈವರೆಗೆ ಯಾವುದೇ ಮಾನದಂಡವನ್ನು ನಿಗದಿಪಡಿಸಿಲ್ಲ. ಪರಿಭಾವಿತ ಅರಣ್ಯಗಳ ವಿವಿಧ ವ್ಯಾಖ್ಯಾನಗಳಿಂದಾಗಿ, ರಾಜ್ಯಗಳಲ್ಲಿ ಅವುಗಳ ವ್ಯಾಪ್ತಿ ಶೇ.1ರಿಂದ ಶೇ.28 ಇದೆ. ದೇಶದಲ್ಲಿರುವ ಅಧಿಕೃತ ಅರಣ್ಯ ಪ್ರದೇಶ 80 ದಶಲಕ್ಷ ಹೆಕ್ಟೇರ್. 1951-75ರ ಅವಧಿಯಲ್ಲಿ ಅಂದಾಜು 4 ದಶಲಕ್ಷ ಹೆಕ್ಟೇರ್ ಅರಣ್ಯವನ್ನು ಬೇರೆ ಉದ್ದೇಶಕ್ಕೆ ಬಳಸಲಾಗಿತ್ತು ಮತ್ತು ಕಾಯ್ದೆ ಅನುಷ್ಠಾನಗೊಂಡ ಬಳಿಕ ವಾರ್ಷಿಕ ಪ್ರಮಾಣ 22,000 ಹೆಕ್ಟೇರ್(ಮೊದಲಿನ 1/10 ಭಾಗ)ಕ್ಕೆ ಕುಸಿಯಿತು ಎಂದು ಸಂಸದೀಯ ಸ್ಥಾಯಿ ಸಮಿತಿಗೆ ಸರಕಾರ ಹೇಳಿತ್ತು.

2023ರ ತಿದ್ದುಪಡಿ ಕಾಯ್ದೆಯಲ್ಲಿ ಏನಿತ್ತು?

ತಿದ್ದುಪಡಿ ಕಾಯ್ದೆಯಲ್ಲಿ ಪರಿಚಯಿಸಿರುವ ವಿಭಾಗ 1ಎ, ಘೋಷಿತ ಅರಣ್ಯಗಳು ಮತ್ತು 1980ರ ಬಳಿಕ ‘ಸರಕಾರದ ದಾಖಲೆಗಳಲ್ಲಿ’ ಅರಣ್ಯ ಎಂದು ದಾಖಲಾಗಿರುವ ಭೂಮಿಗೆ ಸಂಬಂಧಿಸಿದಂತೆ, ಅರಣ್ಯ ಎಂಬ ವ್ಯಾಖ್ಯೆಯನ್ನು ದುರ್ಬಲ ಗೊಳಿಸಿದೆ. 1ಎ ವಿಭಾಗದಲ್ಲಿರುವ ವಿವರಣೆಯು ‘ಸರಕಾರದ ದಾಖಲೆಗಳು’ ಎಂಬ ಪದವನ್ನು ವಿಸ್ತರಿಸಿದ್ದು, ಇದರಲ್ಲಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು, ಸ್ಥಳೀಯ ಸಂಸ್ಥೆಗಳು, ಮಂಡಳಿಗಳು ಅಥವಾ ಗುರುತಿಸಲ್ಪಟ್ಟ ಸಮುದಾಯಗಳ ಭೂಮಿಯಲ್ಲಿನ ಅರಣ್ಯಗಳೂ ಸೇರುತ್ತವೆ. ತಾನು ಅರಣ್ಯದ ವ್ಯಾಪ್ತಿಯನ್ನು ಕುಂಠಿತಗೊಳಿಸುವ ಯಾವುದೇ ಪ್ರಯತ್ನ ಮಾಡಿಲ್ಲ ಎಂದು ಕೇಂದ್ರ ಸರಕಾರ ಹೇಳಿಕೊಂಡಿತ್ತು.

ಜೊತೆಗೆ, ರೈಲಿನ ಹಳಿ ಇಲ್ಲವೇ ರಸ್ತೆ ಪಕ್ಕದ ಅರಣ್ಯ ಭೂಮಿಗೆ ರಕ್ಷಣೆ ಇರುವುದಿಲ್ಲ(ಗರಿಷ್ಠ 0.1 ಹೆಕ್ಟೇರ್). ಅಂತರ್‌ರಾಷ್ಟ್ರೀಯ ಗಡಿ ಇಲ್ಲವೇ ನಿಯಂತ್ರಣ ರೇಖೆ(ಎಲ್‌ಒಸಿ) ಅಥವಾ ವಾಸ್ತವಿಕ ನಿಯಂತ್ರಣ ರೇಖೆ(ಎಲ್‌ಎಸಿ)ಯ 100 ಕಿ.ಮೀ. ವ್ಯಾಪ್ತಿಯಲ್ಲಿರುವ ಅರಣ್ಯಕ್ಕೆ, ರಾಷ್ಟ್ರದ ರಕ್ಷಣೆಗೆ ಅಗತ್ಯವಾದ ಮೂಲಸೌಲಭ್ಯ ನಿರ್ಮಾಣಕ್ಕೆ ಬಳಸುವ ಅರಣ್ಯ ಭೂಮಿ ಇಲ್ಲವೇ ಎಡಪಂಥೀಯ ಬಂಡುಕೋರರ ಉಪಸ್ಥಿತಿ ಇರುವಲ್ಲಿ 5 ಹೆಕ್ಟೇರ್ ಭೂಮಿಗೆ ಸಂರಕ್ಷಣೆ ಲಭ್ಯವಾಗುವುದಿಲ್ಲ. ಆದಿವಾಸಿ ಪ್ರದೇಶಗಳಲ್ಲಿ ಮೂಲಸೌಲಭ್ಯ ನಿರ್ಮಾಣಕ್ಕೆ ಇಂಥ ವಿನಾಯಿತಿ ಬೇಕಾಗುತ್ತದೆ ಎನ್ನುವುದು ಸರಕಾರದ ನಿಲುವು. ಅಲ್ಲದೆ, ಸ್ಥಳೀಯ ಸಮುದಾಯದ ಒಡೆತನದಲ್ಲಿರುವ ಅರಣ್ಯಗಳ ಸಂರಕ್ಷಣೆ ಮಾಡಬೇಕೆಂದರೆ ಪರಿಸರ ಪ್ರವಾಸ, ಮೃಗಾಲಯ ಹಾಗೂ ಸಫಾರಿಗಳಿಗೆ ಉತ್ತೇಜನ ನೀಡುವ ಮೂಲಕ ಸ್ಥಳೀಯರಿಗೆ ಜೀವನಾಧಾರ ಕಲ್ಪಿಸಬೇಕು ಎಂದು ಕೇಂದ್ರ ಹೇಳಿಕೊಂಡಿತ್ತು. ಆದರೆ, ಇಂಥ ಅವಕಾಶಗಳು ಅರಣ್ಯ ಹಕ್ಕು ಕಾಯ್ದೆ 2006ರಲ್ಲಿ ಇವೆ ಎಂದು ಪ್ರತಿವಾದ ಮಂಡನೆಯಾಗಿತ್ತು.

ಅರಣ್ಯ ಸಂರಕ್ಷಣೆ ತಿದ್ದುಪಡಿ ಕಾಯ್ದೆಯು ಅಪಾರ ಪ್ರಮಾಣದ ಅರಣ್ಯ ಭೂಮಿಯನ್ನು ಅರಣ್ಯೇತರ ಉದ್ದೇಶಕ್ಕೆ ಬಳಸಲು ಅನುವು ಮಾಡಿಕೊಡಲು ನಡೆಸಿದ ಪ್ರಯತ್ನ. ಆದರೆ, ಖಾಸಗಿ ಭೂಮಿಯಲ್ಲಿ ಅರಣ್ಯ ಕೃಷಿ ಮಾಡಿದಲ್ಲಿ, ಮುಂದೊಂದು ದಿನ ಸರಕಾರ ಅವನ್ನು ಅರಣ್ಯ ಎಂದು ವರ್ಗೀಕರಿಸಿ ಕೈವಶ ಮಾಡಿಕೊಳ್ಳುತ್ತದೆ ಎಂಬ ಭೀತಿಯಿಂದ ನಾಗರಿಕರು ಅರಣ್ಯ ಕೃಷಿಗೆ ಮುಂದಾಗುತ್ತಿಲ್ಲ. ದೇಶ 2.5-3 ಶತಕೋಟಿ ಟನ್ ಇಂಗಾಲ ಕುಳಿಯನ್ನು ಸೃಷ್ಟಿಸುವ ಮಹತ್ವಾಕಾಂಕ್ಷಿ ಗುರಿ ಹೊಂದಿದ್ದು, ಇದಕ್ಕೆ ಚಲನಶೀಲ ಅರಣ್ಯ ಕಾಯ್ದೆ ಬೇಕಿದೆ. ಆದ್ದರಿಂದ, ಪರಿಭಾವಿತ ಅರಣ್ಯಗಳನ್ನು ರಕ್ಷಣೆಯಿಂದ ಹೊರಗಿಡಬೇಕು ಎಂದು ಕೇಂದ್ರ ಸರಕಾರ ವಾದಿಸಿತ್ತು.

ಮಧ್ಯಾಂತರ ತೀರ್ಪಿನ ಪ್ರಾಮುಖ್ಯತೆ

ಅರಣ್ಯ ಸಂರಕ್ಷಣೆ ಕಾಯ್ದೆ 1980ಕ್ಕೆ ಅನುಗುಣವಾಗಿ ಅರಣ್ಯದ ಶಬ್ದಕೋಶದ ಅರ್ಥವನ್ನು ಅನ್ವಯಿಸಬೇಕು. ಟಿ.ಎನ್. ಗೋದವರ್ಮನ್ ತಿರುಮುಲ್ಪಾದ್ ಪ್ರಕರಣದ ಅದೇಶದಲ್ಲಿ ಎತ್ತಿಹಿಡಿದ ‘ಅರಣ್ಯ’ದ ಪದಕೋಶದ ಅರ್ಥಕ್ಕೆ ವಾಪಸಾಗಬೇಕು. ಅರಣ್ಯ ಎನ್ನುವುದು ಸರಕಾರದ ದಾಖಲೆಗಳಲ್ಲಿರುವ ಭೂಮಿಯಲ್ಲಿ ಬೆಳೆದ ಕಾಡಿಗೆ ಸೀಮಿತವಾಗುವುದಿಲ್ಲ. 28 ವರ್ಷಗಳ ಹಿಂದೆ ಗೋದವರ್ಮನ್ ತೀರ್ಪು ಎತ್ತಿ ಹಿಡಿದ ‘ಎಲ್ಲವನ್ನೂ ಒಳಗೊಂಡ’ ಪದಕೋಶದ ಅರ್ಥವು ರಾಜ್ಯ/ಕೇಂದ್ರಾಡಳಿತ ಪ್ರದೇಶದಲ್ಲಿರುವ ಅರಣ್ಯವನ್ನು ಹೋಲುವ ಪ್ರದೇಶಗಳು, ವರ್ಗೀಕೃತಗೊಳ್ಳದವು ಮತ್ತು ಸಮುದಾಯದ ಅರಣ್ಯ ಭೂಮಿ ಸೇರಿದಂತೆ ಸರಕಾರದ ದಾಖಲೆಯಲ್ಲಿರುವ ಎಲ್ಲ ಭೂಮಿಯ ‘ಕ್ರೋಡೀಕೃತ ದಾಖಲೆ’ ರೂಪಿಸುವವರೆಗೆ ಚಾಲ್ತಿಯಲ್ಲಿರುತ್ತದೆ ಎಂದು ನ್ಯಾಯಾಲಯ ಹೇಳಿದೆ.

‘‘ಕೇಂದ್ರ 2023ರಲ್ಲಿ ತಂದ ತಿದ್ದುಪಡಿಗಳು ಪರಿಗಣಿಸಲ್ಪಡುವುದಿಲ್ಲ. ಅದಕ್ಕಿಂತ ಮುಖ್ಯವಾಗಿ, ನಿಯಮ 16ರಡಿ ರಾಜ್ಯಗಳು ತಮ್ಮ ವ್ಯಾಪ್ತಿಯಲ್ಲಿರುವ ಪರಿಭಾವಿತ ಅರಣ್ಯಗಳ ಕುರಿತು ಪರಿಣತರ ಸಮಿತಿ ನೀಡಿದ ವರದಿಯನ್ನು ಕೇಂದ್ರ ಪ್ರಕಟಿಸ ಬೇಕಾಗುತ್ತದೆ. ಟಿ.ಎನ್. ಗೋದವರ್ಮನ್ ತಿರುಮುಲ್ಪಾದ್ ಪ್ರಕರಣದ ಆದೇಶದಲ್ಲಿ ಎತ್ತಿಹಿಡಿದ ‘ಅರಣ್ಯ’ದ ಪದಕೋಶದ ಅರ್ಥಕ್ಕೆ ವಾಪಸಾಗಬೇಕು. ತನ್ನ ಸಮ್ಮತಿ ಇಲ್ಲದೆ ಅರಣ್ಯ ಭೂಮಿಯಲ್ಲಿ ಮೃಗಾಲಯ ಮತ್ತು ಸಫಾರಿ ಯೋಜನೆಗಳು ಕೂಡದು’’ ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ.

‘‘ಕೇಂದ್ರ ಎರಡು ವಾರದೊಳಗೆ ಸಂಬಂಧಿಸಿದ ತಜ್ಞರ ಸಮಿತಿಗಳು ನೀಡಿದ ‘ಕ್ರೋಡೀಕೃತ ದಾಖಲೆ’ ಗಳನ್ನು ಸಲ್ಲಿಸಲು ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಬೇಕು. ರಾಜ್ಯ/ಕೇಂದ್ರಾಡಳಿತ ಪ್ರದೇಶಗಳು ಮಾರ್ಚ್ 31, 2024ರೊಳಗೆ ಈ ದಾಖಲೆ ಸಲ್ಲಿಸಬೇಕಿದ್ದು, ಪರಿಸರ ಸಚಿವಾಲಯ ಎಪ್ರಿಲ್ 15, 2024ರೊಳಗೆ ತನ್ನ ಜಾಲತಾಣದಲ್ಲಿ ಪ್ರಕಟಿಸಬೇಕು’’ ಎಂದು ಸುಪ್ರೀಂ ಹೇಳಿದೆ. ಮುಂದಿನ ವಿಚಾರಣೆ ಜುಲೈ 2024ರಲ್ಲಿ ನಡೆಯಲಿದೆ.

2023ರ ತಿದ್ದುಪಡಿ ಕಾಯ್ದೆಯು ಯಾವುದೇ ಚರ್ಚೆ ಇಲ್ಲದೆ ಅಂಗೀಕೃತಗೊಂಡಿತ್ತು. ಜಂಟಿ ಸಂಸದೀಯ ಸಮಿತಿ ಸರಕಾರದ ಪ್ರಸ್ತಾವನೆಯನ್ನು ಅವಿರೋಧವಾಗಿ ಅಂಗೀಕರಿಸಿತ್ತು. ಅರಣ್ಯ ಸಮೃದ್ಧ ರಾಜ್ಯಗಳು ಮತ್ತು ಸಮಿತಿ ಸದಸ್ಯರು ಆಕ್ಷೇಪ ಎತ್ತಿದ್ದರೂ, ಮಣಿಪುರದಲ್ಲಿ ನಡೆಯುತ್ತಿದ್ದ ಹಿಂಸಾಕಾಂಡವನ್ನು ಖಂಡಿಸಿ ಪ್ರತಿಪಕ್ಷಗಳು ಪ್ರತಿಭಟನೆ ನಡೆಸುತ್ತಿದ್ದ ಹೊತ್ತಿನಲ್ಲಿ ಮಸೂದೆಯನ್ನು ತರಾತುರಿಯಲ್ಲಿ ಅಂಗೀಕರಿಸಲಾಗಿತ್ತು. ಸದ್ಯಕ್ಕೆ ತಿದ್ದುಪಡಿ ಕಾಯ್ದೆ ತ್ರಿಶಂಕು ಸ್ಥಿತಿಯಲ್ಲಿದೆ. ಲೋಕಸಭೆ ಚುನಾವಣೆ ಮುಗಿದ ಬಳಿಕ ಆಯ್ಕೆಯಾಗುವ ಸರಕಾರದ ಅಂಗಳದಲ್ಲಿ ಚೆಂಡು ಬರಲಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಋತ

contributor

Similar News