ಬೊಕ್ಕಸಕ್ಕೆ ಭಾರವಾದ ರಾಜ್ಯಪಾಲರು
ವಾಸ್ತವವಾಗಿ ರಾಜ್ಯಪಾಲರ ಹುದ್ದೆಯೇ ಬೊಕ್ಕಸಕ್ಕೆ ಭಾರವಾಗಿದೆ. ರಾಜಭವನಗಳು ನಿವೃತ್ತ ಇಲ್ಲವೇ ಅತೃಪ್ತ ರಾಜಕಾರಣಿಗಳ ಗಂಜಿ ಕೇಂದ್ರಗಳಾಗಿವೆ.ಕೇಂದ್ರ ದಲ್ಲಿ ಇರುವ ಸರಕಾರದ ಏಜೆಂಟರಂತೆ ಕಾರ್ಯ ನಿರ್ವಹಿಸುತ್ತವೆ . ಈ ಹಿನ್ನೆಲೆಯಲ್ಲಿ ರಾಜ್ಯಪಾಲರ ಹುದ್ದೆಯ ಅಗತ್ಯದ ಬಗ್ಗೆ ಚರ್ಚೆ ನಡೆಯಬೇಕಿದೆ.
ದೇಶದ ಕೆಲ ರಾಜ್ಯಗಳಲ್ಲಿ ನಡೆದಂತೆ ಕರ್ನಾಟಕದಲ್ಲೂ ಕರ್ನಾಟಕದ ರಾಜ್ಯಪಾಲರು ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಮೇಲೆ ಕೆಂಗಣ್ಣು ಬೀರಿದ್ದಾರೆ. ಇದಕ್ಕೆ ಪ್ರತಿಯಾಗಿ ರಾಜ್ಯ ಸರಕಾರ ವಿಶ್ವವಿದ್ಯಾನಿಲಯಗಳ ವಿವಿಧ ನೇಮಕಾತಿಗಳಲ್ಲಿ ರಾಜ್ಯಪಾಲರ ಅಧಿಕಾರ ಮೊಟಕುಗೊಳಿಸಲು ಗಂಭೀರ ಚಿಂತನೆ ನಡೆಸಿದೆ. ಇದಕ್ಕೆ ಸಂಬಂಧಿಸಿದ ಕಾಯ್ದೆಗೆ ತಿದ್ದುಪಡಿ ಮಾಡುವ ಬಗ್ಗೆ ಕಲಬುರಗಿಯ ಸಚಿವ ಸಂಪುಟದ ಸಭೆಯಲ್ಲಿ ತೀರ್ಮಾನವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯಪಾಲರ ಹುದ್ದೆಯ ಅಗತ್ಯವೇ ಎಂಬ ಪ್ರಶ್ನೆ ಮತ್ತೆ ಉದ್ಭವವಾಗಿದೆ. ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಪಕ್ಷಗಳು ರಾಜ್ಯಪಾಲರನ್ನು ಬಳಸಿ, ರಾಜ್ಯಗಳಲ್ಲಿ ಇರುವ ಭಿನ್ನ ಪಕ್ಷದ ಸರಕಾರಕ್ಕೆ ತೊಂದರೆ ಕೊಡುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ನರೇಂದ್ರ ಮೋದಿಯವರ ಸರಕಾರ 10 ವರ್ಷಗಳ ಹಿಂದೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಿಗೆ ಇಂಥ ಕುಚೇಷ್ಟೆ ಹೆಚ್ಚಾಗಿದೆ. ಈಗಂತೂ ಸರಕಾರದ ದೈನಂದಿನ ಕಾರ್ಯನಿರ್ವಹಣೆಯಲ್ಲಿ ರಾಜ್ಯಪಾಲರು ಪದೇ ಪದೇ ಹಸ್ತಕ್ಷೇಪ ಮಾಡುತ್ತಲೇ ಇದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ಬಂದ ಹೊಸದರಲ್ಲಿ ಸುಮಾರು 500ಕ್ಕೂ ಮಿಕ್ಕಿ ಇದ್ದ ರಾಜ ಸಂಸ್ಥಾನಗಳು ಹೊಸ ಭಾರತದಲ್ಲಿ ಒಂದಾಗಬೇಕಿತ್ತು. ನಿರ್ಣಾಯಕ ಸನ್ನಿವೇಶದಲ್ಲಿ ನಮ್ಮ ಸಂವಿಧಾನ ನಿರ್ಮಾಪಕರಿಗೆ ರಾಜ್ಯಗಳು ದಾರಿ ತಪ್ಪದಂತೆ ಚುನಾಯಿತ ಸರಕಾರಗಳ ಜೊತೆಗೆ ರಾಜ್ಯಪಾಲರು ಎಂಬ ಹುದ್ದೆ ಸೃಷ್ಟಿಸುವುದು ಅಗತ್ಯ ಆಗಿರಬಹುದು. ಆಗ ಕೇಂದ್ರ ಮತ್ತು ರಾಜ್ಯಗಳಲ್ಲಿ ಏಕ ಪಕ್ಷದ ಸರಕಾರಗಳಿದ್ದವು. ಅಂದಿನ ಸನ್ನಿವೇಶ ವಿಭಿನ್ನ ವಾಗಿತ್ತು.
ರಾಜ್ಯಪಾಲರು ಮತ್ತು ರಾಜಭವನಗಳಿಗಾಗಿ ಸರಕಾರದ ಬೊಕ್ಕಸದಿಂದ ಕೋಟ್ಯಂತರ ರೂಪಾಯಿ ಖರ್ಚು ಮಾಡಬೇಕಿದೆ. ರಾಜಭವನಗಳು ಅತೃಪ್ತ ರಾಜಕಾರಣಿಗಳನ್ನು ಸಾಕುವ ಗಂಜಿ ಕೇಂದ್ರಗಳು ಆಗಿವೆ. ಕೇಂದ್ರದಲ್ಲಿ ಅಧಿಕಾರದಲ್ಲಿ ಇರುವ ಸರಕಾರದ ಏಜೆಂಟ್ ರಂತೆ ರಾಜ್ಯಪಾಲರು ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಈ ಹುದ್ದೆಯ ಔಚಿತ್ಯದ ಬಗ್ಗೆ ಅನೇಕ ಬಾರಿ ಚರ್ಚೆ ನಡೆದಿವೆ.
10 ವರ್ಷಗಳ ಹಿಂದೆ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ಭಾರತದ ಒಕ್ಕೂಟ ವ್ಯವಸ್ಥೆಯ ಆಧಾರ ಸ್ತಂಭಗಳ ಮೇಲೆ ನಿರಂತರ ಹಲ್ಲೆ ನಡೆದಿದೆ. ಬಿಜೆಪಿ ಅಲ್ಲದ ಪಕ್ಷಗಳು ಅಧಿಕಾರದಲ್ಲಿ ಇರುವ ರಾಜ್ಯಗಳಲ್ಲಿ ಸರಕಾರಗಳಿಗೆ ಕಿರುಕುಳ ಕೊಡುವ, ಅವುಗಳನ್ನು ಬುಡಮೇಲು ಮಾಡುವ ಸಂವಿಧಾನ ವಿರೋಧಿ ದುಷ್ಕೃತ್ಯಗಳು ಅವ್ಯಾಹತವಾಗಿ ನಡೆದಿವೆ.
ಇದಕ್ಕಾಗಿ ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ಮಾತ್ರವಲ್ಲ ರಾಜಭವನಗಳನ್ನೂ ದುರ್ಬಳಕೆ ಮಾಡಿಕೊಳ್ಳಲಾಗುತ್ತದೆ. ಪದೇ ಪದೇ ಇಂಥ ಘಟನೆಗಳು ಮರುಕಳಿಸುತ್ತಿರುವುದರಿಂದ ರಾಜ್ಯಪಾಲರ ಹುದ್ದೆಯ ಔಚಿತ್ಯದ ಬಗ್ಗೆ ಸಹಜವಾಗಿ ಪ್ರಶ್ನೆಗಳು ಉದ್ಭವವಾಗಿವೆ.
ಬಿಜೆಪಿಯೇತರ ಪ್ರತಿಪಕ್ಷಗಳು ಅಧಿಕಾರದಲ್ಲಿ ಇರುವ ರಾಜ್ಯಗಳಲ್ಲಿ ಚುನಾಯಿತ ಸರಕಾರದ ಕಣ್ಗಾವಲು ಇಡಲು ಮತ್ತು ಅವುಗಳನ್ನು ಅಸ್ಥಿರಗೊಳಿಸಲು ರಾಜ್ಯಪಾಲರು ಕೇಂದ್ರ ಸರಕಾರದ ಎಜೆಂಟರಂತೆ ಕೆಲಸ ಮಾಡುತ್ತಿದ್ದಾರೆ ಎಂಬುದು ಬರೀ ಆರೋಪವಾಗಿ ಉಳಿದಿಲ್ಲ.
ಇದಕ್ಕೆಸಾಕಷ್ಟು ಉದಾಹರಣೆಗಳಿವೆ. ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಮಾಡಿದ ಅವಾಂತರ ಎಲ್ಲರಿಗೂ ಗೊತ್ತಿದೆ. ಈ ರಾಜ್ಯಪಾಲ ತಮಗಿರುವ ಸಂವಿಧಾನದ ಲಕ್ಷ್ಮ್ಮಣ ರೇಖೆ ದಾಟಿ ಡಿಎಂಕೆ ಸರಕಾರದ ಹಿರಿಯ ಸಚಿವ ಸೆಂಥಿಲ್ ಬಾಲಾಜಿ ಅವರನ್ನು ಏಕಾಏಕಿ ಸಂಪುಟದಿಂದ ವಜಾ ಗೊಳಿಸಿದರು. ಇದು ವಿವಾದದ ಅಲೆ ಎಬ್ಬಿಸುತ್ತಿದ್ದಂತೆ ಮಧ್ಯಪ್ರವೇಶ ಮಾಡಿದ ಕೇಂದ್ರ ಗೃಹ ಸಚಿವಾಲಯದ ಆದೇಶದ ಮೇರೆಗೆ ತಾವು ಮುಂಚೆ ಮಾಡಿದ ಆದೇಶವನ್ನು ತಡೆ ಹಿಡಿದರು. ಈ ಸಚಿವರನ್ನು ವಜಾ ಮಾಡಲು ರಾಜ್ಯಪಾಲರು ಕೊಟ್ಟ ಕಾರಣ ಸಾರಿಗೆ ಇಲಾಖೆಯ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಇವರನ್ನು ಬಂಧಿಸಿತ್ತು. ಇದನ್ನೇ ನೆಪ ಮಾಡಿಕೊಂಡು ರಾಜ್ಯಪಾಲ ರವಿ ಅನಗತ್ಯವಾಗಿ ಮೂಗು ತೂರಿಸಿ ತಮ್ಮ ಅಧಿಕಾರ ವ್ಯಾಪ್ತಿಯನ್ನು ಮೀರಿ ಸಂಪುಟದಿಂದ ರವಿ ಅವರನ್ನು ವಜಾ ಮಾಡಿದ್ದರು.ಈ ರೀತಿ ಮಂತ್ರಿಯೊಬ್ಬರನ್ನು ವಜಾ ಮಾಡುವ ಅಧಿಕಾರ ರಾಜ್ಯಪಾಲರಿಗಿಲ್ಲ. ಯಾವುದೇ ಮಂತ್ರಿಯನ್ನು ನೇಮಕ ಮಾಡಿಕೊಳ್ಳುವ ಮತ್ತು ವಜಾ ಮಾಡುವ ವಿವೇಚನಾಧಿಕಾರ ಮುಖ್ಯ
ಮಂತ್ರಿಗೆ ಮಾತ್ರವಿದೆ.
ಅದರಲ್ಲೂ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಸರಕಾರ ಬಂದ ನಂತರ ಏಕ ದೇಶ, ಏಕ ಧರ್ಮ, ಏಕ ಸಂಸ್ಕೃತಿ ,ಏಕ ಭಾಷೆಯನ್ನು ಹೇರುವ ಭರದಲ್ಲಿ ರಾಜ್ಯಪಾಲರ ಮೂಲಕ ರಾಜ್ಯಗಳಲ್ಲಿನ ಪ್ರತಿಪಕ್ಷಗಳ ಚುನಾಯಿತ ಸರಕಾರಕ್ಕೆ ಕಿರುಕುಳ ನೀಡುತ್ತಾ ಬರಲಾಗಿದೆ.
ರಾಜ್ಯಪಾಲರಿಗೆ ಇರುವ ಅಧಿಕಾರದ ಬಗ್ಗೆ ಸಂವಿಧಾನದಲ್ಲಿ ಸ್ಪಷ್ಟ ಉಲ್ಲೇಖವಿದೆ. ಸಂವಿಧಾನದ 153 ವಿಧಿಯಿಂದ 217 ವಿಧಿಯವರೆಗೆ ರಾಜ್ಯಪಾಲರಿಗೆ ಕೆಲ ಅಧಿಕಾರಗಳನ್ನು ಸಂವಿಧಾನ ನೀಡಿದೆ. ಆ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಪ್ರತಿಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳ ಸರಕಾರಗಳನ್ನು ಉರುಳಿಸಿದ ಪ್ರಕರಣಗಳು ಹಿಂದೆ ನಡೆದಿವೆ.
1994 ಮಾರ್ಚ್ ತಿಂಗಳಲ್ಲಿ ಎಸ್. ಆರ್.
ಬೊಮ್ಮಾಯಿಯವರ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಚಾರಿತ್ರಿಕವಾಗಿದೆ. ರಾಜ್ಯಪಾಲರಿಗಿರುವ ಅಧಿಕಾರ ವ್ಯಾಪ್ತಿಯ ಬಗ್ಗೆ ಖಚಿತವಾಗಿ ಹೇಳಿದೆ. ಆದರೂ ರಾಜ್ಯಪಾಲರು ತಮ್ಮನ್ನು ನೇಮಕ ಮಾಡಿದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷವನ್ನು ಓಲೈಸಲು ಸಂವಿಧಾನದ ವಿಧಿ ವಿಧಾನಗಳನ್ನು ಗಾಳಿಗೆ ತೂರಿ ಮನ ಬಂದಂತೆ ವರ್ತಿಸುತ್ತಾ ಬಂದಿದ್ದಾರೆ.
ರಾಜ್ಯಪಾಲರಿಗೆ ಹಲವಾರು ಮಂದಿ ಕಾನೂನು ಸಲಹೆಗಾರರಿರುತ್ತಾರೆ. ಯಾವುದೇ ವಿವಾದಾತ್ಮಕ ತೀರ್ಮಾನ ಕೈಗೊಳ್ಳುವ ಮುನ್ನ ಅಟಾರ್ನಿ ಜನರಲ್ ಹಾಗೂ ಕೇಂದ್ರ ಗೃಹ ಸಚಿವಾಲಯದ ಜೊತೆಗೆ ಸಮಾಲೋಚನೆ ಮಾಡಬೇಕು. ಈ ವಿಷಯದಲ್ಲಿ ತಮಿಳು ನಾಡಿನ ರಾಜ್ಯಪಾಲರು ಎಡವಿದ್ದರು.ಅವರನ್ನು ತಕ್ಷಣ ವಜಾ ಮಾಡಬೇಕೆಂಬ ಬಗ್ಗೆ ಪ್ರತಿಪಕ್ಷಗಳು ಒತ್ತಾಯಿಸಿದ್ದವು
ಹಿಂದೆ ಪಶ್ಚಿಮ ಬಂಗಾಳದ, ಈಗ ಉಪರಾಷ್ಟ್ರಪತಿ ಯಾಗಿರುವ ರಾಜ್ಯಪಾಲರಾಗಿದ್ದ ಜಗದೀಪ್ ಧನ್ಕರ್ ಅಲ್ಲಿನ ಮಮತಾ ಬ್ಯಾನರ್ಜಿಯವರ ನೇತೃತ್ವದ ತೃಣಮೂಲ ಕಾಂಗ್ರೆಸ್ ಸರಕಾರಕ್ಕೆ ಕೊಟ್ಟ ಕಿರುಕುಳ ಅಷ್ಟಿಷ್ಟಲ್ಲ. ಪೌರತ್ವ ಕಾಯ್ದೆ ತಿದ್ದುಪಡಿಯನ್ನು ವಿರೋಧಿಸಿ ಕೇರಳ ಸರಕಾರ ನ್ಯಾಯಾಲಯಕ್ಕೆ ಹೋದಾಗ ಅಲ್ಲಿನ ರಾಜ್ಯಪಾಲರಾ ಆರೀಫ್ ಮುಹಮ್ಮದ್ ಖಾನ್ ಅಪಸ್ವರ ತೆಗೆದಿದ್ದರು. ಕೆಲ ವಿಶ್ವವಿದ್ಯಾನಿಲಯಗಳ ಕುಲಪತಿಗಳ ನೇಮಕಾತಿ ವಿಷಯದಲ್ಲೂ ತಕರಾರು ಮಾಡಿದರು. ಇದರಿಂದ ರೋಸಿ ಹೋದ ಪಿಣರಾಯಿ ವಿಜಯನ್ ನೇತೃತ್ವದ ಎಡರಂಗ ಸರಕಾರ ವಿಶ್ವವಿದ್ಯಾನಿಲಯಗಳ ಕುಲಪತಿಗಳ ಅಧಿಕಾರವನ್ನು ರಾಜ್ಯಪಾಲರಿಂದ ತೆಗೆದು ಹಾಕುವ ಪರಿಸ್ಥಿತಿ ನಿರ್ಮಾಣ ವಾಯಿತು.
ಸಂವಿಧಾನದ ನಿಯಮಾವಳಿ ಪ್ರಕಾರ, ರಾಜ್ಯಗಳ ಶಾಸನ ಸಭೆಗಳು ಅನುಮೋದನೆ ನೀಡಿದ ವಿಧೇಯಕ ಗಳು ಜಾರಿಯಾಗಬೇಕೆಂದರೆ ರಾಜ್ಯಪಾಲರ ಅಂಕಿತ ಬೇಕು.ಈ ಸಂಬಂಧದಲ್ಲಿ ಸಂವಿಧಾನವು ರಾಜ್ಯಪಾಲರಿಗೆ ಮೂರು ಆಯ್ಕೆಯನ್ನು ನೀಡಿದೆ. ಮೊದಲನೆಯದು ವಿಧೇಯಕಕ್ಕೆ ಅಂಕಿತ ಹಾಕುವುದು, ಎರಡನೆಯದು ವಿಧೇಯಕವನ್ನು ರಾಷ್ಟ್ರಪತಿಯವರಿಗೆ ಕಳಿಸಿಕೊಡುವುದು, ಮೂರನೆಯದು ಅಂಕಿತ ಹಾಕದೇ ಈ ವಿಧೇಯಕವನ್ನು ತಮ್ಮ ಅಭಿಪ್ರಾಯಗಳ ಸಹಿತ ಸಂಬಂಧಿಸಿದ ಶಾಸನ ಸಭೆಗಳಿಗೆ ಸಾಧ್ಯವಾದಷ್ಟು ಬೇಗ ವಾಪಸ್ ಕಳಿಸುವುದು.ಹೀಗೆ ವಾಪಸ್ ಕಳಿಸಿದ ಸಂದರ್ಭದಲ್ಲಿ ಶಾಸನಸಭೆಯು ಈ ವಿಧೇಯಕ್ಕೆ ಮತ್ತೆ ಅನುಮೋದನೆ ನೀಡಿದರೆ ರಾಜ್ಯಪಾಲರು ಸದರಿ ವಿಧೇಯಕ ಕಕ್ಕೆ ಸಹಿ ಹಾಕಲೇಬೇಕು. ಬೇರೆ ಆಯ್ಕೆಗಳಿಲ್ಲ.
ಶಾಸನಸಭೆಗಳು ಅಂಗೀಕರಿಸಿದ ವಿಧೇಯಕಗಳಿಗೆ ಅಂಕಿತ ಹಾಕದೇ ಸುಮ್ಮನೇ ಕುಳಿತುಕೊಳ್ಳುವುದು ರಾಜ್ಯಪಾಲರು ಶಾಸನ ಸಭೆಗಳನ್ನು ಅವಮಾ ನಿಸಿದಂತಲ್ಲದೇ ಬೇರೇನೂ ಅಲ್ಲ. ವಿಧೇಯಕಗಳು ಕಾಯ್ದೆಗಳಾಗದಂತೆ ತಡೆಯುವ ಮೂಲಕ ರಾಜ್ಯಪಾಲರು ರಾಜ್ಯದ ಆಡಳಿತದ ನಿರ್ವಹಣೆಗೆ ಅಡ್ಡಿಯುಂಟು ಮಾಡುತ್ತಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ. ಯಾವುದೇ ಕಾನೂನು ರಾಜ್ಯಕ್ಕೆ ಉಪಯುಕ್ತ ಎಂಬುದನ್ನು ತೀರ್ಮಾನಿಸುವ ಅಧಿಕಾರ ಇರುವುದು ಅಲ್ಲಿನ ವಿಧಾನಸಭೆಗೆ ಮಾತ್ರ. ಯಾವುದೇ ಕಾಯ್ದೆಗಳನ್ನು ಜಾರಿಗೊಳಿಸುವುದು ಅಲ್ಲಿನ ಸರಕಾರದ ಹೊಣೆಗಾರಿಕೆ. ಇದರಲ್ಲಿ ರಾಜ್ಯಪಾಲರ ಹಸ್ತಕ್ಷೇಪ ಅನಗತ್ಯ.
ಬಿಜೆಪಿಯೇತರ ರಾಜ್ಯ ಸರಕಾರಗಳಿಗೆ ರಾಜ್ಯಪಾಲರು ಯಾವ ಪರಿ ಕಿರುಕುಳ ನೀಡುತ್ತಾರೆಂದರೆ ಆ ರಾಜ್ಯಗಳ ವಿಧಾನಸಭೆಗಳು ಅನುಮೋದನೆ ನೀಡಿದ ವಿಧೇಯಕಗಳಿಗೆ ಒಪ್ಪಿಗೆ ನೀಡಲು ವಿನಾಕಾರಣ ವಿಳಂಬ ಮಾಡುತ್ತಾರೆ.ತಮಿಳುನಾಡಿನ ರಾಜ್ಯಪಾಲ ಆರ್.ಎನ್ .
ರವಿ ಮತ್ತು ಕೇರಳದ ರಾಜ್ಯಪಾಲ ಆರೀಫ್ ಮುಹಮ್ಮದ್ ಖಾನ್ ಈ ರೀತಿ ಕಿರುಕುಳ ನೀಡುವುದಕ್ಕೆ ಹೆಸರಾಗಿದ್ದಾರೆ.
ಕೇಂದ್ರದ ಅಧಿಕಾರ ಸೂತ್ರವನ್ನು ಹಿಡಿದ ಪಕ್ಷಗಳು ರಾಜ್ಯಪಾಲರನ್ನು ಬಳಸಿಕೊಂಡು ಭಿನ್ನ ಪಕ್ಷದ ಸರಕಾರಕ್ಕೆ ಕಿರುಕುಳ ನೀಡುತ್ತ ಬಂದಿರುವುದು ಎಲ್ಲರಿಗೂ ತಿಳಿದ ಸಂಗತಿಯಾಗಿದೆ. ನರೇಂದ್ರ ಮೋದಿಯವರ ನೇತೃತ್ವದ ಸರಕಾರ ಕೇಂದ್ರದಲ್ಲಿ ಬಂದ ನಂತರ ಇಂಥ ಕಿರುಕುಳ ಹೆಚ್ಚಾಗಿದೆ. ಸರಕಾರದ ದೈನಂದಿನ ಕಾರ್ಯನಿರ್ವಹಣೆಯಲ್ಲಿ ರಾಜ್ಯಪಾಲರ ಹಸ್ತಕ್ಷೇಪದ ವಿರುದ್ಧ ರಾಜ್ಯ ಸರಕಾರಗಳು ಒಕ್ಕೊರಲಿನಿಂದ ಧ್ವನಿಯೆತ್ತಬೇಕಾಗಿದೆ.
ವಾಸ್ತವವಾಗಿ ರಾಜ್ಯಪಾಲರ ಹುದ್ದೆಯೇ ಬೊಕ್ಕಸಕ್ಕೆ ಭಾರವಾಗಿದೆ. ರಾಜಭವನಗಳು ನಿವೃತ್ತ ಇಲ್ಲವೇ ಅತೃಪ್ತ ರಾಜಕಾರಣಿಗಳ ಗಂಜಿ ಕೇಂದ್ರಗಳಾಗಿವೆ.ಕೇಂದ್ರ ದಲ್ಲಿ ಇರುವ ಸರಕಾರದ ಏಜೆಂಟರಂತೆ ಕಾರ್ಯ ನಿರ್ವಹಿಸುತ್ತವೆ . ಈ ಹಿನ್ನೆಲೆಯಲ್ಲಿ ರಾಜ್ಯಪಾಲರ ಹುದ್ದೆಯ ಅಗತ್ಯದ ಬಗ್ಗೆ ಚರ್ಚೆ
ನಡೆಯಬೇಕಿದೆ.