ವಿಜ್ಞಾನ ದೇವಿಗೆ ಇಲ್ಲಿ ಪೊಡಮಡುವವರಿಲ್ಲ
ರಾಷ್ಟ್ರೀಯ ವಿಜ್ಞಾನ ಪ್ರತಿಷ್ಠಾನ(ಎನ್‌ಆರ್‌ಎಫ್) ಸ್ಥಾಪನೆ ಹಾಗೂ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಘಟನೆ(ಡಿಆರ್‌ಡಿಒ)ಯ ಪುನರ್‌ವಿನ್ಯಾಸಕ್ಕೆ ಸರಕಾರ ಮುಂದಾಗಿದೆ. ಇದರಿಂದ ವಿಜ್ಞಾನ ಕ್ಷೇತ್ರ ಪುನಶ್ಚೇತನಗೊಳ್ಳುವುದೇ? 2,989 ಕೋಟಿ ರೂ. ವೆಚ್ಚದಲ್ಲಿ ಏಕತಾ ಪುತ್ಥಳಿಯನ್ನು ನಿರ್ಮಿಸುವ ದೇಶದಲ್ಲಿ ವಿಜ್ಞಾನ ದೇವಿ ಬೆಳಗುವಳೇ? ಶಾಲೆಗಳ ಘಂಟೆಯ ನಿನಾದದ ಬದಲು ದೇಗುಲಗಳ ನಿರ್ಮಾಣ-ಘಂಟೆಗಳ ನಿನಾದವು ಸಮೂಹಸನ್ನಿಗೆ ಕಾರಣವಾಗಿದೆ.
‘‘ಶಾಲೆಗಳ ಘಂಟೆ ಬದಲು ಗುಡಿಗುಂಡಾರಗಳ ಘಂಟೆಯ ಶಬ್ದ ಕೇಳುತ್ತಿದ್ದರೆ, ಅಲ್ಲಿ ಅನಕ್ಷರಸ್ಥರು ಇದ್ದಾರೆ ಎಂದರ್ಥ’’ ಎಂದು ಬಾಬಾ ಸಾಹೇಬ ಅಂಬೇಡ್ಕರ್ ಹೇಳಿದ್ದರು. ಭಾರತದಲ್ಲಿ ತದ್ವಿರುದ್ಧ ಕ್ರಿಯೆಗಳು ನಡೆಯುತ್ತಿದ್ದು, ಶಿಕ್ಷಣ ಕ್ಷೇತ್ರ ಸೊರಗುತ್ತಿದೆ; ವಿಜ್ಞಾನ ಶಿಕ್ಷಣ, ವೈಜ್ಞಾನಿಕ ಸಂಸ್ಥೆಗಳು, ಪ್ರಾಥಮಿಕ-ಉನ್ನತ ಶಿಕ್ಷಣ ಕ್ಷೇತ್ರಗಳು ಹದಗೆಟ್ಟು ಹೋಗಿವೆ. ಇದಕ್ಕೆ ಅನುಗುಣವಾಗಿ, ಪ್ರತೀ ವರ್ಷ ಜನವರಿಯಲ್ಲಿ ನಡೆಯುತ್ತಿದ್ದ ವಿಜ್ಞಾನ ಕಾಂಗ್ರೆಸ್ ಸ್ಥಗಿತಗೊಂಡಿದೆ. ಅದು ಶಾಶ್ವತವಾಗಿ ನಿಲ್ಲಲಿದೆ ಇಲ್ಲವೇ ಇನ್ನೊಂದು ಸಂಸ್ಥೆ ಅದನ್ನು ಹೈಜಾಕ್ ಮಾಡಲು ಸರಕಾರ ಪಣ ಕಟ್ಟಿದಂತೆ ಕಾಣುತ್ತಿದೆ.
ಇಂಡಿಯನ್ ಸೈನ್ಸ್ ಕಾಂಗ್ರೆಸ್ ಅಸೋಸಿಯೇಷನ್(ಐಎಸ್‌ಸಿಎ) ನಡೆಸುವ ವಿಜ್ಞಾನ ಕ್ಷೇತ್ರದ ಪ್ರತಿಷ್ಠಿತ ಕಾರ್ಯಕ್ರಮವಾದ ವಿಜ್ಞಾನ ಕಾಂಗ್ರೆಸ್‌ಗೆ ಶತಮಾನದ ಇತಿಹಾಸವಿದೆ. ಪ್ರಧಾನಿ ಜವಾಹರಲಾಲ್ ನೆಹರೂ ಅವರಿಂದ ‘ವಿಜ್ಞಾನ ಮತ್ತು ವೈಜ್ಞಾನಿಕ ಸ್ಫೂರ್ತಿಗೆ ಪ್ರೋತ್ಸಾಹ ನೀಡುವ ವೇದಿಕೆ’ ಎಂದು ಶ್ಲಾಘಿಸಿಕೊಂಡಿತ್ತು. ಪ್ರತೀ ವರ್ಷ ಜನವರಿ 3ರಂದು ವಿಜ್ಞಾನ ಕಾಂಗ್ರೆಸನ್ನು ಪ್ರಧಾನಿ ಉದ್ಘಾಟಿಸುತ್ತಿದ್ದರು. ಶ್ರೇಷ್ಠ ವಿಜ್ಞಾನಿಗಳು, ವೈಜ್ಞಾನಿಕ ಸಂಸ್ಥೆಗಳು ಮತ್ತು ವೈಜ್ಞಾನಿಕ ಸಂಘಟನೆಗಳು ಪಾಲ್ಗೊಳ್ಳುತ್ತಿದ್ದ ಹಾಗೂ ವಿಜ್ಞಾನಿ, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಮುಖಾಮುಖಿ ಭೇಟಿಗೆ ಅವಕಾಶ ನೀಡುತ್ತಿದ್ದ ವಿಜ್ಞಾನ ಕಾಂಗ್ರೆಸ್ ಇತ್ತೀಚಿನ ವರ್ಷಗಳಲ್ಲಿ ತನ್ನ ಖದರ್ ಕಳೆದುಕೊಂಡಿತ್ತು. ಮಂಡಿಸಲ್ಪಡುವ ಪ್ರಬಂಧಗಳು, ಚರ್ಚೆ-ಸಂವಾದದ ಗುಣಮಟ್ಟ ಕುಸಿದಿತ್ತು; ನಕಲು ಮಾಡಲ್ಪಟ್ಟ ಪ್ರಬಂಧಗಳು ಮಂಡನೆಯಾಗಿದ್ದವು. ವಿಜ್ಞಾನ ಕಾಂಗ್ರೆಸ್‌ನ ಪ್ರಮುಖ ಪೋಷಕ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ(ಡಿಎಸ್‌ಟಿ), ಪ್ರತೀ ವರ್ಷ 5 ಕೋಟಿ ರೂ. ಅನುದಾನ ಕೊಡುತ್ತಿತ್ತು. 5 ದಿನ ನಡೆಯುವ ಸಮಾರಂಭಕ್ಕೆ ವಿಶ್ವವಿದ್ಯಾನಿಲಯವನ್ನು ಸಿದ್ಧಗೊಳಿಸಲು ಹಾಗೂ ಇನ್ನಿತರ ವೆಚ್ಚ ಎಂದು ಈ ಅನುದಾನ ನೀಡಲಾಗುತ್ತದೆ. ಆದರೆ, ಸೆಪ್ಟಂಬರ್ 2023ರಲ್ಲಿ ಹಣಕಾಸು ನೆರವು ನೀಡಲು ಇಲಾಖೆ ನಿರಾಕರಿಸಿತು. ಇದಕ್ಕೆ ಕೊಟ್ಟ ಕಾರಣ- ಐಎಸ್‌ಸಿಎಯ ಕೆಲವರು ಏಕಪಕ್ಷೀಯವಾಗಿ ಕಾರ್ಯಕ್ರಮವನ್ನು ಲಕ್ನೋ ವಿಶ್ವವಿದ್ಯಾನಿಲಯದಿಂದ ಜಲಂಧರ್‌ನ ಲವ್ಲಿ ಪ್ರೊಫೆಷನಲ್ ವಿಶ್ವವಿದ್ಯಾನಿಲಯಕ್ಕೆ ಸ್ಥಳಾಂತರಿಸಿರುವುದು ಮತ್ತು ಹಣಕಾಸು ಅಕ್ರಮ. ಆದರೆ, ಎಲ್‌ಪಿಯು ಕೊನೆ ಘಳಿಗೆಯಲ್ಲಿ ಕಾರ್ಯಕ್ರಮ ನಡೆಸಲು ಆಗುವುದಿಲ್ಲ ಎಂದು ಹಿಂದೆ ಸರಿಯಿತು. ಖಾಸಗಿ ವಿಶ್ವವಿದ್ಯಾನಿಲಯವಾದ ಎಲ್‌ಪಿಯುಗೆ ಸರಕಾರದ ಕೆಂಗಣ್ಣಿಗೆ ತುತ್ತಾಗುವುದು ಬೇಕಿರಲಿಲ್ಲ. ಐಎಸ್‌ಸಿಎ ಅಧ್ಯಕ್ಷ ಅರವಿಂದ್ ಸಕ್ಸೇನಾ, ಬೇರೆ ವಿಶ್ವವಿದ್ಯಾನಿಲಯಗಳು ಕಾರ್ಯಕ್ರಮ ನಡೆಸಿಕೊಡಲು ಮುಂದೆ ಬರಬೇಕೆಂದು ಮನವಿ ಮಾಡಿದರು. ಆದರೆ, ಸರಕಾರದ ವೈಮನಸ್ಸು ಕಟ್ಟಿಕೊಳ್ಳುವುದು ಯಾರಿಗೆ ಬೇಕಿದೆ ಹೇಳಿ? ಈವರೆಗೆ ಯಾವುದೇ ವಿಶ್ವವಿದ್ಯಾನಿಲಯ ಕಾರ್ಯಕ್ರಮ ನಡೆಸಲು ಆಸಕ್ತಿ ತೋರಿಸಿಲ್ಲ.
2015ರ ಬಳಿಕ ಪ್ರಧಾನಿ ಮೋದಿ ಕೂಡ ವಿಜ್ಞಾನ ಕಾಂಗ್ರೆಸ್‌ನಲ್ಲಿ ಪಾಲ್ಗೊಂಡಿದ್ದಾರೆ. 2022ರ ಸಮಾವೇಶ ನಾಗಪುರದಲ್ಲಿ ನಡೆದಿತ್ತು. ಸೈನ್ಸ್ ಕಾಂಗ್ರೆಸ್ ಸಮಾವೇಶ ‘ತನ್ನ ಅಗತ್ಯತೆ ಕಳೆದುಕೊಂಡಿದೆ ಮತ್ತು ವೃತ್ತಿಪರವಾಗಿ ನಡೆಯುತ್ತಿಲ್ಲ’ ಎನ್ನುವುದು ಡಿಎಸ್‌ಟಿ ದೂರು. ಇರಬಹುದು. ಇಲಾಖೆಗೆ ವಿಜ್ಞಾನದ ಬಗ್ಗೆ ನಿಜವಾದ ಕಳಕಳಿ ಇದ್ದಲ್ಲಿ ಲೋಪಗಳನ್ನು ತಿದ್ದಬಹುದಿತ್ತು. ಅದರ ಬದಲು ಸಂಘ ಪರಿವಾರದ ನಂಟು ಇರುವ ಸಂಸ್ಥೆಯಾದ ವಿಜ್ಞಾನ ಭಾರತೀ ಸಹಯೋಗದಲ್ಲಿ ನಡೆಯುವ ‘ಇಂಡಿಯಾ ಇಂಟರ್‌ನ್ಯಾಷನಲ್ ಸೈನ್ಸ್ ಫೆಸ್ಟಿವಲ್’ಗೆ ನೆರವು ನೀಡಲು ಮುಂದಾಗಿದೆ. ಈ ಕಾರ್ಯಕ್ರಮವನ್ನು ಸೈನ್ಸ್ ಕಾಂಗ್ರೆಸ್ ನಡೆಸುವ ಕಾರ್ಯಕ್ರಮಕ್ಕೆ ಪರ್ಯಾಯವಾಗಿಸುವ ಪ್ರಯತ್ನ ನಡೆಯುತ್ತಿದೆ. ಸಿದ್ಧಾಂತ ಮತ್ತು ವಿಜ್ಞಾನದ ನಡುವಿನ ಗೆರೆ ಅಳಿಸಿಹೋಗುತ್ತಿದೆ ಇಲ್ಲವೇ ಅಳಿಸಿಹೋಗಿದೆ. ಚಂದ್ರಯಾನ ಇಲ್ಲವೇ ಇಸ್ರೋದ ಉಪಗ್ರಹ ಉಡಾವಣೆ ಬಳಿಕ ವಿಜ್ಞಾನಿಗಳು ನೇಪಥ್ಯಕ್ಕೆ ಸರಿಯುತ್ತಾರೆ; ಪ್ರಧಾನಿ ರಾರಾಜಿಸುತ್ತಾರೆ.
ಹೋಗಲಿ; ವೈಜ್ಞಾನಿಕ ಸಂಸ್ಥೆಗಳ ಆಡಳಿತ ಸರಿಯಾಗಿದೆಯೇ? ಸಂಶೋಧನೆ ಮತ್ತು ಅಭಿವೃದ್ಧಿ(ಆರ್ ಆ್ಯಂಡ್ ಡಿ)ಗೆ ಸಾಕಷ್ಟು ಅನುದಾನ ನೀಡಲಾಗುತ್ತಿದೆಯೇ? ಅದೂ ಇಲ್ಲ. 2023-24ರ ಕೇಂದ್ರ ಬಜೆಟ್‌ನಲ್ಲಿ ವಿಜ್ಞಾನ-ತಂತ್ರಜ್ಞಾನ ಮಂತ್ರಾಲಯಕ್ಕೆ 16,361 ಕೋಟಿ ರೂ. ನೀಡಲಾಗಿದೆ. ಇದರಲ್ಲಿ ವಿಜ್ಞಾನ-ತಂತ್ರಜ್ಞಾನ ಇಲಾಖೆಗೆ 7,931 ಕೋಟಿ, ಜೈವಿಕ ತಂತ್ರಜ್ಞಾನ ಇಲಾಖೆಗೆ 2,683 ಕೋಟಿ ಮತ್ತು ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನೆ ಇಲಾಖೆ ಪಾಲು 5,746 ಕೋಟಿ ರೂ. ಸಂಶೋಧನೆ ಮತ್ತು ಅಭಿವೃದ್ಧಿಗೆ ವೆಚ್ಚ ಮಾಡುತ್ತಿರುವುದು ಒಟ್ಟು ರಾಷ್ಟ್ರೀಯ ಉತ್ಪಾದನೆ(ಜಿಡಿಪಿ)ಯಾದ 171.79 ಲಕ್ಷ ಕೋಟಿ ರೂ.ನಲ್ಲಿ ಶೇ.0.7; ಇದು ಅಮೆರಿಕದಲ್ಲಿ ಶೇ.3.5 ಮತ್ತು ಚೀನಾದಲ್ಲಿ ಶೇ. 2.4. ಹಣಕಾಸು ಕೊರತೆ ಒಂದು ಪ್ರಮುಖ ಅಡೆತಡೆ. ವೈಜ್ಞಾನಿಕ ಸಂಸ್ಥೆಗಳ ಆಡಳಿತಗಾರರು ಅನುದಾನವನ್ನು ಸಮರ್ಪಕವಾಗಿ ಹಂಚಿಕೆ ಮಾಡುವಲ್ಲಿ ಹಾಗೂ ಅತಿ ಮುಖ್ಯ ಯೋಜನೆಗಳಿಗೆ ಸಂಪನ್ಮೂಲ ಕೊರತೆಯಾಗದಂತೆ ನೋಡಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಇಸ್ರೋ ಆದಿತ್ಯ-ಚಂದ್ರಯಾನ ಉಪಗ್ರಹ ಇಳಿಸುವಲ್ಲಿ ಯಶಸ್ವಿಯಾಗಿರಬಹುದು. ಆದರೆ, 2022ರ ಜಾಗತಿಕ ಉಡಾವಣೆ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ. ಮರುಬಳಕೆ ರಾಕೆಟ್ ಸೇರಿದಂತೆ ಹಲವು ಪ್ರಮುಖ ತಂತ್ರಜ್ಞಾನಗಳಲ್ಲಿ ವಿದೇಶಿ ಸ್ಟಾರ್ಟ್ ಅಪ್‌ಗಳು ಬಹಳ ಮುಂದೆ ಇವೆ. ಅದೇ ರೀತಿ ಅಣುವಿದ್ಯುತ್ ಕ್ಷೇತ್ರದಲ್ಲಿ ಸಣ್ಣ ಸ್ಥಾವರಗಳು, ಥೋರಿಯಂ ತಂತ್ರಜ್ಞಾನದಲ್ಲಿ ಹೇಳಿಕೊಳ್ಳುವಂಥ ಸಾಧನೆ ಆಗಿಲ್ಲ. ಅತಿ ಮುಖ್ಯ ವಿಷಯಗಳಾದ ಜೀನೋಮಿಕ್ಸ್, ರೋಬೋಟಿಕ್ಸ್ ಮತ್ತು ಕಟ್ಟು ಜಾಣ್ಮೆ(ಆರ್ಟಿಫಿಷಿಯಲ್ ಇಂಟೆಲಿಜೆನ್ಸ್) ಕ್ಷೇತ್ರದಲ್ಲಿ ಕೂಡ ಹಿಂದುಳಿದಿದ್ದೇವೆ. ವಿಜ್ಞಾನ ಸಂಸ್ಥೆಗಳ ದಿಕ್ಕು ಮತ್ತು ಸಂಘಟನೆ ಅಸ್ಥಿರವಾಗಿದೆ.
ವಿಜ್ಞಾನ-ಸಂಶೋಧನೆ ಸಂಸ್ಥೆಗಳಲ್ಲಿ ಹೆಚ್ಚಿನವು ಸರಕಾರದ ವಶದಲ್ಲಿವೆ. ಹಿರಿಯ ವಿಜ್ಞಾನಿಗಳು ಇವುಗಳ ನೇತೃತ್ವ ವಹಿಸಿರುತ್ತಾರೆ. ಇವರಲ್ಲಿ ಕೆಲವರು ಐಐಟಿ, ವಿಜ್ಞಾನ ಶಿಕ್ಷಣ ಮತ್ತು ಸಂಶೋಧನೆ(ಐಐಎಸ್‌ಇಆರ್), ಸಿಎಸ್‌ಐ ಆರ್(ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ), ಡಿಆರ್‌ಡಿಒ ಮತ್ತು ವಿಶ್ವವಿದ್ಯಾನಿಲಯಗಳ ಸಮಿತಿಗಳಲ್ಲೂ ಇರುತ್ತಾರೆ. ಇಂಥ ಬಾಹ್ಯ ತಜ್ಞರಿಂದ ಹೆಚ್ಚೇನೂ ಉಪಯೋಗವಾಗದಿದ್ದರೂ, ಇದು ಪ್ರತಿಷ್ಠೆಯ ಪ್ರಶ್ನೆಯಾದ್ದರಿಂದ ಜಾಗ ಬಿಸಿ ಮಾಡಲು ಕುಳಿತಿರುತ್ತಾರೆ. ಉತ್ತಮ ವಿಜ್ಞಾನಿ ಒಳ್ಳೆಯ ಆಡಳಿತಗಾರ ಆಗಿರುತ್ತಾರೆ ಎನ್ನುವ ಖಾತ್ರಿಯಿಲ್ಲ. ಆಡಳಿತಕ್ಕೆ ಬೇರೆಯದೇ ಕೌಶಲ, ಓದು ಮತ್ತು ಹೆಚ್ಚು ಸಮಯ ನೀಡಬೇಕಾಗುತ್ತದೆ. ಸಂಸ್ಥೆಗಳ ನೇತೃತ್ವ ವಹಿಸಿದವರು ವೈಯಕ್ತಿಕ ಯೋಜನೆಗಳಿಗೆ ಆದ್ಯತೆ, ಸ್ವಜನಪಕ್ಷಪಾತ ಮಾಡುವುದಿಲ್ಲ ಎನ್ನುವ ಖಾತ್ರಿಯಿಲ್ಲ. ಪಿಎಚ್.ಡಿ. ಪ್ರಬಂಧಗಳ ನಕಲು, ಕಾಸು ಕೊಟ್ಟು ಲೇಖನ ಪ್ರಕಟಣೆ ಮತ್ತು ಅನುದಾನ ಪಡೆಯಲು ಲಂಚ ನೀಡುವಿಕೆ ಎಲ್ಲೆಡೆ ವ್ಯಾಪಕವಾಗಿದೆ. ಅಧಿಕಾರಶಾಹಿಯಿಂದ ಅನುದಾನ ಬಿಡುಗಡೆ, ಸಿಬ್ಬಂದಿ ನೇಮಕದಲ್ಲಿ ವಿಪರೀತ ವಿಳಂಬ-ಸ್ವಜನಪಕ್ಷಪಾತ ಇದೆ. ದೀರ್ಘಕಾಲೀನ ಯೋಜನೆಗಳಿಗೆ ನಿರಂತರ ಅನುದಾನ ನೀಡಬೇಕಾಗುತ್ತದೆ. ಒಂದುವೇಳೆ ಅನುದಾನ ಕಡಿತ ಮಾಡಿದಲ್ಲಿ ಇಲ್ಲವೇ ವಿಳಂಬವಾದಲ್ಲಿ ಅಲ್ಲಿಯವರೆಗೆ ನಡೆಸಿದ ಕೆಲಸ ವ್ಯರ್ಥವಾಗುತ್ತವೆ. ಸಂಸ್ಥೆಗಳ ವೈಫಲ್ಯಕ್ಕೆ ಅದರ ಮುಖ್ಯಸ್ಥರನ್ನು ಹೊಣೆಗಾರರನ್ನಾಗಿಸಿದರೆ ಸ್ವಲ್ಪ ಮಟ್ಟಿನ ಉತ್ತರದಾಯಿತ್ವ ಬರಬಹುದೇನೋ? ಆದರೆ, ಹೆಚ್ಚಿನ ನೇಮಕಗಳು ರಾಜಕೀಯ ಪ್ರೇರಿತವಾಗಿರುವುದರಿಂದ, ವೈಫಲ್ಯ ಮುಚ್ಚಿಹೋಗುತ್ತದೆ. ರಾಷ್ಟ್ರೀಯ ಪ್ರಯೋಗಾಲಯಗಳು-ಕೇಂದ್ರೀಯ ವೈಜ್ಞಾನಿಕ ಸಂಸ್ಥೆಗಳ ಆಡಳಿತಾಧಿಕಾರಿಗಳ ನೇಮಕ, ತರಬೇತಿ ಹಾಗೂ ವರ್ಗಾವಣೆಗೆ ಅಖಿಲ ಭಾರತ ವ್ಯವಸ್ಥೆಯೊಂದು ಇಲ್ಲ(ಐಎಎಸ್/ಐಪಿಎಸ್ ಇತ್ಯಾದಿಗೆ ಇರುವಂತೆ). ಇದರಿಂದ ಅಧಿಕಾರ ಕೆಲವರಲ್ಲಿ ಕೇಂದ್ರೀಕೃತಗೊಂಡಿದೆ.
ಸ್ವಾತಂತ್ರ್ಯಾನಂತರ ಸಂಪನ್ಮೂಲ ಕೊರತೆಯಿಂದ ಐಐಟಿಯಂಥ ಸಂಸ್ಥೆಗಳಿಗೆ ಮಾತ್ರ ಉನ್ನತ ತಂತ್ರಜ್ಞಾನದ ಸಾಧನ-ಉಪಕರಣಗಳು ಲಭ್ಯವಾದವು. ಇಂಥ ಸಂಸ್ಥೆಗಳ ಮುಖ್ಯಸ್ಥರು ವಿಜ್ಞಾನ ಕ್ಷೇತ್ರದ ಶಕ್ತಿ ಕೇಂದ್ರಗಳಾದರು ಮತ್ತು ಯುವ ವಿಜ್ಞಾನಿಗಳು ಇವರಿಗೆ ನಜರು ಒಪ್ಪಿಸಬೇಕಾಗಿ ಬಂದಿತು. ಪ್ರಶಸ್ತಿ-ಪುರಸ್ಕಾರ, ವಿದೇಶಿ ಶಿಷ್ಯವೇತನ-ವ್ಯಾಸಂಗ ಮತ್ತು ಸಾಂಸ್ಥಿಕ ಬೆಂಬಲ ನೀಡುವಿಕೆಯಲ್ಲಿ ಸ್ವಜನಪಕ್ಷಪಾತದಿಂದ ಯುವ ವಿಜ್ಞಾನಿಗಳ ವೃತ್ತಿ ಬದುಕು ಹಾಳಾಯಿತು; ಅವರು ಬದಿಗೊತ್ತಲ್ಪಟ್ಟರು, ದೇಶ ತೊರೆದು ಇಲ್ಲವೇ ಖಾಸಗಿ ಸಂಸ್ಥೆಗಳ ಪಾಲಾದರು. ವೈಜ್ಞಾನಿಕ ಸಂಸ್ಥೆಗಳು-ವಿಶ್ವವಿದ್ಯಾನಿಲಯಗಳಿಗೆ ವಿಜ್ಞಾನಿ-ಪ್ರಾಧ್ಯಾಪಕರಲ್ಲದವರ ನೇಮಕ ವಿವಾದಾಸ್ಪದ. ಅಮೆರಿಕದಲ್ಲಿ ವಿಶ್ವವಿದ್ಯಾನಿಲಯದೊಳಗಿನ ಪ್ರಯೋಗಶಾಲೆಗಳಿಗೆ ವೈಜ್ಞಾನಿಕ ಆಡಳಿತಗಾರರನ್ನು ನೇಮಿಸಲಾಗುತ್ತದೆ. ಇಂಥ ವೈಜ್ಞಾನಿಕ ಆಡಳಿತಗಾರರ ಪ್ರತ್ಯೇಕ ಶ್ರೇಣಿ ಇದ್ದು, ಅವರಿಗೆ ತರಬೇತಿ ನೀಡಲಾಗುತ್ತದೆ. ಇಂಥ ಪ್ರತ್ಯೇಕೀಕರಣ ಎಲ್ಲ ಭಾಗೀದಾರರಿಗೂ ಉಪಯುಕ್ತ. ಈ ಹಿನ್ನೆಲೆಯಲ್ಲಿ 1928ರಲ್ಲಿ ಹಾರ್ವರ್ಡ್ ವಿಶ್ವವಿದ್ಯಾನಿಲಯ ಎಂಬಿಎ ಕೋರ್ಸ್ ಆರಂಭಿಸಿತು.
ಸಂಶೋಧನೆ-ಅನ್ವೇಷಣೆಗೆ ಆದ್ಯತೆ
ಕೈಗಾರಿಕಾ ಕ್ರಾಂತಿಯು ಕಾರ್ಖಾನೆ, ಸಮೂಹ ಸಾರಿಗೆ ಮತ್ತು ವಿದ್ಯುತ್‌ನ್ನು ನೀಡಿತು. 20ನೇ ಶತಮಾನದಲ್ಲಿ ಸಂಶೋಧನೆ-ಅನ್ವೇಷಣೆ ಮತ್ತು ಉದ್ಯಮಶೀಲತೆಗಳು ಆರ್ಥಿಕ ಕಾರ್ಯನೀತಿಯ ಪ್ರಮುಖ ಅಂಗವಾದವು. ತಂತ್ರಜ್ಞಾನವನ್ನು ಹೊಂದಿರುವ ದೇಶ ಜಾಗತಿಕ ಆರ್ಥಿಕತೆಯನ್ನು ನಿಯಂತ್ರಿಸುತ್ತಿದೆ. ಗೂಗಲ್, ಫೇಸ್‌ಬುಕ್, ಟ್ವಿಟರ್ ಮತ್ತು ವಿಶ್ವ ಬ್ಯಾಂಕ್‌ನಲ್ಲಿ ಇಂಡಿಯಾ ಮೂಲದ ಸಿಇಒಗಳು ಹಾಗೂ ಇಂಡಿಯಾದಲ್ಲಿ 2ನೇ ಅತಿ ಹೆಚ್ಚು ಇಂಟರ್‌ನೆಟ್ ಬಳಕೆದಾರರಿದ್ದಾರೆ. ಆದರೆ, ಪೇಟೆಂಟ್ ಅರ್ಜಿ ಸಲ್ಲಿಕೆ, ಸಂಶೋಧಕರ ಸಂಖ್ಯೆ ಇಲ್ಲವೇ ಸಂಶೋಧನೆ-ಅಭಿವೃದ್ಧಿಗೆ ಹೆಚ್ಚು ವೆಚ್ಚ ಮಾಡುವಲ್ಲಿ ದೇಶ ಹಿಂದುಳಿದಿದೆ. 130 ದೇಶಗಳಿರುವ ಗ್ಲೋಬಲ್ ಇನ್ನೊವೇಷನ್ ಪಟ್ಟಿಯಲ್ಲಿ ನಾವು ಕೆಳಭಾಗದಲ್ಲಿದ್ದೇವೆ. ಚೀನಾ 2006ರಲ್ಲಿ ಜಿಡಿಪಿಯಲ್ಲಿ ಶೇ.1ರಷ್ಟಿದ್ದ ಸಂಶೋಧನೆ-ಅಭಿವೃದ್ಧಿ ವೆಚ್ಚವನ್ನು 2022ರಲ್ಲಿ ಶೇ.2.4ಕ್ಕೆ ಹೆಚ್ಚಿಸಿದೆ. ಸಂಶೋಧನೆ ಕೇಂದ್ರಗಳು ಚೀನಾ-ಅಮೆರಿಕದಲ್ಲಿ ದೇಶದೆಲ್ಲೆಡೆ ಹರಡಿಕೊಂಡಿದ್ದರೆ, ನಮ್ಮಲ್ಲಿ ಬೆಂಗಳೂರು, ದಿಲ್ಲಿ ಮತ್ತು ಮುಂಬೈಗೆ ಸೀಮಿತವಾಗಿವೆ; 2ನೇ ಹಂತದ ನಗರಗಳಿಗೆ ಕಾಲಿಟ್ಟಿಲ್ಲ. ಇದರಿಂದ ಸಣ್ಣ ಪಟ್ಟಣಗಳು-ನಗರಗಳಿಗೆ ಲಾಭವಾಗುತ್ತಿಲ್ಲ. ಡಿಜಿಟಲ್ ಕಂದರದ ಜೊತೆಗೆ, ಮೆಗಾಸಿಟಿ-ಸಣ್ಣ ನಗರಗಳು, ಖಾಸಗಿ-ಸಾರ್ವಜನಿಕ ಕ್ಷೇತ್ರ ಮತ್ತು ದೇಶ ಹಾಗೂ ಜಗತ್ತಿನ ಇನ್ನಿತರ ದೇಶಗಳ ವಿವಿಧ ಭಾಗಿದಾರರ ನಡುವಿನ ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದಲ್ಲಿನ ಕಂದರವನ್ನು ಭರ್ತಿ ಮಾಡಬೇಕಿದೆ. ದೇಶದಲ್ಲಿ ಸಿಎಸ್‌ಐಆರ್ ಮತ್ತು ಖಾಸಗಿ ಪ್ರಯೋಗಾಲಯಗಳ ನಡುವೆ ಸಮನ್ವಯ ಇಲ್ಲ. ಅಮೆರಿಕ ಸಣ್ಣ ಉದ್ಯಮಗಳಿಗೆ ನೆರವಾಗಲು ಸಣ್ಣ ಉದ್ಯಮಗಳಿಗೆ ಅನ್ವೇಷಣೆ ಸಂಶೋಧನೆ ಕಾರ್ಯಕ್ರಮ(ಎಸ್‌ಬಿಐಆರ್‌ಪಿ, ಸ್ಮಾಲ್ ಬಿಸಿನೆಸ್ ಇನ್ನೊವೇಷನ್ ರಿಸರ್ಚ್ ಪ್ರೋಗ್ರಾಂ) ಆರಂಭಿಸಿದೆ. ಫಾರ್ಚೂನ್ 100 ಕಂಪೆನಿಗಳಿಗೆ ದತ್ತಾಂಶ ಬಳಕೆ ಮತ್ತು ನಿರ್ವಹಣೆಯನ್ನು ಬದಲಿಸಿದ ಸಿಲಿಕಾನ್ ವ್ಯಾಲಿಯ ಬಹುರಾಷ್ಟ್ರೀಯ ಕಂಪೆನಿ ಡೆಲ್ಫಿಕ್ ಕಾರ್ಪೊರೇಷನ್ ಇಂಡಿಯಾದಲ್ಲಿ ಸಂಶೋಧನೆ ಕೇಂದ್ರವನ್ನು ಸ್ಥಾಪಿಸಲು ಮುಂದಾಗಿದೆ. ಮಾರುಕಟ್ಟೆ ಅವಕಾಶ, ತಾಂತ್ರಿಕ ಸಾಮರ್ಥ್ಯ ಮತ್ತು ಪರಿಣತರ ಲಭ್ಯತೆಯಿಂದ ದೇಶ ಐಟಿ ಸೇವಾ ಕ್ಷೇತ್ರದಲ್ಲಿ ಮುಂದೆ ಇದೆ.
ಆದರೆ, ಶಿಕ್ಷಣಕ್ಕೆ ಹೂಡಿಕೆ ಹೆಚ್ಚಿಸದಿದ್ದರೆ, ಪರಿಸ್ಥಿತಿ ಸುಧಾರಿಸುವುದಿಲ್ಲ. ಇತ್ತೀಚಿನ ಎಎಸ್‌ಇಆರ್ ಸಮೀಕ್ಷೆ ಪ್ರಕಾರ, 14-18ವರ್ಷದೊಳಗಿನ ಶೇ.25ರಷ್ಟು ಮಂದಿ ತಮ್ಮ ಮಾತೃಭಾಷೆಯಲ್ಲಿ 2ನೇ ತರಗತಿಯ ಪಠ್ಯವನ್ನು ಓದುವಲ್ಲಿ ವಿಫಲರಾಗಿದ್ದಾರೆ. 18 ವರ್ಷ ದಾಟಿದ ಶೇ.32ರಷ್ಟು ಹೆಣ್ಣುಮಕ್ಕಳು ಯಾವುದೇ ಶಿಕ್ಷಣ ಸಂಸ್ಥೆಗೆ ದಾಖಲಾಗಿಲ್ಲ. ಆದರೆ, ರಾಜ್ಯದ ಶೇ. 88.6ರಷ್ಟು ಮಕ್ಕಳು ಮನೆಯಲ್ಲಿ ಸ್ಮಾರ್ಟ್‌ಫೋನ್ ಹೊಂದಿದ್ದು, ಶೇ.93ರಷ್ಟು ಮಕ್ಕಳು ಸಾಮಾಜಿಕ ಮಾಧ್ಯಮವನ್ನು ಬಳಸುತ್ತಿದ್ದಾರೆ. ತಂತ್ರಜ್ಞಾನದ ಸದುಪಯೋಗ-ದುರುಪಯೋಗ ಎರಡೂ ಸಾಧ್ಯವಿದೆ. ಮಕ್ಕಳು ಏನು ನೋಡುತ್ತಾರೆ, ಕೇಳುತ್ತಾರೆ ಮತ್ತು ಮಾಡುತ್ತಾರೆ ಎನ್ನುವುದನ್ನು ಗಮನಿಸುವುದು ಅಷ್ಟು ಸುಲಭವಲ್ಲ. ಸುಳ್ಳು ಸುದ್ದಿ, ದ್ವೇಷ ಭಾಷಣ ಮತ್ತು ಮತಾಂಧತೆ ಹೆಚ್ಚಳಕ್ಕೆ ಇದು ತನ್ನದೇ ಕಾಣಿಕೆ ಕೊಟ್ಟಿದೆಯೇ?
ಚೀನಾದಲ್ಲಿ ವಯಸ್ಕರ ಸಂಖ್ಯೆ ಹೆಚ್ಚುತ್ತಿದೆ. ಭಾರತದಲ್ಲಿ ಯುವಜನರು ಹೆಚ್ಚು ಸಂಖ್ಯೆಯಲ್ಲಿದ್ದಾರೆ ಮತ್ತು ಈ ಪ್ರವೃತ್ತಿ ಇನ್ನಷ್ಟು ವರ್ಷ ಮುಂದುವರಿಯಲಿದೆ. ಆದರೆ, ಈ ಜನಸಂಖ್ಯಾ ಲಾಭವನ್ನು ಬಳಸಿಕೊಳ್ಳಲು ಸರಕಾರ ಏನು ಮಾಡಲಿದೆ? ರಾಷ್ಟ್ರೀಯ ವಿಜ್ಞಾನ ಪ್ರತಿಷ್ಠಾನ(ಎನ್‌ಆರ್‌ಎಫ್) ಸ್ಥಾಪನೆ ಹಾಗೂ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಘಟನೆ(ಡಿಆರ್‌ಡಿಒ)ಯ ಪುನರ್‌ವಿನ್ಯಾಸಕ್ಕೆ ಸರಕಾರ ಮುಂದಾಗಿದೆ. ಇದರಿಂದ ವಿಜ್ಞಾನ ಕ್ಷೇತ್ರ ಪುನಶ್ಚೇತನಗೊಳ್ಳುವುದೇ? 2,989 ಕೋಟಿ ರೂ. ವೆಚ್ಚದಲ್ಲಿ ಏಕತಾ ಪುತ್ಥಳಿಯನ್ನು ನಿರ್ಮಿಸುವ ದೇಶದಲ್ಲಿ ವಿಜ್ಞಾನ ದೇವಿ ಬೆಳಗುವಳೇ? ಶಾಲೆಗಳ ಘಂಟೆಯ ನಿನಾದದ ಬದಲು ದೇಗುಲಗಳ ನಿರ್ಮಾಣ-ಘಂಟೆಗಳ ನಿನಾದವು ಸಮೂಹಸನ್ನಿಗೆ ಕಾರಣವಾಗಿದೆ.