ಸೋನಂ ವಾಂಗ್ಚುಕ್ ನಿರಶನ ಏಕೆ ಮಾಡಿದರು?

ನಿರಶನ ಅಂತ್ಯಗೊಳಿಸಿದ ಬಳಿಕ, ‘ನನ್ನ ನಿರಶನ ಅಂತ್ಯಗೊಂಡಿದೆ ಅಷ್ಟೇ. ಆದರೆ, ಲಡಾಖ್‌ಗೆ ರಾಜ್ಯದ ಸ್ಥಾನಮಾನ ಮತ್ತು ಆರನೇ ಪರಿಚ್ಛೇದದಲ್ಲಿ ಸೇರ್ಪಡೆ ಹೋರಾಟ ಅಂತ್ಯಗೊಂಡಿಲ್ಲ. ಸ್ಥಾನಮಾನ ಮತ್ತು ನ್ಯಾಯ ಸಿಗುವವರೆಗೆ ಹೋರಾಟ ಮುಂದುವರಿಯುತ್ತದೆ’ ಎಂದು ವಾಂಗ್ಚುಕ್ ಹೇಳಿದ್ದಾರೆ. ಪ್ರಾಂತಗಳ ಪರಿಸರಕ್ಕೆ ಸೂಕ್ತವಾದ ಅಭಿವೃದ್ಧಿ ಮಾದರಿ ಹಾಗೂ ಅದನ್ನು ಬೆಂಬಲಿಸುವ ರಾಜಕೀಯ- ನಿರ್ವಹಣೆ ವ್ಯವಸ್ಥೆಯ ಅಗತ್ಯವನ್ನು ಅವರು ಜಗತ್ತಿಗೆ ಪ್ರಚುರಪಡಿಸಿದ್ದಾರೆ. ಅಭಿವೃದ್ಧಿ ಎನ್ನುವುದು ಜನಕೇಂದ್ರಿತ ಮತ್ತು ಪರಿಸರಸ್ನೇಹಿ ಆಗಿರಬೇಕು ಎಂಬ ಕಾಳಜಿಯಿದ್ದ ಅವರ ನಿರಶನ ಲಡಾಖ್ ಮೀರಿ ಪ್ರತಿಧ್ವನಿಸಲು ಕಾರಣ, ಅವರು ಎತ್ತಿರುವ ಪ್ರಶ್ನೆಗಳು ಸೂಕ್ತವಾಗಿದ್ದವು ಮತ್ತು ಉದ್ದೇಶ ಶುದ್ಧವಾಗಿತ್ತು.

Update: 2024-04-05 04:46 GMT
Editor : jafar sadik | Byline : ಋತ

‘ತ್ರಿ ಈಡಿಯಟ್ಸ್’ ಸಿನೆಮಾದಲ್ಲಿ ಆಮಿರ್ ಖಾನ್ ಪಾತ್ರವಾದ ಫುನ್‌ಸುಖ್ ವಾಂಗ್ಡುಗೆ ಸ್ಫೂರ್ತಿಯಾಗಿದ್ದವರು ಸೋನಂ ವಾಂಗ್ಚುಕ್. ಲಡಾಖ್‌ಮೂಲದ ಇಂಜಿನಿಯರ್, ಸಂಶೋಧಕ ಮತ್ತು ಶಿಕ್ಷಣತಜ್ಞ. ಲೇಹ್ ಜಿಲ್ಲೆಯ ಅಲ್ಚಿಯಲ್ಲಿ 1966ರಲ್ಲಿ ಜನನ. ತಂದೆ ಸೋನಂ ವಾಂಗ್ಯಲ್ ರಾಜ್ಯ ಸರಕಾರದಲ್ಲಿ ಸಚಿವರಾಗಿದ್ದರು. 9ನೇ ತರಗತಿವರೆಗೆ ಶಾಲೆಯ ಮುಖವನ್ನೇ ಕಾಣದ ಸೋನಂಗೆ ತಾಯಿ ಮಾತೃ ಭಾಷೆಯಲ್ಲಿ ತನಗೆ ತಿಳಿದಿರುವುದನ್ನೆಲ್ಲ ಕಲಿಸಿದರು. ಆನಂತರ ಶ್ರೀನಗರದ ಶಾಲೆಗೆ ಸೇರಿಸಲಾಯಿತು. ಭಾಷೆ ಗೊತ್ತಿಲ್ಲದ ಅವರು ಪಡಬಾರದ ಪಾಡುಪಟ್ಟರು. ಅದು ತಮ್ಮ ಬದುಕಿನ ಅತ್ಯಂತ ಕೆಟ್ಟ ಕಾಲ ಎಂದು ಅವರು ಹೇಳುತ್ತಾರೆ. ಪದವಿಗೆ ಮೆಕ್ಯಾನಿಕಲ್ ಇಂಜಿನಿಯರಿಂಗ್ ಕೋರ್ಸ್ ಆಯ್ಕೆ ಮಾಡಿಕೊಂಡರು. ಇದು ತಂದೆಯ ಆಯ್ಕೆಯಲ್ಲದ ಕಾರಣ, ಶಿಕ್ಷಣದ ವೆಚ್ಚವನ್ನು ಅವರೇ ಭರಿಸಬೇಕಾಯಿತು. ಶ್ರೀನಗರದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಬಿಟೆಕ್ ಪದವಿ ಪಡೆದ ಬಳಿಕ ಫ್ರಾನ್ಸ್ ದೇಶದ ಗ್ರೆನೋಬಲ್‌ನ ಕ್ರೇಟರ್ ಸ್ಕೂಲ್ ಆಫ್ ಆರ್ಕಿಟೆಕ್ಚರ್‌ನಿಂದ ಉನ್ನತ ಶಿಕ್ಷಣ ಪಡೆದರು. ಲಡಾಖ್ ಸ್ಟೂಡೆಂಟ್ಸ್ ಕಲ್ಚರಲ್ ಮೂವ್‌ಮೆಂಟ್ ಮೂಲಕ ಶಾಲಾ ಶಿಕ್ಷಣದಲ್ಲಿ ಹೊಸತನವನ್ನು ತಂದ ಹಿರಿಮೆ ಅವರದ್ದು. 1994ರಲ್ಲಿ ಸರಕಾರ, ಗ್ರಾಮೀಣ ಜನರು ಹಾಗೂ ನಾಗರಿಕ ಸಾಮಾಜದೊಟ್ಟಿಗೆ ಸೇರಿಕೊಂಡು ಶಾಲೆ ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆಗೆ ‘ಆಪರೇಷನ್ ನ್ಯೂ ಹೋಪ್’ ಆರಂಭಿಸಿದರು. ಚಳಿಗಾಲದಲ್ಲಿ ನೀರು ಶೇಖರಿಸಲು ಕೃತಕ ನೀರ್ಗಲ್ಲುಗಳನ್ನು ಸೃಷ್ಟಿಸಲು, ಐಸ್ ಸ್ತೂಪ ತಂತ್ರವನ್ನು ಕಂಡುಹಿಡಿದರು. ಬೆಳಕು, ಅಡುಗೆಗೆ ಹಾಗೂ ಬಿಸಿ ಮಾಡಲು ಸೌರ ಶಕ್ತಿಯನ್ನು ಬಳಸುವ ಸೆಕ್ಮಾಲ್ ಕ್ಯಾಂಪಸ್‌ನ್ನು ವಿನ್ಯಾಸಗೊಳಿಸಿದ ಖ್ಯಾತಿ ಅವರದ್ದು. ಈ ಕ್ಯಾಂಪಸ್‌ನಲ್ಲಿ ಪಳೆಯುಳಿಕೆ ಇಂಧನವನ್ನು ಬಳಸುವುದಿಲ್ಲ. ಲಡಾಖ್‌ನ್ನು ಕೇಂದ್ರವಾಗುಳ್ಳ ‘ಲಡಾಖ್-ಸಾಂಗ್ಸ್ ಆಫ್ ದ ವಾಟರ್ ಸ್ಪಿರಿಟ್ಸ್’ ಎಂಬ ಸಿನೆಮಾದಲ್ಲಿ ಪಾಲ್ಗೊಂಡಿದ್ದಾರೆ.

ಇದೇ ವಾಂಗ್ಚುಕ್ 21 ದಿನ ನಿರಶನ ಕೈಗೊಂಡು, ಸರಕಾರದಿಂದ ಯಾವುದೇ ಪ್ರತಿಕ್ರಿಯೆಯಿಲ್ಲದ ಹಿನ್ನೆಲೆಯಲ್ಲಿ ಉಪವಾಸ ನಿಲ್ಲಿಸಿದರು. ಲಡಾಖ್‌ನ ಸೂಕ್ಷ್ಮ ಪರಿಸರದ ರಕ್ಷಣೆ, ಅದಕ್ಕೆ ಸೂಕ್ತವಾದ ಅಭಿವೃದ್ಧಿ ಮಾದರಿ/ಕಾರ್ಯನೀತಿ ರಚನೆ ಹಾಗೂ 6ನೇ ಪರಿಚ್ಛೇದದಡಿ ಕೇಂದ್ರಾಡಳಿತ ಪ್ರದೇಶದ ಸ್ಥಾನಮಾನ ನೀಡಬೇಕೆಂಬುದು ಅವರ ಬೇಡಿಕೆಯಾಗಿತ್ತು. ಇದು ಇಲ್ಲಿನ ಜನರ ಹಲವು ವರ್ಷಗಳ ಬೇಡಿಕೆಯಾದ್ದರಿಂದ, ನಿರಶನಕ್ಕೆ ಬೆಂಬಲ ವ್ಯಕ್ತವಾಯಿತು. ಕೆಲವರು ಅವರೊಟ್ಟಿಗೆ ನಿರಶನ ಮಾಡಿದರು.

ಮೂರನೇ ಧ್ರುವ ಎಂದು ಕರೆಸಿಕೊಳ್ಳುವ ಲಡಾಖ್, ಹವಾಮಾನ ಬದಲಾವಣೆಗೆ ಪಕ್ಕಾಗುವ ಪ್ರದೇಶವಾಗಿದ್ದು, ಈಗಾಗಲೇ ಅದರ ಪರಿಣಾಮ ಸ್ಪಷ್ಟವಾಗಿ ಗೋಚರವಾಗುತ್ತಿದೆ. ಹಿಮನದಿಗಳು-ನೀರ್ಗಲ್ಲುಗಳು ಶೀಘ್ರವಾಗಿ ಕರಗುತ್ತಿವೆ; ಉಷ್ಣಾಂಶದಲ್ಲಿ ಅಸ್ವಾಭಾವಿಕ ಏರಿಳಿತ ಆಗುತ್ತಿದೆ; ಅಂದಾಜು ಉಷ್ಣಾಂಶ ಹೆಚ್ಚಿದೆ, ಹಿಮಪಾತ ನಿಧಾನವಾಗಿ ಆರಂಭವಾಗುತ್ತಿದೆ ಮತ್ತು ಅನಿಯಂತ್ರಿತವಾಗುತ್ತಿದೆ ಹಾಗೂ ಮಳೆ ಹೆಚ್ಚಿದೆ.

ಸೋನಂ ಮಾರ್ಚ್ 6ರಂದು ನಿರಶನ ಆರಂಭಿಸಿದರು. ‘ಅಗತ್ಯ ಬಿದ್ದರೆ ಮರಣದವರೆಗೆ ಮುಂದುವರಿಯಬಹುದು’ ಎಂದಿದ್ದರು. ಲಡಾಖ್‌ಗೆ ರಾಜ್ಯದ ಸ್ಥಾನಮಾನ ಹಾಗೂ ಆರನೇ ಪರಿಚ್ಛೇದಕ್ಕೆ ಸೇರ್ಪಡೆಗೆ ಹೋರಾಟ ನಡೆಸುತ್ತಿರುವ ಲೇಹ್ ಮೂಲದ ಉನ್ನತ ಮಂಡಳಿ ಹಾಗೂ ಕಾರ್ಗಿಲ್ ಡೆವಲಪ್ಮೆಂಟ್ ಅಲಯನ್ಸ್(ಕೆಡಿಎ) ಪ್ರತಿನಿಧಿಗಳು ಹಾಗೂ ಕೇಂದ್ರ ಸರಕಾರದ ನಡುವಿನ ಮಾತುಕತೆ ಮುರಿದು ಬಿದ್ದ ಬಳಿಕ ನಿರಶನ ಆರಂಭವಾಯಿತು. ಕಳೆದ ವಾರ ನಟ ಪ್ರಕಾಶ್ ರಾಜ್ ಅವರನ್ನು ಭೇಟಿ ಮಾಡಿ, ಬೆಂಬಲ ಸೂಚಿಸಿದ್ದರು. ಲಡಾಖ್‌ನಲ್ಲಿ ರಾತ್ರಿ ವೇಳೆ ತಾಪಮಾನ -12 ಡಿಗ್ರಿ ಇರುತ್ತದೆ. ಅವರೊಟ್ಟಿಗೆ ನೂರಾರು ಜನ ಕೈಜೋಡಿಸಿದರು. ದೇಶದ ಹಲವೆಡೆ ಅವರಿಗೆ ಬೆಂಬಲ ನೀಡಿ ಉಪವಾಸ ಮಾಡಿ, ಅದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರ ಮಾಡಲಾಯಿತು. ನೀರು ಮತ್ತು ಉಪ್ಪು ಮಾತ್ರ ಸೇವಿಸುತ್ತಿದ್ದ ಅವರು ಪ್ರತಿದಿನ ವೀಡಿಯೊ ಸಂದೇಶವೊಂದನ್ನು ಎಕ್ಸ್ ನಲ್ಲಿ ಪ್ರಕಟಿಸುತ್ತಿದ್ದರು. ಸರಕಾರ ಹೇಗೆ ‘ಪವಿತ್ರ ಹಿಮಾಲಯ’ವನ್ನು ಕಾರ್ಪೊರೇಟ್‌ಗಳು ಮತ್ತು ಗಣಿ ಮಾಲಕರ ಲೂಟಿಗೆ ತೆರೆದಿಡುತ್ತಿದೆ ಎಂಬುದರ ವಿವರ ಅದರಲ್ಲಿ ಇರುತ್ತಿತ್ತು. ಜನ ‘ಇರುವೆಗಳ ಸೇನೆ’ಯಂತೆ ಇದರ ವಿರುದ್ಧ ಹೋರಾಡದೆ ಇದ್ದರೆ, ಸಂಪನ್ಮೂಲ- ಪರಿಸರ ನಾಶದ ಫಲವನ್ನು ಅವರೇ ಉಣ್ಣ ಬೇಕಾಗುತ್ತದೆ ಎಂದು ವಿವರಿಸುತ್ತಿದ್ದರು. ಚುನಾವಣೆ ಹೊಸ್ತಿಲಲ್ಲಿ ಮುಖ್ಯವಾಹಿನಿ ಮಾಧ್ಯಮಗಳಿಗೆ ಇದೊಂದು ಪ್ರಮುಖ ವಿಷಯ ಎನ್ನಿಸಲಿಲ್ಲ. ಆದರೆ, ವಾಂಗ್ಚುಕ್ ‘ಸತ್ಯದ ಧ್ವನಿ’ ಎಂದು ಜನ ಪರಿಗಣಿಸಿದರು.

ನಿರಶನ ಅಂತ್ಯಗೊಳಿಸಿದ ಬಳಿಕ, ‘‘ನನ್ನ ನಿರಶನ ಅಂತ್ಯಗೊಂಡಿದೆ. ಆದರೆ, ಲಡಾಖ್‌ಗೆ ಸ್ಥಾನಮಾನ ಮತ್ತು ನ್ಯಾಯ ಸಿಗುವವರೆಗೆ ಹೋರಾಟ ಮುಂದುವರಿಯುತ್ತದೆ’ ಎಂದರು.

ಸೋನಂ ಬೇಡಿಕೆಯೇನು?:

ಅವರ ಬೇಡಿಕೆ ಸರಳವಿತ್ತು-ಲಡಾಖ್/ಕಾರ್ಗಿಲ್‌ಗೆ ರಾಜ್ಯದ ಸ್ಥಾನಮಾನ ಮತ್ತು 6ನೇ ಪರಿಚ್ಛೇದದಲ್ಲಿ ಸೇರ್ಪಡೆ. ಇದರಿಂದ ಈ ಸೂಕ್ಷ್ಮ ಪರಿಸರ, ವಿಶಿಷ್ಟ ಸಂಸ್ಕೃತಿ ಹಾಗೂ ಸಾಂಪ್ರದಾಯಿಕ ಆಡಳಿತ ವ್ಯವಸ್ಥೆಯನ್ನು ಉಳಿಸಿಕೊಳ್ಳಬಹುದು. 6ನೇ ಪರಿಚ್ಛೇದಕ್ಕೆ ಸೇರ್ಪಡೆಯಿಂದ ಸ್ಥಳೀಯರ ಭೂಮಿಯ ಪರಭಾರೆ ತಪ್ಪುತ್ತದೆ ಮತ್ತು ಗಣಿಗಾರಿಕೆ-ಅಭಿವೃದ್ಧಿ ಯೋಜನೆಗಳಿಂದ ಅವರ ಸಂಸ್ಕೃತಿ ಉಳಿಯುತ್ತದೆ.

ಪ್ರವಾಸೋದ್ಯಮ ಈ ಪ್ರದೇಶದ ಜೀವನಾಧಾರವಾಗಿದ್ದು, ಅದನ್ನು ಮಿತಿಮೀರಿ ಉತ್ತೇಜಿಸಿದರೆ, ಪರಿಸರ ವ್ಯವಸ್ಥೆಗೆ ಧಕ್ಕೆಯುಂಟಾಗಲಿದೆ. ಲೇಹ್‌ನಲ್ಲಿ 2 ಲಕ್ಷ ಪ್ರಯಾಣಿಕ ಸಾಮರ್ಥ್ಯದ ವಿಮಾನ ನಿಲ್ದಾಣಕ್ಕೆ ಅನುಮತಿ ನೀಡಿದ್ದು, ಅದು ಇಲ್ಲಿನ ಜನಸಂಖ್ಯೆಯ 3 ಪಟ್ಟು ಅಧಿಕ. ಚಾಗ್‌ತಾಂಗ್ ಬಯಲಿನ 20,000 ಎಕರೆ ಹುಲ್ಲುಗಾವಲಿನಲ್ಲಿ ಸೌರ ಉದ್ಯಾನ ನಿರ್ಮಾಣ ಯೋಜನೆ ಸ್ಥಳೀಯರಲ್ಲಿ ಆತಂಕ ಮೂಡಿಸಿವೆ. ಉದ್ದೇಶಿತ ಕೈಗಾರಿಕಾ ಭೂಮಿ ಹಂಚಿಕೆ ಕಾರ್ಯನೀತಿ 2023ಕ್ಕೆ ತೀವ್ರ ಪ್ರತಿರೋಧವಿದೆ. ಈ ಸಮಿತಿಯಲ್ಲಿ ಸರಕಾರಿ ಅಧಿಕಾರಿಗಳು ಮತ್ತು ಉದ್ಯಮದ ಪ್ರತಿನಿಧಿಗಳು ಇರುತ್ತಾರೆಯೇ ಹೊರತು ಲಡಾಖ್ ಸ್ವಾಯತ್ತ ಪರ್ವತ ಅಭಿವೃದ್ಧಿ ಸಮಿತಿ ಸದಸ್ಯರು ಇರುವುದಿಲ್ಲ.

ಲಡಾಖ್ ಶೀತ ಮರುಭೂಮಿಯಾಗಿದ್ದು, ನೀರಿನ ತೀವ್ರ ಕೊರತೆಯಿದೆ. ಹೆಚ್ಚು ಜನ ಆಗಮಿಸಿದರೆ, ನೀರಿನ ಸಮಸ್ಯೆ ಬಿಗಡಾಯಿಸುತ್ತದೆ. ಲಡಾಖ್ ಮತ್ತು ಹಿಮಾಲಯದ ಹಿಮನದಿಗಳು 2 ಶತಕೋಟಿ ಜನರನ್ನು ತಣಿಸುತ್ತಿವೆ. ಭಾರತ ಉಪಖಂಡದ ಅರ್ಧ ಹಾಗೂ ಚೀನಾದ ಅರ್ಧ ಭಾಗದ ಜನರ ನೀರಿನ ಅಗತ್ಯಗಳನ್ನು ಪೂರೈಸುತ್ತಿವೆ. ಈ ಪ್ರದೇಶ ಘನೀಕರಿಸಿದ ರೂಪದಲ್ಲಿರುವ ಶುದ್ಧ ನೀರಿನ ಅತಿ ದೊಡ್ಡ ಸಂಗ್ರಹಾಗಾರವಾಗಿದೆ. ಈ ಪ್ರದೇಶವನ್ನು ಕಾರ್ಪೊರೇಟ್‌ಗಳಿಗೆ ತೆರೆದರೆ, ದೇಶದ ಜಲಸಂಪನ್ಮೂಲದ ಸ್ಥಿತಿ ಡೋಲಾಯಮಾನವಾಗುತ್ತದೆ.

ಲಡಾಖಿಗಳು ವಿಧಿ 370ನ್ನು ಹಿಂಪಡೆದಿದ್ದನ್ನು ಹಾಗೂ ಜಮ್ಮು-ಕಾಶ್ಮೀರವನ್ನು ಪ್ರತ್ಯೇಕಿಸಿ ಲಡಾಖ್‌ಗೆ ಕೇಂದ್ರಾಡಳಿತ ಪ್ರದೇಶದ ಸ್ಥಾನಮಾನ ನೀಡಿದ್ದನ್ನು ಸ್ವಾಗತಿಸಿದ್ದರು. ಆದರೆ, ವಿಧಿ 370ರ ವಜಾ ಬಳಿಕ ಸ್ಥಳೀಯರಿಗೆ ಸ್ವಯಮಾಡಳಿತದ ಅಧಿಕಾರ ಇಲ್ಲವಾಗಿದೆ. ಲಡಾಖ್ ಸ್ವಾಯತ್ತ ಪರ್ವತ ಅಭಿವೃದ್ಧಿ ಸಮಿತಿಗೆ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ನೀಡುವುದಾಗಿ ಹೇಳಿದ್ದ ಸರಕಾರ, ಆನಂತರ ಮಾತು ತಪ್ಪಿತು. ಲೆಫ್ಟಿನೆಂಟ್ ಗವರ್ನರ್ ಮತ್ತು ಕೆಲವು ಅಧಿಕಾರಿಗಳ ಕೈಯಲ್ಲಿ ಅಧಿಕಾರ ಕೇಂದ್ರೀಕರಣಗೊಂಡಿತು. ಇದರಿಂದ ಈ ಪ್ರದೇಶಕ್ಕೆ ಕೇಂದ್ರ ನೀಡಿದ್ದ 6,000 ಕೋಟಿ ರೂ. ನೆರವು ವೆಚ್ಚವಾಗದೆ, ಅರ್ಧ ಪಾಲು ವಾಪಸ್ ಮಾಡಬೇಕಾಗಿ ಬಂದಿತು. ಜಮ್ಮು-ಕಾಶ್ಮೀರ ರಾಜ್ಯಕ್ಕೆ ಸೇರಿದ್ದಾಗ, ಲಡಾಖ್‌ನ ಜನಪ್ರತಿನಿಧಿಗಳು ಜನರಿಗೆ ಉತ್ತರದಾಯಿಗಳಾಗಿದ್ದರು. 2019ರ ಚುನಾವಣೆ ಪ್ರಣಾಳಿಕೆಯಲ್ಲಿ ಲಡಾಖ್‌ನ್ನು ಆರನೇ ಪರಿಚ್ಛೇದದಲ್ಲಿ ಸೇರ್ಪಡೆಗೊಳಿಸುವುದಾಗಿ ಆಶ್ವಾಸನೆ ನೀಡಿದ್ದ ಬಿಜೆಪಿ, ಆನಂತರ ಮಾತಿಗೆ ತಪ್ಪಿತು. ಕೇಂದ್ರಾಡಳಿತ ಪ್ರದೇಶ ಸ್ಥಾನಮಾನ ನೀಡಿರುವುದು ತಮ್ಮ ಪರ್ವತಗಳನ್ನು ಮಾರಲೆಂದು ಎಂಬ ಭಾವನೆ ಲಡಾಖಿಗಳಲ್ಲಿ ಬಂದಿದೆ.

ಲಡಾಖಿಗಳಿಗೆ ಸ್ವಯಮಾಡಳಿತದ ಅಧಿಕಾರ ಬೇಕು:

ಲಡಾಖ್‌ನ್ನು 6ನೇ ಪರಿಚ್ಛೇದಕ್ಕೆ ಸೇರಿಸಬೇಕೆಂಬ ಬೇಡಿಕೆಯ ಉದ್ದೇಶ- ಈ ಪ್ರದೇಶದ ವಿಶಿಷ್ಟ ಸಾಮಾಜಿಕ, ಸಾಂಸ್ಕೃತಿಕ ಅನನ್ಯತೆಯ ರಕ್ಷಣೆ ಆಗಬೇಕು ಮತ್ತು ಇಲ್ಲಿನ ಆಡಳಿತ ಸ್ಥಳೀಯರ ಕೈಯಲ್ಲೇ ಇರಬೇಕು ಎಂಬುದು. ಬಿಸಿನೆಸ್ ಲೈನ್(26. 03. 2024)ಗೆ ನೀಡಿದ ಸಂದರ್ಶನದಲ್ಲಿ ವಾಂಗ್ಚುಕ್ ಹೇಳಿರುವುದು,

* ಶಾಸಕರಿಲ್ಲದ ಕೇಂದ್ರಾಡಳಿತ ಪ್ರದೇಶವು ವಸಾಹತಿನಂತೆ ಆಗಿಬಿಟ್ಟಿದೆ. ಹೊಸದಿಲ್ಲಿಯಿಂದ ನಿಯಂತ್ರಿಸಲ್ಪಡುವ ಅಧಿಕಾರಿಗಳಿಂದ ಆಳಿಸಿಕೊಳ್ಳುತ್ತಿದ್ದೇವೆ. ಇವರಿಗೆ ಈ ಪ್ರದೇಶದ ಸಂಕೀರ್ಣತೆ- ಅನನ್ಯತೆಯ ಅರಿವಿಲ್ಲ

* ಸ್ವಯಮಾಡಳಿತ ಲಡಾಖಿಗಳ ಬಹಳ ಹಿಂದಿನ ಬೇಡಿಕೆ. ಆದರೆ, ಈಗ ಸಿಕ್ಕಿರುವುದು ನಾವು ಆಶಿಸಿದ್ದ ಸ್ಥಾನಮಾನವಲ್ಲ. ಶಾಸನಸಭೆ ಇರುವ ಕೇಂದ್ರಾಡಳಿತ ಪ್ರದೇಶ ನಮ್ಮ ಬೇಡಿಕೆಯಾಗಿತ್ತು. ಜನರು ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಂಡು ಸರಕಾರ ನಡೆಸುವ ಪುದುಚೇರಿಯಂಥ ಸ್ವಯಮಾಡಳಿತವೇ ಹೊರತು ಲಕ್ಷದ್ವೀಪದ ಮಾದರಿಯದ್ದಲ್ಲ.

* ಜಮ್ಮು-ಕಾಶ್ಮೀರದಲ್ಲಿ ನಮ್ಮ ಭೂಮಿ-ಪರಿಸರ ಮತ್ತು ಜನರಿಗೆ ಸಂಬಂಧಿಸಿದ ವಿಷಯಗಳಿಗೆ ರಕ್ಷಣೆಯಿದೆ. ಅಷ್ಟಲ್ಲದೆ, ಲಡಾಖ್‌ನಿಂದ ವಿಧಾನಸಭೆಗೆ ನಾಲ್ವರು ಶಾಸಕರು ಹಾಗೂ ಮೇಲ್ಮನೆಗೆ ಇಬ್ಬರು ಆಯ್ಕೆಯಾಗುತ್ತಿದ್ದರು. ಕನಿಷ್ಠ ಒಂದು ಸಚಿವ ಸ್ಥಾನ ಸಿಗುತ್ತಿತ್ತು. ಇದೆಲ್ಲ ಈಗ ತಪ್ಪಿಹೋಗಿದೆ. ನಮ್ಮ ಬೇಡಿಕೆ ಇದ್ದದ್ದು 6ನೇ ಪರಿಶಿಷ್ಟ ಅನ್ವಯಿಸುವ ಕೇಂದ್ರಾಡಳಿತ ಪ್ರದೇಶ.

* ನಮ್ಮ ನಿರೀಕ್ಷೆಗಳು ಸುಳ್ಳಾಗಿವೆ. ಮಾತ್ರವಲ್ಲದೆ, ಆದಿವಾಸಿ ವ್ಯವಹಾರಗಳ ಮಂತ್ರಾಲಯ ಮತ್ತು ರಾಷ್ಟ್ರೀಯ ಪರಿಶಿಷ್ಟ ವರ್ಗಗಳ ಆಯೋಗದ ಸಭೆಗಳಲ್ಲಿ ಸ್ವಯಮಾಡಳಿತದ ಆಶ್ವಾಸನೆ ಕೊಡಲಾಗಿತ್ತು. ಸಮಿತಿಗಳ ಸಭೆಯ ಟಿಪ್ಪಣಿಗಳ ಸಾಕ್ಷಿ ಇದೆ. ಲೋಕಸಭೆ(2019) ಮತ್ತು ಲಡಾಖ್ ಪರ್ವತ ಅಭಿವೃದ್ಧಿ ಪರಿಷತ್ ಚುನಾವಣೆ(2020)ಯಲ್ಲಿ ಇದು ಬಿಜೆಪಿಯ ಕಾರ್ಯಸೂಚಿಯ ಭಾಗವಾಗಿತ್ತು. ಈ ಸುರಕ್ಷೆ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸರಕಾರ ಆಶ್ವಾಸನೆ ನೀಡಿತ್ತು. ಆದರೆ, ಆನಂತರ ಮಾತು ತಪ್ಪಿತು.

* 6ನೇ ಪರಿಚ್ಛೇದಕ್ಕೆ ಅನ್ವಯಿಸಲು ಶೇ.50ರಷ್ಟು ಆದಿವಾಸಿಗಳು ಇರಬೇಕು. ಆದರೆ, ಲಡಾಖಿನಲ್ಲಿ ಶೇ.90ರಷ್ಟು ಆದಿವಾಸಿಗಳಿದ್ದಾರೆ.

ಮುಂದಿನ ಭಾಗವಾಗಿ 10,000 ರೈತರು ಮತ್ತು ಕುರಿಗಾಹಿಗಳೊಟ್ಟಿಗೆ ಚೀನಾದ ಗಡಿ ಪಕ್ಕದಲ್ಲಿರುವ ಚಾಂಗ್‌ತಾಂಗ್ ಮೈದಾನದಲ್ಲಿ ಪಾದಯಾತ್ರೆಯನ್ನು ಆಯೋಜಿಸಲಿದ್ದಾರೆ. ಚೀನಾದ ಅತಿಕ್ರಮಣದಿಂದಾಗಿ, ಲಡಾಖಿಗಳು ಅಪಾರ ವಿಸ್ತೀರ್ಣದ ಭೂಮಿ ಕಳೆದುಕೊಂಡಿದ್ದಾರೆ. ಮೇವು ಪೂರೈಸುತ್ತಿದ್ದ ಸಾಂಪ್ರದಾಯಿಕ ಗೋಮಾಳಗಳು ಕಾಪು ಪ್ರದೇಶಗಳಾಗಿ ಬದಲಾಗಿವೆ. ಕಳೆದ 4 ವರ್ಷದಿಂದ ಈ ಪ್ರದೇಶದಲ್ಲಿ ಚೀನಾ ತಂಟೆ ನಡೆಸುತ್ತಿದೆ. ಇಡೀ ಪ್ರದೇಶ ಚೀನಾದ ಕಣ್ಗಾವಲಿನಲ್ಲಿದೆ.

ಅಭಿವೃದ್ಧಿಯ ಹಳಹಳಿ:

ಬೆಂಗಳೂರು ಈ ಬೇಸಿಗೆಯಲ್ಲಿ ಕಾದ ಹೆಂಚಿನಂತೆ ಆಗಿದೆ ಮತ್ತು ಅಂತರ್ಜಲ ಪಾತಾಳಕ್ಕಿಳಿದು ಜನ ನೀರಿಗೆ ಪರದಾಡುತ್ತಿದ್ದಾರೆ. ಆದರೆ, ಇದಕ್ಕೆಲ್ಲ ಅನಿರ್ಬಂಧಿತ ನಗರೀಕರಣ ಕಾರಣ ಎನ್ನುವುದು ಎಷ್ಟು ಜನರಿಗೆ ಗೊತ್ತಿದೆ? ನಗರೀಕರಣ ಅನಿವಾರ್ಯ ಪೀಡೆ. ಆರ್ಥಿಕ-ಉದ್ಯೋಗಾವಕಾಶ ಹುಡುಕಿಕೊಂಡು ವಲಸೆ ಹೋಗುವುದು ನಾಗರಿಕತೆಯಲ್ಲಿ ಸಾಮಾನ್ಯವಾಗಿರುವ ಪ್ರವೃತ್ತಿ. ಆದರೆ, ಅರಣ್ಯ, ಕರಾವಳಿ, ಮರುಭೂಮಿ ಮಾತ್ರವಲ್ಲದೆ, ಪರ್ವತಗಳನ್ನೂ ಕಾರ್ಪೊರೇಟ್ ಸಂಸ್ಥೆಗಳಿಗೆ ಮಾರಾಟ ಮಾಡುವ ಸರಕಾರಗಳು ಆಳುತ್ತಿವೆ. ನಿರಶನ ಅಂತ್ಯಗೊಳಿಸಿದ ಬಳಿಕ, ‘ನನ್ನ ನಿರಶನ ಅಂತ್ಯಗೊಂಡಿದೆ ಅಷ್ಟೇ. ಆದರೆ, ಲಡಾಖ್‌ಗೆ ರಾಜ್ಯದ ಸ್ಥಾನಮಾನ ಮತ್ತು ಆರನೇ ಪರಿಚ್ಛೇದದಲ್ಲಿ ಸೇರ್ಪಡೆ ಹೋರಾಟ ಅಂತ್ಯಗೊಂಡಿಲ್ಲ. ಸ್ಥಾನಮಾನ ಮತ್ತು ನ್ಯಾಯ ಸಿಗುವವರೆಗೆ ಹೋರಾಟ ಮುಂದುವರಿಯುತ್ತದೆ’ ಎಂದು ವಾಂಗ್ಚುಕ್ ಹೇಳಿದ್ದಾರೆ. ಪ್ರಾಂತಗಳ ಪರಿಸರಕ್ಕೆ ಸೂಕ್ತವಾದ ಅಭಿವೃದ್ಧಿ ಮಾದರಿ ಹಾಗೂ ಅದನ್ನು ಬೆಂಬಲಿಸುವ ರಾಜಕೀಯ- ನಿರ್ವಹಣೆ ವ್ಯವಸ್ಥೆಯ ಅಗತ್ಯವನ್ನು ಅವರು ಜಗತ್ತಿಗೆ ಪ್ರಚುರಪಡಿಸಿದ್ದಾರೆ. ಅಭಿವೃದ್ಧಿ ಎನ್ನುವುದು ಜನಕೇಂದ್ರಿತ ಮತ್ತು ಪರಿಸರಸ್ನೇಹಿ ಆಗಿರಬೇಕು ಎಂಬ ಕಾಳಜಿಯಿದ್ದ ಅವರ ನಿರಶನ ಲಡಾಖ್ ಮೀರಿ ಪ್ರತಿಧ್ವನಿಸಲು ಕಾರಣ, ಅವರು ಎತ್ತಿರುವ ಪ್ರಶ್ನೆಗಳು ಸೂಕ್ತವಾಗಿದ್ದವು ಮತ್ತು ಉದ್ದೇಶ ಶುದ್ಧವಾಗಿತ್ತು.

ಎಕ್ಸ್‌ನಲ್ಲಿ ಬರೆದ ಸಂದೇಶದಲ್ಲಿ, ‘ಲಡಾಖಿನ ಜನರು ರಾಷ್ಟ್ರದ ಹಿತಕ್ಕಾಗಿ ಬಹಳ ಎಚ್ಚರಿಕೆಯಿಂದ ಮತ ಚಲಾವಣೆ ಮಾಡಬೇಕು’. ಇದು ದೇಶದ ಎಲ್ಲ ನಾಗರಿಕರಿಗೆ ಕೊಟ್ಟ ಎಚ್ಚರಿಕೆ. ‘ರಾಷ್ಟ್ರದ ಹಿತಕ್ಕಾಗಿ ಮತ ಚಲಾವಣೆ’-ಇದು ಈ ಹೊತ್ತಿನ ಅಗತ್ಯ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಋತ

contributor

Similar News